ಉದಯಕುಮಾರ ಹಬ್ಬು
ಕೃತಿ : ತಪ್ಪುತಿದ್ದುವ ತಪ್ಪು
ಲೇಖಕ : ಗಂಗಾಧರ ಬೆಳ್ಳಾರೆ
ಪ್ರಕಾಶನ : ಅಂಕಿತ ಪುಸ್ತಕ ಬೆಂಗಳೂರು.
ಶಿಕ್ಷಣ ಕ್ಷೇತ್ರದಲ್ಲಿ ಆಪ್ತಸಲಹೆಯೆಂಬ ಅನುಭವದಿಂದ ಮಾಡಿದ ಸಂಶೋಧನೆಗಳ ಈ ಪುಸ್ತಕದ ಉಪಟೈಟಲ್ ಹೀಗಿದೆ ‘ಪೋಷಕತ್ವ – ಕಲಿಕೆ- ಅಧ್ಯಾಪನದ ಕೌನ್ಸೆಲಿಂಗ್ ಆಧಾರಿತ ಚಿಂತನೆಗಳು’.
ಪ್ರಕಟವಾದ ವರ್ಷದಲ್ಲೇ ಐದು ಮುದ್ರಣಗಳನ್ನು ಕಂಡ ಈ ಪುಸ್ತಕವು ಉಳಿದ ವ್ಯಕ್ತಿತ್ವ ವಿಕಸನ ಗ್ರಂಥಗಳಂತೆ ಆದೇಶ ನೀಡುವುದು, ಬುದ್ಧಿವಾದ ಹೇಳುವುದನ್ನು ಮಾಡದೇ ವಿಷಯಕ್ಕೆ ಸಂಬಂಧಪಟ್ಟ ಹಲವಾರು ಪ್ರಶ್ನೆಗಳನ್ನು ಎತ್ತುತ್ತದೆ. ಆ ಪ್ರಶ್ನೆಗಳ ಉತ್ತರಗಳ ಹುಡುಕಾಟಕ್ಕೆ ನಮ್ಮನ್ನು ತೊಡಗಿಸುತ್ತದೆ.. ನಮ್ಮನ್ನು ನಾವು ಪ್ರಶ್ನಿಸಲು ಪ್ರೇರೇಪಿಸುತ್ತದೆ.

ಇದೀಗ ಶಿಕ್ಷಣ ಪದ್ಧತಿ, ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಕ್ಕೆ, ಅಥವಾ ಜಾಗತೀಕರಣಕ್ಕೆ ಒಳಗಾಗುತ್ತಿದೆ. ಈ ಜಾಗತೀಕರಣವು ವಿದ್ಯಾಥರ್ಿಗಳ ಮೇಲೆ, ಹೆತ್ತವರ ಮೇಲೆ ಹಾಗೂ ಶಿಕ್ಷಕರ ಮೇಲೆಯೂ ಅಪಾರವಾದ ಒತ್ತಡವನ್ನು ಹೇರುತ್ತಿದೆ. ಇದರಿಂದಾಗಿ ಹೆತ್ತವರು ಮತ್ತು ಶಿಕ್ಷಕರು ವಿದ್ಯಾಥರ್ಿಗಳಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ. ಹೆಚ್ಚು ಅಂಕಗಳನ್ನು ಪಡೆಯುವತ್ತ ಒತ್ತು, ಮತ್ತು ಜಾಗತೀಕರಣ ಒಡ್ಡುವ ಅವಕಾಶಗಳ ಆಮಿಷವು ವಿದ್ಯಾಥರ್ಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದೆ. ಮಗ ಸಿ.ಈ.ಟಿ, ಗೆ ಬರೆದು ಉತ್ತಮ ಕಾಲೇಜಿನಲ್ಲಿ ಸೀಟು ಸಿಕ್ಕಿ, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಸಿಕ್ಕು, ಅಮೇರಿಕಾದಲ್ಲಿ ಗ್ರೀನ್ ಕಾಡರ್್ ಪಡೆದು ಸುಖವಾಗಿದ್ದಾನೆ ಎಂಬ ಚಂದಮಾಮದ ಕಥೆಗೆ ಇಂದಿನ ಹೆತ್ತವರು ತೊಗಲುಬಾವಲಿಗಳಂತೆ ಜೋತು ಬಿದ್ದಿದ್ದಾರೆ.
ಇಂದು ದಂಪತಿಗಳಿಬ್ಬರೂ ದುಡಿಯಲು ಹೋಗುತ್ತಿದ್ದಾರೆ. ಅದರಿಂದಾಗಿ ಅವರ ಕರುಳಕುಡಿಯ ಲಾಲನೆ-ಪಾಲನೆಯ ಸಮಸ್ಯೆ ಎದುರಾಗುತ್ತದೆ. ಆಗ ಪ್ರಾರಂಭವಾಗುವುದು ಮಕ್ಕಳನ್ನು ಬೆಳೆಸುವ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಸಮಸ್ಯೆ. ರಾತ್ರಿ ಎಷ್ಟು ಹೊತ್ತಿಗೋ ಮನೆ ಸೇರುವ ತಾಯಿ-ತಂದೆಯರನ್ನು ಅನೇಕ ದಿನಗಳ ಕಾಲ ಕೆಲವು ಮಕ್ಕಳು ಭೇಟಿಯೇ ಆಗದ ಸಂದರ್ಭಗಳೂ ಉಂಟು. ತಂದೆ-ತಾಯಿ-ಮಗು ಒಟ್ಟಾಗಿ ಕುಳಿತು ಊಟ ಮಾಡುವ, ಮಾತು-ಕತೆಯಾಡುವ ಸಂದರ್ಭಗಳು ಅಪರೂಪವಾಗಿ ಹೋದವು.
ಹೀಗೆ ತಂದೆ ತಾಯಿಯ ಪ್ರೀತಿ ವಂಚಿತ ಮಗು ಮುಂದೆ ಶಾಲೆಯಲ್ಲೂ ಹೆಚ್ಚಿನ ಪ್ರಗತಿ ಸಾಧಿಸಲಾಗದೇ, ಓದಿನ ಮೇಲೂ ಕೇಂದ್ರೀಕರಿಸಲಾಗದೇ, ಅನೇಕ ವೇಳೆ ಶಾಲೆಯಿಂದ ಓಡಿಹೋಗುವ ಇಲ್ಲವೇ ಸಹಪಾಠಿಗಳೊಂದಿಗೆ ಅನುಚಿತವಾಗಿ ವತರ್ಿಸುವ ಪ್ರಕರಣಗಳನ್ನು ನೋಡಬಹುದು. ಇಂಥ ಸಂದರ್ಭಗಳಲ್ಲಿ ಹೆತ್ತವರು ಗಮನಿಸಿ, ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದು, ನಿರಾಸಕ್ತಿ ಹೊಂದುವುದಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು. ಇಂಥ ಎಚ್ಚರಿಸುವ ಕೆಲಸವನ್ನು ಈ ಗ್ರಂಥ ಮಾಡಿದೆ ಎನ್ನಬಹುದು. ಈ ಪುಸ್ತಕವನ್ನು ಹೆತ್ತವರು, ಅಧ್ಯಾಪಕರು, ಮತ್ತು ಆಡಳಿತ ನಡೆಸುವವರು ಓದಲೇಬೇಕಾದ ಪುಸ್ತಕ.
ಲೇಖಕರು ಒಂದೆಡೆ ನಮ್ಮದೇ ಕಲ್ಪನೆಯ ಸಿಕ್ಕು ಬಳ್ಳಿಯೊಳಗೆ ಕಳೆದು ಹೋಗುವ ಮೊದಲೆ ಎಚ್ಚರಗೊಳ್ಳಬೇಕಾದ ಜವಾಬ್ದಾರಿ ನಮ್ಮದು” ಎಂದು ಕಳಕಳಿಯಿಂದ ವಿನಂತಿಸುತ್ತಾರೆ. ಅವರು ಹೀಗೆ ಬರೆಯುವಾಗ ಅವರ ಕಣ್ಣ ಮುಂದೆ ಅನುಭವವಿಲ್ಲದೇ ಅನುಭವಿಗಳಂತೆ ಮಾತನಾಡುವ ಹೆತ್ತವರನ್ನು ನೋಡಿದ್ದಾರೆ. ತಮ್ಮ ಬಾಲ್ಯದ ಎಲ್ಲ ಹಳಸಲನ್ನು ತಮ್ಮ ಮಗುವಿಗೆ ಉಣಿಸಿ ಅವರ ಬಾಳನ್ನು ಕುಗ್ಗಿಸಿದ ಪ್ರಭೃತಿಗಳನ್ನೂ ಕಂಡಿದ್ದಾರೆ. ಯಾವುದೇ ಪ್ರಶ್ನೆಗಳಿಗೆ ಇದಮಿತ್ಥಂ ಎಂಬ ರೆಡಿಮೇಡ್ ಉತ್ತರಗಳನ್ನು ನೀಡದೆ ಸ್ವತಂತ್ರ ಆಲೋಚನಾ ಶಕ್ತಿಯನ್ನು ನಮ್ಮಲ್ಲಿ ಹುಟ್ಟು ಹಾಕುವುದು ಲೇಖಕರ ಉದ್ದೇಶವಿದ್ದಂತೆ ಕಂಡು ಬರುತ್ತದೆ. ಮಕ್ಕಳನ್ನು ಒಂದು ಕೊಮೊಡಿಟಿಯಾಗಿ ನೋಡುವುದು ಮತ್ತು ತಮ್ಮ ಸ್ವಾರ್ಥಕ್ಕೆ ಅವರ ಮೇಲೆ ತಮ್ಮ ಹಿರಿತನದ ನೊಗವನ್ನು ಹೇರುವುದು ಇವೆಲ್ಲವುಗಳಿಂದ ತಪ್ಪಿಸಿಕೊಂಡ ಹೆತ್ತವರ ಪಾತ್ರ ಮಕ್ಕಳ ಹಿತದೃಷ್ಟಿಯಿಂದ ಹೇಗಿರಬೇಕೆಂಬ ಸೂಚನೆ ಇಲ್ಲಿದೆ.
“ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಸಾಫ್ಟವೇರ್….ಏನೇ ಬೇಕಾದರೂ ಮಾಡಿ. ಆದರೆ, ಬದುಕುವುದಕ್ಕೆ ಬೇಕಷ್ಟು ಹಾಡರ್್ವೇರ್ ಇಲ್ಲದಿದ್ದರೆ ‘ಫ್ಯೂಚರ್ ಲೈಫ್’ ಏನಾದೀತು?” ಎನ್ನುತ್ತಾ
ಒಂದು ಸಮಸ್ಯೆಯ ಮಗುವಿನ ಉದಾಹರಣೆ ಕೊಡುತ್ತಾರೆ “ಆ ಹುಡುಗಿಯ ಸಮಸ್ಯೆ ಏನೆಂದರೆ, ತನ್ನ ಕೋಣೆಯೊಳಗೆ ಸೇರಿಕೊಂಡರೆ ಇಡೀ ದಿನ ಬಾಗಿಲು ತೆಗೆಯುವದಿಲ್ಲ….ಊಟಕ್ಕೂ ಬರುವುದಿಲ್ಲ. ಸೈಕಾಟ್ರಿಸ್ಟರಲ್ಲಿ ಔಷಧಿ ಕೊಡಿಸಿದ್ದೂ ಆಯ್ತು. ಒಂದೆರಡು ವಾರ ಪರವಾಗಿಲ್ಲ. ಆದರೆ ಇತ್ತೀಚಿಗೆ ಹೊಸತೊಂದು ಸೀವಿಯರ್ ಪ್ರೊಬ್ಲೆಮ್..ಮಾತೇ ಆಡುವುದಿಲ್ಲ…”
ಇದಕ್ಕಿವರ ಉತ್ತರ. ನಿಮ್ಮ ಮಗಳ ಕನಸನ್ನು ನೀವು ಕಾಣುವುದು ನಿಲ್ಲಸದಿದ್ದರೆ ನಿಮ್ಮ ಸಮಸ್ಯೆಯ ಕುರಿತು ಮಾತಾಡಲು ಸಾಧ್ಯವಿಲ್ಲ. ಅಂಕ ಅಥವ ಮಗಳು, ಎರಡರಲ್ಲಿ ಒಂದು…ಯಾವುದು ಎಂದು ನಿರ್ಧರಿಸಿ. ಆ ಮೇಲೆ ಮಾತಾಡೋಣ.
