ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ 'L'

ಜೋಗಿಯವರ ಹೊಸ ಕಾದಂಬರಿ, ‘ಸಾವಣ್ಣ  ಪ್ರಕಾಶನ’ದ ೧೦೦ ನೆಯ ಕೃತಿ ‘ಎಲ್’ ಈ ಭಾನುವಾರ ಬಿಡುಗಡೆಯಾಗುತ್ತಿದೆ.
ಈ ಕಾದಂಬರಿಯ ಒಂದು ಅಧ್ಯಾಯ ‘ಅವಧಿ’ ಓದುಗರಿಗಾಗಿ..


ಸಂಪಾಜೆಗೆ ಹೊರಟು ನಿಂತಾಗಲೇ ನಾನು ನಿರ್ಧಾರ ಮಾಡಿಬಿಟ್ಟಿದ್ದೆ.
ಲೀಲಾವತಿಯ ಹತ್ತಿರ ನನ್ನ ಪ್ರೀತಿ ಹೇಳಿಕೊಳ್ಳಬೇಕು. ಅವಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು. ಅವಳನ್ನು ಮದುವೆ ಆಗೋಣ ಎಂದು ಕೇಳಬೇಕು. ನನ್ನನ್ನು ಅವಳು ಖಂಡಿತಾ ನಿರಾಕರಿಸುವುದಿಲ್ಲ. ಅವಳಿಗೆ ನನ್ನ ಮೇಲೂ ಪ್ರೀತಿ ಇದ್ದಂತೆ ಕಾಣುತ್ತದೆ ಎಂದೆಲ್ಲ ಲೆಕ್ಕಾಚಾರ ಹಾಕಿದ್ದೆ.
ನಾನು ಮಾತಾಡುತ್ತಿದ್ದದ್ದು ಕಡಿಮೆ. ನನಗೆ ಮಾತಿನ ಭಯವಿತ್ತು. ಯಾವ ಮಾತು ಯಾವ ಅರ್ಥವನ್ನು ಹೊರಡಿಸುತ್ತದೆಯೋ ಎಂಬ ಆತಂಕವಿತ್ತು. ಮನೆಯಲ್ಲಿದ್ದಾಗ ಅಪ್ಪನ ಮಾತು ಅಮ್ಮನಿಗೆ ಮಾಡುತ್ತಿದ್ದ ಗಾಯವನ್ನು ನಾನು ನೋಡಿದ್ದೆ. ಅಮ್ಮನ ಮಾತು ಕೂಡ ಅವಳನ್ನೇ ಘಾಸಿ ಮಾಡುತ್ತಿತ್ತು. ಮಾತು ಗರಗಸದಂತೆ, ಆಡಿದವರನ್ನೇ ಹೋಗುತ್ತಲೂ ಬರುತ್ತಲೂ ಕುಯ್ಯುತ್ತದೆ ಅನ್ನುವುದು ನನಗೆ ಖಾತ್ರಿಯಾಗಿತ್ತು.
ಕವಿತೆಯ ಮಾತು ಬಂದಾಗ ಮಾತ್ರ ನಾನು ತುಂಬ ಮಾತಾಡುತ್ತಿದ್ದೆ. ಅದನ್ನು ಲೀಲಾವತಿಯೂ ಗಮನಿಸಿದ್ದಳು. ಒಂದೆರಡು ಸಲ ಅವಳು ಹೇಳಿಯೂ ಇದ್ದಳು.
ಎಲ್. ನೀನು ಈ ಜಗತ್ತಿಗೆ ಸೇರಿದ ಮನುಷ್ಯ ಅಲ್ಲ ಕಣೋ. ನಿನಗೆ ಮಾತು ಮುಂದುವರಿಸಲಿಕ್ಕೆ ಬರುವುದಿಲ್ಲ. ಕವಿತೆಯ ಮೂಲಕವೇ ನೀನು ಮಾತಾಡುವುದು. ನಿನ್ನ ಜೀವನದಲ್ಲಿ ಕಾವ್ಯದ ಗಂಧವೂ ಇಲ್ಲದ ಹುಡುಗಿ ಸಿಕ್ಕಳು ಅಂದುಕೋ. ಅವಳನ್ನು ಮದುವೆಯಾದ ಮೇಲೆ ಅವಳ ಜೊತೆ ಏನು ಮಾತಾಡುತ್ತೀ ಎಂದು ಕಣ್ಣರಳಿಸಿಕೊಂಡು ಕೇಳಿದ್ದಳು.
ಅಂಥವಳನ್ನು ನಾನು ಮದುವೆಯಾದಾಗ ತಾನೇ ಈ ಪ್ರಶ್ನೆ. ನಾನು ಮದುವೆಯಾಗುವ ಹುಡುಗಿ ನನಗಿಂತ ಹೆಚ್ಚು ಕಾವ್ಯವನ್ನು ಪ್ರೀತಿಸುವವಳೇ ಆಗಿರುತ್ತಾಳೆ ಅಂತ ನಾನು ಮಾರ್ಮಿಕವಾದ ಉತ್ತರ ಕೊಟ್ಟಿದ್ದೆ.
ಯಾರ ಒಳಗಿನ ಕವಿ ಯಾವ ಸಾಯುತ್ತಾನೋ ಯಾರಿಗೆ ಗೊತ್ತು ಎಲ್. ಒರತೆ ಯಾವಾಗ ಬೇಕಾದರೂ ಬತ್ತಬಹುದು. ಬಂಜರು ನೆಲದಲ್ಲೂ ಬದುಕಬೇಕಾಗಿ ಬರಬಹುದು ಅಂದಿದ್ದಳು ಲೀಲಾ.
ಪರೀಕ್ಷೆ ಮುಗಿಯುತ್ತಿದ್ದಂತೆ ಸದಾನಂದ ಶೆಟ್ಟರೇ ಕಾರು ಕೊಟ್ಟು ಲೀಲಾವತಿಯನ್ನು ಅವಳ ಮನೆಗೆ ಬಿಟ್ಟು ಬಾ ಅಂದಿದ್ದರು. ಅವಳಿನ್ನೂ ಕುಂಟುತ್ತಿದ್ದಳು. ಬಸ್ಸು ಹತ್ತಿಕೊಂಡು ಹೋಗುವುದಂತೂ ಅವಳಿಗೆ ಸಾಧ್ಯವೇ ಇರಲಿಲ್ಲ. ಆ ಭಾನುವಾರ ಬೆಳಗ್ಗೆ ನಾವು ಉಳ್ಳಾಲದಿಂದ ಸಂಪಾಜೆಗೆ ಹೊರಟೆವು. ಅವಳು ಹಿಂದಿನ ಸೀಟಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದಳು.
ಹೊರಟು ಸ್ವಲ್ಪ ಹೊತ್ತು ಅವಳು ಮಾತಾಡಲಿಲ್ಲ. ಆಮೇಲೆ ಏನನ್ನಿಸಿತೋ ಏನೋ? ಕಾರು ನಿಲ್ಲಿಸು ಅಂದಳು. ನಿಧಾನವಾಗಿ ಇಳಿದು, ಒಂದೇ ಕಾಲಲ್ಲಿ ಜಿಗಿಯುತ್ತಾ ಮುಂದಿನ ಸೀಟಿಗೆ ಬಂದಳು. ಸೀಟನ್ನು ಹಿಂದಕ್ಕೆ ತಳ್ಳಿ ಕಾಲು ನೀಡಿ ಕುಳಿತುಕೊಂಡಳು.
ನಿನ್ನೆ ರಾತ್ರಿ ಒಂದು ಪದ್ಯ ಬರೆದೆ. ಪೂರ್ತಿಯಾಗಿಲ್ಲ. ಅರ್ಧ ಮಾತ್ರ ಬರೆದೆ ಅಂದೆ.
ಪ್ಲೀಸ್ ಕಣೋ.. ಇವತ್ತೊಂದು ದಿನ ಪದ್ಯದ ಮಾತು ಬೇಡ ಅಂದಳು. ನನಗೆ ಬೇರೇನು ಮಾತಾಡಬೇಕು ಅಂತ ತೋಚದೇ ಸುಮ್ಮನೆ ಕೂತಿದ್ದೆ. ಅವಳೂ ಸುಮ್ಮನಿದ್ದಳು.
ಮಾತಾಡು ಅಂದಿದ್ದೆ. ಅವಳು ಸ್ವಲ್ಪ ಹೊತ್ತು ಸುಮ್ಮನೇ ಇದ್ದಳು. ನನ್ನನ್ನು ಬಿಟ್ಟು ಹೋಗುವ ಸಂಕಟ ಅವಳನ್ನು ಕಾಡುತ್ತಿರಬಹುದು. ನನಗೆ ಅನ್ನಿಸುವಂತೆ ಅವಳಿಗೂ ನನ್ನ ಸಾನ್ನಿಧ್ಯವೇ ಸುಖ ಅನ್ನಿಸುತ್ತಿರಬಹುದು. ಈ ವಿದಾಯ ಅವಳನ್ನು ಕಂಗೆಡಿಸಿರಬಹುದು ಅಂತೆಲ್ಲ ನಾನು ಯೋಚಿಸುತ್ತಿದ್ದರೆ ಅವಳು ಮಾತಾಡಿದ್ದಳು;
‘ಕವಿತೆಗಳೆಲ್ಲ ಮುಗಿದ ಮೇಲೆ ನೀನೇನು ಮಾಡುತ್ತೀ ಅಂತ ಯೋಚಿಸುತ್ತಿದ್ದೇನೆ. ನಿನ್ನಲ್ಲಿ ಬೇರೇನೂ ಇರುವಂತೆ ಕಾಣುತ್ತಿಲ್ಲ. ನಿನ್ನ ಕವಿತೆಗಳನ್ನು ಓದುವವರು ಸಿಕ್ಕರೆ ಪುಣ್ಯ. ಸಿಗದೇ ಹೋದರೆ ನಿನಗೆ ಹುಚ್ಚು ಹಿಡಿಯುತ್ತದೆ. ಹೇಗಾದರೂ ಮಾಡಿ ಕವಿತೆಗಳ ಗುಂಗಿನಿಂದ ಬಿಡಿಸಿಕೋ. ಕಾವ್ಯ ಕೂಡ ಅಡಿಕ್ಷನ್ ಆಗಬಾರದು. ಅದಕ್ಕಿಂತ ಅಪಾಯಕಾರಿ ಬೇರೊಂದಿಲ್ಲ. ಮದ್ಯ, ಸಿಗರೇಟು ನಿನ್ನ ದೇಹವನ್ನು ಹಾಳು ಮಾಡೀತು. ಕಾವ್ಯ ನಿನ್ನ ಬದುಕನ್ನೇ ಕೊರೆಯುತ್ತದೆ..’
ಲೀಲಾ ನನಗೆ ಮೊದಲ ಪೆಟ್ಟು ಕೊಟ್ಟಿದ್ದಳು. ಕವಿತೆಗಳ ಸಂಗಡ ಬದುಕಬಲ್ಲೆ ಅಂತ ನಂಬಿದ್ದ ನಾನು ಕವಿತೆಗಳನ್ನು ನನಗಿಂತ ಜಾಸ್ತಿ ಪ್ರೀತಿಸುವ ಅವಳಿಂದ ಈ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಅವಳಿಗೆ ಏನು ಉತ್ತರಿಸಬೇಕೋ ತಿಳಿಯಲಿಲ್ಲ. ಮನಸ್ಸು ಖಾಲಿಯಾಗಿತ್ತು. ಅಥವಾ ಅವಳಿಗೆ  ಸಮಾಧಾನ ನೀಡಬಹುದಾದ ಯಾವ ಸಮರ್ಥನೆಯೂ ನನ್ನಲ್ಲಿರಲಿಲ್ಲ.
ಕಾರು ಕಲ್ಲಡ್ಕ ದಾಟಿ, ಮಾಣಿಯ ಹತ್ತಿರ ತಿರುಗಿ, ಪುತ್ತೂರಿಗೆ ಹೋಗುವ ತನಕವೂ ನಾವಿಬ್ಬರೂ ಮಾತಾಡಲಿಲ್ಲ. ಒಂದೆರಡು ಸಲ ತಿರುಗಿ ಅವಳತ್ತ ನೋಡಿದರೆ ಅವಳು ಕಣ್ಮುಚ್ಚಿ ಮಲಗಿದ್ದಳು. ನಿದ್ದೆ ಹೋಗಿದ್ದಳೋ ನಿದ್ದೆ ನಟಿಸುತ್ತಿದ್ದಳೋ ಗೊತ್ತಾಗಲಿಲ್ಲ. ಆದರೆ ನಮ್ಮಿಬ್ಬರ ಮಧ್ಯೆ ಕವಿತೆಯ ಹೊರತು ಮತ್ತೇನೂ ಮಾತುಗಳಿಲ್ಲ ಅನ್ನುವುದು ನನಗೆ ಆವತ್ತು ಖಾತ್ರಿಯಾಯಿತು.
ಪುತ್ತೂರಿನಲ್ಲಿ ಕಾರು ನಿಲ್ಲಿಸಿದೆ. ಟೀ ಕುಡಿಯೋಣ ಅಂದೆ. ಸರಿ ಅಂದಳು. ನಾನೇ ಹೋಗಿ ಅವಳಿಗೆ ಟೀ ತಂದು ಕೊಟ್ಟೆ. ಎಂಟು ಗಂಟೆಯ ಎಳೆಬಿಸಿಲು ಅವಳ ಹಣೆಯನ್ನು ಸವರಿಕೊಂಡು ಹೋಗಿತ್ತು. ಪುತ್ತೂರು ಇನ್ನೂ ಪೂರ್ತಿ ಎದ್ದಿರಲಿಲ್ಲ. ನಾವು ಕಾಫಿ ಕುಡಿಯಲಿಕ್ಕೆಂದು ನಿಲ್ಲಿಸಿದ ಹೋಟೆಲು ಬಿಟ್ಟರೆ ಮಿಕ್ಕಂತೆ ಇಡೀ ಬೀದಿ ನಿರ್ಜನವಾಗಿತ್ತು. ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳ ತುದಿಯಿಂದ ಹೊಗೆ ಇಷ್ಟಿಷ್ಟೇ ಆಕಾಶಕ್ಕೇರುತ್ತಿತ್ತು.
ಅವಳು ಟೀ ಕುಡಿದು ಕೈ ಮುಂದಕ್ಕೆ ಚಾಚಿದಳು. ನಾನು ಕಪ್ ತೆಗೆದುಕೊಂಡೆ. ಹೋಟೆಲಿನ ಜಗಲಿಯ ಮೇಲಿಟ್ಟೆ. ಅವಳು ಮುಗುಳ್ನಕ್ಕಳು. ಆ ಬೆಳಗು ನನಗೆ ಮಹಾಬೆಳಗಿನಂತೆ ಅನ್ನಿಸಿಬಿಟ್ಟಿತು. ಅವಳು ಕೂತಿದ್ದ ಸೀಟಿನ ಕಿಟಕಿಯ ಹತ್ತಿರ ಬಾಗಿ, ಅವಳನ್ನೇ ದಿಟ್ಟಿಸಿ ನೋಡುತ್ತಾ ‘ ಕವಿತೆಗಿಂತ ಜಾಸ್ತಿ ಪ್ರೀತಿಸ್ತೀನಿ ನಿನ್ನ. ಮದುವೆ ಆಗೋಣ್ವಾ’ ಕೇಳಿದೆ. ಅವಳು ಮತ್ತೆ ಮುಗುಳ್ನಕ್ಕಳು. ನಡೀ ಹೋಗೋಣ ಅಂತ ಕಣ್ಸನ್ನೆಯಲ್ಲೇ ಹೇಳಿದಳು.
ಅದು ಸಮರ್ಪಕವಾದ ಪ್ರೇಮ ನಿವೇದನೆಯೇನೂ ಆಗಿರಲಿಲ್ಲ ಅಂತ ನನಗೆ ಥಟ್ಟನೆ ಗೊತ್ತಾಯಿತು. ಹಾಗೆ ಅರೆಬರೆಯಾಗಿ ಹೇಳಬಾರದಿತ್ತು. ಮದುವೆಯಂಥ ಗಂಭೀರ ಸಂಗತಿಯನ್ನು ಅಷ್ಟು ಚಿಲ್ಲರೆಯಾಗಿ ಪ್ರಸ್ತಾಪ ಮಾಡಬಾರದಿತ್ತು ಅಂತ ತುಂಬಾ ಅನ್ನಿಸಿತು. ಅವಳು ಅದಕ್ಕೆ ಉತ್ತರಿಸದೇ ಇದ್ದದ್ದು ಕೂಡ ನನ್ನ ತಪ್ಪನ್ನು ಸಾರಿ ಹೇಳುತ್ತಿತ್ತು.
ಹೇಳುವುದಂತೂ ಹೇಳಿಬಿಟ್ಟಿದ್ದೆ. ಹಾಗೆ ಹೇಳಿದ್ದೇ ಸರಿಯೇನೋ? ನನ್ನ ಮನಸ್ಸಿನಲ್ಲಿ ಇರುವುದನ್ನು ಅವಳ ಮನಸ್ಸಿಗೆ ದಾಟಿಸಿದ್ದಾಗಿತ್ತು. ಅವಳು ಅದಕ್ಕೇನು ಹೇಳುತ್ತಾಳೋ ಅಂತ ಮನಸ್ಸು ಕಾತರಿಸುತ್ತಿತ್ತು.
ಪುತ್ತೂರು ದಾಟುವ ತನಕ ನಾವಿಬ್ಬರೂ ಮಾತಾಡಲಿಲ್ಲ. ಆ ಮೌನ ನನಗೆ ಅಸಹನೀಯ ಆಗುತ್ತಿದ್ದಂತೆ ನಾನೇ ಮಾತು ಶುರುಮಾಡಿದೆ.
`ನೀನು ಕೇಳಿದ ಪ್ರಶ್ನೆಯನ್ನೇ ಯೋಚಿಸುತ್ತಿದ್ದೆ. ನಾನೇಕೆ ಕವಿತೆಗಳನ್ನು ಬಿಟ್ಟು ಬೇರೇನೂ ಮಾತಾಡುವುದಿಲ್ಲ? ಈ ಕುರಿತು ನಾನು ಯೋಚಿಸಿರಲೇ ಇಲ್ಲ. ನನಗೆ ಮಾತಾಡುವುದಕ್ಕೆ ಬೇರೇನಿತ್ತು ಅಂತ ಈಗ ಆಲೋಚನೆ ಮಾಡಿದರೆ ಏನೂ ಹೊಳೆಯುತ್ತಿಲ್ಲ. ಎಲ್ಲರೂ ಏನು ಮಾತಾಡುತ್ತಾರೆ?  ತಿಂಡಿ, ಊಟ, ಮನೆ, ಮಳೆ, ಬೆಳೆ, ನಮ್ಮ ಕಷ್ಟಗಳು, ನೋವು, ಯಾರೋ ಹಿಂಸೆ ಕೊಟ್ಟದ್ದು, ಇನ್ಯಾರೋ ಮೆಚ್ಚಿಕೊಂಡದ್ದು, ಯಾರಿಗೋ ಮದುವೆ ಆದದ್ದು, ಮತ್ಯಾರೋ ಮಕ್ಕಳನ್ನು ಕಳೆದುಕೊಂಡದ್ದು. ಇಷ್ಟನ್ನು ಬಿಟ್ಟು ಬೇರೇನಾದರೂ ಮಾತಾಡುವುದಕ್ಕಿದೆಯೇ? ಇವನ್ನು ಕುರಿತು ಎಷ್ಟು ದಿನ ಮಾತಾಡಲಿ ನಾನು? ನಮ್ಮನ್ನೇ ತೆಗೆದುಕೊಳ್ಳೋಣ. ನಾವಿಬ್ಬರೂ ಏನು ಮಾತಾಡಬಹುದು.  ನೀನು ಇಕನಾಮಿಕ್ಸ್ ಓದುತ್ತಿರುವೆ. ನಾನು ಸಾಹಿತ್ಯ ಓದುತ್ತಿದ್ದೇನೆ. ನಮ್ಮ ಮೇಷ್ಟರ ಬಗ್ಗೆ ಮಾತಾಡುವುದಕ್ಕೆ ನಮಗೇನೂ ಇಲ್ಲ. ನನ್ನ ಊರಿನ ಬಗ್ಗೆ ನಿನಗೆ ಗೊತ್ತಿಲ್ಲ. ನಿನ್ನ ಮನೆಯ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮಿಬ್ಬರನ್ನು ಮಾತಾಡಿಸುವುದು ಕವಿತೆಯೇ ಅಲ್ಲವೇ? ಅದು ಬಿಟ್ಟರೆ ಮತ್ತೇನಿದೆ ಹೇಳು..’
ನೀನು ಕೃಷ್ಣನ ಕತೆ ಕೇಳಿದ್ದೀಯಾ?
`ಹೌದು…’
`ಕಂಸನ ತಂಗಿ ದೇವಕಿ. ಅವಳ ಗಂಡ ವಸುದೇವ. ಅವರಿಗೆ ಹುಟ್ಟಿದ ಮಕ್ಕಳು ತನ್ನನ್ನು ಕೊಲ್ಲುತ್ತಾರೆಂದು ಕಂಸನಿಗೆ ಭಯ. ಅದಕ್ಕೆ ಅವನು ಅವರನ್ನು ಬಂಧನದಲ್ಲಿಡುತ್ತಾನೆ. ಎಂಟನೆಯ ಗರ್ಭದಲ್ಲಿ ಕೃಷ್ಣ ಹುಟ್ಟುತ್ತಾನೆ. ಅವನು ಗೋಕುಲದಲ್ಲಿ ಬೆಳೆಯುತ್ತಾನೆ..’ ಇದರಲ್ಲಿ ಕವಿತೆಯೆಲ್ಲಿದೆ. ಇದು ಬದುಕಲ್ಲವೇ? ನಮ್ಮದಲ್ಲದೇ ಇರುವ ಈ ಕತೆಯನ್ನು ನಾವು ಯಾಕೆ ಆಸಕ್ತಿಯಿಂದ ಕೇಳುತ್ತೇವೆ ಹೇಳು. ಬದುಕಿನಲ್ಲಿ ಕವಿತೆ ಇರುವುದಿಲ್ಲ ಎಲ್. ಕವಿತೆಯೊಳಗೆ ಬದುಕು ಇರದಿದ್ದರೆ ಅದು ಕವಿತೆ ಆಗುವುದಿಲ್ಲ. ಮೊದಲು ಬದುಕಬೇಕು. ಆಮೇಲೆ ಪದ್ಯ,,,’
`ಮಧುರೆಯಲ್ಲಿ ಹುಟ್ಟಿದ ಕವಿತೆ ಗೋಕುಲದಲ್ಲಿ ಬೆಳೆಯಿತು’ ಥಟ್ಟನೆ ಹೇಳಿದೆ. ಅವಳು ಕಣ್ಣು ಕಿರಿದುಗೊಳಿಸಿ ನನ್ನನ್ನೇ ನೋಡಿದಳು.
`ತಾನು ಹುಟ್ಟಿದ ಜಾಗದಲ್ಲಿ ಕವಿತೆ ಬೆಳೆಯುವುದಿಲ್ಲ. ಬದುಕೂ ಬೆಳೆಯುವುದಿಲ್ಲ. ಅದು ಸ್ಥಳಾಂತರಗೊಳ್ಳಬೇಕು. ನನ್ನ ಕವಿತೆಯನ್ನು ನಾನು ನಿನ್ನ ಕೈಗೆ ಕೊಟ್ಟು ಬದುಕಿಸಲು ನೋಡುತ್ತಿದ್ದೇನೆ’.
ಕಾರು ನಿಲ್ಲಿಸು ಅಂದಳು. ಸುಳ್ಯ ದಾಟಿ ನಾವು ಸಂಪಾಜೆಯ ಕಡೆ ಹೊರಟಾಗಿತ್ತು. ಎರಡೂ ಬದಿಯಲ್ಲಿ ದಟ್ಟ ಕಾಡು. ಒಂದೆರಡು ಮಳೆ ಬಿದ್ದಿದ್ದರಿಂದ ಹಸಿರು ಹುಟ್ಟುತ್ತಿತ್ತು. ರಸ್ತೆ ಸ್ವಚ್ಛವಾಗಿತ್ತು. ನಾನು ಸ್ಟಿಯರಿಂಗನ್ನು ಎಡಕ್ಕೆ ತಿರುಗಿಸಿ, ಕಾರನ್ನು ರಸ್ತೆಯ ಪಕ್ಕಕ್ಕೆ ಹಾಕಿದೆ. ಅವಳು ಸೀಟು ಮುಂದೆ ಮಾಡು ಅಂದಳು. ನಿಧಾನವಾಗಿ ಮುಂದೆ ಮಾಡಿದೆ. ಕಾಲೆಳೆದುಕೊಂಡು ನಾನು ಕುಳಿತಲ್ಲಿಗೆ ಚಾಚಿಕೊಂಡಳು. ನನ್ನ ಕತ್ತಿನ ಹಿಂಭಾಗಕ್ಕೆ ತೋಳು ಹಾಕಿ ನನ್ನನ್ನು ಅವಳತ್ತ ಬಲವಾಗಿ ಸೆಳೆದುಕೊಂಡಳು. ನನ್ನ ತುಟಿಗಳನ್ನು ತನ್ನ ತುಟಿಯಿಂದ ಒಳಗೆಳೆದುಕೊಂಡು ಸುದೀರ್ಘವಾಗಿ ಚುಂಬಿಸಿದಳು.

‍ಲೇಖಕರು avadhi

7 June, 2019

3 Comments

  1. Mallikarjuna Hosapalya

    ಕುತೂಹಲಕಾರಿ ಭಾಗವನ್ನೇ ಆಯ್ದು ಹಾಕಿದ್ದೀರಿ. ಮುಂದೇನಾಯಿತು ಎಂದು ತಿಳಿಯಲು ಈಗ ನಾವು ಪುಸ್ತಕ ಓದದೆ ಬೇರೆ ದಾರಿಯೇ ಇಲ್ಲ.

  2. ashfaq peerzade

    Superb…ಇದು ಜೋಗಿಯ ಜಾದು. Magic of jogi..

  3. ಅನಂತರಾಮು ಡಿ ಹೆಚ್.

    ನಾವೆಲ್ಲಾ ಕತೆ ಕವಿತೆ ಕಾದಂಬರಿ ನಾಟಕ ರಗಳೆ ಇತ್ಯಾದಿ ಯಾವುದಾದರೊಂದಿಗೆ ಏಗುತ್ತಿರುವ Lಗಳೇ.ನಾವು ನೀವಾಗಲಾರೆವು, ನೀವು ನಾವಾಗುವುದೇ ನಿಮ್ಮ ಹಿರಿಮೆ ,ನಮ್ಮ ಒಲುಮೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading