ಡಾ ಕೆ ಎಸ್ ಚೈತ್ರಾ ಅಂಕಣ – ಧನು ಮತ್ತು ನಾನು!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

18

ಡೆಂಟಲ್ ಅಂದ್ರೆ ಎಮರ್ಜೆನ್ಸಿ ಇರಲ್ಲ, ಹಾಗಾಗಿ ಬೆಸ್ಟ್ ಎನ್ನುವ ಉದ್ದೇಶದಿಂದ  ಹೆಣ್ಣು ಮಕ್ಕಳಿಗೆ ಡೆಂಟಲ್ ಮಾಡುವಂತೆ ತಂದೆ-ತಾಯಿಯರು ಪ್ರೋತ್ಸಾಹಿಸುತ್ತಿದ್ದ ಕಾಲ ಬದಲಾಗಿದೆ. ಈಗ ಏನಿದ್ದರೂ ಅವರವರ ಆಯ್ಕೆ ಮತ್ತು ಸಿಗುವ ಅವಕಾಶಕ್ಕೆ ಅನುಗುಣವಾಗಿ  ವೃತ್ತಿಯ ನಿರ್ಧಾರ. ಆದರೂ ದಂತವೈದ್ಯಕೀಯದಲ್ಲಿ ಎಮರ್ಜೆನ್ಸಿ ಇಲ್ಲ ಎಂದಲ್ಲ. ಹಲ್ಲು ನೋವು, ಸೋಂಕು ತೀವ್ರ ಸ್ವರೂಪ ತಾಳಿದರೆ  ಗಂಭೀರ ಪರಿಸ್ಥಿತಿಯೇ ಎದುರಾಗಬಹುದು. ಪ್ರತಿ ಬಾರಿ ಬಂದ ವ್ಯಕ್ತಿಯನ್ನು ಪರಿಶೀಲಿಸಬೇಕಾದರೆ  ಕೆಲಸ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಶ್ರದ್ಧೆಯಿಂದ, ಜಾಗರೂಕತೆಯಿಂದ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಹಾಗಿದ್ದೂ ಪ್ರತಿ ವ್ಯಕ್ತಿಯ ದೇಹ ಮತ್ತು ಮನಸ್ಸು ಭಿನ್ನವಾಗಿರುವುದರಿಂದ ಚಿಕಿತ್ಸೆ, ಔಷಧಿ ಬೀರುವ ಪರಿಣಾಮದಲ್ಲಿ ವ್ಯತ್ಯಾಸಗಳಿರುತ್ತವೆ ಎಂಬುದನ್ನು ಅಲ್ಲಗಳೆಯಲಾಗದು. ಅದರಲ್ಲಿಯೂ ಸೂಕ್ಷ್ಮ ದೇಹ ಮತ್ತು ಮನಸ್ಸಿನ ಮಕ್ಕಳು ಮತ್ತು ಹಿರಿಯ ನಾಗರಿಕರ ವಿಷಯದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯ. 

ಧನುವಿನ ಆಗಮನ !

ಕಾಲೇಜಿನಲ್ಲಿ ಓದು ಮುಗಿದಿತ್ತು. ಅಲ್ಲಿ ರೋಗಿಗಳನ್ನು ಪರಿಶೀಲಿಸಿ ಸಾಕಷ್ಟು ಅನುಭವ ಗಳಿಸಿದ್ದರೂ ನಮ್ಮ ಜತೆಗೆ ಸದಾ ಅನುಭವಿ ವೈದ್ಯರು ಇರುತ್ತಿದ್ದರು. ಅಕಸ್ಮಾತ್ ಹೆಚ್ಚು-ಕಡಿಮೆ ಆದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ವೈದ್ಯಕೀಯ ಆಸ್ಪತ್ರೆ ಪಕ್ಕದಲ್ಲಿತ್ತು. ಹೀಗಾಗಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಮಾಡಿದರೂ ಒಂದೊಮ್ಮೆ ಪರಿಸ್ಥಿತಿ ಗಂಭೀರವಾದರೆ ಅದನ್ನು ನಿಭಾಯಿಸುತ್ತೇವೆ ಎಂಬ ಧೈರ್ಯ ನಮ್ಮಲ್ಲಿತ್ತು. ಆದರೆ ನಿಜವಾದ ಪರೀಕ್ಷೆ ಕಾಲೇಜು ಮುಗಿಸಿ ನಮ್ಮದೇ ಆದ ಸ್ವಂತ ಕ್ಲಿನಿಕ್ ತೆರೆದು ರೋಗಿಗಳನ್ನು ನೋಡಲು ಆರಂಭಿಸಿದಾಗಶುರು. ಓದು ಮುಗಿಸಿ  ದಂತವೈದ್ಯೆಯಾಗಿ  ಕೆಲ ವರ್ಷಗಳ ಕಾಲೇಜಿನ ಅನುಭವದ ನಂತರ  ನನ್ನದೇ ಸ್ವಂತ ಕ್ಲಿನಿಕ್  ಆರಂಭಿಸಿದ್ದೆ. ಜಾಗ- ಜನ ಎಲ್ಲವೂ ಹೊಸತು; ಎಲ್ಲವನ್ನೂ ಒಬ್ಬಳೇ  ನಿಭಾಯಿಸಬೇಕಾದ್ದರಿಂದ  ಸ್ವಲ್ಪ ಅಳುಕಿತ್ತು. ಬಡಾವಣೆಯ ಪರಿಚಿತರ ಜತೆ ಸುತ್ತಲಿನ ಹಳ್ಳಿಯವರೂ ಸಾಕಷ್ಟು ಜನ ಬರುತ್ತಿದ್ದರು.  ಹೀಗಿರುವಾಗ ಒಂದು ಬೆಳಿಗ್ಗೆ ವೃದ್ಧ ದಂಪತಿಗಳು ಪುಟ್ಟ ಹುಡುಗಿಯೊಂದಿಗೆ ಬಂದಿದ್ದರು.ಬೆಂಗಳೂರಿನ ಹತ್ತಿರ ದೇವನಹಳ್ಳಿಯ ಹತ್ತಿರದ ತೋಟದ ಮನೆ  ಅವರದ್ದು. ಅವರ ಮೊಮ್ಮಗಳು ಆ ಹುಡುಗಿ ; ಧನಲಕ್ಷ್ಮಿ, ಅಜ್ಜ-ಅಜ್ಜಿಯರ ಮುದ್ದಿನ ಧನು. ಮುಂಬೈನಲ್ಲಿ ಅಪ್ಪ ಅಮ್ಮರೊಂದಿಗೆ ಆಕೆಯ ವಾಸ.  ಅದು ಬೇಸಿಗೆ ರಜೆಯ ಸಮಯ. ಪರೀಕ್ಷೆ ಮುಗಿಸಿ  ಅಜ್ಜ-ಅಜ್ಜಿಯರ ಜತೆ ಸಮಯ ಕಳೆಯಲೆಂದು ಏಳು ವರ್ಷದ ಧನು ಹಳ್ಳಿಗೆ ಬಂದಿದ್ದಳು. ಹಿಂದಿನ ರಾತ್ರಿಯಿಂದ ಆಕೆಗೆ ಜೋರಾಗಿ ಹಲ್ಲುನೋವು ಶುರುವಾಗಿತ್ತು.ಅವರಿದ್ದ ಹಳ್ಳಿಯಲ್ಲಿ ಯಾವುದೇ ಪರಿಚಿತ ದಂತವೈದ್ಯರಿರಲಿಲ್ಲ. ನನ್ನಿಂದ ಚಿಕಿತ್ಸೆ ಪಡೆದಿದ್ದ  ಅವರ ಸಂಬಂಧಿಕರ ಮಾತು ಕೇಳಿ ನನ್ನ ಬಳಿ ಕರೆತಂದಿದ್ದರು. 

ಅಜ್ಜ – ಅಜ್ಜಿಯ ಕಾಳಜಿ                 

ಧನು ಹಲ್ಲು ನೋವಿನಿಂದ ಅಳುತ್ತಿದ್ದಳು. ಅಜ್ಜ-ಅಜ್ಜಿಗೆ  ಆಕೆಯ ನೋವು-ಅಳು ಕಂಡು ಸಂಕಟ. ಇಲ್ಲಿಗೆ ಕರೆತಂದು ಹೀಗಾಯ್ತು ಎಂಬ ಚಡಪಡಿಕೆ. ಒಳಗೊಳಗೇ ದೂರದ ಮುಂಬೈನಲ್ಲಿರುವ ಮಗ-ಸೊಸೆ  ಸಿಹಿ ಕೊಟ್ಟದ್ದಕ್ಕೇ ಹೀಗಾಯ್ತು ಎನ್ನುತ್ತಾರೇನೋ  ಎಂಬ ಆತಂಕ ಬೇರೆ. ಒಟ್ಟಿನಲ್ಲಿ ಎಲ್ಲರ ಮುಖವೂ ಕಳೆಗುಂದಿತ್ತು. ಧನುವಂತೂ ಸಿಕ್ಕಾಪಟ್ಟೆ ಹೆದರಿದ್ದಳು,ಬಾಯಿ ಬಿಡಲೂ ತಯಾರಿರಲಿಲ್ಲ. ಒಂದೇ ಸಮ ಪಪ್ಪ-ಮಮ್ಮ ಬೇಕು ಎಂಬ ರಾಗ! ಹೇಗೋ ಪುಸಲಾಯಿಸಿ, ಬಾಯಿ ತೆರೆಸಿ ಪರೀಕ್ಷಿಸಿದಾಗ ಕಂಡದ್ದು ಪೂರ್ತಿ ಹುಳುಕಾದ ಮುಂದಿನ ಹಲ್ಲುಗಳು. ಹಲ್ಲಿನ ಭಾಗ ಹಾಳಾಗಿ ಬರೀ ಬೇರಿನ ತುಂಡು ಉಳಿದಿತ್ತು. ವಸಡಿನಲ್ಲಿ ಕೀವು ಬೇರೆ ಕಟ್ಟಿತ್ತು. ಆ ಭಾಗ ಸ್ವಚ್ಛಗೊಳಿಸಿ ಹಲ್ಲನ್ನು ತೆಗೆಯಬೇಕಾಗುತ್ತದೆ ಎಂದು ಸೂಚಿಸಿದೆ. ಆದರೆ ಬಹಳ ಸೋಂಕಿದ್ದುದ್ದರಿಂದ ಆಂಟಿಬಯಾಟಿಕ್ ಮಾತ್ರೆಯನ್ನು ಬರೆದು ಕೊಟ್ಟು  ನಂತರವೇ ಹಲ್ಲು ತೆಗೆಯುವುದಾಗಿ ತಿಳಿಸಿದೆ. ಧನು ಒಂದೇ ಸಮ ಅಜ್ಜಿಯ ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಕಣ್ಣೀರು ಸುರಿಸುತ್ತಿದ್ದಳು.ಅಜ್ಜ ನನ್ನ ಫೀಸ್ ಕೊಟ್ಟು ಈ ಮಾತ್ರೆಯಿಂದ ಏನೂ ತೊಂದರೆಯಿಲ್ಲವೇ ಎಂದು ಅನೇಕ ಬಾರಿ ಪ್ರಶ್ನಿಸಿದರು.ಜೊತೆಗೇ ಸಣ್ಣ ಮಗುವಾಗಿದ್ದಾಗ ಆಕೆಗೆ ಜ್ವರ ನೆತ್ತಿಗೇರಿ ಫಿಟ್ಸ್ ಥರಾ ಆಗಿ, ಬಹಳ ಹೆದರಿಕೆ ಆಗಿತ್ತು ಎಂದು ಹೇಳಿದರು.ಸಣ್ಣ ಮಕ್ಕಳಲ್ಲಿ ಅದು ಸಾಮಾನ್ಯವಾದ್ದರಿಂದ  ಬೇರೆ ಏನು ತೊಂದರೆ ಇಲ್ಲ ಎಂದು ಖಚಿತಪಡಿಸಿಕೊಂಡು ಎರಡು ದಿನ ಬಿಟ್ಟು ಬರಲು ತಿಳಿಸಿದೆ. ಏನಾಗುತ್ತೋ ಎಂಬ ಆತಂಕದಿಂದಲೇ ನನಗೆ ವಂದಿಸಿ ಅವರು ಮರಳಿ ಹೊರಟರು. ಹೊರಡುವ ಮುನ್ನ ಅವರಿಬ್ಬರಲ್ಲಿ ಗುಸು ಗುಸು. ಕಡೆಗೆ  ಗಂಡ ‘ ಡಾಕ್ಟ್ರೆ, ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ. ಪದೇ ಪದೇ ಬರುವುದು ಕಷ್ಟ. ಈಗ ಬೆಂಗಳೂರಿಗೆ ಬರುವ ಪರಿಚಿತರ ಗಾಡಿಯಲ್ಲಿ ಬಂದಿದ್ದೇವೆ. ಆದ್ದರಿಂದ ಏನಾದರೂ ಸಮಸ್ಯೆ ಇದ್ದಲ್ಲಿ ಫೋನಿನಲ್ಲಿ ಸಂಪರ್ಕಿಸುತ್ತೇವೆ. ಮನೆಯಲ್ಲಿ ಇರುವುದು ನಾವಿಬ್ಬರೇ. ಇವಳು ಚಿಕ್ಕವಳು ಬೇರೆ. ನಮ್ಮ ಮಗ  ಮುಂದಿನ ವಾರ ಬಂದು ಕರೆದೊಯ್ಯುವ ತನಕ  ಧನು ನಮ್ಮ ಜವಾಬ್ದಾರಿ. ಹಾಗಾಗಿ, ಅನ್ಯಥಾ ಭಾವಿಸಬೇಡಿ’ ಎಂದು ಬಹಳ ಸಂಕೋಚದಿಂದ ನುಡಿದರು.  ಮಕ್ಕಳನ್ನು ಸಾಕಿ ನನಗೂ ಗೊತ್ತಿದ್ದುದ್ದರಿಂದ ಈ ಅಜ್ಜ-ಅಜ್ಜಿಯರ ಕಷ್ಟ ಸುಲಭವಾಗಿ ಅರ್ಥವಾಗಿತ್ತು. ಕೂಡಲೇ, ‘ ಪರವಾಗಿಲ್ಲ, ಏನೂ ತೊಂದರೆಯಾಗಲ್ಲ, ನಾಳೆ ಹೊತ್ತಿಗೆ ನೋವು ಕಡಿಮೆ ಆಗುತ್ತೆ .ಅಕಸ್ಮಾತ್ ಆಗದಿದ್ದರೆ ಯಾವ ಸಮಯದಲ್ಲಾದರೂ ಕರೆ ಮಾಡಿ’ ಎಂದೆ. ಆಗಷ್ಟೇ ಮೊಬೈಲ್ ಬಳಕೆಗೆ ಬಂದಿತ್ತಾದರೂ ಈಗಿನಂತೆ ಸರ್ವಮಯಂ ಆಗಿರಲಿಲ್ಲ, ಕರೆಗಳು ಸಾಕಷ್ಟು ದುಬಾರಿಯೂ ಆಗಿತ್ತು. ಹೀಗಾಗಿ ಮನೆಯ ಲ್ಯಾಂಡ್ ಲೈನ್ ನಂಬರ್ ಕೊಟ್ಟಿದ್ದೆ.  ಅವರು ಆ ದಿನದ ಮೊದಲ ಪೇಷೆಂಟ್ ಆಗಿದ್ದರು. ಆಮೇಲೆ ಬೇರೆಯವರು ಬಂದಂತೆ ಧನುವಿನ ನೆನಪು ಮರೆಯಾಗಿತ್ತು.ರಾತ್ರಿ ಮಲಗುವಾಗ ಅಜ್ಜ-ಅಜ್ಜಿ ಮತ್ತು ಮೊಮ್ಮಗಳ ಬಗ್ಗೆ ಅವರ ಕಾಳಜಿಯನ್ನು ನೆನೆಸಿಕೊಂಡಿದ್ದೆ.

ರಾತ್ರಿಯಲ್ಲಿ ಕರೆ !

ಅದೇ  ರಾತ್ರಿ ಬೆಳಿಗ್ಗೆಯಿಂದ ಕೆಲಸ ಮಾಡಿ ದಣಿದು ಸುಸ್ತಾಗಿ ಮಲಗಿದ್ದೆವು. ಬಹುಶಃ ರಾತ್ರಿ ಎರಡು ಗಂಟೆಯ ಸಮಯ.ಮನೆಯ ಫೋನ್ ರಿಂಗಣಿಸಿತ್ತು. ಮೊದಲು ಗಾಢ ನಿದ್ದೆಯಲ್ಲಿದ್ದುದ್ದರಿಂದ ಯಾರೂ ಎತ್ತಲಿಲ್ಲ. ಒಂದೇ ಸಮ ಶಬ್ದ ಮಾಡಿದಾಗ ಯಜಮಾನರು ಫೋನ್ ಎತ್ತಿ ‘ ಡಾಕ್ಟ್ರೇ ಎನ್ನುತ್ತಿದ್ದಾರೆ , ನಿನಗೆ’   ಎಂದು ಕರೆದರು. ಜೋರು ನಿದ್ದೆಯಲ್ಲಿದ್ದ ನಾನು ಅರೆತೆರೆದ ಕಣ್ಣುಗಳಿಂದ ಯಾರಿರಬಹುದು ಎಂದು ಯೋಚಿಸುತ್ತಾ ಹಲೋ ಎಂದರೆ ಕೇಳಿದ್ದು ವೃದ್ಧರೊಬ್ಬರ ಅಳು ಧ್ವನಿ. ‘ ಡಾಕ್ಟ್ರೆ, ನಾವು ಬೆಳಿಗ್ಗೆ ದನು ಕರ್ಕ್ಕೊಂಡು ಬಂದಿದ್ವಲ್ಲಾ .ಈಗ ತುಂಬಾ ಸೀರಿಯಸ್ ಆಗಿದೆ ದನುಗೆ; ಏನು ಮಾಡೋದು ? ’ ಅಂದರು. ನನಗೆ ನಿದ್ದೆ ಎಲ್ಲಾ ಹಾರಿಹೋಗಿ ಆ ಪುಟ್ಟ ಹುಡುಗಿ ನೆನಪಾಗಿ ಎದೆ ಢವಗುಟ್ಟಿತು.ಅಯ್ಯೋ ಏನಾಯಿತಪ್ಪಾ ಎಂದುಕೊಂಡು ‘ ಹೇಳಿ, ಏನಾಗಿದೆ ’ ಎಂದೆ. ಅವರು ಹಾಗೇ ಸಣ್ಣ ದನಿಯಲ್ಲಿ  ‘ ಮಧ್ಯಾಹ್ನದ ತನಕ  ಪರವಾಗಿರಲಿಲ್ಲ. ಸಂಜೆಯಿಂದ ನಮ್ಮ ದನು ಏನೂ ತಿಂದಿಲ್ಲ. ಒಂಥರಾ ಮಾಡ್ತಾ ಇದ್ದಾಳೆ. ನಮಗೆ ಏನೂ ತೋಚ್ತಾ ಇಲ್ಲ.’ ಆ ಕ್ಷಣದಲ್ಲಿ ನಿಜವಾಗಿ ನನಗೂ ಕಕ್ಕಾಬಿಕ್ಕಿಯಾಯಿತು.ಆದರೂ ಸಾವರಿಸಿಕೊಂಡು ‘ ಹೇಳಿದ ಔಷಧಿ ಎಲ್ಲಾ ಕೊಟ್ಟಿದ್ದೀರಾ? ಧನುಗೆ ಏನಾಗಿದೆ ಸರಿಯಾಗಿ- ಜೋರಾಗಿ  ಹೇಳಿ ’ ಎಂದೆ. ಅವರು ಜೋರಾಗಿ ‘ ಔಷಧಿ  ನೀವು ಹೇಳಿದ ಹಾಗೇ ಕೊಟ್ಟಿದ್ದೇವೆ ಡಾಕ್ಟ್ರೆ. ಕಷ್ಟ ಆಯ್ತು, ಆದರೂ ಕಾಲು ಹಿಡಿದು ಬಾಯಿ ಅಗಲಿಸಿ  ನುಂಗಿಸಿದೆವು. ಈಗ ಒಂದೇ ಕಡೆ ನೋಡುತ್ತಾ ಸುಮ್ಮನೇ ಮಲಗಿಬಿಟ್ಟಿದ್ದಾಳೆ ’ ಎಂದರು. ಕೊಟ್ಟಿದ್ದು ಸಾಮಾನ್ಯ ಮಾತ್ರೆ, ಸೋಂಕು ಇದ್ದರೂ ಹೀಗೆಲ್ಲಾ ಆಗುವಷ್ಟು ಇರಲಿಲ್ಲ. ಏನಾಗಿರಬಹುದು? ಎಂದು ಯೋಚಿಸುತ್ತಿದ್ದವಳಿಗೆ ಅವರಿರುವುದು ಹಳ್ಳಿಯಲ್ಲಿ ಎಂಬುದು ನೆನಪಾಯಿತು. ಪಾಪ ಏನಾಗಿದೆಯೋ ಏನೋ, ಯಾವುದಕ್ಕೂ ಒಮ್ಮೆ ನೋಡಿದರೆ ತಿಳಿಯುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ದೊಡ್ಡ ಆಸ್ಪತ್ರೆಗೆ ಕಳಿಸಿದರಾಯಿತು ಎನಿಸಿ ‘ ಒಮ್ಮೆ ನಾನು ಧನುವನ್ನು ನೋಡಬೇಕು. ಹೆದರಬೇಡಿ. ಕರೆದುಕೊಂಡು ಬರಲು ಸಾಧ್ಯವೇ?’ ಎಂದೆ. ‘ ಇಲ್ಲ ಡಾಕ್ಟ್ರೇ, ಟೆಂಪೋ ಸಿಗುವುದು ಬೆಳಿಗ್ಗೆಯೇ,ಅಲ್ಲಿ ತನಕ ಏನಾದರೂ ಬೇರೆ ಔಷಧಿ ಹೇಳಿ ’ ಬಂತು ಪ್ರತ್ಯುತ್ತರ. ಬೇರೇನೂ ತೋಚದೇ ‘ ಸರಿ ಈಗ ಎಲ್ಲಿದ್ದಾಳೆ ಧನು?’ ಎಂದೆ.  ‘ಕೊಟ್ಟಿಗೆಯಲ್ಲಿ ಮಲಗಿಸಿದ್ದೇವೆ, ನನ್ನ ಹೆಂಡತಿ ಕಣ್ಣಿರು ಸುರಿಸುತ್ತಾ ದನು ಜತೆಗೇ ಇದ್ದಾಳೆ ’ ಎಂದರು.ಅರೆ,ಹುಷಾರಿಲ್ಲದ ಆ ಪುಟ್ಟ ಹುಡುಗಿಯನ್ನು ಯಾರಾದರೂ ಕೊಟ್ಟಿಗೆಯಲ್ಲಿ ಮಲಗಿಸುವರೇ ಎಂದು ಆಶ್ಚರ್ಯವಾಗಿ ‘ ಸ್ವಾಮಿ! ಹುಷಾರಿಲ್ಲದ ಧನುವನ್ನು ಕೊಟ್ಟಿಗೆಯಲ್ಲಿ ಮಲಗಿಸುತ್ತಾರೆಯೇ?’ ಎಂದಿದ್ದೇ ತಡ, ‘ ಅಲ್ಲಾ, ಇದೊಳ್ಳೆ ಹೇಳ್ತೀರಿ ನೀವು! ದನುವನ್ನು ಕೊಟ್ಟಿಗೆಯಲ್ಲಿ ಮಲಗಿಸದೆ ಹಾಸಿಗೆ ಮೇಲೆ ಮನೆಯೊಳಗೆ ಮಲಗಿಸ್ತಾರಾ ಡಾಕ್ಟ್ರೆ? ಕೊಟ್ಟಿಗೆ ಇರೋದೇ ದನುಗಳಿಗೆ, ಅದೂ ಅಲ್ಲದೇ ನಮ್ಮ ಕೊಟ್ಟಿಗೆ ಗಲೀಜಾಗಿಲ್ಲ.ತುಂಬಾ ಕ್ಲೀನಾಗಿ ಇಟ್ಟಿದ್ದೇವೆ. ದನುಗಳು ಅಂದ್ರೆ ನಮ್ಮನೆ ಜನ ಇದ್ದಂಗೆ ತಿಳ್ಕೊಳ್ಳಿ. ಈಗ ಅದೇನು ಔಷಧ ಕೊಡ್ತೀರಾ ಹೇಳಿ!” ಎಂದರು ಅಸಹನೆಯಿಂದ.

ಆಗಲೇ ನನಗೆ ಅರ್ಥವಾಗಿದ್ದು,ಅದು ರಾಂಗ್ ನಂಬರ್ ! ಅವರು ಯಾರೋ ನನಗೆ ಗೊತ್ತಿರಲಿಲ್ಲ,ಅವರಿಗೆ ನನ್ನ ಪರಿಚಯವಿಲ್ಲ. ಅವರು ಅಲ್ಲಿಯತನಕ ಹೇಳಿದ್ದು ಅವರ ದನದ ಕುರಿತು. ನಮ್ಮ  ಬಡಾವಣೆಯಲ್ಲಿದ್ದ ಹೆಬ್ಬಾಳದಲ್ಲಿ ಕೆಲಸ ಮಾಡುವ ಪಶುವೈದ್ಯೆಯ ಮನೆ ಫೋನ್ ನಂಬರ್ ಮತ್ತು ನಮ್ಮ ನಂಬರ್ ನಲ್ಲಿ ಒಂದೇ ಸಂಖ್ಯೆ ವ್ಯತ್ಯಾಸ. ರಾತ್ರಿ ಗಡಿಬಿಡಿಯಲ್ಲಿ ಎಲ್ಲೋ ತಪ್ಪಿ ನಮ್ಮ ಮನೆಗೆ ಫೋನ್ ಬಂದಿತ್ತು.. ಅವರ ದನು  ಮತ್ತು ನನ್ನ  ರೋಗಿ ಧನು ಎಲ್ಲಾ ಸೇರಿ ಈ ಗೊಂದಲ ಸೃಷ್ಟಿಯಾಗಿತ್ತು.ಅವರಿಗೆ ನಿಜ ಸಂಗತಿ ತಿಳಿಸಿ, ಸರಿಯಾದ ನಂಬರ್ ಕೊಟ್ಟು ಮಲಗುವಷ್ಟರಲ್ಲಿ ಹತ್ತು ನಿಮಿಷ ಕಳೆದಿತ್ತು. ನಮ್ಮ ಧನು ಎರಡು ದಿನಗಳ ನಂತರ ಬಂದು ಹಲ್ಲಿನ ಬೇರು ತೆಗೆಸಿಕೊಂಡು ನೋವಿಲ್ಲದೇ ಮುಂಬೈಗೆ ಮರಳಿದ್ದಳು. ಹೋಗುವ ಮುನ್ನ ಅಜ್ಜ-ಅಜ್ಜಿ ಮೊಮ್ಮಗಳು ನಗುತ್ತಾ   ತೋಟದ ಸಿಹಿ ಚಿಕ್ಕು ಹಣ್ಣು ತಂದುಕೊಟ್ಟು  ಧನ್ಯವಾದ ತಿಳಿಸಿದ್ದರು. ಈಗ ನೆನೆಸಿಕೊಂಡರೆ ನಗು ಬಂದರೂ  ಆ ನಡುರಾತ್ರಿಯಲ್ಲಿ ಏನಾಗಿದೆ, ಯಾಕಾಗಿದೆ  ಎಂದು ತಿಳಿಯದೇ ನನಗಾದ ಆತಂಕ ಅಷ್ಟಿಷ್ಟಲ್ಲ. ಧನು-ದನ ತಮಾಷೆ ಪ್ರಸಂಗ ನಿಜ, ಆದರೆ  ವೈದ್ಯ ವೃತ್ತಿಯ ಗುರುತರ ಜವಾಬ್ದಾರಿಯನ್ನು ಯಾವಾಗಲೂ ನನಗೆ ನೆನಪಿಸುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: