ಡಾ ಕೆ ಎಸ್ ಚೈತ್ರಾ ಅಂಕಣ – ಹೀಗಿದ್ದರು ನಮ್ಮ ಡೀನ್ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

13


ಮಣಿಪಾಲದಲ್ಲಿ ದಂತವೈದ್ಯಕೀಯ ಓದುವಾಗ ಈಗಾಗಲೇ ತಿಳಿಸಿದಂತೆ ಕರ್ನಾಟಕದ ವಿದ್ಯಾರ್ಥಿಗಳು ಬಹಳ ಕಡಿಮೆ. ನೂರು ಜನರಿದ್ದ ನಮ್ಮ ತರಗತಿಯಲ್ಲಿ ಎಂಟು ಜನ ಕನ್ನಡಿಗರು. ಅವರಲ್ಲಿ ಮಣಿಪಾಲದ ಸುತ್ತಲಿನವರೇ ಅಂದರೆ ಕಾರ್ಕಳ, ಕುಂದಾಪುರ, ಉಡುಪಿಯವರೇ ಹೆಚ್ಚು. ಈ ವಿದ್ಯಾರ್ಥಿಗಳು ಹಾಸ್ಟೆಲ್ಲಿನಲ್ಲಿ ಇರದೇ ದಿನವೂ ಬಸ್ಸುಗಳಲ್ಲಿ ಓಡಾಡುತ್ತಿದ್ದರು. ಹೀಗಾಗಿ ಹಾಸ್ಟೆಲ್ಲಿನಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಅವರ ವೈಯಕ್ತಿಕ ಮಾಹಿತಿ ಆರಂಭದಲ್ಲಿ ಗೊತ್ತಿರಲಿಲ್ಲ. ಆದರೆ ಕನ್ನಡಿಗರು ಎಂಬ ಅಭಿಮಾನ, ನಮ್ಮ ಮಾತೃ ಭಾಷೆಯಲ್ಲಿಯೇ ಮಾತನಾಡುವ ಖುಷಿಗಾಗಿ ಕನ್ನಡವರೆಲ್ಲಾ ಒಟ್ಟಾಗಿ ತರಗತಿಯಲ್ಲಿ ಒಂದೆಡೆ ಕುಳಿತುಕೊಳ್ಳುತ್ತಿದ್ದೆವು.

ಕನ್ನಡದ ಹುಡುಗರಲ್ಲಿ ಒಬ್ಬ ಸುಹಾಸ್.. ತುಂಬಾ ಎತ್ತರವಾಗಿದ್ದು ತನ್ನಷ್ಟಕ್ಕೆ ತಾನು ಇರುತ್ತಿದ್ದ ಸಂಕೋಚದ ಹುಡುಗನಾದರೂ ಒಮ್ಮೆ ಪರಿಚಯವಾದರೆ ಚೆನ್ನಾಗಿ ಮಾತನಾಡುತ್ತಿದ್ದ. ಮಣಿಪಾಲದಲ್ಲೇ ಅವನ ಮನೆ ಎಂದಷ್ಟೇ ನಮಗೆ ಗೊತ್ತಿತ್ತು. ಆರಂಭದಲ್ಲಿ ಸೀನಿಯರ್ಸ್ ನಮ್ಮನ್ನೆಲ್ಲಾ ಒಟ್ಟಿಗೇ ಸೇರಿಸಿ ಒಂದಷ್ಟು ತಲೆಹರಟೆ ಪ್ರಶ್ನೆ ಕೇಳಿ, ಕೆಟ್ಟದಾಗಿ ಹಾಡು ಹಾಡಿಸಿ,ಹೆದರಿಸಿದಾಗ ಸಮಾನದುಃಖಿಗಳಾಗಿ ನಮ್ಮೆಲ್ಲರಲ್ಲಿ ಸ್ನೇಹ ಬೆಳೆದಿತ್ತು.

ನಮ್ಮ ನಡುವೆ ತರಗತಿಯ ಮಧ್ಯದ ಬಿಡುವಿನಲ್ಲಿ ಗಾಸಿಪ್, ಕೀಟಲೆ, ಗಲಾಟೆ, ಜಗಳ ಎಲ್ಲವೂ ನಡೆಯುತ್ತಿತ್ತು. ಲೆಕ್ಚರರ್, ಪ್ರೊಫೆಸರ್ ಮೇಲೆ ಕನ್ನಡದಲ್ಲಿ ಬೇರೆಯವರಿಗೆ ಗೊತ್ತಾಗದಂತೆ ಟೀಕೆ ಮಾಡಿದಾಗ, ಜೋಕ್ ಹೇಳಿದಾಗ ಸುಹಾಸ್ ತಾನೂ ನಗುತ್ತಿದ್ದ; ಚರ್ಚೆಯಲ್ಲಿ ಭಾಗವಹಿಸುತ್ತಿದ್ದ.ಒಟ್ಟಿನಲ್ಲಿ ಕನ್ನಡ ಗ್ರೂಪ್ ನಮ್ಮದಾಗಿತ್ತು!

ಅದೊಂದು ದಿನ ಯಾವುದೋ ಕ್ಲಾಸ್ ನಡೆಯಬೇಕಿತ್ತು. ಪ್ರೊಫೆಸರ್ ಬಂದಿರಲಿಲ್ಲ; ಎಲ್ಲರೂ ಆರಾಮಾಗಿ ಮಾತನಾಡುತ್ತಾ, ಕೆಲವರು ಹಾಡುತ್ತಾ ಟೈಂ ಪಾಸ್ ಮಾಡುತ್ತಾ ಇದ್ದೆವು.ಇದ್ದಕ್ಕಿದ್ದಂತೆ ನಮ್ಮ ಡೀನ್ ಬಂದಿದ್ದರು ಅಲ್ಲ, ಗಾಳಿಯಂತೆ ನುಗ್ಗಿದ್ದರು. ಕೆಂಪು ಬಿಳಿ ಬಣ್ಣ, ಎತ್ತರದ ನಿಲುವು, ಚೂಪು ಮೂಗು, ತೀಕ್ಷ್ಣ ಕಣ್ಣಿನ ಮನುಷ್ಯ. ಮುಖವನ್ನೆಲ್ಲಾ ಕೆಂಪಾಗಿಸಿಕೊಂಡು ‘ಜೀವನದಲ್ಲಿ ಸಮಯ-ಶಿಸ್ತು ಎರಡೂ ಮುಖ್ಯ. ನಿಮಗೆ ಎರಡರ ಬೆಲೆಯೂ ಗೊತ್ತಿಲ್ಲ. ಕ್ಲಾಸಿನ ಸಮಯದಲ್ಲಿ ಹೀಗೆ ಗಲಾಟೆ ಮಾಡುತ್ತೀರಲ್ಲಾ? ನಿಮ್ಮಂಥವರಿಗೆ ಹೆದರಿಸುವ ಬುದ್ಧಿ ಹೇಳುವ ಕೆಲಸ ನಾವು ಮಾಡಬೇಕೇ? ಅಷ್ಟು ತಿಳಿವಳಿಕೆ ಬೇಡವೇ..’ ಎಂದು ಬೈದರು.

ನಂತರ ಅದ್ಭುತವಾಗಿ ಸಿಲ್ವರ್ ಅಮಾಲ್ಗಮ್ (ಹಲ್ಲು ತುಂಬಲು ಉಪಯೋಗಿಸುವ ಬೆಳ್ಳಿ) ಬಗ್ಗೆ ಪಾಠ ಮಾಡಿದ್ದರು. ತರಗತಿ ಮುಗಿದ ಮೇಲೆ ಎಂದಿನಂತೆ ಗುಸುಗುಸು ಮಾತನಾಡುವಾಗ ‘ಎಷ್ಟು ಸಿಟ್ಟು ಬಂದಿತ್ತು ಈ ಡೀನ್ ಗೆ! ಸಿಟ್ಟಿನಿಂದ ಟೊಮ್ಯಾಟೋ ಹಣ್ಣಿನ ಹಾಗೆ ಕೆಂಪಾಗಿದ್ದರು. ಶಿಸ್ತು-ಸಮಯ ಅಂತ ಲೆಕ್ಚರ್ ಹೊಡೆದಿದ್ದೇ ಹೊಡೆದಿದ್ದು.. ಮನೆಯಲ್ಲಿ ಹೇಗಿರ್ತಾರೋ ?’ ಎಂದು ನಾವೆಲ್ಲಾ ಮಾತನಾಡಿಕೊಂಡು ನಗುವಾಗ ಸುಹಾಸ್ ಕೂಡಾ ಜೋರಾಗಿ ನಕ್ಕು ಮನೆಯಲ್ಲಿಯೂ ಹೀಗೆಯೇ ಎಂದಿದ್ದ. ‘ನಿನಗೇನು ಗೊತ್ತುಂಟಾ ಹಾಗೆ ಹೇಳಲಿಕ್ಕೆ?’ ನಮ್ಮೆಲ್ಲರ ಪ್ರಶ್ನೆ.

‘ಅಯ್ಯೋ ಮಾರಾಯ ನಾನು ಅವರ ಮನೆಯಲ್ಲಿಯೇ ಇರುವುದಲ್ವಾ, ನನಗೆ ಎಲ್ಲಾ ಗೊತ್ತುಂಟು ‘ ಎನ್ನಬೇಕೇ ! ಗಲಿಬಿಲಿಯಾಗಿ ವಿಚಾರಿಸಿದಾಗ ತಿಳಿದದ್ದು.. ಈ ಸುಹಾಸ್ ನಮ್ಮ ಡೀನ್ ಡಾ. ಭಟ್ ಅವರ ಮಗ. ಆಶ್ಚರ್ಯ, ಗಾಬರಿ ಎರಡೂ ನಮಗಾಗಿದ್ದು ಸಹಜವೇ! ಈ ಹುಡುಗ ನಮ್ಮೊಂದಿಗಿದ್ದು ನಮ್ಮ ಮಾತುಗಳನ್ನೆಲ್ಲಾ ನೇರವಾಗಿ ಅಪ್ಪ ಅಂದರೆ ಡೀನ್ ಗೆ ಹೇಳಿದರೆ ನಮ್ಮ ಗತಿ ಏನಾಗಬೇಕು? ಆದರೆ ಕಾಲೇಜು ಸೇರುವ ಮೊದಲೇ ಅಪ್ಪನಿಂದ ಮಗನಿಗೆ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಸಿಕ್ಕಿತ್ತಂತೆ ‘ಯಾವುದೇ ರೀತಿಯ ರಿಯಾಯಿತಿ ನಿನಗಿಲ್ಲ. ಎಲ್ಲರಂತೆ ನೀನೂ ಸ್ಟುಡೆಂಟ್ ಅಷ್ಟೇ. ಅನಗತ್ಯವಾಗಿ ಎಲ್ಲೂ ನನ್ನ ಹೆಸರು ಬಳಸಬಾರದು.

ನಿನ್ನ ಸ್ಟುಡೆಂಟ್ ಲೈಫ್ ಬೇರೆಯವರ ಹಾಗೆಯೇ ಇರಬೇಕು. ಮನೆಗೆ ಬಂದಾಗ ಮನೆಯ ವಿಷಯ ಮಾತ್ರ. ಅಲ್ಲಿಯದ್ದು ಇಲ್ಲಿ ಇಲ್ಲಿಯದ್ದು ಅಲ್ಲಿ ತರುವಂತಿಲ್ಲ. ಮನೆಯಲ್ಲಿ ಅಪ್ಪ, ಕಾಲೇಜಲ್ಲಿ ಎಲ್ಲರ ಹಾಗೆ ನಿನಗೂ ಡೀನ್ ’. ಡೀನ್ ಗೆ ಸರಿಯಾದ ಬಾಳಸಂಗಾತಿ ಸುಭದ್ರ ಮೇಡಂ. ತಂದೆ- ತಾಯಿಯರಿಗೆ ತಕ್ಕದಾಗಿ ಮಕ್ಕಳಿಬ್ಬರೂ ಹಾಗೆಯೇ ಬೆಳೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲೆಲ್ಲೂ ಅಪ್ಪನ ಪ್ರಭಾವ ಬಳಸಲಿಲ್ಲ. ಅಕ್ಕ ವೈದ್ಯೆಯಾಗಿ ಅಮೆರಿಕೆಯಲ್ಲಿ ನೆಲೆಸಿದ್ದರೆ, ತಮ್ಮ ಸುಹಾಸ್ ನಮ್ಮಂತೆಯೇ ಕಷ್ಟಪಟ್ಟು ಓದಿ, ಕೆಲವೊಮ್ಮೆ ಬೈಸಿಕೊಂಡು, ಹಲವು ಬಾರಿ ಬೈದುಕೊಂಡು ನಮಗೆ ಅವನು ಡೀನ್ ಮಗ ಎಂಬುದೇ ಮರೆತುಹೋಗುವಷ್ಟು ನಮ್ಮಲ್ಲಿ ಒಬ್ಬನಾಗಿದ್ದ.

ಈಗ ಯಶಸ್ವಿ ದಂತವೈದ್ಯನಾಗಿರುವ ಡಾ.ಸುಹಾಸ್ ಕಂಡಾಗಲೆಲ್ಲಾ ನಮ್ಮ ಡೀನ್ ರ ನೆನಪಾಗುತ್ತದೆ; ಅವರ ಉನ್ನತ ವ್ಯಕ್ತಿತ್ವ-ಆದರ್ಶ ಕಣ್ಮುಂದೆ ಮೂಡುತ್ತದೆ.ಐದು ವರ್ಷಗಳ ಹಿಂದೆ ಮಣಿಪಾಲದಲ್ಲಿ ನಮ್ಮ ಬ್ಯಾಚಿನ ರಿಯೂನಿಯನ್ ನಡೆದಿತ್ತು. ಸಮಾರಂಭದಲ್ಲಿ ವೇದಿಕೆಯ ಮೇಲೆ ತಂದೆಯಿಂದ ಮಗ ನೆನಪಿನ ಕಾಣಿಕೆ ಸ್ವೀಕರಿಸಿದಾಗ ನಮಗೂ ಹೆಮ್ಮೆ-ಸಂತೋಷವಾಗಿತ್ತು! ಎಂಬತ್ತರ ಪ್ರಾಯದಲ್ಲೂ ಕೆನೆ ಬಣ್ಣದ ಶರ್ಟ್ ಪ್ಯಾಂಟ್ ಧರಿಸಿ ಶಿಸ್ತಾಗಿ ಸಮಯಕ್ಕೆ ಸರಿಯಾಗಿ ಬಂದು ನಮ್ಮೆಲ್ಲರನ್ನೂ ಗುರುತಿಟ್ಟು ಮಾತನಾಡಿಸಿದ ಡೀನ್ ಸರ್ ಮಾತ್ರ ಹಾಗೇ ಇದ್ದರು!

ನಮ್ಮ ಡೀನ್ ಡಾ. ಕೆ.ಎಸ್.ಭಟ್, ( ಕಡೆಂಗೋಡ್ಲು ಸೀತಾರಾಮ್ ಭಟ್) ಆಧುನಿಕ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಕಡೆಂಗೋಡ್ಲು ಶಂಕರಭಟ್ಟರ ಸುಪುತ್ರ. ಅತ್ಯುತ್ತಮ ದಂತವೈದ್ಯ, ನುರಿತ ಶಿಕ್ಷಣತಜ್ಞ ಎನ್ನುವುದರ ಜತೆ ಸಮರ್ಥ ಆಡಳಿತಗಾರರಾಗಿದ್ದರು. ಹಾಗಾಗಿಯೇ ಇಪ್ಪತ್ತೆರಡು ವರ್ಷಗಳಷ್ಟು ದೀರ್ಘ ಕಾಲ ಡೀನ್ ಆಗಿ ಮಣಿಪಾಲದ ದಂತವೈದ್ಯಕೀಯ ಕಾಲೇಜಿನ ಅಭಿವೃದ್ಧಿಯ ಚುಕ್ಕಾಣಿ ಅವರಿಗೆ ವಹಿಸಲಾಗಿತ್ತು.

ಶಿಸ್ತು, ಸಮಯಪಾಲನೆ, ಶ್ರದ್ಧೆ ಅವರ ವ್ಯಕ್ತಿತ್ವದ ಬಹುಮುಖ್ಯ ಗುಣಗಳು. ಇವೆಲ್ಲದರೊಂದಿಗೆ ತಪ್ಪು-ಅನ್ಯಾಯ ಎಲ್ಲಿ ಕಂಡರೂ ಅದರ ವಿರುದ್ಧ ತಮ್ಮ ಪ್ರತಿಭಟನೆಯನ್ನು ಅವರು ಮಾಡುತ್ತಿದ್ದರು. (ದೊಡ್ಡದೋ ಸಣ್ಣದೋ ನಮ್ಮ ಕೈಲಾದಷ್ಟು ಪ್ರತಿಭಟನೆ ಮಾಡಿಬಿಡಬೇಕು. ಒಂದೊಮ್ಮೆ ಏನೂ ಪ್ರಯೋಜನ ಆಗಲಿಲ್ಲ ಅಂತಲೇ ತಿಳಿಯುವಾ..ಮನಸ್ಸಿಗಾದರೂ ಸಮಾಧಾನ ಉಂಟಲ್ಲ ..ಅವರು ಹೇಳುತ್ತಿದ್ದ ಮಾತು). ಅದಕ್ಕೊಂದು ಚಿಕ್ಕ ಉದಾಹರಣೆ ಬಸ್ ಟಿಕೆಟ್ ವಿಷಯದಲ್ಲಿ ಆದ ಗಲಾಟೆ.

ಡೀನ್ ಇದ್ದದ್ದು ಮಣಿಪಾಲದಲ್ಲಿ, ಮಂಗಳೂರಿನಲ್ಲಿದ್ದ ತಾಯಿಯನ್ನು ನೋಡಲು ಆಗಾಗ್ಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ನಡೆದ ಘಟನೆ ಇದು. ಮಂಗಳೂರಿನಿಂದ ಮಣಿಪಾಲಕ್ಕೆ ಅನೇಕ ಖಾಸಗಿ ಬಸ್ ಗಳು ದಿನವೂ ಸಂಚರಿಸುತ್ತವೆ.ಅದರಲ್ಲಿ ಹೆಚ್ಚಿನ ಪ್ರಯಾಣಿಕರು ಉಡುಪಿಯಲ್ಲಿ ಇಳಿಯುವವರು.ಖಾಸಗಿಯವರು ಸೀಟ್ ತುಂಬಲಿ ಎಂದು ಮಣಿಪಾಲಕ್ಕೆ ಹೋಗುವವರಿಗೂ ಟಿಕೆಟ್ ಕೊಟ್ಟಿರುತ್ತಾರೆ. ಆದರೆ ಬಸ್ ನಿಂದ ಹೆಚ್ಚಿನವರು ಉಡುಪಿಯಲ್ಲಿ ಇಳಿದರೆ ಉಳಿದ ಮೂರು-ನಾಲ್ಕು ಪ್ರಯಾಣಿಕರಿಗೆ ಅಲ್ಲಿ ತನಕ ಬಸ್ ಓಡಿಸುವುದು ವ್ಯರ್ಥ ಎಂದು ಉಡುಪಿಯಲ್ಲೇ ಇಳಿಯಲು ಹೇಳುತ್ತಾರೆ. ಉಡುಪಿಯಿಂದ ಮಣಿಪಾಲಕ್ಕೆ ಹೆಚ್ಚು ದೂರವಿಲ್ಲ, ಟಿಕೆಟ್ ದರವೂ ಕಡಿಮೆ, ಬಸ್ಸುಗಳೂ ಸಾಕಷ್ಟಿವೆ. ಹೀಗಾಗಿ ಜನರೂ ಮಣಿಪಾಲಕ್ಕೆ ಟಿಕೆಟ್ ತೆಗೆದುಕೊಂಡಿದ್ದರೂ ಉಡುಪಿಯಲ್ಲೇ ಸುಮ್ಮನೇ ಇಳಿದು, ಮತ್ತೊಂದು ಬಸ್ ಹತ್ತಿ ಮಣಿಪಾಲಕ್ಕೆ ಹೋಗುತ್ತಾರೆ. ಇದು ಸಾಮಾನ್ಯವಾಗಿ ನಡೆದುಬಂದ ರೂಢಿ. ನಮ್ಮ ಡೀನ್ ಎಂದಿನಂತೆ ಮಂಗಳೂರಿನಿಂದ ಮಣಿಪಾಲಕ್ಕೆ ಟಿಕೆಟ್ ತೆಗೆದುಕೊಂಡಿದ್ದರು.

ಆ ದಿನ ಒಂದಿಬ್ಬರು ಪ್ರಯಾಣಿಕರನ್ನು ಬಿಟ್ಟರೆ ಉಳಿದವರೆಲ್ಲಾ ಉಡುಪಿಯಲ್ಲಿ ಇಳಿದರು.ಎಂದಿನಂತೆ ನಮ್ಮ ಡೀನ್ ಗೂ ಅಲ್ಲೇ ಇಳಿಯಲು ಹೇಳಿದರು. ಇವರು ಇಳಿಯಲು ಒಪ್ಪಲಿಲ್ಲ. ತಾನು ಮಣಿಪಾಲಕ್ಕೆ ಹೋಗುವ ಬಸ್ಸು ಎಂದು ಕೇಳಿಯೇ ಬಸ್ ಹತ್ತಿದ್ದೇನೆ, ಟಿಕೆಟಿನ ದುಡ್ಡನ್ನೂ ಪೂರ್ತಿ ಕೊಟ್ಟಿದ್ದೇನೆ. ಈಗ ಬೇರೆ ಬಸ್ಸಿಗೆ ಹೋಗಿ ಎನ್ನುವುದು ಸರಿಯಲ್ಲ.ನನಗೆ ಸಮಯ, ದುಡ್ಡು ಎರಡೂ ವ್ಯರ್ಥ ಎಂದು ಬಸ್ಸಿನಿಂದ ಇಳಿಯಲೇ ಇಲ್ಲ. ಕಡೆಗೂ ಬಸ್ಸಿನವರು ಇವರ ನ್ಯಾಯಯುತ ಬೇಡಿಕೆಗೆ ಮಣಿಯಲೇಬೇಕಾಯಿತು. ತಮ್ಮದಂತೂ ಸರಿಯೇ, ಇತರರಿಗೂ ಈ ರೀತಿ ಅನ್ಯಾಯವಾಗಬಾರದು ಎಂದು ಡೀನ್ ಗ್ರಾಹಕರ ಕೋರ್ಟಿಗೆ ದೂರು ಸಲ್ಲಿಸಿದ್ದರು.ಈ ಪ್ರಕರಣ ಪತ್ರಿಕೆಗಳಲ್ಲಿ ಪ್ರಕಟವಾದಾಗ ಕೆಲವರು ಹುಬ್ಬೇರಿಸಿದ್ದರು; ಆದರೆ ಅವರನ್ನು ಬಲ್ಲ ನಮಗೆ ಆಶ್ಚರ್ಯವೆನಿಸಿರಲಿಲ್ಲ; ಏಕೆಂದರೆ ಅವರಿದ್ದದ್ದೇ ಹಾಗೆ!

ಇವೆಲ್ಲದರ ಜತೆ ಅವರಿಗಿದ್ದ ಪ್ರಾಣಿಪ್ರೀತಿಯೂ ವಿಶೇಷವಾದದ್ದು. ಮನೆಯಲ್ಲಿ ಸಾಕಿದ್ದ ನಾಯಿ ಎಂದರೆ ಎಲ್ಲಿಲ್ಲದ ಪ್ರೀತಿ. ಒಮ್ಮೆ ನಮ್ಮ ಕ್ಲಿನಿಕಲ್ ಸೆಕ್ಷನ್ ನಲ್ಲಿ ಪುಟ್ಟ ಅಳಿಲಿನ ಮರಿಯೊಂದು ಹೇಗೋ ಒಳ ಸೇರಿತ್ತು. ಅಲ್ಲಿದ್ದ ಜನ, ಉಪಕರಣಗಳು, ಸದ್ದು ಇವುಗಳಿಂದ ಕಂಗಾಲಾಗಿ ಅತ್ತಿತ್ತ ಓಡಾಡುತ್ತಿತ್ತು. ಹೊರಹೋಗುವ ದಾರಿ ಸಿಗದೇ ಕಡೆಗೆ ಮೂಲೆಯಲ್ಲಿದ್ದ ನೀರಿನ ಪೈಪ್ ಒಳಗೆ ತೂರಿ ಅಡಗಿ ಕುಳಿತುಬಿಟ್ಟಿತ್ತು.

ನೀರು ಬರದೇ ಕೆಲಸ ಮಾಡುವಂತಿಲ್ಲ, ನೀರು ಪೈಪ್ ಮೂಲಕ ಬಂದರೆ ಈ ಮರಿಯ ಗತಿ ಅಷ್ಟೇ! ಕಾಯುವ ರೋಗಿಗಳು, ಮುದುರಿ ಕುಳಿತ ಮರಿ ಇವೆಲ್ಲದರ ನಡುವೆ ಯಾರಿಗೂ ಏನು ಮಾಡುವುದು ಎಂದು ತೋಚದ ಸ್ಥಿತಿ. ಕಾರ್ಪೆಂಟರ್, ಪ್ಲಂಬರ್ ಹೀಗೆ ಕಂಡಕಂಡವರಿಗೆ ಬುಲಾವ್ ಕಳಿಸಿದರೂ ಅವರು ಬರುವ ತನಕ ಕಾಯಲೇಬೇಕಲ್ಲವೇ? ಬಂದರೂ ಅವರಿಗೂ ಈ ರೀತಿ ಪರಿಸ್ಥಿತಿ ಹೊಸದೇ! ವಿಷಯ ತಿಳಿದ ಡೀನ್ ಕೂಡಲೇ ಅಲ್ಲಿಗೆ ಬಂದು ಗುಂಪು ಸೇರಬೇಡಿ, ಗಲಾಟೆ ಮಾಡಬೇಡಿ ಎಂದು ಎಲ್ಲರನ್ನೂ ದೂರ ಕಳಿಸಿದರು. ಕಿಟಕಿ- ಬಾಗಿಲು ತೆರೆಯಲು ಹೇಳಿದರು.

ಸ್ವತಃ ತಾನೇ ನೆಲದಲ್ಲಿ ಮಂಡಿಯೂರಿ ಕುಳಿತರು. ಪೈಪ್ ಕಡೆಗೆ ಬಗ್ಗಿ ಸಣ್ಣ ಮಗುವನ್ನು ಕರೆಯುವ ರೀತಿಯಲ್ಲಿ ಈ ಮರಿಯನ್ನು ಬಾ ಬಾ ಎಂದು ಪ್ರೀತಿಯಿಂದ ಕರೆದರು. ಒಳಗಿನಿಂದ ಮರಿ ಪಿಳಿ ಪಿಳಿ ನೋಡುತ್ತಿತ್ತು ಅಷ್ಟೇ. ಇವರೂ ಪ್ರಯತ್ನ ಬಿಡಲಿಲ್ಲ. ತಾಳ್ಮೆಯಿಂದಲೇ ಮುದ್ದು ಮಾಡುತ್ತಾ ಮರಿಯನ್ನು ಹೊರಗೆ ಬರುವಂತೆ ಅನುನಯಿಸಿದರು. ಆಗ ಕ್ಷೀಣವಾಗಿ ಸದ್ದು ಮಾಡತೊಡಗಿತು ಮರಿ. ಸಾಕಷ್ಟು ಕಾಲ ಇವರು ಕರೆದ ನಂತರ ನಿಧಾನವಾಗಿ ಹೆದರುತ್ತಲೇ ಹೊರಗೆ ಬಂದ ಮರಿ ಅತ್ತಿತ್ತ ನೋಡಿ, ಸ್ವಲ್ಪ ಓಡಾಡಿ ನಂತರ ಕಿಟಕಿಯ ಮೂಲಕ ಹೊರಗೆ ಓಡಿತು. ಸುಮಾರು ಅರ್ಧ ಗಂಟೆ ಕಾಲ ಮಂಡಿಯೂರಿ, ಬೆನ್ನು ಬಗ್ಗಿಸಿ ಅತ್ಯಂತ ತಾಳ್ಮೆಯಿಂದ ಆ ಮರಿಯನ್ನು ರಕ್ಷಿಸಿದ್ದು ಅವರ ಪ್ರಾಣಿಪ್ರೀತಿಗೊಂದು ಚಿಕ್ಕ ಸಾಕ್ಷಿ. ಅಪ್ಪನ ಗುಣವೇ ಮಗ ಡಾ.ಸುಹಾಸ್ ಗೂ ಬಂದಿರುವುದು ಆಶ್ಚರ್ಯವೇನಲ್ಲ!

ಸಾಮಾನ್ಯವಾಗಿ ಡೀನ್ ಎಂದರೆ ವಿದ್ಯಾರ್ಥಿಗಳಿಗೆ ಹೆದರಿಕೆ ಇರುವುದು ಸಹಜ. ನಮಗೂ ಇದ್ದರೂ ಪ್ರೀತಿ ಮಿಶ್ರಿತ ಗೌರವವೇ ಹೆಚ್ಚು. ಅವರ ಛೇಂಬರ್ ಗೆ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವಿತ್ತು. ಶೈಕ್ಷಣಿಕ, ವೈಯಕ್ತಿಕ ಯಾವುದೇ ಸಮಸ್ಯೆಗೂ ಕಿವಿಯಾಗುತ್ತಿದ್ದರು. ಕಳೆದ ವರ್ಷ ಆಗಸ್ಟ್ ಇಪ್ಪತ್ತೈದರಂದು ಡೀನ್ ನಮ್ಮನ್ನು ಅಗಲಿದಾಗ ಜಗತ್ತಿನೆಲ್ಲೆಡೆ ಇರುವ ಅವರ ವಿದ್ಯಾರ್ಥಿಗಳು ಕಣ್ಣೀರುಗರೆದರು.ಏಕೆಂದರೆ ನಮ್ಮ ವಿದ್ಯಾರ್ಥಿ ಜೀವನ ಬಹು ಮುಖ್ಯ ಭಾಗವಾಗಿದ್ದ ಡೀನ್ ಡಾ.ಕೆ.ಎಸ್.ಭಟ್ ನಮಗೆ ಕಲಿಸಿದ್ದು ಬರೀ ದಂತವೈದ್ಯಕೀಯವನ್ನಲ್ಲ; ಬದುಕುವ ರೀತಿಯನ್ನು!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: