ರಾಜೀವ್ ಮತ್ತು ದೇವಕಣಗಿಲೆ
ಕೆ ಅಕ್ಷತಾ
ಈ ಮನೆಗೆ ಬಂದ ಸ್ವಲ್ಪವೇ ದಿನದಲ್ಲಿ ರಾಜೀವ್ ಕಾಲಲ್ಲಿ ಇಸುಬು ಕಾಣಿಸಿಕೊಂಡಿತು. ಆಯುರ್ವೇದ ವೈದ್ಯ ಶಾಮಾಚಾರ್ ಬಳಿ ಇಸುಬಿಗೆ ರಾಜೀವ್ ಔಷಧಿ ತೆಗೆದುಕೊಳ್ಳುತಿದ್ದರು. ಶಾಮಾಚಾರ್ ಇಸುಬು ವಾಸಿಯಾಗಲು ಸರಳವಾದ ಒಂದು ಔಷಧಿಯನ್ನು ಸೂಚಿಸಿದರು. ಏನೆಂದರೆ ಸಿಗರೇಟಿನ ಟಿನ್ ಇರತ್ತಲ್ಲ ಅದರಲ್ಲಿ ಅರ್ಧಟಿನ್ನಷ್ಟು ದೇವಕಣಗಿಲೆ ಹೂವಿನ ಹಾಲನ್ನು ಸಂಗ್ರಹಿಸಿ ಅದನ್ನು ದಿನ ಕೋಳಿ ಪುಕ್ಕದಿಂದ ಇಸುಬಿನ ಮೇಲೆ ಹಚ್ಚಬೇಕು. ಆ ಜವಾಬ್ದಾರಿಯನ್ನು ನಾನು ವಹಿಸಿಕೊಂಡೆ. ಔಷಧಿಯೇನೋ ಸರಳವಾದದ್ದೆ ಆದರೆ ಅದನ್ನು ಸಂಗ್ರಹಿಸಲು ಹೊರಟಾಗಲೇ ತಿಳಿದಿದ್ದು ದೇವಕಣಗಿಲೆಯ ಹಾಲು ಸಂಗ್ರಹಿಸುವುದು ಎಷ್ಟು ಕಷ್ಟದ ಕೆಲಸ ಎಂದು! ಒಂದು ಹೂ ಕಿತ್ತರೆ ಒಂದು ಹನಿ ಹಾಲು ಸಿಗೋದು. ಅರ್ಧ ಟಿನ್ ಹಾಲು ದಿನ ಸಂಗ್ರಹಿಸಲು ಎಷ್ಟು ಹೂವುಗಳನ್ನ ಕೀಳಬೇಕು?

ಮಾನಸ ಗಂಗೋತ್ರಿಯ ಸುತ್ತಮುತ್ತ ಇರುವ ಯಾವ ದೇವಕಣಗಿಲೆ ಮರವು ನನ್ನ ದೃಷ್ಟಿಯಿಂದ ಬಚಾವಾಗಲಿಲ್ಲ. ಎಲ್ಲ ಮರಗಳನ್ನು ಈ ಸಂಧರ್ಭದಲ್ಲಿ ಹತ್ತಿ ಇಳಿದಿದ್ದೇನೆ. ಜೊತೆಗೆ ಮತ್ತೊಂದು ದೊಡ್ಡ ಗೋಳು ಎದುರಾಗಿತ್ತು. ದೇವಕಣಗಿಲೆ ಮರಗಳಿರೋದೆ ದೇವಸ್ಥಾನಗಳ ಸುತ್ತ ಮುತ್ತ ಅಲ್ಲಿಯೇ ಪಕ್ಕದಲ್ಲಿ ಅರ್ಚಕರ ಮನೆಗಳು ಇರವು. ಈ ದೇವಕಣಗಿಲೆ ಮರಗಳು ದೇವಸ್ಥಾನ, ಅರ್ಚಕರ ಮನೆಗಳು ಎಲ್ಲಕ್ಕಿಂತ ಎತ್ತರಕ್ಕೆ ಬೆಳೆದಿರೋವು. ಹೂ ಕೀಳಬೇಕೆಂದರೆ ಮರದ ತುದಿ ಏರಬೇಕಿತ್ತು. ಮರದ ತುದಿ ಏರಿದ ನನ್ನನ್ನು ಪೂಜಾರರ ಮನೆಯವರು ಮರೆ ಕಟ್ಟಿಕೊಂಡು ಮಾಡಿಕೊಂಡಿರುತಿದ್ದ ಶೌಚಾಲಯ, ಬಚ್ಚಲುಮನೆಯಲ್ಲಿ ಶೌಚಕ್ಕೆ ಕುಳಿತ, ಅಥವಾ ಸ್ನಾನಕ್ಕೆ ಇಳಿದ ಹೆಣ್ಣು ಮಕ್ಕಳು ಹೆಂಗಸರು ನೋಡಿ ತಮ್ಮನ್ನು ಈ ಸ್ಥಿತಿಯಲ್ಲಿ ನೋಡಲಿಕ್ಕೆ ಸಂಚು ಮಾಡಿ ಮರ ಹತ್ತಿ ಕುಳಿತಿದ್ದಾನೆ ಅಂತ ತಿಳಿದು ಭಯಭೀತರಾಗಿ ಕಿರುಚಿ ಕೊಳ್ಳುತಿದ್ದರು. ಮನೆಯ ಗಂಡಸರು ಕೋಲು, ದೊಣ್ಣೆ ಹಿಡಿದು ಪ್ರತ್ಯಕ್ಷರಾಗಿ ನಾನು ಮರ ಇಳಿಯುವುದನ್ನೆ ಕಾದು ಹೊಡೆಯಲು ಬರುತಿದ್ದರು. ನಾನು ಆಗೆಲ್ಲ `ಪಂಡಿತ ತಾರಾನಾಥರ ಮಗನಿಗೆ ಇಸುಬಾಗಿದೆ.ಅದಕ್ಕೆ ಶಾಮಾಚಾರ್ ದೇವಕಣಗಿಲೆ ಹೂವಿನ ಔಷಧಿ ಹೇಳಿದ್ದಾರೆ. ಹೂವು ಕೊಯ್ಯಲಿಕ್ಕೆ ಮರ ಹತ್ತಿದೆ ಅಂತ ಹೇಳ್ತಿದ್ದೆ.]]>
Like this:
Like Loading...
Related
0 Comments