ಆಕೆ ನನ್ನೆದುರು ಕುಳಿತಿದ್ದಳು. ಬಿಕ್ಕಿ ಬಿಕ್ಕಿ ಅಳುವುದನ್ನು ಬಿಟ್ಟು ಅವಳಿಗೆ ಇನ್ನೇನೂ ಮಾಡಲು ಸಾಧ್ಯವಾಗಿರಲಿಲ್ಲ. ನನ್ನ ಮುಂದಿದ್ದ ಎರಡೂ ಗಂಟೆಗಳ ಕಾಲ ಆಕೆಗೆ ಒಂದು ಮಾತೂ ಸಹಾ ಆಡಲಾಗಿರಲಿಲ್ಲ. ಮಾತನಾಡಲು ಹೋದರೆ ಸಾಕು ಅಳು ಒತ್ತರಿಸಿ ಬರುತ್ತಿತ್ತು. ನಾನೂ ಸಹಾ ಸುಮ್ಮನೆ ನೋಡುತ್ತಾ ಉಳಿದೆ. ಅಳು ನಿಲ್ಲಿಸು ಎಂದು ಹೇಳಲಿಲ್ಲ. ಸಮಾಧಾನ ಮಾಡುವ ಯಾವ ಮಾತನ್ನೂ ಆಡಲಿಲ್ಲ. ಆಕೆಯನ್ನು ಅಳಲು ಬಿಟ್ಟೆ. ಅವಳೊಳಗಿರುವ ಅಷ್ಟೂ ಅಳು ಹೊರಗೆ ಬಂದುಬಿಡಲಿ ಎಂದು ಕಾಯುತ್ತಾ ಕುಳಿತೆ. ಅವಳ ಬದುಕು ಒಂದು ಧೀರ್ಘ ನೋವಿನ ಪಯಣವೇನೋ ಎಂಬಂತೆ ಆಕೆ ಅತ್ತೇ ಅತ್ತಳು. ಇನ್ನಿಲ್ಲದಂತೆ ಅತ್ತಳು. ಈಗಲೂ ಈ ಘಟನೆ ನಡೆದು ಹಲವು ವರ್ಷಗಳು ಕಳೆದರೂ ನೆನಸಿಕೊಂಡರೆ ನನ್ನೊಳಗೆ ಆಕೆಯ ಆ ಅಳುವಿನ ಭೋರ್ಗರೆತವೇ ಕೇಳುತ್ತದೆ.
ಆಕೆ ಶ್ರವ್ಯ. ಹೆಸರು ಬದಲಿಸಿದ್ದೇನೆ ಎಂದು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ ತಾನೆ. ನಾನು ಇವತ್ತು ನಿಮಗೆ ಹೇಳಲೆಬೇಕಾಗಿರುವ ಕಥೆ ಶ್ರವ್ಯಳದ್ದು. ಎಳೆಯ ವಯಸ್ಸಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹುಡುಗಿ. ತನ್ನ ಬದುಕಿನುದ್ದಕ್ಕೂ ಅದು ಉಂಟು ಮಾಡಿದ ಆಳ ಗಾಯವನ್ನು ಹೊತ್ತು ಓಡಾಡುತ್ತಿದ್ದ ಹುಡುಗಿ.
ಎಲ್ಲೋ ಒಬ್ಬ ಹೆಣ್ಣು ಮಗುವಿನ ಎದೆ ಸವರಬಹುದು. ಮುಟ್ಟಬಾರದ ಕಡೆ ಮುಟ್ಟಬಹುದು. ಲೈಂಗಿಕ ಅತ್ಯಾಚಾರವನ್ನೇ ಮಾಡಬಹುದು ಆದರೆ ಇದು ಮನಸ್ಸಿಗೆ ಮಾಡುವ ಗಾಯ ಅಪಾರ. ಅದೊಂದು ಕೆಟ್ಟ ಘಳಿಗೆ, ಇದನ್ನು ಮರೆತುಬಿಡೋಣ ಎಂದು ಮನಸ್ಸಿನಿಂದ ಕಿತ್ತುಹಾಕಿ ನಡೆದು ಬಂದು ಬಿಡುವಂತಹದ್ದಲ್ಲ. ಇದು ಬದುಕಿನ ಮೇಲೆ ಧೀರ್ಘಕಾಲ ಉಳಿಯುವ ಪರಿಣಾಮವನ್ನು ಉಂಟುಮಾಡುತ್ತದೆ.
’ಲೈಂಗಿಕ ದೌರ್ಜನ್ಯ’ದ ಬಗ್ಗೆ ನಾವು ಇತ್ತೀಚೆಗಾದರೂ ಸಂವೇದನಾಶೀಲವಾಗಿ ಸ್ಪಂದಿಸುವುದನ್ನು ಕಲಿಯುತ್ತಿದ್ದೆವೆ. ತಡವಾಗಿದೆ ನಿಜ, ಆದರೆ ಕಲಿಯುತ್ತಿದ್ದೇವೆ. ಇದೊಂದು ಆಶಾಕಿರಣವೇ ಸರಿ. ಇತ್ತೀಚೆಗೆ ಬಹಳಷ್ಟು ಕಡೆ ಬಿಸಿ ಬಿಸಿ ಚರ್ಚೆಯೂ ಈ ಬಗ್ಗೆ ನಡೆಯುತ್ತಿದೆ. ಶತಮಾನಗಳ ಮೌನ ಮುರಿದು ಹೆಣ್ಣುಮಕ್ಕಳು ಈ ಬಗ್ಗೆ ಪಿಸುದನಿಯಲ್ಲಾದರೂ ಮಾತನಾಡಲು ಪ್ರಾರಂಭಿಸಿದ್ದಾರೆ. ತಮ್ಮ ಭಯ, ಹಿಂಸೆ, ಯಾತನೆ ಎಲ್ಲದರ ಬಗ್ಗೆಯೂ ಮಾತನಾಡಿ ಆ ಮೂಲಕ ನೆರವು ಕೇಳುತ್ತಿದ್ದಾರೆ. ಮಾನಸಿಕವಾಗಿ ಬಲಹೀನರಾದ , ಖಿನ್ನತೆಯಲ್ಲಿ ನರಳುತ್ತಿರುವ ಹೆಣ್ಣುಮಕ್ಕಳು ಈ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರಂತೂ, ಅದರ ಘಾಸಿಯನ್ನು ತಡೆಯಲು, ಮನಸ್ಸಿನಿಂದ ಅಳಿಸಿಹಾಕಲು, ತಮ್ಮತನವನ್ನು ಉಳಿಸಿಕೊಳ್ಳಲು ಅವರು ಮಾಡಬೇಕಾಗಿರುವ ಹೋರಾಟ ಅಷ್ಟಿಷ್ಟಲ್ಲ.
ನಮ್ಮಲ್ಲಿ ಬಹಳಷ್ಟು ಮಂದಿ, ಬೇರೆ ಬೇರೆ ವಯಸ್ಸಿನಲ್ಲಿ, ಬೇರೆ ಬೇರೆ ಮಟ್ಟದ ಲೈಂಗಿಕ ಧಾಳಿ, ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತೇವೆ. ಹಾಗೆ ನೊಂದವರ ಮನಸ್ಸು, ಭಾವುಕತೆ, ಅವರ ಮನಸ್ಸಿನ ಧೃಡತೆಯ ಮೇಲೆ ಆಗುವ ಪ್ರಭಾವ ಮತ್ತು ಪರಿಣಾಮದಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ಎಷ್ಟೋ ಬಾರಿ ಬಾಲ್ಯದಲ್ಲಿ ಆದ ಇಂತಹ ದೌರ್ಜನ್ಯದ ಪರಿಣಾಮಗಳು ಹಾಗೆ ನೊಂದವರನ್ನು ಜೀವನದುದ್ದಕ್ಕೂ ಬಿಡದೆ ಕಾಡುತ್ತದೆ. ಮತ್ತೆ ಕೆಲವು ಸಲ ಲೈಂಗಿಕ ದೌರ್ಜನ್ಯ ತೀವ್ರವಾಗಿಲ್ಲದಿದ್ದರೂ ಸಹ ಅದಕ್ಕೆ ಒಳಗಾದವರ ಮನಸ್ಸು ಇನ್ನಿಲ್ಲದಂತೆ ತಲ್ಲಣಿಸಿ ಅದರ ಕಹಿನೆನಪು ಎಷ್ಟು ಕಾಲ ಕಳೆದರೂ ಅವರ ಮನಸ್ಸಿನಿಂದ ಮರೆಯಾಗುವುದಿಲ್ಲ. ಕೆಲವು ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದವರು ಮಾನಸಿಕವಾಗಿ ಸದೃಢರಾಗಿದ್ದರೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೂ ಅವರು ಬದುಕುವ ಛಲವನ್ನು, ಜೀವನಪ್ರೀತಿಯನ್ನು ಬಿಟ್ಟುಕೊಡದೆ ತಮ್ಮ ಕಹಿ ನೆನಪಿನಿಂದ ಹೊರಬಂದು ಮತ್ತೆ ಮೊದಲಿನಂತೆ ಬದುಕು ನಡೆಸಲು ಸಾಧ್ಯವಾಗಬಹುದು. ಹಾಗಾಗಲು ಅವರ ಮನೆ, ಸಂಬಂಧಿಕರು, ಪರಿಸರ ಎಲ್ಲರೂ ನೀಡುವ ಬೆಂಬಲವೂ ಕಾರಣವಾಗಿರಬಹುದು. ಆದರೆ ಕೆಲವು ವಿಪರೀತ ಪ್ರಸಂಗಗಳಲ್ಲಿ ಈ ಲೈಂಗಿಕ ದೌರ್ಜನ್ಯದ ಹೊಡೆತದಿಂದ ಹೊರಬರಲಾಗದೆ ತಮ್ಮ ಜೀವವನ್ನೇ ಕಡೆಗಾಣಿಸಿಕೊಂಡ ಉದಾಹರಣೆಗಳು ನಮ್ಮೆದುರಿಗಿವೆ.
ನಾನು ಈಗ ನಿಮಗೆ ಹೇಳಹೊರಟಿರುವುದು ಬಾಲ್ಯದಲ್ಲೇ ಇಂತಹ ಧಾಳಿಯಿಂದ ತತ್ತರಿಸಿ ನನ್ನ ಬಳಿ ಬಂದ ಶ್ರವ್ಯಳ ಬಗ್ಗೆ. ನನ್ನ ಬಳಿ ಬಂದಾಗ ಆಕೆಗೆ ಸುಮಾರು ೩೩ ವರ್ಷ ವಯಸ್ಸು, ಆಕೆ ಒಬ್ಬ ಯಶಸ್ವೀ ಸಾಫ್ಟ್ ವೇರ್ ಉದ್ಯೋಗಿ, ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಉದ್ಯೋಗ, ಒಳ್ಳೆಯ ಸಂಪಾದನೆ. ತನ್ನ ಕೆಲಸವನ್ನು, ಕಛೇರಿಯನ್ನು ಅದಮ್ಯವಾಗಿ ಪ್ರೀತಿಸುವ ಆಕೆಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವುದೆಂದರೆ ನರಕ. ಅದಕ್ಕೆ ಕಾರಣ ಅವಳ ಮನೆಯ ಸ್ಥಿತಿ.
ಅವಳ ಗಂಡ ಒಬ್ಬ ಸ್ತ್ರೀಲೋಲ, ಸಿಕ್ಕ ಸಿಕ್ಕ ಹೆಂಗಸರ ಜೊತೆ ಅವನಿಗೆ ಸಂಬಂಧವಿದೆ. ೧೩ ವರ್ಷದ ತನ್ನ ಮನೆಕೆಲಸದ ಹುಡುಗಿಯನ್ನೂ ಆತ ಬಿಟ್ಟಿಲ್ಲ . ಇದು ಸಾಲದು ಎನ್ನುವಂತೆ ಇನ್ನಿಲ್ಲದಷ್ಟು ದುರಭ್ಯಾಸಗಳು, ಸಿಗರೇಟು, ಮದ್ಯಪಾನ, ಡ್ರಗ್ಸ್ ಎಲ್ಲವೂ ಅವನಿಗೆ ಬೇಕು. ಇವಳ ಬಗ್ಗೆ ಅವನಿಗೆ ಒಂದಿಷ್ಟೂ ಕಾಳಜಿಯಿಲ್ಲ, ಪ್ರೇಮವಂತೂ ಮೊದಲೇ ಇಲ್ಲ. ಶ್ರವ್ಯಳ ಬದುಕನ್ನು ಸಹನೀಯಗೊಳಿಸಿರುವುದು ಅವಳ ೩ ವರ್ಷದ ಮುದ್ದಾದ ಮಗಳು ಮಾತ್ರ.
ಶ್ರವ್ಯಳ ಜೊತೆ ಒಂದೆರಡು ಭೇಟಿ ಆಗಿ, ನಿಧಾನವಾಗಿ ಅವಳ ಹಿನ್ನೆಲೆಯನ್ನು ಬಿಡಿಸಿದಾಗ ತಿಳಿದು ಬಂದದ್ದು ಇದು. ಅವಳಿಗೆ ೬ ವರ್ಷ ವಯಸ್ಸಾಗಿದ್ದಾಗ ೫೫ ವರ್ಷದ ಒಬ್ಬ ಆರ್ಮಿಯ ಅಧಿಕಾರಿ ಅವಳನ್ನು ಬಲಾತ್ಕಾರ ಮಾಡಿದ್ದ. ಆತ ಅವರಿದ್ದ ಕಾಲನಿಯಲ್ಲೇ ವಾಸವಾಗಿದ್ದ, ಕಾಲನಿಯಲ್ಲಿ ಇವರ ಮನೆ ಎದುರೇ ಅವನ ಮನೆ. ಒಂದು ಸಂಜೆ ಗೆಳತಿಯರೊಡನೆ ಆಡುತ್ತಿದ್ದ ಇವಳನ್ನು ಪುಸಲಾಯಿಸಿ ಮನೆಗೆ ಕರೆದು ಧಾರುಣವಾಗಿ ಬಲಾತ್ಕಾರ ಮಾಡಿದ್ದ. ಪುಟ್ಟ ಹುಡುಗಿಗೆ ಏನಾಯ್ತು ಅಂತ ಅರಿವಿರಲಿಲ್ಲ, ಆದರೂ ತನ್ನ ದೇಹಕ್ಕಾದ ನೋವು, ಆಘಾತ, ಗಾಯಗಳಿಂದ, ಆಗುತ್ತಿದ್ದ ರಕ್ತಸ್ರಾವದಿಂದ ಹೆದರಿದ್ದ ಹುಡುಗಿ ಮನೆಯಲ್ಲಿ ಇಡೀ ರಾತ್ರಿ ಅತ್ತಿದ್ದಾಳೆ. ಯಾಕೋ ಏನೋ ಎಂದು ವಿಚಾರಿಸಿದ ಪೋಷಕರಿಗೆ ಪರಿಸ್ಥಿತಿಯ ಅರಿವಾಗಿ, ಅವರೂ ಅವಳೊಡನೆ ಅತ್ತಿದ್ದಾರೆ. ಮಧ್ಯಮ ವರ್ಗದ ಹಿನ್ನಲೆಯಿಂದ ಬಂದ ಪೋಷಕರು ಸಮಾಜಕ್ಕೆ ಹೆದರಿ, ಅದರ ಕಟ್ಟುಪಾಡುಗಳಿಗೆ ಹೆದರಿ ಅದನ್ನು ಅಲ್ಲಿಯೇ ಮುಚ್ಚಿಹಾಕಿ, ಮನೆ ಬದಲಾಯಿಸಿ, ಬೇರೆ ಕಡೆ ಹೊರಟುಬಿಟ್ಟಿದ್ದಾರೆ. ಅವಳ ಎದೆಯಾಳದ ನೋವಿಗೆ, ಗೊಂದಲಕ್ಕೆ, ಕೋಪಕ್ಕೆ ಮದ್ದೂ ಸಿಕ್ಕಿಲ್ಲ, ಅದು ಬೆಳಕಿಗೂ ಬಂದಿಲ್ಲ.
ಶ್ರವ್ಯ ಹದಿವಯಸ್ಸಿಗೆ ಬರುವ ವೇಳೆಗೆ ತನ್ನ ಮೇಲಾದ ಬಲಾತ್ಕಾರದ ಅರ್ಥ ಅವಳಿಗಾಗಿದೆ. ಆ ಬಲಾತ್ಕಾರದ ಬಗ್ಗೆ ಮಾತೇ ಆಡದೆ, ಅದನ್ನೊಂದು ಹೊರೆಯಂತೆ ಎದೆ ಮೇಲೆ ಹೊತ್ತ ಕಾರಣ ಅವಳ ಸಿಟ್ಟು ಎಲ್ಲಾ ಗಂಡಸರ ಬಗ್ಗೆ ತಿರುಗಿದೆ. ಅವಳಿಗೆ ಗಂಡಸರೆಂದರೆ ಸಾಕು ಇನ್ನಿಲ್ಲದ ಅಸಹ್ಯ . ಅವಳ ಯೌವ್ವನದ ಕಾಲವನ್ನೂ ಸಹಾ ಆಕೆ ಸಂಭ್ರಮಿಸಲಿಲ್ಲ. ತನ್ನ ವಯಸ್ಸಿನ ಇತರರಂತೆ ಖುಷಿಯಲ್ಲಿ ಕಳೆಯಲಾಗಿಲ್ಲ.
೨೦ ತುಂಬುತ್ತಿದ್ದಂತೆಯೇ ಮನೆಯವರು ಮದುವೆಗೆ ಮುಂದಾದಾಗ ಆಕೆ ದೂರ ಸರಿದಿದ್ದಾಳೆ. ಮದುವೆಗೆ ಬಿಲ್ ಕುಲ್ ಒಪ್ಪಿಲ್ಲ. ಆದರೂ ಮನೆಯವರು ಬಲವಂತ ಮಾಡಿ ಆಕೆಯನ್ನು ಒಪ್ಪಿಸಿ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆಯ ನಂತರವೂ ಅವಳ ಮೇಲೆ ಆ ಹಳೆಯ ಕಹಿ ನೆನಪು ದಾಳಿ ಮಾಡಿದೆ. ಪರಿಣಾಮ ಆಕೆ ಎಂದೂ ಗಂಡನೊಡನೆ ಸ್ವಸ್ಥ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಮೊದಮೊದಲು ಆತ ಅದನ್ನು ಸಹಿಸಿಕೊಂಡು, ಮುಂದೆ ಸರಿಹೋಗಬಹುದು ಎಂದು ಕಾದಿದ್ದಾನೆ. ಯಾವಾಗ ಪರಿಸ್ಥಿತಿ ಬದಲಾಗಲಿಲ್ಲವೋ ಆತ ತುಳಿದದ್ದು ಅಸ್ವಸ್ಥ ಹಾದಿ. ತನ್ನ ಹೆಂಡತಿಗೆ ಬೇಕಿದ್ದ ಸಾಂತ್ವನ ನೀಡುವ ಬದಲು , ಚಿಕೆತ್ಸೆ ಕೊಡಿಸುವ ಬದಲು ಆತ ಮಾನಸಿಕವಾಗಿ ಅವಳಿಂದ ದೂರಾಗಿ ತನ್ನ ಸುಖವನ್ನು ಬೇರೆ ಕಡೆ, ಬೇರೆ ದಾರಿಗಳಲ್ಲಿ ಹುಡುಕಿಕೊಳ್ಳಲು ಪ್ರಾರಂಭಿಸಿದ್ದಾನೆ. ಇದರಿಂದ ಅವರಿಬ್ಬರ ನಡುವಿನ ಅಂತರ ಇನ್ನೂ ಹೆಚ್ಚಾಗಿ, ಗಂಡಸರ ಬಗೆಗಿನ ಅವಳ ವಿಮುಖತೆ ಇನ್ನೂ ಹೆಚ್ಚಾಗಿದೆ.
ಶ್ರವ್ಯ ನನ್ನ ಬಳಿ ಬಂದದ್ದು ಈ ಹಂತದಲ್ಲಿ. ಅವಳಿಗೆ ತನ್ನ ಜೀವನದ ಬಗ್ಗೆ, ಮುಂದಿನ ಹೆಜ್ಜೆಯ ಬಗ್ಗೆ ವಿಪರೀತ ಪ್ರಶ್ನೆಗಳಿದ್ದವು, ವಿಪರೀತ ಗೊಂದಲ ಇತ್ತು. ತಾನು ಇನ್ನೂ ಸಂಸಾರ ನಡೆಸಬೇಕೋ ಇಲ್ಲಾ ವಿಚ್ಛೇದನ ತೆಗೆದುಕೊಳ್ಳಬೇಕೋ ಎಂದು ತಲೆ ಕೆಡಿಸಿಕೊಂಡಿದ್ದಳು. ಮೊದಲ ಭೇಟಿಯಲ್ಲಿ ಇನ್ನಿಲ್ಲದಂತೆ ಅತ್ತದ್ದು ಬಿಟ್ಟರೆ ಆಕೆಗೆ ಒಂದೇ ಒಂದು ಮಾತು ಆಡಲೂ ಆಗಿರಲಿಲ್ಲ. ಆಮೇಲಾಮೇಲೆ ಅವಳೊಂದಿಗೆ ವಿವರವಾಗಿ ಮಾತನಾಡಿದ ಮೇಲೆ, ಅವಳ ನೋವಿನ ಮೂಲವನ್ನು ಅರಿತ ಮೇಲೆ ನಾನು ಅವಳ ಚಿಕಿತ್ಸೆ ಪ್ರಾರಂಭಿಸಿದೆ.
ಮೊದಲಿಗೆ ನಾನು ಅವಳೊಡನೆ ಥೆರಪಿ ಸೆಷನ್ ಗಳನ್ನು ನಡೆಸಿದೆ. ಅವಳ ಬಾಲ್ಯ ಕಾಲದ ಆ ಕೆಟ್ಟ ಅನುಭವ, ಮಾತನಾಡದೆ ಎದೆಯಲ್ಲಿ ಅದುಮಿಟ್ಟ ಆ ನೋವು, ಅವಮಾನ, ಯಾತನೆ ಎಲ್ಲಾ ಮಾತಾಗಿ ಹೊರ ಬಂದು, ಸಮರ್ಪಕ ಚಿಕಿತ್ಸೆಯ ಮೂಲಕ ಅವಳ ಮನಸ್ಸು ಮಾಯುತ್ತಾ ಬಂತು. ಯಾವಾಗ ಅವಳ ಮನಸ್ಸು ಹಗುರವಾಗಲು ಶುರುವಾಯಿತೋ, ಯಾವಾಗ ಅವಳ ಮನಸ್ಸು ಸ್ವಲ್ಪಸ್ವಲ್ಪವೇ ಹೊರೆ ಇಳಿಸಿಕೊಳ್ಳಲು ಸಾಧ್ಯವಾಯಿತೋ ಆಕೆ ತನ್ನ ಮುಂದಿನ ಬದುಕಿನ ಬಗ್ಗೆ, ನಿರ್ಧಾರಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲು ಆರಂಭಿಸಿದಳು.
ನಿಧಾನವಾಗಿ ಗಂಡಸರ ಬಗೆಗಿನ ಅವಳ ಸಿಟ್ಟು ಅಸಹ್ಯ ಕಡಿಮೆಯಾಯಿತು. ಅವಳ ಮನಸ್ಸು ಮುಕ್ತವಾಗುತ್ತಾ ಬಂತು. ಖಿನ್ನತೆಯಿಂದ ಒಂದೊಂದೇ ಹೆಜ್ಜೆ ಹೊರಬಂದಳು. ಅವಳ ಆತ್ಮವಿಶ್ವಾಸ ಸಹಾ ಬೆಳೆಯುತ್ತಾ ಹೋಯಿತು. ಒಂದಷ್ಟು ಸಲ ಭೇಟಿಯಾದ ಮೇಲೆ ಅವಳ ಅಳು ಸಹಾ ತಹಬಂದಿಗೆ ಬಂದಿತು. ಬದುಕನ್ನು ಎಲ್ಲಾ ದಿಕ್ಕಿನಿಂದಲೂ ನೋಡಬಲ್ಲ ಸ್ಪಷ್ಟತೆ ಅವಳಿಗೆ ಬಂದಿತು. ಅವಳ ಬದಲಾದ ಮನೋಭಾವದಿಂದ ಗಂಡನನ್ನುನೋಡುವ ರೀತಿಯೂ ಬದಲಾಯಿತು. ಅವಳು ಗಂಡನೊಡನೆ ಮಾತನಾಡಿ, ಆತನನ್ನು ಮಾನಸಿಕವಾಗಿ, ದೈಹಿಕವಾಗಿ ಒಪ್ಪಿಕೊಂಡಳು.
ಆಮೇಲೆ ಗಂಡ ಸಹ ಶ್ರವ್ಯಳೊಂದಿಗೆ ಮುಕ್ತವಾಗಿ ಮಾತನಾಡಿದ. ಹೊರಗಿನ ಸಂಬಂಧಗಳೆಷ್ಟೇ ಇದ್ದರೂ ಅಲ್ಲಿ ಮಾನಸಿಕ ಸ್ಪಂದನವಿಲ್ಲದೆ ಅದು ಎಂದೂ ತನಗೆ ತೃಪ್ತಿ ಕೊಡಲೇ ಇಲ್ಲ ಎಂದು ಒಪ್ಪಿಕೊಂಡ. ಅವಳು ತನ್ನನ್ನು ಒಪ್ಪಿಕೊಂಡರೆ, ತನ್ನ ಜೊತೆ ಹೀಗೇ ಇದ್ದರೆ ತನಗೆ ಬೇರೇನೂ ಬೇಡ ಎಂದು ಹೇಳಿದ. ತನ್ನ ಸಮಸ್ಯೆಗಳಿಗೆ ವಿಚ್ಚೇದನ ಪರಿಹಾರವಲ್ಲ ಎಂದು ಅರ್ಥ ಮಾಡಿಕೊಂಡ ಶ್ರವ್ಯ ತನ್ನ ಬದುಕನ್ನು ನೇರ ಮಾಡಿಕೊಳ್ಳಲು ತಯಾರಾದಳು. ನಿಧಾನವಾಗಿ ತನ್ನ ಗಂಡನನ್ನು ಅವನ ಎಲ್ಲಾ ದುಶ್ಚಟಗಳಿಂದ ಬಿಡಿಸಿದಳು. ತನ್ನ ಮದುವೆ ಹಾಳಾಗಲು ತನ್ನ ಗಂಡನಷ್ಟೇ ಕಾರಣ ಅಲ್ಲ, ತನ್ನ ನಡವಳಿಕೆಯೂ ಕಾರಣ ಎಂಬ ಅರಿವಾಯಿತು. ಇದರ ಜೊತೆ ಅವಳ ಮನಸ್ಸಿನಲ್ಲಿ ಆಅದ ಬದಲಾವಣೆ, ಹೆಚ್ಚಿದ ಆತ್ಮವಿಶ್ವಾಸ ಸಹಾ ಆಕೆಯ ನೆರವಿಗೆ ಬಂತು.
ಅವಳ ಜೀವನದಲ್ಲಿ ಮುಂದೆ ಸಹಾ ಅನೇಕ ಸಮಸ್ಯೆಗಳು ಬಂದವು, ಆದರೆ ಈಗ ಅವೆಲ್ಲವನ್ನೂ ಎದುರಿಸಲು ಅವಳು ಸಜ್ಜಾಗಿದ್ದಳು. ಆ ಮಾನಸಿಕ ಕ್ಷಮತೆ ಅವಳಿಗೆ ಬಂದಿತ್ತು.
ನಮ್ಮ ನಡುವೆ ಇನ್ನೂ ಅನೇಕ ಶ್ರವ್ಯರು ಇದ್ದಾರೆ. ಇಲ್ಲಿ ಆಕೆ ಮಾಡಿದ ಒಂದು ಒಳ್ಳೆಯ ಕೆಲಸ ಅಂದರೆ ಆಕೆ ಸಮಸ್ಯೆ ಇರುವುದನ್ನು ಒಪ್ಪಿಕೊಂಡು ಅದರ ಪರಿಹಾರಕ್ಕೆ ಪ್ರಯತ್ನಿಸಿದ್ದು. ಮಾನಸಿಕ ಸಮಸ್ಯೆ ಯಾವುದೇ ಇದ್ದರೂ ಮೊದಲ ಹೆಜ್ಜೆ ಅದನ್ನು ಒಪ್ಪಿಕೊಂಡು ಅದರ ಪರಿಹಾರಕ್ಕಾಗಿ ಪ್ರಯತ್ನಿಸುವುದು. ಲೈಂಗಿಕ ದೌರ್ಜನ್ಯದ ಹಲವು ಪ್ರಕರಣಗಳಲ್ಲಿ ಬಲಾತ್ಕಾರಕ್ಕೆ, ದೌರ್ಜನ್ಯಕ್ಕೆ ಒಳಗಾದವರ ಮನದಲ್ಲೆಲ್ಲೋ ತಾವೂ ಇದಕ್ಕೆ ಎಲ್ಲೋ ಅನುಮೋದನೆ ಕೊಟ್ಟಿರಬಹುದಾ, ಯಾವುದಾದರೂ ನಡವಳಿಕೆಯಲ್ಲಿ ಅದನ್ನು ಪ್ರಚೋದಿಸಿರಬಹುದೋ ಎನ್ನುವ ಒಂದು ಸಣ್ಣ ಅಳುಕು, ಒಂದು ಹೊರೆ, ಜೀವನ ಪೂರ್ತಿ ಉಳಿದುಕೊಂಡೇ ಇರುತ್ತದೆ. ಆದರೆ ಅದು ಸತ್ಯ ಅಲ್ಲ.
ಒಂದು ಹುಚ್ಚು ನಾಯಿ ನಿಮ್ಮನ್ನು ಕಚ್ಚಿದರೆ ನೀವು ಏನು ಮಾಡುತ್ತೀರಿ? ಜೀವನಪೂರ್ತಿ ಅಳುತ್ತಾ ಕೂರುತ್ತೀರಾ? ಇಲ್ಲಾ ಅಲ್ಲವಾ? ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುತ್ತೀರಿ. ಇದೂ ಹಾಗೆಯೇ.
ಇಲ್ಲಿ ಇನ್ನೂ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಒಮ್ಮೆ ಒಬ್ಬ ಮನೋಶಾಸ್ತ್ರಜ್ಞರ ಬಳಿ ಚಿಕಿತ್ಸೆ ತೆಗೆದುಕೊಂಡರೆ ಮತ್ತೆ ನಿಮ್ಮ ಜೀವನದಲ್ಲಿ ಸಮಸ್ಯೆಗಳೇ ಬರುವುದಿಲ್ಲ ಅಂತ ಅಲ್ಲ. ಬರುತ್ತದೆ. ಆದರೆ ಚಿಕಿತ್ಸೆ ಆ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ನಿಮ್ಮಲ್ಲಿ ಬೆಳೆಸುತ್ತದೆ.
ಮತ್ತೆ ಮುಂದಿನವಾರ ಭೇಟಿಯಾಗೋಣ, ಮತ್ತೊಂದು ಕಥೆಯೊಂದಿಗೆ..







ಮನಸ್ಸನ್ನು ಆಲಿಸುವ ಕ್ರಮವೇ ಇಂಥದ್ದು ಅನ್ನಿಸುತ್ತೆ. ಗ್ರಾಮೀಣ ಭಾಗದ ಮಹಿಳೆಯ ನೋವು ಆತಂಕ ಮತ್ತದನ್ನು ನಿರ್ವಹಿಸುವ ಕ್ರಮ ಕೂಡ ಬದಲಾಗಿರುತ್ತೆ ಎನ್ನುವುದು ನನ್ನ ಗ್ರಹಿಕೆ. ಈ ಕುರಿತ ತಿಳಿವಿಗಾಗಿ ನಿಮ್ಮ ಮುಂದಿನ ಬರಹಗಳನ್ನು ಕಾಯುವೆ.
ಧನ್ಯವಾದಗಳು ಮೇಡಂ.ನೀವು ನಡೆಸುವ ಆಪ್ತಸಮಾಲೋಚನೆಯನ್ನು ಇನ್ನಷ್ಟು ವಿವರವಾಗಿ ಬರೆಯಲು ಸಾಧ್ಯವೇ? ನಾನೂ ಇಂಥಹ ಹಲವು ಸಮಸ್ಯೆಗಳಿರುವವರೊಂದಿಗೆ ಒಡನಾಡುತ್ತಿರುತ್ತೇನೆ.ಮಾತು ಸಾಂತ್ವನ ನೀಡಲು ಪ್ರಯತ್ನಿಸುತ್ತಿರುತ್ತೇನೆ. ನಿಮ್ಮ ಸಮಾಲೋಚನಾ ವಿಧಾನ ನನ್ನಂಥವರಿಗೆ ಹೆಚ್ಚು ಉಪಯುಕ್ತವಾಗಬಹುದು. ನಿಜ ಶ್ರವ್ಯರಂತವರು ಬಹಳಷ್ಟು ಜನರಿದ್ದಾರೆ. ಆದರೆ ಅವರ ಪತಿಯಂತೆ ಪರಿಸ್ಥಿತಿಯನ್ನು ಅಥಱ ಮಾಡಿಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಬಯಸುವವರು ಬೆರಳೆಣಿಕೆಯಷ್ಟೂ ಜನರಿಲ್ಲ! ಹೀಗೆಂದೇ ನಾವು ಎಲ್ಲ ಸಲಹೆ ಚಿಕಿತ್ಸೆಯನ್ನು ಹೆಣ್ಣು ಮಕ್ಕಳಿಗೇ ನೀಡಿ ಅವರನ್ನು ಮತ್ತಷ್ಟು ಅಸಹಾಯಕರಾಗಿಸುತ್ತಿದ್ದೇವಾ? ಎನ್ನಿಸುತ್ತಿರುತ್ತದೆ.
ರೂಪ ಹಾಸನ
ಉತ್ತಮ ಪ್ರಖರಣಾಧಾರಿತ ಲೇಖನ. ಧನ್ಯವಾದಗಳು.
ಆಪ್ತ ಸಮಾಲೋಚನೆ ಎಂಬುದು ಒಂದು ಪ್ರಖರಣದ ಎಲ್ಲಾ ಭಾಗಿದಾರರಿಗೂ ಲಿಂಗ ಭೇದವಿಲ್ಲದೆ ಅಗತ್ಯವಿರುತ್ತದೆ. ಆಪ್ತ ಸಮಾಲೊಚನೆ ಮಾನಸಿಕವಾಗಿ ಸದ್ರುಢಗೊಳಿಸುವ ಪ್ರಕ್ರಿಯೆಯಾಗಿರುವುದರಿಂದ, ಅದು ಯಾರನ್ನು ಅಸಾಹಯಕರನ್ನಾಗಿಸದು.
ಒಮ್ಮೆ ಒಬ್ಬ ಮನೋಶಾಸ್ತ್ರಜ್ಞರ ಬಳಿ ಚಿಕಿತ್ಸೆ ತೆಗೆದುಕೊಂಡರೆ ಮತ್ತೆ ನಿಮ್ಮ ಜೀವನದಲ್ಲಿ ಸಮಸ್ಯೆಗಳೇ ಬರುವುದಿಲ್ಲ ಅಂತ ಅಲ್ಲ. ಬರುತ್ತದೆ. ಆದರೆ ಚಿಕಿತ್ಸೆ ಆ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ನಿಮ್ಮಲ್ಲಿ ಬೆಳೆಸುತ್ತದೆ.
True.. Liked it
ಆಪ್ತ ಬರಹ. ಧನ್ಯವಾದಗಳು.
ನಿಜವಾಗಿಯೂ ಆಪ್ತ ಸಮಾಲೋಚನೆ ನಿಮ್ಮ ಬರಹಗಳಿಗಾಗಿ ಕಾಯುವೆ
ಒಂದು ಸಾಕಷ್ಟು ಕಾಂಪ್ಲೆಕ್ಸ್ ಆದ ವಿಷಯವನ್ನು ಓದುಗರಿಗೋಸ್ಕರ ಬಹಳ ಸರಳೀಕರಿಸಲಾಗಿದೆಯೆನ್ನಿಸುತ್ತದೆ.ಚಿಕ್ಕಂದಿನಲ್ಲಿ ಆದ ಆಘಾತ ದೀರ್ಘ ಕಾಲ ಸುಪ್ತ ಪ್ರಜ್ಞೆಯಲ್ಲಿ ಉಳಿದು ಬೆಳೆದು ತನ್ನದೇ ದೇಹದ ನಿಸರ್ಗ ಸಹಜ ಬಯಕೆಗಳನ್ನು ತುಳಿದು ಹಾಕುವುದರ ಜೊತೆಗೆ,ಪ್ರಜ್ಞೆಯನ್ನು ಆವರಿಸಿಕೊಂಡು ವ್ಯಕ್ತಿತ್ವವನ್ನು ನಿಯಂತ್ರಿಸುತ್ತಿದ್ದುದು ವ್ಯಕ್ತವಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ ಸುಪ್ತ ಪ್ರಜ್ಞೆ – ಪ್ರಜ್ಞೆಗಳ ಸಂಬಂಧ ಇಷ್ಟು ಸರಳವಾಗಿರುತ್ತದೆಯೇ ? ಇನ್ನು ಒಮ್ಮೆ ಪತಿಯನ್ನು ಹಿಡಿತಕ್ಕೆ ತೆಗೆದುಕೊಂಡ ದುಷ್ಚಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವೇ? ತೊಡೆಯಲಾಗುವುದೇ ಇಲ್ಲ ಎಂದು ನಾನು ಹೇಳತ್ತಿಲ್ಲ. ಅದರ ಕಾಂಪ್ಲೆಕ್ಸಿಟಿ ಇಲ್ಲಿ ಮಂಡಿತವಾಗದೇ ಹೋದರೆ ತಪ್ಪು ಕಲ್ಪನೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದೆನ್ನಿಸುತ್ತದೆ
ಇದು ಅಗತ್ಯವಾಗಿ ಓದಲೇ ಬೇಕಾದ ಅಂಕಣ
ಉಪಯುಕ್ತ,ಉತ್ತಮ ಬರಹ.ಧನ್ಯವಾದಗಳು.
ಒಂದು ಹುಚ್ಚು ನಾಯಿ ನಿಮ್ಮನ್ನು ಕಚ್ಚಿದರೆ ನೀವು ಏನು ಮಾಡುತ್ತೀರಿ? ಜೀವನಪೂರ್ತಿ ಅಳುತ್ತಾ ಕೂರುತ್ತೀರಾ? ಇಲ್ಲಾ ಅಲ್ಲವಾ? ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುತ್ತೀರಿ. ಇದೂ ಹಾಗೆಯೇ.
—ಹೇಳಿರುವುದು ಚೆನ್ನಾಗಿದೆ .
ಆದರೆ ಗಂಡ ಅಷ್ಟು ಬೇಗ ಸರಿಹೋದ ಎನ್ನುವುದು ಕಾಗಕ್ಕಗುಬ್ಬಕ್ಕನ ಕತೆ
ಉತ್ತಮ ಬರಹಗಳು..ಮುಂದಿನ ಕಂತಿಗಾಗಿ ಕಾಯುತ್ತಿರುವೆ.
baraha edege iliyithu ….