ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ ‘ಒಥೆಲೋ.’
ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ.
ಈ ಮೊದಲು ಭಾಗ 1- ವಿಘ್ನ ಸಂತೋಷಿ ಇಯಾಗೋ.. ಪ್ರಕಟಿಸಲಾಗಿತ್ತು.
ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಇರುವುದು ಡೆಸ್ಡಿಮೋನಾಳ ಕರವಸ್ತ್ರ
**
ನಾರಾಯಣ ಯಾಜಿ
**
ಹಿಂದಿನ ಸಂಚಿಕೆಯಲ್ಲಿ ಒಥೆಲೋ ತನ್ನನ್ನು ಬಿಟ್ಟು ಕ್ಯಾಸಿಯೋ ಎನ್ನುವವನಿಗೆ ಪದೋನ್ನತಿಯನ್ನು ಕೊಟ್ಟ ಕಾರಣದಿಂದ ಆತನ ಮೇಲೆ ದ್ವೇಷ ಕಾರುತ್ತಿರುವ ಇಯಾಗೋ ಅದಕ್ಕೆ ಜಾಲವನ್ನು ಹುಡುಕುತ್ತಲೇ ಇದ್ದಾನೆ. ಅದರ ಮುಂದುವರಿದಿರುವ ಭಾಗ.
**
ತಂದೆಯ ವಿರೋಧದ ನಡುವೆಯೂ ಡೆಸ್ಡಿಮೋನಾ ಕಪ್ಪುವರ್ಣದ ಒಥೆಲೋನನ್ನು ಪ್ರೀತಿಸಿ ಮದುವೆಯಾಯಾಗಿದ್ದಾಳೆ. ಗ್ರೀಕರಿಗೆ ಆಟಮ್ ತುರ್ಕರನ್ನು ಎದುರಿಸಲು ಆ ಸಂದರ್ಭದಲ್ಲಿ ಒಥೆಲೋನಂತಹ ಸಾಹಿಸಿ ಯೋಧನ ಅಗತ್ಯವಿರುವ ಕಾರಣ ಸೆನೆಟ್ ಆಗಲೀ, ಡ್ಯೂಕ್ ಆಗಲಿ ಅದನ್ನು ದೊಡ್ದ ವಿಷಯ ಮಾಡದೇ ಒಥೆಲೋನ ನೇತ್ರತ್ವದಲ್ಲಿ ತುರ್ಕರನ್ನು ಎದುರಿಸಲು ಕಳಿಸುತ್ತಾರೆ. ಜೊತೆಗೆ ಡೆಸ್ಡಿಮೋನಾ ಮತ್ತು ಆಕೆಗೆ ಸಖಿಯಾಗಿ ಇಯಾಗೋನ ಹೆಂಡತಿ ಎಮಿಲಿಯಾ ಸಹ ಹೊರಡುತ್ತಾಳೆ. ಸಾಹಸಿಯಾದ ಒಥೆಲೋ ತುರ್ಕಿಗಳ ಎದುರು ವಿಜಯಿಯಾಗುವುದರಲ್ಲಿಯಾವ ಸಂದೇಹವೂ ಷೇಕ್ಸ್ ಪಿಯರ್ ನಿಗಿಲ್ಲ. ಆತನಿಗೆ ಯುದ್ಧದ ವಿವರವನ್ನು ತೋರಿಸಬೇಕಿಲ್ಲ. ಒಥೆಲೋ ಪರಾಕ್ರಮಿ ಎನ್ನುವುದನ್ನು ಸಾಮೂಹಿಕವಾಗಿ ಒಪ್ಪಿಯಾಗಿದೆ. ಆದರೆ ಆತ ನಿಜ ಜೀವನದಲ್ಲಿ ವಾಸ್ತವವನ್ನು ಎದುರಿಸಲು ಇಯಾಗೋನಂತಹ ನಯವಂಚಕ ಹಣೆದ ಬಲೆಯಲ್ಲಿ ಹೇಗೆ ಸಿಲುಕಿ ವಿಫಲನಾಗುತ್ತಾನೆ ಎನ್ನುವುದು ಮುಖ್ಯ.
ತನ್ನ ಪ್ರಿಯಕರನೊಡನೆ ಡೆಸ್ಡಿಮೋನಾ ಸೈಪ್ರಸ್ಸಿಗೆ ಹೊರಟರೂ ಇಬ್ಬರೂ ಬೇರೆ ಬೇರೆ ನೌಕೆಯಲ್ಲಿ ಹೊರಡುತ್ತಾರೆ. ನಡುವೆ ಸಾಗರದಲ್ಲಿ ಬಿರುಗಾಳಿಗೆ ಈ ಎರಡೂ ನೌಕೆಗಳೂ ಬೇರೆಬೇರೆಯಾಗಿ ಬಿಡುತ್ತದೆ. ಮುಂಬರುವ ದುರಂತದ ಸೂಚನೆ ಇಲ್ಲಿದೆ. ಆಕೆಯ ಸಂಗಡ ಅದೇ ನೌಕೆಯಲ್ಲಿ ಇರುವುದು ಇಯಾಗೋ ಮತ್ತು ಆತನ ಹೆಂಡತಿ ಎಮಿಲಿಯಾ. ಯುದ್ಧದಂತಹ ಮಹತ್ವದ ಕಾರ್ಯದಲ್ಲಿ ಧ್ವಜಧಾರಿ ಮುಂಚೂಣಿಯಲ್ಲಿ ಇರಬೇಕಾದರೂ ಆತ ಅಲ್ಲಿರದೇ ತಪ್ಪಿಸಿಕೊಂಡಿರುವುದು ಗಮನಾರ್ಹ. ಆತನಿಗೆ ಅಧಿಕಾರ ಬೇಕು, ಆದರೆ ಹೊಣೆಗಾರಿಕೆಯಿಂದ ಜಾರಿಕೊಂಡು ಯಾವತ್ತಿಗೂ ತಾನು ಮಹಾ ಪರಾಕ್ರಮಿ ಎನ್ನುವ ಬುಡುಬುಡುಕೆಯನ್ನು ಬಿಡುತ್ತಲೇ ಇರುತ್ತಾನೆ. ಇನ್ನೊಬ್ಬರ ಏಳಿಗೆಯನ್ನು ಸಹಿಸದ ಆದರೆ ಎದುರಿನಲ್ಲಿ ಬೆಣ್ಣೆಯಂತಹ ಮಾತುಗಳನ್ನಾಡಿ ಮರುಳು ಮಾಡುವ ಕಲೆ ಇಯಾಗೋಗೆ ಸಿದ್ಧಿಸಿದೆ. ವೆನಿಸ್ಸಿನಲ್ಲಿ ಆತನ ಈ ಘನಂದಾರಿ ಪ್ರತಿಭೆ ಅಷ್ಟೆಲ್ಲಾ ಬೆಳಕಿಗೆ ಬಂದಿಲ್ಲವಾಗಿತ್ತು. ಅದೂ ಅಲ್ಲದೇ ಅಲ್ಲಿನ ಶಾಸನ ಸಭೆಯನ್ನು ಎದುರು ಹಾಕಿಕೊಳ್ಳುವ ಧೈರ್ಯವೂ ಆತನಲ್ಲಿಲ್ಲ. ಆದರೆ ಯಾವಾಗ ಸೈಪ್ರಸ್ಸಿಗೆ ಬಂದನೋ, ಸನ್ನಿವೇಶಗಳನ್ನೆಲ್ಲಾ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ. ಪಂಚತಂತ್ರದ ನರಿಗಳಾದ ಕರಟಕ ಮತ್ತು ದಮನಕಗಳ ಗುಣಗಳು ಈತನೊಬ್ಬನಲ್ಲಿಯೇ ಮೇಳೈಸಿವೆ.
ಡೆಸ್ಡಿಮೋನಾಳ ಜೊತೆ ಬರುವಾಗ ಆತ ಅವಳ ಜೊತೆ ತುಂಬಾ ಚಲ್ಲುಚೆಲ್ಲಾಗಿ ಮಾತಾಡುತ್ತಾ ಮಾತುಗಳನ್ನಾಡುತ್ತಾ ಅವಳ ವಿಶ್ವಾಸವನ್ನು ಗಳಿಸುತ್ತಾನೆ. ಸ್ವತಃ ತನ್ನ ಹೆಂಡತಿಯನ್ನೇ ಹಗುರವಾಗಿ ಆಡುತ್ತಾನೆ. ಕ್ಯಾಸಿಯೋ ಇವರನ್ನು ಬರಮಾಡಿಕೊಳ್ಳುವಾಗ ಆತ ಸಹಜವಾಗಿ ಎಮಿಲಿಯಾಳ ಚುಂಬಿಸಿ ಸ್ವಾಗತ ಕೋರಿದರೆ, “ಈತ ಸರ್, ನನ್ನನ್ನು ಚುಂಬಿಸುವ ರೀತಿಯಲ್ಲಿ ಆಕೆ ತನ್ನ ನಾಲಿಗೆಯನ್ನು ತುಟಿಯಾಚೆ ಚಾಚಿ ನಿನಗೆ ನೀಡಿದರೆ ಮತ್ತಿಷ್ಟು ಆನಂದವಾಗಬಹುದು” ಎನ್ನುವ ನಿರ್ಲಜ್ಜ ಮಾತಿನ ಹಿಂದೆ ತನಗೆ ದಕ್ಕಬೇಕಾದ ಉಪಸೈನ್ಯಾಧಿಕಾರಿಯ ಹುದ್ದೆಯೆನ್ನು ನೀನು ಕಸಿದುಕೊಂಡು ಆನಂದಿಸುತ್ತಿರುವೆ ಎನ್ನುವ ಸೂಚನೆಯೂ ಇದೆ. ಡೆಸ್ಡಿಮೋನೋಳ ಹತ್ತಿರವೂ ಎಗ್ಗಿಲ್ಲದೇ ಹೆಂಗಸರೆಲ್ಲ ಹಾಸಿಗೆಯಲ್ಲಿ ಜಾರಿಣಿಯರು ಎಂದು ಲಘುವಾಗಿ ಮಾತನಾಡಿದರೂ ಅವಳು ಅವನನ್ನು ಅನುಮಾನಿಸುವುದಿಲ್ಲ. ಬೆಳ್ಳಗಿನ ಆಕೆ ಕರಿಯನನ್ನು ಮದುವೆಯಾಗಿರುವ ಕುರಿತು ಅವಳ ವಿನೋದದ ನೆಪದಲ್ಲಿ “ಚೂಟಿಯಾದ ಕಪ್ಪನೆಯ ಹೆಂಗಸು ತನಗೊಪ್ಪುವ ಬಿಳಿಯ ಪುರುಷನನ್ನು ಪಡೆಯುವಳು – If she be black, and thereto have a wit, She’ll find a white that shall her blackness fit” ಎನ್ನುವ ಚುಚ್ಚುಮಾತುಗಳನ್ನಾಡುತ್ತಾನೆ.

ಈತನನ್ನು Misogyny (ಸ್ತ್ರೀದ್ವೇಷಿ) ವಿಮರ್ಶಕರು ಕರೆದಿದ್ದಾರೆ. ಆದರೆ ಆತ ಹಾಗಿಲ್ಲ. ಮೂಲ ಕೃತಿಯಾದ ಸಿಂತಿಯೋದಲ್ಲಿ ಆತ ಲಂಪಟನೂ ಹೌದು. ಆತ ಡೆಸ್ಡಿಮೋನಾಳನು ಭೋಗಿಸಬೇಕೆಂದು ಏನೆಲ್ಲ ಪ್ರಯತ್ನ ಮಾಡಿದರೂ ಆಕೆ ಸಿಗದಾಗ ಆತ ಅವಳ ಮೇಲೆ ದ್ವೇಷ ಸಾಧಿಸಲು ಸ್ತ್ರೀದ್ವೇಷಿಯಾಗಿರುವುದು ನಿಜ. ಆದರೆ ಷೇಕ್ಸಫಿಯರ್ ಚಿತ್ರಣ ಹಾಗಿಲ್ಲ. ಆತನೋರ್ವ ವಿಘ್ನಪ್ರೇಮಿ. ಪ್ರಪಂಚದಲ್ಲಿ ಯಾರೂ ನಗುತ್ತಾ ಇರುವುದನ್ನು ನೋಡಲು ಸಾಧ್ಯವಿಲ್ಲದ ವ್ಯಕ್ತಿತ್ವ. ಹಾಗಂತ ತಾನು ಎಲ್ಲರೊಟ್ಟಿಗೂ ಚಂದದಿಂದ ಇರಬೇಕು, ಎಲ್ಲರೂ ತನ್ನನ್ನು ಹೊಗಳಬೇಕು ಎನ್ನುವುದು ಆತನ ನಿಲುವು. ಕ್ಯಾಸಿಯೋ ಡೆಸ್ಡಿಮೋನಾಳಿಗೆ “ಈತನ ಸ್ವಭಾವವೇ ಹೀಗೆ, ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ, ಈತ ವಿದ್ವಾಂಸನಲ್ಲವೇ ಅಲ್ಲ, ಕೇವಲ ಯೋಧ” ಎನ್ನುವಾಗ ಆತ ಯುದ್ಧದಲ್ಲಿಯೂ ಹೀಗೆ ಎನ್ನುವ ಧ್ವನಿಯಿದೆ.
ಸಹಜವಾಗಿ ಅಭಿನಂದಿಸಲು ಕ್ಯಾಸಿಯೋ ಡೆಸ್ಡಿಮೋನಾಳ ಕೈಯನ್ನು ಹಿಡಿಯುವುದನ್ನ ಕಂಡಾಗ ಇಯಾಗೋವಿನ ಕುಟಿಲ ಬುಧಿ ಜಾಗ್ರತವಾಗುತ್ತದೆ. ಕ್ಯಾಸಿಯೋ ಮತ್ತು ಡೆಸ್ಡಿಮೋನಾಳ ನಡುವೆ ಸಂಬಧವನ್ನು ಕಲ್ಪಿಸಿ ಆ ಮೂಲಕ ಒಥೆಲೋವನ್ನು ನಂಬಿಸುವ ಮತ್ತು ಕ್ಯಾಸಿಯೋವನ್ನು ಹಣಿಯುವ ತನ್ನ ಯೋಜನೆ ಹಾಕುತ್ತಾನೆ. ಈ ಮೈಕೆಲ್ ಕ್ಯಾಸಿಯೋ ಓರ್ವ ಸಮರ್ಥ ಯೋಧ ಆದರೆ ಅಷ್ಟೇ ಸ್ತ್ರೀ ಲಂಪಟ ಮತ್ತು ಕುಡುಕನೂ ಹೌದು; ಒಥೆಲೋನ ಗರಿಷ್ಠ ಸ್ನೇಹಿತನೂ ಹೌದು. ಆತ ಯಾವತ್ತೂ ಡೆಸ್ಡಿಮೋನಾಳನ್ನು ಕಾಮುಕತೆಯಿಂದ ಕಾಣಲಿಲ್ಲ. ಆತನಿಗೆ ಅವಳು ದಿವ್ಯತೆಯ ಸಾಕಾರ ಮೂರ್ತಿ. ತನ್ನ ಹೆಂಡತಿಗೂ ಬೆಲೆವೆಣ್ಣಿಗೂ ವೆತ್ಯಾಸವಿಲ್ಲದಂತೆ ಲೈಂಗಿಕವಾಗಿ ಮಾತನಾಡುವ ಇಯಾಗೋ ಡೆಸ್ಡಿಮೋನ ಮತ್ತು ಕ್ಯಾಸಿಯೋ ಇಬ್ಬರನ್ನೂ ಹೊಂಡಕ್ಕೆ ಬೀಳಿಸುವ ಹಂಚಿಕೆ ಹೂಡುತ್ತಾನೆ. ಡೆಸ್ಡಿಮೋನಳ ಹುಚ್ಚಿನಲ್ಲಿರುವ ರೋಡಾರಿಗೊನ ಹತ್ತಿರ ಕ್ಯಾಸಿಯೋ ಕುಡಿದ ಮತ್ತಿನಲ್ಲಿರುವಾಗ ಆತನನ್ನು ಜಗಳಕ್ಕೆ ಎಳೆಯಲು ಪ್ರೇರೇಪಿಸುತ್ತಾನೆ. ಅವರಿಬ್ಬರ ಜಗಳವನ್ನು ಬಿಡಿಸಲು ಹೋದ ಸೈಪ್ರಸ್ಸಿನ ಪ್ರಾಂತಪಾಲ ಮೊಂಟಾನೋನಿಗೆ ಕುಡಿದ ಮತ್ತಿನಲ್ಲಿರುವ ಕ್ಯಾಸಿಯೋ ಹೊಡೆದು ಗಾಯಗೊಳಿಸುತ್ತಾನೆ. ಈ ಗಲಾಟೆಯನ್ನು ಕೇಳಿ ಅಲ್ಲಿಗೆ ಬಂದ ಒಥೆಲೋನಿಗೆ ಕ್ಯಾಸಿಯೋನ ನಡತೆಯ ಮೇಲೆ ಸಂಶಯಬಂದು ಆತನನ್ನು ಉಪಸೇನಾಧಿಪತಿ ಸ್ಥಾನದಿಂದ ತೆಗೆದುಹಾಕುತ್ತಾನೆ.
ವ್ಯಕ್ತಿಗಳ ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಂಡು ಅವರನ್ನು ಹಳ್ಳಕ್ಕೆ ಬೀಳಿಸುವುದರಲ್ಲಿ ಇಯಾಗೋನದು ಎತ್ತಿದ ಕೈ. ಕ್ಯಾಸಿಯೋನ ಹತ್ತಿರ ಸಮಾಧಾನ ಮಾಡುವುದು ಮತ್ತು ಮಾರನೇಯ ದಿನ ಡೆಸ್ಡಿಮೋನಳ ಹತ್ತಿರ ಒಥೆಲೋನಿಗೆ ತನ್ನನ್ನು ಕ್ಷಮಿಸುವಂತೆ ಶಿಪಾರಸ್ಸು ಮಾಡಲು ವಿನಂತಿಸುವಂತೆ ಸಲಹೆನೀಡುತ್ತಾನೆ. ಈ ಭೇಟಿ ಒಥೆಲೋವಿನ ಕಣ್ಣಿಗೆ ಬೀಳುವಂತೆ ಮಾಡಿ ಅವನಲ್ಲಿ ಸಂಶಯದ ಬೀಜವನ್ನು ಬಿತ್ತುವ ಈತನ ಕುಟಿಲತೆ ಚನ್ನಾಗಿ ಚಿತ್ರಿತವಾಗಿದೆ. ಒಮ್ಮೆ ಸಂಶಯ ಬಂತೋ ಅದು ಹುಳವಾಗಿ ತಲೆಯನ್ನು ಕೊರೆಯುತ್ತಲಿರುತ್ತದೆ. ಮೊದಲೇ ಆಕೆಯ ತಂದೆ ಬ್ರಿಬಾನ್ಷಿಯೋ ಆ ಮೊದಲೇ ಆಕೆಯನ್ನು ಮದುವೆಯಾಗುವ ಕಾಲಕ್ಕೆ “ಆಕೆ ನಿನಗೂ ಮೋಸ ಮಾಡಬಹುದು” ಎಂದು ಹೇಳಿದ ಮಾತು ಒಥೆಲೋವಿನ ಮನಸ್ಸಿನಲ್ಲಿ ಎಲ್ಲಿಯೋ ಅಡಗಿಕುಳಿತಿರುವುದು ಈಗ ನಿಧಾನಕ್ಕೆ ತನ್ನ ಪ್ರಭಾವ ಬೀರಲು ಕಾರಣವಾಯಿತು. ಅದನ್ನು ಇಯಾಗೋ ನೆನಪಿಸುತ್ತಾನೆ.
ಒಥೆಲೋ ಚಂದದ ಚಿತ್ತಾರವಿರುವ ಕರವಸ್ತ್ರವೊಂದನ್ನು ಡೆಸ್ಡಿಮೋನಾಳಿಗೆ ನೀಡಿದ್ದ. ಅದನ್ನು ಸದಾ ಆಕೆ ತನ್ನ ಬಳಿಯಲ್ಲಿಯೇ ಇರಿಸಿಕೊಳ್ಳುತ್ತಿದ್ದಳು. ಈ ವಿಷಯದ ಅರಿವಿದ್ದ ಇಯಾಗೋ ಅದನ್ನು ತನ್ನ ಹೆಂಡತಿ ಎಮೊಲಿಯಾಳ ಹತ್ತಿರ ಅದನ್ನು ಹೇಗಾದರೂ ಮಾಡಿ ತನಗೆ ತಂದು ಕೊಡಲು ಒತ್ತಾಯಿಸುತ್ತಿದ್ದ. ಒಮ್ಮೆ ಅದು ಅಕಸ್ಮಾತಾಗಿ ಜಾರಿ ಬಿದ್ದಾಗ ಅದನ್ನು ಎಮಿಲಿಯಾ ತನ್ನ ಗಂಡನ ಖುಷಿಗಾಗಿ ತಂದು ಕೊಡುತ್ತಾಳೆ. ಇಲ್ಲಿಂದ ಡೆಸ್ಡಿಮೋನಾಳ ದುರಂತ ಪ್ರಾರಂಭವಾಗುತ್ತದೆ. ಅದನ್ನು ಕ್ಯಾಸಿಯೋನ ಬಿಡಾರದಲ್ಲಿ ಇಟ್ಟು ಉಪಾಯವಾಗಿ ಒಥೆಲೋವಿಗೆ ಕಾಣುವಂತೆ ಮಾಡುತ್ತಾನೆ. ತನ್ನ ಒಲವಿನ ಉಡುಗೊರೆ ಇನ್ನೊಬ್ಬರಲ್ಲಿ ಕಂಡಾಗ ಯಾರಿಗಾದರೂ ಸಂಶಯ ಬರುವುದು ಸಹಜ. ಕ್ಯಾಸಿಯೋವಿಗೆ ಬಿಯಾಂಕೋ ಎನ್ನುವ ಬೆಲೆವೆಣ್ಣಿನ ಜೊತೆ ಸ್ನೇಹವಿದೆ. ಅದನ್ನು ದುರುಪಯೋಗ ಪಡಿಸಿಕೊಳ್ಳುವ ಇಯಾಗೋ ಆಕೆಯ ಕುರಿತು ಪಿಸು ಮಾತಿನಲ್ಲಿ ಕ್ಯಾಸಿಯೋನ ಹತ್ತಿರ ಕೇಳುವಾಗ ಆತ ಕುಡಿದ ಮತ್ತಿನಲ್ಲಿ ಅವಳ ವರ್ಣನೆಯನ್ನು ಮಾಡುತ್ತಾನೆ. ಕಳೆದ ರಾತ್ರಿ ಆಕೆ ತನಗೆ ಕ್ಯಾಸಿಯೋ ಇನ್ನೊಬ್ಬರು ಉಪಯೋಗಿಸಿದ ಉಡುಗೊರೆಯನ್ನು ನೀಡಿದ್ದಾಳೆಂದು ದೂರಿದ್ದಾಳೆಂದು ವರ್ಣಿಸುವಾಗ ಅದು ಡೆಸ್ಡಿಮೋನಳ ವಿಷಯವೇ ಎಂದು ಕದ್ದು ಕೇಳುತ್ತಿರುವ ಒಥೆಲೋವಿಗೆ ಮನವರಿಕೆಯಾಗುವಂತೆ ಪಿಸುಮಾತಿನಲ್ಲಿ ಆಡುವ ಸಂಬಾಷಣೆ ಫಲ ಬೀರುತ್ತದೆ. ಕ್ಯಾಸಿಯಯೋ ಬಿಯಾಂಕಳೊಂದಿಗೆ ಕಳೆದ ಅನುಭವವನ್ನು ಆತ ಡೆಸ್ಡಿಮೋನಳ ಜೊತೆ ಮಲಗಿರುವ ವಿಷಯವೆಂದು ಒಥೆಲೋ ನಂಬುವಂತೆ “ಒಡೆಯ ಆತ ಅವಳ ಜೊತೆ ಮಲಗಿದ್ದ; ನಿಮ್ಮಿಷ್ಟದಂತೆ ಊಹಿಸಿಕೊಳ್ಳಿ” ಎಂದು ಡೆಸ್ಡಿಮೋನಳ ವಿರುದ್ಧ ಎತ್ತಿಕಟ್ಟುತ್ತಾನೆ. ಕರವಸ್ತ್ರ ಡೆಸ್ಡಿಮೋನಾಳ ಬದುಕಿಗೆ ಕೊಳ್ಳಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Thomas Rymer ಎನ್ನುವಾತ ಈ ನಾಟಕವನ್ನು “The Tragedy of the Handkerchief” ಎಂದು ಕರೆದಿದ್ದಾನೆ. ಸಂಶಗೊಂಡ ಒಥೆಲೋ “ಡೆಸ್ಡಿಮೋನಳನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲುವೆ, ಜೊತೆಗೆ ಕ್ಯಾಸಿಯೋನನ್ನೂ ಸಹ” ಎನ್ನುವಾಗ ಇಯಾಗೋ ವಿಕೃತ ಆನಂದ ಅನುಭವಿಸುತ್ತಾನೆ. ತನ್ನಿಂದ ಹಣ ಕೀಳುತ್ತಿದ್ದ ಇಯಾಗೋನ ಹತ್ತಿರ ಹಣಕೇಳಲು ಬಂದ ರೋಡಾರಿಗೊನ ಹತ್ತಿರ ಕ್ಯಾಸಿಯೋನನ್ನು ಕೊಲ್ಲಲು ಪ್ರೇರೇಪಿಸುತ್ತಾನೆ. ಅವರಿಬ್ಬರೂ ಜಗಳ ಮಾಡುವಾಗ ಇಯಾಗೋ ಹಿಂದಿನಿಂದ ಬಂದು ಕ್ಯಾಸಿಯೋನ ಕಾಲನ್ನು ಕತ್ತರಿಸಿ ಓಡಿಹೋಗಿ ಮತ್ತೆ ತಾನೇ ಬಂದು ಆತನನ್ನು ರಕ್ಷಣೆಮಾಡುವ ನಾಟಕವಾಡುವುದು. ತನ್ನ ಗುಟ್ಟನ್ನು ರಟ್ಟು ಮಾಡುವ ರೋಡಾರಿಗೊನನ್ನು ಕೊಲ್ಲುತ್ತಾನೆ. ಇಲ್ಲಿ ಆತನಲ್ಲಿರುವ ತಣ್ಣನೆಯ ಕ್ರೌರ್ಯ ಬಯಲಾಗುತ್ತದೆ.

ಯುದ್ಧಭೂಮಿಯ ಅಪ್ರತಿಮ ಯೋಧ ಒಥೆಲೋ ಸೈಪ್ರಸ್ಸಿನ ನಾಗರಿಕತೆಯ ಮಾತಿನ ಜಾಲದಲ್ಲಿ ಸೋತು ಹೋಗಿದ್ದಾನೆ. ಅವನೊಳಗೆ ತನ್ನ ಕುರಿತು ಕೀಳರಿಮೆ ಮತ್ತು ಡೆಸ್ಡಿಮೋನಳ ಸೌಂದರ್ಯದ ಕುರಿತು ಅವಿತಿಟ್ಟ ಈರ್ಷೆ ಹೊರಬಂದು ಕುಣಿಯುವಾಗ ಅದರ ದಾಳಕ್ಕೆ ಈತ ವಸ್ತುವಾಗುತ್ತಾನೆ. ಸಂಪೂರ್ಣವಾಗಿ ಒಲಿದ ಮುಗ್ದೆ ಡೆಸ್ಡಿಮೋನಳಲ್ಲಿ ತನ್ನ ಕುರಿತಾಗಿರುವ ನಿರ್ವಾಜ್ಯ ಪ್ರೀತಿಯನ್ನು ಗಮನಿಸುವಲ್ಲಿ ಸಂಪೂರ್ಣ ಸೋತುಹೋಗುತ್ತಾನೆ. ಡೆಸ್ಡಿಮೋನಾಳ ಹತ್ತಿರ ತಾನು ಕೊಟ್ಟ ಕರವಸ್ತ್ರ ಎಲ್ಲಿ ಎಂದು ಕೇಳಿದಾಗ ಅವಳಿಗೆ ಅದು ಎಲ್ಲಿ ಕಳೆದು ಹೋಗಿದೆಯೆನ್ನುವುದು ಅವಳಿಗೆ ನೆನಪಿಲ್ಲ. ಗಂಡನ ನೀಡಿದ ಒಲವಿನ ಉಡುಗೊರೆಯನ್ನು ಕಳೆದುಹೋಗಿದೆ ಎನ್ನಲೂ ಆಕೆಗೆ ಧೈರ್ಯವಿಲ್ಲ. ಪ್ರೀತಿಯಿಂದ ರಮಿಸಿದ ಕೈಯಿಂದಲೇ ಡೆಸ್ಡಿಮೋನಳನ್ನು ಕ್ರೂರವಾಗಿ ಹಿಂಸಿಸುವಾಗ ಆಕೆ ತನ್ನ ನಿರ್ದೋಷಿತನವನ್ನು ಹೇಳುತ್ತಾ ಕೊಲ್ಲಬೇಡವೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಕೇವಲ ಪ್ರೀತಿಗಾಗಿ ಎಲ್ಲರನ್ನು ಬಿಟ್ಟು ಬಂದ ಮುಗುದೆಯನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲುವಕ್ರಿಯೆ ಓದುಗರ ರಕ್ತ ಹೆಪ್ಪುಗಟ್ಟಿಸುತ್ತದೆ. ಅವಳಿಗೆ ವಿಷವಿಟ್ಟು ಸಾಯಿಸಬೇಕೆಂದು ಒಥೆಲೋ ಬಯಸಿದರೆ ಇಯಾಗೋ “ಅಕೆಯನ್ನು ಕತ್ತು ಹಿಸುಕಿ ಸಾಯಿಸಿ; ನಿಮ್ಮ ಹಾಸಿಗೆಯನ್ನು ಆಕೆ ಹೊಲಸು ಮಾಡಿದ್ದಾಳೆ” ಎಂದು ಕಿವಿಯೂದುತ್ತಾನೆ. ಅತಿಯಾದ ಪ್ರೇಮದಲ್ಲಿ ಸಂಶಯಬಂದರೆ ಅದು ದ್ವೇಷವಾಗಿ ಪರಿಣಮಿಸುತ್ತದೆಯೆನ್ನುವುದಕ್ಕೆ ಒಥೆಲೋ ಸಾಕ್ಷಿಯಾಗಿದ್ದಾನೆ. ತನ್ನೊಡತಿಗಾದ ಅನ್ಯಾಯಕ್ಕೆ ಕಾರಣ ತನ್ನ ಗಂಡ ಇಯಾಗೋ ಎನ್ನುವುದು ಎಮಿಲಿಯಾಳಿಗೆ ತಿಳಿದಾಗ ಆಕೆ ನಡೆದ ಸಂಗತಿಯನ್ನು ಒಥೆಲೋನಿಗೆ ಹೇಳುತ್ತಾಳೆ. ತನ್ನ ಸಂಚು ಬಯಲಾಗುವುದೆಂದರಿತ ಇಯಾಗೋ ತನ್ನ ಹೆಂಡತಿಯನ್ನು ಹಿಂದಿನಿಂದ ಇರಿದು ಓಡುತ್ತಾನೆ. ಒಥೆಲೋ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಾ ಡೆಸ್ಡಿಮೋನಳ ಶವವನ್ನು ಚುಂಬಿಸುತ್ತಾ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವೆನಿಸ್ಸಿನಿಂದ ಬಂದ ಡೆಸ್ಡಿಮೋನಳ ಚಿಕ್ಕಪ್ಪ ಲುಡಾವಿಕೋ ಕ್ಯಾಸಿಯೋನನ್ನು ಪ್ರಾಂತಪಾಲನನ್ನಾಗಿ ನೇಮಿಸಿ ಇಯಾಗೋವಿಗೆ ಶಿಕ್ಷೆವಿಧಿಸುವಂತೆ ಹೇಳುವಲ್ಲಿಗೆ ನಾಟಕ ಮುಗಿಯುತ್ತದೆ.
ಇಷ್ಟೆಲ್ಲಾ ದುರಂತಕ್ಕೆ ಕಾರಣನಾದ ಇಯಾಗೋಗೆ ಶಿಕ್ಷೆಯಾಗಲಿ ಎನ್ನುವ ಪ್ರೇಕ್ಷಕರ ಇಚ್ಛೆ ಈಡೇರುವುದಿಲ್ಲ. ಇಡೀ ನಾಟಕದಲ್ಲಿ ಆ ಕಾಲದ ಕ್ರಿಶ್ಚಿಯನ್ ಕಟ್ಟಾ ಸಂಪ್ರದಾಯಸ್ಥ ನಡತೆಯನ್ನು ಕಾಣಬಹುದು. ತಾನು ಶುದ್ದ ಕ್ರೈಸ್ತಳಾಗಿದ್ದು ಯಾವ ಅಪರಾಧವನ್ನೂ ಮಾಡಿಲ್ಲವೆಂದು ಡೆಸ್ಡಿಮೋನ ಹೇಳುತ್ತಾಳೆ. ಆದರೆ ಇಯಾಗೋ ಹಾಗಲ್ಲ, ಪ್ರಾರಂಬದಲ್ಲೇ ಆತ “I am not, what I am” ಎಂದಿದ್ದಾನೆ. ಷೇಕ್ಸಫಿಯರನಿಗೆ ಆತ ಸೈತಾನನ ರೂಪ. ಎಲ್ಲಾ ಕೆಡಕುಗಳಲ್ಲಿಯೂ ಆನಂದವನ್ನು ಕಾಣುವ ಇಯಾಗೋ ನಾಟಕ ಮುಗಿದರೂ ಸೈತಾನನಂತೆ ಬದುಕಿ ಉಳಿಯುತ್ತಾನೆ. ಇಯಾಗೋವಿಗೆ ತನ್ನ ಪದೋನ್ನತಿಯನ್ನು ಕಸಿದ ಮೈಕೆಲ್ ಕ್ಯಾಸಿಯೋನ ಮೇಲೆ ಸೇಡು ಇದ್ದಿರಬಹುದಾದರೂ ಡೆಸ್ಡಿಮೋನ, ರೋಡಾರಿಗೋ, ಒಥೆಲೋ ಇವರೆಲ್ಲರ ಆನಂದವನ್ನು ಹಾಳು ಮಾಡಲು ಆತನಿಗೆ ಕಾರಣಗಳೇ ಇಲ್ಲ. ಸೈತಾನನಿಗೆ ಕೆಡುಕನ್ನು ಮಾಡಲು ಉದ್ಧೇಶ ಬೇಕಾಗಿಲ್ಲ. ಆತ ಅದರಲ್ಲಿಯೇ ವಿಕೃತಾನಂದವನ್ನು ಕಾಣುವವ. ಅವನ ಪ್ರತಿರೂಪವನ್ನು ಇಯಾಗೋನಲ್ಲಿ ಚಿತ್ರಿಸಿದ್ದಾನೆ. ಲೋಡೋವಿಕೋ “ಹೀಗೆ ಏಕೆ ಮಾಡಿದೆ, ನಿನ್ನ ಉದ್ಧೇಶವಾದರೂ ಏನು” ಎಂದು ಕೇಳುತ್ತಾನೆ. ಇಯಾಗೊ ಮುಗುಮ್ಮಾಗಿಯೇ “Demand me nothing: what you know, you know: From this time forth I never will speak word”(ನನ್ನನ್ನು ಯಾವುದಕ್ಕೂ ಒತ್ತಾಯಿಸಬೇಡಿ. ನಿಮಗೇನು ಗೊತ್ತೋ ನಿಮಗೆ ಗೊತ್ತು. ಇನ್ನು ಮುಂದೆ ನಾನು ಮಾತನ್ನೇ ಆಡುವುದಿಲ್ಲಎಂದುತ್ತರಿಸುತ್ತಾನೆ). ಪ್ರಪಂಚದ ಆದಿಯಿಂದ ದೇವರ ಇರುವಿಕೆಯಂತೆಯೇ ಸೈತಾನನ ಇರುವಿಕೆಯೂ ಇದೆ. ಒಳಿತು ಯಾವುದೆಂದು ತಿಳಿಯಲು ಕೆಡಕು ಇರಲೇ ಬೇಕು. ರಾವಣ ಇದ್ದಿರುವುದರಿಂದಲೇ ರಾಮ ಅವತರಿಸಬೇಕಾಯಿತು. ಹಾಗಾಗಿ ಇಯಾಗೋನಂತಹ ಪಾತ್ರಗಳು ನಾಟಕ ಮುಗಿದರೂ ಸಾಯದೇ ಉಳಿದುಬಿಡುತ್ತದೆ ಎನ್ನುವುದನ್ನು ಕವಿ ಹೇಳುತ್ತಾನೆ.






0 Comments