ಗಲ್ಲೆಬಾನಿ
ಕೆ.ಬಿ. ಸಿದ್ದಯ್ಯ ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಆಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಕವಿ. ದಲಿತ ಚಳುವಳಿಯನ್ನು ಹುಟ್ಟುಹಾಕುವಲ್ಲಿ ಪ್ರೊ. ಕೃಷ್ಣಪ್ಪನವರೊಂದಿಗೆ ಕೈಜೋಡಿಸಿ, ರೈತ ಚಳುವಳಿ ಮತ್ತು ದಲಿತ ಚಳುವಳಿಯನ್ನು ಭಾವನಾತ್ಮಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿ ಬೆಸೆಯಬಯಸಿದವರು. ಬಕಾಲ, ದಕ್ಲಕಥಾದೇವಿ ಕಾವ್ಯ, ಅನಾತ್ಮ ಇವರ ಮೂರು ಖಂಡ ಕಾವ್ಯಗಳು.
ಇವು ಕನ್ನಡ ಕಾವ್ಯ ಮತ್ತು ಕಾವ್ಯ ಮೀಮಾಂಸೆಯ ಸಿದ್ದ ಮಾದರಿಗಳನ್ನು ಮೀರಿ ಬೆಳೆಯುತ್ತಿರುವ ಕಾವ್ಯ ಕ್ರಮಗಳಾಗಿ, ಕಾವ್ಯಸಕ್ತರಿಗೆ ಮತ್ತು ವಿಮರ್ಶಕರಿಗೆ ಗೋಚರವಾಗಿವೆ. ಕೆಬೀಯೇ ಹೇಳುವಂತೆ ಇವರ ಕಾವ್ಯ “ಬೆನ್ನ ಹಿಂದೆ ಅಂಬೇಡ್ಕರ್ ಕೂಗಿದ ಕೂಗು, ಒಂದು ಅಂಗೈಯಲ್ಲಿ ಗಾಂಧೀಜಿ, ಇನ್ನೊಂದು ಅಂಗೈಯಲ್ಲಿಬುದ್ಧ, ಎದುರಿಗೆ ಅಲ್ಲಮ ಪ್ರಭು ನಾಲ್ಕು ಮಹಾಜ್ಯೋತಿಗಳ ನಡುವೆ, ಹಣತೆ ಧ್ಯಾನಿಸುತ್ತದೆ”.
ಈ ದೇಹ. ನನ್ನ ದೇಹ. ಇಡೀ ದೇಹ
ಭವದ ಸಾಲ
ತೀರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ,
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿ ಬಿಡು ಈ ದೇಹ
ಎಂದು ಅರಿತು
ಕಟ್ಟ ಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ
ಮೆಟ್ಟುಬಿಡುವ ಜಾಗದಲ್ಲಿ
ಕಾಜಗದ ದೋಣಿ ಈಜುವ ಸೋಜಿಗ
ಕಾಣಿರೋ ಕಾಣಿರೋ
ಕಣ್ಣಿದ್ದವರು ಕಾಣಿರೋ
ಕಣ್ಣಿಲ್ಲದವರು ಕಣ್ಣುಧರಿಸಿ ಕಾಣಿರೊ
ಕಾಲಿಲ್ಲದ ದೋಣಿ
ತೇಲುತ್ತದೆ
ಕಣ್ಣಿಲ್ಲದ ದೋಣಿ
ನೋಡುತ್ತದೆ
ಕಿವಿ ಇಲ್ಲದ ದೋಣಿ
ಕೇಳುತ್ತದೆ
ಮೂಗಿಲ್ಲದ ದೋಣಿ ಮೂಸುತ್ತದೆ
ರೆಕ್ಕೆ ಇಲ್ಲದ ದೋಣಿ
ಹಾರುತ್ತದೆ
ಬಿರುಗಾಳಿಗೆ ತೂರಿ ಹೋಗುತ್ತದೆ
ಕಿಚ್ಚಿನ ಕಡ್ಡಿ ಗೀರಿ ಹಚ್ಚಿದರೆ
ಸುಟ್ಟು ಹೋಗುತ್ತದೆ
ಬೂದಿಯಾಗುತ್ತದೆ
ಕಾಣಿರೋ ಕಾಣಿರೋ…





ನಿಮ್ಮ ಖಂಡಕಾವ್ಯಾ ತುಂಬಾ ಅದ್ಬುತವಾಗಿದೆ. ಸಿದ್ದಯ್ಯ ಸರ್ ಗಲ್ಲೇ ಬಾನಿಯ ಪುಸ್ತಕದ ಮುಖಪುಟ ಕೆ.ಟಿ.ಶಿವಪ್ರಸಾದ್ ಸರ್ ತುಂಬಾ ಅದ್ಬುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದಾರೆ. ಅವರ ಬೌದ್ದ ಕಲಾ ಮೀಮಾಂಸೆ ಮತ್ತು ನಿಮ್ಮ ಕಾವ್ಯ ಕಲಾ ಮೀಮಾಂಸೆ ಚಿಂತನೆಗಳು ಚಲನಾಶೀಲವಾಗಿದೆ.
suvarna
hassan
ಸಿದ್ದಯ್ಯ ಸರ್ ನಿಮ್ಮ ಖಂಡಕಾವ್ಯ ತುಂಬಾ ಚನ್ನಾಗಿದೆ. ಅದೇ ರೀತಿ ನಿಮ್ಮ ಪುಸ್ತಕದ ಮುಖಪುಟವನ್ನು ಕೆ.ಟಿ.ಶಿವಪ್ರಸಾದ್ ಸರ್ ತುಂಬಾ ಚನ್ನಾಗಿ ಪೈಟಿಂಗ್ ಮಾಡಿದ್ದಾರೆ.
ವೆಂಕಟೇಶ್.
ನಿಮ್ಮ ಖಂಡಕಾವ್ಯ ತುಂಬಾ ಅದ್ಬುತವಾಗಿದೆ. ಕನ್ನಡ ಕಾವ್ಯ ಮೀಮಾಂಸೆಯಲ್ಲಿ ನಿಮ್ಮ ಖಂಡ ಕಾವ್ಯ ವಿಶಿಷ್ಟ ಮಾದರಿಯದಾಗಿದೆ ಸಿದ್ದಯ್ಯಸರ್ . ಜೊತೆಗೆ ನಿಮ್ಮ ಪುಸ್ತಕದ ಮುಖಪುಟದಲ್ಲಿ ಅಂತರ ರಾಷ್ಟೀಯ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್ ಸರ್ ಕಲಾಕೃತಿ ಅನೇಕ ಕಲಾ ಪ್ರೇಮಿಗಳ ಚಿಂತಕರ ಗಮನಸೆಳೆದಿದೆ.ಕಲಾಕೃತಿ ಬೌದ್ಧ ಕಲಾ ಮೀಮಾಂಸೆಯನ್ನು ಆಧಾರಿಸಿದ್ದು ಕಾವ್ಯ ಮತ್ತು ಕಲೆ ಎರಡೂ ಚಲನಾಶೀಲವಾಗಿದ್ದು ಅದ್ವುತವಾಗಿದೆ.
Suvarna.c