ಪೋಷಕರ ಟ್ರೇನಿಂಗ್ನ ಕುರಿತು ಲೇಖಕರು ಹೇಳುವುದನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ “ಸಮಸ್ಯೆ ಉಲ್ಭಣಿಸಿತೊಡಗಿದಾಗ ಯಾರಿದ್ದಾರೆ…ಯಾರ ಹತ್ತಿರ ಹೋಗಬೇಕು….ಎಷ್ಟು ಖಚರ್ಾದರೂ ಚಿಂತೆಯಿಲ್ಲ…’ ಎಂದು ಹೇಳುವುದಕ್ಕಿಂತ, ಮುನ್ನೆಚ್ಚರಿಕೆಯ ದಾರಿಗಳನ್ನು ಕಲಿಯುವುದು ಉತ್ತಮವಲ್ಲವೇ? ನಮ್ಮ ಹಿಂದಿನವರೆಲ್ಲ ಟ್ರೈನಿಂಗ್ ಪಡೆದುಕೊಂಡು ಮಕ್ಕಳನ್ನು ಸಾಕಿದವರಲ್ಲ ಎಂದು ಗೊತ್ತಿದ್ದರೂ ಟ್ರೈನಿಂಗ್ ಪಡೆದುಕೊಳ್ಳುವುದು ಅವಮಾನಕರವೇ?’ ನಮಗೆ ನಾಳೆಯ ಕಲ್ಪನೆ ಇದೆ. ಆದ್ದರಿಂದ ಕನಸುಗಳೂ ಇವೆ, ಕಲಿಕೆಯೂ ಇದೆ.’ ಹೀಗೆ ಓದುಗರೊಂದಿಗೆ ಸಂವಾದಕ್ಕೆ, ಮನವೊಲಿಕೆಗೆ ಇಳಿಯುತ್ತಾರೆ.
‘ಮಾತು ಹುಟ್ಟುವ ಮೌನ’ ಲೇಖನದಲ್ಲಿ ಅಲ್ಲಮನಂತೆ ತತ್ವಶಾಸ್ತ್ರಜ್ಞರಾಗಿಬಿಡುತ್ತಾರೆ. ಹಾಗಾಗಿ ಹೇಳುವುದು ‘ಈ ಗ್ರಂಥ ಮನುಷ್ಯರನ್ನು ಮನುಷ್ಯರಂತೆ ಕಾಣುವ, ಮನುಷ್ಯರನ್ನು ಕಟ್ಟುವ ಪುಸ್ತಕ ಎಂದು.’ ಆಧ್ಯಾತ್ಮಿಕ ಧಾಟಿಯಲ್ಲಿ ಹೋಗುವ ಈ ಲೇಖನ ಮನಶಾಸ್ತ್ರೀಯ ನಿಲುವನ್ನು ತಾಳಿ ಮನಸ್ಸಿಗೆ ತಟ್ಟುತ್ತದೆ.’ನಮಗೆ ಅಧ್ಯಯನ-ಅರಿವುಗಳು ಇಷ್ಟವಾದರೆ, ಭಾಷೆ – ಭಾವಗಳಿಗೆ ತೊಡಕಿಲ್ಲ. ಭಾವಕ್ಕೆ ಭಾಷೆಯ ಹಂಗಿಲ್ಲ.’ ಈ ಮಾತುಗಳು ಅಲ್ಲಮನ ಇಂಥದ್ದೇ ಮಾತನ್ನು ನೆನಪಿಸುತ್ತದೆ. ‘ಶಬ್ದದ ಲಜ್ಜೆಯ ನೋಡಾ’ ಎಂದು ಅಲ್ಲಮ ಉದ್ಘರಿಸಿದ್ದು ಬಹಶಃ ಈ ಅರ್ಥದಲ್ಲಿಯೇ ಅಂತ ಕಾಣುತ್ತದೆ. ‘ಬೆಳಕು ಕಾಣುವ ಬಗೆ’ ಲೇಖನದಲ್ಲಿ ವ್ಯಕ್ತಿತ್ವದ ವ್ಯಾಖ್ಯಾನ ಮಾಡುತ್ತ ‘ವ್ಯಕ್ತಿತ್ವ ಎನ್ನುವುದು ಅರಳಿದ ಮತ್ತು ಹೊಸ ಹೊಸ ಅರಳುವಿಕೆಗೆ ಒಡ್ಡಿಕೊಳ್ಳಲು ಶಕ್ತವಾಗಿರುವ ಒಂದು ಸ್ಥಿತಿ’ ಎನ್ನುತ್ತಾರೆ. ‘ಕಾಣಬೇಕಾದುದರ ಕತ್ತಲೆಯೊಳಗೆ ಕಾಣಿಸುವ ಬೆಳಕು ತುಂಬುವುದು ಹೇಗೆ? ಅಂತಹ ವ್ಯಕ್ತಿತ್ವಕ್ಕೆ ತೆರೆದುಕೊಳ್ಳುವುದು ಹೇಗೆ?’ ಇದು ಪ್ರಶ್ನೆಯಾಗಿಯೆ ಉಳಿಸಿಬಿಟ್ಟಿದ್ದಾರೆ. ಉತ್ತರವನ್ನು ಓದುಗ ಕಂಡಕೊಳ್ಳಲಿ. ಇದೇ ಉತ್ತಮ ಪುಸ್ತಕ ಮಾಡಬೇಕಾದ ಕೆಲಸ.
ನಮ್ಮೊಳಗಿರುವ, ಪೂರ್ವಸ್ಥಾಪಿತ ವಿಚಾರಗಳ ಗ್ರಹಿಕೆಗಳ ಸುಖಲೋಲುಪತೆಯನ್ನು ಒಂದಿಷ್ಟು ಕದಡುವ ಕೆಲಸ ಈ ಪುಸ್ತಕ ಮಾಡಿದೆ. ಸರಿಪಡಿಸುವುದು ಹೇಗೆ ಎಂಬುದರ ಕುರಿತಾಗಿ ನಮ್ಮಷ್ಟಕ್ಕೆ ಯೋಚಿಸಲು ಹಚ್ಚುವ ಮರುಮೌಲ್ಯಮಾಪನ ಮಾಡಿಕೊಳ್ಳಲು ಅನುವು ಮಾಡಿಕೊಡುವ ಗ್ರಂಥ ಇದಾಗಿದೆ. ‘ನೆನಪುಗಳನ್ನು ಕೆದಕುತ್ತಾ-ಪರಿಶೀಲಿಸುತ್ತಾ, ಹೊಸದನ್ನು ಕಲಿಯುತ್ತಾ- ಕಂಡುಕೊಳ್ಳುತ್ತಾ ಮುಂದೆ ಸಾಗುವುದು ಮಾನವನ ಗುಣ.’ ಇಂಥ ಹೇಳಿಕೆಗಳು ಇಡೀ ಗ್ರಂಥದಾದ್ಯಂತ ವಿಪುಲವಾಗಿವೆ. ಇದು ಯಾವ ಸೊಕ್ರೇಟಿಸ್ನ ತತ್ವಜ್ಞಾನಕ್ಕೆ ಕಡಿಮೆ?
‘ಬದುಕಿನ ಅಂಕ-ಸೂಚ್ಯಂಕ’ ಲೇಖನದಲ್ಲಿ ಮಗು ಹೆಚ್ಚು ಅಂಕ ತೆಗೆಯುವುದೇ ಕಲಿಕೆಯ ಗುರಿಯಾಗಿರಬಾರದು. ‘ಶಾಲೆಯ ಯಶಸ್ಸಿನ ಸುಖದ ‘ಪರೀಕ್ಷೆ’ ನಡೆಯುವುದು ಮಾತ್ರ ಹೊರಜಗತ್ತಿನಲ್ಲಿ…ಉದ್ಯೋಗದಲ್ಲಿ…ದಾಂಪತ್ಯದಲ್ಲಿ…ವ್ಯವಹಾರದಲ್ಲಿ…ಮತ್ತು ಈ ವಿಷಯಗಳು ಪಠ್ಯಪುಸ್ತಕದಿಂದ ಅನುಭವಕ್ಕೆ ಬರುವುದಿಲ್ಲ.’ ‘ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟುವಂತೆ ಮತ್ತು ತಮ್ಮದೇ ಯೋಚನೆಗಳ ಆಧಾರದಿಂದ ಮಕ್ಕಳು ಉತ್ತರಿಸುವಂತೆ, ಅವರೊಡನೆ ನಾವು ಇರಬೇಕಾದುದು ಹೇಗೆ? ಎನ್ನುವ ಪ್ರಶ್ನೆ ವರ್ಷಗಳಿಂದಲೂ ಕಾಡುತ್ತಿದೆ, ‘ಮಕ್ಕಳಲ್ಲಿ ತಪ್ಪುಗಳನ್ನಷ್ಟೆ ಹುಡುಕುವುದರಿಂದ ಅವರ ಮಾನಸಿಕ ದೃಢತೆ ಸ್ವಲ್ಪ ಸ್ವಲ್ಪವೇ ಕುಂದುತ್ತಾ ಸಾಗುತ್ತದೆ. ಮಕ್ಕಳ’ ತಪ್ಪು’ಗಳನ್ನು ಅವೈಜ್ಞಾನಿಕವಾಗಿ ‘ತಿದ್ದುವ’ ಕೆಲಸ ಪ್ರತಿದಿನ ನಡೆಯುತ್ತದೆ.’ ಎನ್ನುತ್ತಾರೆ.
‘ಮಗುವಿನಿಂದ ಯಾವುದು ಆಗುತ್ತದೆ ಅಥವಾ ಆಗುವುದಿಲ್ಲ ಎಂದು ನಾವೇ ತೀಮರ್ಾನಿಸಿದರೆ….ನಮ್ಮದೇ ತೀಮರ್ಾನಗಳ ಘೋಷಣೆ, ಪ್ರೇರಣೆ ನಡೆಯುತ್ತದೆಯೇ ಹೊರತು ಮಗುವಿನದ್ದಲ್ಲ. ನಾವು ಯಾವುದನ್ನು’ಸಾಧನೆ’ ಎಂದು ತೀಮರ್ಾನಿಸುತ್ತೇವೆಯೋ ಅದನ್ನೇ ಮಗುವು ಆರಿಸಿಕೊಳ್ಳಬೇಕೆನ್ನುವುದು ಬರಿಯ’ಸಂಕೋಲೆ’ಯ ಸತ್ಯವೆನಿಸುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಇವೆಲ್ಲಕ್ಕೂ ಕಳಸವಿಟ್ಟಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭ್ರಪ್ಪನವರ ಮುನ್ನುಡಿ ಇದೆ. ಹೀಗೆ ಬದುಕು, ಶಿಕ್ಷಣದ ಕುರಿತು ಆಳವಾದ ಚಿಂತನೆಗಳುಳ್ಳ ಈ ಗ್ರಂಥವನ್ನು ಕನ್ನಡಿಗರೆಲ್ಲ ಕೊಂಡು ಓದಬೇಕಾಗಿದೆ.




0 Comments