ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’

ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯ ಮತ್ತು ಮಿತ್ತಬೈಲ್ ಯಮುನಕ್ಕೆ

-ಬಿ ಎ ವಿವೇಕ ರೈ

ನಿನ್ನೆ ದಿನ ಬೆಂಗಳೂರಲ್ಲಿ ಎರಡು ಉತ್ತಮ ಪ್ರದರ್ಶನ ಕಂಡೆ.ಒಂದು,ಟಿವಿಯಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ.ಇನ್ನೊಂದು,ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’ ನಾಟಕ.ಮಧ್ಯಾಹ್ನ ಎರಡೂವರೆ ಗಂಟೆಯಿಂದ ಆರೂವರೆ ಗಂಟೆವರೆಗೆ ,ಮತ್ತೆ ಒಂಬತ್ತೂಕಾಲರಿಂದ ಆಟದ ಕೊನೆಯವರೆಗೆ ಟಿವಿಯಲ್ಲಿ ಕ್ರಿಕೆಟ್ ಪ್ರದರ್ಶನ.ಸಂಜೆ ಏಳರಿಂದ ಒಂಬತ್ತವರೆಗೆ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ.ಒಂದು ಇನ್ನೊಂದರೊಂದಿಗೆ ಸೇರಿಕೊಂಡು ,ಪರಸ್ಪರ ಪ್ರಭಾವ ಬೀರಿ ,ಹೊಸ ಅರ್ಥವನ್ನು ಕೊಟ್ಟುವು.

ಕ್ರಿಕೆಟಿನಲ್ಲಿ ಭಾರತ -ನಮ್ಮ ದೇಶ- ಗೆದ್ದದ್ದು ಸಂತಸದ ಸಂಭ್ರಮದ ಕ್ಷಣ.ಅಷ್ಟೇ ಸಂತಸ ಪಾಕಿಸ್ತಾನದ ಪ್ರಧಾನಿ ಗಿಯಾನಿ ಆರಂಭದಿಂದ ಕೊನೆಯವೆರೆಗೆ ನಮ್ಮ ಪ್ರಧಾನಿ ಮನಮೋಹನ ಸಿಂಗರ ಒಟ್ಟಿಗೆ ಇದ್ದು ಪಂದ್ಯ ನೋಡಿದ್ದು,ಪಾಕಿಸ್ತಾನ ಸೋತ ಸಂದರ್ಭದಲ್ಲೂ ಭಾರತವನ್ನು ಅಭಿನಂದಿಸಿದ್ದು ,ಪರಸ್ಪರ ದ್ವೇಷ ಮತ್ತು ಅನುಮಾನದಿಂದ ನೋಡುವ ಮನೋಧರ್ಮವನ್ನು ಪರಿವರ್ತಿಸಲು ಈ ಸಂದರ್ಭವನ್ನು ಬಳಸಿಕೊಂಡದ್ದು.ಹಾಗೆಯೇ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಆಫ್ರಿದಿ ತಮ್ಮ ತಂಡ ಸೋತ ಬಳಿಕದ ಕ್ಷಣದಲ್ಲೇ ರವಿ ಶಾಸ್ತ್ರಿಯ ಪ್ರಶ್ನೆಗಳಿಗೆ ನಗು ನಗುತ್ತಾ ಉತ್ತರಿಸಿ ,ಭಾರತ ತಂಡದ ಪ್ರದರ್ಶನವನ್ನು ಕೊಂಡಾಡಿದ ಕ್ರೀಡಾ ಸ್ಫೂರ್ತಿ ಖಂಡಿತವಾಗಿ ನಮ್ಮ ತಂಡ ಗೆದ್ದಷ್ಟೇ ನನಗೆ ಸಂತೃಪ್ತಿ ಕೊಟ್ಟಿತು.ಶಾಂತಿಯ ಓಟದಲ್ಲಿ ಮೊಹಾಲಿ ಒಂದು ಮೋಹಕ ಪ್ರದರ್ಶನ .

ತುಳು ಸಂಸ್ಕೃತಿಯ ಒಳನೋಟದ ಸಾಹಿತಿ ಡಿ.ಕೆ.ಚೌಟರ ತುಳು ಕಾದಂಬರಿ ‘ಮಿತ್ತಬೈಲ್ ಯಮುನಕ್ಕೆ’ ಆಧಾರಿತ ಕನ್ನಡ ನಾಟಕವನ್ನು ಪ್ರಮೋದ್ ಶಿಗ್ಗಾವ್ ನಿರ್ದೇಶನದಲ್ಲಿ ರಂಗನಿರಂತರ ತಂಡ ನಿನ್ನೆ ಅಭಿನಯಿಸಿದರು.ನನ್ನ ಈಬಾರಿಯ ಬೆಂಗಳೂರು ಭೇಟಿಯ ಮುಖ್ಯ ಆಕರ್ಷಣೆಯೇ ಈ ನಾಟಕ .ಕಳೆದುಹೋದ ತುಳುನಾಡಿನ ಊಳಿಗಮಾನ್ಯ ವ್ಯವಸ್ಥೆಯ ದರ್ಪ ದ್ವೇಷ ಹೊಡೆದಾಟ ಕೊಲೆ -ಇವು ಅಂತಿಮವಾಗಿ ಎರಡೂ ಬಣಗಳ ಅವಸಾನಕ್ಕೆ ಹೇಗೆ ಕಾರಣವಾಗುತ್ತವೆ ಎನ್ನುವುದು ನಾಟಕದಿಂದ ಅನುರಣನ ಆಗುತ್ತದೆ.ಮಿತ್ತಬೈಲ್ ಯಮುನಕ್ಕೆ ಮತ್ತು ಬಾರೆಬೈಲ್ ತ್ಯಾಂಪಣ್ಣ ಪರಸ್ಪರ ದ್ವೇಷ ಹೋರಾಟದಿಂದ ತಾವೂ ನಾಶವಾಗಿ ಎರಡು ಊರುಗಳನೂ ಸರ್ವ ನಾಶ ಮಾಡುತ್ತಾರೆ.ಗಾಂಧಿಯ ಶಾಂತಿಯ ಅರ್ಥ ಹೊಸ ಬೆಳಕು ಆಗಬೇಕು ಎನ್ನುವ ಧ್ವನಿ ನಾಟಕದಲ್ಲಿ ಹೊಮ್ಮುತ್ತದೆ.ಎರಡು ‘ಬಯಿಲ್ ‘(ಬಯಲು ) ಗಳು ಒಂದೇ ‘ಬಯಲು’ಆಗಿ ,’ರಣಾಂಗಣ’ವೂ ಆಗಬಹುದು,ಸ್ಪರ್ಧೆಯ ಮೂಲಕ ಸಂಬಂಧಗಳನ್ನು ಬೆಸೆಯುವ ‘ಸ್ನೇಹದ ಕ್ರೀಡಾಂಗಣ’ವೂ ಆಗಬಹುದು.ನಮ್ಮ ಆಯ್ಕೆ ಕ್ರೀಡಾ ಸ್ಪರ್ಧೆ ಮತ್ತು ಗಾಂಧಿ ಮೋಹದ ಬಯಲು.

 

‍ಲೇಖಕರು G

31 March, 2011

1 Comment

  1. kanam

    hosa varshada shubhaashayabalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading