ಡಾ ಎಸ್ ಬಿ ಜೋಗುರ
ಇಡೀ ಊರಿಗೂರೇ ಮ್ಯಾಲ ಮುಖಾ ಮಾಡಿ ನಾಕು ಹನಿ ಉದರದರ ಹೊಲಾ ರಾಬ್ ಮಾಡ್ಲಾಕ ಚಲೊ ಆಗತೈತಿ. ಹಿಂಗಾರು ಕೈ ಕೊಟ್ಟು ಜನ-ಜಾನವಾರು ಕೂಳ ಕೂಳ, ನೀರ ನೀರ ಅನ್ನೂವಂಗ ಆದ ಗತಿ ಮತ್ತ ಬರೂದು ಬ್ಯಾಡ. ಈ ಬಾರಿಯಾದ್ರೂ ಮುಂಗಾರು ಪೀಕ್ ಕೈಗಿ ಬರುವಂಗ ಆದರ ಚಲೊ ಆಗತೈತಿ ಅನ್ನೂದು ಊರವರ ಕನಸಾದರ, ಕುಡುಕ ಅಂಬಣ್ಣನ ಲೆಕ್ಕಾನೇ ಬ್ಯಾರೇ ಆಗಿತ್ತು. ಅಂವಾ ಮ್ಯಾಲ ಮುಖಾ ಮಾಡಿ ಕೇಳದವನೂ ಅಲ್ಲಕೆಳಗ ಮುಖಾ ಮಾಡಿ ದುಡದವನೂ ಅಲ್ಲ. ಮಳಿ ಬಂದರೂ ಅಷ್ಟೆ.. ಮಳಿ ಬರಲಿಲ್ಲ ಅಂದರೂ ಅಷ್ಟೆ… ಅವನ ಶತಮುಗ್ಗಲತನಕ ಹೊಲಾ ಅನ್ನೂದು ಬೀಳು ಬಿದ್ದ ಪಡಾ ಆಗಿತ್ತು. ಹಂಗಾಗೇ ಆಜೂ ಬಾಜೂ ಹೊಲದವರು ಅಂಬಣ್ಣನ ಹಾಳ ಮಡ್ಡಿ ಅಂತಾನೇ ಕರೀತಿದ್ದರು. ಅಂಬಣ್ಣನ ಅಪ್ಪ ಸತ್ತ ಮ್ಯಾಲ ಅವನೂ ಬಾಡಿಗಿ ಗೆಳೆ ತಂದು ತುಸು ಕಟಿಬಿಟಿ ಮಾಡಿದ್ದ. ಅಂವಾ ಬಿತ್ತಿದ ಬೀಜಾ ಸೈತ ಕೈಗಿ ಬರ್ತಿರಲಿಲ್ಲ. ಹಂಗಾಗಿ ಅಂವಾ ಹೊಲದ ಆಸೆನೇ ಬಿಟ್ಟಿದ್ದ. ಸಾಲದ್ದಕ್ಕ ಕೆಟ್ಟ ಕುಡಿಯೋ ಚಟಾ ಬ್ಯಾರೆ. ಅವನ ಹೆಂಡತಿ ಲಗಮವ್ವ ಬ್ಯಾರೆಯವರ ಹೊಲಕ್ಕ ಕೂಲಿಗಿ ಹೋಗಿ, ಆ ಕುಡುಕ ಗಂಡ ಮತ್ತ ಮಕ್ಕಳ ಒಡ್ಡಲ ತುಂಬತಿದ್ದಳು. ಈ ಅಂಬಣ್ಣಗ ಮೂರು ಹೆಣ್ಣು ಒಂದು ಗಂಡು, ಗಂಡು ಹುಡುಗನೇ ಕಡಿಯವ. ಹಿರಿ ಹುಡುಗಿ ಸತ್ತೆವ್ವಗ ಆವಾಗ ಹದಿನಾಲ್ಕು ವರ್ಷ.
ಹದಿಮೂರನೇ ವಯಸ್ಸಿಗೆ ಆಕಿ ದೊಡ್ದಕ್ಕಿ ಆಗಿ, ಲಗಮವ್ವಗ ಎದಿ ಮ್ಯಾಲ ಕುಂತಂಗ ಆಗಿತ್ತು. ತನ್ನ ಖಾಸಾ ತಮ್ಮಗೇ ಕೊಟ್ಟು ಒಂದಿತ್ತು ಒಂದಿಲ್ಲ ಅನ್ನೂದರೊಳಗೇ ಮದುವಿ ಮಾಡಿ ಹಗುರ ಆಗಿದ್ದಳು. ಇನ್ನೂ ಮೂರು ಮಕ್ಕಳನ್ನ ಮತ್ತು ಆ ಅಡ್ನಾಡಿ ಗಂಡ ಅಂಬಣ್ಣನ್ನ ಕಟಗೊಂಡು ಆಕಿ ದಿನಾ ಕಳಿಬೇಕಿತ್ತು. ಈ ಅಂಬಣ್ಣ ಲಗ್ನ ಆದ ಮ್ಯಾಲ ಒಂದು ವಾರ ದುಡದಿದ್ದು ಬಿಟ್ಟರ, ಮತ್ತೆಂದೂ ಮೈ ಮುರದದ್ದಿಲ್ಲ.. ಬರೀ ಬಣ್ಣದ ಮಾತಾಡ್ತಾ ಮನಿ ಸನ್ಯಾಕ ಇರೋ ಲಕ್ಕಮ್ಮದೇವರ ಗುಡಿ ಮುಂದ ಅವನಂಥದೇ ಫéುಜಲ್ ಮಂದಿ ಜೋಡಿ ದೇಶಾವರಿ ಮಾತಾಡ್ತಾ ಕುಂತ ಅಂದರ ಮುಗೀತು.. ಮತ್ತ ಹೊಟ್ಟಿ ಕವಕವ ಅಂದಾಗೇ ಮನಿ ನೆನಪ ಆಗತಿತ್ತು. ಅಂಬಣ್ಣಗ ದಿನ್ನಾ ಕುಡಿಯಾಕ ಬೇಕೇ ಬೇಕು. ಆದರ ಯಾರು ಕೊಡಬೇಕು..? ಅಲ್ಲಿ ಇಲ್ಲಿ ಸಾಲಾ ಮಾಡತಿದ್ದ. ಅವನಿಗಿ ಗೊತ್ತಿರೋ ಒಂದೇ ಒಂದು ವಿದ್ಯೆ ಅಂದರ ಭಜನಾ ಡಪ್ ಬಡಿಯೂದು. ಊರೊಳಗ ಯಾರರೆ ಸತ್ತರಂದರ ಅಲ್ಲಿ ಹಾಜರ್..! ಅರ್ಧ ಕ್ವಾಟರ್ ಕುಡಸಿ ಕುಂದ್ರಸದರ ಬೆಳ್ಳ ಬೆಳತನಕ ಡಪ್ ಬಡಿಯವನು. ಯಾರಾದರೂ ಸತ್ತರ ಅವನಿಗಿ ಸುಗ್ಗಿ ಅವನ್ನ ಕರಕೊಂಡು ಬರಾಗ ಮೊದಲ ಕುಡಿಸಿ ಕಿಸೆದೊಳಗ ನೂರು ರೂಪಾಯಿ ತುರಕದ ಮ್ಯಾಲೇ ಬರವನು. ಬಂದು ಕಾಲಿನ ಹೆಬ್ಬರಳ ಸಂದಿಯೊಳಗ ಗಟ್ಯಾಗಿ ಹಿಡದು ಡಪ್ ಬಡಿಯಾಕತ್ತನಂದ್ರ ಗುಂಗು ಹಿಡದಂಗ ಬಾರಸತಿದ್ದ. ಅವನ ಆ ಕಡತ ನೋಡಿ ಅಲ್ಲಿದ್ದ ಜನ ಕಲಾಕಾರ ಕುರಸಾಲ್ಯಾ ಆದರ ಸುಳಿ ಸುಮಾರ ಅಂತಿದ್ದರು. ಅಂವಾ ಕುಡಿಯೂ ಬಗ್ಗೆ ಹೆಂಡತಿ ಲಗಮವ್ವಗ ತಕರಾರಿಲ್ಲ, ದಿನ್ನಾ ಕುಡದು ಬಂದು ಸುಮ್ಮ ಮಲಗಂವಲ್ಲ, ಆಕಿನ್ನ ಹೊಡಿಯೂದು, ಬಡಿಯೂದು ಮಾಡತಿದ್ದ. ಆಕಿ ದಗದಕ್ಕ ಹೋದಾಗ ಪುಸುಂಗನೇ ಮನ್ಯಾಗಿರೋ ಸಾಮಾನು ಮಾರತಿದ್ದ. ಲಗಮವ್ವಳ ಲಗ್ನದಾಗ ಸುರಗಿ ಕೊಟ್ಟಿದ್ದ ಒಂದೂ ಸಾಮಾನು ಉಳದಿರಲಿಲ್ಲ. ತಾಮ್ರದ ಕೊಡ, ತಪೇಲಿ, ತಂಬಗಿ ಎಲ್ಲಾ ಗೊತ್ತಿಗಿ ಹಚ್ಚಿದ್ದ.
ನೀರ ಕಾಯ್ಸಾಕಂತ ವತ್ತಲದೊಳಗ ಹೂತಿರೋ ಹಂಡೇ ಸೈತ ಹಡ್ಡಿ ಮಾರಿದ್ದ. ಈಗ ಉಳಿದದ್ದು ಬರೀ ಒಂದೆರಡು ತೂತು ಬಿದ್ದ ಜರ್ಮನಿ ಸಟ್ಟ ಮತ್ತು ತಂಬಗಿ. ಸಿಟ್ಟೀಲೇ ಅದನ್ಯಾಕ ಮಾರದಿ..? ಅಂತ ಕೇಳದರ ಸಾಕು ‘ಲೇ ಹುಚಬೋಸುಡಿ ಅದನೇನು ಕೇಳ್ತಿಯಲೇ..’ ಅಂತ ಕೈಗಿ ಏನು ಸಿಗತೈತೊ ಅದರಿಂದ ಹೊಡಿಯವನು. ಮುಂಜಾನಿಂದ ಸಂಜೀಮಟ ಕತ್ತಿ ದುಡದಂಗ ದುಡದು ಬಂದು ತುಸು ತಣ್ಣಗ ಬೀಳಬೇಕಂದ್ರ ಇಂವಾ ಕುಡದು ಬಂದು ಒಣಾ ಲಿಗಾಡು ತಕ್ಕೊಂಡು ಕೂಡವನು. ಕುಡದಾಗ ಅಂವಗ ಜಗಳಕ್ಕ ಯಾವದರೆ ಕಾರಣ ಬೇಕಂತಿಲ್ಲ. ಸುಮ್ಮಸುಮ್ಮನೇ ವಣಗಿಗಿ ಉಪ್ಪ ಹೆಚ್ಚಾಗೈತಿ, ಖಾರ ಹೆಚಾಗೈತಿ ಅಂತ ಬಗೋಣಿಗಿ ಬಗೊಣಿನೇ ಎತ್ತಿ ಅಂಗಳಕ ಡಬ್ ಒಗದು ಬಿಡವನು. ಹಿರಿ ಮಗಳ ಲಗ್ನ ಆದ ತಿಂಗಳ ಮಟಾ ಮೈಯಾಗ ದೆವ್ವ ಹೊಕ್ಕಂಗ ಮಾಡದ. ‘ನಿಮ್ಮ ಅಣ್ಣತಮ್ಮದೇರು ಲಗ್ನದೊಳಗ ಚಾ ಸೋಸೋ ಬಟ್ಟಿಯಂಥಾದು ದೋತರ ಕೊಟ್ಟಾರ ಚೋದಿ ಮಕ್ಕಳು’ ಅಂತ ಜಗಳಾ ತಗಿಯವನು. ಲಗಮವ್ವ ತಿರುಗಿ ಏನೂ ಮಾತಾಡಲಿಲ್ಲಂದ್ರೂ ಹಲ್ಕಟ್ ಹಲ್ಕಟ್ ಬೈಯವನು. ಇವನ ಗುಣಕ್ಕ ಆಜೂ ಬಾಜೂ ಮನಿಯವರು ಸುಸ್ತಾಗಿದ್ದರು. ‘ಹಂಗಲ್ಲೋ ಅಂಬಣ್ಣ’ ಅಂತ ಹೇಳಾಕ ಹೋದ ತಿಪ್ಪಣ್ಣನ್ನ ಅವತ್ತ ಬೆಳ್ಳಬೆಳತನಕ ಮಲಗಾಕ ಬಿಡದೇ ‘ಹಂಗಲ್ಲಂದ್ರ ಹ್ಯಾಂಗ ಹೇಳು’ ಅಂತ ಟರಾ ಟರಾ ಅವನ ಅಂಗಿ ಹರದು, ಅಂವಾ ತೋಬಾ ತೋಬಾ ಅನ್ನೂವಂಗ ಮಾಡಿದ್ದ. ಆವತ್ತಿನಿಂದ ಮತ್ಯಾರೂ ಅವನಿಗಿ ಬುದ್ದಿ ಮಾತ ಹೇಳೊ ಧೈರ್ಯ ಮಾಡಿರಲಿಲ್ಲ. ಇಂಥಾ ಅಂಬಣ್ಣ ಕುಡಿಯೂ ಚಟಕ್ಕಾಗಿ ಯಾವ ಮಟ್ಟಕ್ಕೂ ಹೋಗವನು. ಒಂದು ಸಾರಿ ಎಲ್ಲೆಲ್ಲೂ ರೊಕ್ಕ ಹುಟ್ಟಲಾರದಕ್ಕ ಹುಚ್ಚ ಹಿಡದಂಗಾಗಿ ದೇಸಾಯರ ಮನಿಗಿ ಹೋಗಿ, ತನ್ನ ಮಗಳು ಸಾವಿತ್ರಿನ್ನ ಸೋಮವಾರದಿಂದ ಕೆಲಸಕ್ಕ ಕಳಸ್ತೀನಿ ಅಂತ ಮಾತು ಕೊಟ್ಟು, ಇಸಾರ ಕೊಡ್ರಿ ಅಂತ ಹೇಳಿ ಅವರ ಕಡಿಂದ ಎರಡು ನೂರು ರೂಪಾಯಿ ಇಸಗೊಂಡು ಫéುಲ್ ಟೈಟ್ ಆಗಿ ಕುಡದು ಬಂದಿದ್ದ.
ಲಗಮವ್ವ ‘ರೊಕ್ಕ ಎಲ್ಲೀದು ಬಂತ..?’ ಅಂತ ಕೇಳದಾಗ ಕೆಟ್ಟ ಕೆಟ್ಟ ಹೊಲಸ ಬೈಗುಳಾ ಬೈದು ಊಟಾ ಮಾಡಲಾರದೇ ಮುಕುಳಿ ಡಬ್ಬ ಹಾಕಿ ಮಲಗಿದ್ದ. ಇಂವಾ ಏನೋ ಲಫéಡಾಗಿರಿ ಮಾಡ್ಯಾನ ಅನ್ನೂದು ಹೆಂಡತಿ ಲಗಮವ್ವಗ ಒಳಗೊಳಗೇ ಕಟೀತಿತ್ತು. ಒಣಾ ಲಿಗಾಡು ಏನು ತತರ್ಾನೋ ಅನ್ನೋ ಹೆದರಿಕೆಯೊಳಗೇ ಆಕಿ ದಿನಾ ಕಳಿತಿದ್ದಳು. ಆವೊತ್ತೊಂದಿನ ಮಂಗಳಾರ ಮುಂಜಾನೆ ದೇಸಾಯರ ಆಳು ರಾಮಪ್ಪ ಅವನ ಮನಿ ಮುಂದ ನಿಂತು ‘ಅಂಬಣ್ಣ ಅಂಬಣ್ಣ..’ ಅಂತ ಕೂಗದ. ಲಗಮವ್ವ ಹೊರಗ ಬಂದು ನೋಡದರ ರಾಮಪ್ಪ.. ‘ಏನು ರಾಮಣ್ಣ..?’ ‘ಏನಿಲ್ಲ ನಿನ್ನ ಗಂಡ ಮೊನ್ನೆ ಯಜಮಾನರ ಕಡಿಂದ ಮಗಳು ಸಾವಿತ್ರಿನ್ನ ಕೆಲಸಕ್ಕ ಕಳಸ್ತೀನಿ ಅಂತ ಹೇಳಿ ಎರಡು ನೂರು ರೂಪಾಯಿ ಇಸಗೊಂಡಾನ’ ಅಂದಾಗ ಲಗಮವ್ವ ಹಣಿ ಹಣಿ ಬಡಕೊಂಡು ‘ ಅಂವಾ ಹಂಗಾದಾನಂತ ಗೊತ್ತಿದ್ದೂ ನಿಮ್ಮ ಸಾಹುಕಾರು ಅಂವಗ ಹ್ಯಾಂಗ ರೊಕ್ಕಾ ಕೊಟ್ರೊ ಯಪ್ಪಾ.. ? ಅಂವಾ ನಮ್ಮ ಪಾಲಿನ ಇದಿ ಇದ್ದಂಗ ಈಗ ಕೂಳ ತಿಂದು ಹೋಗ್ಯಾನೋಡು ಅಲ್ಲೇ ಲಕ್ಕಮ್ಮನ ಗುಡಿ ಮುಂದ ಕುಂತಿರಬೇಕು ನೋಡು. ಪಾಪ..! ಆ ಹುಡುಗಿ ಸಾಲೀಗಿ ಹೋಗೈತಿ. ರೊಕ್ಕಾ ಕೊಡವರಿದ್ರ ಹುಟ್ಟೂ ಕೂಸಿನ ಮ್ಯಾಲೂ ಇಂವಾ ಸಾಲಾ ಕೇಳವನೇ.. ಆಯ್ತು ತಗೊಳಪಾ ಯಣ್ಣಾ ನಾನೇ ಒಂದು ವಾರ ಕೆಲಸ ಮಾಡ್ತೀನಿ ಅಂತ ನಿಮ್ಮ ಸಾಹುಕಾರಗಿ ಹೇಳು’ ಅಂತ ಹೇಳಿ ಕಳಿಸಿ, ಲಗಮವ್ವ ಒಂದು ವಾರ ಕೆಲಸಾ ಮಾಡಿ ಎರಡು ನೂರು ರೂಪಾಯಿ ಮುಟ್ಟಿಸಿದ್ದಳು.
ಈ ಅಂಬಣ್ಣನ ಅಪ್ಪ ಗಂಗಪ್ಪ ಇರೂಮಟ ಆ ಮಡ್ದಿ ಜಮೀನಿನೊಳಗೇ ಮನಿಗಿ ಬೇಕಾಗೋ ಕಾಳು ಕಡಿ ಅಂವಾ ಬೆಳೀತಿದ್ದ. ಒಂದೆರಡು ಬುಡ್ಡ ಎತ್ತುಗಳನ್ನ ಇಟಗೊಂಡು ಆ ಮುದುಕ ಬಾರೀಕಾಲ ಅಲ್ಲೇ ಹೊಲದಾಗೇ ಬೀಳತಿತ್ತು. ಆದರೆ ಅಂವಾ ಹೋದ ಮ್ಯಾಲ ಆ ಹೊಲಾ ಪೂತರ್ಿ ಬೀಳು ಬಿದ್ದ ಪಡಾ ಅಗೈತಿ. ಎಲ್ಲಿ ನೋಡದರೂ ಸಣ್ಣ ಸಣ್ಣ ಜಾಲಿ ಗಿಡ, ಹುಲ್ಲು, ಕಂಟಿ, ಕಸ ಕಡಿ ತುಂಬ್ಕೊಂಡಿತ್ತು. ಅಂಬಣ್ಣ ಒಡ್ಡಿನ ಮ್ಯಾಲಿರೊ ಜಾಲಿ ಗಿಡ, ಬೇವಿನ ಗಿಡ ಒಂದೊಂದೇ ಸಾಲಾಗಿ ಖಾಲಿ ಮಾಡತಾ ಬಂದ. ಉಳದದ್ದು ಒಂದೈದು ಮಾವಿನ ಗಿಡ. ಬಾಳ ಚಲೊ ಹಣ್ಣಿನ ಗಿಡ. ಅವು ಹೂ ಬಿಡಾಕ ಸುರು ಮಾಡಿದ್ದೇ ಅಂಬಣ್ಣ ಹುರುಪಾಗಿ, ಹೊಲದ ಕಡಿ ಹಾಯಾಕ ಸುರು ಮಾಡತಿದ್ದ. ಆ ವರ್ಷ ಐದೂ ಗಿಡಕ್ಕ ಭರ್ಚಕ್ ಹೂ ಹಿಡದಿತ್ತು. ಜೋಳದ ಕಾಳಿನ ಸೈಜಿನ ಮಿಡಿ ಕಾಣಾಕ ಸುರು ಆಗಿದ್ದೇ ಅಂಬಣ್ಣನ ಮಾತಿನ ಧಾಟಿನೇ ಫéರಕ್ ಆಗಿತ್ತು. ಊರಾನ ಮಂದಿ ಏನು ಉಬಾರ ಐತೋ ಮಾರಾಯಾ, ಮಳಿ ಆದರ ಚುಲೊ ಆಗತೈತಿ’ ಅಂದರ ಅಂಬಣ್ಣ ಮಾತ್ರ ‘ಈಗ ಮಳಿ ಬರಬಾರದು, ಈ ಅವಕಾಳಿ ಮಳಿ ಯಾರಿಗೂ ಚಲೋ ಅಲ್ಲ. ಹಿಂದಿನ ಸಾರಿ ನೋಡಿರಿಲ್ಲೋ ಅವಕಾಳಿ ಮಳಿಗಿ ಬಣವಿ ಮ್ಯಾಲಿನ ಮಣ್ಣ ಹೆಂಟಿ ಕರಗಿ ಜೋಳದ ಕಣಕಿ ಕರ್ರಗ ಆಗಿ ದನಗಳಿಗಿ ಮೇವು ಇರಲಾರದಂಗ ಆಗಿತ್ತು.’ ‘ನಿನಗ್ಯಾಕೋ ಮಾರಾಯಾ ದನಕರುಗಳ ಮೇವಿನ ಚಿಂತಿ.. ನಿನ್ನ ಚಿಂತಿ ಬ್ಯಾರೇನೇ ಐತಿ. ಮಾವಿನ ಗಿಡದ ಎಲ್ಲಾ ಹೂ ಉದರತಾವ ಅಂತ ಲೆಕ್ಕ ಹೌದಿಲ್ಲೋ..?’ ಅಂದಾಗ ಕಿಸಿಕಿಸಿ ನಕ್ಕಿದ್ದ.
ಜನರು ಇಂವಗ ಕುಡಿಯೋ ನೀರಿನ ಖಬರ್ ಇಲ್ಲ, ದನಕರುಗಳ ಅರಿವಿಲ್ಲ ಬರೀ ಮಾವಿನ ಗಿಡದ ಹೂವಿಂದೇ ಹತೈತಿ ಅಂತಿದ್ದರು. ಅವನ ಮಾವಿನ ಗಿಡಕ್ಕ ಭರಪೂರ ಹೂವು ಹಿಡದಿತ್ತು. ಹತ್ತಾರು ಮಂದಿ ಬಂದು ಗಿಡ ನೋಡಿ, ಅದರೊಳಗಿನ ಮಿಡಿ ನೋಡಿ ‘ಗುತ್ತಗಿ ಕೊಡ್ತಿಯನಪಾ ಅಂಬಣ್ಣ’ ಅಂತ ಕೇಳದರು. ಅಂಬಣ್ಣ ತುಸು ಧಿಮಾಕ ಮಾಡಿ ‘ತನ್ನ ರೇಟಿಗಿ ಬಂದರೆ ಕೊಡ್ತೀನಿ’ ಅಂತ ಹೇಳಿ ಸಿಕ್ಕಸಿಕ್ಕಂಗ ಹೇಳಾಕ ಸುರು ಮಾಡಿದ. ಯಾರೂ ಅಂವಾ ಹೇಳೂ ರೇಟಿಗಿ ತಗೋಳಿಲ್ಲ. ಮಾವಿನ ಮಿಡಿ ದೊಡ್ಡವಾಗ್ತಾ ಹೋದ್ವು. ಅವಕಾಳಿ ಮಳಿ ಗಾಳಿಯಿಂದ ಅಂವಾ ಬಚಾವಾಗಿದ್ದ. ದಿನ್ನಾ ತಾನೇ ಖುದ್ದಾಗಿ ಹೊಲಕ್ಕ ಹೋಗಿ ಹಗಲೂ ರಾತ್ರಿ ಕೂಡೇ ಕಾಯ್ತಿದ್ದ. ಹೋಳಿ ಹುಣ್ಣವಿ ಆದ ಮ್ಯಾಲ ಗಿಡದ ಬುಡಕೇ ಮಲಗಾಕ ಸುರು ಮಾಡಿದ. ಬಾಜೂ ಹೊಲದ ಸಿದ್ರಾಮ ಆವತ್ತ ಹೊಲದಿಂದ ಮನಿಗಿ ಹೊಂಟಾಗ ಅವನ ಜೋಡಿ ಕುಂತು ಬೀಡಿ ಸೇದೂ ವ್ಯಾಳೆದೊಳಗ ಮಾತಿಗಿ ಬಂದು ‘ಹುಣಸೀ ಗಿಡದ ಚಂಡ್ರಪ್ಪನ ಹೆಂಡತಿ ಶರಣವ್ವ ದೆವ್ವ ಆಗ್ಯಾಳಂತ ಸುದ್ದಿ, ಸುಳ್ಳೆ ಯಾಕ ಇಲ್ಲಿ ಮಲಗತಿ..?’ ಅಂತ ಹೇಳಿದ ಮ್ಯಾಲೂ ಅಂಬಣ್ಣ ಕೇಳಲಿಲ್ಲ. ‘ಒಂದು ಕ್ವಾಟರ್ ಹಾಕದರ ನಾನೂ ಒಂದು ದೆವ್ವ ಇದ್ದಂಗೇ ಒಂದು ಬೀಡಿ ತಾ’ ಅಂತ ಅವನ ಕಡಿ ಕೈ ಚಾಚದ. ಕುಡಿಯೂ ಚಟಕ್ಕೂ ಅಂವಾ ಹಂಗೇ ಕೈ ಚಾಚತಿದ್ದ. ಹಿಂಗ ದಿನ್ನಾ ಕುಡಿಯಾಕಂತ ಅವನಿಗಿ ರೊಕ್ಕ ಕೊಟ್ಟಿದ್ದು ಬಾಬೂಲಾಲ್. ಇವನು ವಷರ್ಾ ಅವನ ಮಾವಿನ ಗಿಡ ಗುತ್ತಗಿ ಹಿಡಿಯವನು. ಆ ಬಾರಿ ಅಂಬಣ್ಣ ಹೇಳೂ ರೇಟಿಗಿ ಹೊಂದಾಣಕಿ ಆಗಲಾರದೇ ಕೈ ಬಿಟ್ಟಿದ್ದ. ಅಂಬಣ್ಣ ಅವನ ಕಡಿಂದ ಆಗಾಗ ಮಾವಿನಗಿಡ ಇಳವಿದ ಮ್ಯಾಲ ಕೊಡ್ತೀನಿ ಅಂತ ನೂರು.. ಇನ್ನೂರು ಅಂತ ಕೈಗಡ ಇಸಗೊಂಡಿದ್ದ. ಹಂಗ ಇಸಗೊಂಡಿದ್ದೇ ಸಾವಿರಾರು ರೂಪಾಯಿ ಆಗಿತ್ತು. ಇದು ಲಗಮವ್ವಗ ಗೊತ್ತಾಗಿ ಹ್ಯಾಂಗ ಮಾಡಬೇಕು ಅಂತ ತಿಳಿಲಾರದಂಗ ಆಗಿ ಸೀದಾ ಅಂವಗ ಸಾಲಾ ಕೊಡೊ ಬಾಬೂಲಾಲ್ ಮನಿಗಿ ಹೋದಳು. ‘ಮಕ್ಕಳು ಮರಿ ಇರೊ ನಾನು ಕತ್ತಿ ದುಡದಂಗ ದುಡದು ಇವನ ಹೊಟ್ಟಿ ಬಟ್ಟಿ ನೊಡಕೋಬೇಕು ಅಂವಾ ನೋಡದರ ಹಿಂಗ ಸಾಲ ಮಾಡ್ಕೊಂತ ಹೊಂಟರ ನಾವು ಬದುಕೂದು ಹ್ಯಾಂಗ..? ನಾಳೆ ಮಾವಿನ ಗಿಡ ಇಳವಿದ ಮ್ಯಾಲೂ ಒಂದೇ ಒಂದು ರೂಪಾಯಿ ಅಂವಾ ನಮಗ ಕೈಗಿ ಹತ್ತಸಗೊಡೂದಿಲ್ಲ.. ಏನು ಮಾಡ್ಲಿ ಹೇಳ್ರಿ..?’ ಅಂದಾಗ ಬಾಬೂಲಾಲ್ ‘ಇದೆಲ್ಲಾ ನನಗ ಗೊತ್ತಿಲ್ಲವಾ.. ಇನ್ನ ಮುಂದ ಕೊಡಲ್ಲ ತಗೊಳವಾ’ ಅಂದಾಗ ಕಣ್ಣೀರ ಒರೆಸ್ತಾ ಲಗಮವ್ವ ಮನಿಗಿ ಬಂದಳು.
ಸುಮ್ಮನೇ ಹೀಗೇ ಗುತ್ತಗಿ ಕೊಟ್ಟರೆ ಇಪ್ಪತ್ತು ಸಾವಿರ ರೂಪಾಯಿಗೆ ಯಾರಾದರೂ ಹಿಡಿತಿದ್ರು ಇವನು ಎಲ್ಲಾ ಕಡಿ ಸಾಲಾ ಮಾಡಿ, ನಾಳೆ ಕೈಗೆ ಒಂದೇ ಒಂದು ರೂಪಾಯಿ ಬರದಂಗ ಆಗಿ ತಮಗ ಕಣ್ಣೀರಾಗ ಕೈ ತೊಳಿಯೂವಂಗ ಮಾಡೂದಂತೂ ಗ್ಯಾರಂಟಿ ಅನ್ನೂದು ಆಕಿಗಿ ಗೊತ್ತಿತ್ತು. ಹೆಂಡತಿ ಮಕ್ಕಳು ಅನ್ನೂ ಖಬರೇ ಅಂವಗ ಇಲ್ಲ. ಕುಡಿಯಾಕ ದುಡ್ದ ಕಡಿಮಿ ಬಿದ್ದರ ತನ್ನನ್ನೂ ಮಾರಿ ಕುಡಿಯೂ ಪೈಕಿ ಅನ್ನೋದು ಲಗಮವ್ವಗ ಗೊತ್ತಿತ್ತು.
ಲಗಮವ್ವ ಅಳ್ಕೊಂತ ಹೇಳಿ ಬಂದಿಂದ ಬಾಬೂಲಾಲ್ ಅಂವಗ ಸಾಲಾ ಕೊಡೂದು ನಿಲ್ಲಿಸಿಬಿಟ್ಟಿದ್ದ. ಅದು ಅಂಬಣ್ಣಗ ಗೊತ್ತಾಗಿ ಹೆಂಡತಿನ್ನ ಒಡಗಟಗಿಯಿಂದ ದನಕ್ಕ ಬಡಿದಂಗ ಬಡದಿದ್ದ. ‘ಬಾಬೂಲಾಲ್ ಇಲ್ಲಾಂದ್ರ ಏನಾಯ್ತು..? ನನಗ ಯಾರೂ ಸಾಲಾನೇ ಕೊಡಲ್ಲ ಅನ್ಕೊಂಡಿಯೇನಲೇ ಹುಚ್ ರಂಡೆ..?’ ಅಂತ ಬೈತಾ ಭರ್ರಂತ ನಡದಿದ್ದ. ಬಾಬೂಲಾಲ್ ಅಣ್ಣ ನಬಿಲಾಲ್ ಮಾವಿನಕಾಯಿ ತುಂಬೊ ವ್ಯಾಪಾರ ಮಾಡತಿದ್ದ. ಅವನ ಅಂಗಡಿಗಿ ಹೋಗಿ, ‘ಸಾಯೆಬರ ಈ ಸಾರಿ ಮಾವಿನಕಾಯಿ ಭರ್ಚಕ್ ಐತಿ. ಗಿಡಾ ಇಳವಿದ್ದೇ ತಂದು ನಿನ್ನ ಅಂಗಡಿಗೆ ಹಚ್ಚತೀನಿ’ ಅಂತ ಮಾತು ಕೊಟ್ಟು ಅವನ ಕಡೀಂದ ರೊಕ್ಕಾ ಇಸಗೊಳಾಕ ಸುರು ಮಾಡದ. ಬಾಬೂಲಾಲ್ ತುಸು ಮನುಷ್ಯತ್ವ ಇರವನು ಆದರೆ ಈ ನಬೀಲಾಲ್ ಹಂಗಲ್ಲ. ಹೇಳದಂಗ ನಡೀಲಿಲ್ಲ ಅಂದ್ರ ಕೇಳೂದಿಲ್ಲ. ಹೆಂಗಾರೆ ಮಾಡಿ ಹಣ ವಸೂಲಿ ಮಾಡೇ ತೀರವನು. ಕತ್ತರಕಿ ಊರೊಳಗ ಅವನ ಕಡಿಂದ ಸಾಲಾ ತಗೊಂಡು ತೀರಸಲಾರದೇ ಇದ್ದವರಲ್ಲಿ ನಾಕೈದು ಮಂದಿ ಕೈ ಕಾಲು ಮುರಕೊಂಡು ಮನಿಯೊಳಗ ಕುಂತ ಕತಿ ಅಂಬಣ್ಣಗೂ ಗೊತ್ತಿತ್ತು. ಆ ಕತ್ತರಕಿ ಊರ ಮಹಿಮಾನೇ ಅಂಥಾದು. ವರ್ಷಕ್ಕ ಎರಡು ಮೂರು ಜೀವ ಊರ ಹೊರಗಿನ ಕೆರಿ ದಂಡಿ ಮ್ಯಾಲ ಅಂಗಾತ ಉರುಳತಿದ್ವು ಅದನ್ನ ಮಾಡಿದ್ದು ಯಾರು ಅಂತ ಇಡೀ ಊರಿಗೂರೇ ಗೊತ್ತಿದ್ದರೂ ಯಾರೂ ತುಟಿ ಪಿಟ್ ಅಂತಿರಲಿಲ್ಲ. ಬಾಬೂಲಾಲ್ ಮತ್ತ ಅವನಣ್ಣ ನಬೀಲಾಲ್ ಇಡೀ ಕತ್ತರಕಿಗೇ ಶ್ರೀಮಂತರು. ನಬಿಲಾಲ್ ಬಡ್ದಿ ವ್ಯವಹಾರ ಮಾಡವನು. ದೊಡ್ದ ಗುಂಡಾ ಅಂತ ಹೆಸರ ತಗೊಂಡಂವ. ಪ್ರತಿ ಇಲೆಕ್ಷನದೊಳಗೂ ಅವನನ್ನ ಸೋಲಾಪುರದ ದೇಸಾಯರು ಕರಸಕೋಂತಿದ್ದರು. ನಬಿಲಾಲ್ ನ ಹಿಂದ ಹತ್ತಿಪ್ಪತ್ತು ಮಂದಿ ಎಮಕಿನ ಹುಡುಗರು ಯಾವಾಗಲೂ ಇದ್ದೇ ಇರತಿದ್ದರು.
ಅವನ ಮನಿಗಿ ಹೋದರ ಯಾವುದೋ ಒಂದು ತೆಲುಗು ಸಿನೇಮಾದ ವಿಲನ್ ಮನಿ ನೋಡದಂಗ ಆಗೂದು ಅಲ್ಲಲ್ಲಿ ನಿಂತಿರೋ ಜನರು ಅಂವಾ ಬರೀ ಕಣ್ಣ ಇಸಾರೆ ಮಾಡದರ ಸಾಕು, ಕುನ್ನಿಗಿ ಹೊಡದಂಗ ಹೊಡದು ಬಿಡವರು. ಇಟ್ಟೆಲ್ಲಾ ಇವನ ರುಬಾಬ್ ಇದ್ದರೂ ಒಂದೇ ಒಂದು ದಿನ ಕತ್ತರಕಿಮಟ ಪೋಲಿಸರು ಬಂದು ಒಂದೇ ಒಂದು ಕೇಸ್ ಮಾಡಿದ್ದಿಲ್ಲ. ಒಂದು ಸಾರಿ ಬಾಬೂಲಾಲ್ ಅಪ್ಪ ಅಬ್ಬಾಸಾ ಬದುಕಿರೋ ವ್ಯಾಳೆದೊಳಗ ರಾಮಸಿಂಗ್ ಅನ್ನೋ ಕಾನಸ್ಟೇಬಲ್ ಈ ಕತ್ತರಕಿಗಿ ಒಂದು ಮರ್ಡರ್ ಕೇಸ್ ವಿಷಯದೊಳಗ ಬಂದಿದ್ದ. ಹಂಗ ಬರೀ ಬಂದಿದ್ದೇ ಬಂತು, ಹೋಗಿದ್ದು ನೊಡಲೇ ಇಲ್ಲ ಅನ್ನೂದು ಊರವರ ಮಾತು. ಇಂಥಾ ಕತ್ತರಕಿಯೊಳಗ ಅಂಥಾ ನಬೀಲಾಲ್ ಕಡಿಂದ ಸಾಲಾ ಮಾಡೊ ಅಂಬಣ್ಣನ ಧೈರ್ಯ ಹಗರಂತೂ ಅಲ್ಲ. ಸಾಲಾ ಕೊಡೂ ವ್ಯಾಳೆದೊಳಗ ‘ಮಾತು ತಪ್ಪಬಾರದು ತಪ್ಪದರ ಏನಾಗತೈತಿ ಅಂತ ಹೇಳಾಕ ಹೋಗಲ್ಲ ನಿನಗೂ ಎಲ್ಲಾ ಗೊತ್ತೈತಿ’ ಅಂತ ಖಡಕ್ ಆಗಿ ಸಿನೇಮಾದೊಳಗಿನ ಡೈಲಾಗ್ ಹೇಳದಂಗ ಹೇಳಿದ್ದ. ಆವಾಗ ಅಂಬಣ್ಣ ಅವನ ಎದುರು ಕೈ ಕಟಗೊಂಡು ನಿಂತಿದ್ದ ‘ಸಾಯೆಬರ ನೀವು ಹ್ಯಾಂಗ ಅಂತೀರಿ ಹಂಗ. ಮಾತು ತಪ್ಪದರ ನನ್ನ ಗಿಡಾನೇ ಕಡದಬಿಡ್ರಿ’ ಅಂದಿದ್ದ. ಆವಾಗ ನಬೀಲಾಲ್ ನಕ್ಕೊಂತ ‘ಅಲ್ಲೋ ಮಳ್ಳ ನಿನ್ನನ್ನ ಬಿಟ್ಟು ಗಿಡಾನ್ನ್ ಯಾಕ ಕಡೀಬೇಕೋ..? ಅದೆಲ್ಲಾ ಬ್ಯಾಡ ಮಾತು ಕೊಟ್ಟಂಗ ನಡಕೊ.. ಹೋಗಿನ್ನ’ ಅಂತ ಹೇಳಿ ಕಳಿಸಿದ್ದ.
ಆ ದಿವಸ ಬಾಜೂ ಹೊಲದ ಸಿದ್ರಾಮ ಅಂಬಣ್ಣನ ಮಾವಿನ ಗಿಡದ ಸನ್ಯಾಕ ಬಂದಿದ್ದ. ಆ ಕಡೆ ಈ ಕಡೆ ನೋಡದ. ಎಲ್ಲೂ ಅಂಬಣ್ಣ ಕಾಣಲಿಲ್ಲ. ಅಲ್ಲೇ ಒಂದು ಗಿಡದ ಕೆಳಗ ಗಾಳಿಗಿ ಬಿದ್ದಿರೋ ನಾಕೈದು ಮಾವಿನ ಕಾಯಿ ಇದ್ವು. ಸಿದ್ರಾಮ ಹಗೂರಕ ಕೈ ಹಾಕೂದರೊಳಗ ‘ ಏ ಸಿದ್ರಾಮಣ್ಣ ಇಲ್ಲೇ ಇದ್ದೀನಿ’ ಅಂದ. ಸಿದ್ರಾಮ ಮ್ಯಾಲ ಮುಖ ಎತ್ತಿ ನೋಡದರ ಅಂವಾ ಗಿಡದಾಗ ಕುತಗೊಂಡಿದ್ದ. ಸಿದ್ರಾಮನ ಜೀವ ತುಸು ಖಜೀಲಿ ಆದಂಗ ಆಗಿ ‘ಅಲ್ಯಾಕ ಕುಂತಿಯೋ ಅಂಬಣ್ಣ..’ ಅಂದ. ನಿನ್ನೆ ನಸುಕಿನೊಳಗ ಕಡಿ ಗಿಡದ ನಾಕೈದು ಕಾಯಿ ಯಾರೋ ಹರಕೊಂಡಾರ ಅದಕ್ಕೇ ಇವತ್ತ ಕಳ್ಳರನ್ನ ಹಿಡದೇ ತೀರಬೇಕು ಅಂತ ಹಿಂಗ ಗಿಡಾ ಹತ್ತಿ ಕುಂತೀನಿ’ ಅಂದಾಗ ಸಿದ್ರಾಮಗ ತಾನು ಕಾಯಿ ಮುಟ್ಟಿದ್ದೇ ತಪ್ಪಾಯ್ತಲ್ಲ..! ಅನಿಸಿತ್ತು. ‘ಮಾರಾಯಾ ನಾನಂತೂ ಒಂದೇ ಒಂದು ಕಾಯಿ ಮುಟ್ಟಿಲ್ಲ. ಗಾಳಿಗಿ ಬಿದ್ದಿದ್ದನ್ನ ಮುಟ್ಟಾಕ ಹೋಗೂದರೊಳಗ ನೀ ಕರದಿದ್ದು ಕೇಳಿ ಅದನ್ನೂ ಮುಟ್ಟಲಿಲ್ಲ. ಬೇಕಂದ್ರ ನಾ ಒಂದು ಕಾಯಿ ಕೇಳಿ ಇಸಗೋಂತೀನಿ ಹೇಳದೇ ಅದೂ ಗಿಡದಾಗಿಂದು ಹರಕೊಳ್ಳೊ ಮನುಸ್ಯಾನೇ ಅಲ್ಲ.’ ‘ಅಲ್ಲೋ ಸಿದ್ರಾಮಣ್ಣ, ಕುಂಬಳಕಾಯಿ ಕಳ್ಳ ಅಂದ್ರ ನೀ ಹೆಗಲ ಯಾಕ ಮುಟ್ಕೊಂತಿ..?’ ಯಾರು ಹರದಾರ ಅವರಿಗಿ ಹತ್ತತೈತಿ ನೀಯಾಕ ತಲಿ ಕೆಡಸಕೊಂತಿ..? ಬಾ ಬಾ ಒಂದು ಬೀಡಿ ಕೊಡು’ ಅಂದ. ‘ ಕಾಯಿ ಬಣ್ಣ ತಿರಗಾಕತ್ತಾವ ಇನ್ನ ಹೆಚ್ಚಂದ್ರ ವಾರದೊಳಗ ಪಾಡಗಾಯಿ ಬೀಳ್ತಾವ’ ಅಂತ ಸಿದ್ರಾಮ ಹೇಳಿದ್ದೇ ತಡ ಅಂಬಣ್ಣ ‘ಹೌದು ನೋಡು ನನಗೂ ಹಂಗೇ ಅನಸತೈತಿ, ತುಸು ಬೇಗ ಗಿಡಾ ಇಳವದರ ಕೈಗಿ ರೊಕ್ಕ ಬತರ್ಾವ, ತಡ ಆದರ ಮಾಕರ್ೀಟಿಗೆ ಹಣ್ಣ ಬಾಳ ಬರತೈತಿ. ಆವಾಗ ಸುಮ್ಮನೇ ಅಡದುಡ್ಡಿಗೆ ಕೇಳಾಕ ಸುರು ಮಾಡ್ತಾರ’ ಅಂದಾಗ ‘ ನೀ ಸುಮ್ಮ ಗಿಡಾ ಇಳವಿದ್ದೇ ಮಾಲ್ ಹೈದರಾಬಾದಗೆ ಹೊಡಿ, ಚಲೊ ರೇಟ್ ಸಿಗತೈತಿ. ನಿನ್ನ ಗಿಡದ ಹಣ್ಣೆನೋ… ಮುಗಿಬಿದ್ದು ತಗೊತಾರ’ ಅಂದದ್ದೇ ಅಂಬಣ್ಣ ಕೈಯೊಳಗೊಂದು ಮಾವಿನ ಕಾಯಿ ಹಿಡದು ‘ ನೀ ಹೇಳೂದು ಖರೆ ಆದರ ನಬೀಲಾಲ್ ಗ ಮಾತು ಕೊಟ್ಟೀನಿ ನಿನಗೇ ಕೊಡ್ತೀನಿ ಅಂತ’

‘ಇಂಥಾ ಮಳ್ಳತನ ಮಾಡೇ ನೀ ಹಿಂಗ ಆಗೀದಿ ಹೋಗಿ ಹೋಗಿ ಅವನ ಹತ್ಯಾಕ ಸಾಲಾ ಮಾಡೀಯಲ್ಲೋ..? ಇರಲಿ ನೀ ಏನು ಅವನ ಸಾಲಾ ಮುಳಗಿಸಿಕೊಳ್ಳೂದಿಲ್ಲಲ್ಲ..! ಹೈದರಾಬಾದಗೆ ಹೊಡಿ, ಕೈಗಿ ರೊಕ್ಕ ಬರತೈತಿ ಅವನ ಸಾಲಾ ಕೊಡು ನಿನಗೂ ಒಂದಿಟು ಉಳಿತೈತಿ ಇಲ್ಲಾಂದ್ರ ಅಂವಾ ಕೊಟ್ಟ ಸಾಲಕ್ಕೂ ನಿನ್ನ ಹಣ್ಣಿಗೂ ಹವಾರ ಆಗತೈತಿ’ ಅಂದಾಗ ಅಂಬಣ್ಣಗ ಸಿದ್ರಾಮ ಹೇಳೂದು ಖರೆ ಐತಿ ಅನಸಿ ಆವತ್ತಿನಿಂದ ಹೈದರಾಬಾದ್ ಕನಸು ಕಾಣಾಕ ಸುರು ಮಾಡಿದ್ದ. ಆ ದಿವಸ ಮನಿ ಮುಂದ ಡ್ರೈವರ್ ಚಂದಪ್ಪನನ್ನ ನಿಲ್ಲಸಕೊಂಡು ಹೈದರಾಬಾದಕ್ಕ್ಕ ಟ್ರಕ್ ಬಾಡಗಿ ತಗೊಂಡು ಹೋದರ ಕಮ್ಮೀತ ಕಮ್ಮಿ ಏಟಾಗತೈತಿ..? ಅಂತ ವಿಚಾರಸತಿದ್ದ. ಅದನ್ನ ಮನಿಯೊಳಗಿಂದೇ ಕೇಳಿದ ಲಗಮವ್ವ ತನ್ನ ಮಕ್ಕಳ ಮುಂದ ‘ಇಲ್ಲೀಮಟ ಬಾಬೂಲಾಲ್.. ನಬೀಲಾಲ್ ಕಡೀಂದ ತಂದು ತಿಂದ. ಈಗ ಹಣ್ಣ ಹೈದರಾಬಾದ್ ಕ್ಕ ಒಯ್ದು ಮಾರೋ ಕಟಿಬಿಟಿ ನಡಸ್ಯಾನ ಇದೇನಾರ ನಬೀಲಾಲ್ ಗ ಗೊತ್ತಾದರ ಇವನ ಕೈಕಾಲು ಮುರಸಿ ಮೂಲಿಗಿ ಕೂಡಸತಾನ. ಮನಿಗಂತೂ ಒಂದು ಪೈಸೆ ಕೊಡಂವಲ್ಲ ತನ್ನ ಒಡ್ದಲಕ್ಕೇ ಸಾಕಾಗಲ್ಲ ನಮಗೇನು ಕೊಡ್ತಾನ.’ ಇಂವಾ ಹಂಗೇನಾರೆ ಹೈದರಾಬಾದ್ ಗೆ ತಗೊಂಡು ಹೋಗಿ ಮಾರದರ ನಬೀಲಾಲ್ ಮರುದಿನಾನೆ ಅಷ್ಟೂ ಮಾವಿನ ಗಿಡ ಕಡದು ಮಾರೂ ಪೈಕಿ ಅನ್ನೂದು ಲಗಮವ್ವಗ ಗೊತ್ತಿತ್ತು. ಹಂಗಾಗಿ ಆವತ್ತು ಅಡೂಡಿಲೇ ಅಡಗಿ ಕೆಲಸಾ ಮುಗಿಸಿ ಸೀದಾ ನಬೀಲಾಲ್ ಮನಿಗಿ ಓಡದಳು. ಬಾಗಿಲ ಹೊರಗಿರೋ ದಢೂತಿ ಮನುಷ್ಯಾ ಯಾರು..ಏನು ಬೇಕಿತ್ತು ಅಂತೆಲ್ಲಾ ಕೇಳಿ ಒಳಗ ಬಿಟ್ಟಮ್ಯಾಲ ಹೆದರಕೊಂತ ನಡದಳು. ಅಲ್ಲೇ ಒಂದು ಬದಿ ಕೂಡಾಕ ಹೇಳದರು. ಅಲ್ಲಿ ನಿಂತವರೆಲ್ಲಾ ಇಕಿನ್ನ ಮಿಕಿ ಮಿಕಿ ನೋಡೂದು ಕಂಡು ಆಕಿಗೂ ತುಸು ಕಸಿವಿಸಿ ಅನಿಸಿತ್ತು. ಹಗೂರಕ ಸೀರಿ ಸೆರಗ ಮುಖಕ್ಕ ಸರಸಿಕೊಂಡಳು. ಅಷ್ಟರೊಳಗ ನಬೀಲಾಲ್ ಒಳಗಿಂದ ‘ಕೌನ ಆಯಾರೇ..’ ಅನ್ನುತ್ತಾ ಹೊರಗ ಬಂದ. ಅವನನ್ನ ನೋಡಿದ್ದೇ ಲಗಮವ್ವ ಎದ್ದು ನಿಂತು ‘ನಮಸ್ಕಾರಿ ಅಣ್ಣಾ’ ಅಂದಳು. ನಬೀಲಾಲ್ ಅವಳನ್ನ ದಿಟ್ಟಸ್ತಾ ‘ಕೂತ್ಗೊ ಕೂತ್ಗೂ.. ನೀ ನಮ್ಮ ಅಂಬಣ್ಣನ ಹೆಂಡತಿ ಅಲ್ಲಾ..?’
‘ ‘ಹೌದ್ರಿಯಣ್ಣಾ’
‘ಹೇಳವಾ ಏನಾಗಬೇಕು..’
‘ ನಮ್ಮ ಹಿರಿಯಾ ನಿಮ್ಮ ಹತ್ರ ಸಾಲಾ ತಗೊಂಡಾನಂತ ಗೊತ್ತಾಯ್ತು’
‘ ಹೌದು, ಏನೀಗ’
‘ ಮೊದಲ ನಿಮ್ಮ ತಮ್ಮೋರ ಬಳಿ ಇಸಗೊಂಡಿದ್ದರು. ಹೆಂಡತಿ.. ಮಕ್ಕಳು.. ಅಂತ ಒಂದೇ ಒಂದು ದಿನ ತಂದು ಹಾಕಿದ್ದಿಲ್ಲ. ಎಲ್ಲಾ ಒಯ್ದು ಬರೀ ಕುಡೀಲಾಕ ಬಡಿತಾನ’ ಅಂತ ಕಣ್ಣೀರ ಒರಸಾಕ ಸುರು ಮಾಡದಳು.
‘ನೋಡವಾ ಅದೆಲ್ಲಾ ನನಗ ಗೊತ್ತಿಲ್ಲ. ಈ ಗೋಳಿನ ಕತಿ ನನಗ ಬೇಕಾಗಿಲ್ಲ, ನಾ ಸಾಲಾ ಕೊಟ್ಟೀನಿ.. ಅಂವಾ ತಗೊಂಡಾನ ವಸೂಲಿ ಮಾಡ್ತೀನಿ ಅಷ್ಟೇ’
‘ ಅದೂ ನನಗೂ ಗೊತೈತಿ ಅದ್ಕೆ ನಿಮಗ ಒಂದು ಮಾತು ಹೇಳಿ ಹೋಗಮ್ಮು ಅಂತ ಬಂದೀನಿ. ಅಂವಗ ಯಾರೋ ಮಾವಿನ ಹಣ್ಣು ಹೈದರಾಬಾದ್ ಗೆ ಹೊಡದರ ಚಲೊ ರೇಟ್ ಸಿಗತೈತಿ ಅಂತ ಹೇಳದಂಗ ಐತಿ. ನಮ್ಮ ಓಣ್ಯಾಗಿರೋ ಡ್ರೈವರ್ ಚಂದಪ್ಪನ್ನ ಟ್ರಕ್ ಬಾಡಿಗೆ ಎಷ್ಟು ಅಂತ ಕೇಳತಿದ್ದ. ಅಂವಾ ಎಲ್ಲೇ ಮಾರದರೂ ಅಂವೇನು ನಮಗ ಒಂದೇ ಒಂದು ರೂಪಾಯಿ ಕೊಡೂ ಪೈಕಿಯಂತೂ ಅಲ್ಲ. ಕಡೀಕಿ ನಿಮ್ಮ ಸಾಲರೇ ತೀರಲಿ. ಇಟ್ಟಂತೂ ನಿಮ್ಮ ಮುಂದ ಹೇಳೀನಿ ನಾಳೆ ಮತ್ತಂವ ನಿಮ್ಮ ಸಾಲಾ ತೀರಸಲಿಲ್ಲಂದ್ರ ಗಿಡಾ ಮಾತ್ರ ಕಡಿಬ್ಯಾಡ್ರಿ’
‘ ಬಿಡವಾ ಇಟ್ಟು ಸಾಕು, ಅವನ ಕಡಿಂದ ಹೆಂಗ ಸಾಲಾ ಉಚ್ಚಬೇಕು ಅಂತ ನನಗೂ ಗೊತೈತಿ. ನೀ ಇಲ್ಲಿ ಬಂದದ್ದು ಯಾರಿಗೂ ಹೇಳಬ್ಯಾಡ ನಾ ಎಲ್ಲಾ ಬಸ್ತಾನಿ ಮಾಡ್ತೀನಿ’ ಅಂದದ್ದೇ ಲಗಮವ್ವ ತುಸು ಹಗುರಾಗಿ ನಬೀಲಾಲ್ ಗೆ ಕೈ ಮುಗದು ತಲಿ ಮ್ಯಾಲ ಸೆರಗ ಮುಚ್ಕೊಂಡು ಅಲ್ಲಿಂದ ನಡದಳು. ನಬೀಲಾಲ್ ಮುಂದ ಆ ಹೆಂಗಸು ಕಣ್ಣೀರು ತಗದಿದ್ದು ಅವನ ಎದಿಗಿ ತಟ್ಟದಂಗಿತ್ತು. ಇದೇ ಗಜ್ಜಿನೊಳಗ ಅಂಬಣ್ಣಗ ಒಂದು ಪಾಠಾ ಕಲಸಬೇಕು ಅಂತ ಅಂವಾ ತೀಮರ್ಾನ ಮಾಡದಂಗಿತ್ತು.
***
ಆ ದಿವಸ ಮುಂಜ ಮುಂಜಾನೆ ಅಂಬಣ್ಣ ನಬೀಲಾಲ್ ಮನಿ ಮುಂದ ಹಾಜರಾಗಿದ್ದ. ನಬೀಲಾಲ್ ದೂರದಿಂದಲೇ ಅವನನ್ನು ನೋಡಿ ಗೇಟಲ್ಲಿರೋ ಮನುಷ್ಯನಿಗೆ ಅವನ್ನ ಒಳ ಬಿಡುವಂತೆ ಸನ್ನೆ ಮಾಡಿದ. ಅಂಬಣ್ಣ ಹಗೂರಕ ಬಂದು ಕೈ ಕಟ್ಟಿ ಅವನ ಎದುರಲ್ಲಿ ನಿಂತ. ಅವನ ಪಕ್ಕದಲ್ಲಿ ಇನ್ನೊಬ್ಬ ಆಸಾಮಿ ನಿಂತಿದ್ದ. ಅವನಿಗೆ ನಬೀಲಾಲ್ ವಾನರ್ಿಂಗ್ ಮಾಡತಿದ್ದ. ‘ನಾ ನಿನಗ ಮೊದಲೇ ಹೇಳೀನಿ ವಾಯ್ದೆ ಮೀರದರ ನಾ ಕೇಳೂದಿಲ್ಲ, ಅದೂ ಅಲ್ದೆ ನನಗೆ ಸುಳ್ಳು ಹೇಳವರನ್ನ ಕಂಡರೆ ಆಗಲ್ಲ’ ಅನ್ನುತ್ತಲೇ ಅಂಬಣ್ಣನ ಕಡಿ ವ್ಯಂಗ್ಯವಾಗಿ ನೋಡದ. ಅಂವಾ ಹೈರಾಣಾಗಿ ಉಗುಳು ನುಂಗುತ್ತಿದ್ದ. ‘ನಿನಗ ಇನ್ನೊಂದು ಮೌಕಾ ಕೊಡತೀನಿ ವಾರದೊಳಗ ನನ್ನ ರೊಕ್ಕ ನನಗ ಬೇಕು ಇಲ್ಲಾಂದ್ರ ನಾ ಮಾತಾಡಲ್ಲ, ನಮ್ಮ ಹುಡುಗರು ಮಾತಾಡ್ತಾರ ನೀ ನಡಿ ಇನ್ನ. ಬಾರೋ ಅಂಬಣ್ಣ ಏನು ಮುಂಜಾನೆನೇ ಬಂದೀಯಲ್ಲ..?’
‘ ಏನಿಲ್ಲ ಸಾಯೆಬರ ತುಸು ದುಡ್ದು ಬೇಕಿತ್ತು’
‘ಎಷ್ಟು ಬೇಕಿತ್ತು..?’ ತುಸು ಅಳಕುತ್ತಲೇ
‘ ಎರಡು.. ಸಾವಿರ’
‘ ಅಷ್ಟೆದಕೊ..’
‘ ಗಿಡಾ ಇಳವಬೇಕಂತ ಮಾಡೀನ್ರಿ’
‘ ಓ ಹಂಗಾ..? ಇಳವು ಇಳವು.. ಹಂಗೇ ನೀ ಮಾತ ಕೊಟ್ಟಿದ್ದೂ ನೆನಪಿರಲಿ’
‘ ಒಂದೇ ಒಂದು ವಾರ ತಡೀರಿ..’ ಅಂದಾಗಲೇ ನಬೀಲಾಲ್ ಗೆ ಅವನ ಹೆಂಡತಿ ಹೇಳಿದ್ದು ಖಾತ್ರಿ ಆಯ್ತು. ಕಿಸೆಯಿಂದ ತಗದು ಎರಡು ಸಾವಿರ ರೂಪಾಯಿ ಎಣಿಸಿ ಅವನ ಕೈಗಿಟ್ಟ. ಅಂಬಣ್ಣ ಅವಸರದಿಂದ ರೊಕ್ಕ ಕಿಸೆಗಿಳಿಸಿ ತನ್ನ ಕೈಯೊಳಗಿನ ಚೀಲದೊಳಗಿರೋ ನಾಕೈದು ಪಾಡಗಾಯಿ ಹಣ್ಣನ್ನು ಅವನ ಮುಂದಿಟ್ಟು,
‘ನಾ ಬತರ್ೀನ್ರಿ ಸಾಹುಕಾರ್ರೆ’ ಅಂತ ನಡದ. ಆ ಪಾಡುಗಾಯಿ ವಾಸನೆ ನೋಡುತ್ತ ಅವನು ಹೋದ ದಾರಿಯನ್ನೇ ನೋಡುತ್ತಿದ್ದ ನಬೀಲಾಲ್ ಗೇಟ್ ಬಳಿ ಇರೋ ಮನುಷ್ಯನಿಗೆ ‘ಮನೆಯಲ್ಲಿ ಬಾಬು ಅದಾನೋ ಹೆಂಗೋ ನೊಡು ಇದ್ದರೆ ನಿಮ್ಮ ಅಣ್ಣೊರು ಕರಿಯಾಕತ್ತಾರ ಬಾ ಅಂತ ಹೇಳು’ ಅಂದದ್ದೇ ಆ ಗೇಟ್ ಕಾಯೋ ಮನುಷ್ಯ ಓಡುತ್ತ ಹೋದವನು ಮರಳಿ ಬಂದು ‘ಬಾಯಿ ಜಾನ್ ಈಗ ಹೊರಗ ಹೋದರಂತೆ ಬಂದಕೊಡಲೇ ಹೇಳ್ತೀನಿ ಅಂದರು ಬಾಬಿ.’ ನಬೀಲಾಲ್ ಆರಾಮ ಖುಚರ್ಿಯ ಮೇಲೆ ಕುಳಿತು ಕಣ್ಣು ಮುಚ್ಚಿ ಅಂಬಣ್ಣ ಕೊಟ್ಟಿದ್ದ ಪಾಡಗಾಯಿ ಒಂದನ್ನು ಕೈಯಲ್ಲಿ ಹಿಡಿದು ಮೂಸುತ್ತಾ ಏನನ್ನೋ ಆಳವಾಗಿ ಯೋಚನೆ ಮಾಡುತ್ತಿರುವಂತಿತ್ತು. ಅವನ ಹೆಂಡತಿ ಮಾತು.. ಕಣ್ಣೀರು ಮತ್ತೆ ಮತ್ತೆ ಕಣ್ಣಿಗಿ ಕಟ್ಟದಂಗಿತ್ತು. ಹಂಗೇ ಇಂವಾ ಸಾಲಾ ತಗೋಳುವಾಗ ಮಕ್ಕಳು ಉಪ್ಪಾಸ ಬಿದ್ದಾವ ಅಂತ ಹೇಳಿದ್ದು, ಕೈಕಾಲು ಹಿಡದು ಗೋಳಾಡಿದ್ದೂ ಎಲ್ಲಾ ನೆನಪಿತ್ತು. ಅಂಬಣ್ಣ ಕತ್ತರಕಿ ಊರ ತುಂಬಾ ತಿರುಗಾಡಿ ನೂರಾರು ಹಳೀ ಚೀಲಗಳನ್ನ ಕೂಡಿ ಹಾಕಿದ. ಸೋಮವಾರ ದಿನ ಗಿಡ ಇಳುವಬೇಕು ಅಂತ ತೀಮರ್ಾನಿಸಿದ್ದ. ಅದರ ಹಿಂದಿನ ರಾತ್ರಿ ಆತ ವಿಪರೀತ ಕುಡಿದಿದ್ದ. ದಿನಕ್ಕಿಂತಲೂ ತುಸು ಜಾಸ್ತಿಯೇ.. ಒಬ್ಬನೇ ಏನೆನೋ ವಟಗುಡುತ್ತಿದ್ದ. ‘ ನಸ್ನ ಹಣ್ಣು.. ನನ್ನ ಗಿಡ.. ಯಾವ ಬೋಳಿಮಗಂದು ಏನಿದೆ..? ನಾನು ಎಲ್ಲಿ ಬೇಕಾದಲ್ಲಿ ಮಾತರ್ೇನೆ ಕೇಳಲಿಕ್ಕೆ ಅವನ್ಯಾರು..?’ ಅದೂ ಇದೂ ಅಂತ ಚೀರಾಡಿ ಊಟಾ ಮಾಡದೇ ರೊಟ್ಟಿ ಬುತ್ತಿಯ ಮೇಲೆಯೇ ಅಂಗಾತ ಮಲಗಿಬಿಟ್ಟಿದ್ದ.
***
ಸೋಮವಾರ ಬೆಳ್ಳಂಬೆಳಿಗ್ಗೆ ಎದ್ದವನೇ ಗಿಡದ ಬುಡಕಿನ ಕಸಾ ಹೊಡದು, ಧೂಳ ಅಡರಲಾರದಂಗ ತುಸು ನೀರ ಚಿಮಕಿಸಿ ಹೊಲದಾಗಿರೋ ಒಣ ಕಡ್ಡಾ ತಗೊಂಡು ಬಂದು ಅಲ್ಲೇ ಗುಂಡಕ ಸುರುವದ. ಮಾವಿನ ಕಾಯಿ ಇಳವೂ ಮುಂದ ನೆಲಕ್ಕ ಬಿದ್ದರ ಮುಗೀತು ಆ ಕಾಯಿ ಹಾಳ ಆದಂಗೇ.. ಹಂಗಾಗೇ ಗಿಡಾ ಇಳವೂ ಮುಂದ ಮೂನರ್ಾಲ್ಕು ಜನ ಬರೀ ಜೋಳದ ಚೀಲದಿಂದ ಕಾಯಿ ಹೊಡಿಯಾಕೇ ಬೇಕಿತ್ತು. ಲಗಮವ್ವ ಬರ್ತೀನಿ ಅಂದರೂ ಇಂವಾ ಬ್ಯಾಡ ನಾ ಎಲ್ಲಾ ಮಾಡ್ಕೋತಿನಿ ಅಂತ ಎರಡು ಮೂರು ಆಳು ಹೇಳಿದ್ದ. ಆ ಆಳುಗಳು ಬರೋ ಮಟ ಒಂದು ಬೀಡಿ ಜಗ್ಗಿ ನ್ಯಾರಿ ರೊಟ್ಟಿ ಕಟದು, ಗಿಡಾ ಇಳವಾಕ ಸಜ್ಜಾಗಿದ್ದ. ಅಷ್ಟರೊಳಗ ಗಿಡಾ ಇಳವೋ ಕೊಯ್ತಾ ತಗೊಂಡು ಆಳುಗಳು ಹಾಜರ್ ಆದರು. ಮತ್ತ ತಡ ಮಾಡ್ತಾ ಕುಂತರ ಕೆಲಸ ಆಗಲ್ಲ ಮೊದಲೇ ಕೆಟ್ಟ ಬಿಸಲು, ಹೊತ್ತ ನೆತ್ತಿಗಿ ಏರೂದರೊಳಗ ಎರಡು ಮೂರು ಗಿಡಾ ಮುಗದರ ಮಧ್ಯಾಹ್ನ ಊಟಾ ಮುಗದಿಂದ ಉಳಿದದ್ದು ಅಂತ ಲೆಕ್ಕಾ ಹಾಕಿ ಅವರನ್ನ ಗಿಡಕ್ಕ ಹತ್ತಿಸಿದ್ದ. ಇಬ್ಬರು ಒಂದೇ ಗಿಡ ಹತ್ತವರಿದ್ದರು. ಅಂಬಣ್ಣ ‘ಹಂಗ ಮ್ಯಾಡಬ್ಯಾಡ್ರಿ ಅದರ ಬದಲೀ ನೀ ಒಂದು ಗಿಡಾ ಹತ್ತು ಅಂವಾ ಒಂದು ಗಿಡಾ ಹತ್ತಲಿ’ ಅಂತ ಹೇಳಿ ಹತ್ತಸಿದ್ದ. ಸಂಜೀ ಮಟ ಬರೀ ಕಾಯಿ ಹರಿಯೂದೇ ಆಯ್ತು ಹೆಚ್ಚೂ ಕಮ್ಮಿ ಒಂದಿಪ್ಪತ್ತು ಚೀಲ ಕಾಯಿ ಹೊಂಟಂಗಾಯ್ತು. ಅವತ್ತೇ ರಾತ್ರಿ ಅವನ್ನ ಮಿನಿ ಲಾರಿಯೊಳಗ ಹೇರಿ ಹೈದರಬಾದ್ ಗೆ ನಡದೇ ಬಿಟ್ಟ. ನಬಿಲಾಲ್ ಗೆ ಅಂಬಣ್ಣ ಗಿಡಾ ಇಳವಿದ್ದು, ತುಂಬಿದ್ದು ಹೈದರಾಬಾದಕ್ಕ ನಡದಿದ್ದು ಎಲ್ಲಾ ಗೊತ್ತಿತ್ತು.
ಆದರ ಅಂವಗ ಏನೂ ಹೇಳಾಕ ಹೋಗಲಿಲ್ಲ. ಮಾವಿನ ಹಣ್ಣನ್ನ ಯಾರೂ ಮೂಸಿ ನೋಡವರಿಲ್ಲ ಆಪೂಸದಂಥಾ ಮಾವಿನಹಣ್ಣೇ ಕೇಳವರು ಗತಿ ಇಲ್ಲ ಇನ್ನ ಈ ಜವಾರಿ ಹಣ್ಣ ಯಾರು ಕೇಳ್ತಾರ ಅವನಿಗಿ ಟ್ರಕ್ ತಗೊಂಡು ಹೋಗಿರೋ ಕೂಲಿ ಆಗಲ್ಲ ಅನ್ನೂದು ನಬೀಲಾಲ್ ಗೆ ಗೊತ್ತಿತ್ತು. ನಮ್ಮ ದೇಶದಿಂದ ವಿದೆಶಕ್ಕ ಹೋಗೋ ಹಣ್ಣೆಲ್ಲಾ ಅಲ್ಲಿಂದ ಬ್ಯಾಡಂತ ತಿರುಗಿ ಬರಾಕ ಸುರು ಆಗಿತ್ತು. ದುಡ್ದಿನ ಆಸೇಕ ಬಿದ್ದು ಕೆಮಿಕಲ್ ಹಾಕಿ ಎಳಿಗಾಯಿನೇ ಹಣ್ಣ ಮಾಡದರ ಅವರರೇ ಹ್ಯಾಂಗ ತಗೋತಾರ.. ಇಂಥಾ ಯಾಪಾರದಾಗ ನಬಿಲಾಲ್ ನೇ ಖುದ್ದಾಗಿ ಲಕ್ಷಾನುಗಟ್ಟಲೆ ಲಾಸ್ ಅನುಭವಿಸಿದ್ದ. ಅದನ್ನ ಈ ಅಂಬಣ್ಣಂಥವರಿಗಿ ಎಲ್ಲಿ ತಿಳೀಬೇಕು. ಹೈದರಾಬಾದ್ ಸುತ್ತ ಮುತ್ತ ಇರೋ ಜ್ಯೂಸ್ ಫé್ಯಾಕ್ಟರಿಯವರು ಸೈತ ಮಾವಿನ ಹಣ್ಣು ಖರೀದಿ ಮಾಡೂದು ಬಿಟ್ಟು ಇರೋ ಸ್ಟಾಕನ್ನ ಕ್ಲೀಯರ್ ಮಾಡೋ ಭರಾಟೆಯೊಳಗಿದ್ದರು. ಅಂಥಾದರೊಳಗ ಇಡೀ ಗಾಡಿಗೆ ಐದು ಸಾವಿರ ರೂಪಾಯಿ ಸಿಕ್ಕರ ಪುಣ್ಯ ಅನ್ನೂವಂಗಿತ್ತು. ಇಂವಾ ಮಿನಿ ಟ್ರಕ್ಕಿನೊಳಗ ಕನಸ ಕಾಣತಾ ಮಲಗಿದ್ದ. ಇವನ ಗಾಡಿಗಿ ಮುಗಿಬಿದ್ದ ದಲ್ಲಾಳಿಗಳು, ತಾನು ಹೇಳಿದ ರೇಟಿಗೆ ತಗೋಬೇಕು ಅನ್ನೋ ಕಂಡೀಶನ್, ನೀವು ಹ್ಯಾಂಗ ಅಂತೀರಿ ಹಂಗ ಅನ್ನೋ ದಲ್ಲಾಳಿಗಳು, ಕೈತುಂಬಾ ಸಾವಿರ ರೂಪಾಯಿನ ಪೆಂಡಿ ಪೆಂಡಿ ನೋಟುಗಳು. ಟ್ರಕ್ ಬಾಡಿಗೆ, ಸಾಲಾ ಎಲ್ಲಾ ಹರದು ಕಿಸೆದೊಳಗ ಇಪ್ಪತ್ತು ಸಾವಿರ ರೂಪಾಯಿ. ಬಿಜಾಪೂರದ ಮಲ್ಲಿಗೆ ಲಾಜಿಂಗ್ನೊಳಗ ಒಂದು ರೂಮ ಮಾಡಿ ತಿಂಗಳಾನುಗಟ್ಟಲೇ ಮಜಾ ಹೊಡಿಯೋ ಕನಸಿನಲ್ಲಿದ್ದವನಿಗೆ ಹೈದರಾಬಾದ್ ಬಂದದ್ದೇ ತಟ್ಟಂತ ಎದ್ದು ಕುಳಿತ. ಚಂದಪ್ಪ ಗಾಡಿ ಸೀದಾ ಮಾವಿನ ಹಣ್ಣಿನ ಮಾಕರ್ೇಟ್ ಗೆ ಹೊಡದ. ಅಲ್ಲಿ ಇಂಥಾ ನೂರಾರು ಗಾಡಿಗಳು ನಿಂತಿದ್ದವು. ಇದರೊಳಗ ತನ್ನ ಪಾಳಿ ಯಾವಾಗ ಬರತೈತೋ ಏನೋ.. ಅನ್ಕೊಂತ ಚಂದಪ್ಪನ್ನ ಕರಕೊಂಡು ಚಾ.. ತಿಂಡಿ ತಿಂದು ಗಟ್ಟಿ ಆಗಿ ಕುಂತರು. ಅಷ್ಟರೊಳಗ ಒಬ್ಬ ಕೆಲಸದವನು ಬಂದು ದಲಾಳಿ ಅಂಗಡಿ ಮುಂದ ಕಸಾ ಹೊಡಿಯಾಕ ಸುರು ಮಾಡದ. ಚಂದಪ್ಪ ಅವನನ್ನ ‘ಮಾಲಕರು ಎಷ್ಟಕ್ಕ ಬತರ್ಾರ..?’ ಅಂತ ಕೇಳದ. ಅವನು ‘ಹತ್ತು ಘಂಟೆಗೆ ಬತರ್ಾರ ಏನು ಮಾವಿನ ಕಾಯಿ ತಂದೀರೆನೂ..?’
‘ಹೌದೌದು’
‘ ಅವನ್ಯಾಕ ತಂದೀರಿ.. ಮಾವಿನ ಕಾಯಿ ಯಾರೂ ಮೂಸಿ ನೋಡೂವಂಗಿಲ್ಲ ಹಂಗಾಗೈತಿ’ ಗಾಭರಿಯಿಂದ ಚಂದಪ್ಪ
‘ಅದ್ಯಾಕ..?’
‘ ಫéಾರೆನ್ ಲ್ಲಿ ನಮ್ಮ ದೇಶದ ಜನ ಮಾವಿನ ಹಣ್ಣಿಗೆ ಪುಡಿ ಹಾಕ್ತಾರ ಅಂತ ಮಾವಿನ ಹಣ್ಣಿನ ಮ್ಯಾಲ ನಿಷೇಧ ಹಾಕ್ಯಾರಂತ ಹಿಂಗಾಗಿ ಮಾವಿನ ಹಣ್ಣಿನ ರೇಟ ಪೂರಾ ನೆಲಕ್ಕ ಬಿದ್ದಂಗ ಆಗೈತಿ. ಬರೀ ಮಾವಿನ ಹಣ್ಣಲ್ಲ ದ್ರಾಕ್ಷಿ.. ದಾಳಿಂಬರ ಹಣ್ಣದು ಇದೇ ಕತಿ ಆಗೈತಿ’
ಅವನ ಮಾತು ಕೇಳಿ ಚಂದಪ್ಪ ಮತ್ತ ಅಂಬಣ್ಣಗ ಟುಕು ಟುಕು ಸುರು ಆಯ್ತು. ಅಂವಾ ‘ಸುಮ್ಮ ನಿಮ್ಮ ಗಾಡಿ ಹೊಳ್ಳಿಸಿ ಊರಿಗಿ ತಗೋಂಡು ಹೋಗರಿ ಜವಾರಿ ಹಣ್ಣಂತೂ ಇಲ್ಲಿ ಯಾರೂ ಕೇಳವರಿಲ್ಲ ಅಲ್ನೊಡ್ರಿ’ ಅಂತ ಹಿಂದಿನ ದಿನ ಗಟಾರ ಬಾಜೂ ಸುರವಿ ಹೋಗಿದ್ದ ಮಾವಿನ ಕಾಯಿ ತೋರಸದ. ಚಂದಪ್ಪ ಮತ್ತ ಅಂಬಣ್ಣ ಇಬ್ಬರ ಬಾಯಿ ಏಕದಮ್ ಒಣಗದಂಗ ಆಯ್ತು. ಚಂದಪ್ಪಗ ತನ್ನ ಗಾಡಿ ಬಾಡಗಿನೂ ಬರೂದಿಲ್ಲ ಅಂತ ಖಾತ್ರಿ ಆಯ್ತು. ಸುಮ್ಮ ಊರಿಗಿ ಹೋಗೂದು ಚಲೊ ಹ್ಯಾಂಗೂ ನಬೀಲಾಲ್ ಗ ತಾವು ಹೈದರಾಬಾದಿಗೆ ಬಂದಿದ್ದು ಗೊತ್ತಿಲ್ಲ. ಅದೂ ಅಲ್ಲದೇ ಫéಾರೆನ್ ದೊಳಗ ನಮ್ಮ ಹಣ್ಣ ತಗೊತಾಯಿಲ್ಲ ಅಂತ ಅಂವಗ ಗೊತ್ತಿಲ್ಲ ಲಗೂನೇ ಹೋಗಿ ಈ ಲೋಡ ಅವನ ಮನಿ ಮುಂದ ಇಳಸೂದು ಚಲೊ ಅಂತ ಇಬ್ಬರೂ ಲೆಕ್ಕಾ ಹಾಕಿ ಗಾಡಿ ಹೊಳ್ಳಸೇಬಿಟ್ಟರು. ಸಂಜಿ ಅನೂತಲೇ ಊರ ಮುಟ್ಟದರು ಗಾಡಿ ಸೀದಾ ನಬೀಲಾಲ್ ಮನಿ ಮುಂದ ಬಂದು ನಿಂತತು. ನಬಿಲಾಲ್ ಗೆ ಇಂವಾ ಬಂದೇ ಬತರ್ಾನ ಅಂತ ಗೊತ್ತಿತ್ತು. ಹೈದರಾಬಾದ್ ಒಂದೇ ಅಲ್ಲ ಪೂನಾ, ಕೊಲ್ಹಾಪುರ, ನಾಸಿಕ್ ಎಲ್ಲಾ ಕಡಿ ಮಾಕರ್ೆಟ್ ಹ್ಯಾಂಗ ಐತಿ ಅನ್ನೂದು ಅಂವಗ ಗೊತ್ತಿತ್ತು. ಹಂಗಾಗಿ ಅವನ ಗಾಡಿ ಬಂದು ಅಲ್ಲಿ ನಿಂತಿದ್ದು ನೋಡಿಯೂ ಅಂವಾ ನೋಡದಂಗಿದ್ದ. ಅಂಬಣ್ಣ ಅವನ ಸನ್ಯಾಕ ಬಂದು ‘ಸಾಹುಕಾರೆ ನಿಮಗ ಮಾತು ಕೊಟ್ಟಂಗ ಗಾಡಿ ತಂದು ನಿಲ್ಲಸೀನಿ.’ ಅಂದಾಗ ನಬಿಲಾಲ್ ಅವನ್ನ ಸಿಟ್ಟೀಲೇ ನೋಡತಾ ‘ ನೀ ಹೈದರಾಬಾದಗೆ ತಗೊಂಡು ಹೋಗಿದ್ದು ನನಗ ಗೊತ್ತಿಲ್ಲಂತ ಮಾಡಿಯನೂ..?’ ಅನ್ನೂದರೊಳಗೇ ಅಂಬಣ್ಣ ಬೆವರಿ ನೀರ ನೀರಾಗಿದ್ದ. ‘ತಪ್ಪಾಯ್ತು ಸಾಹುಕಾರೆ ದುಡ್ದಿನ ಆಸೇಕ ಹಂಗ ಮಾಡದೆ.ಇನ್ನೊಮ್ಮ ಹಿಂಗ ಆಗಲ್ಲ’
‘ಇಷ್ಟರ ಮ್ಯಾಲೂ ನಾ ನಿನಗ ನಂಬ್ತೀನಿ ಅಂತಿಯನೂ..?’
‘ ಬ್ಯಾರೆ ಏನಿಲ್ಲರೀ ಬಾಜೂ ಹೊಲದ ಸಿದ್ರಾಮ ಹೇಳದ ಅಂತ..’
‘ ಆಯ್ತು ಈಗ ಆ ಸಿದ್ರಾಮಗೇ ನಿನ್ನ ಕಾಯಿ ಮಾರು, ನನ್ನ ಸಾಲಾ ತಂದು ಕೊಡು’
‘ ಹಂಗ ಅನಬ್ಯಾಡ್ರಿ ತಪ್ಪಾಯ್ತು’
‘ ನಿನಗ ಮಾವಿನ ಹಣ್ಣಿನ ಕತಿ ಗೊತೈತೋ ಇಲ್ಲೋ..?’
‘ ಗೊತ್ತಿಲ್ಲರಿ..’
‘ ಹೈದರಾಬಾದ್ ಲ್ಲಿ ಯಾರೂ ಹೇಳಿಲ್ಲನೂ..’
‘ ಹೇಳದರು ಆದರ ನನಗ ತಿಳೀಲಿಲ್ಲ.’
‘ ನಮ್ಮ ದೇಶದಿಂದ ವರ್ಷ ಹಣ್ಣ ಹೊರಗ ಹೋಗತಿತ್ತು. ಈಗವರು ಬ್ಯಾಡ ಅಂದಾರ ಹಿಂಗಾಗಿ ಇಲ್ಲೇ ರಾಶಿ ರಾಶಿ ಹಣ್ಣು ಕೊಳಿಯಾಕತೈತಿ. ಆಪೂಸ್, ಕಲಮಿ, ಮಲ್ಲಿಗೆಯಂಥಾ ಥಳಿನೇ ಯಾರೂ ಕೇಳಾಕತ್ತಿಲ್ಲ ಅಂಥದರೊಳಗ ನಿನ್ನ ಜವಾರಿ ಹಣ್ಣ ಯಾರೂ ಹೊಳ್ಳಿ ನೋಡಲ್ಲ..’
‘ ಹಂಗ ಅನಬ್ಯಾಡ್ರಿ ಸಾಹೇಬರ’
‘ ನಿನಗ ಹೈದರಾಬಾದದಲ್ಲಿ ಹೇಳಿರಬೇಕಲ್ಲ..?’
‘ಹೌದರಿ ಹೇಳದರು’
‘ಅಂದ ಮ್ಯಾಲ ಈಗ ನಾ ಕೊಟ್ಟಷ್ಟೆ ನೀ ತಗೋಬೇಕು, ಹಂಗಂದ್ರ ಮಾಲ್ ಇಳುವು ಇಲ್ಲಾಂದ್ರ ಬ್ಯಾಡ’
‘ ನೀವು ಹ್ಯಾಂಗ ಅಂತೀರಿ ಹಂಗ..’
‘ ನಾ ನಿನಗ ಸಾಲಾ ಕೊಟ್ಟಿದ್ದೇ ಇಲ್ಲೀಮಟ ಐದು ಸಾವಿರ ರೂಪಾಯಿ, ನಮ್ಮ ತಮ್ಮ ಕೊಟ್ಟಿದ್ದು ಒಂದೆರಡು ಸಾವಿರ ಹೆಚ್ಚೂ ಕಮ್ಮಿ ಏಳು ಸಾವಿರ ಐತು. ನಿನ್ನ ಹಣ್ಣಿಂದು ಐದು ಸಾವಿರ ತಗದು ಎರಡು ಸಾವಿರ ರೂಪಾಯಿ ನೀನೇ ಕೊಡಬೇಕು.. ಇಲ್ಲಾಂದ್ರ ನಾ ಬಿಡೂದಿಲ್ಲ.’
‘ ಹಂಗಂದ್ರ ಹ್ಯಾಂಗ್ರಿ..ನನಗೂ ಮಕ್ಕಳು ಮರಿ ಅದಾವ..’
‘ಸಾಕು.. ಸಾಕು.. ನನಗೆಲ್ಲಾ ಗೊತೈತಿ’
‘ ಹುಂ ಅಂದರ ಇಳಸು ಇಲ್ಲಾಂದ್ರ ನಡಿ.. ನಾಳೆ ನನ್ನ ರೊಕ್ಕಾ ತಂದು ಕೊಡು’
‘ ನಾ ಎಲ್ಲಿಂದ ಕೊಡ್ಲಿ ನೀವೇ ಹೇಳ್ರಿ’
‘ ಹಂಗಂದ್ರ ಹ್ಯಾಂಗೊ..ಇಸಗೊಳ್ಳುವಾಗ ತಿಳಿಲಿಲ್ಲನೂ..?’ ತಲಿ ತುರಸ್ತಾ ನಿಂತ.
‘ಸಾಯೇಬರ ಆ ಗಾಡಿಯವನಿಗಿ ರೊಕ್ಕ ಕೊಡಬೇಕು..’
‘ಕೊಡು ಯಾರು ಬ್ಯಾಡ ಅಂದರು’ ಮುಖ ಕೆಳಗ ಮಾಡಿ ಹಲ್ಲ ಗಿಂಜತಾ ನಿಂತ.
‘ಅವೆಲ್ಲಾ ಬ್ಯಾಡ.. ಮೊದಲು ಮಾಲ್ ಇಳವು ಆಮ್ಯಾಗ ಅದೆಲ್ಲಾ’ ಮಾವಿನ ಕಾಯಿ ಇಳವಿ ಕೈ ಕಟಗೊಂಡು ಅವನ ಮುಂದ ನಿಂತ.
‘ನೋಡು ಅಂಬಣ್ಣ ನಿನ್ನ ಸಾಲಾ ತೀರಾಕ ಇನ್ನಾ ಎರಡು ಸಾವಿರ ನೀನೇ ಕೊಡಬೇಕು, ಗಾಡೀ ಬಾಡಿಗಿನೂ ಎರಡು ಸಾವಿರ ರೂಪಾಯಿ ಕೊಡ್ತೀನಿ ಆದ್ರ ಸಾಲಾ ಮುಟ್ಟೂಮಟ ಇಲ್ಲೇ ನನ್ನ ಮನ್ಯಾಗೇ ಕೆಲಸಾ ಮಾಡು’ ಅಂದ. ಅಂಬಣ್ಣಗ ಏನು ಮಾತಾಡೂದು ಅಂತ ತಿಳಿದಂಗ ಆಯ್ತು. ಆಗಲ್ಲ ಅನ್ನುವಂಗೂ ಇಲ್ಲ. ಮೈ ಬಗ್ಗಿಸಿ ಇಂವಾ ಎಂದೂ ಕೆಲಸಾ ಮಾಡದವನಲ್ಲ. ಆದರ ಈಗ ಮಾಡಲೇಬೇಕಾಗಿತ್ತು. ಇಲ್ಲಾಂದಾರ ನಡಿಯುವಂಗಿಲ್ಲ. ನಬೀಲಾಲ್ ಹೇಳದ ಮ್ಯಾಲ ಮುಗೀತು ಹುಂ ಅನ್ಲೇಬೇಕು. ಅದಕ್ಕಿಂತಾ ದೊಡ್ಡ ಕಷ್ಟ ಕುಡಿಯೋದನ್ನ ಬಿಡೋದು. ಯಾಕಂದರ ಅವನ ಮನ್ಯಾಗ ಕೆಲಸ ಮಾಡೊ ಯಾರೇ ಆಗಲಿ ಕುಡಿಯೂವಂಗಿಲ್ಲ. ಅಟ್ಟೂ ಮೀರಿ ಮಾತು ಮೀರಿ ಕುಡದು ಬಂದರ, ಅವರನ್ನ ಹೊರಗ ನಿಲ್ಲಿಸಿ ಅಂಗಿ ಕಳಿಸಿ ನೆತ್ತಿ ಮ್ಯಾಲ ದಬದಬ ಅಂತ ಎರಡು ಕೊಡಾ ತಣ್ಣೀರು ಸುರವಿ ಬಿಡತಿದ್ದ. ಆ ಕುಡುಕ ಪ್ರಾಣಿ ಅಲ್ಲೇ ಬಿದ್ಕೊಂಡು ಗಡಗಡ ಅಂತ ನಡಗೋದನ್ನ ಅಂಬಣ್ಣ ಕಣ್ಣಾರೆ ನೋಡಿ ತಣ್ಣಗಾಗಿದ್ದ. ನಬಿಲಾಲ್ ಮುಂದ ಕಂಯಕ್ ಅನ್ನೂವಂಗಿಲ್ಲ ಹ್ಯಾಗಿಯಂಗ ಮಾತಾಡದರ ಹೆಡಕೇ ಮುರಿಯೂಪೈಕಿ. ಆ ಮನಿಯೊಳಗಿನ ವಾತಾವರಣ ಅಂವಗ ಎಲ್ಲಾ ಕಲಿಸಿಕೊಟ್ತು. ನಬೀಲಾಲ್ ಮನಿಯೊಳಗ ಕೆಲಸಾ ಮಾಡ್ತಾ ಮಾಡ್ತಾ ಅಂಬಣ್ಣ ಬದಲ್ ಆಗಿ ಬಿಟ್ಟ. ಈಗ ಅಂವಾ ಮೊದಲಿನಂಗ ಕುಡೀಲೇಬೇಕು ಅಂತಿಲ್ಲ. ಐತವಾರಕ್ಕೊಮ್ಮ ಮನಿಗಿ ಹೋಗತಿದ್ದ ಆವಾಗಷ್ಟೇ ಕುಡಿತಿದ್ದ. ಕುಡದು ಮೊದಲಿನಂಗ ಬೆಳ್ಳಬೆಳತನ ಒದರಂಗಿಲ್ಲ. ಮುಕುಳಿ ಡಬ್ ಹಾಕೊಂಡು ಸುಮ್ಮ ಬೀಳತಿದ್ದ. ಈ ಪರಿ ಅಂವಾ ಬದಲಾಗಿದ್ದು, ದುಡಿಯೂದು, ಮಕ್ಕಳ ಜೋಡಿ ಚೆಂದಾಗಿ ನಾಕು ಮಾತಾಡೂದು ನೋಡಿ, ಕೇಳಿ ಹೆಂಡತಿ ಲಗಮವ್ವ ಕಂಡಾಪಟ್ಟೆ ಖುಷಿ ಆಗಿದ್ದಳು. ಅಂವಾ ಐತವಾರ ಮನಿಗಿ ಬರ್ತಾನ ಅಂತ ಅಂವಗ ಬಾಳ ಪಸಂದ್ ಆಗಿರೋ ಎಣ್ಣಿಗಾಯಿ ಪಲ್ಲೆ ಮತ್ತ ಬಿಸಿ ಬಿಸಿ ಜೋಳದ ರೊಟ್ಟಿ ಮಾಡಿ ಹಾಕತಿದ್ದಳು. ಐತವಾರ ದಿನ ಮನಿಯೊಳಗ ಒಡಕಟಿಗಿ ಒಡದು, ಮನಿಗಿ ಏನು ಬೇಕು ಅಂತೆಲ್ಲಾ ಕೇಳಿ ತಿರುಗಾಡಿ ತಂದು ಕೊಡತಿದ್ದ. ಆರೇ ತಿಂಗಳದೊಳಗ ಕುಡುಕ ಅಂಬಣ್ಣ ಅಂಬೋನು ಈ ಪರಿ ಬದಲಾಗಿದ್ದ. ಬರೀ ಅಂವಾ ಮಾತ್ರ ಅಲ್ಲ, ಅವನ ಜೋಡಿ ಅವನ ಹೆಂಡತಿ, ಮಕ್ಕಳು, ನೆರೆಹೊರೆ ಸೈತಾ ಬದಲಾಗಿತ್ತು. ಹೀಂಗ ಬದಲ್ ಆಗಿರೋ ಅಂಬಣ್ಣ ಆವತ್ತು ಬದಾಮಿ ಅಮವಾಷ್ಯಿ ದಿನ ಚೌಡಮ್ಮನ ಬಾಳ ಬಟ್ಟಲ ನೋಡಿ ಬರ್ತೀನಿ ಅಂತ ಹೇಳಿ ಹೋದಂವ, ಹತ್ತು ವರ್ಷ ಮ್ಯಾಲ ಐತು ಹೊಳ್ಳಿ ಬರಲೇ ಇಲ್ಲ. ಅಂವಾ ಹೋದ ದಾರಿನೇ ಅವನ್ನ ನುಂಗಿಬಿಟ್ಟಂಗಿತ್ತು.






0 Comments