ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ್ವಾಳದ ರೊಟ್ಟಿ ಕಥೆ ಕೇಳ್ರಲ್ಲ…

ಗುಂಡೂರಾವ್ ದೇಸಾಯಿ

ಮಕ್ಕಳು ಬೀದಿಯಲ್ಲಿ ಆಟ ಆಡತಿರುವಾಗ ಹುಡುಗನೊಬ್ಬಗೆ ತತ್ತಿಯಾಕಾರದ ಒಂದು ವಸ್ತು ಸಿಕ್ಕಿತು. ಹುಡುಗ ಕೂತುಹಲದಿಂದ ಅದನ್ನು ಒಯ್ದು ಅಪ್ಪನಿಗೆ ತೋರಿಸಿದ. ಅಪ್ಪನಿಗೂ ಧಾನ್ಯದ ಆಕಾರದಂತಿದ್ದ ಆ ವಸ್ತು ಗೊತ್ತಾಗಲಿಲ್ಲ, ರಾಜನೆಡೆ ಒಯ್ದ. ರಾಜನಿಗೂ ಕೂತಹಲ ಹೆಚ್ಚಿ ಆಸ್ಥಾನದ ವಿದ್ವಾಂಸರಿಗೆಲ್ಲ ಪರಿಶೀಲಿಸಲು ತಿಳಿಸಿದ. ಅದರಲ್ಲಿ ಒಬ್ಬ ವಿದ್ವಾಂಸ ‘ಹಿರಿಯ ವೃದ್ಧರಿಗೆ ತೋರಿಸಿದ್ರೆ ಗೊತ್ತಾಗುತ್ತೆ’ ಎಂದು ಸಲಹೆ ನೀಡಿದ. ಅದರಂತೆ ರಾಜ್ಯವನ್ನೆಲ್ಲ ಸುತ್ತಾಡಿ ಹಣ್ಣು ಹಣ್ಣು ಮುದುಕನಾಗಿದ್ದೊಬ್ಬನನ್ನು ನಾಲ್ಕು ಜನ ಎತ್ತಕೊಂಡು ಬಂದ್ರು. ‘ಓಹೋ! ಇದಾ ನಮ್ಮ ಕಾಲದಲ್ಲಿ ಇದ್ದಿಲ್ಲ. ನಮ್ಮಪ್ಪ ಇದರ ಬಗ್ಗೆ ಹೇಳತಿದ್ದ, ಅವರನ್ನು ಕರೆಸಿದರೆ ಈ ಧಾನ್ಯದ ಬಗ್ಗೆ ಗೊತ್ತಾಗುತ್ತೆ’ ಎಂದ. ‘ನಿಮ್ಮಪ್ಪನಿಗೆ ತೋರಿಸಬೇಕೆ? ಇನ್ನೂ ಇದ್ದಾರೆಯೆ?’ ಎಂದು ಆಶ್ಚರ್ಯದಿಂದ ರಾಜ ಅವರ ಅಪ್ಪನನ್ನು ಬರುವಿಕೆಗೆ ಇದಿರು ನೋಡತೊಡಗಿದ. ಅವರಪ್ಪ ಬಡಿಗೆ ಹಿಡಿದುಕೊಂಡು ಸ್ವತಂತ್ರವಾಗಿ ಬಂದಾಗ ಇಡಿ ಆಸ್ಥಾನವೇ ಅಚ್ಚರಿಗೊಂಡಿತು. ಅವನನ್ನು ಕೇಳಲಾಗಿ ಇಲ್ಲ ನಮ್ಮಪ್ಪನವರ ಕಾಲಕ್ಕ ಈ ರೀತಿಯ ಧಾನ್ಯ ಬೆಳೆತಿದ್ದರಂತೆ, ಅವರನ್ನ ಕರೆಸಿದರೆ ಖಂಡಿತ ಗೊತ್ತಾಗಬಹುದು! ಎಂದ. ರಾಜನಿಗೆ, ಅಲ್ಲಿದ್ದವರಿಗೆ ಪರಮಾಶ್ಚರ್ಯವಾಯಿತು. ಅಂತೆಯೇ ಅವರಪ್ಪನನ್ನು ಆಸ್ಥಾನಕ್ಕೆ ಕರೆಸಲಾಯಿತು. ಅವರ ಅಪ್ಪ ಆಸ್ಥಾನಕ್ಕೆ ಯಾವ ಆಧಾರವಿಲ್ಲದೆ ಬಂದ, ಮೇಲಾಗಿ ಇನ್ನು ಗಟ್ಟಿ ಮುಟ್ಟಾದ ಆಸಾಮಿಯಾಗಿದ್ದ. ಅವನನ್ನು ನೋಡಿ ರಾಜರಾದಿ ಎಲ್ಲರೂ ದಂಗಾದರು. ಬಂದ ವ್ಯಕ್ತಿ ಧಾನ್ಯ ಪರೀಕ್ಷಿಸಿ ಖುಷಿಯಿಂದ ‘ನಮ್ಮ ತಾತನವರ ಕಾಲಕ್ಕೆ ಬೆಳೆಯುತ್ತಿದ್ದ ಜೋಳದ ಧಾನ್ಯ ಇದು. ಆಗ ಈ ಗಾತ್ರದಲ್ಲಿದ್ದವು, ಬದಲಾದ ಕೃಷಿ ಪದ್ದತಿಯಿಂದ ಕಾಲಾನುಕ್ರಮದಲ್ಲಿ ಸಣ್ಣ ಆಗತಾ ಬಂದ್ವು. ನಾವು ಬಾಲ್ಯದಲ್ಲಿ ಅಂತಹ ಆಹಾರ ಸೇವಿಸುತ್ತಿದ್ದರಿಂದಲೇ ಹೀಗೆ ಗಟ್ಟಿಮುಟ್ಟಾಗಿ ಇದ್ದೇನೆ. ಈಗಿಂದು ಗೊತ್ತೆ ಇದೆ. ವಿಭಿನ್ನ ಆಹಾರದ ಬೆಂಬತ್ತಿರುವ ನನ್ನ ಮಗ ಇನ್ನೂ ನಿಮ್ಮ ಕಾಲದ ಮೊಮ್ಮಗನನ್ನು ನೋಡಿದರೆ ಗೊತ್ತಾಗಬಹುದು’ ಎಂದು ಹೇಳಿ ದರದರನೇ ನಡೆದು ಹೋದ.
ಜೋಳದ ಗಟ್ಟಿತನದ ಇತಿಹಾಸವನ್ನು ತಿಳಿಸುವ ಈ ಕಥೆ ಸುಳ್ಳಂತ ನನಗನಿಸೋದೆ ಇಲ್ಲ. ಇದಕ್ಕೆ ಪೂರಕವಾಗಿ ನಾವು ಚಿಕ್ಕೋರಿರ ಕಾಳಕ್ಕೆ ಜೋಳವನ್ನು ಹಗೇವುನಲ್ಲಿ ಹಾಕಿದರೆ ಅವುಗಳ ಗಾತ್ರದಲ್ಲಿ ಹೆಚ್ಚಳ ಆಗುತ್ತೆ ಅಂತಿದ್ರು. ಹಗೇವು ಅಂದ್ರೆ ಹೊಲದಲ್ಲಿ ಬೆಳೆದ ಹೆಚ್ಚುವರಿ ಧಾನ್ಯಗಳನ್ನು ಭೂಮಿಯ ಆಳದಲ್ಲಿ ತೋಡಿ ಸಂಗ್ರಹಿಸುವ ವಿಧಾನ, ಆಧುನಿಕ ಗೊಡೌನಗಳಂತೆ. ಎಕರೆ ಹೊಲದಲ್ಲಿ ಹೇರುಗಟ್ಟಲೆ ಜೋಳ ಬೆಳೆಯುತ್ತಿದ್ದರಿಂದ ಅವುಗಳ ಸಂರಕ್ಷಣೆಗೆ ಬೆಳೆದ ಜೋಳವನ್ನು ಹಗೇವುನಲ್ಲಿ ಹಾಕಿ ಭದ್ರಪಡಿಸುತ್ತಿದ್ದರು. ಭೂಮಿಯ ಆಳದಲ್ಲಿ ಗುಂಡಿಯನ್ನು ತೋಡಿ ಅದರ ಸುತ್ತಲು ಹುಲ್ಲು ಜೋಳದ ದಂಟನ್ನು ಜೋಳಕ್ಕೆ ಮಣ್ಣಿನ ಸಂಪರ್ಕ ಬರದಂತೆ ಸಿದ್ಧಪಡಿಸಿ ಅದರಲ್ಲಿ ರಾಶಿಗಟ್ಟಲೇ ಜೋಳವನ್ನು ಸುರುವುತ್ತಿದ್ದರು. ಇಲಿ ಹೆಗ್ಗಣ, ಕ್ರೀಮಿಕೀಟಗಳಿಂದ ಹಗೇವು ರಕ್ಷಣೆ ಒದಗಿಸುತ್ತಿತ್ತು. ಜೊತೆಗೆ ಹಗೇವಿನಲ್ಲಿ ಜೋಳ ಅಥವಾ ಯಾವುದೇ ಧಾನ್ಯ ಹಾಕಲಿ, ಪುನಃ ತೆಗೆಯುವಾಗ ಅದರ ಪ್ರಮಾಣ ಹೆಚ್ಚಿರುತ್ತಿತ್ತು. ಕಾರಣ ಒಳಗಿನ ವಾತಾವರಣಕ್ಕೆ ಧಾನ್ಯದ ಗಾತ್ರದಲ್ಲಿ ಹೆಚ್ಚಳವಾಗುತ್ತಿತ್ತು ಎನ್ನುವುದು ವೈಜ್ಞಾನಿಕ ಸಂಗತಿ. ಹಗೇವು ತೋಡುವುದು ಅದರಲ್ಲಿಯ ಧಾನ್ಯ ತೆಗೆಯುವುದು ಬಹು ಸೂಕ್ಷ್ಮ ಕಾರ್ಯ, ಒಬ್ಬರೆ ಪ್ರವೇಶಿಸುವಂತೆ ರಂಧ್ರ ಮಾಡಿ ಆಳದಲ್ಲಿ ಇಬ್ಬರು ನಿಲ್ಲುವಷ್ಟು ರಂದ್ರ ಕೊರೆಯಬೇಕು. ಗಾಳಿಯ ಸುವ್ಯವಸ್ಥೆ ಇರದ ಆಳದಲ್ಲಿ ನಿಂತು ಹಗೇವು ತೋಡೋದು, ಸಿದ್ಧಪಡಿಸುವುದು, ಧಾನ್ಯ ತೆಗೆಯುವುದೆ ಆಯ್ತು ಒಂದು ಸವಾಲಿನ ಕೆಲಸ. ಕಾಲಾನುಕ್ರಮದಲ್ಲಿ ಹೊಲದಲ್ಲಿ ಬೆಳೆಯು ಕಡಿಮೆ ಆಗುತ್ತ ಬಂದುದು ಒಂದೆಡೆಯಾದರೆ. ಅಲ್ಲಲ್ಲಿ ಕೆರೆ ಕಟ್ಟೆಗಳು ಹೆಚ್ಚುತ್ತ ನಡೆದದ್ದರಿಂದ, ಅಧುನಿಕ ಬೊರೆವಲ್ ಪ್ರವೇಶ ಆದುದರಿಂದ ಹಗೇವಿನಲ್ಲಿ ನೀರು ಹೊಕ್ಕು ಅವು ಹಾಳಾಗುತ್ತ ಸಾಗಿದುದರಿಂದ ಅವು ಇತಿಹಾಸದ ಪುಟ ಸೇರುವಂತಾಯಿತು.

ವಿಷಯಾಂತರಕ್ಕೆ ಕ್ಷಮೆ ಇರಲಿ, ಅಕ್ಕಿಯನು ತಿನ್ನುವವನು ಹಕ್ಕಿಯಂತಾಗುವನು, ಜೋಳವನು ತಿನ್ನುವವನು ತೋಳದಂತಾಗುವನು, ನವಣೆಯ ತಿನ್ನುವವನು ಹವಣಾಗಿ ಇರುತಿಹನು, ರಾಗಿಯನು ತಿನ್ನುವವನು ನಿರೋಗಿಯೆಂದನೆನಿಸುವನು ಎಂದಿರುವ ಸರ್ವಜ್ಞ ಕವಿ ಜೋಳದ ಬಗ್ಗೆ ತೋರಿರುವ ಪಕ್ಷಪಾತ ಬಗ್ಗೆ ನಿಜಕ್ಕೂ ಖೇದವೆನಿಸುತ್ತದೆ. ‘ರಾಗಿಯನು ಉಂಬುವನು ನಿರೋಗಿಯಂದೆನಿಸುವನು, ರಾಗಿಯು ಭೋಗಿಗಳಿಗಲ್ಲ ಬಡವರರಿಂಗಾಗಿ ಬೆಳೆದಿಹುದು ಸರ್ವಜ್ಞ’ ಅಂತಿದೆ. ಅಂದರೆ ಜೋಳ ಶ್ರೀಮಂತರ ಆಹಾರವಾಗಿತ್ತೆ? ಹಾಗೆ ನೋಡಿದರೆ ಅದು ಉತ್ತರಕನರ್ಾಟಕ ಭಾಗದ ಪಕ್ಕಾ ಬಡವರ ಆಹಾರ. ಅಂದರೆ ನಮ್ಮ ಉತ್ತರ ಕನರ್ಾಟಕದ ಭಾಗ ಒಂದು ಕಾಲಕ್ಕೆ ಫಲವತ್ತತೆಯಿಂದ ಕೂಡಿತ್ತು, ಜೋಳ ಇಲ್ಲಿಯ ಶ್ರೇಷ್ಠ ಆಹಾರವಾಗಿತ್ತು ಅದು ಆ ಭಾಗದ ಜನರಿಗೆ ದೊರೆಯದ ಆಹಾರವಾಗಿತ್ತು ಅಂತ ಭಾವಿಸಬಹುದೇನೋ? ಸರ್ವಜ್ಷ ಕವಿ ಅಕ್ಕಿಯ ಬಗ್ಗೆ ಪ್ರಸ್ತಾಪಿಸಿದ್ದನ್ನು ನೋಡಿದರೆ ಅಕ್ಕಿಯ ಕಲ್ಪನೆ ಕೂಡ ಬೇರಡೆ ಮೂಡದ ಹೊತ್ತಿಗೆ ನಮ್ಮಲ್ಲಿ ಬಳಕೆಯ ಆಹಾರ ಪದ್ದತಿಯಾಗಿತ್ತು. ಇದಕ್ಕೆ ನಿದರ್ಶನ ಅನ್ನುವುದಕ್ಕೆ ಆಯ್ದಕ್ಕಿ ಲಕ್ಕಮ್ಮನ ವಚನವೇ ಸಾಕು. ‘ಈಸಕ್ಕಿಯಾಸೆ ನಿನಗೇಕಯ್ಯ’ ಎಂದು ಗಂಡನಿಗೆ ಹೇಳುವ ಲಕ್ಕಮ್ಮನ ಈ ಮಾತು ಆ ಕಾಲದಲ್ಲಿ ಅಕ್ಕಿಯನ್ನು ಹೇರಳವಾಗಿ ಬೆಳೆಯುತ್ತಿದ್ದರು ಅನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
 
ಸೋರ್ಗಮ್ ವರ್ಗದ ಹುಲ್ಲಿನ ಜಾತಿಯ ಈ ಸಸ್ಯ ಉತ್ತರಕನರ್ಾಟಕದ ಜನರ ಜೀವಾಳ. ಇಡಿ ದೇಶದಲ್ಲಿ ಜೋಳದ ಉತ್ಪಾದನೆಗೆ ರಾಜ್ಯ ಮಹಾರಾಷ್ಟ್ರದ ನಂತರದ ಎರಡನೇ ಸ್ಥಾನದಲ್ಲಿದೆ. ಉಷ್ಣವಲಯದ ಭಾಗಗಳಲ್ಲಿ ಬೆಳೆಯುವ ಮೂರು ನಾಲ್ಕು ತಿಂಗಳಲ್ಲಿ ಬರುವ ಈ ಬೆಳಗೆ ಹೆಂಡಿಗೊಬ್ಬರ ಬಿಟ್ಟರೆ ಯಾವುದೆ ರಾಸಾಯನಿಕ ಗೊಬ್ಬರದ ಉಪಚಾರ ಬೇಕಾಗಿಲ್ಲ. ಖಚರ್ಿಲ್ಲದೆ ಭೂಮಿ ಒಮ್ಮೆ ತಂಪಾದರೆ ಹೇರಗಟ್ಟಲೆ ಬೆಳೆಯಬಹುದಾದ ಬೆಳೆ. ಜೋಳವನ್ನು ತೆನೆಯಿಂದ ಬೇರ್ಪಡಿಸಿದಾಗ ಸಿಗುವ ಈ ಜೋಳವನ್ನು ಹಿಟ್ಟಾಗಿಸಿ ಪರಿವತರ್ಿಸಿ ಅದರಿಂದ ರೊಟ್ಟಿಯನ್ನು ತಯಾರಿಸುತ್ತಾರೆ. ಒಂದು ಜೋಳದ ರೊಟ್ಟಿಯಲ್ಲಿ 82% ಶರ್ಕರ,ಪಿಷ್ಠ, 4% ಮೇದಸ್ಸು, 14% ಪ್ರೋಟಿನ್ ಇದ್ದು 0% ಕೊಲೆಸ್ತ್ರಾಲ ಇದೆ. ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಕೊಲೆಸ್ಟ್ರಾಲ ಹೆಚ್ಚಿರುವವರಿಗೆ, ಬೊಜ್ಜು ದೇಹಿಗಳಿಗೆ, ಸ್ಲಿಮ್ ಆಗಿ ದೇಹ ಮೆಂಟೇನ್ ಮಾಡಬೇಕೆನ್ನುವರಿಗೆ ವೈದ್ಯರು ಸಜೆಸ್ಟ ಮಾಡುವ ಆಹಾರ ಇದಾಗಿದೆ.
ರೊಟ್ಟಿ ತಯಾರಿಸುವುದು ಎಲ್ಲರಿಗೂ ಸಿದ್ಧಿಸುವಂತದಲ್ಲ. ಬೀಸಿನೀರಿನಲ್ಲಿ ಹಿಟ್ಟನ್ನು ಕಲಿಸಿ ಕಣಕವಾಗಿಸಿ ಹದಮಾಡಿಕೊಂಡು ತಟ್ಟುವ ಕೈಚಳಕದ ಮೇಲೆ ಇದೆ. ತಟ್ಟುತ್ತಾ ಹೋದಂತೆ ಹಿಗುತ್ತಾ ತೆಳುವಾಗುತ್ತ ಹೋಗುತ್ತದೆ. ದುಂಡಾಗಿ ಪರಿವತರ್ಿಸುವಲ್ಲಿ ತಯಾರಿಸುವ ಹೆಣ್ಣಿನ ಜಾಣ್ಮೆ ಇದೆ. ಅದನ್ನು ನಿಧಾನವಾಗಿ ಹಂಚಿನ ಮೇಲೆ ಹಾಕಿ ಹಸಿ ಬಟ್ಟೆಯಿಂದಲೋ ಹಾಗೆ ಸ್ವಲ್ಪ ನೀರು ಚಿಮುಕಿಸಿ ಒರೆಸಿ ಅದರ ಶಾಖದಲ್ಲಿ ಬೆಂದು ತಿನ್ನಲು ಸಿದ್ಧವಾಗುತ್ತದೆ. ಬಿಸಿಯಾದ ರೊಟ್ಟಿ ತಿನ್ನುವುದೆ ಸಂಭ್ರಮ. ತುಪ್ಪ,ಹುಂಚೆಟ್ನಿ,ಪುಡಿ ಇದ್ದರಂತೂ ಮುಗಿದು ಹೋಯಿತು. ರೊಟ್ಟಿಮಾಡುವವರ ಕೈ ಸೇದಿಹೋಗಬೇಕು. ಇದು ಮುದುಕರಿಗೆ ಹುಡುಗರಿಗೆ ಇಷ್ಟವಾಗುವಂತದ್ದು ಬಲುಬೇಗ ಜೀರ್ಣವಾಗುವಂತಹದ್ದು. ಕಟಕ್,ಖಡಕ್ ಎಂದು ಕರೆಯುವ ಕಟಿ ರೊಟ್ಟಿ ಮಾಡಬೇಕಾದರೆ ಬೆಂದರೊಟ್ಟಿಯನ್ನು ಇನ್ನೂ ಬೇಯಿಸಲಾಗುತ್ತದೆ ಅಥವಾ ಶಾಖ ತಗಲುವ ಹತ್ತಿರದಲ್ಲಿ ಇಡಲಾಗುತ್ತದೆ. ಅದರ ತೆಳು ಶಾಖದಿಂದ ಗಟ್ಟಿತನ ಪಡೆಯುತ್ತವೆ. ಇವನ್ನು ತಿಂಗಳು ಬೇಕಾದರು ಉಪಯೋಗಿಸಬಹುದು. ಹಪ್ಪಳದಂತೆ ತೆಳುವಾಗಿರುವ ರೊಟ್ಟಿಯ ರುಚಿ ಬಲ್ಲವನೆ ಬಲ್ಲ. ಈ ರೊಟ್ಟಿಗೆ ಪಕ್ಕ ವಾದ್ಯ ಎಂದರೆ ಎಣ್ಣಿಗಾಯಿ (ಬದನೆಕಾಯಿ ಪಲ್ಯ) ಪುಂಡಿ ಪಲ್ಯ ಕಾಳು, ಗಟ್ಟಿ ಮೊಸರು, ಪುಡಿ ಮೊದಲಾದವು. ಇವುಗಳ ಕಾಂಬಿನೇಷನ್ನಲ್ಲಿ ತಿನ್ನುವ ರುಚಿಯೇ ಬೇರೆ. ಇನ್ನು ಚಿಕ್ಕಮಕ್ಕಳಿಗೆ ಬಿಸಿರೊಟ್ಟಿಗೆ ತುಪ್ಪ,ಹುಣಸೆ ಚಟ್ನಿ ಸವರಿ ಉಂಡಿ ಮಾಡಿಕೊಟ್ಟರೆ ಆಡುತ್ತ ತಿನ್ನತ್ತಾ ಬಂದ ಅಮ್ಮ ಇನ್ನೊಂದು ಉಂಡಿ ಅಂತ ಬಾರದೆ ಇರವು. ಈ ಭಾಗದ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಅದೇ ಬೂಷ್ಟು,ಸೆರೆಲಾಕು ಇತ್ಯಾದಿ ಇತ್ಯಾದಿ ಏನೆಲ್ಲ ಬಂದಿವೆಯಲ್ಲ ಅವೆ ಆಗಿವೆ.
ಹಳ್ಳಿಗಳಲ್ಲಿ ರೊಟ್ಟಿ ಇಲ್ಲದೆ ಯಾವು ಮನೆಗಳು ದಿನವನ್ನು ಪ್ರಾರಂಭಿಸುವುದಿಲ್ಲ. ನಸುನಸುಕಿನಲ್ಲೆ ಟಪ-ಟಪ ಟಪಟಪಟಪ ಹೊಡೆಯುವ ಶಬ್ದ ಕೋಳಿಯಕೂಗಿನ ಜೊತೆ ಸ್ವರ ಮಾಧುರ್ಯ ಉಂಟುಮಾಡುತ್ತದೆ. ಒಕ್ಕಲಿಗ ಹೆಣ್ಣುಮಕ್ಕಳು ಹಿಂದಕ್ಕೆಲ್ಲ ಸವಹೊತ್ತಿನಲ್ಲಿ ಎದ್ದು ಜೋಳವ ಕುಟ್ಟಿ, ಬೀಸಿ ಝರಡಿ ಹಿಡಿದು ರೊಟ್ಟಿಯನ್ನು ಬಡಿಯುತ್ತಿದ್ದರು. ಈಗ ಬೀಸುವುದು ಕುಟ್ಟುವುದು ಹೋಗಿದ್ದರು ಬಡಿಯುವುದು ಹೋಗಿಲ್ಲ. ಬಡಿದ ನಂತರ ಮನೆಯಲ್ಲಿರುವ ಪಲ್ಯ ಚಟ್ನಿ ಬುತ್ತಿ ಕಟ್ಟಿಕೊಂಡು ತತ್ರಾಣಿಯಲ್ಲಿ ನೀರು ತುಂಬಿಕೊಂಡು ಹೊಲತೋಟಗಳಿಗೆ ಹೋಗುವುದು ನಿಂತಿಲ್ಲ. ಹೊಲ ತೋಟಗಳಲ್ಲಿ ಕೆಲಸ ಮಾಡುವ ಶ್ರಮಿಕರ ರೈತರ ರಟ್ಟೆಯ ಶಕ್ತಿಯ ಗುಟ್ಟೆ ರೊಟ್ಟಿ. ಹೊಲ,ತೋಟಗಳಲ್ಲಿ ಮಧ್ಯಾಹ್ನಕ್ಕೆ ಅದೇ ಪ್ರಧಾನ ಆಹಾರ. ರೊಟ್ಟಿಗೆ ಇಂತದ್ದೆ ಬೇಕಂತ ಇಲ್ಲ, ಖಡಕ ರೊಟ್ಟಿಗೆ ಎಣ್ಣೆ ಖಾರಪುಡಿ ಉಳಾಗಡ್ಡ್ಡಿ ಇದ್ರೂ ನಡೆದಿತು.
ನಮ್ಮವ್ವ ದಪ್ಪಾಗಿ ರೊಟ್ಟಿ ಬಡಿಯುತ್ತಿದ್ದರಿಂದ ಅಪ್ಪಗ ತೆಳ್ಳನೆಯ, ಖಡಕನ ರೊಟ್ಟಿಯಂದರೆ ಪಂಚಪ್ರಾಣ. ನಮ್ಮ ವೈನಿ, ಅಕ್ಕ ಮನಿಗೆ ಬಂದರೆ ಅಪ್ಪ ‘ಅವರು ಬಂದಾರ ಅಡಿಗಿ ಮಾಡಿ ಹಾಕ್ತಾರ ಬಿಟ್ಟಬಿಡು. ನೀನು ಮಾಡುವ ರೊಟ್ಟಿ ತಿಂದು ತಿಂದು ಸಾಕಾಗ್ಯೆದ’ ಅಂದ್ರ ಅವ್ವ ಕಣ್ಣು ಕೆಂಪಗಮಾಡಿ ‘ಹೂಂ ಅವರ ಇರತಾರೇನು ನಿತ್ಯ ಮಾಡಾಕ. ಆಯ್ತು ತಿಂದು ಮೆರಿರಿ ನಾಳೆ ನಾ ಮಾಡಿದ್ದ ತಿನ್ನಬೇಕಲ್ಲ’ ಅಂತ ಕಣ್ಣು ತಿರುವೊಳು. ಅವ್ವ ಮಾಡುವ ದಪ್ಪನೆ ರೊಟ್ಟಿ ಬೀಸಿ ಇದ್ದಾಗ ಅಷ್ಟ ಛಲೋ ಇರತಿದ್ವು ಆರಿದ ಮೇಲೆ ದೇವರಿಗೆ ಪ್ರೀತಿ. ರೊಟ್ಟಿಯ ಖದರೇ ಅಂತಹದು. ಎಲ್ಲರಿಗೂ ಒಲಿಯುವಂತಹದ್ದಲ್ಲ. ಚಪಾತಿನ ಯಾರಾದರೂ ಮಾಡಬಹುದು, ಆದರೆ ರೊಟ್ಟಿ ಮಾಡಲು ತಾಳ್ಮೆ, ಮಾಡಲು ಪ್ರೀತಿ ಇದ್ದಾಗ ಅದು ನಮ್ಮತ್ತ ವಾಲುತ್ತದೆ. ಬರದವರು ಅದರ ಸನೇಕ ಹೋಗಲ್ಲ ಅವಮಾನಕ್ಕೆ ಒಳಗಾಗಬೇಕಾಗುವುದು ಎಂಬ ಭಯಕ್ಕೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ‘ಭೀಮಸೇನ ನಳಮಹರಾಜರು ಗಂಡಸರಲ್ಲವೇ……’ ಹಾಡನ್ನು ಕೇಳಿದಾಗ ಪುರಷರಿಗೆ ಆತ್ಮಬಲ ಬರುತ್ತವೇ, ಹಂಗಿಸುವ ಹೆಂಡಂದರಿಗೆ ಛೇಡಿಸಲು. ದೊಡ್ಡಡಿಗೆ ಅಂದ್ರ ಅದು ಗಂಡಸರಿಗಿ ಸಿದ್ಧಿಸಿರುವಂತಹದ್ದು. ಆದರೆ ರೊಟ್ಟಿ ಮಾಡುವ ಕಲೆ ಗಂಡಿಗೆ ಒಲಿದಿಲ್ವೆ? ರೊಟ್ಟಿಯನ್ನು ಚೆನ್ನಾಗಿ ತಟ್ಟಬೇಕು. ಅದು ಬರದು. ತಟ್ಟುವುದರಲ್ಲಿ ಹೆಣ್ಮಕ್ಕಳೆ ಮುಂದು. ರೊಟ್ಟಿಯನ್ನು ತಟ್ಟುವವರಿಗೆ ಗಂಡನ ತಲೆಯನ್ನು ತಟ್ಟುವುದು ಕಷ್ಟವೇ! ತಟ್ಟುವ ಕಲೆಯುವ ಅವರಿಗೆ ಸಿದ್ದಿಸಿರುವುದರಿಂದಲೆ ತಟ್ಟಿಸಿಕೊಳ್ಳುತ್ತಿರುವ ಗಂಡು ಹೆನ್ಪೆಕ್ಡ ಆಗಿರುವುದು.
ಎಲ್ಲಾ ಆಹಾರಪ್ರಿಯರನ್ನು ಸೆಳೆಯುವ, ಸೈಡ ಎಫೆಕ್ಟ ಇಲ್ಲದ ಏಕೈಕ ಆಹಾರ ಎಂದರೆ ರೊಟ್ಟಿ ಅಂತ ಅನಕೊಂಡಿನಿ. ರಾಗಿಮುದ್ದೆ ಕೆಲಭಾಗದ ಜನರಿಗೆ ಬಿಟ್ರೆ ಹಿಡಿಸೋದೆ ಇಲ್ಲ. ನಮ್ಮ ಭಾಗದವರಿಗೆ ಅದು ವಾಗತ್ಯ ಅಂತ ಅನಸ್ತ. ಯಾವತ್ತಿಗೂ ಆಹಾರವನ್ನು ಹಲ್ಲಿನಲ್ಲಿ ಅಗೆದು ಅಗೆದು ತಿಂದ್ರನೆ ಖುಷಿ. ಆದ್ರೆ ಮುದ್ದೆನ ಹಲ್ಲಿನಿಂದ ಅಗೆಯೋಕೆ ಸಾಧ್ಯ ಏನ್ರಿ? ನಾಲಿಗೆ ಸವಿಯದೆ ಗುಳಿಗಿ ಹಾಂಗ ನುಂಗೋದಂದ್ರೆನ್ರಿ? ನನ್ನ ಅನೇಕ ಸಹುದ್ಯೋಗಿಗಳು ಮುದ್ದೆ ತಿನ್ನೊರಿದ್ದಾರೆ. ಅವರೊಂದಿಗೆ ಇದೆ ವಿಷಯದ ಬಗ್ಗೆ ಜಗಳ ನಡಿತಾನೆ ಇರುತ್ತೆ. ನಮ್ಮ ಬಳಗ ಅವರೊಂದಿಗೆ ಇದ್ದು ಮುದ್ದೆ ತಿನ್ನಲು ಕಲಿಯಲು ಸಾಧ್ಯವಾಗಿಲ್ಲ. ಅದೆ ಅವರೆ ಜಬರದಸ್ತಾಗಿ ನಮ್ಮಕಿನ ಜಾಸ್ತಿನೇ ರೊಟ್ಟಿ, ಖಢಕ್ ರೊಟ್ಟಿ ತಿಂತಾರೆ.
ನಮ್ಮ ಮಕ್ಕಳೊಡನೆ ಪ್ರವಾಸಕ್ಕೆಂದು ಕೊಡಗಿಗೆ ಹೋದಾಗಲ್ಲಿದ್ದ ಹಳೆಯ ಸ್ನೇಹಿತ ನಮ್ಮ ಗಾಡಿಯಲ್ಲಿದ್ದ ರೊಟ್ಟಿಯ ದೊಡ್ಡ ರಟ್ಟನಿ ಬಾಕ್ಸ ನೋಡಿ ‘ಹ್ಯಾಂಗಾದ್ರೂ ನೀವು ತಿಂತಾ ಇರತಿರಾ, ದಯವಿಟ್ಟು ಕೊಟ್ಟ ಬಿಡ್ರೂ ರೊಟ್ಟಿನ’ ಎಂದು ದೈನಸಿಯಿಂದ ಕೇಳಿದ್ದಲ್ಲದೆ ಕೊಡುವ ಮೊದಲೆ ನಾವು ತಂದಿದ್ದ ರೊಟ್ಟಿಯನ್ನೆಲ್ಲ ಪ್ರೀತಿಯಿಂದ ಕಸಿದುಕೊಂಡು, ಉಪಚರಿಸಿದ. ಬಿಜಾಪೂರ ಕಡೆ ಹೋದ್ರೆ ಬಾದಾಮಿ,ಬನಶಂಕರಿ ಮಹಾಕೂಟದಲ್ಲೆಲ್ಲ ಕಟಗರೊಟ್ಟಿ ಸುಗ್ಗಿಯೇ. ಆ ಹೆಣ್ಣ ಮಕ್ಕಳು ಕಡಿಮೆ ರೇಟಿನಲ್ಲಿ ಕೊಡುವ ಕಟಗರೊಟ್ಟಿ ಕಾಳು ಗಡಿಗಿ ಮೊಸರು ಅದರ ಟೇಸ್ಟೇ ಟೇಸ್ಟು. ಮೊದಲೆ ಪ್ರಸ್ತಾಪಿಸಿದ ಹಾಗೆ ರೊಟ್ಟಿ ಸೆಂಟ್ ಪಸರ್ೆಂಟ್ ರಾಗಿ ಹಾಂಗ ಬಡವರ ಆಹಾರನೆ. ಅತಿ ಕಡಿಮೆ ಬೆಲೆಗೆ ಸಿಗುವ ಧಾನ್ಯ. ರೊಟ್ಟಿ ಜಾರಿ ತುಪ್ಪಕ್ಕ ಬಿತ್ತು’ ಅನ್ನೊ ಗಾದೆ ಬಡವರ ಆಹಾರ ಎನ್ನುವುದಕ್ಕೆ ಪುಷ್ಠಿ ನೀಡುತ್ತದೆ. ನಾವು ಚಿಕ್ಕೋರಿರೊ ಕಾಲಕ್ಕೆ ಶಾಲೆಯಲ್ಲಿ ಬುತ್ತಿಗೆ ರೊಟ್ಟಿ ಒಯ್ದರೆ ಸ್ನೇಹಿತರು ಊಟ ಮಾಡಲು ಹಿಂದೇಟು ಹಾಕುತ್ತಿದ್ದರು. ಮನೆಯಲ್ಲಿ ಬಂದ ಬಂಧುಗಳು ಅಕ್ಕಿಯನ್ನೆ ಬೇಡುತ್ತಿದ್ದರು. ಕೆಲ ದಶಕಗಳ ಹಿಂದೆ ಉಳ್ಳವರು ಅಥರ್ಾತ ಶ್ರೀಮಂತರು, ಅನುಕೂಲಸ್ಥರು ನಾವು ಅನ್ನನೆ ಊಟಮಾಡೋದು ಅಂತ ಬೀಗುತ್ತಿದ್ದರು. ರೊಟ್ಟಿ ಬಡವರ ಮನೆಯಲ್ಲಿ ಮಾಡುವ ಹೋಳಿಗೆಯಂತಾಗಿತ್ತು. ಯಾವಾಗ ಶುಗರು ಬಿ.ಪಿ ಅನ್ನದಿಂದ ಸ್ಟಾರ್ಟ ಆತೋ ರೊಟ್ಟಿಯ ಪಟ ಏರತು. ಎಲ್ಲರ ಮನೆಯ ಆಹಾರ ವಸ್ತು ಆಗಾಕ ಸ್ಟಾರ್ಟ ಆಯ್ತು. ಮದುವೆ, ಅರತಕ್ಷತೆ ಡಿನ್ನರಗಳಲ್ಲಿ ಆಕರ್ಷಣೆಯಾಯಿತು. ಜೊತೆಗೆ ಮಾರುಕಟ್ಟೆಯ ವಸ್ತು ಆಯ್ತು. ಇವತ್ತ ನಮ್ಮೂರಿಂದ ದಿನಾ ಬೆಂಗಳೂರಿಗೆ ಸಾವಿರಾರು ರೊಟ್ಟಿಗಳು ಎಕ್ಸಪೊರ್ಟ ಆಗುತ್ತಿವೆ. ಅನೇಕ ಬಡವರಿಗೆ ರೊಟ್ಟಿ ಮಾಡಿಕೊಡುವುದೆ ಕಾಯಕ ಆಗುತಿದೆ. ಇತ್ತೀಚಿಗೆ ರೊಟ್ಟಿಗಳನ್ನು ಸಿದ್ಧ ಪಡಿಸುವ ಯಂತ್ರಗಳು ಬಂದಿರುವುದು ರೊಟ್ಟಿಯ ಬೇಡಿಕೆಯ ಪ್ರಮಾಣಕ್ಕೆ ಸಾಕ್ಷಿ. ಅದು ಒಂದು ಉದ್ಯಮವಾಗಿ ಬೆಳೆಯುತ್ತಿರುವುದು, ಎಲ್ಲೆಲ್ಲೂ ರೊಟ್ಟಿಕೇಂದ್ರಗಳು ತಲೆ ಎತ್ತುತ್ತಿರುವುದು ಸಂತಸದ ವಿಷಯ. ರಾಗಿಗೆ ಸಿದ್ಧವಾಗಿ ಮಾರುಕಟ್ಟೆ ಸೇರುವ ಭಾಗ್ಯ ಇದೆಯೇ? ಇನ್ನೂ ಜೋಳದಿಂದ ರೊಟ್ಟಿಯಲ್ಲದೆ ಸಂಕಟಿ, ಹುಳಿ ಒಯ್ದಿಟ್ಟು ನುಚ್ಚಿನನ್ನ ಮಾಡ್ತಾರೆ. ಅದಕ್ಕ ಬೊಳ್ಳೊಳ್ಳಿ ಒಗ್ಗರಣಿಕೊಟ್ಟ ಸಾಂಬರ ಇದ್ರಂತೋ ‘ಸೊರ್ ಸೊರ್’ ಅಂತ ಡಬರಿ ಖಾಲಿ ಆಗತನ ಹೀರತಿರಿ. ಅದರ ಕಾಂಬಿನೇಷನ್ ಅಷ್ಟು ಟೇಸ್ಟ ಆಗಿರುತ್ತದೆ. ಜೋಳದ ರೊಟ್ಟಿ ಹಾಂಗ ಸಜ್ಜಿ ರೊಟ್ಟಿನೂ ಟೇಸ್ಟು ಆದ್ರ ಎರಡಕ್ಕಿಂತ ಹೆಚ್ಚು ತಿನ್ನಾಂಗಿಲ್ಲ, ಹೀಟಾಗಿ ಸಂಡಾಸು ಹತ್ತುವ ಸಂದರ್ಭ ಹೆಚ್ಚಿರುತ್ತೆ.
ಹಾಸ್ಟೇಲನಲ್ಲಿರುವಾಗ ವಾರಕ್ಕೊಮ್ಮೆಯಾದರೂ ಮನೆಯಿಂದ ಬುತ್ತಿ ತರಿಸಿಕೊಳ್ಳುವ ಪರಂಪರೆ ಆಗಿನ ಬಹುತೇಕರು ಇಟ್ಟುಕೊಂಡಿದ್ದೆವು. ಈಗ ಮೆಸ್ಸಿವೆ, ಪಾಲಕರು ಸಾಕಷ್ಟು ಹಣ ಮಕ್ಕಳಿಗಾಗಿ ಕೊಡುತ್ತಿದ್ದಾರೆ, ಪರಿಸ್ಥಿತಿ ಈಗಿನ ಹಾಗಿರಲಿಲ್ಲ. ನಮಗೆ ಬುತ್ತಿ ರೂಪದಲ್ಲಿ ಇನ್ನಿತರ ಆಹಾರ ಪದಾರ್ಥಗಳ ಜೊತೆ ಬರುತ್ತಿದ್ದುದು ಈ ರೊಟ್ಟಿಗಳೆ. ಆಗ ಬಸ್ಸುಗಳ ಸಂಖ್ಯೆ ಬಹು ಕಡಿಮೆ. ಮೊಬೈಲು ಅವು ಇವು ಇರದ ಕಾಲ. ಆ ಟೈಮಲ್ಲಿ ನಮಗೆ ಮನೆಗೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದ್ದವರು ಕೆ.ಎಸ್.ಆರ್.ಟಿ.ಸಿ ಡ್ರೈವರಗಳೇ. ಮನೆಯವರು ಕೊಟ್ಟ ಬುತ್ತಿಯನ್ನು ಯಾವುದೆ ಪ್ರತಿಫಲಾಕ್ಷೆ ಇಲ್ಲದೆ ಬಸ್ಸಿನ ಮೂಲಕ ತಂದು ಕೊಡುತ್ತಿದ್ದರು. ನಾವು ಬರುವುದು ಲೇಟಾದರೂ ಕಂಟ್ರೋಲರ್ಗೆ ಹೇಳಿ ಆ ಹುಡಗರಿಗೆ ಕೊಡಿ ಎಂದು ಹೋಗುತ್ತಿದ್ದರು. ರಾಯಚೂರಿನಲ್ಲಿ ಹಾಸ್ಟೇಲನಲ್ಲಿರುವಾಗ ರೊಟ್ಟಿಯ ಸಂಭ್ರಮವೇ ಸಂಭ್ರಮ. ರವಿವಾರ ಬಂತೆಂದರೆ ಹತ್ತಾರು ಸ್ನೇಹಿತರು ಬಸ್ ಸ್ಟಾಂಡಿಗೆ ಓಟ ಕಿತ್ತುತ್ತಿದ್ದರು. ಇಲಕಲ್, ಯಲಬುಗರ್ಾ. ಕುಷ್ಠಗಿ, ಶಹಪೂರ ದಿಂದ ಬುತ್ತಿಗಳು ಬರುತ್ತಿದ್ದವು. ತರಾತರಿ ರೊಟ್ಟಿಗಳನ್ನು ತಿಂದು ಸಂಭ್ರಮಿಸುತ್ತಿದ್ದೆವು.
ಮಠ-ಮಂದಿರಗಳೇ ಇರಲಿ ಅಲ್ಲಿ ದಾಸೋಹಕ್ಕೆ ರೊಟ್ಟಿಯ ಅಖಾಡಗಳೆ ಇರುತ್ತವೆ. ಕೊಪ್ಪಳದ ಗವಿಮಠದ ಜಾತ್ರಾ ದಾಸೋಹಕ್ಕೆ ಲಕ್ಷಗಟ್ಟಲೆ ರೊಟ್ಟಿಗಳನ್ನು ದಾನವಾಗಿ ನೀಡುತ್ತಿರುವುದನ್ನು ಪತ್ರಿಕೆಯಲ್ಲಿ ಗಮನಿಸಿರಬಹುದು. ಗುಲಬಗರ್ಾದ ದಾಸೋಹಿ ಶರಣಬಸಪ್ಪನ ಜಾತ್ರೆಯಲಿ ಇದೆ ಮುಖ್ಯ ಪ್ರಸಾದ. ಉತ್ತರ ಕನರ್ಾಟಕದ ಕಡೆ ರೊಟ್ಟಿ ಹಬ್ಬ ಅಂತಲೇ ವಿಶಿಷ್ಟವಾದ ಉತ್ಸವ ಮಾಡುತ್ತಾರೆ. ಖಡಕ್ ರೊಟ್ಟಿಯ ವೈಶಿಷ್ಟವೇ ಅಂತಹದು. ಇದು ಹಸಿದು ಬಂದವರಿಗೆ ಅಪದ್ಭಾಂದವ. ಅಪರಾತ್ರಿ, ಅವೇಳೆಯಲ್ಲಿ ಬಂದವರಿಗೆ ಪ್ರತ್ಯೇಕ ತಾಳ್ಮೆ ಯಾರಿಗಿರುತ್ತೆ. ಒಂದು ವೇಳೆ ಬಿಸಿದೂ ಮಾಡಬೇಕೆಂದರೂ ಅಲ್ಲಿವರೆಗೆ ತಡಕೊಳ್ಳುವ ಶಕ್ತಿ ಇರಬೇಕಲ್ಲ!
ನಮ್ಮೂರಿಂದ 60ಕಿ.ಮೀ ದೂರದಲ್ಲಿ ಅಮ್ಮನಕಟ್ಟೆ ಅಂದ ಸಾದ್ವಿಯೊಬ್ಬರ ಕ್ಷೇತ್ರವಿದೆ. ಅಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆರಾಧನ ಮಹೋತ್ಸವ ನಡೆಯುತ್ತದೆ. ಅದು ಹೆಚ್ಚಾಗಿ ಬರುವುದು ಫೇಬ್ರವರಿ ತಿಂಗಳಲ್ಲಿ. ಮೂರುದಿನ ನಡೆಯುವ ಆ ಸ್ಥಳಕ್ಕೆ ಹಿಂದೆಲ್ಲ ಬಂಡಿಕಟ್ಟಿಕೊಂಡು ಹೋಗುತ್ತಿದ್ದೆವು. ಅದರಲ್ಲಿ ಒಂದು ಬಂಡಿಯಲ್ಲಿ ಭಕ್ರಿ, ದಶಮಿಗಳೇ ತುಂಬಿರುತ್ತಿದ್ದವು. (ರೊಟ್ಟಿಗೆ ಬ್ರಾಹ್ಮಣರ ಮನೆಗಳಲ್ಲಿ ಕರೆಯುವ ಹೆಸರು ಭಕ್ರಿ ಎಂಬುದಾಗಿ) ಹೊಲದಲ್ಲಿ ನಡೆಯುತ್ತಿದ್ದ ಆ ಜಾತ್ರೆಗೆ ಬಂದಕಟ್ಟಿಕೊಂಡುಹೋಗಿ ಅಲ್ಲಲ್ಲಿ ಬಿಡಾರ ಹೂಡುತ್ತಿದ್ದರು. ಆ ಜಾತ್ರೆ ವಿಶೇಷ ಅಂದ್ರ ಮದುವೆ ಮನಗೆ ಬಂದಾಗರ ಬಂಧುಗಳು ಅಷ್ಟುಭೇಟಿಯಾಗುತ್ತದ್ರೋ ಇಲ್ಲೋ ಆ ಜಾತ್ರೆಯಲ್ಲಿ ಭೇಟಿಯಾಗುತಿದ್ರು. ಮಾತಾಡಿಸಲು ಬಂದವರಿಗೆ ರೊಟ್ಟಿಯ ಪ್ರಸಾದ ಸೇವನೆ ನಡಿತಿತ್ತು. ನಮ್ಮ ಬಂಡಿಯಲ್ಲಂತೂ ಮುಂಜಾನೆಯಿಂದ ರಾತ್ರಿತನ ಅದನ ನಡಿತಿತ್ತು. ‘ಅಲ್ಲಿ ಎಲೆ ಹಾಕಕತರ ನಡಿರೋ…..’ ಅಂದ್ರೂ ಹುಡ್ರು ಕೇಳತಿರಲಿಲ್ಲ. ಆ ರೊಟ್ಟಿ. ಎಣ್ಣಿ ಬದನೆಕಾಯಿ,ಚಟ್ನಿ,ಪುಡಿ ಮ್ಯಾಗ ಮೊಸರು ಏನ್ ಕೇಳತಿರಿ? ನೆನಸಿಕೊಂಡ್ರಾ ಬಾಯಲ್ಲಿ ನೀರು ಜೀನಗತಾವ. ಕೆಲವೊಬ್ಬರು ಮುಸುರಿ ಮಡಿ ಅನ್ನೋರಿಗೂ ದಶಮಿ ಅನ್ನುವ ರೊಟ್ಟಿ ಇದ್ದವು. ನೀರು ಕಲಿಸಿ ಮಾಡಿದ್ರ ರೊಟ್ಟಿ ಮುಸುರಿ ಆಗುತ್ತೆ. ಮುಸುರಿ ಬ್ರಾಹ್ಮಣರಿಗೆ ವಜ್ರ್ಯ. ಅದ ಹಾಲು ಕಲಿಸಿ ರೊಟ್ಟಿ ಮಾಡಿದ್ರ ಅದು ದಶಮಿ ಅನಸ್ತಿತ್ತು. ಅದು ಏಕ ಲಾಕ ಪೈಗಂಬರ ತರಹ ಎಲ್ಲಕಡೆ ಮಾಫಿ. ಅದಕ್ಕ ಮುಸುರಿ ಅನ್ನೋ ಅಭಿದಾನ ತಟ್ಟುತ್ತಿರಲಿಲ್ಲ. (ಇದು ಏಕಾದಶಿ ದಿನದ ಆಹಾರವಾಗಿ ಮಾನ್ಯತೆ ಪಡೆದಿತ್ತು) ಅಂತವರಿಗೆ ‘ನಿಮ್ಮ ಸಲುವಾಗೆನ ಮಾಡಿಕೊಂಡು ಬಂದಿವಿ ದಶಮಿ ತಿನ್ನ ಬರೆವ್ವಾ?’ ಅಂತ ಕರಿತಿದ್ರು.
ಇನ್ನೂ ಕೀರ್ತನೆ, ವಚನಗಳಲ್ಲಿ ರಾಗಿಯ ಪ್ರಸ್ತಾಪ ಬಂದಿರಬಹುದು. ಅವರೆಲ್ಲ ಬಡಪಾಯಿ ಜೋಳದ ಬಗ್ಗೆ ಯಾಕೆ ಬೇಧವೆಣಿಸಿದರೊ ಕಾಣೆ. ಆದರೆ ಒಡಪು,ಒಗಟು,ಗಾದೆಗಳಲ್ಲಂತೂ ರೊಟ್ಟಿಯ ನೆನಿಕೆ ಇದೆ. ‘ಕಟಗ ರೊಟ್ಟಿ, ಎಣ್ಣಿ ಬದನೆಕಾಯಿ ಕಟಿಗೊಂಡು ಹೋಗಂದ್ರ ಶೆಟಗೊಂಡು ಹೋಗ್ತಾರ ನಮ್ಮ ತಿಪ್ಪಶೆಟ್ರು’ ಇದು ಉತ್ತರ ಕನರ್ಾಟಕದ ಗ್ರಾಮ ಭಾಗದಲ್ಲಿ ಹೆಣ್ಣಮಕ್ಕಳು ಗಂಡನ ಹೆಸರು ಕೇಳಿದಾಗ ಹಾಸ್ಯ ಹಾಗೂ ಶೃಂಗಾರಭರಿತವಾಗಿ ಹೇಳುವ ಒಡಪಿನ ಧ್ವನಿ, ‘ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನ ಕಾಯಿ’ ಆಕಾಶ ನಕ್ಷತ್ರದ ಉತ್ತರ ಕಾಣಿಸುವ ಇದು ಒಗಟಿನ ಸಾಲು, ಮಹಾಭಾರತದಲ್ಲಿ ಬರುವ ಜೋಳದಪಾಳಿಗೆ ಎನ್ನುವ ಪದಕ್ಕೆ ಅನ್ನದ ಋಣ ಎನ್ನುವ ಮಾತಿದೆ. ಮಹಾಭಾರತ ಕಾಲಕ್ಕೆ ಇದು ಪ್ರಮುಖ ಆಹಾರ ಧನ್ಯವಾಗಿತ್ತೆ! ಎನ್ನುವ ಸಂಶೋಧನೆ ಆಗಬೇಕಿದೆ. ಆಧುನಿಕ ಶಿಶು ಗೀತೆಗಳಲ್ಲೂ
ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದು ರೊಟ್ಟಿ ತಟ್ಟಪ್ಪ
ಪುಟಾಣಿ ರೊಟ್ಟಿ
ಕೆಂಪಗೆ ಸುಟ್ಟು ಒಂಬತ್ತು ಕಾಸಿಗೆ ಕಟ್ಟಪ್ಪ
 
ಅನ್ನುವ ಗೀತೆ ಗಮನಿಸಿದರೆ ರೊಟ್ಟಿ ಸುಟ್ಟಕೊಡುವ ಅಂಗಡಿಗಳು ಇದ್ದವೇನೋ ಎನ್ನುವ ಆಶಾಭಾವವೂ ಮೂಡುತ್ತೆ.
ಮೊದಲ ಹೇಳಿದಾಂಗ ರೊಟ್ಟಿ ಇಲ್ಲದ ಊಟ ಅದು ಊಟನ ಅಲ್ಲ. ಯಾವುದೆ ಆಹಾರ ತಿಂದ್ರ ಏನಾದ್ರೂ ಬ್ಯಾನಿ ಬಡಕೊಬಹುದು ರೊಟ್ಟಿ ತಿನ್ನೊರಿಗೆ ಬ್ಯಾನಿ ಬಡಕೊಂಡಿದ್ದು ಉದಾಹರಣೆಗಳ ಇಲ್ಲ. ರೊಟ್ಟಿ ತಿಂದರ ಹೊಟ್ಯಾಗಾಗತ್ತ, ಅನ್ನ ಉಂಡ್ರ ಹೊಟ್ಟಿ ಬರುತ್ತ. ಇದು ಸೇರಿಸಬಹುದಾದ ಹೊಸ ಗಾದೆ. ರೊಟ್ಟಿಯಲ್ಲಿ ರೈತನ ಕಳಕಳಿ ಇದೆ, ಅಮ್ಮನ ಪ್ರೀತಿ ಇದೆ. ಹಸಿದವರಿಗೆ ತಣಿಸುವ ದಯಾ ಗುಣ ಅದರಲ್ಲಿ ಇದೆ. ಅಂತೆಯೆ ನಮ್ಮ ಭಾಗದ ಹಿರಿಯ ಕವಿ ಜಂಬಣ್ಣ ಅಮರಚಿಂತರು
‘ರೊಟ್ಟಿ
ವಿಸ್ತಾರದಲ್ಲಿ ಭೂಮಿಗಿಂತ ಮಿಗಿಲು
ಇದರ ಎತ್ತರ
ಎವರೆಸ್ಟ್ಟಿಗೂ ದಿಗಿಲು’
ಎಂದು ಹೇಳುವಲ್ಲಿ ಈ ನೆಲದ ಸತ್ವವೂ ಇದೆ. ಖರೆ ಅಲ್ಲವೇನ್ರಿ?
 
 

‍ಲೇಖಕರು G

23 May, 2014

3 Comments

  1. Geetanjali Arakeri

    Very nice article. Made me feel nostalgic abt my place ( Bijapur dist). Keep writing ..

  2. Anil Talikoti

    ಬಹಳ ದಿವಸದ ಮೇಲೆ ಭಕ್ರಿ, ಕಟಕ ರೊಟ್ಟಿ ಬಗ್ಗೆ ಓದಿದೆ. ತುಂಬಾ ಚೆನ್ನಾಗಿದೆ ಲೇಖನ.
    ಅನಿಲ

  3. ಅ೦ಗಡಿ ಇಂದುಶೇಖರ

    ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವೂ ನಾನು “….ಎನ್ನುವ ಹಾಡು ನೆನಪಿಗೆ ಬಂತು. ಜೋಳದ ದಂಟು ಕೂಡಾ ದನ-ಕರುಗಳಿಗೆ ಮೇವಾಗಿ ಉಪಯೋಗವಾಗುತ್ತೆ. ಜೋಳದ ದಂಟು ಕಾಂಪೋಷ್ಟ್ ಗೊಬ್ಬರವಾಗಿಯೂ ಉಪಯೋಗವಾಗುತ್ತದೆ. ಕಡಿದ ದಂಟಿನ ಕೆಳಭಾಗವನ್ನು,ಹಾಗೇ ಬಿಟ್ಟರೆ, ಕುಳೆಯ ರೂಪದಲ್ಲಿ ಮತ್ತೆ ಇಳುವರಿ ಕೊಡುತ್ತದೆ.
    ಲೇಖಕರು ಹೇಳಿರುವಂತೆ ಈ ರೊಟ್ಟಿ ಬಡಿಯುವದು ಎಲ್ಲರಿಗೂ ಸಿದ್ಧಿಸುವಂಥದಲ್ಲ.
    1) ಹಿಟ್ಟಿಗೆ ಎಷ್ಟು ಬೇಕೋ ಅಷ್ಟೇ,ಬಿಸಿನೀರು ಬೆರೆಸುವದು. 2) ತಟ್ಟುವಾಗ ಕರ್ಕಶ ಶಬ್ಧವಾಗದಂತೆ ಬಡಿಯುವದು. 3) ಅಲ್ಲಲ್ಲಿ ಹರಿಯದಂತೆ ಪರ್ಫೆಕ್ಟ್ ಗೋಲಾಕಾರವಾಗಿ ತಿರುಗಿಸುತ್ತಾ ಬಡಿಯುವದು. 4) ಹೀಗೆ ತಯಾರಾದ ದುಂಡಾದ ಹಿಟ್ಟನ್ನು “ಹರಿಯದಂತೆ” ನಾಜೂಕಾಗಿ ಹಂಚಲ್ಲಿ ಹಾಕುವದು.5) ಎಷ್ಟು ಬೇಕೋ ಅಷ್ಟೇ ಹಸಿಯಾದ ಬಟ್ಟೆಯಿಂದ ನೀರುಣಿಸುವದು. 6) ಬಿಸಿಯಾದ ರೊಟ್ಟಿಯನ್ನು,ಕೈಗೆ ಹಂಚಿನ ಬಿಸಿ ಸ್ವಲ್ಪವೂ ತಾಗದಂತೆ ಹೊರಳಿಸುತ್ತಾ ಅಂತಿಮವಾಗಿ ಕೆರಸಿಯಲ್ಲಿ ಹಾಕುವವರೆಗೂ ನಮ್ಮ ತಾಯಂದಿರ, ಸಹೋದರಿಯರ ಹಾಗೂ ಮಡದಿಯ ಜಾಣ್ಮೆಗೆ ಬಹುಪರಾಕ್… ಮೇಲಿನ ಹಂತಗಳಲ್ಲಿ ಎಲ್ಲಿಯಾದರೂ ಒಂದು ಕಡೆ ಗಡಬಡ್ ಆದರೂ ನಮಗೆ ರೊಟ್ಟಿ ಸಿಗುವದಿಲ್ಲ..
    ಜೋಳವನ್ನು ಸ್ಟೋರ್ ಮಾಡುವ “ಹಗೇವು” ಬಗ್ಗೆ ಹೇಳುವದಾದರೆ, ಧಾರವಾಡದ ಜಿಲ್ಲಾಧಿಕಾರಿಯ ಸರಕಾರೀ ನಿವಾಸದ ಎದುರಿಗಿನ ಬಯಲಿನಲ್ಲಿ ಸುಮಾರು ಇಪ್ಪತ್ತು ಹಗೇವುಗಳಿದ್ದವು. ಅಲ್ಲಿ ಈಗ ಕಟ್ಟಲ್ಪಟ್ಟಿರುವ ಮಿನಿ-ವಿಧಾನಸೌಧದ ತಳಪಾಯಕ್ಕಾಗಿ ಅಗೆಯುತ್ತಿರುವಾಗ ಗೋಚರವಾಗಿದ್ದವು. ಆದರೆ ಅವುಗಳಲ್ಲಿ ಏನೂ ಇರಲಿಲ್ಲ..!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading