ಟೂರಿಂಗ್ ಟಾಕೀಸ್ ಎಂಬ ಮಾಯಾಲೋಕ

ಸಿದ್ಧರಾಮ ಕೂಡ್ಲಿಗಿ

ಅದು 70ರ ದಶಕ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆಗೆ ರಜೆ ಇದ್ದಾಗ ಸಂಬಂಧಿಕರ ಊರುಗಳಿಗೆ ಹೋಗಿ ಕೆಲವು ದಿನ ಹಾಯಾಗಿದ್ದುಬರುವುದು ಆಗಿನ ಸಂತಸದ ಕ್ಷಣಗಳು. ಒಂದು ದಿನ ಎಲ್ಲಾದರೂ ಹೋಗಿಬರುವುದಕ್ಕೇ ಈಗ ಆ ಕೆಲಸ, ಈ ಕೆಲಸ ಅಂತ ಪೇಚಾಡುವ ನಾನು ಆಗ ತಿಂಗಳುಗಟ್ಟಲೆ ಸಂಬಂಧಿಕರ ಊರಿನಲ್ಲಿರುತ್ತಿದ್ದುದ್ದು ಹೇಗೆಂಬುದೇ ಈಗ ಸೋಜಿಗದ ಸಂಗತಿ. ಆಗೆಲ್ಲ ‘ಅಂಕಲ್’, ‘ಆಂಟಿ’ಗಳಿರಲಿಲ್ಲ. ಅಕ್ಕ, ಮಾಮಾ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತಿಗೆ, ನಾದಿನಿ ಎಂಬ ಅಚ್ಚ ಸಂಬಂಧದ ನಿಜವಾದ ನಾಮಗಳು.

ರಜೆಯಲ್ಲಿ ನಾನು ನನ್ನ ಸಂಬಂಧಿಕರೊಬ್ಬರ ಊರಿಗೆ ಹೋಗುತ್ತಿದ್ದೆ. ಅವರಿಗೂ ನನ್ನ ಮೇಲೆ ಅತಿಯಾದ ಪ್ರೀತಿ. ಹೀಗಾಗಿ ತಿಂಗಳುಗಟ್ಟಲೆ ಅಲ್ಲೇ ಇರುತ್ತಿದ್ದೆ. ಸಮಯ ಕಳೆಯಲು ಆಗ ಟಿವಿ, ಮೊಬೈಲ್, ಕಂಪ್ಯೂಟರ್, ಬೇಸಗೆ ಶಿಬಿರ ಇವುಗಳ ಹಾವಳಿಯಿರಲಿಲ್ಲ. ಅಪ್ಪಟವಾಗ ಬಯಲಲ್ಲಿ ಆಡುವುದು, ದಣಿದು ಬಂದು ಶಿಸ್ತಾಗಿ ಊಟ ಮಾಡುವುದು, ಗಡದ್ದಾಗಿ ನಿದ್ದೆ ಹೊಡೆಯುವುದು. ಸಂಜೆಗೆ ಏನು ಮಾಡುವುದು? ಆ ಪುಟ್ಟ ಊರಲ್ಲಿ ಒಂದು ಟೂರಿಂಗ್ ಟಾಕೀಸ್ ಇತ್ತು. ಸಂಜೆ ೬ಗಂಟೆಗೆ ನಮೋ ವೆಂಕಟೇಶ… ಎಂಬ ಹಾಡಿನೊಂದಿಗೆ ಅಂದಿನ ಚಲನಚಿತ್ರ ಆರಂಭವಾಗುವುದು ಎಂಬ ಸಂದೇಶವನ್ನು ಇಡೀ ಊರಿಗೆ ಕೊಡುತ್ತಿತ್ತು.

ನನ್ನ ಸಂಬಂಧಿಗಳು ಒಂದು ಇಲಾಖೆಯ ಅಧಿಕಾರಿಗಳು. ನಾನು ಪ್ರತಿದಿನ ಉದ್ದೇಶಪೂರ್ವಕವಾಗಿಯೇ ಅವರ ಕಚೇರಿ ಹತ್ತಿರ ಹೋಗುತ್ತಿದ್ದೆ. ಕರೆದು ಕೂಡಿಸಿಕೊಳ್ಳುತ್ತಿದ್ದರು. ‘ಸಿನಿಮಾ ನೋಡ್ತೀಯೇನೋ?’ ಅಂತ ಪ್ರೀತಿಯಿಂದ ಕೇಳೋರು. ಸಿನಿಮಾ ಅಂದರೆ ಕೇಳಬೇಕೆ? ನಾನು ಸದಾ ಸಿದ್ಧ. ಅವರು ತಮ್ಮ ಕಚೇರಿಯ ಸಿಬ್ಬಂದಿಯವರಿಗೆ ಹೇಳುತ್ತಿದ್ದರು. ಅವರು ನನ್ನನ್ನು ಟಾಕೀಸ್ ಬಳಿ ಕರೆದೊಯ್ದು ಗೇಟ್ ನಲ್ಲಿರುವವರಿಗೆ ಹೇಳುತ್ತಿದ್ದರು ‘ಸಾಹೇಬರ ಹುಡುಗ’ ಅಂತ. ಅವನು ವಿನಮ್ರನಾಗಿ ಒಳಗೆ ಬಿಡುತ್ತಿದ್ದ. ಸಾಹೇಬರ ಹುಡುಗನಿಗೆ ನೆಲದ ಮೇಲೆ ಕೂಡಿಸುತ್ತಿರಲಿಲ್ಲ. ಕಬ್ಬಿಣದ ಕುರ್ಚಿ ಹಾಕಿಯೇ ಕೂಡಿಸುತ್ತಿದ್ದರು. ನನಗಂತೂ ಎಲ್ಲಿಲ್ಲದ ಖುಷಿ. ಸಾಹೇಬರ ಹುಡುಗ ಎಂಬ ಜಂಭ ಬೇರೆ. ಮಜವಾಗಿ ಸಿನಿಮಾ ಪೂರ್ತಿ ನೋಡಿ ಬರುತ್ತಿದ್ದೆ.

ಆಗೆಲ್ಲ ಒಂದೇ ಪ್ರೊಜೆಕ್ಟರ್. ಹೀಗಾಗಿ ಮೊದಲೇ ರೀಲನ್ನು ಸುತ್ತಿ ಇಟ್ಟುಕೊಳ್ಳುತ್ತಿದ್ದರು. ಸಿನಿಮಾ ಬಿಡುವ ಕಿಂಡಿಯೊಳಗೆ ಇಣುಕಿ ಎಲ್ಲ ತಿಳಿದುಕೊಳ್ಳಬಹುದಿತ್ತು. ತಡಿಕೆಯಿಂದ ಟಾಕೀಸ್ ನ್ನು ಕಟ್ಟಿರುತ್ತಿದ್ದರು. ಟಾಕೀಸ್ ನ ಒಳಹೋಗಲು ಪರದೆಯಿರುವ ಒಂದು ಬಾಗಿಲು. ಮೊದಲನೇ ಬಾಗಿಲೊಳಗೆ ಹೋದರೆ ನೆಲ. ಎರಡನೇ ಬಾಗಿಲಿನಲ್ಲಿ ಹೋದರೆ ಬೆಂಚುಗಳು. ದೊಡ್ಡ ಸಾಹೇಬರುಗಳು ಬಂದರೆ ಮಾತ್ರ ಕಬ್ಬಿಣದ ಕುರ್ಚಿಗಳು. ಆಚೀಚೆ ಕಂಬ ಹೂತು ಬಿಳಿಪರದೆಯನ್ನು ಎಳೆದು ಬಿಗಿಯಾಗಿ ಕಟ್ಟಿರುತ್ತಿದ್ದರು. ಅದರ ಮೇಲೆ ಸಿನಿಮಾ ಶುರುವಾಗುತ್ತಿತ್ತು. 3-4 ರೀಲ್ ಮುಗಿದ ನಂತರ ಮತ್ತೊಂದು ರೀಲ್ ನ್ನು ಜೋಡಿಸಿ ಸಿನಿಮಾ ತೋರಿಸುವವರೆಗೆ ಮಧ್ಯೆ ಬಿಡುವು. ಹೀಗೆ ಇಡೀ ಸಿನಿಮಾ ಮುಗಿಯುವುದರಲ್ಲಿ ಒಟ್ಟು 4 ವಿಶ್ರಾಂತಿಗಳು ಸಿಗುತ್ತಿದ್ದವು. ನಡು ನಡುವೆ ಸಾಹೇಬರ ಹುಡುಗನಿಗೆ ಶೇಂಗಾ ಕಾಳಿನ ಸಮಾರಾಧನೆ ಬೇರೆ ನಡೆಯುತ್ತಿತ್ತು.

ಆಗಲೇ ನಾನು ನೋಡಿದ್ದು ಡಾ.ರಾಜ್ ಅವರ ಎಲ್ಲ ಹಳೆಯ ಸಿನಿಮಾಗಳು. ಬೀದಿಬಸವಣ್ಣ, ಮೇಯರ್ ಮುತ್ತಣ್ಣ, ರೌಡಿ ರಂಗಣ್ಣ, ಭೂಪತಿ ರಂಗ ಹೀಗೆ ಅವೆಷ್ಟೋ. ಆಗ ಕಾರ್ಬನ್ ಕಡ್ಡಿಗಳಿಂದ ಬೆಳಕನ್ನು ಮಾಡಿ ಪ್ರೊಜೆಕ್ಟರ್ ನಲ್ಲಿ ಬೆಳಕು ಮೂಡಿಸಿ ಪರದೆಯ ಮೇಲೆ ಸಿನಿಮಾ ಮೂಡುತ್ತಿತ್ತಂತೆ. ಹೀಗಾಗಿ ಆ ಕಡ್ಡಿಗಳು ಉರಿಯುವುದು ಮುಗಿದ ಮೇಲೆ ಬೇರೆ ಕಡ್ಡಿಗಳನ್ನು ಹಾಕಬೇಕಾಗುತ್ತಿತ್ತು. ಕೆಲವೊಮ್ಮೆ ಅದರ ಶಾಖಕ್ಕೆ ರೀಲ್ ಸುಡುತ್ತಿದ್ದವು. ಆಗ ಪರದೆಯ ಮೇಲೆ ಬೆಂಕಿ ಹೊತ್ತಿಕೊಂಡಂತೆ ಕಂಡು ರೀಲ್ ಕರಗುವುದು ಕಾಣುತ್ತಿತ್ತು.

ನಂತರ ಪರದೆ ಪೂರ್ತಿ ಬೆಳ್ಳಗೆ. ಆಗ ರೀಲ್ ಸುಟ್ಟಿತು ಎಂಬುದು ನಮಗೆ ತಿಳಿಯುತ್ತಿತ್ತು. ಕೆಲವೊಮ್ಮೆ ವಿದ್ಯುತ್ ಕೈ ಕೊಡುತ್ತಿತ್ತು. ಆಗ ಶಿಳ್ಳೆಗಳ ಸುರಿಮಳೆ. ವಿದ್ಯುತ್ ಬರುವವರೆಗೆ ಜನರ ಪರದಾಟ. ವಿದ್ಯುತ್ ಬಂತೆಂದರೆ 100 ಕ್ಯಾಂಡಲಿನ ಬಲ್ಬು ಹಚ್ಚುತ್ತಿದ್ದರು. ಆಗ ಜನರೆಲ್ಲರಿಗೂ ಸಮಾಧಾನ. ಸಿನಿಮಾ ನೋಡಲು ಸಿದ್ಧರಾಗುತ್ತಿದ್ದರು. ಆಕಸ್ಮಿಕವಾಗಿ ವಿದ್ಯುತ್ ಬರದೆ ಅತಿ ತಡವಾದಾಗ ಚಿತ್ರಮಂದಿರದಲ್ಲಿರುವವರಿಗೆ ಪಾಸ್ ಕೊಡಲಾಗುತ್ತಿತ್ತು. ಅದು ಮರುದಿನ ಬಂದು ಸಿನಿಮಾ ಪೂರ್ತಿಯಾಗಿ ನೋಡಲು.

ಒಮ್ಮೆ ಪರದೆಯ ಮುಂದಿರುವ ನೆಲದ ಮೇಲೆ ಕುಳಿತು ಸಿನಿಮಾ ನೋಡಬೇಕೆಂಬ ಆಸೆಯಾಯಿತು. ನೆಲದ ದರ ಕೊಟ್ಟು ಒಮ್ಮೆ ಸಿನಿಮಾ ನೋಡಲು ಹೋಗಿದ್ದೆ. ಪರದೆ ಎದೆಯ ಮೇಲೇ ಎಳೆದು ಕಟ್ಟಿದಂತಿತ್ತು. ನೆಲದ ಟಿಕೆಟ್ ತೆಗೆಸಿದವರೆಲ್ಲ ಕುಳಿತು ನೋಡಿದರೆ ಕುತ್ತಿಗೆ ನೋವು ಬರುತ್ತದೆಂದು ಶೇ.90ರಷ್ಟು ಜನ ಟವೆಲ್ ಹಾಸಿ ಪೂರ್ತಿ ಅಂಗಾತ ಮಲಗಿಯೇ ಸಿನಿಮಾ ನೋಡಿ ಖುಶಿಪಡುತ್ತಿದ್ದರು. ನನಗೇನೋ ಸಿನಿಮಾ ಸ್ಪಷ್ಟವಾಗಿ ಕಾಣಲಿಲ್ಲವಾದ್ದರಿಂದ ಆ ಸಾಹಸವನ್ನು ಕೈಬಿಟ್ಟೆ. ಆದರೆ ಸಿನಿಮಾವನ್ನು ಪೂರ್ತಿ ‘ಎಂಜಾಯ್’ ಮಾಡುತ್ತಿದ್ದವರೆಂದರೆ ಈ ಜನ. ತಮ್ಮ ನೆಚ್ಚಿನ ಹೀರೋ ಬಂದರೆ ಸಾಕು ಚಿಲ್ಲರೆ ಪೈಸೆಗಳನ್ನ ಪರದೆಗೆ ಎರಚುತ್ತಿದ್ದರು. ಹೂಗಳನ್ನು ತೂರುತ್ತಿದ್ದರು.

ನಂತರ ಬೆಂಚ್ ನ ದರ ಇರುವಲ್ಲಿ ಹೋಗಿ ಕುಳಿತು ಸಿನಿಮಾ ನೋಡುತ್ತಿದ್ದೆ. ಬರು ಬರುತ್ತ ಕಾಲೇಜು ಓದುವಾಗ ಕುರ್ಚಿ ದರ ಇರುವಲ್ಲಿ ಹೋಗಿ ಸಿನಿಮಾ ನೋಡುತ್ತಿದ್ದೆ. ಆದರೆ ಬಾಲ್ಯದಲ್ಲಿ ನೋಡಿ ಖುಷಿಪಟ್ಟ ಭಾವ ಎಲ್ಲೋ ಕಳೆದುಹೋದಂತೆನಿಸಿತು. ಆಗೆಲ್ಲ ಸಿನಿಮಾಗಳನ್ನು ಇದ್ದದ್ದನ್ನು ಇದ್ದ ಹಾಗೇ ಅಂದರೆ ನಾವೂ ಆ ಕತೆಯಲ್ಲಿ ಬೆರೆತು ನೋಡುತ್ತಿದ್ದೆವು. ವಿಮರ್ಶೆ ಮಾಡುವುದಾಗಲಿ, ಇದೆಲ್ಲ ನಟನೆ, ಹೊಡೆದಾಟ, ಬಡಿದಾಟಗಳೆಲ್ಲ ಸುಳ್ಳು ಎಂಬ ವಿಚಾರವೇ ಇರುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ಸತ್ತ ನಟ ಮತ್ತೊಂದು ಸಿನಿಮಾದಲ್ಲಿ ಹೇಗೆ ಬರುತ್ತಿದ್ದ? ಎಂದು ತಲೆ ಕೆಡಿಸಿಕೊಳ್ಳುವಷ್ಟು ಅಮಾಯಕತೆ ಇರುತ್ತಿತ್ತು.

ಏನೇ ಇರಲಿ ಬಾಲ್ಯದ ಸಿನಿಮಾಯಣದ ಅನುಭವಗಳೇ ಅದ್ಭುತ. ಅದರಲ್ಲೂ ಟೂರಿಂಗ್ ಟಾಕೀಸ್ ನ ಅನುಭವವೇ ವಿಶಿಷ್ಟವಾದುದು.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: