ಚಿದಾನಂದ ಗೌಡರು ನನಗೆ ಹತ್ತಿರದವರೆನಿಸಿದ್ದು ಬಾನುಲಿ ನಾಟಕಗಳ ರಚನೆಯ ಕಾರಣಕ್ಕೆ. ಯಾಕಂದರೆ, ರಂಗ ನಾಟಕಗಳ ರಚನೆಗಿಂತ ಪೂರ್ಣ ಭಿನ್ನ ರೀತಿಯದು ಬಾನುಲಿ ನಾಟಕಗಳ ರಚನೆ. ಬಾನುಲಿ ನಾಟಕ ರಚನೆಗೆ ಬೇರೆಯೇ ತೆರನಾದ ತಂತ್ರಗಾರಿಕೆ ಬೇಕು. ನಮ್ಮ ನಮ್ಮ ಕಲ್ಪಕಶಕ್ತಿ ಮತ್ತು ಚಿತ್ರಕಶಕ್ತಿಗಳ ಮೂಲಕ ಆ ತಂತ್ರಗಾರಿಕೆಯನ್ನು ಸಿದ್ಧಿಸಿಕೊಳ್ಳಬೇಕಾಗುತ್ತದೆ. ಅಲ್ಲಿ ಮುಖ್ಯವಾದದ್ದು ಧ್ವನಿ ಮತ್ತು ಧ್ವನಿಪರಿಣಾಮಗಳು. ಎಲ್ಲವೂ ಅದರ ಮೂಲಕವೇ ನಿರೂಪಿಸಲ್ಪಡಬೇಕು. ರಂಗದ ಮೇಲೆ ನಟರಿಬ್ಬರ ನಡುವೆ ನಡೆಯುವ ಕ್ರಿಯೆ ಪ್ರಿತಿಕ್ರಿಯೆಗಳೆಲ್ಲ ಇಲ್ಲಿ ಧ್ವನಿಯ ಮೂಲಕವೇ ಶ್ರೋತೃವಿನ ಮನೊಪತಲದ ಮೇಲೆ ದಾಖಲಾಗಿ, ರಸಾನುಭೂತಿಯನ್ನುಂಟು ಮಾಡಬೇಕಾಗುತ್ತದೆ. ಕಳೆದ ಮೂರೂವರೆ ದಶಕಗಳಿಂದ ನಟ ಮತ್ತು ನಾಟಕಕಾರನಾಗಿ ಬಾನುಲಿ ನಾಟಕ ಕ್ಷೇತ್ರದಲ್ಲಿ ದುಡಿದ ಅನುಭವದ ಆಧಾರದ ಮೇಲೆ ನಾನಿದನ್ನು ಹೇಳುತ್ತಿದ್ದೇನೆ.
ಘಟ್ಟ ಪ್ರದೇಶದ ದಾರಿಯಲ್ಲಿ ಗಾಡಿ ಓಡಿಸಿದಾತ ಮತ್ತೆಲ್ಲ ಕಡೆಯೂ ಅನಾಯಾಸದಿಂದ ಗಾಡಿ ನಡೆಸಬಲ್ಲ ಹಾಗೆಯೇ. ಬಾನುಲಿ ನಾಟಕಗಳನ್ನು ಬರೆದ ಅನುಭವವಿರುವಾತ ಮತ್ತಷ್ಟು ಹೆಚ್ಚು ಸ್ಪಷ್ಟತೆಯಿಂದ ಅಥೆ೦ಟಿಕ್ಕಾಗಿ ರಂಗನಾಟಕಗಳನ್ನು ರಚಿಸಬಲ್ಲ.
ಚಿದಾನಂದ ಗೌಡರು ನೀನಾಸಂನಲ್ಲಿ ರಂಗತರಬೇತಾದ ಬಳಿಕ “ಬಿಸಿರಕ್ತ”. “ಕುಬಿ ಮತ್ತು ಇಯಾಲ” ಸಿನಿಮಾಗಳಲ್ಲಿ ಗಿರೀಶ್ ಕಾಸವಳ್ಳಿಯವರೊಂದಿಗೆ ಕೆಲಸ ಮಾಡುವುದರೊಂದಿಗೆ ರಂಗಚಟುವಟಿಕೆಗಳಲ್ಲೂ ತೊಡಗಿಕೊಂಡು ರಂಗಕೃತಿಗಳನ್ನೂ ರಚಿಸಿದವರು. ಅವರ ” ಸರ್ಕಾರಿ ಲೆಕ್ಕದಲ್ಲಿ ಸತ್ತಾಕಿ” ಸಾಕಷ್ಟು ಹೆಸರು ಮಾಡಿದ, ಹಲವು ಬಾರಿ ರಂಗಕ್ಕೇರಿದ ನಾಟಕ.
ಗೆಳೆಯ ಚಿದಾನಂದಗೌಡರ ಪ್ರಸ್ತುತ ಸಂಕಲನದಲ್ಲಿರುವ ಏಳೂ ನಾಟಕಗಳಲ್ಲಿರುವ ವಿಶೇಷತೆ ಎಂದರೆ ಸಮಾಜಮುಖಿಯಾದ, ಜನಪರವಾದ ಆಶಯಗಳೇ ಈ ನಾಟಕಗಳ ಜೀವದ್ರವ್ಯ ವ್ಯವಸ್ಥೆಯ ಕುರೂಪವನ್ನು ಢಾಳಾಗಿ ಚಿತ್ರಿಸದೆ, ಆಡಳಿತ ಯಂತ್ರದ ನಟ್ಟುಬೋಲ್ಟುಗಳ ಕಿರಿಕಿರಿಯೆಡೆಗೆ ನಮ್ಮ ಗಮನವನ್ನು ಸೆಳೆಯುವುದು ಚಿದಾನಂದಗೌಡರ ವೈಶಿಷ್ಟ್ಯ.
ಗೋಪಾಲ್ ವಾಜಪೇಯಿ



0 Comments