ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ
– ಕೆ ಅಕ್ಷತಾ
ಪ್ರೆಸ್ಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾವೊಂದು ಲೆಟರ್ ಹೆಡ್ನ್ನು ಮಾಡಿಸಿಕೊಂಡಿರಲಿಲ್ಲ. ಅನಿವಾರ್ಯತೆ ಒದಗಿ ಬಂದಾಗ ರಾಜೀವ್ ತಾರಾನಾಥ್ ನೃಪತುಂಗ ಮುದ್ರಣಾಲಯ ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ ಅಂತ ಇಂಗ್ಲಿಷ್ನಲ್ಲಿ ಲೆಟರ್ ಹೆಡ್ ಬರೆದುಕೊಟ್ಟರು.
ಪುಟ್ಟಪ್ಪನವರು ಈ ಲೆಟರ್ಹೆಡ್ನಲ್ಲಿದ್ದದನ್ನು ಓದಿ `ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ ಅಂದ್ರೆ ಅಡ್ವಾನ್ಸ್ ತಗಂಡು ಪ್ರಿಂಟ್ ಮಾಡಿಕೊಡುವವರು ಅಂತ್ಲೊ?’ ಎಂದು ಕೇಳಿದ್ದರು. ಅವರು ಹಾಗೆ ಕೇಳೋದಕ್ಕೂ ಕಾರಣ ಇತ್ತು. ಪುಟ್ಟಪ್ಪನವರ ಪುಸ್ತಕಗಳೆಲ್ಲವು ವೆಸ್ಲೆ ಪ್ರೆಸ್ನಲ್ಲಿ ಪ್ರಿಂಟಾಗ್ತಾ ಇದ್ವು. ತೇಜಸ್ವಿ ನಾವು ಪ್ರೆಸ್ ಮಾಡಿ ಎಷ್ಟೊ ದಿನಗಳ ಬಳಿಕ ಪುಟ್ಟಪ್ಪನವರ `ಕೃತ್ತಿಕೆ’ ಕವನಸಂಕಲನವನ್ನು ನಮ್ಮಲ್ಲಿ ಪ್ರಿಂಟ್ ಮಾಡ್ಲಿಕ್ಕೆ ತಂದ್ರು. ಈಗಿರೋ ಟೈಪ್ಸ್ ಎಲ್ಲ ಹಳತಾಗಿದೆ. ಬೃಂದಾವನ ಸೀರಿಸ್ ಅಂತ ಹೊಸ ತರದ್ದು ಬಂದಿದೆ. ಈ ಪುಸ್ತಕವನ್ನು ಅದರಲ್ಲೆ ಪ್ರಿಂಟ್ ಮಾಡಣಾ ಅಂತ ಆರ್ಡರ್ ಕೊಟ್ವಿ. ಬೃಂದಾವನ ಸೀರಿಸ್ ಬರೋದರ ಒಳಗೆ ತೇಜಸ್ವಿ ಪ್ರೆಸ್ ಬಿಟ್ಟು ಮೂಡಿಗೆರೆಗೆ ಹೋದ್ರು. ಅವರು ಹೋದ ಬಳಿಕ ಆರ್ಡರ್ ಮಾಡಿದ್ದ ಹೊಸ ನಮೂನೆಯ ಟೈಪ್ಸ್ ಸರಬರಾಜು ಆಯಿತು. ಆದರೆ ಅದನ್ನು ಬಿಡಿಸಿಕೊಳ್ಳಲು ಎರಡು ಸಾವಿರ ರೂಪಾಯಿ ಕಟ್ಟಬೇಕಿತ್ತು. ಪುಟ್ಟಪ್ಪನವರ ಪುಸ್ತಕವೇ ತಾನೇ ಪ್ರಿಂಟ್ ಆಗೋದು; ಅವರ ಹತ್ರ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದು ಇದಕ್ಕೆ ಕೊಡಣಾ ಅಂತ್ಹೇಳಿ ಅವರ ಮನೆಗೆ ಹೋಗಿ ಅಡ್ವಾನ್ಸ್ ಕೇಳಿದೆ. ಅವ್ರಿದ್ದೋರು `ಚೈತ್ರನ ಹಾಸ್ಟೆಲ್ ಫೀಸ್ ಕಟ್ಟಲಿಕ್ಕೆ ದುಡ್ಡು ಹೊಂದಿಸ್ತಿದೀನಿ. ಅಡ್ವಾನ್ಸ್ ಕೊಡಕ್ಕೆ ದುಡ್ಡಿಲ್ಲ. ವೆಸ್ಲೆ ಪ್ರೆಸ್ನಲ್ಲಿ ಯಾವತ್ತೂ ಅಡ್ವಾನ್ಸ್ ಕೊಟ್ಟಿಲ್ಲ. ಪುಸ್ತಕ ಪ್ರಿಂಟ್ ಆದಮೇಲೆ, ಅದೂ ಏನೂ ತಪ್ಪುಗಳಿಲ್ಲ ಅಂತ ಖಾತ್ರಿ ಆದ್ಮೇಲೆ ಹಣ ಕೊಡೋದು. ಪುಸ್ತಕ ಪ್ರಿಂಟ್ ಮಾಡಿಕೊಂಡು ಬಾ. ಆಮೇಲೆ ದುಡ್ಡು ಕೊಡ್ತೀನಿ’ ಅಂದ್ರು.
ಸರಿಯಾಗಿ ಪ್ರೂಫ್ ತಿದ್ದದೇ ಹೋದರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಸುಜನಾರ ಪದ್ಯವೇ ಉದಾಹರಣೆ. ಅವರು `ಕುಂಡಗಳಿರುವುದೇ ಹೀಗೆ’ ಎಂದು ಪದ್ಯ ಬರೆದುಕೊಟ್ಟರೆ `ಕುಂಡೆಗಳಿರುವುದೆ ಹೀಗೆ’ ಎಂದು ಅಚ್ಚು ಮಾಡಿದ್ದೆ. ಬೇಕಂತ ಹಾಗೆ ಮಾಡಿದ್ದಲ್ಲ ಸರಿಯಾಗಿ ಪ್ರೂಫ್ ನೋಡದೆ ಹೋದದ್ದರಿಂದಾಗಿ ಹಾಗಾಗಿತ್ತು. ನಾರಾಯಣಶೆಟ್ಟರ ಗಮನಕ್ಕೆ ಬಂದರೂ ಅವರು ಒಂದು ಚೂರು ಸಿಟ್ಟಾಗಲಿಲ್ಲ.
]]>





0 Comments