ಇತಿಹಾಸ ಮರೆತವನು ಭವಿಷ್ಯ ಸೃಷ್ಟಿಸಲಾರ..

ಆತ್ಮಾವಲೋಕನ

ಮಹೇಶ್ ದೇಶಪಾಂಡೆ

ಯಾವಾಗಲೂ ನಾವು ಮೇಲಿರಲು ಬಯಸುತ್ತೇವೆ. ನಮ್ಮ ಸುತ್ತಲಿದ್ದವರು ತಮ್ಮ ತಲೆ ಎತ್ತಿ ನೋಡಲೆಂದು ಆಶಿಸುತ್ತೇವೆ. ಆದರೆ ಯಾವಾಗಲೂ ಮೇಲಿರುವವರು ಕೆಳಗೆ ಬರಲು ಇಚ್ಚಿಸುವುದೇ ಇಲ್ಲ. ಅದು ಅವರ ಅಹಂಗೆ ಇಷ್ಟವಿರುವುದಿಲ್ಲ. ಆದರೆ ಕೆಳಗಿರುವವರು ಎಷ್ಟೂ ಅಂತ ತಲೆ ಎತ್ತಿಕೊಂಡು ಮೇಲಿದ್ದವರನ್ನು ನೋಡಿಕೊಂಡಿರಲು ಸಾಧ್ಯ. ಕುತ್ತಿಗೆ ನೋವು ಬಂದಾಗಲೆಲ್ಲ ತಲೆ ತಗ್ಗಿಸಿ ವಿಶ್ರಾಂತಿ ತೆಗೆದುಕೊಳ್ಳಲೇಬೇಕು. ಕೆಳಗಿರುವವರು ತಲೆ ಎತ್ತಿರಲಿ ಅಥವಾ ತಲೆ ತಗ್ಗಿಸಿರಲಿ ಮೇಲಿದ್ದವರಿಗೆ ಅದ್ಯಾವೂದು ಲೆಕ್ಕಕ್ಕಿಲ್ಲ. ಏಕೆಂದರೆ ಅವರು ಮೊದಲೇ ಮೇಲೆ ಕುಳಿತಿರುತ್ತಾರೆ. ಮತ್ತು ಅವರ ತಲೆ ಯಾವಾಗಲೂ ಆಕಾಶ ನೋಡುತ್ತಿರುತ್ತದೆ. ಯಾವಾಗಲೂ ಆಕಾಶ ನೋಡುತ್ತ ಕೂರುವುದರಲ್ಲಿ ಮಜಾ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತು. ಆದರೆ ಅಹಂ! ಈ ಅಹಂ ತಲೆಕೆಳಗೆ ಮಾಡಿ ಅಲ್ಲಿರುವ ಮಜ ಆಸ್ವಾದಿಸೋಕೆ ಬಿಡೋದೇ ಇಲ್ಲ. ಒಂದೇ ಒಂದು ಸಲ ಅಹಂಗೆ ಪೆಟ್ಟಾದರೂ ಚಿಂತೆಯಿಲ್ಲ ಕತ್ತು ಬಗ್ಗಿಸಿ ಕೆಳಗೆ ನೋಡಿ. ಕೆಳಗೆ ನೋಡಿದಾಕ್ಷಣ ಕೆಳಗೆ ಬಿದ್ದೇ ಬಿಟ್ಟೆವೇನೋ! ಎಂಬ ಮನಸ್ಥಿತಿ ಮೇಲಿನಲ್ಲಿರುವುದು ಸಹಜ. ಆದರೆ ಅಹಂ ಬದಿಗಿಟ್ಟು ನಾಟಕಕ್ಕಾದರೂ ಒಂದುಸಲ ಕೆಳಗೆ ನೋಡಿ ಕೆಳಗಿದ್ದವರ ಧನ್ಯತೆಯ ನಗುಮುಖಗಳು ನಿಮ್ಮನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತವೆ. ನೀವು ಕೆಳಗೆ ನೋಡುತ್ತಲೆ ಇನ್ನೂ ಎತ್ತರಕ್ಕೆ ಹೋಗಿರುತ್ತೀರಿ. ಜೀವನದಲ್ಲಿ ಒಮ್ಮೆ ಸೋತು ನೋಡಿ ಅಥವಾ ಸೋತಂತೆ ನಾಟಕವನ್ನಾದರೂ ಆಡಿ. ಆಗ ನೋಡಿ ಸೋತವರು ನೀವಾಗಿರುವುದಿಲ್ಲ. ಹತ್ತು ಪಟ್ಟು ಗೆದ್ದ ಸಂಭ್ರಮ ನಿಮ್ಮದಾಗಿರುತ್ತದೆ. ಈ ರೀತಿ ಸೋತ ನೀವು ಸೋತವರಾಗಿರುವುದಿಲ್ಲ, ಗೆದ್ದವರೇ ಆಗಿರುತ್ತೀರಿ. ಯಾವಾಗಲೂ ಸೋಲುವ ಅಥವಾ ಸೋಲುವ ಅನಿವಾರ್ಯತೆಯಲ್ಲಿರುವ ಕೆಳಗಿನವರಿಗೊಂದು ಗೆಲ್ಲುವ ಅವಕಾಶ ಕೊಟ್ಟು ನೋಡಿ. ಆ ಗೆಲವು ನಿಮ್ಮದೇ ಆಗಿರುತ್ತದೆ.

ತಾವು ಮಾಡುವದೆಲ್ಲ ಸರಿ, ತಾವು ನೋಡೊದೆಲ್ಲ ಸರಿ, ತಾವು ನಡೆದದ್ದೆ ದಾರಿ ಎಂಬ ಭ್ರಮಾಲೋಕದಲ್ಲಿ ಈ ಮೇಲೆ ಕುಳಿತರು ವಿಹರಿಸುತ್ತಿರುತ್ತಾರೆ. ಕೆಳಗಿದ್ದವರ ತಪ್ಪನ್ನು ದೊಡ್ಡದು ಮಾಡಿಯೋ? ಮಾಡಿಲ್ಲದ ತಪ್ಪನ್ನು ಅವರ ಮೇಲೆ ಹೊರೆಸಿಯೊ? ಸಂತೋಷಿಸುವ ಒಂದು ವಿಚಿತ್ರ ವಿಕೃತ ಮನೋಭಾವ ಇವರಿಗಿರುತ್ತದೆ. ಇವರ ಇನ್ನೊಂದು ಪ್ರಚಂಡತನವೆಂದರೆ ಯಾವಾಗಲೂ ಮಾತನಾಡುತ್ತಲೇ ಇರುವುದು. ಕೆಳಗಿದ್ದವರಿಗೆ ಅದು ಕೇಳಿಸೀತೆ? ಇಲ್ಲವೆ? ಎಂದು ಪರೀಕ್ಷಿಸುವ ಒಂದು ಚಿಕ್ಕ ವ್ಯವಧಾನವೂ ಇವರಿಗಿರುವುದಿಲ್ಲ. ಅವರು ಮಾತನಾಡಿದ್ದೆಲ್ಲ ವೇದ. ಇಷ್ಟವಿದೆಯೋ? ಇಲ್ಲವೋ? ಕೆಳಗಿದ್ದವರು ಒಪ್ಪಿದರೆ ಸರಿ! ಇಲ್ಲದಿದ್ದರೆ ಅವನ ತಿಥಿ ಖಚಿತ. ಕಾಗೆಯ ಬಣ್ಣ ಬಿಳಿಯೆಂದರೂ ಹೂಂಗುಟ್ಟಬೇಕು. ಸೂರ್ಯ ಪಶ್ಚಿಮದಲ್ಲಿ ಹುಟ್ಟಿದೆ ಎಂದರೂ ತಲೆ ಅಲ್ಲಾಡಿಸಬೇಕು. ವಾದಕ್ಕೇನಾದರೂ ನಿಂತರೆ ನಿಮ್ಮಂಥ ಮೂರ್ಖರೆ ಈ ಜಗತ್ತಿನಲ್ಲಿ ಇಲ್ಲ. ಯಾವಾಗಲೂ ಮಾತನಾಡುತ್ತಿರುವವರಿಗೆ ಕಿವಿ ಎನ್ನುವುದು ಇರುವುದೇ ಇಲ್ಲ! ಆದ್ದರಿಂದಲೇ ಅವರು ಯಾರಮಾತನ್ನೂ ಕೇಳಿಸಿಕೊಳ್ಳುವುದೇ ಇಲ್ಲ. ಛೇ! ಕೇಳಿಸಿಕೊಳ್ಳುವುದೆಂದರೇನು! ಮಯರ್ಾದೇ ಕಡಿಮೆಯಾದೀತೆಂಬ ಬಿಂಕ ಇವರಿಗೆ. ಪಾಪ ಕೆಳಗಿದ್ದವರು ಬಾಯಿ ಬಡಿದುಕೊಳ್ಳುತ್ತಲೇ ಇರುತ್ತಾರೆ ಬಿಟ್ಟುಬಿಡದೆ……… ಮೇಲಿದ್ದವರಿಗೆ ಕೇಳಿಸಲಾರದೆಂಬ ಸತ್ಯ ಇವರಿಗೆ ತಿಳಿದಿರುವುದೇ ಇಲ್ಲ. ತಿಳಿಯದಿರುವುದೇ ಒಳ್ಳೆಯದು. ಇಲ್ಲದಿದ್ದರೆ ಎದೆಯೊಡೆದು ಜೀವ ಬಿಟ್ಟಾರು!
ಮೇಲೆ ಕುಳಿತವರು ಮನಬಿಚ್ಚಿ ನಗಲಾರರು. ನಕ್ಕರದೆಲ್ಲಿ ತಮ್ಮ ದುರುಪಯೋಗವನ್ನು ಈ ಕೆಳಗಿದ್ದವರು ಮಾಡಿಬಿಡುತ್ತಾರೋ ಎಂಬ ಭಯ! ಹಾಗೆಯೇ ಮೇಲೆಕುಳಿತವರು ಎದೆಗಪ್ಪಿ ಅಳಲಾರರು. ಹಾಗೇನಾದರು ಮಾಡಿದರೆ ಅವರಿಗೆ ಕೀಳರಿಮೆ ಕಾಡುವ ಅಳುಕು. ಆದರೆ ಈ ಕೆಳಗಿನವರಿಗೆ ಬಟಾಬಯಲಲ್ಲಿ ನಿಂತು ಜೋರಾಗಿ ನಗುವ ಸ್ವಾತಂತ್ರ್ಯವಿದೆ. ಭೂಮಿಗಪ್ಪಿ ಅಳುವುದಕ್ಕೂ ಇವರು ಹಿಂಜರಿಯಲಾರರು.
ಸಾಕು ಮಾಡಿ ಈ ಮುಖವಾಡದ ಬದುಕು. ಎಲ್ಲಿಯ ತನಕ ಈ ವೇಷ. ಎಂದಾದರೊಮ್ಮೆ ಕಳಚಿ ಬಿದ್ದೇ ಬೀಳುತ್ತದೆ. ಕಳಚಿ ಬೀಳುವವರೆಗೂ ಯಾಕೇ ಕಾಯುತ್ತೀರಾ! ಮೊದಲೆ ಕಳಚಿಬಿಡಿ ಕೊಂಚ ನೆಮ್ಮದಿಯಾದರೂ ಸಿಕ್ಕೀತು. ಎಲ್ಲೆಂದರಲ್ಲಿ ಹುಡುಕಿದರೆ ಪ್ರೀತಿ ದೊರಕಲಾರದು. ಅದನ್ನು ಕೊಟ್ಟುಪಡೆಯಬೇಕು ಕೊಟ್ಟು ಪಡೆದಾಗಲೆ ಅದಕ್ಕೊಂದು ಅರ್ಥ ಸಾರ್ಥಕತೆ. ಕೊಟ್ಟು ಪಡೆಯುವ ಪ್ರೀತಿ ಕೊನೆತನಕ ನಿಮ್ಮ ಹೃದಯದಲ್ಲಿ ಉಳಿಯುತ್ತದೆ. ದೋಚಿ ಪಡೆದ ಪ್ರೀತಿ, ನಟಿಸಿ ಪಡೆದ ಪ್ರೀತಿ ಕ್ಷಣಿಕ ಅರ್ಥಹೀನ.
ಈ ಕಾಲಚಕ್ರ ಇದ್ಯಾವುದನ್ನೂ ಕೇಳುವುದೇ ಇಲ್ಲ. ಮೇಲಿದ್ದವನೂ ಕೆಳಗೆ ಬರಲೇಬೇಕು. ಕೆಳಗಿದ್ದವನು ಒಂದಲ್ಲೊಂದುದಿನ ಮೇಲೇರಿಯೇ ಏರುತ್ತಾನೆ. ಇತಿಹಾಸ ಮರೆತವನು ಭವಿಷ್ಯ ಸೃಷ್ಠಿಸಲಾರ ವಾಸ್ತವದಲ್ಲಿಯೂ ಬದುಕಲು ಅನರ್ಹ!
ಇದನ್ನೆಲ್ಲ ನಾನು ಈಗ್ಯಾಕೆ ಈ ರೀತಿ ಹೇಳುತ್ತಿದ್ದೇನೆಂದು ಅಚ್ಚರಿಯಲ್ಲವೇ! ಈಗ ಕೇಳಿ ಮೇಲಿದ್ದವರೂ ನಾವೇ, ಕೆಳಗಿದ್ದವರೂ ನಾವೇ, ಮೇಲಿದ್ದವರು ಕೆಳಗಿಳಿದಾಗಲೂ ನಾವೇ, ಕೆಳಗಿದ್ದವರು ಮೇಲೇರಿದಾಗಲೂ ನಾವೇ, ನಮ್ಮ ಮನಸ್ಸು, ನಮ್ಮ ಬುದ್ದಿ, ನಮ್ಮ ನಡುವಳಿಕೆ ನಮಗಿರುವ ಮೇಲು ಕೆಳಗಳನ್ನು ಸೃಷ್ಠಿಸುತ್ತದೆ ಈ ರೀತಿಯ ಆತ್ಮಾವಲೋಕನಗಳನ್ನು ನಾವು ಆಗಾಗ ಮಾಡಿಕೊಳ್ಳುತ್ತಿರಬೇಕು. ಆಗಲೇ ನಮ್ಮ ಬದುಕಿಗೊಂದು ಹೊಸ ಅರ್ಥ ಬರಲು ಸಾಧ್ಯ.
 

‍ಲೇಖಕರು G

August 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: