ಜೋಗಿ ಕಣ್ಣಲ್ಲಿ ’ಕಾಮರೂಪಿ’

ಕಾಮರೂಪಿ ಎಂಬ ನಮ್ಮೊಳಗಿನ ರೂಪಕ

ಜೋಗಿ 

ಸಾಹಿತಿ ಹೀಗೇ ಇರಬೇಕು ಮತ್ತು ಹೀಗೇ ಇರುತ್ತಾರೆ ಅಂತ ನಮಗೆಲ್ಲ ಒಂದು ಕಾಲಕ್ಕೆ ಭ್ರಮೆ. ಟಿ ಕೆ ರಾಮರಾವ್ ಚುಟುಕು ಮತ್ತು ಚುರುಕು ಮಾತಿನ ಮುಂಗೋಪಿ, ಚಿತ್ತಾಲರು ಅಪಾರ ಶಿಸ್ತಿನ ಗಂಭೀರ ಮಾತಿನ ವ್ಯಕ್ತಿ, ಅನಂತಮೂರ್ತಿ ಬೌದ್ಧಿಕತೆ ಮತ್ತು ಚೆಲ್ಲಾಟದ ಯುವಕ, ಆಲನಹಳ್ಳಿ ನಮ್ಮಂತೆ ಪೋಲಿಬಿದ್ದು ಹೋದ ಹುಡುಗ, ಲಂಕೇಶ್ ಎಂಥಾ ಪರಿಸ್ಥಿತಿಯನ್ನೂ ತನ್ನ ಪ್ರಖರ ಮಾತಿನಿಂದ ಗೆಲ್ಲಬಲ್ಲ ಚತುರ ಹಳ್ಳಿ ಹುಡುಗ, ಕೆ ಎಸ್ ನರಸಿಂಹಸ್ವಾಮಿ ಮಹಾನ್ ಪ್ರೇಮಿ – ಎಂದೆಲ್ಲ ನಾವು ಕಲ್ಪಿಸಿಕೊಂಡು ಅವರನ್ನೆಲ್ಲ ಓದುತ್ತಿದ್ದೆವು. ನಮ್ಮ ಹಳ್ಳಿಯಲ್ಲಿ ಅವರ ಫೋಟೋ ಕೂಡ ಸಿಗುತ್ತಿರಲಿಲ್ಲ. ಅವರನ್ನು ಯಾವತ್ತೂ ನೋಡಿರದೇ ಇದ್ದ ನಾವು ಅವರ ಬರಹಗಳ ಮೂಲಕವೇ ಅವರಿಗೊಂದು ವ್ಯಕ್ತಿತ್ವ ಕಟ್ಟಿಕೊಟ್ಟು, ಅದನ್ನೇ ನಿಜವೆಂದು ನಂಬುತ್ತಾ ಸುಖವಾಗಿದ್ದೆವು.

ಅವರು ಹಾಗಿಲ್ಲ ಮತ್ತು ಯಾರೂ ಹಾಗಿರುವುದಿಲ್ಲ ಅಂತ ಅರ್ಥವಾಗುವ ಮೊದಲೇ ಕನ್ನಡದ ಬಹುತೇಕ ಹಿರಿಯ ಲೇಖಕರ ಕತೆಕವಿತೆಕಾದಂಬರಿಗಳನ್ನೆಲ್ಲ ಓದಿ ಮುಗಿಸಿದ್ದರಿಂದ ಆದ ಲಾಭವೆಂದರೆ, ನಾವು ಅವೆಲ್ಲವನ್ನೂ ಪೂರ್ವಗ್ರಹವಿಲ್ಲದೇ ಓದುವುದಕ್ಕೆ ಸಾಧ್ಯವಾದದ್ದು. ಒಬ್ಬ ಲೇಖಕನ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಿ ಓದುವುದು ಎಷ್ಟು ಅಪಾಯಕಾರಿ ಎಂಬುದನ್ನು ಈಗ ನೆನೆದರೆ ಭಯವಾಗುತ್ತದೆ. ಯಾವುದೇ ಬರಹಗಾರನ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಹೋದಂತೆ ಅವನ ಬರಹ ತೆಳುವಾಗುತ್ತಾ ಹೋಗುತ್ತದೆ ಎಂಬುದು ನನ್ನ ಅನುಭವಕ್ಕಂತೂ ಬಂದಿದೆ.

ಹಾಗೆ ತಿಳಿಯದೇ ಓದಿದವರ ಪೈಕಿ ನೆನಪಾಗುವವರು ಇಬ್ಬರು. ಶೌರಿ ಮತ್ತು ಕಾಮರೂಪಿ. ಮತ್ತಿಬ್ಬರೆಂದರೆ ಬಾಗಲೋಡಿ ದೇವರಾಯ ಮತ್ತು ಎಂ. ವ್ಯಾಸ. ಇವರ ಅಜ್ಞಾತವಾಸವೇ ಅವರ ಕುರಿತು ಕುತೂಹಲ ಮತ್ತು ಅವರ ಕೃತಿಗಳ ಕುರಿತು ಪ್ರೀತಿ ಹುಟ್ಟಿಸಿತ್ತೇನೋ? ಒಂದು ಕೃತಿಯನ್ನು ಓದುತ್ತಾ ಒಬ್ಬ ಲೇಖಕನ ಚಿತ್ರವನ್ನು ಕಟ್ಟಿಕೊಳ್ಳಲು ನಾವು ಯತ್ನಿಸುತ್ತಾ ಹೋಗುತ್ತೇವೆ. ಅವರ ಪರಿಸರ, ಅವರ ಅನುಭವ, ಅವರ ಜೀವನ ಶೈಲಿ ನಮ್ಮದಾಗುತ್ತಾ ಹೋಗುತ್ತದೆ. ಶೌರಿ ಅವರ ಹಳದಿಮೀನು ಓದಿದಾಗಷ್ಟೇ ಅಲ್ಲ, ಇವತ್ತಿಗೂ ಅವರು ಯಾರೆಂದು ಗೊತ್ತಿಲ್ಲ. ಅದು ಎ ಕೆ ರಾಮಾನುಜನ್ ಅವರೇ ಇರಬೇಕು ಅಂತ ಅಂದುಕೊಂಡದ್ದು ಇನ್ನೂ ಹಾಗೆಯೇ ಇದೆ. ಹಿರಿಯರನ್ನು ಕೇಳಿದರೆ ಆ ಕುರಿತು ಮಾಹಿತಿ ಸಿಗಬಹುದಾದರೂ ಕೇಳುವುದಕ್ಕೆ ಮನಸ್ಸಿಲ್ಲ, ಬಾಗಲೋಡಿ ದೇವರಾಯರು ಕೂಡ ಅಷ್ಟೇ ನಿಗೂಢವಾಗಿದ್ದವರು. ಎಂ. ವ್ಯಾಸರಂತೂ ನಮ್ಮೂರಿನ ಪಕ್ಕದಲ್ಲೇ ಇದ್ದರೂ ಹೊಸದೊಂದು ಲೋಕ ಕಟ್ಟಿಕೊಂಡು ಬದುಕಿದವರು. ಅವರ ಕಲ್ಪಿತ ಜಗತ್ತಿನ ನದಿ, ರಸ್ತೆ, ದೇವಸ್ಥಾನಗಳೆಲ್ಲ ನಾವು ನಡೆದಾಡಿ ನೋಡಿದಷ್ಟೇ ಪರಿಚಿತ. ಆದರೆ ಅವರ ಊರು ಮಾತ್ರ ನಿಗೂಢ. ಖಾಸನೀಸರು ಲೈಬ್ರರಿಯನ್ ಅಂತ ಗೊತ್ತಾದಾಗ, ಬೆಂಗಳೂರಿನ ಪ್ರತಿಯೊಂದು ಕೇಂದ್ರ ಗ್ರಂಥಾಲಯದ ಶಾಖೆಗೂ ಹೋಗಿ ಅಲ್ಲಿ ಖಾಸನೀಸರು ಕಾಣುತ್ತಾರಾ ಅಂತ ನಾವೊಂದಷ್ಟು ಮಂದಿ ಹುಡುಕಾಡಿದ್ದೆವು.

ಕಾಮರೂಪಿ ಕೂಡ ಹಾಗೇ ಇದ್ದವರು. ಕುದುರೆಮೊಟ್ಟೆ ಕಾದಂಬರಿಯನ್ನು ಮೊದಲ ಸಲ ಓದಿದಾಗ, ಕತೆಯಲ್ಲಿ ಬರುವ ಚಂದ್ರಶೇಖರನೇ ಅವರು ಅಂತ ಅನ್ನಿಸಿದ್ದುಂಟು. ಚಂದ್ರಶೇಖರನ ಓದು, ಸಂಕೋಚ, ತನ್ನ ಹಳ್ಳಿಯನ್ನು ನೋಡುವ ದೃಷ್ಟಿ ಇವೆಲ್ಲ ಸೇರಿ ಅದು ಕಾಮರೂಪಿಯೇ ಇರಬೇಕು ಅಂತ ಪಟ್ಟಾಗಿ ಭಾವಿಸಿ, ಅವರ ಇತರ ಕತೆಗಳಲ್ಲೂ ಅವರನ್ನು ಪಾತ್ರವಾಗಿ ಅರಸಿದ್ದಿದೆ.

’ಸಂಚಯ’ದ ಪ್ರಹ್ಲಾದ್ ಇತ್ತೀಚೆಗೆ ಕಾಮರೂಪಿಯವರ ಅಷ್ಟೂ ಕೃತಿಗಳನ್ನು ಒಟ್ಟಾಗಿಸಿ ಒಂದು ಪುಸ್ತಕ ತಂದಿದ್ದಾರೆ. ಅದರಲ್ಲಿ ಅವರ ಇತ್ತೀಚಿನ ಬರಹಗಳೂ ಸೇರಿವೆ. ಒಂದು ತೊಲ ಪುನುಗು ಕತೆ ಅದರ ಶೀರ್ಷಿಕೆಯಿಂದಲೇ ಮೆಚ್ಚುಗೆಯಾಗಿತ್ತು. ಅದರ ಮುಂದುವರಿದ ಭಾಗದಂತೆ ಕುದುರೆ ಮೊಟ್ಟೆ ಕಂಡಿತ್ತು. ಅಂಜಿಕಿನ್ಯಾತಕಯ್ಯ ಓದುವ ಹೊತ್ತಿಗೆ ಒಂದು ವಿಚಿತ್ರ ಜಗತ್ತಿನೊಳಗೆ ಕಾಲಿಟ್ಟಂತೆ ಪುಲಕವೂ ಭಯವೂ ಹುಟ್ಟಿಕೊಂಡಿತ್ತು. ಕಾಮರೂಪಿಯನ್ನು ನಾವು ಅರಸಲು ಶುರುಮಾಡಿದ್ದು ಆಗಲೇ. ಅವರು ನವ್ಯಾಲೋಕದಲ್ಲೂ ನವ್ಯೋತ್ತರ ಲೋಕದಲ್ಲೂ ಸುಲಭವಾಗಿ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರ ಗೆಳೆಯರು ಯಾರು, ಅವರು ಎಲ್ಲಿದ್ದಾರೆ ಎನ್ನುವುದೂ ಗೊತ್ತಿರಲಿಲ್ಲ. ಕೋಲಾರದಲ್ಲಿ ಅವರದೊಂದು ಮನೆಯಿದೆ ಎಂದೂ ಅವರು ದೂರದ ಊರಲ್ಲಿ ಕೆಲಸ ಮಾಡುತ್ತಿದ್ದಾರೆಂದೂ ವೈಯನ್ಕೆ ಹೇಳಿದ್ದರು.

ಕುದುರೆ ಮೊಟ್ಟೆ ಕಾದಂಬರಿಯಲ್ಲೊಂದು ಪ್ರಸಂಗ ಬರುತ್ತದೆ. ಜಮೀನುದಾರರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ಕ್ರಮೇಣ ಶ್ರೀಮಂತನಾಗುತ್ತಾ ಹೋಗುತ್ತಾನೆ. ಅವರ ಆಸ್ತಿಯೆಲ್ಲ ನಿಧಾನವಾಗಿ ಈತನ ಪಾಲಿಗೆ ಬರುತ್ತದೆ. ಆಡಂಬರ ಮಾಡುತ್ತಾ ಮಾಡುತ್ತಾ ಜಮೀನ್ದಾರ ತನ್ನದೆಲ್ಲವನ್ನೂ ಕಳಕೊಂಡು ಬರಿಗೈಯಲ್ಲಿ ನಿಂತು ಬಿಡುತ್ತಾನೆ. ದುಡಿಯುತ್ತಾ ದುಡಿಯುತ್ತಾ ರೈತ ಆ ಆಸ್ತಿಯ ಒಡೆತನ ಸಂಪಾದಿಸುತ್ತಾನೆ. ಆದರೆ ಕೈಯಲ್ಲಿ ಕಿಲುಬುಕಾಸೂ ಇಲ್ಲದ ಜಮೀನ್ದಾರ ಈತನ ಪಾಲಿಗೆ ಒಡೆಯನೇ. ಅವನ ಮಗನೂ ಮಗಳೂ ಅವರಿಗಿಂತ ಮೂವತ್ತು ನಲವತ್ತು ವರ್ಷ ಹಿರಿಯನಾದ ಶ್ರೀಮಂತ ರೈತನನ್ನು ಏಕವಚನದಲ್ಲಿ ಮಾತಾಡಿಸುತ್ತಾರೆ. ರೈತನಿಗೆ ಆ ಕುರಿತು ಯಾವ ಮುಜುಗರವಾಗಲೀ, ಸಿಟ್ಟಾಗಲೀ ಇಲ್ಲ. ಅವರು ಇರಬೇಕಾದದ್ದೇ ಹಾಗೆ, ತಾನಿರಬೇಕಾದದ್ದೇ ಹೀಗೆ ಅಂತ ಭಾವಿಸುವ ರೈತ, ಜಮೀನ್ದಾರರ ಮನೆಗೆ ವರ್ಷಕ್ಕಿಷ್ಟು ಮೂಟೆ ಬತ್ತವನ್ನು ಕೊಟ್ಟು ಬರುವುದನ್ನು ಮುಂದುವರಿಸಿಕೊಂಡು ಬರುತ್ತಿರುತ್ತಾನೆ. ಅದಕ್ಕೆ ಯಾವ ಲೆಕ್ಕಾಚಾರವೂ ಇಲ್ಲ. ಅದು ಜವಾಬ್ದಾರಿಯಲ್ಲ, ಪ್ರೀತಿ.

ಇದನ್ನು ಓದುತ್ತಿದ್ದ ಹಾಗೇ ಗಾಬರಿಯಾಗಿತ್ತು. ಹೇಗೆ ಶ್ರೀಮಂತಿಕೆ ನಮ್ಮ ಮೂಲಭೂತವಾದ ಅಂತರಂಗದ ಸ್ಥಿತಿಯನ್ನು ಬದಲಾಯಿಸಲಾರದು ಅನ್ನುವುದನ್ನು ಕಾಮರೂಪಿ ಸೊಗಸಾಗಿ ಹಿಡಿದಿಟ್ಟಿದ್ದರು. ಅದು ಜಾತಿಯ ಪ್ರಶ್ನೆಯೂ ಆಗಿರಲಿಲ್ಲ. ಕೊಳೆತ ಹಲ್ಲಿನ, ಗಬ್ಬುವಾಸನೆಯ, ಜೊಲ್ಲು ಸುರಿಸುತ್ತಾ ಬರುವ ಜಮೀನ್ದಾರನ ಮಗನನ್ನು ನೋಡುತ್ತಾ, ರೈತನ ಮಗ ಅಬ್ಬ ತಾನು ಮೇಲು ಜಾತಿಯಲ್ಲಿ ಹುಟ್ಟಲಿಲ್ಲವಲ್ಲ ಸದ್ಯ ಎಂದು ನಿಟ್ಟುಸಿರು ಬಿಡುತ್ತಾನೆ. ಜಮೀನ್ದಾರನ ದೊಡ್ಡತನ, ಮೇಲುಗಾರಿಕೆ, ಅಂತಸ್ತು ಎಲ್ಲವೂ ರೈತನ ಮಗನಿಗೆ ಕ್ಷುದ್ರವಾಗಿ ಅಸಹ್ಯಕರವಾಗಿ ಕಾಣಿಸುತ್ತಾ ಹೋಗುತ್ತದೆ. ಆದರೆ ಅವನ ಅಪ್ಪನ ಮನಸ್ಸಿನಲ್ಲಿ ಅಂಥ ಭಾವನೆಯಿಲ್ಲ. ಬೆನ್ನಿನಲ್ಲಿ ಕುರು ಎದ್ದು, ಅದು ವ್ರಣವಾಗಿ ನೋವಿನಿಂದ ನರಳುತ್ತಾ ದಿನೇ ದಿನೇ ಸಾಯುತ್ತಿರುವ ಜಮೀನ್ದಾರನ ಮಗಳು ಹದಿನಾಲ್ಕನೇ ವಯಸ್ಸಿಗೆ ವಿಧವೆಯಾದವಳು. ಅವಳು ಜೀವನದ ಯಾವ ಸುಖವನ್ನೂ ಕಂಡವಳಲ್ಲ. ತಲೆಬೋಳಿಸಿಕೊಂಡು ಬಳೆ ಒಡೆಸಿಕೊಂಡು ತನ್ನ ಜಾತಿ ಮತ್ತು ಮನೆತನದ ಗೌರವ ಕಾಪಾಡುವುದಕ್ಕೆ ಇಡೀ ಬದುಕನ್ನೇ ಬಲಿಕೊಟ್ಟ ಆಕೆಯನ್ನು ನಾಶ ಮಾಡಿದ್ದು ಅವಳ ಜಾತಿಯೇ ತಾನೇ ಅಂತ ನಿಧಾನಕ್ಕೆ ಅರಿವಾಗುತ್ತಾ ಹೋಗುತ್ತದೆ. ಮೇಲುಜಾತಿ ಎಂಬ ಹೆಗ್ಗಳಿಕೆ ಕೂಡ ಹೇಗೆ ವ್ಯಕ್ತಿಯನ್ನು ಅಸ್ಪಶ್ಯನನ್ನಾಗಿಸುತ್ತಾ ಹೋಗುತ್ತದೆ ಅನ್ನುವುದನ್ನು ಕಾಮರೂಪಿ ಆ ಕಾಲದಲ್ಲೇ ಎಷ್ಟು ಸೂಕ್ಷ್ಮವಾಗಿ ಗಮನಿಸಿ ಚಿತ್ರಿಸಿದ್ದರು.

ಇದೇ ಕಾದಂಬರಿಯಲ್ಲಿ ಮತ್ತೊಂದು ಸನ್ನಿವೇಶವಿದೆ. ತನ್ನ ಮನೆಯವರ ಜೊತೆ, ಮಿಕ್ಕ ಊರ ಮಂದಿಯ ಜೊತೆ ಓದಿಕೊಂಡವರಂತೆ ಶುದ್ಧ ಕನ್ನಡದಲ್ಲಿ ಮಾತಾಡುವ ರೈತ, ತನ್ನ ಮಾಜಿ ಧಣಿಗಳ ಮುಂದೆ ಮಾತ್ರ ದೇಸೀ ಭಾಷೆ ಬಳಸುತ್ತಾನೆ. ಹಾಲು ಅಂತ ಸ್ಪಷ್ಟವಾಗಿ ಹೇಳಬಲ್ಲವನು, ಧಣಿಯ ಮುಂದೆ ಆಲು ತತ್ತಾ ಅಂತ ಹೇಳುತ್ತಾನೆ. ಮಗನಿಗೆ ಅದು ಅಚ್ಚರಿಯ ಸಂಗತಿ. ಅವರೆದುರು ಯಾಕೆ ಹಾಗೆ ಮಾತಾಡುತ್ತೀಯ ಅಂತ ಕೇಳಿದರೆ ರೈತ ಹೇಳುತ್ತಾನೆ : ಹಾಗೆ ಮಾತಾಡೋದರಿಂದ ಅವರಿಗೆ ಸಂತೋಷವಾಗುತ್ತದೆ.

ಭಾಷೆ ಕೂಡ ಹೇಗೆ ಗುಲಾಮಗಿರಿಯ ಸಂಕೇತವಾಗಬಲ್ಲದು ಅನ್ನುವುದನ್ನು ಕಾಮರೂಪಿ ಹಿಡಿದಿಟ್ಟಿರುವ ರೀತಿ ಅನನ್ಯವಾಗಿದೆ. ನಂತರದ ದಿನಗಳಲ್ಲಿ ನಾನಿದನ್ನು ತುಂಬ ಕಡೆ ಗಮನಿಸಿದ್ದೆ. ತುಂಬ ಚೆನ್ನಾಗಿ ಇಂಗ್ಲಿಷ್ ಮಾತಾಡಬಲ್ಲ ಹುಡುಗ ಕೂಡ ತನ್ನೂರಿಗೆ ಬಂದು ತನ್ನ ತಂದೆ ಗುಲಾಮರಾಗಿದ್ದ ಒಡೆಯನ ಜೊತೆ ಮಾತಾಡುವಾಗ ತನಗೆ ಇಂಗ್ಲಿಷ್ ಗೊತ್ತಿದೆ ಅನ್ನುವ ಸೂಚನೆ ಕೂಡ ಸಿಗದಂತೆ ಮಾತಾಡುತ್ತಾನೆ. ಭಾಷೆಯ ಮೂಲಕ ಅವನನ್ನು ಮೀರುವ ಆಶೆ ಅವನಿಗಿದ್ದಂತಿಲ್ಲ. ತಾನು ಅವನಿಗಿಂತ ಎತ್ತರದ ಭಾಷೆ ಬಳಸುವುದು ಕೂಡ ಆತನಿಗೆ ಹಿಂಜರಿಕೆಯ ಸಂಗತಿ ಆಗಿಬಿಡುತ್ತದೆ. ಹೀಗೆ ನಮಗೇ ಗೊತ್ತಿಲ್ಲದ ಹಾಗೆ ನಮ್ಮ ಮಾತು, ಭಾಷೆ ಎರಡೂ ನಮ್ಮನ್ನು ಆಳಿದವರ ಎದುರು ಮಣಿಯುವ ವಿಚಿತ್ರ ನಡವಳಿಕೆಯನ್ನು ಕಾಮರೂಪಿ ತೋರಿಸಿಕೊಡುತ್ತಾರೆ.

ಕಾಮರೂಪಿ ಅವರ ಹೆಸರು ಎಂ ಎಸ್ ಪ್ರಭಾಕರ ಅಂತ ಗೊತ್ತಾಗಿದ್ದು ನಂತರದ ದಿನಗಳಲ್ಲಿ. ಅವರ ಫೋಟೋ ನೋಡಿದ್ದು ಐದಾರು ವರುಷದ ಹಿಂದಷ್ಟೇ. ಅವರು ಇತ್ತೀಚೆಗೆ ಬರೆದಿರುವ ಬ್ಲಾಗ್ ಬರಹಗಳನ್ನು ಓದಿದ ನಂತರವೇ ಅವರ ಹೊರನಾಡಿನ ಬದುಕು, ಏಕಾಂತ, ಹುರುಪು, ಉಲ್ಲಾಸಗಳೆಲ್ಲ ಒಂದೊಂದಾಗಿ ತಿಳಿಯುತ್ತಾ ಬಂದವು. ಅವರು ಬೆಂಗಳೂರಿನಲ್ಲಿ ಓದಿದ್ದು, ಗೌಹಾತಿಯಲ್ಲಿ ಕೆಲಸಕ್ಕೆ ಸೇರಿದ್ದು, ಹೊರಗಿನವನು ಮತ್ತೂ ಹೊರಗಿನವನಾದದ್ದು, ಅವರ ಗೆಳೆಯರ ನೆನಪು, ಮನೆ ಕೆಲಸ ಮಾಡುವವರ ಪಜೀತಿ, ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಮೇಷ್ಟರುಗಳ ಕತೆ ಇವೆಲ್ಲದರ ಮೂಲಕ ಅವರಿಗೊಂದು ರೂಪ ಬಂತು.

ಅದ್ಯಾಕೋ ಏನೋ ಒಬ್ಬ ಲೇಖಕ ಹೀಗೇ ಇರಬೇಕೆಂದು ಮನಸ್ಸು ಬಯಸುತ್ತದೆ. ಓದುತ್ತಾ ಓದುತ್ತಾ ಅವರು ಹೀಗಿದ್ದಾರೆ ಅಂತ ಮನಸ್ಸಿಗೆ ಹೊಳೆಯುತ್ತದೆ. ಕಾದಂಬರಿ ಓದುತ್ತಾ ಅಲ್ಲಿ ಪಾತ್ರವೊಂದನ್ನು- ಉದಾಹರಣೆಗೆ ಭುಜಂಗಯ್ಯನ ದಶಾವತಾರಗಳು ಕಾದಂಬರಿಯ ಭುಜಂಗಯ್ಯ- ನಮ್ಮ ಮನಸ್ಸಿನಲ್ಲೇ ರೂಪು ತಳೆಯುವ ಹಾಗೇ ಲೇಖಕನೂ ರೂಪು ತಳೆಯುತ್ತಾ ಹೋಗುತ್ತಾನೆ. ಆ ರೂಪ ಬಿಟ್ಟು ಮತ್ತೊಂದು ರೂಪವನ್ನು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತದೆ.

ಮೊನ್ನೆ ಮಾತಾಡುತ್ತಾ ಎಂ ಎಸ್ ಶ್ರೀರಾಮ್ ಹೇಳುತ್ತಿದ್ದರು: ಗುವಾಹತಿಯಲ್ಲಿ ಕಾಮರೂಪಾ ದೇವಿಯ ದೇವಸ್ಥಾನ ಇದೆ. ಅಲ್ಲಿಗೆ ಹೋದ ನಂತರ ಪ್ರಭಾಕರ ಅವರು ಕಾಮರೂಪಿ ಅನ್ನುವ ಕಾವ್ಯನಾಮ ಇಟ್ಟುಕೊಂಡಿರಬೇಕು. ಬೆಂಗಳೂರಿನಲ್ಲಿದ್ದಾಗ ಅವರು ಪ್ರಭಾಕರ ಅನ್ನುವ ಹೆಸರಲ್ಲೇ ಬರೆಯುತ್ತಿದ್ದರೋ ಏನೋ?

ಅದಕ್ಕೂ ಉತ್ತರ ಇಲ್ಲ. ಅವರ ಈ ಸಂಗ್ರಹದಲ್ಲಿ ಒಂದು ಪ್ರಸಂಗ ಬರುತ್ತದೆ. ಕೋಲಾರದ ಸಮೀಪ ಇರುವ ಮೊಟ್ನಹಳ್ಳಿ ಎಂಬ ಊರಲ್ಲಿ ಒಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ ಓಡಿಹೋಗುತ್ತಾನೆ. ಆ ಊರಿನ ಮಂದಿ ಈ ಕೃತ್ಯಕ್ಕೆ ಬೆಚ್ಚಿಬಿದ್ದು, ತಮ್ಮ ಹಳ್ಳಿಯವನು ಇಂಥ ಕೆಲಸ ಮಾಡಿದನಲ್ಲ ಎಂಬ ನಾಚಿಕೆಯಲ್ಲಿ ಆ ಹಳ್ಳಿಯನ್ನೇ ತೊರೆಯುತ್ತಾರೆ. ದಾಖಲೆಗಳಲ್ಲೂ ಅದು ಬೇಚಿರಾಕ್ ಹಳ್ಳಿ, uninhibited village ಅಂತಲೇ ದಾಖಲಾಗಿರುತ್ತದೆ. ಅದರ ಇತಿಹಾಸ ಹುಡುಕಿಕೊಂಡು ಹೊರಟ ಕಾಮರೂಪಿ ಅವರಿಗೆ, ಆ ಹಳ್ಳಿಯನ್ನು ಖಾಲಿ ಮಾಡಿ ಹೋದವರು ಕೇವಲ ಬ್ರಾಹ್ಮಣರು ಮಾತ್ರ ಅನ್ನುವುದು ಗೊತ್ತಾಗುತ್ತದೆ. ಬ್ರಾಹ್ಮಣರಿಲ್ಲದ ಹಳ್ಳಿ, ಹಳ್ಳಿಯೇ ಅಲ್ಲ ಅಂತ ಅದನ್ನು ಬೇಚಿರಾಕ್ ಅಂತ ಕರೆದರೋ ಎಂದು ಸಂಶಯವಾಗುತ್ತದೆ.

ಈ ಸಂಶೋಧನೆ, ಗುಮಾನಿಗಳೆಲ್ಲ ಓದುಗನಲ್ಲಿ ಹುಟ್ಟಿಸುವ ಕುತೂಹಲ, ದಿಗ್ಭ್ರಮೆ ಮತ್ತು ನೆನಪುಗಳೇ ನಮ್ಮ ಪಾಲಿನ ಸಂತೋಷಗಳು. ಅಲ್ಲವೇ?

‍ಲೇಖಕರು avadhi

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. bharathi bv

  M vyasa .. bagalodi .. kaamaroopi moovaroo idee janmakke saaluvashtu huchchu hattisitru nange. Kamaroopi was too ahead of his times ansi bidutte….shouri maatra gottilla …

  ಪ್ರತಿಕ್ರಿಯೆ
 2. g.n.nagaraj

  ಕಾಮರೂಪಿಯವರ ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗಲಿಲ್ಲವಲ್ಲಾ ಎಂಬುದು ನನಗೆ ಕಾಡುತ್ತದೆ. ಅಂದು ಹೊಸಪೇಟೆಯಲ್ಲಿರಬೇಕಾದ ಅನಿವಾರ್ಯ.ಅವರು ತಮ್ಮ ಅವಿರತ ಶ್ರಮದಿಂದ,ನಿಷ್ಠೆಯಿಂದ,ಸಂತನ ತ್ಯಾಗ ಮನೋಭಾವದಿಂದ ಭಾರತೀಯರಿಗೆ ಅಜ್ಞಾತವಾಗಿರಬಹುದಾಗಿದ್ದ ಅಸ್ಸಾಮಿನ ಜನತೆಯ ಸಮಸ್ಯೆಗಳು, ದಕ್ಷಿಣ ಆಫ್ರಿಕಾ ದೇಶದ ಸಂಧಿಕಾಲದಲ್ಲಿ ಅಲ್ಲಿಯ ಜನತೆಯ ಸಮಸ್ಯೆಗಳು ನಮ್ಮವೇ ಎನಿಸುವಷ್ಟು ಗಾಢತೆಯನ್ನು ಉಂಟುಮಾಡಿದರು.ಅವರ ಈ ಎಲ್ಲ ಬರಹಗಳು ಪುಸ್ತಕಗಳಾಗಿ ಬರಬೇಕಾಗಿವೆ.ಇಲ್ಲದಿದ್ದರೆ ನಾವು ಆ ಬಗ್ಗೆ ಒಂದು ಅಪೂರ್ವ ಜ್ಞಾನದ ನಿಧಿಯನ್ನು ಕಳೆದುಕೊಂಡಂತಾಗುತ್ತದೆ.
  ಅವರ ಕಥೆ ಕಾದಂಬರಿಗಳು ‘ ಕುದುರೆ ಮೊಟ್ಟೆ ‘ಯಂತೂ ನನಗೆ ದಶಕಗಳ ಹಿಂದೆಯೇ ಸೆಳೆದವು. ಅವು ಮತ್ತೆ ಮತ್ತೆ ಚರ್ಚೆಗೊಳಗಾಗಬೇಕಾದ ಕೃತಿಗಳು. ಅವುಗಳನ್ನು ಪರಿಚಯ ಮಾಡಿಕೊಟ್ಟ ಜೋಗಿ, ಪ್ರಕಟಿಸಿದ ಪ್ರಹ್ಲಾದರವರಿಗೆ ವಂದನೆಗಳು.

  ಪ್ರತಿಕ್ರಿಯೆ
 3. Vidyashankar Harapanahalli

  Thank you Jogi Sir. Inspires us to read Kamaroopi with much intesity and interest. For our generation he is relative unknown, apart from few story read in magazines.

  ಪ್ರತಿಕ್ರಿಯೆ
 4. malini guruprasanna

  Barahagaarara photogalannu avara katheya jotege mottamodalu hakatodagiddu TARANGA varapatrike. adaralli banda nanna appana photo ( N.S.Chidambara Rao) nodi obba abhimani patra barediddaru. “che, nimmannu naanu hegehego kalpisikondidde. Yella haalu madibitru” anta. Baredavaru yaaru endu tiliyade odidda nanna modala odina dinagale nijavaagiyoo chennagittu. Ishtu varshagala nantara endo odidda Kadambariyannu matte nanna tattege unabadisida nimage Dhanyavaadagalu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: