“ಸಾಹಿತ್ಯ ಇರುವುದು ಅದರಿಂದ ಕಲಿಯಬೇಕಾದ್ದನ್ನು ಕಲಿಯಲಿಕ್ಕೆ ; ಕಲಿಯಬಾರದ್ದನ್ನು ಕಲಿಯಲಿಕ್ಕಲ್ಲ.
ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದಾದರೂ ಎಲ್ಲಿ ? ಅದರ ಗುರಿಯಾದರೂ ಯಾವುದು ? ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದು ಅದರ ತಾಯ್ತನದಲ್ಲಿ ಎಂದು ನನ್ನ ನಂಬಿಕೆ. ಓದುವವರೆಲ್ಲರನ್ನೂ ಅದು ತಾಯಿಯಂತೆ ಸಾಂತ್ವನಗೊಳಿಸುತ್ತದೆ. ಶ್ರೇಷ್ಟ ಸಾಹಿತ್ಯದ ಗುರಿ, ಬದುಕಿನ ಚೆಲುವಿನ ಮೂಲಕ ಅದರಲ್ಲಿ ಪ್ರೀತಿ, ವಿಶ್ವಾಸ ಹುಟ್ಟಿಸುವುದು.”
ಎಂದು ಸಾಹಿತ್ಯದ ಅಸ್ಮಿತೆಯನ್ನು, ಸ್ವಾಯತ್ತತೆಯನ್ನು ಕುರಿತು ಮಾತನಾಡುತ್ತಲೇ ಅಂತಹ ಸಾಹಿತ್ಯ ಜಗತ್ತು ಇವತ್ತು ತಲುಪಿರುವ ಅಧೋಗತಿಯನ್ನು ಕಂಡು ನೋವಿನಿಂದ, ಅಷ್ಟೇ ಉಗ್ರ ಸಿಟ್ಟಿನಿಂದ,
” ಇಂದು ಕನ್ನಡ ಸಾಹಿತ್ಯ ವಿಮರ್ಶೆ ಎಲ್ಲ ಹುಸಿ ವಿನಯ, ಸಜ್ಜನಿಕೆ, ದಾರಿ ತಪ್ಪಿಸುವ ಅಮೂರ್ತ ಬೌದ್ಧಿಕತೆ ಮತ್ತು ನಮ್ಮ ದೃಷ್ಟಿ ದಿಗಂತಗಳನ್ನು ಮಿತಗೊಳಿಸಿ, ನಮ್ಮ ನೋಟವನ್ನು ವಿಕ್ಷಿಪ್ತಗೊಳಿಸುವ ಕಟು(ರಾಜಕೀಯ) ಸೈದ್ಧಾಂತಿಕತೆಗಳನ್ನು ಮೀರಿ ಮತ್ತೆ ಸಾಹಿತ್ಯದ ಆವೃತ್ತತೆ ಮತ್ತು ಸ್ವಾಯತ್ತತೆಗಳನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿದೆ.” ಎಂಬ ಸತ್ಯವನ್ನು ಹೇಳುತ್ತಲೇ, ಜೊತೆಗೆ ಕಟು ವಾಸ್ತವವನ್ನು ಒಪ್ಪುತ್ತಲೇ ಅದನ್ನು ಮೀರುವ ಪ್ರಯತ್ನದ ಬಗೆಗೆ ಹೀಗೆ ಹೇಳುತ್ತಾ

“ಸಾಹಿತ್ಯ ಅಥವಾ ಸಾಹಿತ್ಯ ವಿಮರ್ಶೆ ಎಂಬುದು ಬದುಕಿನ ಇತರೆಲ್ಲ ವಿದ್ಯಮಾನಗಳಂತೆ ಈಗ ಒಂದು ರೀತಿಯ ವಿಷಯವಾಗಿ ಉಳಿಯದೆ, ಕೆಟ್ಟ ಅರ್ಥದಲ್ಲಿ ಪ್ರಜಾಪ್ರಭುತ್ವೀಕರಣಕ್ಕೆ ಒಳಗಾಗಿ; ಹೆಚ್ಚು ಜನರ ಬೆಂಬಲ ಪಡೆದದ್ದೇ ಅತ್ಯುತ್ತಮವಾದದ್ದು ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ, ಹೇಳಬೇಕಾದ್ದನ್ನು ನಿರ್ಬಿಢೆಯಿಂದ ಮತ್ತು ನಿಸ್ಸಂದಿಗ್ಧವಾಗಿ ಹೇಳುವ ಧೈರ್ಯ ಮತ್ತು ಪ್ರಾಮಾಣಿಕತೆಗಳಲ್ಲೇ ಇಂದಿನ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಯ ನಿಜವಾದ ಮೌಲ್ಯಗಳು ಹುಟ್ಟಬಲ್ಲವಾಗಿವೆ ಎಂಬುದು ನನ್ನ ನಂಬಿಕೆ”
ಸಾಹಿತ್ಯ ಎನ್ನುವುದು ಮಾನವ ಬದುಕಿಗೆ ಎಷ್ಟು ಮುಖ್ಯ, ಅದರ ಸ್ವಾಯತ್ತತೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ, ಹಾಗಾಗಿ ಹಾಳಾಗುತ್ತುರುವ ಆ ಕ್ಷೇತ್ರವನ್ನು ಉಳಿಸಿಕೊಳ್ಳುವ ದಾರಿಗಳ ತೋರುತ್ತಲೇ, ಆಶಾವಾದವನ್ನು ಹೊಂದಿ ಬೇರೆ ಯಾರಾದರೂ ಆ ಪ್ರಯತ್ನ ಮಾಡುತ್ತಾರೋ ಇಲ್ಲವೋ ತಾನಂತೂ ಅದನ್ನು ಮಾಡಿಯೇ ತಿರುತ್ತೇನೆ ಎಂದು ಸು. ಮೂರು ದಶಕಗಳ ಗಟ್ಟಿ ನಂಬಿಕೆಯ ವ್ರತಧಾರಿಯಾಗಿ ತಮ್ಮ ಕಡೆಯ ಉಸಿರಿನವರೆಗೂ ಕನ್ನಡ ಸಾಹಿತ್ಯದ ಸ್ವಾಯತ್ತತೆಯನ್ನು ಮರು ಸ್ಥಾಪಿಸಲು ಕನ್ನಡ ಸಾಹಿತ್ಯ ವಿಮರ್ಶೆಗೆ ಸಮಾಜವಾದದ ಖಚಿತ ಹಿನ್ನೆಲೆಯನ್ನು ಕೊಡುವುದರ ಜೊತೆ ಜೊತೆಗೆ, ವೈಚಾರಿಕತೆ, ತತ್ವ ಶಾಸ್ತ್ರ, ವಿಜ್ಞಾನದ ಹಿನ್ನೆಲೆಯಿಂದ ಸಾಹಿತ್ಯ ಕೃತಿಯೊಂದನ್ನು ಒಂದು ವಸ್ತುವನ್ನಾಗಿ ಪರಿಗಣಿಸದೆ ಜೀವಂತ ಕೃತಿಯನ್ನಾಗಿ ಆಸ್ವಾದಿಸುವ ಓದುವ, ವಿವರಿಸುವ, ಅರ್ಥೈಸುವ, ಹಾಗೆಯೇ ಸಾಹಿತ್ಯದ ಅಸ್ಮಿತೆ/ ಸ್ವಾಯತ್ತತೆಯೊಂದಿಗೆ ಅದನ್ನು ವಿಮರ್ಶಿಸುವ ಬಗೆಯನ್ನು ಕನ್ನಡಕ್ಕೆ ತಂದವರು ಈ ಹೊಸ ಮನುಷ್ಯ.
ಒಂದು ಸಾಹಿತ್ಯ ಕೃತಿ ಕೊಡುವ ಸಂತೋಷ, ತೃಪ್ತಿ, ಅತೃಪ್ತಿ, ಬೇಸರದ ಕಾರಣಗಳನ್ನು ಮತ್ತು ಆ ಕೃತಿ ಕಾಣಿಸುವ ಹೊಸ ಹೊಳಹುಗಳನ್ನು, ಅರ್ಥದ ಬೇರೆ ಬೇರೆ ಮಜಲುಗಳನ್ನು ಒಟ್ಟಾಗಿಸಿ ತಮ್ಮದೇ ಆದ ತಾಜಾ ಭಾಷೆಯ ಸೊಗಸಿನ ಮೂಲಕ, ಖಚಿತ ಅಭಿಪ್ರಾಯ, ಭಿನ್ನ ಒಳನೋಟ ಮತ್ತು ಮುಖ್ಯವಾಗಿ ಪ್ರಾಮಾಣಿಕ ತುಡಿತ ಹಾಗೂ ಅಷ್ಟೆ ನಿಷ್ಟುರತೆಯಿಂದ ಕೂಡಿದ ಬರವಣಿಗೆಯ ಭೂಷಣವನ್ನು ಕನ್ನಡ ವಿಮರ್ಶೆಗೆ ಕೊಟ್ಟು, ತಮ್ಮ ಅಗಾಧ ಓದಿನ ಜೊತೆ ಜೊತೆಗೆ “ಮಾನವ” “ಹೊಸ ಮನುಷ್ಯ” ಪತ್ರಿಕೆ ಆರಂಭಿಸಿ, ಸಂಪಾದಕೀಯ, ಪುಸ್ತಕ ವಿಮರ್ಶೆ ಮತ್ತು
ಅಂಕಣ ಬರಹಗಳಿಂದ ಹಾಗೂ ತಾವು ನಡೆಸುವ ಶಿಬಿರ, ಕಮ್ಮಟ ಇತ್ಯಾದಿಗಳ ಮೂಲಕ ಯುವ ಸಮುದಾಯವೊಂದನ್ನು ರೂಪಿಸಿ ಇವತ್ತಿನ ಅಸಹನೀಯ ದಿನಗಳನ್ನು ಜೊತೆಗೆ ನಮ್ಮ ನಾಳೆಗಳನ್ನು ಸಹನೀಯಗೊಳಿಸುವ ಅಗಾಧ ವಿಶ್ವಾಸದಲ್ಲಿ ಕೆಲಸ ಮಾಡುತ್ತಲೇ, ನಾಳಿನ ನೈತಿಕವಾದ, ಸಹಜ ಗಟ್ಟಿ ಕನ್ನಡ ಜಗತ್ತನ್ನು ಕಟ್ಟಬೇಕೆಂಬ ಕನಸು ಕಂಡಿದ್ದ ಕನ್ನಡದ ವಿಶಿಷ್ಟ ಚಿಂತಕ, ವಿಮರ್ಶಕ ವ್ಯಕ್ತಿತ್ವ ಭೌತಿಕವಾಗಿ ಇದೇ 19 ರ ಬೆಳಗಿನ ಜಾವ 12:30 ರ ಹೊತ್ತಿಗೆ ನಮ್ಮಿಂದ ಮರೆಯಾಯ್ತು.
ಅಂತಹ ಧೀಮಂತ ವ್ಯಕ್ತಿತ್ವದೊಂದಿಗೆ ಒಡನಾಟ ಹೊಂದಿ ಪ್ರೀತಿ ಜಗಳ, ಚರ್ಚೆ ಮಾಡುತ್ತಿದ್ದ ಮೈಸೂರಿನ ಹಿರಿಯರು,ಹಾಗೂ ಅವರ ಬರವಣಿಗೆಯನ್ನಷ್ಟೇ ಓದಿ ಅವರ ವ್ಯಕ್ತಿತ್ವ ಅರಿತ ಕಿರಿಯ ಗೆಳೆಯರು ಸೇರಿ ಇದೇ ಭಾನುವಾರ ಸಂಜೆ ನಾಲ್ಕು ಗಂಟೆಗೆ ನುಡಿ – ನಮನ ಸಲ್ಲಿಸಲಿದ್ದೇವೆ.






0 Comments