ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಬ್ಬಿಂಗು ನಮ್ಮ ಪರ..

ದೃಶ್ಯ ಮನರಂಜನೋದ್ಯಮಕ್ಕೆ ಶಾಸನಾತ್ಮಕ ನಿಯಂತ್ರಣ ಎಷ್ಟಿದೆ ಎಂದು ಹುಡುಕಿದರೆ ಸಿಗುವುದು ಕೇಂದ್ರ ಸರಕಾರದ 1952ರ ಸಿನಿಮಾಟೋಗ್ರಫಿ ಕಾಯಿದೆ ಮತ್ತು ರಾಜ್ಯ ಸರಕಾರದ 1958ರ ಕರ್ನಾಟಕ ಮನೋರಂಜನಾ ತೆರಿಗೆ ಕಾಯಿದೆ.

ಎಲ್ಲೋ ಅಪರೂಪಕ್ಕೊಂದು ಕ್ಯಾಮರಾ, ತಾಂತ್ರಿಕ ಯೂನಿಟ್ ಇದ್ದಾಗ ಸಿದ್ಧಗೊಂಡ ಇವೆರಡೂ ಕಾಯಿದೆಗಳು ಈಗ ಕೈಗೆರಡು ಮೊಬೈಲ್ ಫೋನ್, ಇಂಟರ್ನೆಟ್, ಮನೆಗೊಂದು ಡಿಜಿಟಲ್ ಕ್ಯಾಮರಾದ ಕಾಲದಲ್ಲೂ ಜೀವ ಹಿಡಿದುಕೊಂಡು ದಿನ ದೂಡುತ್ತಿವೆ! ಈ ಕಾಯಿದೆಗಳಲ್ಲಿ ಕೇಂದ್ರದ ಕಾಯಿದೆ “ಸೆನ್ಸಾರ್ ಮಂಡಳಿ” ಬಗ್ಗೆ ಮಾತನಾಡುತ್ತಿದ್ದರೆ, ರಾಜ್ಯದ ಕಾಯಿದೆ ರೆವೆನ್ಯೂ ಸಂಗ್ರಹದ ಬಗ್ಗೆ ಒತ್ತು ಕೊಡುತ್ತದೆ.

ಪರಿಸ್ಥಿತಿ ಹೀಗಿರುವಾಗ, ಕರ್ನಾಟಕದಲ್ಲೊಂದು ಚಲನಚಿತ್ರ ಚೇಂಬರ್ ಇದೆಯಲ್ಲ ಎಂದು ನೆನಪಿಸಿಕೊಂಡು ಅವರ ಬಗ್ಗೆ ಅರಸಿದರೆ (ಈ ಸಂಸ್ಥೆಗೆ ಇನ್ನೂ ಒಂದು ವೆಬ್ ಸೈಟ್ ಕೂಡ ಇದ್ದಂತಿಲ್ಲ) ಸಿಕ್ಕಿದ್ದು, ಇನ್ನೂ ಆಶ್ಚರ್ಯಕರ ಸಂಗತಿ!

ಈ ಸಂಸ್ಥೆ ಕರ್ನಾಟಕ ಸೊಸೈಟಿ ಕಾಯಿದೆ 1960ರ ಅಡಿಯಲ್ಲಿ ನೋಂದಣಿಗೊಂಡ ಒಂದು ಸಂಸ್ಥೆ ಆಗಿದ್ದು, ಅದಕ್ಕೆ ಶಾಸನಾತ್ಮಕವಾದ ಯಾವುದೇ ಅಧಿಕಾರಗಳು ಇದ್ದಂತಿಲ್ಲ. ಸ್ವತಃ ಸಂಸ್ಥೆಯೇ ಕರ್ನಾಟಕ ಹೈಕೋರ್ಟಿಗೆ ದಾವೆಯೊಂದರಲ್ಲಿ ತನ್ನ ಕುರಿತು ಹೀಗೆ ಭಿನ್ನವಿಸಿಕೊಂಡಿದೆ:

The petitioner is an Association, registered under the provisions of the Karnataka Societies Registration Act, 1960.

It has 7 categories of members 5 i.e., film producers, film distributors, film exhibitors, Studio and laboratory and outdoor equipment hirer members, honorary members, affiliated members and temporary members.

The objects with which the petitioner was established was to encourage and promote the film industry in the state of Karnataka and also to protect, conserve and promote Kannada, Konkani, Tulu and Kodava literature, culture and language and also to protect the welfare of the people who are involved in making Kannada, Konkani, Tulu and Kodava movies.

According to the petitioner, it has 5000 members, who are engaged in the production, distribution of Kannada movies and it is concerned only with the film fraternity and is in no way concerned with the television association or its dependants.

ಹೀಗೆ ಓಬೀರಾಯನ ಕಾಲದಲ್ಲಿರುವ ವ್ಯವಸ್ಥೆಯೊಂದರಲ್ಲಿ ಕೋಟ್ಯಂತರ ರೂಪಾಯಿಗಳ ದೃಶ್ಯ ಮನರಂಜನೋದ್ಯಮ ಕರ್ನಾಟಕದಲ್ಲಿ ನಡೆಯುತ್ತಿದೆ ಎಂಬುದೇ ದಿಗಿಲು ಹುಟ್ಟಿಸುವ ಸಂಗತಿ.

ಈವತ್ತು ನೂರಕ್ಕೂ ಮಿಕ್ಕಿ ಕನ್ನಡ ಟೆಲಿವಿಷನ್- ಕೇಬಲ್ ಚಾನೆಲ್ಲುಗಳು, ವೀಡಿಯೊ ಕಂಪನಿಗಳು, ಉಪಭಾಷಾ, ಸಹೋದರಿ ಭಾಷಾ (ತುಳು, ಕೊಡವ, ಕುಂದಗನ್ನಡ…) ಚಲನಚಿತ್ರಗಳು, ನೂರಾರು ಕಿರುಚಿತ್ರಗಳು, ಡಾಕ್ಯುಮೆಂಟರಿಗಳು, ಮೊಬೈಲ್ ಚಿತ್ರಗಳು (!), ಯುಟ್ಯೂಬಿನಂತಹ ವೆಬ್ ಸೈಟುಗಳು, ಸೋಷಿಯಲ್ ಮೀಡಿಯಾ ಲೈವ್ ಸ್ಟ್ರೀಮಿಂಗ್… ಹೀಗೆ “ರಿಯಲ್ ಟೈಮ್” ಯುಗದಲ್ಲಿ ಬಂದು ನಿಂತಿರುವ ದೃಶ್ಯ ಮನರಂಜನೋದ್ಯಮಕ್ಕೆ ಎಲ್ಲೋ, ಯಾವತ್ತೋ ನಿಂತ ನೀರಾಗಿ ಬಿಟ್ಟಿರುವ ಕನ್ನಡ ಚಲನಚಿತ್ರೋದ್ಯಮ “ಡಬ್ಬಿಂಗ್” ಹೆಸರಲ್ಲಿ ಸವಾಲು ಹಾಕುತ್ತಿರುವುದೇ ಬಹಳ ವಿಚಿತ್ರವಾಗಿ ಕಾಣಿಸುತ್ತಿದೆ.

ಒಂದೇ ಥಿಯೇಟರಿನಲ್ಲಿ ಕುಳಿತು ಒಂದೇ ಚಿತ್ರವನ್ನು ಒಬ್ಬ ಕನ್ನಡದಲ್ಲೂ, ಅವನ ಪಕ್ಕದ ಸೀಟಿನವನು ಮರಾಠಿಯಲ್ಲೂ, ಅದರಾಚಿನವನು ತಮಿಳಿನಲ್ಲೂ, ಮತ್ತೊಬ್ಬ ತೆಲುಗಿನಲ್ಲೂ… ಅಗತ್ಯ ಬಿದ್ದರೆ ಜಗತ್ತಿನ 170ಕ್ಕೂ ಹೆಚ್ಚು ಪ್ರಮುಖ ಬಾಷೆಗಳೆಲ್ಲದರಲ್ಲೂ ಆನಂದಿಸುವ ತಂತ್ರಜ್ಞಾನ ಕೈಯೆಟುಕಿನಲ್ಲಿರುವಾಗ ಡಬ್ಬಿಂಗು ಬೇಡ ಎನ್ನುವುದು ತೀರಾ ಬಾಲಿಷ ಅನ್ನಿಸಿಕೊಳ್ಳುವುದಿಲ್ಲವೇ?

 

“ಇಂಡಸ್ಟ್ರಿ” ದೃಷ್ಟಿಕೋನ

ಇಂಡಸ್ಟ್ರಿಯ ದೃಷ್ಟಿಯಿಂದ ನೋಡಿದರೂ, ‘ಡಬ್ಬಿಂಗ್’ ಮನೋರಂಜನೋದ್ದಿಮೆಯ ಪರವಾಗಿಯೇ ನಿಲ್ಲಲಿದೆ. ಈವತ್ತು ವರ್ಷಕ್ಕೆ ಬರುವ ನೂರೂ ಚಿಲ್ಲರೆ ಕನ್ನಡ ಚಿತ್ರಗಳಲ್ಲಿ ಒಂದು ಮುಷ್ಟಿ ಚಿತ್ರಗಳು ಮಾತ್ರ ಕಾಳೇ ಹೊರತು ಉಳಿದವೆಲ್ಲ ಜಳ್ಳೇ. ಈ ಜಳ್ಳಿನ ಜಾಗವನ್ನು ಬೇರೆ ಭಾಷೆಗಳ ‘ಕಾಳು’ ಚಿತ್ರಗಳು ಆವರಿಸಿಕೊಳ್ಳುವುದಿದ್ದರೆ ಅದು ತಪ್ಪಲ್ಲ.

(ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಈವತ್ತು ತಮಿಳು, ತೆಲುಗು ಚಿತ್ರಗಳ ಬಗ್ಗೆ ಕನ್ನಡ ಇಂಡಸ್ಟ್ರಿ ಭಯ ಪಡುತ್ತಿದ್ದರೆ, ಅಲ್ಲಿಗೆ ಹಿಂದಿ, ಇಂಗ್ಲೀಷ್ ಮತ್ತು ಬೇರೆ ವಿದೇಶಿ ಭಾಷೆಗಳ ಚಿತ್ರಗಳ ಭಯ ಇರುತ್ತದೆ. ಗ್ಲೋಬಲೈಸೇಷನ್ನಿನ ಈ ಹೊತ್ತಿನಲ್ಲಿ ‘ಕನ್ಸ್ಯೂಮರ್ ಡ್ಯೂರೆಬಲ್ ಗಳ’ ಮಾರುಕಟ್ಟೆ ಕೆಲವು ವರ್ಷಗಳ ಹಿಂದೆ ಇಂತಹದೊಂದು ಭಯವನ್ನು ಹೇಗೆ ಅರಗಿಸಿಕೊಂಡಿತೋ, ಅದೇ ರೀತಿಯಲ್ಲಿ ಕನ್ನಡ ಚಿತ್ರರಂಗವೂ ಈ ಭಯವನ್ನು ಅರಗಿಸಿಕೊಂಡು ಮುಂದೆ ಹೆಜ್ಜೆ ಹಾಕಲಿದೆ.)

ಡಬ್ಬಿಂಗ್, ಕನ್ನಡಿಗರಿಗೆ – ಅದರಲ್ಲೂ ಕನ್ನಡಿಗರಿಗೆ ಮಾತ್ರ – ವ್ಯಾಪಕ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಭಾಷಾಂತರ, ರೂಪಾಂತರ, ಧ್ವನ್ಯಂತರ ಪರಿಣತರು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಗಳಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ನಿರ್ಮಾಣಗೊಂಡ ಚಿತ್ರಗಳೂ ತಮ್ಮಲ್ಲಿ ಸತ್ವ ಇದ್ದರೆ, ಜಗತ್ತಿನಾದ್ಯಂತ ವೀಕ್ಷಕರನ್ನು ಹೊಂದುವ ಭಾಗ್ಯ ಪಡೆಯಲಿವೆ.

ಅನಗತ್ಯ ಮೇಲಾಟಕ್ಕೆ ಕಡಿವಾಣ

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಭಾರತದ ಸಂವಿಧಾನದ 38, 39 ನೇ ವಿಧಿಗಳಲ್ಲಿ ಹೇಳಲಾಗಿರುವ ನಿರ್ದೇಶಕ ಸೂತ್ರಗಳು, 1969ರ MRTP  ಕಾಯಿದೆ, 2002ರ ವ್ಯವಹಾರ ಸ್ಪರ್ಧೆಗಳ ಕಾಯಿದೆಗಳು ಮತ್ತು ಅವುಗಳನುಸಾರ 2009ರಲ್ಲಿ ಆರಂಭಗೊಂಡ ವ್ಯವಹಾರ ಮೇಲಾಟಗಳ ಆಯೋಗ (Competition Commission of India)ಗಳು, ದೇಶದೊಳಗೆ ವ್ಯವಹಾರಗಳ ಮೇಲಾಟ ಹೇಗೆ ಸ್ಪರ್ಧಾತ್ಮಕ ಆಗಿರಬೇಕು, ಕಾರ್ಟೆಲ್ಲುಗಳು ವ್ಯವಹಾರವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಲ್ಲಿ ಅದಕ್ಕೆ ಶಿಕ್ಷೆ ಏನು ಎಂಬ ಬಗ್ಗೆ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು, ಸ್ವತಃ ಕರ್ನಾಟಕ ಚಲನಚಿತ್ರ ಮಂಡಳಿ ಈಗಾಗಲೇ CCIನ ತೀರ್ಮಾನದ ಬಿಸಿ ಅನುಭವಿಸಿದೆ. ಡಬ್ಬಿಂಗ್ ಬಗ್ಗೆ ಕೂಡ CCI ತನ್ನ ತೀರ್ಮಾನವನ್ನು ಹೇಳಿಯಾಗಿದೆ.

ಈ ಹಿನ್ನೆಲೆಯಲ್ಲಿ “ಡಬ್ಬಿಂಗ್ ವಿರುದ್ಧ” ಹೊರಡುವ ವಾದಗಳೂ ಸಾಂವಿಧಾನಿಕ ಚೌಕಟ್ಟಿನೊಳಗಿನಿಂದಲೇ ಹೊರಡಬೇಕಾಗಿರುವುದು ಅನಿವಾರ್ಯ.

ಭಾಷೆಯ ಉಳಿವು

ಕನ್ನಡ ಭಾಷೆಯ ಉಳಿವಿಗಾಗಿ, ಭಾಷೆಯ ಗುಣಮಟ್ಟ ಕಾಪಾಡುವುದಕ್ಕೆ ಡಬ್ಬಿಂಗ್ ಬೇಡ ಎನ್ನುವ ವಾದ ಕೂಡ ತೀರಾ ಜೊಳ್ಳು. ಎಂತೆಂತಹದೋ ಘಾತಗಳನ್ನು ಸಹಿಸಿಕೊಂಡು ಬದುಕಿರುವ ಕನ್ನಡ ಇಂತಹ ಬಡಪೆಟ್ಟುಗಳಿಂದ ನಾಶವಾಗುತ್ತದೆಂಬುದು, ಕನ್ನಡದ ಸಾಮರ್ಥ್ಯಕ್ಕೆ ಮಾಡುವ ಅಪಮಾನವೇ ಸರಿ.

‍ಲೇಖಕರು admin

3 March, 2017

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Prabhudev Siddappa

    Language, should be like a running river, it should flow with freedom, nothing should come between its flow, then only it will be pure and transparent. Making some thing grow in the pure fountain, which will be pure and pleasant….I feel and felt…

  2. Kiran

    Dubbing is not only unavoidable but it should be embraced.
    BUT, there should be a well meaning control over it, both on the quality AND quantity of it. IF that happens then it will be good for the people and the language itself.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading