ಪ್ರಜ್ಞಾ ಮತ್ತೀಹಳ್ಳಿ
ಧೋ ಧೋ ಧೋ
ಒಮ್ಮಿಂದೊಮ್ಮೆಲೆ
ಸಿಟ್ಟಿಗೆದ್ದ ಅಂಬಕ್ಕನ
ಅವ್ಯಾಹತ ಬೈಗುಳದಂತೆ
ಬೀಳುತ್ತಲೇ ಇದೆ ಮಳೆ
ಸಪ್ತಶತಿ ಪಾರಾಯಣದ ನಡುವೆ
ಕೊಂಚವೇ ಉಗುಳು ನುಂಗಿ ಮತ್ತೆ
ಹೊಸ ಜೋರಿನಲ್ಲಿ ರಾಮಣ್ಣ
ಮಂತ್ರ ಮುಂದುವರಿಸುವಂತೆ
ಮುಗಿಲು ಕರಗುತ್ತಲೇ ಇದೆ
ನೆಲದ ಮಣ್ಣಂಗಿ ಕಿತ್ತು ಕೆರೆಯಾಗಿ
ಕೆರೆಯ ಬಿಳಿ ಸೀರೆ ಕೊಚ್ಚಿ ಕೆಸರಾಗಿ
ಕಾಡ ಒಡಲೊಳಗೆ ಪಿಳಿಪಿಳಿ ಒರತೆ
ಕಡಲ ಎದೆ ನಿಗಿನಿಗಿ ಕುದಿದಂತೆ
ಹರಿದು ಹೊಳೆ ಭೋರ್ಗರೆಯುತ್ತಿದೆ
ಗಾಂಧಾರ ದೈವತಗಳಿಲ್ಲದೆ ಆರೋಹ
ಅವರೋಹದಲ್ಲಿ ಸಂಚರಿಸುವ
ಪಂಚ ಸ್ವರ ವಿಹಾರಿ ಮೇಘ ಮಲ್ಹಾರ
ಕರಿ ಮೋಡಗಳ ಹಿಂಡು ದಿಬ್ಬಣಕ್ಕೆ
ಮಶಾಲು ಹಿಡಿದ ಮರುತ ನರ್ತನ
ಹಸಿರು ಕಣಿವೆಯ ಕಾಫಿ ಕಾಡುಗಳಲ್ಲಿ
ಕಳೆದು ಹೋದವರ ಹೆಸರ ಜೋರಾಗಿ
ಕೂಗಿದಂತೆ ತೂಗಾಡಿದೆ ಕೊಂಬೆ ತಲೆ
ಹೊರೆ ಕೂದಲ ತೊಳೆದುಕೊಳ್ಳಲು
ಎಣ್ಣೆ ಸುರಿದು ತಟ್ಟಿದಂತೆ ಟಪಟಪ
ಇರಚಲು ದಾಳಿಗೆ ಅಡ್ಡಡ್ಡ ಶರಣಾದ ಪೈರು
ನಿನ್ನೆ ಆಟದ ಮೋಸಕ್ಕೆ ಇವತ್ತು ಅಟ್ಟಿಸಿ
ಹೊಡೆವ ದೋಸ್ತನ ಹಾಗೆ ಹೂಂಕರಿಸಿ ಗಾಳಿ
ಅದೃಶ್ಯ ವೈರಾಣು ಭೀತಿ ಬಾಯಾರಿ
ಗಂಟಲು ಕಟ್ಟಿ ಗೊರಗೊರ ತಣ್ಣಗೆ
ಹಿರಿತಲೆಗಳು ಅಂತಿಮ ನಮನವೂ
ಇಲ್ಲದೆ ಗೋಡೆಯ ಪಟವಾಗುತ್ತಿದ್ದಾರೆ
ಸಪ್ತಸಾಗರದಾಚೆ ಜನ್ಮಭೂಮಿಯೆಡೆ
ಹಾರಲಾರದೆ ಕೂತವರ ಕನಸುಗಳಲ್ಲಿ
ಕಾಗೆ ಮುಟ್ಟದ ಪಿಂಡಗಳು ಕರೆಯುತ್ತವೆ
ಅದೆಷ್ಟೋ ದಿನಗಳಿಂದ ಬೀಗವಿಕ್ಕಿದ
ಗೇಟಿನ ಮೇಲೆ ಗಲ್ಲವೂರುತ್ತ ಚಿಗಿತ
ಬೊಗನ್ವಿಲಾ ಸಾದನಕೆರಿ ನೀರಲ್ಲಿ ಹಣಕಿ
ಮುಖ ನೋಡಿಕೊಂಡಿದೆ
ಕೊಡೆಯೂರಿ ನಿಂತ ವರಕವಿಯ
ಶಬ್ದದಾಚೆಯ ಹಾಡಿಗೆ
ಮಳೆಯ ತೇರೆಳೆಯುತ್ತ ಹಸಿರು ಕೈ ಚಾಚಿದೆ
ಮುಚ್ಚಿದ ಬಾಗಿಲನ್ನೂ ದಬ್ಬಿ ಹೂಂಕರಿಸುವ
ಗಾಳಿ ಧಿಮಾಕಿಗೆ ನಡುಗುತ್ತ ಒಣಗದೆ ಬೂಸಲು
ವಾಸನೆ ಬೀರುವ ಚಾದರ ಮೇಲಕ್ಕೆಳೆಯುತ್ತ
ಮಗ್ಗುಲಾಗುತ್ತಾಳೆ ಗಂಗವ್ವ ದಡಾರ್ ಎಂದು
ಹಿತ್ತಿಲಲ್ಲೆಲ್ಲೊ ತೆಂಗಿನ ಹೆಡ ಬಿದ್ದ ಸದ್ದು
ಮತ್ತೆ ಜೋರಾಗುತ್ತಿರುವ ಮಳೆ
ಏನೂ ಕೇಳದಂತೆ ಏನೂ ಕಾಣದಂತೆ
ಮತ್ತು ಎಲ್ಲವೂ ನೆನಪಾಗುವಂತೆ
ಪ್ರಜ್ಞಾ..ಮಳೆಯ ಹೊಸ ಭಾಷ್ಯ ಸೊಗಸಾಗಿದೆ..