ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಇದು ‘ಮುಂಗಾರು’

ವಡ್ಡರ್ಸೆಯವರ ಪರಿಚಯಕ್ಕೊಂದು ಪ್ರವೇಶಿಕೆ

-ಎಂ.ಎನ್. ಅಹೋಬಳಪತಿ

ಕೃಪೆ: ಸಂಡೇ ಇಂಡಿಯನ್

ಕನ್ನಡ ಪತ್ರಿಕಾರಂಗದ ಇತಿಹಾಸದ ಕೆಲವೇ ದಾಖಲಾರ್ಹ ಹೆಸರುಗಳಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರದು ಅವಿಸ್ಮರಣೀಯ ಹೆಸರು. ಜನಪರ ಕಾಳಜಿಯ ಪತ್ರಿಕೆಗಳ ಅಗತ್ಯ – ಅನಿವಾರ್ಯತೆಯ ಚರ್ಚೆ ಬಂದಾಗಲೆಲ್ಲಾ ವಡ್ಡರ್ಸೆಯವರ ಹೆಸರು ಪ್ರಸ್ತಾಪಕ್ಕೆ ಬಾರದೇ ಇರಲಾರದು. ಆದರೆ, ವಡ್ಡರ್ಸೆಯವರ ಪತ್ರಿಕಾ ಕೃಷಿಯ ಬಗ್ಗೆ ಕನ್ನಡದಲ್ಲಿ ಇದುವರೆಗೆ ಯಾವುದೇ ಪುಸ್ತಕ ಬಂದಿರಲಿಲ್ಲ. ಅಂಕಿತ ಪ್ರಕಾಶನವು ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಬರೆದಿರುವ “ಇದು ಮುಂಗಾರು” ಕೃತಿಯನ್ನು ಹೊರತರುವುದರ ಮೂಲಕ ಅಂತಹದೊಂದು ಕೊರತೆಯನ್ನು ಕೊಂಚ ಮಟ್ಟಿಗೆ ಹೋಗಲಾಡಿಸುವ ಗಂಭೀರ ಪ್ರಯತ್ನ ಮಾಡಿದೆ.

ಪತ್ರಕರ್ತ ಚಿದಂಬರ ಬೈಕಂಪಾಡಿ ತಮ್ಮ ಭಿನ್ನ ಶೈಲಿಯ ವರದಿಗಾರಿಕೆಗೆ ಹೆಸರಾದವರು. ‘ಮುಂಗಾರು’ವಿನ ಆರಂಭದಿಂದ ಕೊನೇತನಕ ವಡ್ಡರ್ಸೆಯವರ ಜೊತೆಯಲ್ಲಿದ್ದು ವಡ್ಡರ್ಸೆಯವರ ಸಿಟ್ಟು-ಸೆಡವು, ಪತ್ರಿಕಾ ವೃತ್ತಿಯ ಬಗೆಗೆ ಅವರಿಗಿದ್ದ ಬದ್ಧತೆ, ನಿಷ್ಠುರ ಮನೋಭಾವ, ದಲಿತರು ಹಿಂದುಳಿದವರೆಡೆ ವಡ್ಡರ್ಸೆಯವರಿಗಿದ್ದ ತಾತ್ವಿಕ ನಿಲುವು ಎಲ್ಲವನ್ನೂ ಹತ್ತಿರದಲ್ಲಿದ್ದು ಗಮನಿಸಿದವರು. ಈ ಕಾರಣಕ್ಕೆ ಬೈಕಂಪಾಡಿಯವರ ಬರಹಕ್ಕೊಂದು ಅಧಿಕೃತತೆ ಒದಗಿಬಂದಿದೆ.

ಹಾಗೆಂದು ಈ ಪುಸ್ತಕ ವಡ್ಡರ್ಸೆಯವರ ಬಗ್ಗೆ ಸಮಗ್ರ ಚಿತ್ರಣವನ್ನೇನೂ ನೀಡುವುದಿಲ್ಲ. ಇಡೀ ಪುಸ್ತಕದುದ್ದಕ್ಕೂ ವಡ್ಡರ್ಸೆಯವರ ವೃತ್ತಿ ನಡೆಗಳ ಬಗ್ಗೆ ದಾಖಲಿಸುತ್ತಲೇ ಬೈಕಂಪಾಡಿ ತಾವು ಪತ್ರಕರ್ತರಾಗಿ ರೂಪುಗೊಂಡುದನ್ನು ಕೂಡಾ ದಾಖಲಿಸಿದ್ದಾರೆ. ಅನುಭವಿ ಪತ್ರಕರ್ತರೊಬ್ಬರ ಒಡನಾಟದಲ್ಲಿ ಉದಯೋನ್ಮುಖ ಪತ್ರಕರ್ತನೊಬ್ಬ ಹಲವು ಏರಿಳಿತಗಳ ಅನುಭವಗಳ ನಡುವೆ ಬೆಳೆದ ಬಗೆಯ ಅರಿವು ಕೂಡಾ ನಮಗಾಗುತ್ತದೆ. ಅಷ್ಟರ ಮಟ್ಟಿಗೆ, ಇಲ್ಲಿ ಸಿಗುವುದು ವಡ್ಡರ್ಸೆಯವರ ವ್ಯಕ್ತಿತ್ವದ ಸ್ಥೂಲ ರೂಪ ಅನ್ನಿಸಿದರೂ ವಡ್ಡರ್ಸೆಯವರಂತಹ ಹಿರಿಯ ಪತ್ರಕರ್ತರ ಬಗ್ಗೆ ತಿಳಿಯಲೇಬೇಕೆಂಬ ಒತ್ತಾಸೆಯನ್ನುಂಟು ಮಾಡುತ್ತದೆ.

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಸುಮಾರು ೨೦ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ವಡ್ಡರ್ಸೆಯವರು ಓದುಗರ ಒಡೆತನದ ಪತ್ರಿಕೆಯೊಂದನ್ನು ಮಾಡಹೊರಟಾಗ, ಅದರಲ್ಲೂ ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಮಾಡಹೊರಟಾಗ ಅನುಭವಿಸಿದ ಸಂಕಷ್ಟಗಳು, ಪತ್ರಿಕೆಯ ಆಡಳಿತ ಮಂಡಳಿಯ ಸದಸ್ಯರೋರ್ವರ ಸುದ್ದಿಯ ತುಣುಕೊಂದನ್ನು ಪ್ರಕಟಿಸುವ ವಿಷಯದಲ್ಲಿ ಪ್ರಕಟವಾದ ಭಿನ್ನಾಭಿಪ್ರಾಯ ಹಾಗೂ ಅದೇ ಕಾರಣಕ್ಕೆ ಅನುಭವಿ ಹಾಗೂ ಬದ್ಧತೆಯುಳ್ಳ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಎನ್.ಎಸ್. ಶಂಕರ್ ಮುಂತಾದವರು ದಿಢೀರನೆ ತೊರೆದು ಹೋದಾಗ ಪತ್ರಿಕೆಯನ್ನು ಮುನ್ನಡೆಸಿದ ಸನ್ನಿವೇಶಗಳು, ಪತ್ರಿಕೆ ಮುನ್ನಡೆಸಲು ಹಣಕಾಸು ಹೊಂದಿಸುವಲ್ಲಿ ಅವರು ಬಿದ್ದ ಪಡಿಪಾಟಲು ಹೀಗೆ ಹಲವು ವಿವರಗಳು ನಮಗೆ ದಕ್ಕುತ್ತವೆ.

ಸಾಂಪ್ರದಾಯಿಕತೆಯೇ ಮೈವೆತ್ತಂತಿದ್ದ ದಕ್ಷಿಣ ಕನ್ನಡದಲ್ಲಿ ವಡ್ಡರ್ಸೆಯವರ ಬರಹಗಳು ಮೂಡಿಸಿದ ತಲ್ಲಣ, ಜನರ ಸಮಸ್ಯೆಗಳಿಗೆ ಅವರು ಪತ್ರಿಕೆಯ ಮೂಲಕ ಸ್ಪಂದಿಸುತ್ತಿದ್ದ ರೀತಿ, ಅವರು ಮೆಚ್ಚುತ್ತಿದ್ದ ರಾಜಕಾರಣಿಗಳ ನಡೆ-ನುಡಿಗಳ ವಿಚಾರದಲ್ಲಿ ನಿಷ್ಠುರವಾಗಿ ವರ್ತಿಸುತ್ತಿದ್ದ ಬಗೆ, ಪತ್ರಕರ್ತನಾದವನು ಹೊಂದಿರಬೇಕಾದ ಧೋರಣೆಗಳು… ಹೀಗೆ ಅವರ ವ್ಯಕ್ತಿತ್ವದ ಹಲವು ಆಯಾಮಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.

ಜೀವರಾಜ್ ಆಳ್ವ ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಕರ್ನಾಟಕದ ಕುರಿತು ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಂದ ಬರೆಸಿದ ಲೇಖನಗಳಿಂದ ’ಚೆಲುವ ಕನ್ನಡನಾಡು’ ಎಂಬ ಪುಸ್ತಕವನ್ನು ಹೊರತರುತ್ತಾರೆ. ಆಳ್ವ ವಡ್ಡರ್ಸೆಯವರಿಗೆ ಬಹಳ ಆತ್ಮೀಯರಾಗಿದ್ದರೂ ಮುಲಾಜಿಲ್ಲದೆ ಅಂದವಾದ ಮುದ್ರಣವಿದ್ದರೂ ಆ ಪುಸ್ತಕವನ್ನು ಸಿಂಗಾಪುರದಲ್ಲಿ ಮುದ್ರಿಸಿದುದರ ಬಗ್ಗೆ ಅಸಮಧಾನಗೊಂಡು ’ಕರ್ನಾಟಕದಲ್ಲಿ ನೆಲೆಸಿರುವ ಒಬ್ಬನಿಗಾದರೂ ಕರ್ನಾಟಕದ ಬಗ್ಗೆ ಬರೆಯಲು ಗೊತ್ತಿಲ್ಲವೇ? ಈ ಪುಸ್ತಕವನ್ನು ಸರ್ಕಾರ ಸಿಂಗಾಪುರದಲ್ಲಿ ಮುದ್ರಿಸಿದೆಯಲ್ಲಾ, ಕರ್ನಾಟಕದಲ್ಲಿ ಹೋಗಲಿ ಇಡೀ ಭಾರತದಲ್ಲಿ ಇಂತಹ ಪುಸ್ತಕ ಮುದ್ರಿಸುವ ಪ್ರೆಸ್ ಇರಲಿಲ್ಲವೇ? ಎಂಬಂತಹ ವಾದಸರಣಿಯಲ್ಲಿ ಇಡೀ ಪುಸ್ತಕವನ್ನು ಜಾಲಾಡುತ್ತಾರೆ. ಸದನದಲ್ಲೂ ಈ ಕುರಿತು ಚರ್ಚೆಯಾಗುತ್ತದೆ. ಮರುದಿನವೇ ಅದು ಮುಂಗಾರು ಪತ್ರಿಕೆಯಲ್ಲಿ ‘ಚಿಂದಿಯಾದ ಚೆಲುವ ಕನ್ನಡ ನಾಡು’ ಎಂಬ ಶಿರ್ಷಿಕೆಯಡಿ ಪ್ರಕಟವಾಗುತ್ತದೆ. ಇದು ವಡ್ಡರ್ಸೆಯವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಶೈಲಿ.

ಹಣಕಾಸಿನ ಮುಗ್ಗಟ್ಟು ಪತ್ರಿಕೆಯ ಮುನ್ನಡೆಯನ್ನು ಅನಿಶ್ಚಿತಗೊಳಿಸಿದಾಗ ವಡ್ಡರ್ಸೆಯವರು ಅಧೀರರಾಗುವುದು ಹಾಗೂ ತಾವು ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಪತ್ರಿಕೆಯಿಂದಲೇ ರಾಜಿನಾಮೆ ನೀಡಿ ಹೊರಬರಬೇಕಾದ ಅಸಹಾಯಕ ಪರಿಸ್ಥಿತಿಯ ಬೆಳವಣಿಗೆ ವಿಷಾದಕ್ಕೆ ಹಿಡಿದ ಕನ್ನಡಿಯಂತಿದೆ. ಎಲ್ಲರೂ, ಮುಖ್ಯವಾಗಿ ಈಗಷ್ಟೇ ಪತ್ರಿಕೋದ್ಯಮ ಪ್ರವೇಶಿಸಿರುವ ಯುವ ಪತ್ರಕರ್ತರು ಓದಲೇಬೇಕಾದ ಪುಸ್ತಕವಿದು. ಟಿಎಸ್‌ಐ

ಕೃತಿ : ಇದು ಮುಂಗಾರು

ಲೇಖಕರು : ಚಿದಂಬರ ಬೈಕಂಪಾಡಿ

ಪ್ರಕಾಶಕರು : ಅಂಕಿತ ಪ್ರಕಾಶನ, ಗಾಂಧಿಬಜಾರ್, ಬೆಂಗಳೂರು

ಪುಟಗಳು : 104

ಬೆಲೆ : 70 ರೂಪಾಯಿ

 

 

‍ಲೇಖಕರು G

6 July, 2011

1 Comment

  1. rekhaneelavara

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading