ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕಂಡಂತೆ ‘ಕನ್ನಡದ ಶಕ್ತಿ ಮತ್ತು ಗರ್ವ’

ಜೋಗಿ

ಆರು ವರ್ಷಗಳ ಹಿಂದೆ ನಮ್ಮಮ್ಮ ತೀರಿಕೊಂಡರು. ಅದಾಗಿ ಸ್ವಲ್ಪ ದಿನಕ್ಕೇ ನಾನು ಜಿ. ವೆಂಕಟಸುಬ್ಬಯ್ಯನವರ ಮನೆಗೆ ಹೋಗಬೇಕಾಗಿ ಬಂತು. ರಂಗಶಂಕರದ ಕಾರ್ಯಕ್ರಮವೊಂದಕ್ಕೆ ಅವರನ್ನು ನನ್ನ ಕಾರಲ್ಲೇ ಕರೆತರುವಂತೆ ಸೂರಿ ಹೇಳಿದ್ದರು.

ನಾನು ಅವರ ಮನೆಗೆ ಹೊರಟು ನಿಂತಾಗ ಜ್ಯೋತಿ ನನ್ನನ್ನು ಕರೆದು ಎರಡು ಕಿವಿಮಾತು ಹೇಳಿದಳು. ನಿಮಗೆ ಯಾರ ಮುಂದೆ ಏನು ಮಾತಾಡಬೇಕು ತಿಳಿಯೋದಿಲ್ಲ. ವೆಂಕಟಸುಬ್ಬಯ್ಯನವರಿಗೆ ನೂರು ದಾಟಿದೆ. ಅವರ ಮುಂದೆ ಅಮ್ಮ ಹೋದ ಸುದ್ದಿ ಹೇಳೋದಕ್ಕೆ ಹೋಗಬೇಡಿ’. ನಾನೂ ಅದನ್ನೇ ಯೋಚಿಸಿದ್ದೆ. ನಾನು ಅವರ ಮನೆಗೆ ಹೋದೆ. ಅರುಣ್ ಅಲ್ಲೇ ಇದ್ದರು. ಕಾಫಿಯಾಯಿತು.

ಸ್ವಲ್ಪ ಹೊತ್ತಿಗೆಲ್ಲ ನಾವು ಹೊರಟೆವು. ಕಾರಲ್ಲಿ ಹೋಗುತ್ತಾ ಜಿ. ವೆಂಕಟಸುಬ್ಬಯ್ಯನವರು ಅಮ್ಮನಿಗೆ ಏನಾಗಿತ್ತೋ?’ ಎಂದು ಥಟ್ಟನೆ ಕೇಳಿದರು. ವಯಸ್ಸಾಗಿತ್ತು ಅಂತ ಥಟ್ಟನೆ ಹೇಳಿಬಿಟ್ಟೆ. ‘ನನಗಿಂತಲೋ?’ ಅಂತ ಹೇಳಿ ಜೋರಾಗಿ ನಕ್ಕರು. ನಂತರ ಕೊಂಚ ತಗ್ಗಿದ ದನಿಯಲ್ಲಿ ‘ಸುಖವಾಗಿ ಹೊರಟು ಹೋದರು ತಾನೇ? ಅದು ಮುಖ್ಯ. ಹೆಂಗಸರು ಜೀವನ ಪೂರ್ತಿ ನರಳಿರ್ತಾರೆ. ಒಳ್ಳೇ ಸಾವಾದರೂ ಬಂದರೆ ನೆಮ್ಮದಿ’ ಅಂದರು.

2016ರ ಡಿಸೆಂಬರ್ 27ರಂದು ಸಾಹಿತ್ಯ ಪರಿಷತ್ತು ಅವರಿಗೆ ಶತಮಾನೋತ್ಸವ ದತ್ತಿ ಪ್ರಶಸ್ತಿ ಕೊಡುವಾಗ ಅಭಿನಂದನಾ ಭಾಷಣ ಮಾಡಲು ಯಾರಿಗೆ ಹೇಳೋಣ ಅಂತ ಮನು ಬಳಿಗಾರ್ ಕೇಳಿದ್ದಕ್ಕೆ ಜಿ. ವೆಂಕಟಸುಬ್ಬಯ್ಯನವರು ನನ್ನ ಹೆಸರನ್ನು ಸೂಚಿಸಿದ್ದರಂತೆ. ನನ್ನಂಥ ಕಿರಿಯ ತನ್ನ ಬಗ್ಗೆ ಏನನ್ನುತ್ತಾನೆ ಅನ್ನುವ ಕುತೂಹಲಕ್ಕಿಂತ ನನ್ನ ಮೇಲಿನ ಪ್ರೀತಿಯಿಂದಲೇ ಅವರು ಆ ಮಾತು ಹೇಳಿದ್ದರೆಂದು ನನಗೆ ಈಗ ಅನ್ನಿಸುತ್ತಿದೆ.
ನಾನು ಬೆಂಗಳೂರಿಗೆ ಬಂದ ಶುರುವಿನಲ್ಲಿ, ಪತ್ರಿಕೆಗೆ ಸಂದರ್ಶನ ಕೇಳಿ ಅವರ ಮನೆಗೆ ಹೋಗಿದ್ದೆ. ಯಾವ ಪತ್ರಿಕೆಗೆ ಅಂತಲೂ ಕೇಳದೇ ಸುಮಾರು ಎರಡು ಗಂಟೆ ಮಾತಾಡಿ, ಊಟ ಮಾಡಿಸಿ ಕಳಿಸಿದ್ದರು.

ಪತ್ರಿಕೆಗಳಲ್ಲಿ ಕೆಲಸ ಮಾಡಲು ಶುರುಮಾಡುವ ಹೊಸಬರಿಗೆ ಅನುಕೂಲ ಆಗಲಿ ಅಂತ ಅವರು ಪತ್ರಿಕಾ ಪದಕೋಶವನ್ನು ರಚಿಸಿಕೊಟ್ಟರು. ಬೇರೆ ಭಾಷೆಗಳಿಂದ ಬಂದ ಪದಗಳನ್ನು ಹುಡುಕಿ ಎರವಲು ಪದಕೋಶ ರಚಿಸಿದರು. ಯಾವುದೇ ಪದ ಹೇಳಿದರೂ ಅದರ ಮೂಲ, ಬಳಕೆ, ಯಾವ ಕಾವ್ಯದಲ್ಲಿ ಅದು ಬರುತ್ತದೆ ಎನ್ನುವುದನ್ನು ಸೂಚಿಸುವ ಇಗೋ ಕನ್ನಡ ಬರೆದರು. ಒಟ್ಟು 14 ಅರ್ಥಕೋಶಗಳನ್ನು ಅವರು ಕನ್ನಡಕ್ಕೆ ಕೊಟ್ಟಿದ್ದಾರೆ.
ಅವರ ಕಣ್ಮರೆ ಕನ್ನಡದ ವಿದ್ವತ್ ಪರಂಪರೆಯನ್ನು ಮಂಕಾಗಿಸಿದೆ.

‍ಲೇಖಕರು Avadhi

19 April, 2021

2 Comments

  1. T S SHRAVANA KUMARI

    ನುಡಿಗಾರುಡಿಗನಿಗೆ ಸೂಕ್ತ ನಮನ

  2. Shyamala Madhav

    ನನಗಿಂತಲೂ ? ಎಂದು ನಕ್ಕ ಪರಿ ಮತ್ತು ಸ್ತ್ರೀಯರ ಬಗ್ಗೆ ಅವರ ಅಂತಃಕರಣದ ಮಾತು ಮನ ತಟ್ಟಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading