ಇಲ್ಲಿ ಹಿರಿಯ ಮರಗಳಿಗೆ ಒಂದು ಪಟ್ಟು ಪ್ರೀತಿ ಜಾಸ್ತಿ…

ಶ್ರೀ ವಿದ್ಯಾ

ಸುತ್ತಲೂ ಮರಗಳು.. ಅದರ ನಡುವೆ ಒಂದು ಮನೆ. ಗದ್ದೆ ತೋಟ ದಾಟುತ್ತಾ ಮುಂದೆ ಸಾಗಿದರೆ ಇನ್ನೊಂದು ಮನೆ. ಮನೆ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳಿಗಂತೂ ಕಿಲೋಮೀಟರ್ ನಡಿಗೆ. ಕಿರಿದಾದ ರಸ್ತೆಗಳು. ಸ್ಥಳೀಯ ಪಂಚಾಯತ್ ಅಥವಾ ಕೇಂದ್ರದ ನಬಾರ್ಡ್ ನಿಂದ ಆಶೀರ್ವಾದ ಪಡೆದಿದ್ದರೆ ಡಾಮರು ರಸ್ತೆ. ಇಲ್ಲವೇ ಕೆಲವೊಂದು ಕಡೆ ಮಣ್ಣೇ ಗತಿ. ಆದರೂ ದಾರಿಯುದ್ದಕ್ಕೂ ಅಕ್ಕ ಪಕ್ಕದಲ್ಲಿ ಬೆಳೆದ ದೊಡ್ಡ ದೊಡ್ಡ ಮರಗಳು. ಸುಡುವ ಬಿಸಿಲು ಕೂಡ ಕಣ್ಣಾಮುಚ್ಚಾಲೆ ಆಡುತ್ತಾ ಅಲ್ಲೊಮ್ಮೆ ಇಲ್ಲೊಮ್ಮೆ ರಸ್ತೆಗೆ ಬೀಳುವ ಪರಿ.

ಇದು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಉಜಿರೆ – ಸುರ್ಯ ರಸ್ತೆಯ ನೋಟ. ಆ ದಿನಗಳನ್ನು ನೆನಪಿಸಿದ್ದು ಸಿಂಗಾಪುರದ ಒಂದು ರಿಸರ್ವ್ ನೇಚರ್ ಪಾರ್ಕ್. ಇಲ್ಲಿ ಚಾರಣಿಗರಿಗೆ ಮೂರು ಆಯ್ಕೆಗಳು. ನೇರ ರಸ್ತೆ, ಇಲ್ಲವೇ ಮೆಟ್ಟಿಲುಗಳಲ್ಲೇ ಏರುತ್ತಾ – ಇಳಿಯುತ್ತಾ ಪಯಣ. ಅಥವಾ ಮರಗಿಡ ಪೊದೆಗಳ ನಡುವೆ ಸಂಚರಿಸುವ ಅವಕಾಶ. ಈ ದೇಶದಲ್ಲಿ ಇದೊಂದೇ ಅಲ್ಲ. ಇಂತಹ 350 ಕ್ಕೂ ಹೆಚ್ಚು ಉದ್ಯಾನವನಗಳು ಮತ್ತು 3,347 ಹೆಕ್ಟೇರ್ ಜಾಗ, ಪ್ರಕೃತಿ ಮೀಸಲು ಪ್ರದೇಶಗಳನ್ನು ಇಲ್ಲಿ ಕಾಣಬಹುದು.

1960ರ ದಶಕದಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಲೀ ಕ್ವಾನ್ ಯೂ ಸಿಂಗಾಪುರವನ್ನು ಉದ್ಯಾನ ನಗರವಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದರು. 1963ರಲ್ಲಿ ಮೊದಲ ಮರ ನೆಡುವ ಮೂಲಕ ದ್ವೀಪವನ್ನು ಹಸಿರಾಗಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿತ್ತು
ಮರಗಳು, ಕಾಡುಗಳ ವಿಚಾರ ನಮಗೆಲ್ಲಾ ಹೊಸದಲ್ಲ ಬಿಡಿ. ಆದರೆ ಗಾತ್ರದಲ್ಲಿ ನಮ್ಮ ಬೆಂಗಳೂರಿಗಿಂತಲೂ ಚಿಕ್ಕದಾಗಿರುವ ಸಿಂಗಾಪುರ, ಹಸಿರಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಅಚ್ಚರಿ ಮೂಡಿಸುವಂತದ್ದು.

ಈ ವಿಚಾರದಲ್ಲಿ ವಿಶ್ವದ 17 ನಗರಗಳ ಪಟ್ಟಿಯಲ್ಲಿ ಸಿಂಗಾಪುರಕ್ಕೆ ಮೊದಲ ಸ್ಥಾನ. ಸದ್ಯಕ್ಕೆ ದೇಶದ ಶೇ ೩೦ ರಷ್ಟು ಭಾಗ ಹಸಿರಿನಿಂದ ತುಂಬಿ ಹೋಗಿವೆ. ಮುಂದಿನ ೧೦ ವರ್ಷಗಳಲ್ಲಿ 1 ಮಿಲಿಯನ್ ಗಿಂತಲೂ ಅಧಿಕ ಗಿಡಗಳನ್ನು ನೆಡುವ ಅಭಿಯಾನ ಈಗಾಗಲೇ ಆರಂಭವಾಗಿದೆ.
ಗ್ರೀನ್ ಸಿಟೀ ಎಂದು ಹೆಸರು ಪಡೆದರೆ ಸಾಕೇ ..? ಅದರ ನಿರ್ವಹಣೆಯು ಕೂಡ ಅಷ್ಟೇ ಅಚ್ಚುಕಟ್ಟಾಗಿ ನಡೆಸುವುದು ಅನಿವಾರ್ಯ.

ನೈಸರ್ಗಿಕ ಪರಿಸರದಲ್ಲಿ ಬೆಳೆಯುವ ಮರಗಳಿಗೆ ಹೋಲಿಸಿದರೆ, ನಗರದಲ್ಲಿ ಬೆಳೆಯುವ ಮರಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ. ತಾಪಮಾನ, ತೇವಾಂಶ ಮತ್ತು ಮಾಲಿನ್ಯಕಾರಕಗಳ ತೀವ್ರತೆ ಪ್ರಮುಖ ಅಂಶಗಳು. ಸಸ್ಯರೋಗಗಳು, ಮಣ್ಣಿನ ಪೋಷಕಾಂಶಗಳ ಕೊರತೆ, ನಿರ್ಮಾಣ ಚಟುವಟಿಕೆಗಳು ನಗರಗಳಲ್ಲಿ ಸಾಮಾನ್ಯ. ಹೀಗಾಗಿ ಮರಗಳ ನಿರಂತರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪರಿಣಿತರು ಪರಿಶೀಲಿಸಬೇಕು, ನಿರ್ವಹಿಸಬೇಕು ಮತ್ತು ಅಗತ್ಯವಿದ್ದಾಗ ಬದಲಾಯಿಸಬೇಕು.

ಇನ್ನೂ ಕಟ್ಟಡಗಳ ಒಳಭಾಗದಲ್ಲಿ ನಿರ್ಮಿಸಲ್ಪಟ್ಟ ಹಸಿರು ತಾಣಗಳು, ಉದ್ಯಾನವನಗಳು, ಪಾರ್ಕಿಂಗ್ ಕಟ್ಟಡಗಳ ಮೇಲ್ಛಾವಣಿಯ ಉಪವನಗಳು, ಪ್ರತಿಷ್ಟಿತ ಹೋಟೆಲ್, ಕಚೇರಿಗಳ ಕಟ್ಟಡಗಳಲ್ಲಿ ಹಸಿರಿನಿಂದ ಕಂಗೊಳಿಸುವ ವನಗಳು ಕೂಡ ಇಲ್ಲಿ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿವೆ.

ಸಿಂಗಾಪುರ ಅಭಿವೃದ್ಧಿ ಹೊಂದಿದ ದೇಶ. ತಾನು ಮಾಡುವ ಕಾರ್ಯ ಒಂದೆಡೆ ವಿಶ್ವದ ಗಮನ ಸೆಳೆದರೆ, ಮತ್ತೊಂದೆಡೆ ತನ್ನ ದೇಶದ ನಾಗರಿಕರ ಸುರಕ್ಷತೆಗೂ ಹೆಚ್ಚು ಒತ್ತು ನೀಡಬೇಕು. ಉದ್ಯಾನ ನಗರಿಯ ಸಾಲು ಸಾಲು ಮರಗಳ ಆರೋಗ್ಯ, ಅವುಗಳ ಕಟ್ಟಿಂಗ್, ಟ್ರಿಮ್ಮಿಂಗ್ ಕಾರ್ಯಗಳು ನಿರಂತರ. ಸ್ಥಳಾವಕಾಶ, ಬೆಳಕು, ನೀರಿನ ಲಭ್ಯತೆ, ಮರದ ಪ್ರಭೇದ, ಮರದ ಬೆಳವಣಿಗೆ ಹೀಗೆ ಅನೇಕ ವಿಚಾರಗಳು ಗಮನಿಸುವಂತದ್ದು ಅಗತ್ಯ.

ಇನ್ನೂ ಈ ದೇಶದಲ್ಲಿ ಹಿರಿಯ ಮರಗಳಿಗೆ ಒಂದು ಪಟ್ಟು ಪ್ರೀತಿ ಜಾಸ್ತಿ. ಹೆರಿಟೇಜ್ ಮರಗಳು ಎಲ್ಲೇ ಇರಲಿ, ಎಷ್ಟೇ ಬಾಗಿ, ಬೆಂಡಾಗಿರಲಿ. ಅಂತಹ ಮರಗಳಿಗೆ ವಿಶೇಷ ಗೌರವ. ಅವುಗಳನ್ನು ವಿಶಿಷ್ಟ ರೀತಿಯಲ್ಲಿ ರಕ್ಷಿಸಲಾಗುತ್ತದೆ. ಇನ್ನೇನು ನೆಲಕ್ಕುರುಳಬಹುದು ಅಥವಾ ರೆಂಬೆ ಕೊಂಬೆಗಳು ತುಂಡಾಗಬಹುದು ಅನ್ನುವ ಪರಿಸ್ಥಿತಿ ಬಂದಾಗ ಅದಕ್ಕೆ ಆಧಾರವಾಗಿ ಬೇಕಾದ ವ್ಯವಸ್ಥೆಗಳು ತಕ್ಷಣಕ್ಕೆ ನಿಯೋಜಿಸಲ್ಪಡುತ್ತವೆ.
ಮರದ ಮೌಲ್ಯ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅವಲಂಬಿಸಿ ಕೆಲ ದುರ್ಬಲ ಮರಗಳ ಕಾಂಡಗಳು ಹಾಗೂ ಕೊಂಬೆಗಳ ಬೆಳವಣಿಗೆ ಸ್ಥಗಿತಗೊಳಿಸಲು ತಂತಿಗಳನ್ನು ಅಥವಾ ಬಿಗಿ ಪಟ್ಟಿಗಳನ್ನು ಅಳವಡಿಸಲಾಗುತ್ತದೆ.

ಇನ್ನೂ ಸಿಡಿಲು-ಮಿಂಚಿಗೆ ಹಾನಿಗೊಳಗಾಗದಂತೆ ಕೂಡ ಮರಗಳನ್ನು ಕಾಪಾಡಲಾಗುತ್ತದೆ. ಬಲವಾದ ವಿದ್ಯುತ್ ಪ್ರವಾಹವನ್ನು ತಪ್ಪಿಸಲು ಮರದ ಮೇಲ್ಭಾಗದಿಂದ ನೆಲದವರೆಗೆ ತಾಮ್ರದ ಕೇಬಲ್ ಅಳವಡಿಸಲಾಗುತ್ತದೆ. ಸಿಂಗಾಪುರದ ಅನೇಕ ಹೆರಿಟೇಜ್ ಮರಗಳಲ್ಲಿ ಇದನ್ನು ಕಾಣಬಹುದು.

‍ಲೇಖಕರು Avadhi

April 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: