ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ನನ್ನ ದಕ್ಷಿಣ ಕನ್ನಡ …


-ಜೋಗಿ
ಹಸಿರು ಹಬ್ಬಿದ ದಕ್ಷಿಣ ಕನ್ನಡ.
ಕೊಂಚ ದಿಗಿಲಿನಿಂದಲೇ ಹೊರಟಿದ್ದೆ. ದಾರಿ ಸರಿಯಾಗಿಲ್ಲ ಎಂದು ಗೆಳೆಯ ಎಚ್ಚರಿಸಿದ್ದ. ಜೊತೆಗೇ ಭೋರ್ಗರೆವ ಮಳೆ. ಜಾರು ಹಾದಿ. ಕಾರು ಮೈಗೆಲ್ಲ ಗಾಯ ಮಾಡಿಕೊಂಡು ಹೇಗೋ ಹೇಗೋ ಸಾಗುತ್ತಿತ್ತು. ನಾವು ನೆಲದ ಮೇಲೆ ಕಾಲಿಡುವಂತಿರಲಿಲ್ಲ. ನಿರಂತರವಾಗಿ ನೀರು ಹರಿದು ನೆಲವೆಲ್ಲ ಪಾಚಿ ಕಟ್ಟಿತ್ತು.

ಮನಸ್ಸಿಗೂ ಪಾಚಿ ಕಟ್ಟಿದೆ ಎಂದು ವಾರ್ತಾಭಾರತಿ’ಯ ಮಿತ್ರನೊಬ್ಬ ಕಟಕಿಯಾಡಿದ್ದ. ಅವನ ಮಾತು ಪೂರ್ತಿ ಸತ್ಯ ಎಂದು ನಂಬುವಂತಿರಲಿಲ್ಲ. ಸಣ್ಣ ಸಂಗತಿಗಳಿಗೂ ಬೇರೆ ಬಣ್ಣ ಕೊಡುವ ಕಲೆ ಪತ್ರಿಕೆಗಳಲ್ಲಿ ಇರುವ ಅನೇಕರಿಗೆ ಸಿದ್ಧಿಸಿರುತ್ತದೆ. ನಾಲ್ಕು ಮಂದಿ ವಿಚಾರವಾದಿಗಳೂ ಪತ್ರಕರ್ತರೂ ಒಂದೆಡೆ ಸೇರಿದರೆ, ಒಂದು ಹೊಸ ವಿಚಾರವಾದ ಸೃಷ್ಟಿಯಾಗುತ್ತದೆ.
ಉದಾರೀಕರಣ, ಜಾಗತೀಕರಣ, ತಾತ್ವಿಕತೆ, ಜಾತ್ಯತೀತ ವ್ಯವಸ್ಥೆಯ ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುವುದು ಅಲ್ಲಿಯೇ. ಪ್ರತಿಯೊಂದು ಘಟನೆಯನ್ನೂ ತಿರುಚಿ, ಅದಕ್ಕೆ ಜಾತಿಯ ವರ್ಗದ ಮತದ ಬಣ್ಣ ಕೊಟ್ಟು ದಕ್ಷಿಣ ಕನ್ನಡ ಕುಲಗೆಟ್ಟುಹೋಗಿದೆ ಎಂದು ಉದಾಹರಣೆ ಸಮೇತ ವಿವರಿಸುವ ಗೆಳೆಯರನ್ನೂ ನಾನು ನೋಡಿದ್ದೆ.
ಹೊಟೆಲಿನಲ್ಲಿ ಕುಡಿದು ಕುಣಿಯುತ್ತಿದ್ದವರನ್ನು ಅಟ್ಟಾಡಿಸಿಕೊಂಡು ಹೊರಗೆ ಹಾಕಿದ ಸಂದರ್ಭದಲ್ಲಿ ರಾಮಸೇನೆಯ ವರ್ತನೆಯನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಖಂಡಿಸಿದ್ದರು. ದಕ್ಷಿಣಕನ್ನಡ ಮೂಲಭೂತವಾದಕ್ಕೆ ಬಲಿಯಾಗುತ್ತಿದೆ ಎಂದು ಬಹಳಷ್ಟು ಮಂದಿ ವಿಷಾದಿಸಿದ್ದರು. ಅದು ಒಂದು ಘಟನೆ ಮಾತ್ರ. ಅಂಥ ಘಟನೆ ಎಲ್ಲಾ ಕಡೆಯೂ ನಡೆಯುತ್ತಿರುತ್ತದೆ. ಅದನ್ನೇ ಒಂದು ಜಿಲ್ಲೆಯ ಮನಸ್ಥಿತಿ ಎಂದು ಕರೆಯುವುದು ಸರಿಯಾ ಎಂಬುದು ಹಲವರ ಪ್ರಶ್ನೆ.
ಪತ್ರಿಕೆಯ ವರದಿಗಳನ್ನು ನಾನು ನಂಬಬೇಕಾಗಿರಲಿಲ್ಲ. ದಕ್ಷಿಣ ಕನ್ನಡ ನನ್ನ ಊರು. ಅದರ ತುದಿಯಿಂದ ತುದಿಗೆ ನಾನು ಅಡ್ಡಾಡಿದವನೇ. ಒಂದಲ್ಲ ಒಂದು ಘಾಟಿ ರಸ್ತೆ ಏರದ ಹೊರತು ದಕ್ಷಿಣದ ಕನ್ನಡದ ಗಡಿಯಿಂದ ಪಾರಾಗುವುದು ಸಾಧ್ಯವೇ ಇಲ್ಲ.
ಹಾಗಂತಲೇ ಹೊರಗಿನಿಂದ ಬಂದವರನ್ನು ಅವರು ಘಟ್ಟದ ಮೇಲಿನವರು, ಘಟ್ಟದವರು ಅನ್ನುತ್ತಾರೆ. ಘಟ್ಟದ ಮೇಲಿನವರ ಬಗ್ಗೆ ದಕ್ಷಿಣ ಕನ್ನಡಿಗರಿಗೆ ಗುಮಾನಿ, ದಕ್ಷಿಣ ಕನ್ನಡದವರ ಮೇಲೆ ಉಳಿದವರಿಗೆ ಸಂಶಯ. ಎಲ್ಲಿಗೆ ಕಾಲಿಟ್ಟರೂ ಕೆಲವೇ ವರ್ಷಗಳಲ್ಲಿ ನೆಲೆಯೂರುತ್ತಾರೆ. ಸಣ್ಣ ವ್ಯಾಪಾರ ಮಾಡುತ್ತಿದ್ದವರು ಶ್ರೀಮಂತರಾಗುತ್ತಾರೆ ಎಂಬುದು ಅವರ ಅಸಹನೆಗೆ ಕಾರಣ. ಅದಕ್ಯಾಕೆ ಅಸಹನೆ, ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎನ್ನುವುದು ದಕ್ಷಿಣ ಕನ್ನಡಿಗರ ಸಮರ್ಥನೆ.
ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡವನ್ನು ಆವರಿಸಿದ್ದು ಅಡಕೆ ಬೆಳೆ. ಬತ್ತ ಬೆಳೆಯುತ್ತಿದ್ದ ಗದ್ದೆಗಳನ್ನೆಲ್ಲ ಕಡಿದು, ಅಡಕೆ ಸಸಿ ನೆಟ್ಟು ತೋಟ ಮಾಡುವುದು ಆ ಕಾಲದಲ್ಲಿ ಲಾಭದಾಯಕ ಉದ್ಯಮ. ಅಡಕೆಯ ಬೆಲೆ ಕುಸಿಯುತ್ತಿದ್ದ ಹಾಗೆ ಕೋಕೋ ಬೆಳೆಯುವುದಕ್ಕೆ ಶುರುಮಾಡಿದ ಮಂದಿ, ನಂತರದ ದಿನಗಳಲ್ಲಿ ವೆನಿಲ್ಲಾದ ಮೊರೆ ಹೋದರು. ಸದ್ಯಕ್ಕೆ ಅವೆಲ್ಲವನ್ನೂ ರಬ್ಬರ್ ಮೀರಿಸುತ್ತಿದೆ. ರಬ್ಬರ್ ಬೆಲೆ ಆಕಾಶಕ್ಕೇರಿದೆ.
ಒಂದು ಕೇಜಿ ರಬ್ಬರ್ ಬೆಲೆ ಇನ್ನೂರು ರುಪಾಯಿ. ನಾಲ್ಕೈದೆಕರೆ ಜಾಗದಲ್ಲಿ ರಬ್ಬರ್ ಬೆಳೆದರೆ ವರ್ಷಕ್ಕೆ ಹನ್ನೆರಡು ಲಕ್ಷ ದುಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ವ್ಯವಸಾಯ ಸಾಗುತ್ತಿದೆ.

ಇವೆಲ್ಲದರ ನಡುವೆ ಬೆಂಗಳೂರಿಗೆ, ಮುಂಬೈಗೆ, ದುಬೈಗೆ ವಲಸೆ ಹೋಗುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಯುವಕರು ಸಾಫ್ಟ್‌ವೇರ್ ಮಾಯೆಗೆ ಸಿಲುಕಿದ್ದಾರೆ.
ಪುತ್ತೂರಿನಂಥ ಸಣ್ಣ ತಾಲೂಕು ಕೇಂದ್ರದಲ್ಲೂ ನಲವತ್ತೋ ಐವತ್ತೋ ಪೇಯಿಂಗ್ ಗೆಸ್ಟ್ ಕೇಂದ್ರಗಳು ತಲೆಯೆತ್ತಿವೆ. ಸಣ್ಣ ಹಳ್ಳಿಯಲ್ಲಿರುವ ಪುಟ್ಟ ಮಗು ಕೂಡ ಇಂಗ್ಲಿಷ್ ಕಲಿಯುತ್ತಿದೆ. ಅದರ ಜತೆಗೇ ನೃತ್ಯ, ಟ್ಯೂಷನ್ನು, ಸ್ವಿಮಿಂಗ್, ಟೇಬಲ್ ಟೆನ್ನಿಸ್ಸು ಕಲಿಸುವ ಕೇಂದ್ರಗಳೂ ಹುಟ್ಟಿಕೊಂಡಿವೆ. ಮಂಗಳೂರು ಮುಂಬೈಯನ್ನು, ಉಳಿದ ತಾಲ್ಲೂಕು ಕೇಂದ್ರಗಳು ಮಂಗಳೂರನ್ನು ಅನುಕರಿಸುವಂತೆ ಕಾಣಿಸುತ್ತಿವೆ.
ಹಾಗಂತ ಸಣ್ಣ ಪುಟ್ಟ ಹಳ್ಳಿಗಳ ಆರ್ಥಿಕತೆಯಲ್ಲಿ ಅಂಥ ಬದಲಾವಣೆ ಏನೂ ಆದಂತಿಲ್ಲ. ಇಳಂತಿಲ, ಕುಪ್ಪೆಟ್ಟಿ, ಕರಾಯ ಮುಂತಾದ ಸಣ್ಣ ಹಳ್ಳಿಗಳಲ್ಲಿ ಅವವೇ ಪುಟ್ಟ ಅಂಗಡಿಗಳು ಇಪ್ಪತ್ತು ವರ್ಷಗಳ ಹಿಂದೆ ಹೇಗಿದ್ದವೋ ಹಾಗೇ ಇವೆ. ಆಧುನಿಕ ಶಿಕ್ಷಣ ಮತ್ತು ಸೌಲಭ್ಯಗಳು ಹಳ್ಳಿಯಲ್ಲಿರುವ ಹುಡುಗರನ್ನು ಪಟ್ಟಣದತ್ತ ಓಡಿಸುತ್ತಿವೆಯೇ ಹೊರತು, ಹಳ್ಳಿಗಳಲ್ಲೇ ಉಳಿಯುವುದಕ್ಕೆ ನೆರವಾಗುತ್ತಿಲ್ಲ.
ಅಕ್ಷರಸ್ಥರ ಸಂಖ್ಯೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಹೆಚ್ಚು. ಆದರೆ ಪುಸ್ತಕಗಳ ಮಾರಾಟದಲ್ಲಿ ಅದು ಇನ್ನೂ ಹಿಂದಿದೆ. ಮಂಗಳೂರಿನಲ್ಲಿ ಅಶೋಕವರ್ಧನ ಅನಾದಿಕಾಲದಿಂದ ನಡೆಸಿಕೊಂಡು ಬರುತ್ತಿರುವ ಅತ್ರಿ ಬುಕ್ ಹೌಸ್ ಬಿಟ್ಟರೆ, ಉಡುಪಿಯಲ್ಲಿರುವ ಒಂದಷ್ಟು ಪುಸ್ತಕದ ಅಂಗಡಿಗಳನ್ನು ಬಿಟ್ಟರೆ, ಉಳಿದ ತಾಲೂಕುಗಳಲ್ಲಿ ಕನ್ನಡ ಪುಸ್ತಕ ಬೇಕೆಂದರೂ ಸಿಗುವುದಿಲ್ಲ.
ಸರ್ಕಾರಿ ಗ್ರಂಥಾಲಯಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ನೂರಾರು ಪುಸ್ತಕಗಳು ಬಂದು ಬೀಳುತ್ತವೆ. ಅವನ್ನು ಜೋಡಿಸಿಡುವುದಕ್ಕೆ ಅಲ್ಲಿ ಜಾಗವಿಲ್ಲ. ಹೀಗಾಗಿ ಅನೇಕ ಗ್ರಂಥಾಲಯಗಳು ಪುಸ್ತಕಗಳ ಕಟ್ಟು ಬಿಚ್ಚಿಲ್ಲ. ಹೊಸ ಪುಸ್ತಕಗಳ ಪಟ್ಟಿ ಇಟ್ಟಿದ್ದೇವೆ. ಯಾರಾದರೂ ಕೇಳಿದರೆ ಕೊಡುತ್ತೇವೆ. ಆದರೆ ಕೇಳುವವರೇ ಇಲ್ಲ ಎನ್ನುವುದು ಲೈಬ್ರರಿಯನ್‌ಗಳ ಉತ್ತರ.
ರಾಜಕಾರಣಿಗಳ ಬಗ್ಗೆ ದಕ್ಷಿಣ ಕನ್ನಡದ ಮಂದಿಗೆ ಕೆಟ್ಟ ಸಿಟ್ಟಿದೆ. ಆ ಸಿಟ್ಟು ಚುನಾವಣೆಯ ಹೊತ್ತಿಗೆ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಅರ್ಹ ಅಭ್ಯರ್ಥಿಗಳೇ ಆರಿಸಿಬರುತ್ತಾರೆ ಎನ್ನುವುದು ಕಷ್ಟ. ಲಂಚ ಕೊಡುವುದರಲ್ಲಿ ಇಲ್ಲಿನ ಮಂದಿಗೆ ವಿಪರೀತ ಹಿಂಜರಿಕೆ. ಹೀಗಾಗಿ ಇಲ್ಲಿಗೆ ಟ್ರಾನ್ಸ್‌ಫರ್ ಆಗಿ ಬರುವ ಪೊಲೀಸ್ ಅಧಿಕಾರಿಗಳಿಗೆ, ಬೇರೆ ವಿಭಾಗದ ಮಂದಿಗೆ ತೀವ್ರ ನಿರಾಸೆ.
ಅನೇಕ ಸಲ ಬಂದಾಗ ನಾನು ಗಮನಿಸಿರಲಿಲ್ಲ. ಇವತ್ತು ಸಣ್ಣ ಊರಲ್ಲೂ ತರಕಾರಿ ಅಂಗಡಿಗಳು ತಲೆಯೆತ್ತಿವೆ. ಬೀಡಿ ಬ್ರಾಂಚುಗಳಿವೆ. ಬೀಡಿ ಕಟ್ಟುವವರ ಬದುಕು ಸಿಕ್ಕಾಪಟ್ಟೆ ಸುಧಾರಿಸಿದೆ. ಅವರು ಕೂಡ ಮಾಡರ್ನ್ ಆಗಿದ್ದಾರೆ. ಚೆಂದ ಚೆಂದದ ಬಟ್ಟೆ ಹಾಕಿಕೊಂಡು, ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ಸಂಜೆ ಹೊತ್ತಿಗೆ ಬೀಡಿ ಬ್ರಾಂಚಿಗೆ ಹೋಗುತ್ತಾರೆ. ಹುಡುಗರಿಗೆ ಮೋಟರ್ ಬೈಕ್ ಕ್ರೇಜು. ಹೊಸ ಹೊಸ ಶೈಲಿಯ ದುಬಾರಿ ಬೈಕುಗಳು ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಆದರೆ ಉದ್ಯೋಗಸ್ಥರಿಗೂ ಸಂಸಾರಸ್ಥರಿಗೂ ಅತ್ಯಂತ ಹೆಚ್ಚು ಮೈಲೇಜು ಕೊಡುವ ಹಳೆಯ ಶೈಲಿಯ ಬೈಕುಗಳಲ್ಲೇ ಆಸಕ್ತಿ.
ನೂರಕ್ಕೆ ತೊಂಬತ್ತು ಮನೆಗಳ ಮೇಲೆ ಡಿಟಿಎಚ್ ಕರುಣಿಸಿದ ಪುಟ್ಟ ಕೊಡೆ. ಇಂಗ್ಲಿಷ್, ಹಿಂದಿ ಚಾನಲ್ಲುಗಳೆಂದರೆ ಅಲರ್ಜಿ. ಅತ್ಯಂತ ಕಡಿಮೆ ಸಿನಿಮಾ ನೋಡುವ, ಅತ್ಯಂತ ಹೆಚ್ಚು ಟೀವಿ ನೋಡುವ ಜಿಲ್ಲೆ ಇದು. ರಾಜಕೀಯ, ಕ್ರಿಕೆಟ್ಟು ಮತ್ತು ಹಾದರ ಮಾತಿನಲ್ಲಿ ಮರುಕಳಿಸುತ್ತಲೇ ಇರುತ್ತದೆ.
ಮೂಢನಂಬಿಕೆಗಳಿಗೆ ಇಲ್ಲಿ ಕೊರತೆಯಿಲ್ಲ. ವಾಸ್ತು, ತಾಯಿತ, ಹರಕೆ, ಪೂಜೆ, ಪುನಸ್ಕಾರ ಮತ್ತು ಜಾತ್ರೆಗಳಲ್ಲಿ ತನ್ನನ್ನು ಕಳೆದುಕೊಳ್ಳುವ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಪಾಳುಬಿದ್ದ ದೇವಸ್ಥಾನಗಳೆಲ್ಲ ಜೀರ್ಣೋದ್ಧಾರಗೊಂಡು ನಳನಳಿಸುತ್ತಿವೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಭೂತದ ಕೋಲ, ಮಂತ್ರವಾದ ಮತ್ತು ಇತರ ಆಚರಣೆಗಳಲ್ಲಿ ಬಣ್ಣಬಣ್ಣದ ಬಟ್ಟೆ ಹಾಕಿದ ಮಂದಿ ಸಕ್ರಿಯರು.
ಆಸ್ತಿಯ ಬೆಲೆ ಏರುತ್ತಿದೆ. ಇಲ್ಲಿ ಇವತ್ತು ಹತ್ತು ಲಕ್ಷ ಕೊಟ್ಟು ಪಾಳು ಬಿದ್ದ ಭೂಮಿ ಕೊಂಡುಕೊಂಡು, ರಬ್ಬರ್ ಬೆಳೆ ನೆಟ್ಟು, ಮುಂದಿನ ವರ್ಷ ಮಾರಿದರೆ ಇಪ್ಪತ್ತು ಲಕ್ಷ ಗ್ಯಾರಂಟಿ ಎನ್ನುವುದು ಇತ್ತೀಚಿನ ಜೂಜು. ಜಾರುತ್ತಿರುವ ರಸ್ತೆಯಲ್ಲಿ, ಹಸಿರು ರಾಜಕಾರಣಿಗಳ ಭರವಸೆಯ ಮಾತಿನ ಹಾಗೆ ಚೆಲ್ಲಿರುವ ಕಾಡು ಹಾದಿಗಳಲ್ಲಿ ಸಾಗುತ್ತಿದ್ದರೆ ನಿಜಕ್ಕೂ ಇದೊಂದು ಸ್ವರ್ಗ ಎನ್ನಿಸುವಂತಿದೆ. ಹಾಗಂತ ಗಟ್ಟಿಯಾಗಿ ಹೇಳಬಲ್ಲಷ್ಟು ನಂಬಿಕೆ ನನ್ನಲ್ಲಿಲ್ಲ.
ವರ್ಷ ಕಳೆಯುತ್ತಿದ್ದ ಹಾಗೆ ನಮ್ಮೂರು ಕೂಡ ನಮ್ಮ ನೆನಪಿನಿಂದ ಮರೆಯಾಗುತ್ತಾ ಬರುತ್ತದೆ. ನಮ್ಮ ನೆನಪಿನಲ್ಲಿರುವ ಊರು, ಆ ರೂಪದಲ್ಲೇ ಉಳಿದಿರುವುದಿಲ್ಲ. ಅದು ಹಾಗೇ ಇರಬೇಕು ಎಂದು ಮನಸ್ಸು ಹಂಬಲಿಸುತ್ತದೆ. ಹೋಗುವೆನು ನಾ, ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ, ಮಲೆಯ ನಾಡಿಗೆ, ಮಳೆಯ ಬೀಡಿಗೆ ಎಂದು ಹಾಡಿದ ಕುವೆಂಪು ಕೊನೆಯ ದಿನದ ತನಕವೂ ಮೈಸೂರು ಬಿಟ್ಟು ಕದಲಲಿಲ್ಲ. ಬಹುಶಃ ಮರಳಿದ್ದರೆ ಅವರಿಗೆ ನಿರಾಸೆಯಾಗುವಷ್ಟು ಅವರ ನಲುಮೆಯ ಗೂಡು ಬದಲಾಗಿರುತ್ತಿತ್ತೋ ಏನೋ?
ರಸ್ತೆಯ ಎರಡೂ ಬದಿಯಲ್ಲಿ ಹರಿಯುತ್ತಿರುವ ನೀರು, ಚಪ್ಪರಗಳಲ್ಲಿ ಈ ಊರಿನವರ ಆಸೆ, ಭಯ ಮತ್ತು ನಿರೀಕ್ಷೆಗಳ ಹಾಗೆ ಜೋತಾಡುವ ಸೌತೆ, ತೊಂಡೆ, ಕುಂಬಳಕಾಯಿ ಮಿಡಿಗಳು. ಕಿವಿಗೆ ಆಪ್ತವೆನಿಸುವ ತುಳು ಭಾಷೆ. ಅಲ್ಲಲ್ಲೇ ಹುಟ್ಟಿಕೊಳ್ಳುವ ಸಣ್ಣ ತಮಾಷೆ. ಸುದೀಪ್ ಹೊಸ ಸಿನಿಮಾ ಯಾವುದು ಎಂಬ ಕುತೂಹಲ.
ಮಮ್ಮೂಟಿ ಕನ್ನಡದಲ್ಲಿ ಸಿನಿಮಾ ಮಾಡ್ತಿದ್ದಾನಂತೆ ಎಂಬ ಉತ್ಸಾಹ, ಮನೆಯೊಂದು ಮೂರು ಬಾಗಿಲು ಸೀರಿಯಲ್ಲಿನಲ್ಲಿ ಕಾಣಿಸಿಕೊಂಡಿರುವ ಹೊಸ ವಯ್ಯಾರಿ ಮುಖ್ಯಮಂತ್ರಿಯಾಗುತ್ತಾಳಾ ಎಂಬ ಪ್ರಶ್ನೆಯೊಂದಿಗೆ ಹಗಲು ರಾತ್ರಿಗಳು ಸರಿದುಹೋಗುತ್ತವೆ. ಗುಳಿಬಿದ್ದ ರಸ್ತೆಗೆ ಮಳೆಯನ್ನೂ ಮಂತ್ರಿಗಳ ನಿರ್ಲಜ್ಜೆ ಮತ್ತು ನಿರ್ಲಕ್ಷ್ಯವನ್ನೂ ಗುರಿಮಾಡುತ್ತಾ, ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಮುಂತಾದ ತೀರ್ಥಕ್ಷೇತ್ರಗಳಿಗೆ ಹೋಗುವ ಮಂದಿ ಗೊಣಗಾಡುತ್ತಾರೆ.
ಕಾಲ ಮಳೆ, ಗಾಳಿ ಮತ್ತು ಕಡಲ ಮೊರೆತದೊಂದಿಗೆ ಸವೆಯುತ್ತಾ ಹೋಗುತ್ತದೆ.

‍ಲೇಖಕರು avadhi

6 September, 2010

8 Comments

  1. usha

    ನನಗೂ ಊರಿಗೆ ಹೋದಾಗಲೆಲ್ಲ ನನ್ನೂರು ಎಲ್ಲೋ ಕಳೆದು ಹೋಗುತ್ತಿದೆ ಎನ್ನುವ ನೋವು ಕಾಡುತ್ತಿದೆ. ನಿನ್ನೆಯಷ್ಟೇ ಊರಿನಿಂದ ಹಿಂತಿರುಗಿಬಂದಿದ್ದೆ. ಇವತ್ತು ನಿಮ್ಮ ಲೇಖನ ಓದಿದಾಗ ನನ್ನನ್ನು ಕಾಡಿದ ಭಾವನೆಗಳೇ ನಿಮ್ಮನ್ನೂ ಕಾಡಿದ್ದು ಓದಿ ಮನಸಿಗೆ ಕಸವಿಸಿಯೇ ಆಯಿತು. ನಾನು ಉಡುಪಿಯವಳು. ಮೊದಲು ಕೃಷ್ಣ ಮಠಕ್ಕೆ ಆರಾಮವಾಗಿ ಹೋಗಿ ಬರಬಹುದಿತ್ತು ಈಗ ಅಲ್ಲೂ ಏನೇನೋ ಕಾನೂನುಗಳು. ನಡೆಯಲಾಗದವರು ದೇವಸ್ಥಾನಕ್ಕೆ ಹೋಗಲಿಕ್ಕೆ ಇಲ್ಲ. ದೇವಸ್ಥಾನಕ್ಕೆ ಹೋಗದೇ ಹಿಂದೆ ಬಂದಾಗ ನಮ್ಮೂರು ನಮ್ಮದಾಗಿ ಉಳಿದಿಲ್ಲ ಎಂದನಿಸಿದ್ದರಲ್ಲಿ ವಿಶೇಷತೆಯಿಲ್ಲ. ಇದು ಒಂದು ಉದಾಹರಣೆ. ಇಂಥಹ ಕೆಲವು ಸಂಗತಿಗಳಿವೆ. ನಮ್ಮೂರು ನಮ್ಮದಾಗಿ ಉಳಿದಿಲ್ಲ.

  2. Ravi

    ಕೈ ಬೀಸಿ ಕರೆಯುವ ಊರು. ಕುವೆಂಪು ಥರ ಹೋಗುವೆನು ನಾ ಎಂದೆನಿಸುತದೆ. ಕರಾಯ, ಕುಪ್ಪೆಟ್ಟಿ ಹಳ್ಳಿಗಳ ಅಂಗಡಿಗಳು ಇನ್ನೂ ಇಪ್ಪತ್ತು ವರ್ಷ ಹಿಂದಿನ ಥರ ಇವೆ. ಆದ್ರೆ ಉಪ್ಪಿನಂಗಡಿ ಪಕ್ಕದಲ್ಲೇ ಇರುವುದರಿಂದ ಹಳ್ಳಿಗರು ದಿನಂಪ್ರತಿ ಪೇಟೆಗೆ ಬರುತ್ತಾರೆ. ಚಳ್ಳೆ ಪಿಳ್ಳೆಗಳೂ ಬಸ್ಸು ಹತ್ತಿ ಉಪ್ಪಿನಂಗಡಿಗೆ (ಇಂದ್ರ ಪ್ರಸ್ಥ, ಆಂಗ್ಲ ಮಾಧ್ಯಮ) ಬರುತ್ತಾರೆ. ಇದೆ ಹಳ್ಳಿಗಳಲ್ಲಿ ಐದು ನಿಮಿಷಕ್ಕೊಂದರಂತೆ ಖಾಸಗಿ ಬಸ್ಸುಗಳಿದ್ದರೂ, ಅವು ಬೆಳಗ್ಗೆ ಸಂಜೆ ತುಂಬಿ ತುಳುಕುತ್ತವೆ. ಹಾಂ, ಒಂದು ಮಾತು, ಕರಾಯ, ಕುಪ್ಪೆಟ್ಟಿಯ ರಸ್ತೆಯೂ ಅದೇ ಹತ್ತಿಪ್ಪತು ವರ್ಷ ಹಳೆಯದಿರಬಹುದು. ಹೊಂಡ ತುಂಬಿದ ರಸ್ತೆಗಳಿಂದ ಪ್ರಯಾಣಿಕರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ!

  3. ಜಿ೦ಕೆ ಸುಬ್ಬಣ್ಣ, ಪುತ್ತೂರು

    ಹೇಗೆಲ್ಲಾ ಪೆನ್ ಸ್ಟ್ರೋಕ್, ಅಲ್ಲಲ್ಲಾ ಕೀಲಿಮಣೆ ಬಡಿದಾಟ, ಆಡಿಸಿದರೂ ಬಹು ಸು೦ದರವಾಗಿ ಚಿತ್ರ ಮೂಡಿಸುತ್ತಾನೆ ಈ ಜೋಗಿ. ಕಳೆದ ಒ೦ದು ವರ್ಷದಿ೦ದೀಚೆಗೆ ನಮ್ಮೂರಿನ ಕೆಲವು ಸಣ್ಣ ಪುಟ್ಟ ದುರದೃಷ್ಟಕರ ಆಗುಹೋಗುಗಳ ಬಗ್ಗೆ ನಮಗೆ ಅ೦ಗೈ ನೆಲ್ಲಿಕಾಯಿಯಷ್ಟು ನಿಚ್ಚಳವಾಗಿದ್ದರೂ,, ಪೇಪರ್, ಟಿವಿ, ಗಳಲ್ಲೆಲ್ಲಾ ಬಹು ಉದಾರವಾಗಿ ಹರಿದಾಡಿದ ಕಾಳಜಿ, ಆತ೦ಕ, ಉದ್ಗಾರ, ನಿರ್ಧಾರ,,, ಎಲ್ಲವುಗಳ ದೆಸೆಯಿ೦ದ, ಛೆ, ಪ್ಚೆ, , , ನಾವು ಇಷ್ಟು ಹು೦ಬರೇ, ಎ೦ಬ ದುಗುಡ ಆವರಿಸುತ್ತಲೇ, ಖ೦ಡಿತಾ ಅಲ್ಲ, ಎ೦ಬ ಗೆಲುವನ್ನು ಪ್ರಯತ್ನಪೂರ್ವಕ ತ೦ದುಕೊಳ್ಳುತ್ತಿದ್ದೆವು. ಇವತ್ತು ಕಾಲ೦ ಓದಿ, ನಮ್ಮತನದ ಬಗ್ಗೆ ಸ್ವಲ್ಪ ನಿರಾಳವಾಯಿತು. ಜೋಗಿ ಕೀಲಿಮಣೆಯೂ ನಮ್ಮ ದುಗುಡದ೦ತೆಯೇ ಏರಿಳಿದಿರುವುದನ್ನು ಗಮನಿಸಿದ್ದೇವೆ, ನಮ್ಮ ಅನಿಸಿಕೆಗೆ, ಆತ್ಮೀಯವಾಗಿ, ಮೂರ್ತರೂಪ ಕೊಟ್ಟಿದ್ದಾರೆ, ಜೋಗಿ. ಜೊತೆಗೆ ಕರಾವಳಿ ಒಳನಾಡಿನ ಹಳ್ಳಿಯ ಜೀವನ, ತುಡಿತ, ದುಗುಡ, ಇವುಗಳ ಸು೦ದರ ಇಣುಕುನೋಟವನ್ನೂ ಒದಗಿಸಿದ್ದಾರೆ. ಭೇಷ್ !!!

  4. Siddalingamurthy B G

    ನನ್ನ ಜೀವನದ ಮೂರು ವರ್ಷಗಳ ನೆನಪುಗಳನ್ನು ತಿರುವಕಿದಂತಾಯ್ತು. ಉತ್ತಮ ಲೇಖನಕ್ಕೆ ದನ್ಯವಾಧಗಳು.

  5. giridhara karkala

    ¨ÁåAQ£À°è ¸À©ìr ¸Á® ¥ÀqÉAiÀÄĪÀ ¥sÀ¯Á£ÀĨsÀ«UÀ½UÉ vÀgÀ¨ÉÃw ¤ÃqÀĪÁUÀ GzÀåªÀIJîvÉUÉ,
    PÀpt zÀÄrªÉÄUÉ zÀQët PÀ£ÀßqÀzÀ ªÀÄA¢AiÀÄ GzÁºÀgÀuÉ PÉÆqÀÄwÛzÉÝ. ¸ÉßûvÀgÉzÀÄgÀÄ Cw J¤ß¸ÀĪÀµÀÄÖ
    GzÀPÀ (GqÀĦ+zÀ.PÀ£ÀßqÀ)f¯ÉèAiÀÄ£ÀÄß PÉÆAqÁqÀÄwÛzÉÝ. DzÀgÉ zÀ.PÀ£ÀßqÀzÀ Fa£À JAlÄ-ºÀvÀÄÛ ªÀµÀðUÀ¼À «zÀåªÀiÁ£ÀUÀ¼À£ÀÄß PÀAqÁUÀ zÀ.PÀ zÀ C£À£ÀåvÉAiÉÄà ªÀiÁAiÀĪÁzÀAvÀ¤¸ÀÄvÀÛzÉ. ªÉÆzÀ¯É®è £À£ÀÆßjUÉ ¸ÀA¨sÀæªÀÄ
    ¢AzÀ¯Éà ºÉÆÃUÀÄwÛzÉÝ. DzÀgÉ FUÀ HjUÉ ºÉÆÃzÀgÉ «µÁzÀ PÁqÀÄvÀÛzÉ. ºÉÆgÀ ZɺÀgÉAiÀÄ eÉÆvÉUÉ
    £À£ÀÆßgÀÄ vÀ£Àß DvÀäªÀ£Éßà PÀ¼ÉzÀÄPÉÆAqÀÄ©nÖzÉAiÉÄÃ£ÉÆÃ C¤ß¸ÀÄwÛzÉ. eÉÆÃV CzÀ£Éßà C£ÀÄªÉÆÃ¢¹zÁÝgÉ.

  6. ಶಶಾಂಕ್

    ಉತ್ತಮವಾಗಿ ಮೂಡಿ ಬಂದಿದೆ ಲೇಖನ… ನಮ್ಮೂರು ಉಡುಪಿಯನ್ನು ನೆನಪಿಸಿದ್ದೀರಿ. ಧನ್ಯವಾದಗಳು…ಮುಂದಿನ ಬಾರಿ ಊರಿಗೆ ಹೋದಾಗ ಇದನ್ನು ನೆನಪಿಸಿಕೊಳ್ಳುತ್ತೇನೆ…

  7. ಶಶಾಂಕ್

    ಇಡೀ ದಿನ ಸುರಿಯುವ ಜಡಿ ಮಳೆಯಲ್ಲಿ, ಕೆಸರು ತುಂಬಿದ ಮಣ್ಣಿನ ರಸ್ತೆಯಲ್ಲಿ, ಅರೆ ಬರೆ ಒದ್ದೆಯಾಗಿ ಮನೆಗೆ ಹೋಗಿ ಒಲೆಯ ಮುಂದೆ ಕುಳಿತು ಅಮ್ಮ ಕೊಟ್ಟ ಕಾಫಿ ಕುಡಿಯುವ ಖುಷಿ ನಮ್ಮ ಕರಾವಳಿ, ಮಲೆನಾಡಿಗೆ ಮೀಸಲು. ಈ ಖುಷಿಯ ಅನುಭವ ಬೆಂಗಳೂರಿನಲ್ಲಿ ಸಿಗಲು ಹೇಗೆ ಸಾಧ್ಯ?

  8. ಸೂರ್ಯ

    ಚೆನ್ನಾಗಿದೆ…ಇದು ನಮ್ಮ ಊರ ಕಥೆಯಲ್ಲ. ಎಲ್ಲ ಊರಿನದ್ದೂ ಆಗಿದೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading