ಮತ್ತೆ ಮತ್ತೆ ಓದಬೇಕೆನಿಸುವ
ಜೋಗಿ ಹೊಸ ಪುಸ್ತಕ

ಅನಿಲ್ ಗುನ್ನಾಪೂರ
ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಪ್ರಕಾರದ ಪುಸ್ತಕಗಳು ಯಥೇಚ್ಛವಾಗಿ ಬಂದಿವೆ. ಆದರೆ, ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ನೆಲೆ ಕಾಣಲು ಹಂಬಲಿಸುವ ಮನಸ್ಸುಗಳನ್ನು ಪ್ರೋತ್ಸಾಹಿಸುವ, ಪ್ರಾಥಮಿಕ ಜ್ಞಾನ ನೀಡಬಲ್ಲ ಪುಸ್ತಕಗಳು ಹೊರಬಂದಿದ್ದು ಬಲು ಅಪರೂಪ.
ಪತ್ರಿಕೆಗಳಲ್ಲಿ ಆಗೊಂದು ಈಗೊಂದು ಅಂಕಣ ಬಿಟ್ಟರೆ ಕಾಯ್ದಿರಿಸಿ ಓದಬೇಕಾದ, ಸಿನಿಮಾದ ಸೂಕ್ಷ್ಮಗಳನ್ನು ಕಲಿಯುವಂತಹ ಯಾವ ಪುಸ್ತಕವೂ ಬಂದಿಲ್ಲ. ಈ ಕೊರತೆಯನ್ನು ಸಾಹಿತಿ, ಅಂಕಣಕಾರ, ಚಿತ್ರಕತೆಗಾರ ಜೋಗಿಯವರು “ಕತೆ-ಚಿತ್ರಕತೆ-ಸಂಭಾಷಣೆ- ಜೋಗಿ” ಪುಸ್ತಕದಲ್ಲಿ ನೀಗಿಸಿದ್ದಾರೆ.

ಚಿತ್ರರಂಗ ಎನ್ನುವುದು ಒಂದು ವಯಸ್ಸಿನಲ್ಲಿ ಎಲ್ಲರಿಗೂ ಕಾಡುವ, ತೀಡುವ, ರಂಜಿಸಬಲ್ಲ ಮಾಧ್ಯಮ. ಇದರ ಮೋಹಕ್ಕೆ ಎಲ್ಲರೂ ಒಳಗಾಗುತ್ತಲೇ ಇರುತ್ತಾರೆ. ಕೆಲವರು ಪ್ರೇಕ್ಷಕರಾಗಿ ತೃಪ್ತಿ ಪಟ್ಟರೆ, ಇನ್ನು ಕೆಲವರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಕನಸಿನ ಮೂಟೆಗಳನ್ನು ಕಟ್ಟುತ್ತಾ ಕಥೆ ಹೊಳೆದಾಗ ಕಥೆಗಾರನಾಗಿ, ಯಾವುದೋ ಒಂದು ಪಾತ್ರ ಇಷ್ಟವಾದಾಗ ಕಲಾವಿದನಾಗಿ, ಕೆಲವೊಮ್ಮೆ ನಿರ್ದೇಶಕನಾಗಿ, ಗೀತರಚನೆಗಾರನಾಗಿ ಹೀಗೆ ನಾನಾ ವೇಷದ ಪೋಷಾಕು ತೊಟ್ಟು ಕನಸಿನ ಲೋಕದಲ್ಲಿ ತೇಲುತ್ತಾರೆ. ಕೆಲವರು ಮುನ್ನುಗ್ಗುತ್ತಾರೆ. ಸೂಕ್ತ ತಯಾರಿಯಿಲ್ಲದೆ ಕೆಲವರು ಮುಗ್ಗರಿಸಿ ಬೀಳುತ್ತಾರೆ.
ಚಿತ್ರರಂಗದ ಮೊದಲಿನಿಂದಲೂ ನಿಗೂಢತೆಯನ್ನು ಮೈಗೂಡಿಸಿಗೊಂಡಿದೆ. ನಿಗೂಢತೆ ಇದ್ದಿದ್ದರಿಂದಲೇ ಏನೋ ಚಿತ್ರರಂಗ ಗಗನಕುಸುಮವಾಗಿ ಕಾಣುತ್ತದೆ. ಪ್ರೇಕ್ಷಕರು ಒಂದು ಸಿನಿಮಾದ ಮುಂದಿನ ದೃಶ್ಯಗಳನ್ನು ನಿರೀಕ್ಷಿಸಬಲ್ಲರೇ ಹೊರತು ಆ ದೃಶ್ಯಗಳು ರೂಪಗೊಳ್ಳುವ ಹಿಂದೆ ನಿರ್ದೇಶಕ, ಸಂಭಾಷಣೆಕಾರ, ಚಿತ್ರಕತೆಗಾರ ಹೀಗೆ ಹತ್ತಾರು ಮನಸ್ಸುಗಳು ವಹಿಸಿದ ಶ್ರಮ ಪ್ರೇಕ್ಷಕರ ಅರಿವಿಗೆ ಬರುವುದು ಬಲು ಅಪರೂಪ.
ಈಗಾಗಲೇ ಅನೇಕ ಬಗೆಯ ಸಿನಿಮಾ ನಿರ್ಮಾಣದ ಸಂಸ್ಥೆಗಳು ಸಿನಿಮಾದ ಸೂಕ್ಷ್ಮಗಳನ್ನು ಕಲಿಸುವ ನಿಟ್ಟಿನಲ್ಲಿ ಕಮ್ಮಟಗಳು ನಡೆಸುತ್ತಾ ಸಿನಿಮಾದ ಸೂಕ್ಷ್ಮಗಳನ್ನು ಕಲಿಯಬಯಸುವವರ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿರ್ದೇಶನದ, ಕತೆ-ಚಿತ್ರಕಥೆ- ಸಂಭಾಷಣೆಯ ಹಲವು ಬಗೆಯ ತಂತ್ರಜ್ಞಾನದ ತರಬೇತಿ ನೀಡುತ್ತಿವೆ.
ಆದರೆ, ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಗಿ ಕೇಳಿದಷ್ಟು ಪ್ರವೇಶ ಫೀ ನೀಡಿ ಕಲಿಯಲು ಸಾಮಾನ್ಯ ಸಿನಿಮಾ ಆಸಕ್ತರಿಗೆ ಕಷ್ಟಸಾಧ್ಯ . ಇದನ್ನೆಲ್ಲ ನೀಗಿಸಲು ಅಪರೂಪದ ಕೃತಿಯೊಂದು ಕನ್ನಡದಲ್ಲಿ ಬಂದಿರುವುದು ಸಿನಿಮಾಮೋಹಿಗಳ ಭಾಗ್ಯ ಎಂತಲೇ ಹೇಳಬೇಕು.
೧೮ ಹೆಸರಾಂತ ನಿರ್ದೇಶಕರು ತಮ್ಮ ತಮ್ಮ ಸಿನಿಮಾ ಜ್ಞಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ನಿಜಕ್ಕು ಇಂತಹ ಒಂದು ಪುಸ್ತಕ್ಕಾಗಿ ಹಂಬಲಿಸುವ ಅಸಂಖ್ಯಾತ ಸಿನಿಮಾ ಕಡುಮೋಹಿಗಲ್ಲಿ ನಾನೂ ಒಬ್ಬ. ಈ ಪುಸ್ತಕದಲ್ಲಿಯ ಎಲ್ಲ ೧೮ ನಿರ್ದೇಶಕರ ಬರಹಗಳು ಓದುತ್ತಾ ಹೋದಂತೆ ಹೊಸಲೋಕವೊಂದು ನನಗೆ ಗೊತ್ತಿಲ್ಲದಂತೆ ನನ್ನೆದುರು ತೆರೆದುಕೊಂಡಿದೆ.
ಮೊದಲ ಭಾಗದಲ್ಲಿ ಜೋಗಿ ಅವರ ತಮ್ಮ ಸಿನಿಮಾ ಜೀವನದಲ್ಲಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತುಂಬಾ ಆಪ್ತವೆನಿಸುವ ಈ ಬರಹಗಳು ಓದುಗರಿಗೆ ಸಿನಿಮಾದ ಸೂಕ್ಷ್ಮಗಳನ್ನು ತಿಳಿಸುತ್ತಲೇ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಎರಡನೇ ಭಾಗದಲ್ಲಿ ಹೆಸರಾಂತ ನಿರ್ದೇಶಕರು ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ.
ಇಲ್ಲಿಯ ಬರಹಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಖಂಡಿತ ಸಿನಿಮಾದ ಸೂಕ್ಷ್ಮಗಳನ್ನು ಕಲಿಯಬಯಸುವ ಆಸಕ್ತರು ಕಾಯ್ದಿರಿಸಿಕೊಂಡು ಮತ್ತೆ ಮತ್ತೆ ಓದಬೇಕಾದ ಪುಸ್ತಕವಿದು.




ಕನ್ನಡ ಚಿತ್ರರಂಗದಲ್ಲಿಯ ಅಪೂರ್ವ ಅನುಭವಗಳೊಂದಿಗೆ ಅನುಭವಿ, ಹೆಸರಾಂತ ನಿರ್ದೇಶಕರರ ಅನುಭವಜನ್ಯ ವಿಷಯಗಳು ನಿಜವಾಗಿ ಅಪರೂಪದವು. ಜೋಗಿ ಅವರ, ಕನ್ನಡಿಗರಿಗೆ ಚಿತ್ರರಂಗದ ಒಳನೋಟಗಳ ಈ ದಾಹ ತಣಿಸಿದ ಈ ಪುಸ್ತಕಕ್ಕೆ ಅಭಿನಂದನೆಗಳು ಸಲ್ಲಲೇಬೇಕು. ಅಂತೆಯೇ ಅಭಿನಂದಿಸುವೆ.