ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಕುಂ ವೀ ಅವರ ’ಗಾಂಧೀ ಕ್ಲಾಸು’

ಕುಂ ವೀ

‘ಗಾಂಧೀ ಕ್ಲಾಸ್’ ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು : ಕುಂವೀ ಮರೆತು ಆತ್ಮಕಥೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳಿಸಿದ್ದಾರೆಯೆ?
ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೇ? ಉದಾಹರಣೆಗೆ: ಕೇವಲ ತನ್ನ ಸುಯೋಧನ- ಛಲದಿಂದಾಗಿ ಸಾಕಷ್ಟಿದ ಸ್ಥಿರ- ಚರಾಸ್ಥಿಗಳನ್ನು ಕಳೆದುಕೊಂಡು ಒದ್ದಾಡುವ ಸ್ಥಿತಿಗೆ ಬಂದ  ‘ಹಿರೋ’ ತಂದೆಯ ಮಗನಾಗಿ, ಅತಿ ಕಷ್ಟದಿಂದ ಎಸ್ ಎಸ್ ಎಲ್ ಸಿ ಪಾಸಾಗಿ, ಕೆಲಸವಿಲ್ಲದೆ ಸೈನ್ ಬೋರ್ಡ್ ಪೇಂಟರ್ ಆಗುವ, ರೇಲ್ವೇ ದಿನಗೂಲಿಯಾಗುವ, ಪ್ಲಾಟ್ ಫಾರಂನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರನಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, ‘ಕಪ್ಪು’ ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ್ದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ ‘ಅರಮನೆ’ ಕಾದಂಬರಿಯ ಬ್ಲರ್ಬ್ ತೋರಿಸಿ ಅಮೆರಿಕಾಕ್ಕೆ ವೀಸಾ ಪಡೆಯುವ – ಇಂತಹ ವ್ಯಕ್ತಿ ಕಥಾನಾಯಕನಾಗಿರುವುದು;

ಆ ವ್ಯಕ್ತಿಯೇ ಒಂದು ರಾತ್ರಿಯಲ್ಲಿ ೧೫ ಹಾಡು ಬರೆಯುವ, ನೂರಾರು ಕಥೆ ಬರೆದು ಸವೆದ ತನ್ನ ನಡುಬೆರಳನ್ನು ‘ಇದೊಂದು ರೂಪಕ’ ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ ೬೦೦ ಪುಟಗಳ ‘ಶಾಮಣ್ಣ’ ಎಂಬ ಕಾದಂಬರಿ ಬರೆಯುವ, ‘ಅರಮನೆ’ ಎಂಬ ೧೨೦೦ ಪುಟಗಳ ಕಾದಂಬರಿಯನ್ನು ೫೦೦ ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ. ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ – ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಿಯೂ ಆಗಿರುವುದು;
ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ;  ಅಥವಾ, ಸೋಮಶೇಖರ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅದ್ಭುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆಗಳೊಡನೆ ಗ್ರಹಿಸುವಲ್ಲಿಗೆ-ಶಂಭೋ ಶಂಕರ ಮಹಾದೇವ.
ಡಾ ಸಿ. ಎನ್. ರಾಮಚಂದ್ರನ್
 
ಸಪ್ನ ಬುಕ್ ಹೌಸ್
ಬೆಲೆ : ರೂ. ೨೨೫/-
 

‍ಲೇಖಕರು avadhi

12 March, 2014

4 Comments

  1. amardeep.ps

    naanu kooda gandhi class pustakavannu erederadu baari odidaagalu ide anubhava……aagittu sir…..

  2. Lokesh Raj Mayya

    ಖಂಡಿತ ಓದಲೇಬೇಕು…..

  3. kumvee

    ನನ್ನ ಪ್ರೀತಿಯ ಗಾಂಧಿಕ್ಲಾಸು ಕೃತಿ ಪರಿಚಯಿಸಿದ ಅವಧಿ ಗೆಳೆಯರಿಗೆ ಧನ್ಯವಾದಗಳು,
    ಈಗಾಗಲೇ ಓದಿರುವವರಿಗೆ ಮುಂದೆ ಓದಲು ಮನಸ್ಸು ಮಾಡಿರುವವರಿಗೆ ಶರಣು
    ಕುಂವೀ

  4. Anonymous

    ನಾನು ಓದುತ್ತಿರುವ ಪುಸ್ತಕ ೮೫ ನೇ ಪುಟದಲ್ಲಿದ್ದೇನೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading