ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಮ… ಡಮ್ಮ ಡಕ್…ಡಕ್ಕ..

‘ಚೋಮ’ ಪುಸ್ತಕ ಪ್ರಪಂಚದ ಬಾಗಿಲು

ಲಕ್ಷ್ಮಣ್ ವಿ ಎ 

ಶಿವರಾಮ ಕಾರಂತರ “ಚೋಮ” ನನ್ನ ಕೈ ಹಿಡಿದು ಕನ್ನಡ ಪುಸ್ತಕ ಪ್ರಪಂಚದ ಬಾಗಿಲು ತನಕ ಬಂದು ಬೀಗ ನನ್ನ ಕೈಗೆ ಕೊಟ್ಟು ನನ್ನೆದೆಯೊಳಗೆ ನಿರಂತರ ದುಡಿ ಬಡಿಯುತ್ತಿರುವ ಜೀವಿ

ಇಲ್ಲ! ಸಾಧ್ಯವಿಲ್ಲ!!.. ಪುಸ್ತಕದ ಮುಂದಿನ ಪುಟ ತಿರುವಲಾರೆ., ಕಣ್ಣು ಮಂಜು ಮಂಜು ಅಸಾಧ್ಯ ನೋವೊಂದು ಮನಕಲುಕಿ ಎಂತಹ ಕಲ್ಲು ಹೃದಯ ಕೂಡ ಕರಗುವ ಸಮಯ ಪುಸ್ತಕ ಮಡಿಚಿಟ್ಟು ಚೋಮನ ಹಳವಂಡಗಳಿಗೆ ಕಣ್ಣೀರಾಗಿದ್ದೇನೆ ವಿಚಿತ್ರ ಸೆಳೆತಕ್ಕೊಳಗಾಗಿ ಪುಸ್ತಕ ಬರಸೆಳೆದು ಚೋಮನನ್ನು ಇಂಚಿಂಚಾಗಿ ಎದೆಗಿಳಿಸಿಕೊಂಡಿರುವೆ.

ಇಪ್ಪತ್ತೈದು ವರ್ಷಗಳ ಹಿಂದೆ ನಾನು ಆಸ್ಪತ್ರೆಯೊಂದರ ಐ.ಸಿ.ಯು.ನಲ್ಲಿ ಕೆಲಸ ಮಾಡಬೇಕಾದರೆ ರೋಗಿಯೊಬ್ಬರ ಕಡೆಯವರು ಕೊಟ್ಟ ಪುಸ್ತಕವದು, ಆಸ್ಪತ್ರೆಯ ಆಕ್ರಂದನ ಜೀವ ಹೋಗುತ್ತಿರುವ ರೋಗಿಯ ಕೊನೆಯ ಆಕ್ರಂದನದಂತೆ ಚೋಮನ ದುಡಿಯ ಸದ್ದು ನನ್ನನ್ನು ಕಲಕಿದೆ. ಹೀಗೆ ಅಮೂಲ್ಯ ಸಾಹಿತ್ಯದ ಪುಸ್ತಕವೊಂದು ಆಸ್ಪತ್ರೆಯ ಐ.ಸಿ.ಯು.ಬಾಗಿಲಿನಿಂದ ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವೇಶಿಸಿದ್ದು ಕಾಕತಾಳೀಯವೆಂದೇ ಹೇಳಬಲ್ಲೆ.

ಶಿವನ ಡಂಗುರದಂತಿರುವ ದುಡಿ ಚೋಮನಿಗೆ ಖುಷಿಯಲ್ಲೂ,ನೋವಿನಲ್ಲೂ ಅದೇ ತೀವ್ರತೆಯಲ್ಲಿ ಬಡಿದು ಭೋಗನಹಳ್ಳಿಯ ಸಾಹುಕಾರ ಸಂಕಪ್ಪಯ್ಯನವರ ನೆಮ್ಮದಿ ಹಾಳು ಮಾಡಿದ್ದಾನೆ. ಆದರೂ ಅವರಿಗೆ ಚೋಮನ ಮೇಲೆ ವಿಶೇಷವಾದ ಪ್ರೀತಿಯಿದೆ.

ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿ ಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು.. ಉಳಿದರೆ ಬಾಡು ಎಂಬ ನಾಯಿಗೆ ಆಹಾರ.. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು ಬದುಕಿನಲ್ಲಿ ತಾನೆಂದಾರೊಂದು ದಿನ ನಾಲ್ಕು ಗೇಣಿ ಭೂಮಿಯ ಒಡೆಯನಾಗಬಹುದೆಂದ ಆಸೆ ಇನ್ನೂ ಕಮರಿಲ್ಲ. ಹಾಂ! ಮರೆತೆ ದಿನವಿಡೀ ದುಡಿದ ಹೆಗಲಗಳ ನೋವ ನೀಗಲು ಬಿರುಮ ಪೂಜಾರಿಯ ಹೆಂಡದಂಗಡಿಯಿದೆ.. ಜೊತೆಗೆ ಶಿವನ ಕೈಲಿರುವ ಡಮರುಗ ದುಡಿ ಇದ್ದೇ ಇದೆ…

ಡಮ ….ಡಮ್ಮ ಡಕ್ …ಡಕ್ಕ .

ಇವನ ಹಣೆಬರಹ ನೋಡಿ ಇವನ ಸುತ್ತ ಸುಳ್ಳು ಲೆಕ್ಕ ಬರೆವ ಶೆರೆಗಾರ ಮನ್ವೇಲ. ಇವರಿಬ್ಬರ ಮಕ್ಕಳನ್ನು ಕಳಸದ ಹತ್ತಿರವಿರುವ ಕಾಫೀ ತೋಟದಲ್ಲಿ ಜೀತಕ್ಕಿದ್ದಾರೆ. ಸಾಲ ತೀರುವ ಮಾತು ಹಾಗಿರಲಿ ಇದ್ದ ಸಾಲಕೂ ಬಡ್ಡಿಯ ಬಾಲ ಸೇರಿದೆ. ಎಷ್ಟಾದರೂ ವಯಸಿಗೆ ಬಂದ ಮಕ್ಕಳಲ್ಲವೇ? ? ಗುರುವ ಕೊಕ್ಕಡದ ಅನ್ಯಜಾತೀಯ ಹುಡುಗಿಯನ್ನು ಮದುವೆಯಾಗಲು ರಾತ್ರೋ ರಾತ್ರಿ ಓಡಿಹೋಗಿದ್ದಾನೆ. ಚನಿಯ ಜೋಲು ಮೋರೆ ಹಾಕಿಕೊಂಡು ಹಟ್ಟಿಗೆ ಬಂದು ಜ್ವರ ಪೀಡಿತನಾಗಿ ಮಲಗಿ ಮರುದಿನ ಅವನೂ ಚಿಕಿತ್ಸೆ ದೊರಕದೆ ಸತ್ತು ಹೋಗುತ್ತಾನೆ… ಸತ್ತ ಹೆಣದ ಮುಂದೆಯೂ ದುಡಿ ಬಡಿಯುವುದೆಂದರೇನು ..??

ಡಮ..ಡಮ್ಮ..ಡಕ ಢಕ್ಕ್…

ಚೋಮ ಅರೆ ಹುಚ್ಚನಂತಾಡತೊಡಗಿದ. ಸಂಕಪ್ಪಯ್ಯನವರ ಬಳಿಯ ಕೆಲಸಕ್ಕೂ ಸಂಚಕಾರ ತಂದುಕೊಂಡ.
ಗಂಜಿಗೇನು ಗತಿ? ? ಸಂಕಪ್ಪಯ್ಯನವರು ಉದಾರಿಗಳು ಅವನು ಬರದಿದ್ದರೂ ಅವನ ಪಾಲಿನ ಕೂಲಿಯನ್ನು ಬೆಳ್ಳಿಗೆ ಕೊಡತೊಡಗಿದರು. ಆದರೆ ಸಾಹುಕಾರರು ಅಪ್ಪಿ ತಪ್ಪಿಯೂ ಕೂಡ ಚೋಮನ ಆಸೆಯಾದ ಭೂಮಿಯನ್ನು ಕೊಡಲಾರರು. ಕುಲೀನರು ಭೂಮಿಗೆ ಒಡೆಯರಾದರೆ ಜನ ಅವರ ಬಗ್ಗೆ ಏನೆಂದುಕೊಂಡಾರು?
ಜನ ನೂರು ಮಾತನಾಡಿದರೇನು? ಮನ್ವೇಲನ ಇಪ್ಪತ್ತೈದು ರೂಪಾಯಿಯ ಕಳ್ಳ ಲೆಕ್ಕ ತೀರಿಸಲೇಬೇಕಲ್ಲವೇ? ಈ ಬಾರಿಯ ಕಳಸದ ಕಾಫೀ ತೋಟಕೆ ದುಡಿಯಲು ಬೆಳ್ಳಿ ಮತ್ತು ನೀಲ ಅಣಿಯಾಗಿದ್ದಾರೆ… ಅಪ್ಪನ ಕಣ್ಣಾಲಿಗಳಲ್ಲಿ ಅಶ್ರುಧಾರೆ.. ದುಡಿಯಿದೆಯಲ್ಲ ಜೊತೆಗೆ ಒಂದಿಷ್ಟು ನೀರು ಬೆರೆಸಿದ ಹೆಂಡ

ಡಮ …ಡಮ್ಮ ಢಕ ಢಕ್ಕ.

ಮುಂದೆ ಕಳಸದ ಕಾಫೀ ತೋಟದಲ್ಲಿ ಮಿಂಗೇಲ ದೊರೆಗಳು, ಮನ್ವೆಲ ಇಬ್ಬರೂ ಸುಂದರಿಯಾದ ಬೆಳ್ಳಿಯನ್ನು ದೈಹಿಕವಾಗಿ ಬಳಸಿಕೊಳ್ಳುತ್ತಾರೆ. ಭಯಗೊಂಡ ಬೆಳ್ಳಿ ವಾಪಸು ಹಟ್ಟಿಗೆ ಬರುತ್ತಾಳೆ.
ಇವರ ಸಾಲ ಹೀಗೆ ಈ ಬಗೆಯಲ್ಲಿ ತೀರುತ್ತದೆ.
ನೀಲನ ಸಾವಿಗೆ ನೀವು ಮರಗುವಿರಾದರೆ ಆತ ನೀರಲ್ಲಿ ಮುಳುಗಿ ಸತ್ತ.. ಅವನನ್ನು ಉಳಿಸುವ ಅವಕಾಶಗಳಿದ್ದವಾದರೂ ಅಸ್ಪೃಶ್ಯತೆ ಅಡ್ಡ ಬಂತು.
ದಲಿತನ ಮೈ ಮುಟ್ಟುವುದೆಂತು.

ಚೋಮ ಈಗ ನಿಜವಾಗಿಯೂ ಹುಚ್ಚನಾದ. ಬೆಳ್ಳಿ ಕೂಡಾ ಯಾವುದೋ ಅನಿವಾರ್ಯವಾತೆಗೊಳಗಾಗಿ ಮನ್ವೇಲನ ತೆಕ್ಕೆಯಲ್ಲಿ ಮೈ ಮರೆತಳು. ಚೋಮನ ಪಾಲಿಗೆ ಇದೊಂದು ನೋಡುವುದು ಬಾಕಿಯಿತ್ತೇನೋ. ಅಲ್ಲಿಗೆ ಎಲ್ಲ ಮುಗಿದಂತಾಯ್ತಲ್ಲ?

ಹಟ್ಟಿಯ ಎತ್ತುಗಳನ್ನು ಕಾಡಿಗಟ್ಟಿ ಬಂದ, ಸಾಹುಕಾರನ ಹೊಲದ ನಾಲ್ಕು ಸಾಲು ಉತ್ತಿಬಂದ, ನೇಗಿಲು ಮುರಿದು ಬೆಂಕಿ ಹಾಕಿ ಸುಡುತ್ತ ದುಡಿ ಬಡಿದ ನೋಡಿ ………..
ಜೀವ ಹೋಗುತ್ತಿರುವ ಪ್ರಾಣಿಯ ಕೊನೆಯ ಚೀತ್ಕಾರದಂತೆ……ಅಲ್ಲಿಗೆ ಕತೆ ಮುಗಿಯಿತು
ಸಂಕಟ ಮುಂದುವರೆಯುತ್ತದೆ.

ಚೋಮ ನನ್ನೆದೆಯ ಬಡಿತದಲ್ಲಿ ಅಂದಿನಿಂದ

ಡಮ….ಢಮ್ಮ ಢಕ..ಢಕ್ಕ.

‍ಲೇಖಕರು avadhi

24 April, 2017

1 Comment

  1. Anonymous

    The word “Kuleenaru” is wrongly used.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading