ಜಿ ಕಲ್ಯಾಣರಾವು

ದಲಿತ ಮೂಲದಿಂದ ಬಂದ ಬರಹಗಾರರನ್ನು ಜನಪದ ಕಲಾಪ್ರಕಾರಗಳ ಶೈಲಿ ಮತ್ತು ಸತ್ವ ಬಹುವಾಗಿ ಪ್ರಭಾವಿಸುತ್ತದೆ. ಸಮಕಾಲೀನ ತಲೆಮಾರಿನ ಬರಹಗಾರರ ಬಾಲ್ಯ, ಅವರ ತಾಯಿ-ತಂದೆಯಾರ ಬದುಕು ಇವೆಲ್ಲಾ ಜನಪದ ಸಂಸ್ಕೃತಿಯ ದತ್ತ ಆವರಣದೊಳಗೇ ರೂಪುಗೊಂಡಿರುತ್ತದೆ ಯಾದ್ದರಿಂದ ಈ ಬಗೆಯ ಪ್ರಭಾವ ಸಹಜ. ಆ ಶೈಲಿ ಮತ್ತು ಸತ್ವವನ್ನು ಅತ್ಯಂತ ಗೌರವದಿಂದ ಕಾಣುತ್ತಾ, ಜನಪದರ ಬದುಕಿನ ವಿಶ್ವಾಸ, ಆಚರಣೆಗಳನ್ನು, ಅವರ ಕಲಾ ಪ್ರಾಜ್ಞತೆಯನ್ನು ಗೌರವಿಸುತ್ತಾ, ಎಲ್ಲಾ ಆದಿಮ ಸಮುದಾಯಗಳ ಸ್ವಂತ ಸೋತ್ತಾಗಿರುವ ಮೌಖಿಕ ಕಥನ ನಿರೂಪಣಾ ಕೌಶಲವನ್ನು ಹದವರಿತು ಬಳಸಿಕೊಳ್ಳಬಲ್ಲ ಬರಹಗಾರರು ಅತ್ಯಂತ ಮಹತ್ವವಾದುದನ್ನು ನೀಡಬಲ್ಲವರಾಗಿರುತ್ತಾರೆ. ಅದು ಗಾರ್ಸಿಯಾ ಮಾರ್ಕ್ವೆಜ್ ಆಗಬಹುದು, ಚಿನುವಾ ಅಚಿಬೆ, ವೊಲೆ ಸೊಯಿಂಕಾ ಆಗಬಹುದು, ದೇವನೂರು ಮಹಾದೇವ ಆಗಬಹುದು ಹಾಗೇ ಜಿ. ಕಲ್ಯಾಣರಾವು ಆಗಬಹುದು.
ಕಲ್ಯಾಣರಾವು ಅವರಿಗೆ ಈ ಬಗೆಯ ಶೈಲಿಯಲ್ಲಿ ಹಿಡಿತ ಸಾಧ್ಯವಾಗಿದೆ. ಅವರ ಆಧುನಿಕ ಓದು, ಸೈದ್ಧಾಂತಿಕ ನಿಲುವು ಮತ್ತು ವೈಚಾರಿಕತೆಗಳ ಹೊರತಾಗಿಯೂ, ಜಾನಪದ ಸ್ಪಂದನವನ್ನು ಈ ಕೃತಿಯೊಳಗೆ ತರಲಾಗಿದೆ. ಈ ಕೃತಿಯಲ್ಲಿ ಕೆಲವು ಕಡೆ ಅವರು ಜನಪದರ ದೈವಗಳು, ನಂಬಿಕೆಗಳು, ಶ್ರದ್ಧೆಗಳ ಬಗ್ಗೆ ವೈಚಾರಿಕ ವಿವರಣೆ ನೀಡಲು ಪ್ರಯತ್ನಿಸಿರುವುದುಂಟು. ಜಾನಪದವನ್ನು ವೈಭವೀಕರಿಸುವ ಮೂಲಕ ಜನರ ಅಂದಶ್ರದ್ಧೆಗಳನ್ನು ತಾನು ಮಾನ್ಯ ಮಾಡಿದಂತಾಗಿಬಿಡಬಹುದು ಎಂಬ ಎಚ್ಚರ ಇಂತಹ ಕಡೆಗಳಲ್ಲಿ ಅವರನ್ನು ಕಾಡಿದೆ. ಹಾಗಾಗಿಯೇ ಅವರು ಅತಿಮಾನುಷ ನಿರೂಪಣೆಯ ಹಾದಿಯನ್ನು ಬಳಸುವುದಿಲ್ಲ. ‘ಕುಸುಮಬಾಲೆ’ ಕಾದಂಬರಿಯ ಕಥನಕ್ಕೂ, ‘ಅಸ್ಪೃಶ್ಯ ವಸಂತ’ ದ ಕಥನ ಕ್ರಮಕ್ಕೂ ಈ ವಿಷಯದಲ್ಲಿ ಸ್ಪಷ್ಟವಾದ ಭಿನ್ನತೆಯಿದೆ. ಅದನ್ನು ಗೆಲುವು ಎಂದಾಗಲೀ, ಸೋಲು ಎಂದಾಗಲೀ ನಾನು ಕರೆಯ ಬಯಸುವುದಿಲ್ಲ.
ಡಾ. ಬಂಜಗೆರೆ ಜಯಪ್ರಕಾಶ
ಪ್ರಕಾಶಕರು : ಲಂಕೇಶ್ ಪ್ರಕಾಶನ
ಬೆಲೆ : ರೂ. ೨೦೦/-



0 Comments