ಟಿ ಎಸ್ ಶ್ರವಣ ಕುಮಾರಿ ಕಥೆ- ಬಂಗಲೆ ಮನೆ

ಟಿ ಎಸ್ ಶ್ರವಣ ಕುಮಾರಿ

ಎಂದಿನಂತೆ ವ್ಯಾನಿಟಿ ಬ್ಯಾಗು ಮತ್ತು ಊಟದ ಡಬ್ಬಿಯ ಚೀಲವನ್ನು ಹೆಗಲಿಗೇರಿಸಿಕೊಂಡು ಸುನಂದಾ ಬಸ್‌ಸ್ಟ್ಯಾಂಡಿನೆಡೆಗೆ ಹೆಜ್ಜೆಯನ್ನು ಚುರುಕುಗೊಳಿಸಿದಳು. ಅವಳು ಕೆಲಸ ಮಾಡುತ್ತಿದ್ದಿದ್ದು ಅಲ್ಲಿಂದ ನಲವತ್ತು ಕಿ.ಮೀ. ದೂರದಲ್ಲಿದ್ದ ಸಂಪಿಗೆಹಳ್ಳಿಯಲ್ಲಿನ ಗವರ್ನ್ಮೆಂಟ್‌ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿಯಾಗಿ.

ಈ ಊರಿನಿಂದ ಸಿ.ಎಂ.ಎಸ್. ಪ್ರೈವೇಟ್‌ ಬಸ್‌ ಮಾತ್ರಾ ಅಲ್ಲಿಗೆ ಹೋಗುತ್ತಿತ್ತು. ಅದೂ ಕೈ ಹಾಕಿದ ಕಡೆಯಲ್ಲೆಲ್ಲಾ ನಿಲ್ಲಿಸುತ್ತಾ ನಿಧಾನವಾಗಿ ನಲವತ್ತು ಕಿ.ಮೀ. ದೂರವನ್ನು ತಲುಪುವುದಕ್ಕೆ ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿತ್ತು. ಇಲ್ಲದಿದ್ದರೆ ಗವರ್ನ್ಮೆಂಟ್‌ ಬಸ್ಸಿನಲ್ಲಿ ಇಪ್ಪತ್ತೈದು ಕಿ.ಮೀ. ದೂರದಲ್ಲಿದ್ದ ಪಟ್ಟದಂಗಡಿಗೆ ಹೋಗಿ, ಅಲ್ಲಿಂದ ಯಾವುದಾದರೂ ಟೆಂಪೋ ಹಿಡಿದುಕೊಂಡು ಸಂಪಿಗೆಹಳ್ಳಿಯನ್ನು ತಲುಪಬೇಕಾಗಿತ್ತು.

ಎಂದಾದರೊಂದು ದಿನ ಸಿ.ಎಂ.ಎಸ್. ತಪ್ಪಿದಾಗ ಮಾತ್ರಾ ಈ ಪರಿಪಾಟಲು ಇರುತ್ತಿತ್ತು. ಹೋಗಲಿ, ಆ ಹಳ್ಳಿಯಲ್ಲಿಯೇ ಇರುವುದಕ್ಕೆ ಒಂದು ವ್ಯವಸ್ಥೆ ಮಾಡಿಕೊಳ್ಳೋಣವೆಂದರೆ, ಊರಲ್ಲಿ ಸುಮಾರು ಒಂದೆಕರೆ ಜಾಗದಲ್ಲಿ ತಾತನಿಗೆ ಅವರ ಬ್ರಿಟಿಷ್‌ ಮೇಲಧಿಕಾರಿ ಇನಾಮಾಗಿ ಕೊಟ್ಟಿದ್ದ ಬ್ರಿಟಿಷ್‌ ಶೈಲಿಯ ಎಂಟು ಕೋಣೆಗಳಿರುವ ದೊಡ್ಡ ಬಂಗಲೆಯಿದೆ. ಮನೆಯ ಸುತ್ತ ಮುತ್ತಲೂ ಕಲ್ಲಿನ ಕಾಂಪೌಡಿನೊಳಗೆ ಚಂದದ ತೋಟವಿರುವ ಆ ಮನೆಗೆ ‌ʻಬ್ರಿಟಿಷ್ ಬಂಗಲೆʼ ಎಂದೇ ಹೆಸರಿದೆ.

ನಾಲ್ವರು ತಂಗಿಯರು, ಒಬ್ಬ ಅಣ್ಣ, ಇನ್ನೊಬ್ಬ ತಮ್ಮ ಅಲ್ಲೇ ಇದ್ದಾರೆ. ಬಿ.ಇ. ಓದುತ್ತಿರುವ ಮಗ‌ ಸುದರ್ಶನನ ಓದಿಗೂ ಜಿಲ್ಲಾ ಕೇಂದ್ರವಾದ ಊರು ಅನುಕೂಲವಾಗಿದೆ. ಹೀಗಿರುವಾಗ ಇಲ್ಲಿ ಒಬ್ಬಳೇ ಇದ್ದು ಏಕೆ ತಾಪತ್ರಯ ಪಡಬೇಕು. ಹೇಗೂ ಮನೆಯಲ್ಲಿ ಬೇರೆ ಯಾವ ಕೆಲಸಕ್ಕೂ ತಾನು ಕೈಹಾಕುವುದಿಲ್ಲ. ಅಮ್ಮ ಸತ್ತ ಮೇಲೂ ಮಿಕ್ಕ ಮೂವರು ತಂಗಿಯರು ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಹೋಗುತ್ತಿರುತ್ತಾರೆ. ದುಡಿದು ಬರುವವಳೆಂದು ಒಂದಷ್ಟು ಜಾಸ್ತಿಯೇ ಮರ‍್ಯಾದೆಯಿದೆ ತನಗೆ ಎಂದುಕೊಂಡು ಬಸ್ಸಿನಲ್ಲಿ ಓಡಾಡುವುದನ್ನೇ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾಳೆ. 

ಮನೆ ಅಷ್ಟು ದೊಡ್ಡದಾದರೂ ಮನೆಯಲ್ಲಿದ್ದವರಿಗೆ ಅಂಥ ಸಂಪಾದನೆಯೇನೂ ಇರಲಿಲ್ಲ. ಹೆಸರಿಗೊಂದು ತಂದೆಯ ಕಾಲದ ರೈಸ್‌ ಮಿಲ್ಲಿದೆ. ಕೆಲವೇ ವರ್ಷಗಳಲ್ಲಿ ಬೇಕಾದಷ್ಟು ರೈಸ್‌ ಮಿಲ್ಲುಗಳೆದ್ದು ಹೇಳುವಂತಹ ಸಂಪಾದನೆಯೇನೂ ಇಲ್ಲ; ಮನೆಯ ನಿರ್ವಹಣೆಗೆ ಕಷ್ಟವಿಲ್ಲ ಅಷ್ಟೇ. ಬಿ ಎಡ್‌ ಮಾಡಿಕೊಂಡು ಆಗಲೇ ಟೀಚರ್‌ ಕೆಲಸದಲ್ಲಿದ್ದ ಸುನಂದಳ ಮದುವೆಯಾಗಿದ್ದು ತಡವಾಗಿಯೇ, ಅದೂ ಮೀನಾಕ್ಷಮ್ಮ ಹಟಹಿಡಿದು ಕುಳಿತದ್ದಕ್ಕೆ.

ಮೊದಲ ಮದುವೆ ಭರ್ಜರಿಯಾಗಿ ಮಾಡಬೇಕೆಂಬ ಆಕೆಯ ಆಸೆಗೆ ಆ ಕಾಲದಲ್ಲಿಯೇ ಹಳ್ಳಿಯಲ್ಲಿದ್ದ ಎರಡೆಕರೆ ಜಮೀನನ್ನು ಮಾರಿ ಮಾಡಿದ್ದಾಗಿತ್ತು. ಅವಳ ಸಂಬಳವೂ ಇಲ್ಲದ್ದರಿಂದ, ಮಿಕ್ಕ ದುಡ್ಡು ಹನಿಹನಿಯಾಗಿ ಖರ್ಚಾಗಿಯೇ ಹೋಗಿತ್ತು. ಮದುವೆಯಾದ ಆರು ವರ್ಷಕ್ಕೆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡು ಬಸುರಿ ಸುನಂದಾ ತವರಿಗೆ ವಾಪಸ್ಸು ಬಂದಿದ್ದಳು. ಮಗುವಾಗುವ ಹೊತ್ತಿಗೆ ಟ್ರಾನ್ಸ್ಫರ್‌ ತೆಗೆದುಕೊಂಡು ಇಲ್ಲಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ್ದಳು.

ಮನೆ ನಿರ್ವಹಣೆಗೆ ಒಂದಿಷ್ಟು ಅನುಕೂಲವಾಗಿತ್ತಾದರೂ, ಮಿಕ್ಕವರ ಮದುವೆಗೆ ಯಾವುದೇ ದುಡ್ಡಿನ ಮೂಲವಿರಲಿಲ್ಲ. ಮನೆ ಮಾರಿ ಮಿಕ್ಕವರ ಮದುವೆ ಮಾಡಿ, ಒಂದಷ್ಟು ಹಣವನ್ನು ತಮಗಾಗಿಯೂ ಉಳಿಸಿಕೊಳ್ಳಬಹುದೆಂದು ಶ್ರೀನಿವಾಸಯ್ಯನವರ ಲೆಕ್ಕಾಚಾರ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಹೇಳುವುದಕ್ಕೆ, ನೋಡುವುದಕ್ಕೇನೋ ಬಲು ಬೆಲೆಬಾಳುವ ಆಸ್ತಿ. ಆದರೇಕೋ ಯಾರೂ ಅದನ್ನು ಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಕೊಳ್ಳುವುದಾದರೆ ದೊಡ್ಡ ಕುಳವೇ ಬಂದು, ಅಲ್ಲಿ ಇರುವ ಮನಸ್ಸು ಮಾಡಬೇಕು.

ಅಷ್ಟು ಚಂದದ ಮನೆಯನ್ನು ಒಡೆಯಲು ಮನಸ್ಸು ಬರುವುದುಂಟೆ? ವಾಸಿಸುವ ಮನೆಗೆ ಅಷ್ಟೊಂದು ಬಂಡವಾಳ ಹಾಕುವವರು ಆ ಊರಲ್ಲಿ ಇರಬೇಕಲ್ಲ! ಹಾಗೂ ಬಂದವರು ರೂಪಾಯಿನ ಮಾಲನ್ನು ಆರು ಕಾಸಿಗೆ ಕೇಳಿದರೆ ಕೊಡಲು ಸಾಧ್ಯವೇ? ಹಾಗಾಗಿ ಅಪ್ಪನ ಕಾಲದಿಂದಲೂ ಆ ಮನೆ ಹಾಗೇ ಉಳಿದುಕೊಂಡು ಬಂದಿದೆ.

ಸುಣ್ಣಬಣ್ಣವಿಲ್ಲದೆ ಹಳೆಯ ಅರಮನೆಯಂತೆ ಕಾಣುತ್ತಿದೆ. ಆಮನೆಯ ಹೆಣ್ಣುಮಕ್ಕಳು ಮದುವೆಯಿಲ್ಲದೆ ಕುಳಿತಿದ್ದಾರೆ. ಹೆಣ್ಣುಮಕ್ಕಳ ಮದುವೆಯಾಗದೆ ಗಂಡುಮಕ್ಕಳ ಮದುವೆಗೆ ಪ್ರಯತ್ನ ಮಾಡುವುದು ಹೇಗೆ? ಹಾಗಾಗಿ ಮನೆಯ ಮಕ್ಕಳೆಲ್ಲಾ ಮದುವೆಯಿಲ್ಲದೆ ಅದೇ ಮನೆಯಲ್ಲಿ ಒಂಟಿಜೀವನ ನಡೆಸುತ್ತಿದ್ದಾರೆ. ಈಗ ಎಲ್ಲರ ವಯಸ್ಸೂ ಮದುವೆಯಾಗುವ ವಯಸ್ಸನ್ನು ದಾಟಿಹೋಗಿದೆ. ಈ ಕೊರಗಿನಲ್ಲೇ ಎಂಟು ವರ್ಷಗಳ ಹಿಂದೆ ಮೀನಾಕ್ಷಮ್ಮನವರು ತೀರಿಕೊಂಡರು. ಒಂದೇ ವರ್ಷದಲ್ಲಿ ಶ್ರೀನಿವಾಸಯ್ಯನವರೂ ಅವರನ್ನು ಹಿಂಬಾಲಿಸಿದರು. 

ಈಗಾಗಲೇ ದೊಡ್ಡ ಮಗ ವೆಂಕಟೇಶನಿಗೆ ಹತ್ತಿರತ್ತಿರ ಅರವತ್ತು ವರ್ಷವಿರಬೇಕು, ಸುನಂದಳಿಗೇ ದೀಪಾವಳಿಗೆ ಐವತ್ತೇಳು ತುಂಬತ್ತೆ. ಅವಳಿಗೆ ಚಿಕ್ಕವಳು ಶೀಲಾ, ಅವಳ ತಂಗಿ ಕಲ್ಪನಾ,‌ ಅವಳ ತಂಗಿ ಪುಷ್ಪಲತಾ, ನಂತರದವನು ಗೋವಿಂದ, ಕಡೆಯವಳು ರಾಜೇಶ್ವರಿ. ಎಲ್ಲರೂ ಹೆಚ್ಚುಕಡಿಮೆ ಎರಡೆರೆಡು ವರ್ಷದ ಅಂತರದಲ್ಲಿ ಹುಟ್ಟಿದವರು. ಶೀಲಾನೂ ಡಿಗ್ರಿ ಮುಗಿದ ತಕ್ಷಣ ಯಾವುದೋ ಆಫೀಸಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮದುವೆಗಿರಲಿ, ಸಂಸಾರ ನಿರ್ವಹಣೆಗೇ ಆಗ ಸ್ವಲ್ಪಮಟ್ಟಿಗೆ ದುಡ್ಡಿನ ಕೊರತೆಯಿದ್ದ ಕಾಲ.

ಮಗಳು ಹೇಗೂ ದುಡಿದು ತರುತ್ತಿದ್ದಾಳಲ್ಲ ಎಂದು ಶ್ರೀನಿವಾಸಯ್ಯನವರು ಮೂವತ್ತು ವರ್ಷವಾದರೂ ಅವಳ ಮದುವೆಯ ಯೋಚನೆಯನ್ನೇ ಮಾಡಲಿಲ್ಲ. ಹೀಗೇ ದುಡಿಯುತ್ತಲೇ ಇದ್ದುಬಿಟ್ಟರೆ ಮದುವೆಯ ಆಸೆಯನ್ನು ಕೈಬಿಟ್ಟಂತೆಯೇ ಎಂದುಕೊಂಡು ಶೀಲಾ ಏನೋ ನೆಪವೊಡ್ಡಿ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಳು. ಇದನ್ನು ನೋಡಿದ್ದ ಕಲ್ಪನಾ, ಪುಷ್ಪ ಕೆಲಸಕ್ಕೆ ಪ್ರಯತ್ನಿಸಲೇ ಇಲ್ಲ. ಗೋವಿಂದನಿಗೆ ವಿದ್ಯೆ ಹತ್ತಲಿಲ್ಲ ಅವನು ವೆಂಕಟೇಶನಿಗೆ ಸಹಾಯಕನಾಗಿ ಮಿಲ್ಲಿನಲ್ಲಿ ಕೆಲಸ ಮಾಡಿಕೊಂಡಿದ್ದಾನೆ. 

ಇನ್ನು ರಾಜೇಶ್ವರಿ… ಮಗುವಿದ್ದಾಗ ಅವಳು ಹೇಗಿದ್ದಳೋ, ಯಾರೂ ಅವಳನ್ನು ಗಮನಿಸಲಿಲ್ಲವೋ… ಮಾಡಿದ್ದನ್ನೇ ಗೀಳಿನಂತೆ ಮಾಡಿಕೊಂಡಿದ್ದಳು. ಓದುತ್ತಿದ್ದರೆ ಓದುತ್ತಲೇ ಇರುವುದು, ಬರೆಯುತ್ತಿದ್ದರೆ ಬರೆಯುತ್ತಲೇ ಇರುವುದು, ಹಾಡುತ್ತಿದ್ದರೆ ಅದೇ. ಜೋಕಾಲಿಯಲ್ಲಿ ತೂಗಿಕೊಳ್ಳುತ್ತಿದ್ದರೆ ಅದೇ ಗಂಟೆಗಟ್ಟಲೆ. ಏಳೆಂಟು ವರ್ಷದವಳಿರುವಾಗ ಮನೆಯ ಮುಂದಿದ್ದ ಸೀಬೇಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಹೀಗೇ ಅದೆಷ್ಟು ಹೊತ್ತಿನಿಂದ ತೂಗಿಕೊಳ್ಳುತ್ತಾ ಕುಳಿತಿದ್ದಳೋ, ಇಳಿಯಬೇಕೆಂದು ಅವಳಿಗೆ ತೋಚುತ್ತಲೇ ಇಲ್ಲ. ಅಷ್ಟು ಹೊತ್ತಿಗೆ ಯಾರೋ ಗೇಟನ್ನು ತೆರೆದುಕೊಂಡು ಮನೆಗೆ ಬಂದರು.

ಹಿಂದೆಯೇ ಒಂದು ದೊಡ್ಡ ದೈತ್ಯಾಕಾರದ ಬೀದಿನಾಯಿ ಜೋರಾಗಿ ಬೊಗಳುತ್ತಾ ಇವಳೆಡೆಗೆ ನುಗ್ಗಿತು. ಹೆದರಿ ಕಿರಿಚಿಕೊಂಡು ಮನೆಯೊಳಗೆ ಓಡಿದವಳು ಮನೆಯ ಮಧ್ಯದ ತೊಟ್ಟಿಯ ಪ್ರಾಕಾರದಲ್ಲಿ ಸುತ್ತು ಸುತ್ತು ಓಡುತ್ತಲೇ ಇದ್ದಳು… ಯಾರೆಷ್ಟು ಕಿರುಚಿಕೊಂಡರೂ ಓಡುವುದನ್ನು ನಿಲ್ಲಿಸುತ್ತಲೇ ಇಲ್ಲ, ಇದೇನಾಗಿದೆಯೆಂದು ಎಲ್ಲರೂ ಭಯಗೊಂಡು ಅವಳನ್ನು ತಡೆಯಲು ಪ್ರಯತ್ನಿಸುತ್ತಿರುವಾಗಲೇ ಎಷ್ಟೋ ಹೊತ್ತಿನ ನಂತರ ಬವಳಿ ಬಿದ್ದಿದ್ದಳು. ಒಳಗೆತ್ತಿಕೊಂಡು ಹೋಗಿ ಮಲಗಿಸಿ ಮುಖಕ್ಕೆ ನೀರು ಚಿಮುಕಿಸಿ, ಗಾಳಿ ಹಾಕಿ… ಎಷ್ಟೋ ಹೊತ್ತಿನ ಮೇಲೆ ಕಣ್ಣು ತೆರೆದವಳು ನಾಯಿ.. ನಾಯಿ.. ಎಂದು ಕಿರಿಚುತ್ತಾ ಮತ್ತೆ ಪ್ರಜ್ಞೆ ತಪ್ಪಿದ್ದಳು.

ಸಂಜೆಯ ಹೊತ್ತಿಗೆ ಜ್ವರ ಸುಡುತ್ತಿತ್ತು. ಡಾಕ್ಟರ ಬಳಿಗೆ ಕರೆದುಕೊಂಡು ಹೋದಾಗ ʻಏನೋ ನೋಡಿ ಭಯಪಟ್ಟಿರಬೇಕುʼ ಎಂದು ಒಂದಿಷ್ಟು ವೈದ್ಯೋಪಚಾರ ಮಾಡಿ ಕಳಿಸಿದ್ದರು. ವಾರದಲ್ಲಿ ಜ್ವರ ಇಳಿದರೂ ಮಂಕಾಗಿಬಿಟ್ಟಳು. ಅಂದಿನಿಂದ ಏನೂ ಮಾತಾಡದೇ ಇಡೀ ದಿನ ತೊಟ್ಟಿಯ ಪ್ರಾಕಾರದಲ್ಲಿ ಸುಮ್ಮನೇ ಸುತ್ತುತ್ತಿದ್ದಳು. ಯಾರಾದರೂ ಬಲವಂತವಾಗಿ ಸ್ನಾನಕ್ಕೆ ಕಳಿಸಿದರೆ ಸ್ನಾನ, ತಿಂಡಿ ಊಟಕ್ಕೆ ಕರೆದರೆ ತಿನ್ನುವುದು ಮಿಕ್ಕೆಲ್ಲಾ ಸಮಯದಲ್ಲಿ ಸುಮ್ಮನೇ ಪ್ರಾಕಾರದಲ್ಲಿ ಸುತ್ತುತ್ತಿರುವುದು. ಯಾರಿಗೂ ಅವಳಿಂದ ತೊಂದರೆಯಿಲ್ಲ ನಿಜ, ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸುವ ಹಣಬಲವೂ ಇಲ್ಲ; ಮನಸ್ಸೂ ಇಲ್ಲ. ಮನೆಯಲ್ಲೊಂದು ಪುಟ್ಟ ಮಗುವಿನಂತೆ ಅವಳಿದ್ದಾಳೆ.

***

ಬಸ್ಸಿನಲ್ಲಿ ಕುಳಿತ ತಕ್ಷಣ ಸುನಂದನಿಗೆ ಅಣ್ಣ ವೆಂಕಟೇಶ ಹೇಳಿದ ವಿಚಾರ ತಲೆಗೆ ಬಂತು. ಹಿಂದಿನ ರಾತ್ರಿ ಊಟವಾದ ಮೇಲೆ ಮನೆಯ ನಡುವಿನ ತೊಟ್ಟಿಯಲ್ಲಿದ್ದ ಬೃಂದಾವನದ ಕಟ್ಟೆಯ ಮೇಲೆ ಕೂತು ವೆಂಕಟೇಶ ಎಲ್ಲರನ್ನೂ ಸೇರಿಸಿಕೊಂಡು ಈ ವಿಚಾರವನ್ನೆತ್ತಿದ್ದ. ಅಂದು ಮಿಲ್ಲಿಗೆ ಬಂದಿದ್ದ ಯಾರೋ ಮುಂಬೈ ಕಡೆಯವರು ಈ ಬಂಗಲೆಯನ್ನು ಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು.

ಆ ಮನೆಯನ್ನು ಹಾಗೆಯೇ ಸ್ವಲ್ಪ ಮುಖಾಲಂಕಾರ ಮಾಡಿಸಿ ಏನೋ ಉದ್ದಿಮೆ ಪ್ರಾರಂಭಿಸುವ ಯೋಜನೆಯಿತ್ತು ಅವರಲ್ಲಿ. ಮೂರು ಕೋಟಿ ಕೊಟ್ಟು ಕೊಳ್ಳಲು ತಯಾರಿದ್ದರು. ಗುಂಜಿದರೆ ಇನ್ನೂ ಹತ್ತಿಪ್ಪತ್ತು ಲಕ್ಷ ಏರಿಸಬಹುದೇನೋ. ಮನೆಯವರೆಲ್ಲರ ಅಭಿಪ್ರಾಯ ಕೇಳಿ ಮುಂದಿನ ವಾರದಲ್ಲಿ ತಿಳಿಸುವುದಾಗಿ ಹೇಳಿದ್ದ ವೆಂಕಟೇಶ. ಎಲ್ಲಾ ವಿಷಯವನ್ನೂ ಹೇಳಿ ‘ಎಲ್ಲರೂ ನಿಧಾನವಾಗಿ ಸಾಧಕ ಬಾಧಕಗಳನ್ನು ಯೋಚ್ನೆ ಮಾಡಿ ಹೇಳಿ. ಒಬ್ಬೊಬ್ಬರಿಗೂ ಹತ್ತಿರಹತ್ತಿರ ನಲ್ವತ್ತು ಲಕ್ಷ ದುಡ್ಡು ಸಿಗುತ್ತೆ. ಸಾಯೋವರ‍್ಗೂ ದುಡ್ಡಿನ ತಾಪತ್ರಯ ಇರಲ್ಲ. ಎಷ್ಟೋ ದಿನದಿಂದ ಮಾಡ್ತಿದ್ದ ಪ್ರಯತ್ನಕ್ಕೆ ಇವತ್ತು ಘಳಿಗೆ ಕೂಡಿ ಬಂದಿದೆ’ ಅಂದ.

ಎಲ್ಲರಿಗೂ ಇದೊಂದು ಅತ್ಯಂತ ಅನಿರೀಕ್ಷಿತ ರೋಚಕ ಸುದ್ಧಿಯಾಗಿದ್ದು ಏನು ಹೇಳಲೂ ತೋರದೆ ದಿಗ್ಭ್ರಮೆಯಿಂದ ಗರಬಡಿದವರಂತೆ ಅವನನ್ನೇ ನೋಡುತ್ತಾ ಕುಳಿತುಬಿಟ್ಟರು. ಯಾರಿಂದಲೂ ಮಾತು ಹೊರಡುತ್ತಿಲ್ಲ. ಕಡೆಗೆ ವೆಂಕಟೇಶನೇ ‘ಎಲ್ರೂ ನಿಧಾನವಾಗಿ ಯೋಚ್ನೆ ಮಾಡಿ, ಅರ್ಜೆಂಟೇನಿಲ್ಲ. ಭಾನುವಾರ ರಾತ್ರಿ ಮತ್ತೆ ಮಾತಾಡೋಣ. ಬುಧವಾರ ಯಾವ್ದುಕ್ಕೂ ಹೇಳ್ತೀನಿ ಅಂತ ಅವ್ರಿಗೆ ಹೇಳಿದೀನಿ’ ಎಂದ. ಮಾತಿಲ್ಲದೆ ಎಲ್ಲರೂ ಮಲಗಲು ಎದ್ದರು…

ಸುನಂದಾ ಯೋಚನೆಗೆ ಬಿದ್ದಳು… ಮಾರಿದರೆ ಮಗ ಸುದರ್ಶನನ ಮುಂದಿನ ಓದಿಗೆ ಸಹಾಯವಾಗುತ್ತೆ ನಿಜ, ಆದರೆ ಬೇರೆ ಮನೆ ಮಾಡಬೇಕಲ್ಲ. ಮನೆ ಮಾರಿದ ಮೇಲೆ ತಾವು ಎಂಟು ಜನ ಇರುವಷ್ಟು ದೊಡ್ಡ ಮನೆ ಸಿಗಬೇಕಲ್ಲ. ಮಿಕ್ಕೆಲ್ಲರೂ ಬೇರೆಬೇರೆಯಾಗಿಯೇ ಇರಬೇಕು ಎಂದುಕೊಂಡರೆ ಆಗ ತಾವೂ ಇಬ್ಬರೇ ಇರಬೇಕಾಗತ್ತೆ. ಎಲ್ಲಾ ಕೆಲಸವೂ ತನ್ನ ಮೇಲೇ ಬೀಳತ್ತೆ. ಈಗಿನಷ್ಟು ಸರಾಗವಾಗಿರಲ್ಲ ಆಗ.

ಇನ್ನೊಂದು ವರ್ಷದಲ್ಲಿ ಸುದರ್ಶನ ಅಂದುಕೊಂಡ ಹಾಗೆ ಓದುವುದಕ್ಕೆ ಅಂತ ಅಮೇರಿಕಕ್ಕೋ, ಮತ್ತೆಲ್ಲಿಗೋ ಹೋದರೆ ವಾಪಸ್ಸು ಬರ‍್ತಾನೆಯೇ?! ಅಲ್ಲಿಗೆ ಹೋದ ಮಕ್ಕಳ್ಯಾರೂ ವಾಪಸ್ಸು ಬಂದಿದ್ದನ್ನೇ ಕಂಡಿಲ್ಲ. ಹಾಗೇನಾದರೂ ಆದರೆ ತಾನೊಬ್ಬಳೇ ಸಾಯುವವರೆಗೂ ಒಂಟಿಯಾಗಿ ಇರಲು ಸಾಧ್ಯವೇ? ಇದುವರೆಗೂ ಒಟ್ಟಿಗೆ ಇದ್ದು ಅಭ್ಯಾಸವಾಗಿಬಿಟ್ಟಿದೆ.

ತನ್ನ ದುಡಿಮೆಯ ಅರ್ಧದಷ್ಟನ್ನು ಮನೆಗೆಂದು ಕೊಟ್ಟರೂ ಮಿಕ್ಕದ್ದು ತಮಗೆ ಸಾಕು. ಮುಂದೆ ಓದಲು ಎಜುಕೇಶನ್‌ ಲೋನ್‌ ತೆಗೆದುಕೊಳ್ಳಬಹುದೇನೋ… ಮಾರೋದು ಬೇಡವೇನೋ ಅನ್ನಿಸಿದರೂ… ಮಿಕ್ಕವರೇನು ಯೋಚನೆ ಮಾಡುತ್ತಾರೋ… ದುಡ್ಡೇನೋ ಸಿಗುತ್ತೆ… ಆದರೆ ಕೈಯಲ್ಲಿ ದುಡ್ಡಿರುವಾಗ ಸಾಲ ಮಾಡಲು ಮನಸ್ಸು ಬರುವುದಿಲ್ಲ. ಹಾಗಾಗಿ ದುಡ್ಡೆಲ್ಲಾ ಅವನ ಓದಿಗೇ ಖರ್ಚಾಗಿ ಹೋಗತ್ತೆ; ಆದರೆ ಮಿಕ್ಕವರಿಗೇನೂ ಖರ್ಚಿಲ್ಲ; ಅವರೆಲ್ಲಾ ಇಡಿಗಂಟಾಗೇ ಇಟ್ಟುಕೊಳ್ಳಬಹುದು. ರಿಟೈರ್‌ ಆದ ಮೇಲೆ ಪಿ.ಎಫ್.‌, ಗ್ರಾಚುಟಿ ಅಂತ ಒಂದಿಷ್ಟು ಸಿಗತ್ತೆ. ಪೆನ್ಷನ್‌ ಬರತ್ತೆ, ಆದರೂ… ಯೋಚನೆ ಬಗೆಹರಿಯಲಿಲ್ಲ. ನೋಡೋಣ, ಎಲ್ಲರೂ ಏನು ತೀರ‍್ಮಾನ ತೆಗೆದುಕೊಳ್ತಾರೋ… ಮನಸ್ಸು ಎರಡೂ ಕಡೆಗೆ ಹೊಯ್ದಾಡುತ್ತಿರುವಾಗಲೇ ಸಂಪಿಗೆಹಳ್ಳಿ ಬಂದಿತ್ತು…

***

ದಿನ ನಿತ್ಯದಂತೆ ಎದ್ದು ಅಡುಗೆ ಮನೆಯ ಕೆಲಸದಲ್ಲಿ ತೊಡಗಿಕೊಂಡಿದ್ದ ಶೀಲಾ ಇನ್ನೂ ದಿಗ್ಭ್ರಮೆಯಿಂದ ಹೊರಬಂದಿರಲಿಲ್ಲ. ಇದೇ ಅವಕಾಶ ಇಪ್ಪತ್ತು, ಇಪ್ಪತ್ತೈದು ವರ್ಷದ ಹಿಂದೆ ಬಂದಿದ್ದರೆ… ಮೂವತ್ತು ದಾಟಿದ್ದರೂ ಪರವಾಗಿಲ್ಲ, ಎರಡನೆಯ ಮದುವೆಗಾದರೂ ಅವಕಾಶವಿತ್ತು. ಈಗ… ಮುಟ್ಟು ನಿಂತೇ ಆರು ವರ್ಷವಾಯ್ತು. ಬರುವ ತಿಂಗಳಿಗೆ ಐವತ್ತೈದು ವರ್ಷ. ಇನ್ನು ಮದುವೆ, ನನ್ನದೇ ಸಂಸಾರ ಅನ್ನುವ ಕನಸನ್ನಾದರೂ ಕಾಣಲು ಸಾಧ್ಯವೇ? ಹಂಬಲಿಸಿ ಹಂಬಲಿಸಿ ರಾತ್ರಿಯೆಲ್ಲಾ ನಿದ್ರೆಗೆಟ್ಟು ಹೊರಳಾಡುತ್ತಿದ್ದ ದಿನಗಳು ನೆನಪಿಗೆ ಬಂದು ತುಟಿಯ ಮೇಲೆ ವಿಷಾದದ ನಗು ಮೂಡಿತು.

ದೊಡ್ಡ ಮಗಳು ವಿಧವೆಯಾಗಿ ಮನೆ ಸೇರಿದ್ದರೂ, ಮದುವೆ ವಯಸ್ಸು ಮೀರುತ್ತಿರುವ ಮಕ್ಕಳು ಮನೆಯಲ್ಲಿದ್ದರೂ ಅಪ್ಪನಿಗೆ ಅಮ್ಮನ ಚಪಲ ತೀರಿರಲಿಲ್ಲ… ಅಂದು ರಾತ್ರಿ ರೂಮಿನಲ್ಲಿ ನೀರು ತಂದಿಟ್ಟುಕೊಳ್ಳುವುದನ್ನು ಮರೆತಿದ್ದು, ತುಂಬಿಸಿಟ್ಟಿದ್ದ ಬಾಟಲಿಯನ್ನು ಅಡುಗೆಮನೆಯಿಂದ ತೆಗೆದುಕೊಂಡು ಬರುತ್ತಾ ಅಪ್ಪನ ಕೋಣೆಯ ಮುಂದೆ ಹಾಯುವಾಗ ಅಮ್ಮನ ಮಾತು ಬೇಡವೆಂದರೂ ಕಿವಿಗೆ ಬಿದ್ದಿತ್ತು… ‘ಅಲ್ಲಾ ಇಷ್ಟಿಷ್ಟು ಬೆಳೆದ ದೊಡ್ಡ ಮಕ್ಕಳು ಮದುವೆಯಿಲ್ದೆ ಮನೇಲಿರೋವಾಗ್ಲೂ ನಿಮ್ಗೀ ಚಪಲ ಸರಿಯನ್ಸುತ್ತಾ. ನಂಗೆ ನಾಚಿಕೆಯಾಗತ್ತೆ. ಮಕ್ಳನ್ನ ನೆನಸ್ಕೊಂಡ್ರೆ ಹೊಟ್ಟೇಲಿ ಸಂಕಟವಾಗತ್ತೆ’ ಅಂದಿದ್ದಳು. ‘ಅಯ್ಯೋ ಶೀಲಾ ಹೇಗೂ ದುಡೀತಿದಾಳೆ, ಮನೆಗೆಷ್ಟೋ ಅನುವಾಗಿದೆ, ಈಗೇನವಸ್ರ ಅವ್ಳ ಮದ್ವೆಗೆ. ಆಗೋ ಕಾಲಕ್ಕೆ ಆಗತ್ತೆ ಬಿಡು, ಅವ್ರ ಮದುವೆಗಳಾಗಿಲ್ಲ ಅನ್ನೋ ಕಾರ‍್ಣಕ್ಕೆ ನಾವು ಬ್ರಹ್ಮಚಾರಿಗಳಾಗಿರಕ್ಕಾಗತ್ತಾ. ಗಂಡ ಹೆಣ್ತೀಂತ ಅಂದ್ಮೇಲೆ ಇವೆಲ್ಲಾ ಸಾಯೋ ತಂಕ ಇರೋದೇ ಈಗ್ಬಾ…’ ಎಂದಾಗ ಹೇಸಿಗೆಯೆನಿಸಿತ್ತು. 

ಕೋಣೆಗೆ ಬಂದವಳು ಗಟಗಟ ನೀರುಕುಡಿದು ಹಾಸಿಗೆಯ ಮೇಲೊರಗಿದರೂ ನಿದ್ರೆ ಬಂದಿರಲಿಲ್ಲ. ತಾವಾಗಿ ಯಾವುದನ್ನೂ ನೋಡುತ್ತಿಲ್ಲ ಕಡೆಗೆ ತಾವೇ ಎರಡೂ ಕಡೆಯ ಖರ್ಚು ಹಾಕ್ಕೊಂಡು ಮಾಡ್ಕೋತೀವಿ ಅಂತ ಕಿರಿದೂರಿನ ಜಮೀನ್ದಾರರ ಮನೆಯ ಸಂಬಂಧ ಬಂದಿದ್ದಾಗ ಅಪ್ಪ ಕೊಟ್ಟಿದ್ದದ್ದು ಎಂಥಾ ಕ್ಷುಲ್ಲಕ ಕಾರಣ ‘ಗಂಡು ಹೆಣ್ಣಿಗೆ ಬರೀ ಎರಡ್ವರ್ಷ ಅಂತ್ರ ಆಗತ್ತೆ. ಕಡೇ ಪಕ್ಷ ಐದಾರು ವರ್ಷಾನಾದ್ರೂ ಬೇಡ್ವೆ, ನಾನೊಪ್ಪಲ್ಲ’ ಎಂದಿದ್ದರು.

ಇನ್ನೊಂದು ಇದೇ ತರಹ ಸಂಬಂಧ ಬಂದಾಗ ‘ಗೋತ್ರ ಬೇರೆಯಾದ್ರೂ, ಪ್ರವರ ಒಂದೇ ಆಗತ್ತಲ್ಲ, ಬೇಡ’ ಎಂದಿದ್ದರು. ಆಗಲೇ ಅನ್ನಿಸಿದ್ದು ತಾನು ದುಡಿಯುತ್ತಲೇ ಇದ್ದರೆ ತನ್ನ ಮದುವೆ ಮಾಡುವ ಯೋಚನೆಯೇ ಅಪ್ಪನಿಗೆ ಬರುವುದಿಲ್ಲವೇನೋ ಎಂದು. ಕೆಲಸ ಬಿಟ್ಟರೆ ಪ್ರತಿಯೊಂದಕ್ಕೂ ಅಪ್ಪನ ಮುಂದೋ, ಅಣ್ಣನ ಮುಂದೋ ಕೈಚಾಚಬೇಕು.

ಈಗ ಸ್ವತಂತ್ರವಾಗಿರೋದು ಅಭ್ಯಾಸವಾಗಿಬಿಟ್ಟಿದೆ. ಕೈಚಾಚೋದು ಹೇಗೆ ಎಂದು ಯೋಚನೆಗೆ ಬಿದ್ದಿದ್ದಳು. ಆಮೇಲೆ ಆದದ್ದಾಗಲಿ ಎಂದು ‘ಆಫೀಸಿನ ವಾತಾವರಣ ಸರಿಯಿಲ್ಲ’ ಎನ್ನುವ ನೆಪವೊಡ್ಡಿ ಕೆಲಸ ಬಿಟ್ಟು ಬಂದಾಗ ಅಪ್ಪನಿಗೆ ಕೋಪವೇ ಬಂದಿತ್ತು. ‘ಏನು ವಾತಾವರಣ ಮಣ್ಣು, ಇರೋದ್ರಲ್ಲಿ ಅಡ್ಜಸ್ಟ್‌ ಮಾಡ್ಕೊಂಡು ಹೋಗ್ಬೇಕು. ತಿಂಗ್ಳಾ ತಿಂಗ್ಳಾ ಸಾವಿರ ರೂಪಾಯಿ ಸಂಬ್ಳ ಎಣ್ಸಿ ಕೊಡ್ತಿರ‍್ಲಿಲ್ವಾ. ರಾಜೀನಾಮೆ ವಾಪಸ್‌ ತೊಗೊಂಡು ಕೆಲ್ಸಕ್ಕೋಗು’ ಎಂದು ಕೂಗಾಡಿದ್ದರು. ತಕ್ಷಣವೇ ಅಮ್ಮ ‘ಮದ್ವೆ ಮಾಡೋ ಹುಡ್ಗೀಗೆ ಕೆಲ್ಸ ಯಾಕ್ಬೇಕು ಬಿಡಿ. ಇರೋಷ್ಟು ದಿನ ಮನೇಲಿ ಹಾಯಾಗಿರ‍್ಲಿ’ ಅಂದಾಗ ಬುಸುಗುಟ್ಟುತ್ತಾ ಅಪ್ಪ ಕಾಲು ಝಾಡಿಸಿ ಕೋಪದಿಂದ ಹೊರಹೋಗಿದ್ದರು.

ಎರಡು ತಿಂಗಳು ತನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದರು. ತಿಂಗಳ ಕೊನೆಯಲ್ಲಿ ಸುನಂದಾ ‘ನಿನ್ನ ಖರ್ಚಿಗಿಟ್ಟುಕೋ’ ಎಂದು ಇನ್ನೂರು ರೂಪಾಯಿ ಕೈಗಿಟ್ಟಾಗ ಅವಳನ್ನಪ್ಪಿಕೊಂಡು ಅತ್ತಿದ್ದಳು. ಬೆನ್ನು ನೇವರಿಸಿ ‘ಒಳ್ಳೆಯ ಕೆಲ್ಸ ಮಾಡ್ದೆ’ ಎಂದಷ್ಟೇ ಹೇಳಿ ಹೋಗಿದ್ದಳು. ಏನಾದರೇನು? ಜಾತಕದಲ್ಲಿ ಬರೀ ಹದಿನೆಂಟು ಗುಣ ಹೊಂದತ್ತೆ, ನಮ್ಮಂತಸ್ತಿಗೆ ತಕ್ಕವರಲ್ಲ! (ಯಾವ ಸುಡುಗಾಡು ಅಂತಸ್ಥಿತ್ತು ನಮಗೆ?!) ಹುಡುಗ ಹುಡುಗಿ ಹೆಚ್ಚುಕಡಿಮೆ ಒಂದೇ ಎತ್ತರದ ಹಾಗೆ ಕಾಣ್ತಾರೆ, ವರಸಾಮ್ಯ ಸರಿಹೋಗಲ್ಲ ಅಬ್ಭಾ! ಎಂಥೆಂತಾ ಕಾರಣಗಳು! ಒಟ್ಟಿನಲ್ಲಿ ಈ ಮನೆ ಮಾರಾಟವಾಗುವಂತಿಲ್ಲ; ಸಾಲ ಮಾಡಿ ಮದುವೆ ಮಾಡುವ ಮನಸ್ಸಿಲ್ಲ.

ಹೀಗೇ ಇಷ್ಟು ವರ್ಷವೇ ಕಳೆದುಹೋಯಿತಲ್ಲ! ತನ್ನದಾಗಲಿಲ್ಲವೆಂದು ಅಕ್ಕನನ್ನು ಬಿಟ್ಟು ತಂಗಿಯರಿಗೆ ಮಾಡುವಂತಿಲ್ಲವೆಂದು ಏನೇನೋ ಧರ್ಮಶಾಸ್ತ್ರ ಊದಿ ಕಲ್ಪನಾ, ಪುಷ್ಪ ಇಬ್ಬರೂ ಹಾಗೆಯೇ ಉಳಿದು ಹೋದರು. ಚೆನ್ನಾಗಿದ್ದವರಿಗೇ ಈ ಪಾಡಾದಾಗ ಇನ್ನು ತಲೆಕೆಟ್ಟ ರಾಜೇಶ್ವರಿಯ ಪಾಡೇನು?! ಹೊತ್ತು ಹೋಗದೆ ಟೈಲರಿಂಗ್‌ ಕಲಿತು, ಮನೆಯಲ್ಲೇ ಕುಳಿತು ಹೆಂಗಸರ, ಮಕ್ಕಳ ಬಟ್ಟೆಗಳನ್ನು ಹೊಲಿದು ಒಂದಿಷ್ಟು ಸಂಪಾದನೆ ಮಾಡುತ್ತಿರುವುದು ತನ್ನ ಖರ್ಚಿಗೆ ಸಾಕಾಗತ್ತೆ.

ಕಲ್ಪನಾಗೆ ಗಿಡಗಳನ್ನ ಬೆಳೆಸೋದ್ರಲ್ಲೇ ಆಸಕ್ತಿ. ಏನೋ ಒಂದಿಷ್ಟು ಹೂವಿನ ಗಿಡಗಳನ್ನೋ, ತರಕಾರಿ ಗಿಡಗಳನ್ನೋ ಹಾಕಿಕೊಂಡು ನೀರು ಹಾಕುತ್ತಾ, ಕಳೆ ಕೀಳುತ್ತಾ, ಪಾತಿ ಮಾಡುತ್ತಾ ಕಾಲ ಕಳೆಯುತ್ತಾಳೆ. ಮನೆಗಾಗುವಷ್ಟು ತರಕಾರಿ ಹಣ್ಣು ಹೂವನ್ನು ಬೆಳೆಯುತ್ತಾಳೆ. ಮಾವು, ಸಪೋಟ, ಸೀಬೆ, ಹಲಸು…. ಹೀಗೇ ಒಂದಿಪ್ಪತ್ತೋ, ಇಪ್ಪತ್ತೈದೋ ಮರಗಳಿವೆಯೇನೋ, ಮನೆಗಾಗುವಷ್ಟಿಟ್ಟುಕೊಂಡು ಮಿಕ್ಕ ಎಲ್ಲಾ ಮರಗಳನ್ನೂ ಬುಡನ್‌ ಸಾಬಿಗೆ ಗುತ್ತಿಗೆಗೆ ಕೊಟ್ಟು ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಾಳೆ.

ಎಲ್ಲಾ ಮರಗಳನ್ನು ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಾಳೆ. ಬೆಳಗಿಂದ ಸಂಜೆಯವರೆಗೆ ಅವಳಿಗೆ ಅದೇ ಕೆಲಸ. ನಲ್ಲಿಯಲ್ಲಿ ನೀರು ಬರದಿದ್ದರೆ ಬಾವಿಯಿಂದ ಸೇದಿ ಸೇದಿ ಹಾಕುತ್ತಿರುತ್ತಾಳೆ. ಏನೋ ಅಂತೂ ಅವಳ ಜೀವನ ಬಿಸಿಲಲ್ಲಿ ಬೇಯುವುದರಲ್ಲೇ ಕಳೆದುಹೋಗುತ್ತಿದೆ.

ಪುಷ್ಟನಿಗೆ ಸಂಗೀತದಲ್ಲಿ ವಿಪರೀತ ಆಸಕ್ತಿಯಿತ್ತು. ಸೀನಿಯರ್‌ ಪಾಸಾದ ಮೇಲೆ ತಿಂಗಳಿಗೆ ಐವತ್ತು ರೂಪಾಯಿ ಫೀಸ್‌ ಕೊಡಕ್ಕಾಗಲ್ಲ ಎಂದು ಅಪ್ಪ ಬಿಡಿಸಿಬಿಟ್ಟಿದ್ದರು. ಅವಳ ಮೇಷ್ಟ್ರು ಗೋಪೀನಾಥ್‌ ಮನೆಗೇ ಬಂದು ಕೇಳಿಕೊಂಡಿದ್ದರು. ಏನಾದರೂ ಅಪ್ಪ ಒಪ್ಪಲೇ ಇಲ್ಲವಲ್ಲ. ಕಡೆಗೆ ‘ಒಂದು ಕೆಲ್ಸ ಮಾಡಮ್ಮ, ನನ್ನ ಹತ್ರ ಬರೋ ಮಕ್ಕಳಿಗೆ ವರ್ಣದ ತನಕ ನೀನು ಪಾಠ ಹೇಳು, ಕೀರ್ತನೆಯಿಂದ ನಾನು ಮುಂದುವರಿಸ್ತೀನಿ. ಜೊತೆಗೆ ನಿನಗೂ ವಿದ್ವತ್ತಿನ ಪಾಠ ಹೇಳ್ತೀನಿ. ಮಕ್ಳಿಗೆ ಹೇಳ್ಕೊಟ್ಟಿದ್ದಕ್ಕೆ ನನ್ನ ಕೈಲಾದ್ದನ್ನ ನಿಂಗೆ ಕೊಡ್ತೀನಿ’ ಎಂದು ಹೇಳಿದ್ದಕ್ಕೆ ಅಪ್ಪ ಒಪ್ಪಿದ್ದರು. ಅಪ್ಪ ಹೋದಮೇಲೂ ಒಂದೆರಡು ವರ್ಷ ಹಾಗೇ ನಡೀತಿತ್ತು… ಮೇಷ್ಟ್ರ ಹೆಂಡತಿ ಪಂಪ್‌ ಸ್ಟೋವ್‌ ಸಿಡಿದು ಸತ್ತಿದ್ದರು.

ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಸಂಗೀತ ಶಾಲೆ ನಡೆಸಲು ಸಾಧ್ಯವಾಗದೆ ಅವರು ಸ್ಕೂಲಿನ ಕೆಲಸವನ್ನು ಮಾತ್ರಾ ಇಟ್ಟುಕೊಂಡು ಸಂಗೀತ ಶಾಲೆಯನ್ನು ಮುಚ್ಚಿದ್ದರು. ಆಗ ಇವಳ ಹತ್ತಿರ ಕಲಿಯುತ್ತಿದ್ದ ಮಕ್ಕಳು ಮನೆಗೇ ಬಂದು ಕಲಿಯಲು ಶುರು ಮಾಡಿದರು. ಈಗಲೂ ಹತ್ತು ಹನ್ನೆರಡು ಮಕ್ಕಳು ದಿನವೂ ಸಂಜೆ ಬಂದು ಕಲಿತು ಹೋಗುತ್ತಾರೆ. ತನ್ನ ಖರ್ಚಿಗೆ ಸಾಕಾಗುವಷ್ಟು ಸಂಪಾದನೆ ಮಾಡಿಕೊಳ್ಳುತ್ತಾಳೆ.

ರಾಜೇಶ್ವರಿಯಂತೂ ಮನೆಯಲ್ಲಿರುವವರೆಲ್ಲರಿಗೂ ಮಗುವೇ. ಅವಳಿಗಿನ್ಯಾರು ದಿಕ್ಕು. ಮನೆ ಮಾರಿ ಎಲ್ಲರೂ ತಂತಮ್ಮ ಪಾಲು ತೆಗೆದುಕೊಂಡು ಬೇರೆಯಾದರೆ ಅವಳನ್ನು ಯಾರು ನೋಡಿಕೊಳ್ಳಬೇಕು?! ಹೌದು ಬೇರೆಯಾಗಿ ಹೋಗೋದೆಲ್ಲಿಗೆ?!! ಯಾರಿಗೂ ಮದುವೆಯಿಲ್ಲ; ಸಂಸಾರವಿಲ್ಲ. ಹಾಗೆ ಹೋದರೆ ಸುನಂದಾ ಹೋಗಬಹುದು ಮಗನೊಂದಿಗೆ. ಅವಳೇನು ಯೋಚನೆ ಮಾಡ್ತಾಳೋ…

***

ಅಡುಗೆ ಕೆಲಸ ಮುಗಿಸಿದ ನಂತರ ಶೀಲಾ ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾಳ ಜೊತೆ ಮಾತನಾಡಲು ಹೊರಟಳು. ಕಳೆ ಕೀಳುತ್ತಾ ಕುಕ್ಕರುಗಾಲಲ್ಲಿ ಕೂತು ಯೋಚನೆಯಲ್ಲಿ ಮುಳುಗಿದ್ದ ಕಲ್ಪನಾಗೆ ಇವಳು ಬಂದದ್ದು ಅರಿವಿಗೆ ಬರಲಿಲ್ಲ. ‘ಏನು ಇಷ್ಟೊಂದು ಯೋಚ್ನೇಲಿ ಮುಳುಗ್ಹೋಗಿದೀಯ’ ಅನ್ನುತ್ತಾ ಪಕ್ಕದ ಹಲಸಿನ ಮರದ ನೆಲಕ್ಕೇ ಬಾಗಿದ್ದ ಕೊಂಬೆಯ ಮೇಲೆ ಕೂರುತ್ತಾ ಕೇಳಿದಳು. ಆಗ ತಲೆಯೆತ್ತಿದ ಕಲ್ಪನಾ ಕೆಲಸ ನಿಲ್ಲಿಸಿ ‘ಓ, ನೀನಾ… ಇನ್ನೇನಿರತ್ತೆ, ನಿನ್ನೆ ವೆಂಕ್ಟೇಶ ಹೇಳಿದ್ನೇ ಯೋಚಿಸ್ತಿದ್ದೆ ಕಣೆ. ಈ ಮನೆ ಮಾರಿದ್ರೆ ಇಷ್ಟು ದೊಡ್ಡ ತೋಟಾನ ಬಿಟ್ಟುಕೊಟ್ಟು ಹೋಗ್ಬೇಕಲ್ಲಾ, ಮುಂದೆ ಇಡೀ ಜೀವ್ನ ನಾನೇನ್ಮಾಡ್ಲಿ? ಈಗ ಹೇಗೇಂತ ಗೊತ್ತಾಗ್ದೇನೇ ಹೊತ್ತುಹೋಗ್ತಿದೆ.

ಆಮೇಲೆ ಇಡೀ ದಿನ ಕೆಲ್ಸ ಇಲ್ದೆ ಕೂತ್ಕೊಂಡು ನಾನೇನ್ಮಾಡ್ಲೇ. ಮದ್ವೆಯಾಗೋ ಕಾಲಕ್ಕೆ ಇದು ಮಾರಾಟವಾಗಿದ್ರೆ ಏನೋ ಸಂಸಾರ ಅಂತ ಒಂದಿರೋದು… ಈಗ ದುಡ್ಡಿಟ್ಕೊಂಡು ಏನ್ಮಾಡೋಣ ಹೇಳು. ನಂಗ್ಯಾವ ಸಂಸಾರ ಇದೆ ಖರ್ಚು ಮಾಡಕ್ಕೆ? ಅವತ್ತು ನಾನು ಆ ಕೆಲ್ಸ ಮಾಡಿದ್ರೆ ಚೆನ್ನಾಗಿರೋದೇನೋ ಅಂತ ಇವತ್ತು ತುಂಬಾ ಅನ್ನಿಸ್ತಿದೆ’ ಎನ್ನುತ್ತಾ ಸೆರಗಿಂದ ಕಣ್ಣಿಂದ ಜಾರುತ್ತಿದ್ದ ನೀರನ್ನು ಒರಸಿಕೊಂಡಳು. ‘ಯಾವ ಕೆಲ್ಸ?’ ಶೀಲಾ ಅಚ್ಚರಿಯಿಂದ ಕೇಳಿದಳು. ‘ಬಿಡು ಆ ವಿಷ್ಯ ಈಗ’ ಎನ್ನುತ್ತಾ ಕಲ್ಪನಾ ಸುಮ್ಮನಾದರೂ ಬಿಡದೆ ಶೀಲಾ ‘ಏನೇ ಅದು ಹೇಳೆ. ಹೇಳೆ ಪ್ಲೀಸ್’ ಎಂದು ಒತ್ತಾಯಿಸಿದಳು. 

‘ನಿಂಗೆ ಜ್ಞಾಪ್ಕ ಇದ್ಯೋ ಇಲ್ವೋ, ನಾನು ಈ ತೋಟ ಮಾಡಕ್ಕೆ ಶುರು ಮಾಡ್ದಾಗ ಸಲಹೆಗಳನ್ನ ಕೊಡಕ್ಕೆ ಅಂತ ಮಣ್ಣು ಪರೀಕ್ಷಾ ಕೇಂದ್ರದಿಂದ ಒಬ್ಬ ಆಫೀಸರ್‌ ಬರ‍್ತಿದ್ರು, ಶಿವರಾಮೂಂತ. ಈ ಹಣ್ಣಿನ ಮರದ ಸಸಿಗಳ್ನೆಲ್ಲಾ ಅವ್ರೇ ಹಾರ್ಟಿಕಲ್ಚರ್‌ ಡಿಪಾರ್ಟ್ಮೆಂಟ್ನಿಂದ ತಂದುಕೊಟ್ಟಿದ್ರು…’ ಹೇಳಿ ನಿಲ್ಲಿಸಿದಳು. ‘ಹೌದು, ಒಂದೆರಡು ವರ್ಷಾನೇ, ಈ ಸಸಿಗಳೆಲ್ಲಾ ದೊಡ್ಡೋವಾಗೋ ತನ್ಕಾನೇ ಇಲ್ಲಿಗೆ ಬರ‍್ತಿದ್ರಲ್ಲ. ಏನವರ ವಿಷ್ಯ?’ ಕೇಳಿದಳು ಶೀಲಾ. ‘ಅದೂ… ಆ ಪರಿಚಯ ಸ್ವಲ್ಪ ಮುಂದಕ್ಕೆ ಹೋಗಿ ಮದ್ವೆ ಪ್ರಸ್ತಾಪ ಮುಂದಿಟ್ಟಿದ್ರು. ನಂಗೇನು ಹೇಳ್ಬೇಕೂಂತಾನೇ ಗೊತ್ತಾಗ್ಲಿಲ್ಲ. ಅಮ್ಮನ ಹತ್ರ ಹಿಂಗಂದೆ. ʻಜಾತಿಯಿಲ್ಲದ ಜಾತಿಯವ್ರನ್ನ ಮದ್ವೆಯಾದ್ರೆ ಮಿಕ್ಕ ಹೆಣ್ಮಕ್ಳ ಗತಿಯೇನು? ಅಂತಾ ಯೋಚ್ನೇನೇ ಇಟ್ಕೋಬೇಡʼ ಅಂದ್ರು. ಮುಂದುವರೆಯೋಷ್ಟು ಧೈರ್ಯ ನಂಗೆ ಬರ‍್ಲಿಲ್ವೆ. ಸುಮ್ನಾಗ್ಬುಟ್ಟೆ.

ಆಗ ಕೇರ್‌ ಮಾಡ್ದೆ, ಹೊರ‍್ಟುಹೋಗಿದ್ರೆ ಒಂದು ಸಂಸಾರಾಂತಾನಾದ್ರೂ ಇರೋದೇನೋ ಅಂತ ಎಷ್ಟೋಸಲ ಅನ್ಸತ್ತೆ. ಅವ್ರೂ ನಂಗೋಸ್ಕರ ಎರಡ್ಮೂರು ವರ್ಷ ಕಾದು ಆಮೇಲೆ ಯಾರ‍್ನೋ ಮದ್ವೆ ಮಾಡ್ಕೊಂಡ್ರು. ಈಗ ಈ ಮರಗಳೇ ಅವರ ನೆನಪಾಗಿ ಉಳ್ದಿರೋದು. ಇದ್ನೂ ಬಿಟ್ಕೊಟ್ಟು ಹೋಗೋದೂಂದ್ರೆ ಮನಸ್ಸಿಗೆ ತುಂಬಾ ಕಷ್ಟವಾಗತ್ತಲ್ವಾ?’ ಎಂದು ಅಳುತ್ತಾ ಸೆರಗಿಂದ ಕಣ್ಣೊರಸಿಕೊಂಡಳು.

ಶೀಲನಿಗೂ ಮುಂದೆ ಮಾತು ತೋರದೆ ಪೆಚ್ಚಾಗಿ ಅವಳ ಪಕ್ಕದಲ್ಲೇ ಕುಳಿತು ಸಮಾಧಾನ ಪಡಿಸುವಂತೆ ಬೆನ್ನು ಸವರಿದಳು. ‘ಈಗ ದುಡ್ಡಿಟ್ಕೊಂಡು ನಾನೇನ್ಮಾಡ್ಲಿ ಶೀಲಾ…’ ಎನ್ನುತ್ತಾ ಬಿಕ್ಕತೊಡಗಿದಾಗ ‘ನೀನು ಇದುವರ‍್ಗೂ ನನ್ನತ್ರ ಈ ವಿಷ್ಯ ಹೇಳ್ಳಿಲ್ವಲ್ಲೇ’ ಎಂದಳು ಶೀಲಾ. ‘ಹೇಳಿದ್ರೆ ನೀನೇನ್ಮಾಡ್ತಿದ್ದೆ. ಇವತ್ಯಾಕೋ ಮನಸ್ಸು ತುಂಬಾ ಕದಡಿಹೋಗಿ ಆ ವಿಷ್ಯ ಬಂದ್ಬಿಡ್ತು ಅಷ್ಟೇ. ಹೋಗ್ಲಿ ಬಿಡು, ಒಳಗ್ಹೋಗೋಣ ನಡಿ, ಊಟದ ಹೊತ್ತಾಯ್ತೇನೋ’ ಎನ್ನುತ್ತಾ ಕೈಯಲ್ಲಿದ್ದ ಸನಿಕೆಯನ್ನು ಬುಟ್ಟಿಯನ್ನೂ ತೆಗೆದುಕೊಂಡು ಎದ್ದಳು.

ಶೀಲಳ ಮನಸ್ಸು ಕದಡಿ ಹೋಗಿತ್ತು. ಮನೆಯ ಮುಂದಿನ ಒಪ್ಪಾರದಲ್ಲಿ ಸಂಜೆಯ ನಸುಗತ್ತಲಲ್ಲಿ ಒಬ್ಬಳೇ ಕುಳಿತು ಯೋಚನೆಗೆ ಬಿದ್ದಳು. ಪುಷ್ಪನ ಸಂಗೀತದ ಕ್ಲಾಸು ನಡೆಯುತ್ತಿತ್ತು. ತನಗೆ ಸಂಗೀತದ ಗಂಧವೂ ಇಲ್ಲ. ಆದರೂ ಅವಳು ಹಾಡುತ್ತಿರುವಾಗ ಕೂತು ಕೇಳಬೇಕು ಅನ್ನಿಸುತ್ತಿತ್ತು. ಯಾರಿಗೋ ʻಶ್ರೀರಂಗ ಪುರವಿಹಾರೆ…ʼ ಹೇಳಿಕೊಡುತ್ತಿದ್ದಳು. ಪಾಠವಾದ ಮೇಲೆ ಆ ಹುಡುಗಿ ʻಪೂರ್ತಿ ಹಾಡು ಹೇಳಿʼ ಎಂದು ಕೇಳಿದಳೇನೋ.

ತಂಬೂರಿ ಶ್ರುತಿಯನ್ನು ಮತ್ತೊಮ್ಮೆ ಸರಿಮಾಡಿಕೊಂಡು ತನ್ಮಯಳಾಗಿ ಹಾಡುತ್ತಿದ್ದಳು. ಶೀಲಾನಿಗೂ ಮನಸ್ಸು ತುಂಬಿಬಂದಂತಾಗಿ ಕಣ್ಣು ಮುಚ್ಚಿ ಕಂಬಕ್ಕೊರಗಿ ಕುಳಿತು ಹೃದಯವನ್ನು ತುಂಬಿಕೊಳ್ಳತೊಡಗಿದಳು. ಅದೆಷ್ಟು ಹೊತ್ತು ಹಾಡುತ್ತಿದ್ದಳೋ, ನಿಲ್ಲಿಸಿದಾಗ ಮುಗಿದೇಹೋಯಿತೇ ಎನ್ನಿಸಿತು. ಆ ಹುಡುಗಿ ಪಾಠ ಮುಗಿಸಿಕೊಂಡು ಹೊರಟಳು. ತಂಬೂರಿ, ಜಮಖಾನೆ ಎಲ್ಲವನ್ನೂ ಎತ್ತಿಟ್ಟು ಹೊರಬಂದ ಪುಷ್ಟ ತಾನೂ ಒಪ್ಪಾರದಲ್ಲಿ ಕುಳಿತುಕೊಳ್ಳಬೇಕೆಂದು ಬಂದವಳು ಶೀಲನನ್ನು ನೋಡಿ ಬೆಚ್ಚಿ ‘ಓ… ನೀನಿಲ್ಲೇ ಕೂತಿದೀಯಾ” ಎಂದಳು. “ಹ್ಞೂಂ, ಯಾಕೋ ಮನಸ್ಸೇ ಕದಡಿಹೋಗಿದೆ ಕಣೆ. ಬಾ ಕೂತ್ಕೋ’ ಎನ್ನುತ್ತಾ ತಂಗಿಯನ್ನು ಕರೆದಳು.

ಪಕ್ಕದಲ್ಲಿ ಬಂದು ಕುಳಿತ ಪುಷ್ಪಾ ಎಲ್ಲೋ ಕಳೆದುಹೋಗಿದ್ದಳು. ಏನಾದರೂ ಮಾತನಾಡುತ್ತಾಳೇನೋ ಎಂದು ಕಾದ ಶೀಲಾ ‘ಯಾಕೇ ಮೌನವಾಗಿದ್ದೀ?’ ಕೇಳಿದಳು. ‘ಯಾಕೋ ಇವತ್ತು ಗೋಪಿನಾಥ್‌ ಮೇಷ್ಟ್ರು ತುಂಬಾ ಜ್ಞಾಪಕಕ್ಕೆ ಬಂದ್ರು ಕಣೆ. ʻರಂಗ ಪುರವಿಹಾರೆʼ ಅವರಿಗೆ ತುಂಬಾ ಇಷ್ಟವಾದ ಹಾಡು. ಅದೆಷ್ಟು ಚೆನ್ನಾಗಿ ಹಾಡ್ತಿದ್ರೂಂದ್ರೆ, ನಂಗೆ ಇಡೀ ಜೀವ್ಮಾನಾನೇ ಅವ್ರ ಈ ಹಾಡು ಕೇಳ್ತಾ ಕೂತ್ಕೊಂಡ್ಬಿಡ್ಬೇಕು ಅನ್ನಿಸ್ಬಿಡೋದು ಕಣೆ’ ಎನ್ನುತ್ತಾ ಎನ್ನುತ್ತಾ ಅವಳ ಮಾತು ಭಾರವಾಗತೊಡಗಿ ಗದ್ಗದವಾಯಿತು. ‘ಅದ್ಯಾಕೆ ಇಷ್ಟು ಎಮೋಷನಲ್‌ ಆಗ್ತಿದೀಯ ಪುಷ್ಪಾ. ನೀನೂ ಇವತ್ತು ಅಷ್ಟೇ ಚೆನ್ನಾಗಿ ಹಾಡ್ದೆ. ನಿಂಗೆ ಚಿಂತೆ ಮರೆಯಕ್ಕೆ ಈ ಸಂಗೀತ ವರವಾಗಿದೆ ಕಣೆ’ ಎಂದಳು ಶೀಲಾ. ಎಷ್ಟೋ ಹೊತ್ತು ಸುಮ್ಮನಿದ್ದ ಪುಷ್ಪಾ ‘ಅವತ್ತು ನಾನು ಹಾಗೆ ಕೇಳ್ಬಾರ‍್ದಿತ್ತೇನೋ ಅಂತ ತುಂಬಾ ಸಲ ಅನ್ಸತ್ತೆ. ಒಂದು ಕೀಳರಿಮೆ ನನ್ನನ್ನ ಕಾಡತ್ತೆ’ ಎಂದಳು. ‘ಯಾರನ್ನ, ಏನ್ಕೇಳ್ದೆ?’ ಬೆಪ್ಪಾಗಿ ಕೇಳಿದಳು ಶೀಲಾ. ‘ಅದೇ ಗೋಪೀನಾಥ್‌ ಸರ್‌ನ” ಎಂದಳು ಪುಷ್ಪ. ‘ಏನ್ಕೇಳ್ದೆ, ಏನ್ವಿಷಯ ಸರೀಗ್ಹೇಳೆ?’ ಎಂದಳು ಶೀಲಾ. 

ಎಲ್ಲೋ ಕನಸಿನಲ್ಲಿರುವವರ ಹಾಗೆ ಪುಷ್ಪಾ ಹೇಳತೊಡಗಿದಳು ‘ಗೋಪೀನಾಥ್‌ ಸರ್‌ ಹೆಂಡ್ತಿ ಹೋಗ್ಬುಟ್ಟಿದ್ರಲ್ಲ; ಆಗ ಅವ್ರ ಕ್ಲಾಸ್‌ ಮುಚ್ಬಿಟ್ರಲ್ವಾ, ತಿಂಗ್ಳಾದ್ಮೇಲೆ ಅವ್ರನ್ನ ನೋಡ್ಕೊಂಡ್ಬರೋಣಾಂತ ಅವ್ರ ಮನೆಗೆ ಹೋಗಿದ್ದೆ. ಎರ‍್ಡೂ ಪುಟ್ಟ ಮಕ್ಳೇ ಅಲ್ವಾ, ಬೆಳ್ಗಿಂದ ಸಂಜೇವರ‍್ಗೂ ಅವ್ರತ್ತೆ ಮನೇಲಿ ಬಿಟ್ಟಿದ್ದು ಸಂಜೆ ಸ್ಕೂಲಿಂದ ಬರ‍್ತಾ ಕರ‍್ಕೊಂಡು ಬಂದಿದ್ರು. ನಾನು ಹೋದಾಗ ಒಂದ್ಮಗು ಕಕ್ಕ ಮಾಡ್ಕೊಂಡಿತ್ತೇನೋ ತೊಳಿಸ್ತಿದ್ರು. ತೊಟ್ಟಿಲಲ್ಲಿದ್ದ ಮಗು ಹಸಿವಿಗೇನೋ ಜೋರಾಗಿ ಅಳ್ತಿತ್ತು.

ಹೋಗಿ ಎತ್ಕೊಂಡು ಮಗೂನ ಸಮಾಧಾನ ಮಾಡ್ತಿದ್ದೆ. ಅಷ್ಟ್ರಲ್ಲಿ ಫೀಡಿಂಗ್‌ ಬಾಟಲ್ ತೊಗೊಂಡ್ಬಂದ್ರು. ಇಸ್ಕೊಂಡು ಕುಡಿಸ್ತಾ, ನಂಗೆ ತಿಳ್ದ ನಾಲ್ಕು ಸಮಾಧಾನದ ಮಾತಾಡ್ದೆ. ಅಷ್ಟೇ ಮಾತಾಡಿ ಎದ್ಬಂದಿದ್ರೆ ಚೆನ್ನಾಗಿತ್ತೇನೋ. ಕಳ್ಸಕ್ಕೇಂತ ಗೇಟಿನ ಹತ್ರ ಬಂದವರಿಗೆ ‘ಮಕ್ಳನ್ನ ನೋಡ್ಕೊಳಕ್ಕಾದ್ರೂ ಇನ್ನೊಂದು ಮದ್ವೆ ಮಾಡ್ಕೊಂಡ್ಬಿಡಿ ಸರ್‌’ ಎಂದ್ಬಿಟ್ಟೆ. ‘ಅದು ಅಷ್ಟು ಸುಲ್ಭಾನೇನಮ್ಮ. ಎರ‍್ಡು ಪುಟ್‌ ಮಕ್ಳಿರೋ ಒಬ್ಬ ಪ್ರೈಮರಿ ಸ್ಕೂಲ್‌ಮೇಷ್ಟ್ರನ್ನ ಯಾರು ಮದ್ವೆಯಾಗ್ತಾರೆ ಹೇಳು’ ಅಂದ್ರೆ ಸುಮ್ನಿರ‍್ದೆ ‘ಯಾಕಾಗಲ್ಲ ಸರ್‌, ನಿಮ್‌ ವಿದ್ಯೆಗೆ ಒಲಿದು ಯಾರ‍್ಬೇಕಾದ್ರೂ ಆಗ್ತಾರೆ’ ಅಂದ್ಬಿಟ್ಟೆ. ‘ಅದೆಲ್ಲಾ ನೀನು ಹೇಳಕ್ಕೆ ಚೆನ್ನ, ಈಗ ನಿನ್ನನ್ನೇ ಕೇಳ್ದೆ ಅಂತಿಟ್ಕೋ, ನೀನು ಮದ್ವೆಯಾಗ್ತೀಯಾ ನನ್ನ’ ಅಂದ್ರು ನನ್ನ ಕಣ್ಣಲ್ಲಿ ಕಣ್ಣಿಟ್ಟು. ನಂಗೆ ಕಪಾಳಕ್ಕೆ ಹೊಡ್ದ ಹಾಗಾಯ್ತು ಕಣೆ. ‘ಬರ‍್ತೀನಿ ಸರ್’ ಅಂತ ಸೀದಾ ಬಂದ್ಬಿಟ್ಟೆ. 

ಎಷ್ಟೋ ದಿನವಾದ್ರೂ, ಅವ್ರು ಕೇಳಿದ ಪ್ರಶ್ನೇನೇ ನನ್‌ತಲೇಲಿ ಸುತ್ತಾ ಇತ್ತು. ಕಡೆಗೊಂದು ದಿನ ʻಯಾಕಾಗ್ಬಾರ‍್ದುʼ ಅನ್ನಿಸ್ಬಿಡ್ತು. ಅಪ್ಪ ಅಮ್ಮನ್ನ ಕೇಳಿದ್ರೆ ಖಂಡಿತಾ ಒಪ್ಕೊಳಲ್ಲ ಅಂತ ಗೊತ್ತಿತ್ತು. ಓಡಿಹೋಗಿ ಮದ್ವೆ ಆಗಕ್ಕಾಗ್ತಿತ್ತಾ ಹೇಳು? ನಾನು ಹೀಗೆ ಒದ್ದಾಡ್ತಿರೋವಾಗ್ಲೇ ಕಡೆಗೊಂದು ದಿನ ಅವ್ರು ತಮ್ಮೂರಿಗೆ ಟ್ರಾನ್ಸ್‌ಫರ್‌ ತೊಗೊಂಡು ಹೋದ್ರು ಅಂತ ಕೇಳ್ದೆ. ಪ್ರಶ್ನೆ ಹಾಗೇ ನಿಂತ್ಹೋಯ್ತಲ್ವಾ…. ನಾನುತ್ರ ಕೊಡ್ಲೇ ಇಲ್ಲ’ ಎಂದು ನಿಲ್ಲಿಸಿ ಎತ್ತಲೋ ನೋಡತೊಡಗಿದಳು. ಎಷ್ಟೋ ಹೊತ್ತಿನ ಮೇಲೆ ‘ಅವತ್ತು ನಾನು ಧೈರ್ಯ ಮಾಡಿ, ಆಗ್ಲೀಂತ ಅವ್ರನ್ನ ಮದ್ವೆ ಮಾಡ್ಕೊಂಡಿದ್ರೆ ಚೆನ್ನಾಗಿತ್ತೇನೆ?’ ಕೇಳಿದಾಗ ಶೀಲನಿಗೆ ಉತ್ತರ ಹೊಳೆಯದೆ ‘ಆಗಿ ಹೋಗಿದ್ದನ್ನ ಈಗ ನೆನಪಿಸಿಕೊಂಡು ಮಾಡೋದೇನಿದೆ ಬಿಡು’ ಎಂದಳು.

‘ನಿಜ, ಈಗ ಈ ಮನೆ ಮಾರಿ, ಎಲ್ರೂ ಒಟ್ಗೆ ಇರ‍್ಬೇಕೂಂದ್ರೆ ದೊಡ್ಡ ಮನೇನೇ ಬೇಕು. ಎಲ್ರಿಗೂ ಅವ್ರವ್ರ ರೂಮಲ್ಲಿ ಸ್ವತಂತ್ರವಾಗಿದ್ದು ಅಭ್ಯಾಸವಾಗಿ ಹೋಗಿದೆ. ಇಷ್ಟು ದೊಡ್ಮನೆ ಯಾರು ಕಟ್ಕೊಂಡು ಬಾಡ್ಗೆಗಿಟ್ಕೊಂಡು ಕೂತಿರ‍್ತಾರೆ ಹೇಳು. ನಂಪಾಡ್ಗೆ ನಾವಿರೋಣ ಅನ್ಕೊಳೋ ವಯಸ್ಸಾ ಇದು. ಯಾರ‍್ಗೂ ಯಾರೂ ಇಲ್ಲ. ಈ ಮನೇಲಿ ಯಾವ ಸುಖದ ನೆನಪೂ ನಮಗಿಲ್ಲ; ಆದರೆ ಈಗ ಇದನ್ನ ಬಿಟ್ಟು ಹೋಗೋದನ್ನ ಯೋಚ್ನೆ ಮಾಡೋದು ಕಷ್ಟ ಅನ್ನಿಸ್ತಿದೆ. ಇನ್ನೆಲ್ಲೋ ಹೋದ್ರೆ ಮತ್ತೆ ನಂಗೆ ಸಂಗೀತದ ಸ್ಟೂಡೆಂಟ್ಸ್‌ ಸಿಕ್ತಾರಾ? ಮೊದ್ಲಿಂದ ಶುರು ಹಚ್ಕೋಬೇಕು. ಇಲ್ಲಿ ಶುರುವಾಗಿತ್ತು, ನಡೀತಿದೆ. ಟೈಂಪಾಸ್‌ ಆಗ್ತಿದೆ. ದುಡ್ಡಿಟ್ಕೊಂಡು ಏನ್ಮಾಡ್ಬೇಕಾಗಿದೆ ಈಗ. ಉಡೋ, ತೊಡೋ ಕಾಲದಲ್ಲಿ ಕಾರ್ಪಣ್ಯಾನೇ ಆಯ್ತು. ಈಗ ಅದೇ ಅಭ್ಯಾಸವಾಗ್ಹೋಗಿದೆ’ ಎನ್ನುತ್ತಾ ಮಾತು ನಿಲ್ಲಿಸಿದಳು.

ಎಷ್ಟು ಹೊತ್ತು ಹಾಗೇ ಮೌನವಾಗೇ ಕುಳಿತಿದ್ದರೋ ವೆಂಕಟೇಶ, ಗೋವಿಂದ ಸ್ಕೂಟರಿನಲ್ಲಿ ಬಂದು ಗೇಟು ತಳ್ಳಿದಾಗ ಇಹಕ್ಕೆ ಬಂದು ‘ಸರಿ ನಡಿ, ಇನ್ನು ಊಟಕ್ಕೆ ತಟ್ಟೆ ಹಾಕೋಣ’ ಎನ್ನುತ್ತಾ ಶೀಲಾ ಮೇಲೆದ್ದಳು. ಸೀರೆಯನ್ನು ಕೊಡವುತ್ತಾ ಹಿಂದೆಯೇ ಬಂದ ಪುಷ್ಪ ‘ಈ ವಿಷ್ಯ ಯಾರತ್ರಾನೂ ಬಾಯ್ಬಿಡ್ಬೇಡ’ ಎನ್ನುತ್ತಾ ಒಳನಡೆದಳು. ಟೀವಿ ನೋಡುತ್ತಾ ಕೂತಿದ್ದರು ಸುನಂದಾ, ಕಲ್ಪನಾ. ‘ಏನು ಮೀಟಿಂಗ್‌ ನಡೆಸಿದ್ರಿ ಅಕ್ಕ, ತಂಗಿ ಇಬ್ರೂ’ ಸುನಂದಾ ಕೇಳಿದಳು. ‘ಇನ್ನೇನಿರತ್ತೆ ಕಾಡುಹರಟೆ, ಸುದರ್ಶನ ಮನೆಗೆ ಬಂದ್ನಾ ತಟ್ಟೆ ಹಾಕೋದಾ?’ ಎನ್ನುತ್ತಾ ಶೀಲಾ ಒಳನಡೆದಳು. ಹಿಂದೆಯೇ ಎದ್ದು ಬಂದ ಕಲ್ಪನಾ ‘ಅಷ್ಟೇನಾ? ಗೋಪೀನಾಥ್‌ ವಿಷ್ಯ ಏನೂ ಹೇಳ್ಳಿಲ್ವಾ?’ ಕೇಳಿದಳು ಅಡುಗೆಮನೆಯಲ್ಲಿ. ‘ಗೋಪೀನಾಥ್?’ ಅಚ್ಚರಿಯಿಂದೆಂಬಂತೆ ಶೀಲಾ ಕೇಳಿದಾಗ ‘ಹಾಗಾದ್ರೆ ಯಾರೂ ಇಲ್ಲ ಬಿಡು’ ಎಂದ ಕಲ್ಪನಾ ತಟ್ಟೆಗಳನ್ನಿಡತೊಡಗಿದಳು. ಎಲ್ಲರೂ ಬಂದರು. ಮೌನವಾಗೇ ಊಟ ಸಾಗಿತು. ಊಟದ ನಂತರ ಒಂದಷ್ಟು ಹೊತ್ತು ಎಲ್ಲರೂ ಟೀವಿಯಲ್ಲಿ ಅಂದಿನ ವಾರ್ತೆಗಳನ್ನು ನೋಡುತ್ತಾ ಕುಳಿತರು. 

ಬೆಳಗ್ಗೆ ಬೇಗನೇ ಏಳಬೇಕಾದ್ದರಿಂದ ಸುನಂದ ಸ್ವಲ್ಪ ಹೊತ್ತಿನಲ್ಲೇ ಎದ್ದಳು. ಒಬ್ಬೊಬ್ಬರೇ ಅವಳನ್ನು ಅನುಸರಿಸಿದರು. ಕಡೆಗೆ ವೆಂಕಟೇಶ ಟೀವಿಯನ್ನಾರಿಸಿ ಗೇಟಿನ ಬೀಗವನ್ನು ಹಾಕಿಕೊಂಡು ಬಂದು ಬಾಗಿಲನ್ನು ಭದ್ರಪಡಿಸಿ ಮಹಡಿಯನ್ನು ಹತ್ತಿದವನು ತನ್ನ ಕೋಣೆಗೆ ಹೋಗದೆ ಬಿಸಿಲುಮಚ್ಚಿಗೆ ಹೋಗಿ ಅಲ್ಲಿದ್ದ ಕಟ್ಟೆಯ ಮೇಲೆ ಒಬ್ಬನೇ ಕುಳಿತು ಯೋಚಿಸತೊಡಗಿದನು. ಎಷ್ಟೋ ವರ್ಷಗಳಿಂದ ಎದುರುನೋಡುತ್ತಿದ್ದ ವಿಷಯ ಈಗ ಕಣ್ಣೆದುರೇ ಇರುವಾಗ ಏಕೆ ಖುಷಿಯಾಗುತ್ತಿಲ್ಲ ಎಂದು ಅವನಿಗೆ ಅರ್ಥವಾಗದಾಯಿತು.

ಮನೆಯನ್ನು ಮಾರುವುದೆಂದರೆ ಏನೋ ಅಭದ್ರತೆ ಕಾಡುತ್ತಿದೆ. ಮಾರಿ ಮಾಡುವುದೇನು ಎನ್ನುವ ಅನಿಶ್ಚಯತೆ ಕಾಡುತ್ತಿದೆ. ಮಾರಿ ಬಂದ ಹಣದಿಂದ ತಂಗಿಯರೇನು ಮಾಡಬಹುದು? ಒಬ್ಬೊಬ್ಬರೂ ಬೇರೆಯಾಗಿರಲು ನಿರ್ಧರಿಸುತ್ತಾರೆಯೇ ಇಲ್ಲವೇ, ಒಟ್ಟಿಗೆ ಬೇರೆ ಒಂದು ಮನೆಯಲ್ಲಿರುತ್ತಾರೆಯೇ. ಆಗ ತಾನೇನು ಮಾಡಬೇಕು? ಗೋವಿಂದ ಏನು ಮಾಡುತ್ತಾನೋ. ಇವತ್ತೆಲ್ಲಾ ಅನ್ಯಮನಸ್ಕನಾಗಿದ್ದ. ಮಧ್ಯಾಹ್ನ ಊಟದ ಸಮಯದಲ್ಲೂ ವ್ಯವಹಾರದ ವಿಷಯವನ್ನಷ್ಟೇ ಮಾತಾಡಿ ಎದ್ದ. ಅವನಿಗಿನ್ನೋ ನಲವತ್ತಾರೋ, ನಲವತ್ತೇಳೋ ಇರಬೇಕು.

ಮದುವೆ ಮಾಡಿಕೊಳ್ಳಬೇಕು ಅನ್ನಿಸಿದರೆ ಈಗಲೂ ಪ್ರಯತ್ನ ಪಡಬಹುದೇನೋ. ಆದರೆ ಏಕೋ ಅವನು ಮಾಡಿಕೊಳ್ಳುವ ವಯಸ್ಸಿನಲ್ಲೇ ಅಂಥಹ ಹುರುಪು ತೋರಲಿಲ್ಲ. ಅಣ್ಣ, ಅಕ್ಕಂದಿರದಾಗಲಿಲ್ಲ ಅನ್ನುವ ಹಿಂಜರಿಕೆಯಿಂದ ಹಾಗಿದ್ದನೇ? ಇಷ್ಟು ವರ್ಷವೂ ಅದರ ಬಗ್ಗೆ ಒಂದು ಸಲವೂ ಯೋಚಿಸಲೇ ಇಲ್ಲವಲ್ಲ ಎನ್ನಿಸಿತು ವೆಂಕಟೇಶನಿಗೆ.

‘ಓ… ನೀನಿಲ್ಲಿ ಕೂತಿದೀಯಾ? ನಾನು ನಿನ್ನ ರೂಮಿಗ್ಹೋಗಿ ನೋಡ್ದೆ. ಕಾಣ್ಲಿಲ್ಲ. ಬಾತ್ರೂಮಿಗ್ಹೋಗಿದೀಯೇನೋ ಅನ್ಕೊಂಡು ಬರ‍್ವಾಗ ಬಿಸಿಲಮಚ್ಚಿನ ಬಾಗಿಲು ತೆಗೆದಿದ್ದು ಕಾಣಿಸ್ತು. ಯಾರೋ ತೆಗೆದವ್ರು ಹಾಕಕ್ಕೆ ಮರೆತ್ಬಿಟ್ಟಿದಾರೇನೋ ಅಂತ ಹಾಕೋಣ ಅಂತ ಬಂದೆ. ನೀನಿಲ್ಲಿದೀಯ’ ಎನ್ನುತ್ತಾ ಗೋವಿಂದ ಪಕ್ಕದಲ್ಲಿ ಕೂತ. ಅವನ ಮುಖವನ್ನೊಮ್ಮೆ ನೋಡಿ ತಲೆತಗ್ಗಿಸಿದ ವೆಂಕಟೇಶ ಯೋಚನೆಯಲ್ಲಿರುವಂತೆ ತಲೆಯನ್ನು ಕೊಡಹುತ್ತಾ ‘ನೀನೇನ್ಯೋಚ್ನೆ ಮಾಡ್ದೆ ಗೋವಿಂದ?’ ಎನ್ನುತ್ತ ಅವನೆಡೆಗೆ ತಿರುಗಿದ.

‘ಏನೋ ನಂಗೂ ಏನೂ ತೋಚ್ತಿಲ್ಲ. ದುಡ್ಡು ಬಂದ್ರೆ ಸ್ವಲ್ಪ ನಮ್ಮ ಮಿಲ್ಗೆ ಹೊಸ ಮೆಷೀನ್‌ಗಳನ್ನ ತಂದು ಹಾಕ್ಕೊಂಡು ಇಂಪ್ರೂವ್‌ ಮಾಡ್ಬೋದೇನೋಂತ ಅನ್ಸತ್ತೆ. ಯಾವ ರಾಯನ ಕಾಲದ್ದೋ ಮೆಷೀನ್‌ಗಳನ್ನಿಟ್ಕೊಂಡು ಈಗ್ಲೂ ಓಡಿಸ್ತಿದೀವಿ. ಸ್ವಲ್ಪ ಕೆಪಾಸಿಟಿ ಜಾಸ್ತಿ ಮಾಡ್ಕೋಬೋದೂನ್ಸತ್ತೆ. ನೀನೇನಂತೀಯ?’ ಎನ್ನುತ್ತಾ ವೆಂಕಟೇಶನ ಮುಖವನ್ನೇ ನೋಡಿದ. ಅದಿರ‍್ಲಿ, ಇರಕ್ಕೆ ಏನು ವ್ಯವಸ್ಥೆ ಮಾಡ್ಕೋಬೋದು ಅಂತ ಯೋಚ್ನೆ ಮಾಡಿದೀಯ?’ ಕೇಳಿದ ವೆಂಕಟೇಶ. ‘ಅದ್ನೇನು ಯೋಚ್ನೆ ಮಾಡೋದು, ಎಲ್ರೂ ಏನು ಯೋಚ್ನೆ ಮಾಡ್ತಾರೋ ಅದೇ’ ಎಂದ ಸರಾಗವಾಗಿ.

‘ಅದಷ್ಟು ಸುಲಭ ಇಲ್ಲ ಗೋವಿಂದಾ, ಸುನಂದ ಮಗನ ಜೊತೆ ಬೇರೆ ಹೋಗ್ತೀನಿ ಅನ್ಬೋದು. ಇನ್ನೆರಡು ವರ್ಷದಲ್ಲಿ ಅವನು ದುಡಿಯಕ್ಕೆ ಶುರುಮಾಡ್ತಾನೆ. ಅವ್ಳಿಗೂ ರಿಟೈರ‍್ಮೆಂಟ್‌ ಆಗಿ ಪೆನ್ಷನ್‌ ಬರತ್ತೆ, ಒಂದಷ್ಟು ಇಡಿಗಂಟೂ ಸಿಕ್ಕತ್ತೆ. ಹಾಯಾಗಿ ಬೇರೆ ಮನೆ ಮಾಡ್ಕೊಂಡು ಮಗನಿಗೆ ಮದ್ವೆ ಮಾಡಿ ಸೆಟಲ್‌ ಆಗ್ತಾಳೆ. ಅವ್ಳ ಯೋಚ್ನೆ ಇಲ್ಲ. ಮಿಕ್ಕ ಮೂವರು ಏನ್ಮಾಡ್ಬೋದು ಅನ್ನೋದೆ ನನ್ನ ತಲೆ ತಿಂತಿದೆ. ಇಷ್ಟ್ರವರ‍್ಗೂ ಕೋಟೆ ಹಾಗಿರೋ ಈ ಮನೆ ಬಿಟ್ಟು ಅವ್ರು ಹೊರಗಿನ ಪ್ರಪಂಚಾನೇ ನೋಡಿಲ್ಲ. ಅವರ ವ್ಯವಹಾರ ಎಲ್ಲಾ ಈ ಕಾಂಪೌಂಡಲ್ಲೇ. ಈಗವ್ರು ಮೂರು ಜನಾನೇ ಬೇರೆ ಮನೆ ಮಾಡ್ಕೊಂಡಿರ‍್ತಾರಾ, ಸಾಧ್ಯಾನಾ, ರಾಜೇಶ್ವರೀನೇನೋ ಜೊತೆಗೆ ಕರ‍್ಕೊಂಡು ಹೋಗ್ಬೋದೂನ್ನು, ಅವಳ್ದೂ ಒಂದು ಪಾಲು ಸಿಗತ್ತಲ್ಲ. ಆಮೇಲೆ ನಾವಿಬ್ರು ಏನ್ಮಾಡ್ಬೇಕು? ನಿಂಗಿನ್ನೂ ವಯಸ್ಸಿದೆ. ಬೇಕಾದ್ರೆ ಈಗ್ಲೂ ಹೆಣ್ಣು ಸಿಗ್ಬೋದು. ಮದ್ವೆಯಾಗಿ ನಿಂದೇ ಸಂಸಾರ ಶುರು ಮಾಡ್ಕೋಬೋದು. ನಾನೇನು ಮಾಡ್ಲೀಂತಾನೇ ನಂಗರ್ಥ ಆಗ್ತಿಲ್ಲ’ ಎನ್ನುತ್ತಾ ಮಾತು ನಿಲ್ಲಿಸಿ ಮತ್ತೆ ತಲೆತಗ್ಗಿಸಿ ಕೂತನು.

‘ಏನ್‌ ತಮಾಷಿ ಮಾಡ್ತಿದೀಯಾ ವೆಂಕ್ಟೇಶ, ಈ ವಯಸ್ಸಲ್ಲಿ ನಂಗೆ ಮದ್ವೇನಾ? ಇಷ್ಟು ವರ್ಷವೂ ಇಲ್ದಿರೋ ಜಂಜಾಟಾನ ಈಗ ಕಟ್ಕೊಳಕ್ಕೆ ನಂಗೆ ಧೈರ್ಯ ಇಲ್ಲ. ಅವ್ರೆಲ್ಲಾ ಬೇರೆ ಯಾಕೆ ವ್ಯವಸ್ಥೆ ಮಾಡ್ಕೋತಾರೆ. ಇನ್ನೊಂದು ದೊಡ್ಮನೆ ನೋಡ್ಕೊಂಡು ಒಟ್ಗೇ ಇರ‍್ಬೋದಲ್ವಾ. ಸುನಂದಾ ಬೇಕಾದ್ರೆ ಬೇರೆ ಹೋಗೋ ಇಷ್ಟ ಇದ್ರೆ ಹೋಗ್ಲಿ. ನಾವು ಒಟ್ಗೇ ಇರಕ್ಕೇನು?’ ಎನ್ನುತ್ತಾ ಅವನ ಮುಖವನ್ನೇ ನೋಡಿದ.

‘ಈಗೇನೋ ಎಲ್ರೂ ತಮ್‌ ಖರ್ಚಿಗೆ ಬೇಕಾಗೋಷ್ಟನ್ನ ದುಡ್ಕೊಂಡು ಇಲ್ಲಿದ್ರು. ಮನೆ ಖರ್ಚಿಗೆ ಅಂತ ಸುನಂದಾ ಪ್ರತಿ ತಿಂಗ್ಳೂ ಒಂದಷ್ಟು ಕೊಡ್ತಿದ್ಲು. ಮಿಕ್ಕ ಖರ್ಚೆಲ್ಲಾ ನಮ್ಮಿಬ್ರ ಕಡೆಯಿಂದ ಆಗ್ತಿತ್ತು. ಈಗ ಕೈತುಂಬಾ ದುಡ್ಡು ಸಿಗೋವಾಗ ಅವ್ರಿಗೂ ಸ್ವತಂತ್ರ ಬೇಕೂಂತ ಅನ್ನಿಸ್ಬೋದಲ್ವಾ. ಅಷ್ಟಕ್ಕೂ ಎಲ್ರೂ ಒಟ್ಗೆ ಇರ‍್ಬೇಕೂಂದ್ರೆ ಆರೇಳು ರೂಮಿರೋ ಮನೆ ಸಿಗ್ಬೇಕು. ನಿಂಗ್ಯಾರು ಅಷ್ಟು ದೊಡ್ಡ ಮನೆ ಕಟ್ಟಿಸ್ಕೊಂಡು ಬಾಡ್ಗೆಗೆ ಕೊಡಕ್ಕೆ ಕಾಯ್ತಿದಾರೆ?. ಅಷ್ಟು ದೊಡ್ಮನೆ ಕೊಂಡ್ಕೊಳಕ್ಕೆ ಹೊರಟ್ರೆ ಮುಕ್ಕಾಲುವಾಸಿ ದುಡ್ಡು ಅದಕ್ಕೇ ಖರ್ಚಾಗತ್ತೆ. ಕೈಗೆ ಏನು ಬಂದ ಹಾಗಾಯ್ತು?’ ಎಂದ ವೆಂಕಟೇಶ. ‘ಅದೂ ಹೌದು’ ಎನ್ನುತ್ತಾ ಗೋವಿಂದ ಮೌನವಾಗಿ ಕೂತ. ಎಷ್ಟೋ ಹೊತ್ತಿನ ಮೇಲೆ ‘ಮಲ್ಕೋ ನಡಿ ಹೊತ್ತಾಯ್ತು’ ಎನ್ನುತ್ತಾ ವೆಂಕಟೇಶ ಎದ್ದ. ಗೋವಿಂದನೂ ಹಿಂದೆ ನಡೆದ.

***

ಅಂತೂ ಎಲ್ಲರೂ ಭಾನುವಾರ ರಾತ್ರಿ ಊಟವಾದ ಮೇಲೆ ಬೃಂದಾವನದ ಕಟ್ಟೆಯ ಮೇಲೆ ಸೇರಿದರು. ‘ಯಾರ‍್ಯಾರು ಏನೇನು ಯೋಚ್ನೆ ಮಾಡಿದ್ರಿ?’ ಎನ್ನುತ್ತಾ ವೆಂಕಟೇಶ ಪೀಠಿಕೆ ಹಾಕಿದ. ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. ನಿಧಾನವಾಗಿ ಸುನಂದಾ ‘ನಿನ್ನ ಅಭಿಪ್ರಾಯ ಏನು ವೆಂಕ್ಟೇಶ’ ಎಂದಳು. ‘ನಂದೇನು, ನೀವೆಲ್ಲಾ ಏನು ಯೋಚ್ನೆ ಮಾಡಿದ್ರೆ ಹಾಗೇ. ಮನೆ ಹೆಣ್ಮಕ್ಳಿಗೆ ಮದ್ವೆ ಮಾಡಕ್ಕಾಗ್ದೆ ಉಳಿಸ್ಕೊಂಡ್ವಲ್ಲ ಅನ್ನೊ ಕೊರಗು ನನ್ನಲ್ಲೇ ಉಳಿದುಹೋಗಿದೆ. ಸಾಲ ಮಾಡಕ್ಕೆ ಅಪ್ಪ ಹೆದರಿದ್ರು. ಊರೊಳ್ಗಿರೋ ಇಷ್ಟು ದೊಡ್ಡ ಜಾಗ ಮಾರಿದ್ರೆ ಎಲ್ರ ಮದ್ವೇನೂ ಆಗಿ ಒಂದಷ್ಟು ದುಡ್ಡೂ ಉಳಿಬಹ್ದು ಅನ್ನೋ ಲೆಕ್ಕಾಚಾರ ಅವರ‍್ದು. ಅವ್ರಿರೋ ತಂಕ ಅದು ಈಡೇರ‍್ಲಿಲ್ಲ. ಈಗೇನೋ ಕಾಲ ಕೂಡಿ ಬಂದಿದೆ. ಮಾರಿಬಿಟ್ಟು ನಿಮಗೆಲ್ರಿಗೂ ನಿಮ್ಮ ನಿಮ್ಮ ಭಾಗ ಕೊಟ್ಟುಬಿಟ್ರೆ ಅಷ್ಟರಮಟ್ಟಿಗಾದ್ರು ನನ್ನ ಕೊರಗು ಕಮ್ಮಿಯಾಗತ್ತೆ. ನಿಮ್ಮ ಮುಂದಿನ ಜೀವನಕ್ಕೆ ದುಡ್ಡಿನ ಕಷ್ಟ ಇರಲ್ಲಾನ್ಸತ್ತೆ. ಈಗ ನಿಮ್ಮೆಲ್ರ ಅಭಿಪ್ರಾಯ ಹೇಳಿ, ನಾನೂ ಗೋವಿಂದ ಏನ್ಮಾಡ್ಬೋದು ಅನ್ನೋದ್ನ ಆಮೇಲೆ ಯೋಚಿಸಿದ್ರಾಯ್ತು’ ಎಂದು ಸುನಂದನ ಮುಖವನ್ನು ನೋಡಿದ.

‘ನಂಗೆ ಯಾವ ನಿರ್ಧಾರಕ್ಕೂ ಬರಕ್ಕಾಕ್ತಿಲ್ಲ. ದುಡ್ಡು ಬಂದ್ರೇನೋ ಒಳ್ಳೇದೆ; ಆದ್ರೆ ಆಮೇಲೇನು ಅಂತಾನೂ ಯೋಚ್ನೆ ಮಾಡ್ಬೇಕಲ್ವಾ. ಸುದರ್ಶನ ಅಮೇರಿಕಾಗೆ ಹೋಗಿ ಮುಂದೆ ಓದ್ತೀನಿ ಅಂತಿದಾನೆ. ದುಡ್ಡು ಬಂದ್ರೆ ಸಾಲ ಮಾಡೋದೇನೋ ತಪ್ಪತ್ತೆ. ಆದ್ರೆ ಅವ್ನು ಅಲ್ಲಿಗೆ ಹೋದ್ರೆ ಯಾವಾಗ ವಾಪಸ್ಸು ಬರ‍್ತಾನೆ, ಅಥವಾ ನಿಜವಾಗ್ಲೂ ವಾಪಸ್ಸು ಬರ‍್ತಾನಾ, ಇಲ್ವಾ ಯಾವ್ದೂ ಇವತ್ತು ಗೊತ್ತಿಲ್ವಲ್ಲ. ಈ ವಯಸ್ಸಲ್ಲಿ ನಾನು ಒಬ್ಳೇ ಇರಕ್ಕಂತೂ ಆಗಲ್ಲ. ಒಬ್ರಿಗೊಬ್ರು ಜೊತೆಯಾಗಿ ಇರೋದೇ ಮೇಲೂನ್ಸತ್ತೆ. ಶೀಲ, ಕಲ್ಪನಾ, ಪುಷ್ಪ ಎಲ್ಲಾ ಅವ್ರ ಅಭಿಪ್ರಾಯಾನೂ ಹೇಳ್ಳಿ’ ಎಂದು ತಂಗಿಯರ ಮುಖವನ್ನು ನೋಡಿದಳು. 

ಇಷ್ಟರವರೆಗೆ ಸುಮ್ಮನೆ ಕೇಳಿಸಿಕೊಳ್ಳುತ್ತಾ ಕುಳಿತಿದ್ದ ಶೀಲಾ ತಲೆಯೆತ್ತಿ ‘ವೆಂಕ್ಟೇಶ, ಈಗ ದುಡ್ಡು ಬಂದ್ರೆ ನಮ್ಮ ಕಳೆದುಹೋದ ಆಯಸ್ಸು, ಕನಸು ಯಾವ್ದೂ ವಾಪಸ್ಸು ಬರಲ್ಲ ಕಣೋ. ಈ ವಯಸ್ಸಲ್ಲಿ ದುಡ್ಡಿಗೇನು ಬೆಲೆ ಇದೆ ಹೇಳು? ವಯಸ್ಸಿದ್ದಾಗ ಈಮನೆ ಅನ್ನೋ ಜೈಲಿಂದ ಯಾವಾಗ ಬಿಡುಗಡೆ ಸಿಕ್ಕು ಹಾರಿ ನನ್ನ ಸ್ವಂತದ್ದು ಅನ್ನೋ ಗೂಡನ್ನ ಸೇರ‍್ಕೋತೀನೋ ಅಂತ ಕಾಯ್ತಿದ್ದೆ. ಆದ್ರೆ ಆದಿನ ಬರ‍್ಲೇ ಇಲ್ಲ. ಈಗ ದುಡ್ಡು ಬಂದೇನು ಪ್ರಯೋಜ್ನ? ಒಬ್ಳೇ ಹೋಗಿ ಗೂಡು ಕಟ್ಟೋಷ್ಟು ಧೈರ್ಯ ನಂಗಿಲ್ವೋ. ಇದು ಕಷ್ಟಾನೋ, ಸುಖಾನೋ, ಬೇಸರಾನೋ, ಅಸಹನೀಯಾನೋ… ಒಟ್ನಲ್ಲಿ ಇದಕ್ಕೆ ಅಡ್ಜಸ್ಟ್‌ ಆಗಿಬಿಟ್ಟಿದೀನಿ. ಇನ್ನೆಷ್ಟು ಕಾಲವೋ, ಒಟ್ಗೇನೇ ಇಲ್ಲೇ ಇದ್ದು ಸತ್ರಾಯ್ತು ಬಿಡು’ ಎನ್ನುತ್ತಾ ದುಃಖ ಉಕ್ಕಿಬಂದು ಬಿಕ್ಕತೊಡಗಿದಳು.

ತಕ್ಷಣ ಪಕ್ಕದಲ್ಲಿದ್ದ ಪುಷ್ಪಾ ‘ಏ… ಯಾಕ್ಹೀಗೆ ಅಳ್ತಿದೀಯಾ? ನಾನು, ಕಲ್ಪನಾ ಎಲ್ಲಾ ನಿಂಥರಾನೇ ಇರೋರೇ ತಾನೇ. ಉಟ್ಟು ತೊಟ್ಟು ಸಂತೋಷ ಪಡೋ ಕಾಲಕ್ಕೆ ನಮ್ಗದು ಸಿಕ್ಲಿಲ್ಲ. ಈಗ ನಾವಿರೋ ರೀತೀಲೇ ಸಮಾಧಾನ ಕಂಡ್ಕೊಂಡಿದೀವಿ. ಈಗದ್ರಲ್ಲಿ ಆಸಕ್ತಿ ಇಲ್ಲ. ನಿನ್ಹಂಗೆ ನಮ್ಗೂ ಈಗ ಬೇರೆ ಹೋಗಿರಕ್ಕಾಗಲ್ಲ. ಏನು ಕಲ್ಪನಾ, ನೀನೇನಂತಿ’ ಎನ್ನುತ್ತಾ ಅವಳ ಕಡೆ ತಿರುಗಿದಳು. ‘ನಂಗೂ ಅಷ್ಟೇ ಈ ತೋಟಾನೇ ನನ್ನ ಸಂಸಾರ ಮಾಡ್ಕೊಂಡಿದೀನಿ. ಈ ಮರ ಗಿಡಗಳ್ನೇ ನನ್ನ ಗಂಡ ಮಕ್ಳು ಅನ್ಕೊಂಡಿದೀನಿ. ಈಗ ಬಿಟ್ಹೋಗು ಅಂದ್ರೆ ನಾನೆಲ್ಲಿಗ್ಹೋಗ್ಲಿ’ ಎನ್ನುತ್ತಾ ಉಕ್ಕಿಬಂದ ಕಣ್ಣೀರನ್ನು ಸೆರಗಿಂದ ಒರಸಿಕೊಂಡಳು.

ʻದುಡ್ಡು ಬರತ್ತೆ ಅಂದ್ರೆ ಎಲ್ರೂ ಕುಣ್ಕೊಂಡು ಖುಷಿ ಪಟ್ಕೋತಾರೆʼ ಅಂದುಕೊಂಡಿದ್ದ ವೆಂಕಟೇಶನಿಗೆ ಈ ರೀತಿ ಉಲ್ಟಾ ಹೊಡೆದಿದ್ದು ತಬ್ಬಿಬ್ಬಾಯಿತು. ಒಂದಷ್ಟು ಹೊತ್ತು ಯಾವ ಮಾತೂ ಇಲ್ಲದೆ ಮೌನವಾವರಿಸಿತು. ಮಧ್ಯೆ ಮಧ್ಯೆ ಶೀಲಾ ಮತ್ತು ಕಲ್ಪನಾರ ಬಿಕ್ಕುಗಳು ಮಾತ್ರಾ ಕೇಳುತ್ತಿದ್ದವು. ‘ಏನೋ ಗೋವಿಂದ ನೀನೇನಂತೀಯೋ?’ ಎನ್ನುತ್ತಾ ವೆಂಕಟೇಶ ಗೋವಿಂದನ ಕಡೆ ತಿರುಗಿದ.

‘ಈಗೇನೋ ಈ ವ್ಯವಸ್ಥೇಗೇ ಎಲ್ರೂ ಒಗ್ಗಿ ಹೋಗಿದೀವಿ. ಎಲ್ರಿಗೂ ಅವ್ರವ್ರ ಸ್ವತಂತ್ರ ಅವರ‍್ಗಿದೆ. ಸುನಂದಾ ಒಂದಿಷ್ಟು ಖರ್ಚಿಗೆ ಕೊಡ್ತಾಳೆ, ನಾವಿಬ್ರೂ ಒಂದಿಷ್ಟು ತಂದ್ಹಾಕ್ತೀವಿ. ಶೀಲಾ ಎಲ್ರಿಗೂ ಬೇಯಿಸಿ ಹಾಕ್ತಿದಾಳೆ. ಮನೇಲಿ ಒಂದಿಷ್ಟು ಕೆಲ್ಸ ಮಾಡ್ಕೊಂಡು ಎಲ್ರೂ ಅವ್ರವ್ರ ಖರ್ಚಿಗೆ ಬೇಕಾಗೋಷ್ಟು ದುಡ್ಕೋತಿದಾರೆ. ಇನ್ನು ರಾಜೇಶ್ವರಿ, ಸಾಯೋ ತಂಕ ಅವ್ಳು ಮಗೂನೇ. ಇಷ್ಟು ದೊಡ್ಡ ಜಾಗ ಇದೆ. ಮನೆಯೆಲ್ಲಾ ಸುತ್ಕೊಂಡು ಇದಾಳೆ. ಅವ್ಳಿರೋದೇ ಗೊತ್ತಾಗ್ತಿಲ್ಲ; ಇನ್ನೆಲ್ಲಾದ್ರೂ ಹೋದ್ರೆ ಅವ್ಳನ್ನ ಕಟ್ಟಿ ಹಾಕ್ದಾಗೆ ಆಗತ್ತಲ್ವಾ. ಹೀಗೇ ಇದ್ಬಿಡೋಣ ಬಿಡು. ಈ ಮನೆ ತಾತಂಗೆ ಇನಾಮಾಗಿ ಕೊಟ್ಟಿದ್ದಂತೆ. ನಾವೂ ಹಾಗೆ ನಮ್ಮ ಕಾಲಾನಂತರ ಇದನ್ನ ಯಾವ್ದಾದ್ರೂ ಅನಾಥಾಶ್ರಮಕ್ಕೋ, ವೃದ್ಧಾಶ್ರಮಕ್ಕೋ ಬರ‍್ಕೊಟ್ಟು ಹೋದ್ರಾಯ್ತು. ಧರ್ಮಕ್ಕೆ ಬಂದಿದ್ದು ಧರ್ಮಕ್ಕೇ ಹೋಗ್ಲಿ’ ಎಂದನು. 

ಎಲ್ಲರೂ ಅವನು ಹೇಳಿದ ಸಲಹೆಯ ಬಗ್ಗೆಯೇ ಯೋಚಿಸುತ್ತಾ ಕುಳಿತರು. ‘ಅದೇ ಸರಿಯೇನೋ. ಇರೋಷ್ಟು ಕಾಲ ಎಲ್ರೂ ಹೀಗೇ ಒಟ್ಗಿದ್ದೇ ಹೋಗೋಣ’ ಎಂದಳು ಸುನಂದಾ ಸ್ವಲ್ಪ ಹೊತ್ತಿನ ನಂತರ. ಮಿಕ್ಕವರೂ ಒಪ್ಪಿಗೆ ಸೂಚಿಸುವಂತೆ ತಲೆಯಾಡಿಸಿದರು. ವೆಂಕಟೇಶ ‘ಹಾಗಾದ್ರೆ ಅವ್ರಿಗೆ ಈ ಮನೆ ಮಾರೋ ಇಚ್ಛೆ ಇಲ್ಲ ಅಂತ ಹೇಳ್ಬಿಡ್ಲೇ, ಕಡೇ ಸಲ ಕೇಳ್ತಿದೀನಿ ಎಲ್ರಿಗೂ’ ಕೇಳಿದ. ‘ಇಟ್ಟ ನಾಮ ಇಟ್ಟಂಗೇ ಇರ‍್ಲಿ ಬಿಡು’ ಎಂದ ಗೋವಿಂದ. ಯಾರೂ ಮರುಮಾತನಾಡಲಿಲ್ಲ. ಇದಾವುದರ ಗೊಡವೆಯೂ ಇಲ್ಲದೆ ರಾಜೇಶ್ವರಿ ತನ್ನ ಪಾಡಿಗೆ ತಾನು ಪ್ರಾಕಾರದಲ್ಲಿ ಸುತ್ತುತ್ತಲೇ ಇದ್ದಳು…

‍ಲೇಖಕರು Admin

June 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. T S SHRAVANA KUMARI

  ಧನ್ಯವಾದಗಳು ಜಿ ಎನ್ ಮೋಹನ್ ಸರ್,
  ಧನ್ಯವಾದಗಳು ಟೀಮ್ ಅವಧಿ

  ಪ್ರತಿಕ್ರಿಯೆ
  • GURUPRASAD HALKURIKE

   ಒಂದು ಅದ್ಭುತ ಸಾಮಾಜಿಕ ಕಥೆ. ಸರಳ ನಿರೂಪಣೆ. ಮುಂದಾಗುವುದು ಗೊತ್ತಿಲ್ಲದಿದ್ದರೂ ಇಂದು ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂಬ ಸುಭದ್ರ ಎಂಬ ಕುಟುಂಬದ ಎಲ್ಲ ಸದಸ್ಯರ ಭಾವನೆ. ಹೆಣ್ಣು ಮಕ್ಕಳ ಮದುವೆಗೆ ಅವಕಾಶ ಬಂದಾಗ ಏನೇನೋ ಕಾರಣಗಳಿಂದ ಕೂಡಿಬರದೆ ಹಾಗೂ ಅವರುಗಳಿಗೆ ಮದುವೆಯಾಗದೆ ತಾವೂ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಲಾಗದೆ ಇರುವ ಇಬ್ಬರು ಕುಟುಂಬದ ಸದಸ್ಯರುಗಳು. ಹೀಗಿ ಅನಿಶ್ಚಿತತೆಯಿಂದ ದಿನಗಳನ್ನು ದೂಡುತ್ತಾ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರೂ ವಿಘಟಿತರಾಗುವ ಸಂದರ್ಭ ಬಂದಾಗ ಅದನ್ನು ಕಲ್ಪಿಸಿಕೊಳ್ಳಲಾಗದ ಸದಸ್ಯರುಗಳು ಪ್ರಸ್ತುತ ವಾತಾವಾರಣಕ್ಕೇ ಜೋತು ಬೀಳುವುದರೊಂದಿಗೆ ಕಥೆ ಮುಕ್ತಾಯವಾಗುವುದು. ಈ ವಾತಾವರಣದಿಂದ ಹೊರಬರಲು ಕೇವಲ ಸುನಂದಳ ಮಗ ಸುದರ್ಶನನಿಗೆ ಮಾತ್ರ ಸಾಧ್ಯವೇನೋ. ಅವನಾದರೂ ಅದನ್ನು ಉಪಯೋಗಿಸಿಕೊಂಡು ಹೊಸ ಜೀವನವನ್ನು ಪ್ರಾರಂಭಿಸಬಹುದೇನೋ ಎಂದು ಓದುಗರು ಕಲ್ಪಿಸಿಕೊಳ್ಳಬಹುದು. ಕಥೆಯ ನಿರೂಪಣೆ ಅತ್ಯಂತ ಸಮರ್ಪಕವಾಗಿ ಮಾಡಲಾಗಿದೆ. ಎಲ್ಲೂ ಬೇಸರವನ್ನುಂಟಾಗುವುದಿಲ್ಲ. ಓದುತ್ತಾ ಓದುತ್ತಾ ಓದುಗನು ತನ್ನನ್ನು ತಾನೇ ಮರೆತು ತಾನೂ ಕಥೆಯ ಒಂದು ಭಾಗವಾಗುವನು ಎಂದು ನನಗಿನಿಸಿತು. ಕಥಾ ಲೇಖಕಿಗೆ ಅಭಿನಂದನೆಗಳು.

   ಪ್ರತಿಕ್ರಿಯೆ
  • GURUPRASAD HALKURIKE

   ಶ್ರೀಮತಿ ಶ್ರವಣಕುಮಾರಿ ಅವರು ಪ್ರಸ್ತುತಿ ಪಡಿಸಿರುವ “ಬಂಗಲೆ ಮನೆ” ನೀಳ್ಗತೆ ಅತ್ಯಂತ ಸರಳವಾಗಿ ಮೂಡಿಬಂದಿದೆ. ಕಥೆಯ ಶೈಲಿ ಸುಂದರವಾಗಿದೆ. ಸಾಂಸಾರಿಕ ಸಮಸ್ಯೆಗಳ ನಡುವೆಯೂ ಕುಟುಂಬದ ಎಲ್ಲ ಸದಸ್ಯರೂ (ಒಬ್ಬರನ್ನು ಬಿಟ್ಟು) ಅವಿವಾಹಿತರಾಗಿಯೆ ಜೀವಿಸುವ ಹಾಗೂ ಅವಕಾಶ ಬಂದಾಗಲೂ ಹೆಣ್ಣು ಮಕ್ಕಳು ಅದನ್ನು ಉಪಯೋಗಿಸಿಕೊಳ್ಳುವ ಧೈರ್ಯವನ್ನು ತೋರದೇ ಅವಿವಾಹಿತರಾಗಿಯೇ ಮುಂದುವರೆಯುವರು ಹಾಗೂ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸನ್ನಿವೇಶಗಳು ಕಥೆಯ ಸುತ್ತ ಹೆಣೆದುಕೊಂಡಿವೆ. ಜೀವನದಲ್ಲಿ ಹಣವೇ ಮುಖ್ಯವಲ್ಲ ಬದಲಿಗೆ ಸುಭದ್ರತೆ ಹಾಗೂ ಸಂಬಂಧಗಳು ಹೆಚ್ಚಿನ ಪಾತ್ರವಹಿಸುತ್ತವೆ ಎಂಬುದು ಮನವರಿಕೆಯಾಗುವುದು ಕುಟುಂಬವು ವಿಘಟಿತವಾಗುವ ಸನ್ನಿವೇಶ ಬಂದಾಗಲೇ ಎಲ್ಲರಿಗೂ ಅರಿವಾಗುವುದು. ಕೊನೆಗೆ ಎಲ್ಲರೂ ಈಗಿರುವಂತೆಯೇ ಮುಂದುವರೆಯಲು ತೀರ್ಮಾನಿಸುವುದು ಕಥೆಗೆ ಸೂಕ್ತವಾದ ಅಂತ್ಯವೆಂದೆನಿಸುತ್ತದೆ. ಈ ಸನ್ನಿವೇಶದಿಂದ ಹೊರಬರಲು ಕೇವಲ ಸುನಂದಳ ಮಗ ಸುದರ್ಶನನಿಗೆ ಮಾತ್ರ ಸಾಧ್ಯವೇನೋ! ಒಟ್ಟಾರೆ ಬಂಗಲೆ ಮನೆ ಒಂದು ಸುಂದರ ಕಥೆ. ಶ್ರೀಮತಿ ಶ್ರವಣಕುಮಾರಿ ಅವರಿಗೆ ನನ್ನ ಅಭಿನಂದನೆಗಳು.

   ಪ್ರತಿಕ್ರಿಯೆ
 2. Sheela Sathish

  ಎಂದಿನಂತೆ ಸರಳ ಸುಂದರ ಸಹಜ ನಿರೂಪಣೆ ಅಕ್ಕಾ.

  ಪ್ರತಿಕ್ರಿಯೆ
 3. ಶ್ರೀನಿವಾಸ್ ಬಿ.ಎಸ್

  ಹಣಕ್ಕಿಂತ ಭಾವನಾತ್ಮಕ ಸಂಬಂಧಗಳೇ ಮುಖ್ಯ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿರುವ ಕಥೆ.ಸೊಗಸಾದ ನಿರೂಪಣಾ ಶೈಲಿ.ಶ್ರವಣಕುಮಾರಿಯವರಿಗೆ ಹಾರ್ದಿಕ ಅಭಿನಂದನೆಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: