ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜೊತೆ ಬಾಳಬೇಕಾದವರ ಕ್ಷಣಗಳನ್ನು ಕಿತ್ತುಕೊಳ್ಳುವ ಹಕ್ಕು ನಮಗಿದೆಯ..’ – ಹೇಮಲತಾ

ಹೇಮಲತಾ

ಅದು ಎಲ್ಲರ ಮನೆಯ ಸಾಮಾನ್ಯ ಸಮಸ್ಯೆಯೇ ಆದರು ಅವತ್ತು ಅಳುತ್ತಾ ಬಂದ ಗೆಳತಿಯನ್ನು ಕಂಡ ಎಂತಹವರಿಗೂ ಸಂಕಟವಾಗುವಂತಿತ್ತು .ಓದಿನಲ್ಲಿ ಅಷ್ಟೇನೂ ಜಾಣೆ ಅಲ್ಲದ್ದಿದ್ದರು ಪ್ರಾಮಾಣಿಕ ಪರಿಶ್ರಮವನ್ನಂತು ವಹಿಸುತ್ತಿದ್ದಳು .ಅದಾದಾಗಲೂ ಬಹಳ ದಿನಗಳವರೆಗೂ ಕೆಲಸ ಸಿಗದೇ ಹತಾಶೆ, ಸೋಲು , ಮನೆಯ ಆರ್ಥಿಕ ಒತ್ತಡಗಳಲ್ಲಿ ಮಾನಸಿಕವಾಗಿ ಕುಸಿದ್ದಿದ್ದಳು .ಹೆಚ್ಚು ನೀರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದ ಮನೆಯವರ ಹೀಯಾಳಿಕೆಯ ಮಾತುಗಳು ಅದಾಗಲೇ ಸೂಕ್ಷ್ಮಮನಸ್ತಿತಿ ತಲುಪಿದ್ದವಳನ್ನು ಮತ್ತಷ್ಟು ಘಾಸಿಗೊಳಿಸುತ್ತಿದ್ದವು. ಅದರಲ್ಲೂ ಅಮ್ಮ ವಿಧಿಸುತ್ತಿದ್ದ ಮನೆಕೆಲಸಗಳ ದಂಡನೆಗಿಂತ ಹೆಚ್ಚಾಗಿ ,” ಉದ್ಯೋಗಗಳಿಸುವ ಅರ್ಹತೆಯಂತು ನಿನಗಿಲ್ಲ ಕಡೆಪಕ್ಷ ಮನೆಗೆಲಸಮಾಡಿಕೊಂಡು ಬಿದ್ದಿರು ,ಮದುವೆ ಮಾಡಿಕೊಟ್ಟ ಮನೆಯಲ್ಲಿ ಸುಮ್ಮನೆ ಕೂಡಿಸಲ್ಲ” ಎನ್ನುವ ನೇರಾನೇರ ಚುಚ್ಚು ಮಾತುಗಳು ಪ್ರತಿದಿನದ ರಗಳೆಗಳಾಗಿ ಹೋಗಿದ್ದವು .ಅವಳ ದುಃಖದ ಕಾರಣ ಅದೊಂದೇ ಆಗಿರಲಿಲ್ಲ ,ಅವಳಿಗಿಂತ ವಯಸಿನಲ್ಲಿ ದೊಡ್ಡವನಾದರು ಜವಾಬ್ದಾರಿಯ ಯಾವುದೇ ಭಾರವಾಗಲಿ ನಿರೀಕ್ಷೆಯ ಬಿಸಿಯಾಗಲಿ ಇಲ್ಲದೆ ಉಂಡಾಡಿ ಓಡಾಡಿಕೊಂಡಿದ್ದ ಅಣ್ಣನೊಟ್ಟಿಗಿನ ಅವಳ ತಾರತಮ್ಯ .ಚಿಕ್ಕ ವಯಸ್ಸಿಗೆ ಶಾಲೆ ಬಿಟ್ಟು ಗೆಳೆಯರೊಂದಿಗೆ ಬೀಡಿ, ಸಿಗರೇಟು,ಮಧ್ಯಪಾನ , ಸಾಲದಕ್ಕೆ ಒಂದೆರಡು ಲವ್ ಫೇಲ್ಯೂರ್ ಮಾಡಿಕೊಂಡು ,ದಿನಕ್ಕೊಂದು ಹುಟ್ಟುವ ಹೊಸ ಪ್ಲಾನ್ ನಲ್ಲಿ ಅಪ್ಪನ ಕೈಲಿ ಸಾಲಮಾಡಿಸಿ ,ಸ್ಪೀಡ್ ಬ್ರೇಕ್ ಮಾಡಿ ಗುದ್ದಿ, ಗುದ್ದಾಡಿ ಹಗರಣ ಮಾಡಿ ಖರೀದಿಸಿದ ಆಟೋನ ಸೈಡ್ ಗೆ ನಿಲ್ಲಿಸಿ, ದುಡಿಮೆಯನ್ನ ಮೂಲೆಗೆ ಸಲ್ಲಿಸಿ ಊಟ ಬಿಸಿಯಿಲ್ಲ ಎಂದು ಎಗರಾಡಿದರು , ಅವನು ಗಂಡು ಮಗ,ಮುಂದೊಂದು ದಿನ ಆಶ್ರಯವಾಗುಬೇಕಾದವನು ಎಂದು ಪೋಷಕರು ಎಲ್ಲದರಿಂದ ಖುಲಾಸೆ ಮಾಡಿ ಕೃತಾರ್ತರಾಗಿದ್ದರು.
ಮದುವೆ ಅಂತ ಮಾಡಿಕೊಟ್ಟು ಹೊರಗೆ ಕಳಿಸಲಿ ನನ್ನ ಬದುಕನ್ನು ನಾನು ಆತ್ಮಗೌರವದಿಂದ ಬದುಕ್ಕುತ್ತೇನೆ ಎಂದು ಅಳುತ್ತಲೇ ಅಸ್ಪಷ್ಟವಾಗಿ ತೊದಲುತ್ತಿದ್ದಳು ಗೆಳತಿ …
ನಮ್ಮ ಮನೆಯಲ್ಲಿ ನನ್ನ ಸ್ವಂತ ಖಾಸಗಿತನಕ್ಕೆ ಅವಕಾಶವಿಲ್ಲ ಎನ್ನುತ್ತಾ ಬರುವ ಮತ್ತೊಬ್ಬಳು ಗೆಳತಿಯದು ಇದೆ ನೆಲೆಯ ಕೊಂಚ ಭಿನ್ನಕತೆ.ಅತಿ ಕಡಿಮೆ ಸಮಯದಲ್ಲಿ ತನ್ನ ಉದ್ಯೋಗದಲ್ಲಿ ಖ್ಯಾತಿ, ಯಶಸ್ಸು , ಪ್ರಮೋಷನ್ ಗಳಿಸಿದ್ದರು ಅದೇನು ಮಹಾ ಎನ್ನುವ ನಿರ್ಲಕ್ಷ್ಯ ಮನೆಯವರಿಗೆ ..ಅವೆಲ್ಲ ಅರ್ಥವಾಗುವುದಿರಲಿ ಓರಿಗೆಯವರು ನಿನಗಿಂತ ದುಪ್ಪಟ್ಟು ದುಡಿಯುತ್ತಿದ್ದಾರೆ , ಅಕ್ಕ ಅಣ್ಣನ ಕೆರಿಯರ್ ಮೇಲಕ್ಕೇರಿದೆ ಎನ್ನುವ ವ್ಯವಹಾರಿಕ comparision ..ಅವಳ ಎನರ್ಜಿ ಎಷ್ಟೇ ದೊಡ್ದದ್ದಿದ್ದರು ಇವಳ ಬರುವಿಕೆಯನ್ನು ಕಾದಿರುವ ಮನೆಕೆಲಸ ಲಿಸ್ಟು ಎಷ್ಟೇ ದೊಡ್ದದ್ದಿದ್ದರು ,ಇಂತ ಸಣ್ಣ ಹೀಗಳಿಯುವಿಕೆಗಳು ಅವಳನ್ನು ಇನ್ನಿಲ್ಲದಂತೆ ಸುಸ್ತು ಮಾಡಿಸಿ ಒಳಗೊಳಗೇ ತಿಂದು ಹಾಕುತ್ತಿರುತ್ತವೆ.
ಮನೆ ಹೊರಗಡೆಯ ಸಮಸ್ಯೆಗಳು ನೂರು ತರದ್ದವಾದರೆ ಮನೆ ಒಳಗಿನ ಸಮಸ್ಯೆಗಳು ಮತ್ತೂ ನೂರು ತರಹದ್ದವು…ವ್ಯವಸ್ತೆಗೆ, ಚೌಕ್ಕಟ್ಟಿಗೆ, ರೀತಿನಿಯಮಗಳಿಗೆ,ನಿರೀಕ್ಷೆಗಳಿಗೆ ತಯಾರು ಮಾಡುತ್ತಿರುವ ಕಾರಣದಿಂದ ಹಿಡಿದು ಬದುಕಿನ ಕಷ್ಟಗಳಿಗೆ , ಜವಾಬ್ದಾರಿಗಳಿಗೆ ,ಅತ್ತೆಮನೆಯ ಅಪೇಕ್ಷೆಗಳಿಗೆ ,ಶ್ರೇಷ್ಠತೆಯ ಪದಕಕ್ಕೆ ಸಿದ್ದಗೊಳಿಸುತ್ತಿರುವವರೆಗೂ ದೊಡ್ಡವರಿಂದ ಸಮಜಾಯಿಸಿ ಸಿಗುತ್ತಲೇ ಹೋಗುತ್ತವೆ .ಬದುಕಿಗೆ ಅಣಿಗೊಳಿಸುವ ಭರದಲ್ಲಿ ಅವೆಷ್ಟೋ ಇಂತ ಸಣ್ಣಪುಟ್ಟ hurtingsಗಳು ಗೊತ್ತೇ ಆಗದಂತೆ ಪ್ರತಿನಿತ್ಯ ಮನೆಯವರಿಂದ ಜರುಗುತ್ತಿರುತ್ತವೆ ..ಮತ್ತು ಅವು ವಿವಿಧ ಹಂತಗಳಲ್ಲಿ,ವಿವಧ ಮಜಲುಗಳಲ್ಲಿ ಮುಂದುವರಿಯುತ್ತಲೇ ಹೋಗುತ್ತವೆ ..
ನಿಜ ಬೆಳೆಯುವ ಹಂತದಲ್ಲಿ ಶಿಸ್ತು,ಸಂಯಮ, ಶ್ರದ್ದೆ ಹಿಡಿಕೆತಡಿಕೆಗಳ ಪಾಠ ಕಂಡಿತ ಅತ್ಯಗತ್ಯ ..ಮಣ್ಣಿನ ಮಡಿಕೆಗೆ ವಿನ್ಯಾಸ ನೀಡುವ ಕುಸರಿ ಕೆಲಸ ಹೆತ್ತವರದ್ದೆ ಆಗಿರುತ್ತದೆ .ಸಮಾಜ ಘಾತುಕ ಶಕ್ತಿ, ಅನೈತಿಕ ವ್ಯಕ್ತಿ ನಿರ್ಮಾಣವಾಗದಂತೆ ಮಕ್ಕಳನ್ನು ಬೆಳೆಸುವ ಹೊಣೆ ಹೆತ್ತವರದ್ದು ಮತ್ತದು ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ಕೂಡ.ಒಂದು ಹಂತದವರೆಗೆ ಮಕ್ಕಳನ್ನು ಹದ್ದು ಬಸ್ತಿನಲ್ಲಿ ಬೆಳೆಸಿ,ಆದರೆ ಒಂದು ವಯಸಿನ ತರುವಾಯ ಸ್ನೇಹಿತರಂತೆ, ಸ್ವಂತ ವ್ಯಕ್ತಿತ್ವವುಳ್ಳ ವ್ಯಕ್ತಿಗಳಂತೆ ನೋಡಿ ಎನ್ನುತಾನೆ ಚಾಣಾಕ್ಯ .
ಆದರೆ ಹಾಗಾಗುವುದೇ ಇಲ್ಲ…
ಗೂಡುಕಟ್ಟಿ ಮೊಟ್ಟೆಯನಿಟ್ಟು, ಕಾವುಕಾದು ಗುಟುಕು ಬಾಯಿಗೆ ನೀಡಿ , ರೆಕ್ಕೆ ಆಡಿಸುವುದ ಕಲಿಸಿದ ತಾಯಿ ಹಕ್ಕಿ,ಮರಿಗೆ ಬೇಟೆ ಕಲಿಸಿದ ಸಿಂಹ ,ಹೊಟ್ಟೆಗೆ ಕಂದನನ್ನು ತಬ್ಬಿಕೊಂಡು ಬಡಿದಾಡೋ ಮಂಗ ಕೂಡ,ಒಂದು ದಿನ ಜೀವಿಸುವ ಪಾಠ ನೀಡಿದೇ ಎನಿಸಿದ ಮೇಲೆ ನಿನ್ನ ಬದುಕು ನಿನ್ನ ಜವಾಬ್ದಾರಿ, ನಿನ್ನ ಹಕ್ಕು ಎಂದು ಬಿಟ್ಟುಬಿಡುತ್ತವೆ …
ಆದರೆ ಮನುಷ್ಯ ಮಾತ್ರ ಬದುಕುವುದನ್ನು ಇನ್ನೊಬ್ಬರಿಗೆ ಕಲಿಸುವ ಹೆಸರಲ್ಲಿ,ಭರದಲ್ಲಿ ಅವರ ಬದುಕನ್ನು ತಾನೇ ಬದುಕುವ ಹವಣಿಕೆ ಹೊಂದಿದವನಂತೆ ಕಡೆವರೆಗೂ ಹಿಡಿತದಲ್ಲಿ ಇಟ್ಟುಕೊಳ್ಳಲು ಇಚ್ಚಿಸಿದವನಂತೆ ಅಸೂಕ್ಷ್ಮವಾಗಿ ನಡೆಯುತ್ತಲೇ ಹೋಗುತ್ತಾನೆ …
ಯಾವ ವಿಸ್ತಾರಕ್ಕು ಒಂದೇ ಸೂತ್ರಕ್ಕೂ ಸಿಗದಷ್ಟು ಸವಿಸ್ತಾರ ಕಗ್ಗಂಟು,ಮತ್ತು ಎಲ್ಲದಕ್ಕೂ ಒಂದೇ ನೆಲೆಯ ಅರ್ಥವಿರದ ನಿಘಂಟು ನಮ್ಮ ಬದುಕು .
ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗಮನಿಸಿದಾಗ ಬಹಳಷ್ಟು ಜನ ಅವಮಾನದ ಬೇಗುದಿಯಲ್ಲಿ ಕುದ್ದು ,ಕೊಡವಿ ಎದ್ದು ,ಎದೆಯ ಕೂಗಿಗೆ ಬೆಲೆಕೊಟ್ಟು ಸಿದ್ದಸೂತ್ರಗಳನ್ನು ದಾಟಿ ತಮ್ಮದೇ ಹಾದಿಯಲ್ಲಿ ಹೊಸದಾರಿ ಕೊರೆದವರೇ ಆಗಿರುತ್ತಾರೆ .ಉಸಿರು ಕಟ್ಟಿದ ಯಾವೋದು ವಿಷಮ ಘಳಿಗೆಯಲ್ಲಿ, ಮನೆಬಿಟ್ಟು ಬಂದ ಚಿಕ್ಕ ಹುಡುಗ ಹೋಟೆಲಿನಲ್ಲಿ ಲೋಟ ತೊಳೆಯುತ್ತ ತೊಳೆಯುತ್ತಲೇ ಬದುಕಿನ ಪಾಠಗಳನ್ನು ತನ್ನದೇ ರೀತಿಯಲ್ಲಿ ಕಲಿತು ಮುಂದೊಂದು ದಿನ ಶ್ರೀಮಂತ ಹೋಟೆಲ್ ಉದ್ಯಮಿಯಾಗಿ ಹೊರಹೊಮ್ಮಿದ ಉದಾಹರಣೆಯಂತೆಯೇ ,
ಬೇರೆಯವರು ಹಾಕಿದ ನಿಯಮಗಳಿಗನುಸಾರ ಮಾರ್ಗದರ್ಶನದ ದಾರಿಯಲ್ಲಿ ಪೂರ್ವನಿರ್ಧಾರಿತ ವೇಗದಲ್ಲೇ ಯಶಸ್ವಿಯಾಗಿ ಸಾಗುತ್ತಿದ್ದವರು ದುತ್ತೆಂದು ಎದುರಾದ ಸಣ್ಣ ಎಡರುತೊಡರಿನ ತಿರುವಿಗೂ ಹೊಂದಿಸಲಾಗದೆ ಕುಸಿದು ಬಿದ್ದ ಉದಾಹರಣೆಗಳು ಇವೆ ..
ಅವಮಾನ,ಸೋಲು,ಸಣ್ಣ ಮಾತುಗಳನ್ನು ಚಾಲೆಂಜಿಂಗ್ ಆಗಿ sportive ಆಗಿ ತೆಗೆದುಕೊಂಡು ಜಯಿಸಿದವರಂತೆ , ಏಳಲಾಗದಷ್ಟು ಕುಸಿದು,ಖಿನ್ನತೆಗೆ ಸಿಲುಕಿ ಬಲಿಯಾದವರೂ ಇದ್ದಾರೆ…
ಅಂತವನೊಬ್ಬನಿದ್ದ ..ಅವನ ಪ್ರಕಾರ ಗಂಡ ಎಂದರೆ ವ್ಯಕ್ತಿಯಲ್ಲ..ಅಧಿಕಾರದ ಹುದ್ದೆ.
ಹೆಂಡತಿಯನ್ನು ಕೆಲಸಕ್ಕೆ ಕಳಿಸುವುದು ಹೆಚ್ಚುವರಿಯಾಗಿ ತಾನು ನೀಡಿದ ಸಾಮಾಜಿಕ ಸ್ವಾತಂತ್ರ್ಯ, ತವರು ಮನೆಗೆ ಹೋಗಿಬಂದರೆ ಅವಳಿಗೆ ದೊರೆತ ಸಾಂಸ್ಕೃತಿಕ ಸ್ವಾತಂತ್ರ್ಯ ಎನ್ನುವುದರಿಂದ ಹಿಡಿದು , ,ಒಳ್ಳೆಯ ಹೆಂಡತಿಯೆಂದರೆ ಗಂಡ ಹೇಳಿದ್ದನ್ನು ಚಾಚು ತಪ್ಪದೆ ಕೇಳಬೇಕು ಎನ್ನುವ ಒಪ್ಪಬೇಕಾದ ವಾದಗಳನ್ನು ಒಪ್ಪುವಂತೆ ಮಂಡಿಸುತ್ತ ಎಲ್ಲದಕ್ಕೂ ತರ್ಕವಿಟ್ಟಿರುತ್ತಿದ್ದ .ಎಷ್ಟರ ಮಟ್ಟಿಗೆ ಎಂದರೆ ಅವಳಿಗೆ ವ್ಯವಹಾರಿಕ ಜ್ಞಾನವಿಲ್ಲವಾದ್ದರಿಂದ ಏಟಿಎಂ ಕಾರ್ಡ್ನನ ತಾನೇ ಆಪರೇಟ್ ಮಾಡುವುದು, ದಂಪತಿಗಳಲ್ಲಿ ಮುಚ್ಚುಮರೆ ಇರಬಾರದೆನ್ನುವ ಕಾರಣಕ್ಕೆ ಗೆಳತಿಯರ ಪ್ರತಿ ಫೋನ್ ಕಾಲ್ ಗಳನ್ನೂ loudspeaker ಮೂಲಕ ಕದ್ದಾಲಿಸುವುದು , ಪ್ರತಿ ಉಡುಗೆತೊಡುಗೆ,ಭೋಜನ,ಮಾತುಕತೆ ತನ್ನ ಮೆಚ್ಚಿಗೆಗೆ ಇರುವುದಾದರಿಂದ ಎಲ್ಲವನ್ನು ತಾನೇ ನಿರ್ದೇಶಿಸುವುದು ಮಾಡುತ್ತೇನೆ , ಅವಳು ತನ್ನ ಖಾಸಗಿ ಆಸ್ತಿ ಅದರಲ್ಲೇನು ತಪ್ಪಿಲ್ಲ ಎನ್ನುವವರೆಗೂ ರೀಸನಿಂಗ್ ಮಾಡುತ್ತಿದ್ದ .ಸರಿ ತಪ್ಪುಗಳೆಲ್ಲವನ್ನು ನಿರ್ಣಯಿಸುವ ಬುದ್ದಿವಂತ ಮತ್ತು ಏಕಾಧಿಪತ್ಯದ ಹಕ್ಕುವಂತ ತಾನೆನ್ನುವ ಅತಿವಿಶ್ವಾಸ ಮತ್ತು ಸಂಬಂಧದಲ್ಲಿನ ಅಧಿಕಾರದ ಜಿಜ್ಞಾಸೆ ಅವನಲ್ಲಿ ಅದು ಎಷ್ಟಿತ್ತೆಂದರೆ,ಅವನಿಗೆ ಕೊಂಚ ಓರೇಯಾಗಿ ಕಂಡ ಸಣ್ಣ ವಿಷಯಕ್ಕೂ ಯಾವುದೇ ವ್ಯವಧಾನವಿಲ್ಲದೆ ಶಿಕ್ಷಿಸಿ,ಅಕ್ಷರಸಹ ಉಸಿರುಕಟ್ಟಿಸಿ ನರಳಿಸುವ ಹಿಟ್ಲರ್ ಆಗಿಬಿಡುತ್ತಿದ್ದ.ನೋವಾಗಬಹುದು ಎಂಬ ಕನಿಷ್ಠ ಕಾಳಜಿಯು ಅವನಲ್ಲಿರುತ್ತಿರಲಿಲ್ಲ .ಮರ್ಯಾದೆ, ಸಂಸಾರ ಎನ್ನುವುದು ಅವಳಿಗೆ ಮಾತ್ರ ಅನಿವಾರ್ಯವಾದ ಕಾರಣ ತಾನು ಹೇಗೆ ಬೇಕಾದರೂ ನಡೆಯಬಹುದು ಎನ್ನುವ ದಾರ್ಷ್ಯತನ ಅವನದ್ದು .ಎಲ್ಲದರ ಉದ್ದೇಶ ದುಡ್ಡಿನ ಹದ್ದುಬಸ್ತೆ ಆದರು ,ಸಂಸಾರ ಎಂದರೆ, ನಮ್ಮ ಮನೆಯ ಪದ್ಧತಿ ಎಂದರೆ ಇದೆ ಎನ್ನುವಷ್ಟು ಮುದ್ದಾದ ವಾದ ಮಂಡಿಸುತ್ತಿದ್ದವನ ರೀತಿಯನ್ನು ಅಲ್ಲಗಳೆದರೆ ,ವಿರೋಧಿಸಿದರೆ ಮುಲಾಜೆ ಕೊಡದಂತೆ ಜನರ ಸೇರಿಸಿ,ರಂಪಾಡಿಸಿ,ಕೀಳು ಆಪಾದನೆಗಳನ್ನು ಮಾಡಲು ಕೊಂಚವೂ ಹಿಂಜರಿಯಲಿಲ್ಲ . ಹೆಣ್ಣು ಎನ್ನುವುದನ್ನು ಪರಿಗಣಿಸದೆ ಹೆಂಡತಿಯನ್ನು ರಾತ್ರೋರಾತ್ರಿ ಮನೆಬಿಟ್ಟು ಕಳಿಸಲು ಹಿಂದೇಟು ಹಾಕುತ್ತಿರಲಿಲ್ಲ .

ಮತ್ತು dominating ವಿಷಯಗಳಿಗೆ ಬಂದರೆ ಮೊದಲ ಸ್ಥಾನ ಅತ್ತೆಯರಿಗೆ ಸಲ್ಲಬೇಕು.ಹೇಳೋದೆಲ್ಲಾ ಬಾಳು ಉದ್ದಾರವಾಗೋಕೆ , ಸಂಸ್ಕೃತಿ-ಸಂಪ್ರದಾಯದ ಪರಿಪಾಲನೆಗೆ , ಧರ್ಮ ಆಚರವಿಚಾರಗಳು ಅಡಿಗೆಗಳು ನಡೆದು ಬಂದಿರೋದು ತನ್ನಿಂದಲೇ ಎನ್ನುವುದನ್ನು ಅದೆಷ್ಟು ಬಲವಾಗಿ ನಂಬಿಕೊಂಡು ಪ್ರತಿಪಾಧಿಸುತ್ತಾರೆಂದರೆ ಅರಿಸಿನ ಪುಡಿಯಾದ ಮೇಲೆ ಈರುಳ್ಳಿ ಹಾಕದ್ದಿದ್ದರೆ ಚಿತ್ರಾನ್ನವಾಗೋಲ್ಲ ಅಂತ ಹಠ ಹಿಡಿದು ಕೂತುಬಿಡುತ್ತಾರೆ … ಸಂಸಾರದ ನೊಗ ಸಾಗಿಸೋ ಸಾರಥಿಯಂತೆ, ಸಾಹಸಿಯಂತೆ ಕಂಗೊಳಿಸುತ್ತಾ ಹೆಣ್ಣು -ಗೃಹಿಣಿ ಎಂದರೆ ತಾನು define ಮಾಡುತ್ತೇನೆ ಎನ್ನುತ್ತಿರುತ್ತಾರೆ . ಸಂಸಾರವೆಂದರೆ,ಯಜಮಾನಿಕೆಯೆಂದರೆ ಅಧಿಕಾರದ ಗದ್ದುಗೆ ,ರಾಜಕೀಯದ ಪೀಟ ಎನಿಸುವಂತೆ ಆಡಳಿತ ಮಾಡುತ್ತಲೇ ಹೋಗುತ್ತಾರೆ.ಹಬ್ಬ ಹರಿದಿನಗಳು ಬದುಕನ್ನು ಸಂಭ್ರಮಿಸೋಕೆ ಸಡಗರಿಸೋಕೆ ದೇವರನ್ನು ಧ್ಯಾನಿಸೋಕೆ ಇರುವ ನೆಪಗಳು ಎನ್ನುವುದನ್ನು ಮರೆತು ಶಕ್ತಿ ಕುಂದುವಷ್ಟು ಕಟ್ಟುನಿಟ್ಟು,ಪದ್ದತಿ ವಿಧಿವಿಧಾನಗಳನ್ನು ಹರವಿಕೊಂಡು ಕುಳಿತುಬಿಡುತ್ತಾರೆ ..ಮನೆಗೆಲಸದ ವಿಷಯಗಳಿಗೆ, ತನಗೆ ತಿಳಿಸದೇ ಎಲ್ಲಿಗೋ ಹೋದಳು ಎನ್ನುವಂತಹ ಕ್ಷುಲ್ಲಕ ಕಾರಣಗಳಿಗೆ ರಂಪಾಡಿಸೋ , ದಂಡಿಸೋ , ಅವಮಾನಿಸೋ ಕಡೆಗೆ ಮನೆಯಿಂದ ಹೊರಗೆ ಹಾಕೋ ಅತ್ತೆಯರು ಇದ್ದಾರೆ ಎಂದರೆ ಅದು ಸುಳ್ಳಲ್ಲ .
ಇನ್ನೊಬ್ಬರ ಅನುಭವದ ಸೋರೆಬುಡ್ಡಿ ಕಟ್ಟಿಕೊಂಡು ಈಜುವುದು ಆರಾಮ,ಸುಲಭ ಮತ್ತು ಭದ್ರತೆಯ ದೃಷ್ಟಿಯಿಂದ ಸಹಾಯಕರವಾಗಿಯೇ ಇರಬಹುದು.ಆದರೆ ಎಲ್ಲ ವಿಚಾರಗಳಿಗೂ ಅದು ಅನ್ವಯಿಸುತ್ತವ ? ಸಲಹೆ ಓಕೆ ಆದರೆ ಆದೇಶ ಮತ್ತು ಹಿಡಿತ?
ನಾವೇ ನಿರ್ಮಿಸಿದ ನಮ್ಮಿಂದಲೇ ಅದ ಸಮಾಜ ಕೂಡ ವಿವಿಧ ಜನರನ್ನು ವಿಧವಿಧವಾಗಿ ನೋಯಿಸುತ್ತಲೇ ಹೋಗುತ್ತದೆ .
ಅದರಲ್ಲೂ ಚಿಕ್ಕವಯಸಿನ ವಿಧವೆಯರು, ಗಂಡನಿಂದ ತ್ಯಜಿಸಲ್ಪಟ್ಟ ಹೆಣ್ಣುಮಕ್ಕಳು ಅನುಭವಿಸುವ ಭೀತಿ,ಮುಜುಗರ, ತಲ್ಲಣಗಳು ಅಷ್ಟಿಷ್ಟಲ್ಲ .ಯಾರೇನು ಅಂದುಕೊಳ್ಳುತ್ತಾರೋ,ಆಡಿಕೊಳ್ಳುತ್ತಾರೋ ಎನ್ನುವ ಧಾವಂತಕ್ಕೆ ಸಾತ್ವಿಕತೆಯನ್ನು ಹೆಜ್ಜೆ ಹೆಜ್ಜೆಗೂ ಪ್ರದರ್ಶನಕ್ಕಿಟ್ಟು, ಸಾಬೀತು ಪಡಿಸಬೇಕಾದಂತ ಅನಿವಾರ್ಯತೆಗೆ ಸಿಲುಕಿಕೊಂಡವರಂತೆ ತಮ್ಮನ್ನೇ ತಾವು ಬಳಳಿಸಿಕೊಳ್ಳುತ್ತಾರೆ. ನಾ ಕಂಡಂತೆ ಹಾಲು ಸೇವಿಸುವುದ ತ್ಯಜಿಸುವುದು , ಮಾಂಸಾಹಾರ ಸೇವನೆ ಬಿಡುವುದು,ಸ್ತ್ರೀ ಸಹಜ ಚೆಂದದ ಸೀರೆ ,ಅಲಂಕಾರದಂತ ಸಂಭ್ರಮಗಳಿಂದ ದೂರ ಉಳಿಯಿವುದು , ಪುರುಷರ ಆಜುಬಾಜಿನಿಂದ ದೂರ ಸರಿಯುವುದು ಜನರ ಕಣ್ಣನ್ನು ಬಾಯನ್ನು ತಣ್ಣಗಿರಿಸಲು ಅವರುಗಳು ಪಡುವ ಪರಿಪಾಟಲು …….ಸಾವಿರವಿರುವ ಆ ಹಾದಿಯ ಕಲ್ಲುಮುಳ್ಳು,ನಷ್ಟನರಳಿಕೆಗಳು ಅದನ್ನು ಸವಿಸುವ ಪ್ರತಿ ಹೆಣ್ಣಿಗೆ ಮಾತ್ರ ಪರಿಚಯವಿರುತ್ತವೆ .
ಆಸಕ್ತಿಯ ಕೋರ್ಸ್ ನ ಆಯ್ಕೆ ,ಇಷ್ಟದ ಉದ್ಯೋಗ , ಜೀವನ ಸಂಗಾತಿಯ ಆಯ್ಕೆಯಂತಹ ನಿರ್ಣಾಯಕ ನಿರ್ಧಾರಗಳ ಮಾಡುವ ಅವಕಾಶವನ್ನು ಅವರವರಿಗೆ ಬಿಟ್ಟುಕೊಡದೆ ,ಸ್ವಾತಂತ್ರ್ಯವನ್ನು ಒಪ್ಪದೇ, ತಾವೇ ಎಲ್ಲಾ ಬಲ್ಲವರು ಎನ್ನುವ ತಾತ್ಪರ್ಯ ಹಿಡಿದು ಎಮೋಷನಲ್ ಬ್ಲಾಕ್ಮೇಲ್ನಂತದ್ದು ನಡೆಸುವುದರಿಂದ ಹಿಡಿದು ,ಜೀವನದ ಅತಿ ಸಣ್ಣಸಣ್ಣ ವಿಷಯಗಳಾದ ಇಷ್ಟದ ನೃತ್ಯ ಪ್ರಕಾರ ,ಹಾಡುಗಾರಿಕೆ ಕಲಿಯುವುದು ,ಕೂದಲು ಕತ್ತರಿಸುವುದು,ಅದರಲ್ಲೂ ಹೆಣ್ಣುಮಕ್ಕಳು jeans ತೊಡುವುದು,ಗೆಳೆಯ ಗೆಳತಿಯರೊಂದಿಗೆ ಟ್ರಿಪ್ಗಳಿಗೆ ಹೋಗುವುದು , ಕೊಂಚ ಜೋರಾಗಿ ನಗುವುದು ,ಗಂಡು ಹುಡುಗರ ಜೊತೆ ಬೆರೆಯುವುದನ್ನು ಕ್ರೈಂನಂತೆ ಕಂಡು ಸಲ್ಲದೆಂದು ಕಟ್ಟಪ್ಪಣೆ ಮಾಡಿ,ದುಪ್ಪಟ್ಟವಿಲ್ಲದೆ ಹೊರಗೆ ಬಂದಿದ್ದಕ್ಕೆ ದುರದುರ ನೋಡಿ ಮುಜುಗರಕ್ಕೆ ಸಿಲುಕಿಸಿ ಇನ್ನು ಅಂತವೆಷ್ಟೊಂದು ಘಟನೆಗಳಲ್ಲಿ ನೋಯಿಸಿ , ಅವುಗಳಲ್ಲಿ ಹುಟ್ಟಬಹುದಾಗಿದ್ದ ಅವೆಷ್ಟೋ ಸಣ್ಣಪುಟ್ಟ ಸಂತೋಷದ ಕ್ಷಣಗಳನ್ನು ಕೊಂದೇಬಿಟ್ಟಿರುತ್ತಾರೆ.
ಪರಂಪರಾಗತವಾಗಿ ನಾಗರೀಕತೆ ಮತ್ತು ಸಂಸ್ಕೃತಿ ರಚಿಸಿರುವ ಚೌಕ್ಕಟ್ಟಿನಲ್ಲಿ, ಸಮಾಜಿಕ ಮತ್ತು ಸಾಂಸಾರಿಕ ಹಿನ್ನಲೆಯಲ್ಲಿ ಬದುಕಬೇಕಿರುವ ನಾವು ಸಂಭಂದಗಳನ್ನು ದಿಕ್ಕರಿಸಿ ಕಡಿದುಕೊಂಡು ಹೊರಬರುವುದು, ತುಂಡರಿಸುವುದು ಅಷ್ಟು ಸುಲಭವಲ್ಲ .ಹೊಂದಾಣಿಕೆ ಎನ್ನುವುದು ಒಂದು ಹಂತದವರೆಗೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ .ಆದರೆ ಈ ವ್ಯವಸ್ತೆಯ ಮಿತಿಗಳನ್ನೇ ಸ್ವಾರ್ಥ ಸಾಧನೆಗೆ , ದುಡ್ಡು ಲಾಭದ ದುರುದ್ದೇಶಕ್ಕೆ ಅಧಿಕಾರಶಾಹಿ, ಹಿಂಸಾತ್ಮಕ ಮನೋವೃತ್ತಿ ತಣಿಸಿಕೊಳ್ಳುವುದಕ್ಕೆ ಬಳಸತೊಡಗುವ ಜನರು ಮಾನವಕುಲದ ಮೂಲ ಸತ್ವವನ್ನೇ ಮರೆತುಬಿಟ್ಟಿರುತ್ತಾರೆ .
ದೇಶದೇಶಗಳ ನಡುವಿನ ಸಾಮರಸ್ಯ ,ಜಾತಿ ,ಧರ್ಮ, ಗಡಿಗಳ ಬಿಕ್ಕಟು ಬಗೆಹರಿಸಲಾಗದ ಸ್ಥಿತಿ ತಲುಪಿರುವಾಗ ಮನೆಯಲ್ಲೂ ಮನಸಲ್ಲೂ ಧೂಮು ಕಟ್ಟಿ ಹೊಗೆಯಾಡಿ ಬದುಕು ನರಕ ಸದೃಶ್ಯವಾದರೆ ?
ಸಮಾಜವೆಂದರೆ ದೊಡ್ಡ ತಕ್ಕಡಿ, ಮನೆಯೆಂದರೆ ಅದರ ಅರೆಪಾವು ಹಿಡಿ .ಗೋಡೆಗಳ ತಡಿಕೆ , ಮಾಡು ,ಕಿಟಕಿ ಬಾಗಿಲುಗಳಷ್ಟೇ ಮನೆಯನ್ನು ಕಟ್ಟುವುದಿಲ್ಲ . ಮನಸುಗಳನ್ನು ಬೆಚ್ಚಗಾಗಿಸಿ, ಭದ್ರವಾಗಿಸಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಾಯಕವಾಗಿ ಒದಗಬೇಕಾದ ಮೊದಲ ತಾಣ ಮನೆ . ಆದರೆ ಅದೇ ನಿರಂತರ ಶೋಷಣೆಯ, ಬಂಧನದ ಸ್ಥಾನವಾಗಿ ಮಾರ್ಪಟ್ಟರೆ? ಧರೆ ಹತ್ತಿ ಉರಿದೊಡೆ , ಹರನೆ ಎದ್ದು ಕೊಲ್ಲಲು ಬಂದೊಡೆ ಜೀವನ ಸಹನೀಯವಾಗಿ ಉಳಿಯಬಹುದೇ ?
ತಾರೆ ಜಮೀನ್ ಪರ್ ಸಿನಿಮಾದಲ್ಲಿ ಎಷ್ಟು ಚೆಂದದ ಸಂದೇಶವಿದೆ . ಪುಟ್ಟ ಹುಡುಗನ ವ್ಯಕ್ತಿತ್ವದ ಸಮಸ್ಯೆಯನ್ನು,ಕಲಿಕೆಯ ಮಿತಿಯನ್ನು ಅರಿಯದೇ ,ಅಣ್ಣನೊಂದಿಗೆ ಅವನನ್ನು ಹೋಲಿಸುತ್ತ ಪೋಷಕರೇ ಎಳೇ ಮನಸಿನ ಆತ್ಮವಿಶ್ವಾಸವನ್ನು ಕದಡುತ್ತಾ ಹೋಗುತ್ತಾರೆ . ಅರಳುವ ಮುನ್ನವೇ ಬಾಡಿಹೋಗಬಹುದಾದ ಹೂವನ್ನು ಅಮೀರ್ ನಂತಹ ಗುರು ಜತನದಿಂದ ಕಾಪಾಡುತ್ತಾನೆ .ಅದೇ ರೀತಿ ಮುನ್ನಾಭಾಯಿ ಸಿನಿಮಾದಲ್ಲಿ ಓದಿನ ಜ್ಞಾನದಿಂದ್ದಷ್ಟೇ ಅಲ್ಲದೆ ಪ್ರೀತಿ ವಿಶ್ವಾಸ ಮಾನವೀಯ ನಡವಳಿಕೆಗಳಲ್ಲಿ ಎಷ್ಟೋ ಜನರ ಖಾಯಿಲೆಗೆ ,ಬಗೆಹರಿಸಲಾರದ ಸಮಸ್ಯೆಗೆ ಔಷಧವಾಗಬಹುದೆಂದು ತೋರಿಸುತ್ತಾರೆ .
ಔಷದವೇ ಇಲ್ಲದ ಒಂದು ಮಾರಣಾಂತಿಕ ಖಾಯಿಲೆ , ಅಪಘಾತ,ನೈಸರ್ಗಿಕ ಅವಘಡ , ಹೊರ ಪ್ರಪಂಚದ ರಾಜಕೀಯ ,ಸ್ವಾರ್ಥ , ಮೋಸ, ಸ್ಪರ್ಧೆ,ಈರ್ಷೆ –ಎಷ್ಟೆಲ್ಲಾ ಕೈ ಮೀರಿದ,ನಮ್ಮ ಹಿಡಿತಕ್ಕೆ ಸಿಗದ ಸಮಸ್ಯೆಗಳಿವೆ..ವಿಶ್ಲೇಷಿಸಿದರೆ ಬದುಕಿನ ಎದುರು ನಾವು ಕ್ಷುಲ್ಲಕ ತೃಣ ಸಮಾನರು ಎನಿಸಿಬಿಡುತ್ತದೆ .ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ಧ್ವನಿಗೂ ಮಿಗಿಲು ಶಾಸ್ತ್ರವಿಹುದೆನು , ಎಂದೋ ಮನು ಬರೆದಿಟ್ಟಿದಿಂದೆಮಗೆ ಕಟ್ಟೇನು , ನಿನ್ನೆದೆಯ ದನಿಯ ಋಷಿ ಮನು ನಿನಗೆ ನೀನು ಎನ್ನುತ್ತದೆ ಕುವೆಂಪು ವಾಣಿ . ವ್ಯಕ್ತಿಗತ ಸ್ವಾತಂತ್ರ್ಯವಿರದ,ಅವಕಾಶವಿರದ ಮನುಷ್ಯನ ಬಳಿ ಅದೆಷ್ಟೇ ದುಡ್ಡು ಆಸ್ತಿ ಇದ್ದರು ಚಿನ್ನದ ಪಂಜರದಂತೆ.ಎಂತ ಸಂಬಂಧವೂ ಸ್ಪೇಸ್ ಇಟ್ಟುಕೊಳ್ಳದೆ ಸ್ವಾಸ್ತ್ಯವಾಗಿರಲು ಸಾಧ್ಯವಿಲ್ಲ .ಸಣ್ಣಪುಟ್ಟ ಅಚಾತುರ್ಯಗಳು ಎಲ್ಲರಿಂದಲೂ ನಡೆಯುತ್ತಲೇ ಇರುತ್ತವೆ ಆದರೆ ಹಿಂಸೆ ಎನಿಸುವ ಮಟ್ಟಕ್ಕೆ ಇನ್ನೊಬ್ಬರ ಬದುಕಿನ ಕ್ಷಣಗಳನ್ನು ಕಸಿಯಲು ಹೋಗಬಾರದಷ್ಟೇ.
ನಾವ್ಯಾರು ಇಲ್ಲಿ ಪರಿಪೂರ್ಣರಲ್ಲ…ನನಗಾಗಿ ಎಷ್ಟು ಆಸ್ತಿ ಮಾಡಿಕೊಟ್ಟಿದ್ದೀಯ ಎಂದು ಪ್ರಶ್ನಿಸಿ ತಂದೆಯನ್ನು ನೋಯಿಸಿದವರೇ , ಎಂದೋ ಒಂದು ದಿನ ಅಡಿಗೆ ಹದ ತಪ್ಪಿದ್ದಕ್ಕೆ ಅಮ್ಮನ ಮೇಲೆ ಹರಿಹಾಯ್ದವರೆ , ಒಡಹುಟ್ಟಿದವರನ್ನು ಗೋಳಾಡಿಸಿಕೊಂಡವರೆ.. .ನಮ್ಮ ಜೀವನದ ದಾರಿಯ ಅವಕಾಶಗಳು, ವಿಸ್ತಾರಗಳು ಇನ್ನೊಬ್ಬರ ಜೀವನಕ್ಕೂ ಅನ್ವಯಿಸುತ್ತವೆ ಎನ್ನುವುದೇ ಸುಳ್ಳು .ಎಲ್ಲರಿಗು ಇರುವುದು ಒಂದೇ ಬಾಲ್ಯ, ಒಂದೇ ಯವ್ವನ, ಒಂದೇ ಮುಪ್ಪು, ಒಂದೇ ಬದುಕು….ಸಹಕಾರ ಮತ್ತು ಸಹಾಯ ಒಬ್ಬ ಮನುಷ್ಯ ಇನ್ನೊಬ್ಬನ ಬಾಳಿಗೆ ನೀಡಬಹುದಾದ ಕೊಡುಗೆ .ಮೊದಲನೆಯ ಸಂಬಳದಲ್ಲಿ ನೀಡಿದ ಉಡುಗೊರೆಗೆ ಅಪ್ಪನ ಕಣ್ಣಲ್ಲಿ ಮೂಡಿದ ಮಿಂಚು, ಕೆಲಸದ ಮಧ್ಯೆ ಫೋನ್ ಮಾಡಿ ಇವತ್ತಿನ ತಿಂಡಿ ಎಷ್ಟು ಅದ್ಬುತವಾಗಿತ್ತು ಗೊತ್ತಾ ಎಂದಾಗ ಅಮ್ಮ ಗದ್ಗದಿತವಾಗಿ ನಿಜವಾಗಲೂನ ಅಂತಂದ್ದಾಗ, ಅವರೊಂದಿಗೆ ನಮಗೂ ಸಿಗುವ ಸಂತೋಷ ಬದುಕುವ ರೀತಿಯನ್ನು ಕಲಿಸಬೇಕು .ಮನೆಯನ್ನು ಮನಸನ್ನು ಬೆಚ್ಚಗಾಗಿಸಬೇಕು .
ಒಂದು ಅದ್ಭುತ ಕತೆಯಿದೆ .ಸತ್ತ ಮನುಷ್ಯನೊಬ್ಬನನ್ನು ಕರೆದೊಯ್ಯಲು ದೇವರು ಬರುತ್ತಾನೆ .ಅವನ ಕೈಯಲ್ಲಿ ಪೆಟ್ಟಿಗೆ ಇರುತ್ತದೇ .ಚಕಿತನಾದ ಮನುಷ್ಯ ಅದರಲ್ಲಿರುವುದು ನನ್ನ ವಸ್ತು , ಬಟ್ಟೆ, ದುಡ್ಡು ಏನು ಎಂದು ಕೇಳಿದಾಗ ಅವೆಲ್ಲ ನಿನಗೆ ಸೇರಿದವಲ್ಲ ಭೂಮಿಗೆ ಸೇರಿದ್ದು ಎನ್ನುತ್ತಾನೆ ದೇವರು .ಹಾಗಿದ್ದರೆ ಅದರಲ್ಲಿರುವುದು ನೆನಪುಗಳು ಇರಬೇಕು ಎಂದಾಗ , ಅವು ಸಮಯಕ್ಕೆ ಸೇರಿದ್ದು ಎನ್ನುತ್ತಾನೆ .ನನ್ನ ಪ್ರತಿಬೆ? ಅದು ಸನ್ನಿವೇಶಕ್ಕೆ ಸೇರಿದ್ದು , ಸ್ನೇಹಿತರು ಸಂಭಂಧಿಗಳು? ಬದುಕಿನ ದಾರಿಗೆ ಸಿಕ್ಕವರು , ಹೆಂಡತಿ ಮಕ್ಕಳು? ಹೃದಯಕ್ಕೆ ಸೇರಿದ್ದು , ನನ್ನ ದೇಹ? ಧೂಳಿಗೆ ಸೇರಿದ್ದು ,ಆತ್ಮ ? ಅದು ದೇವರಾದ ನನ್ನದು..ಹಾಗಿದ್ದರೆ ಅದರಲ್ಲೇನಿದೆ ಎಂದಾಗ ಖಾಲಿ !!!ಹಾಗಾದರೆ ನನ್ನವು ಎಂದು ಯಾವುದು ಇಲ್ಲವೆ ಇಲ್ಲವ ಎಂದಾಗ, ನೀ ಬದುಕಿದ ಕ್ಷಣಗಳು ಮಾತ್ರ ನಿನ್ನದಾಗಿದ್ದವು , ಕ್ಷಣಿಕ ಬದುಕು ಎನ್ನುತಾನೆ ದೇವರು .ಮತ್ತೊಂದು ಅದ್ಭುತ ಮೆಸೇಜ್- ಎಂದೋ ನೀನು ಆಫೀಸ್ ನಲ್ಲಿ ಎಷ್ಟು ಚೆನ್ನಾಗಿ ಸೆಮಿನಾರ್ ಕೊಟ್ಟಿದ್ದೆ ಎಂದು ನೀ ಸತ್ತ ದಿನದಂದು ಯಾರು ನೆನಪಿಟ್ಟಿರುವುದಿಲ್ಲ.ಹೇಗೆ ಮತ್ತು ಎಷ್ಟು ಸಂತೋಷದಿಂದ ಬದುಕಿದೆ, ಜೊತೆಯವರನ್ನು ಬಾಳಗೊಡಿಸಿದೆ ಎಂದಷ್ಟೇ ನೆನೆಯುತ್ತಾರೆ ಎನ್ನುತ್ತದೆ .ಹಾಗಿರುವಾಗ ಜೊತೆ ಬಾಳಬೇಕಾದವರ ಕ್ಷಣಗಳನ್ನು ಮಲಿನಗೊಳಿಸುವ,ಉಸಿರುಗಟ್ಟಿಸುವ, ಕಿತ್ತುಕೊಳ್ಳುವ ಹಕ್ಕು ನಮಗಿದೆಯ ?
 

‍ಲೇಖಕರು G

11 September, 2014

9 Comments

  1. Sandhya, Secunderabad

    Hemalatha Avare,
    Baraha – bahala chennagi moodi bandide. Sookshma vishyavannu aaptavaagi barediddiri. Nimma baraha oodta oodta nanage naage bahala sala kelikonda prashnegale allava ivella anta annistu.

  2. Naveen GK

    ಅದ್ಭುತ ಮನಸ್ಸಿನ ಕನ್ನಡಿ,,,,,,, ಹೆಣ್ಣೊಬ್ಬಳ ಭಾವಗಳ ಹೊಳೆಯಲ್ಲಿ ಅದೆಷ್ಟು ತೊಳಲಾಟಗಳು, ಅಬ್ಬಾ,,,, ಬರಿಯ ಬರಹ ಎಂದು ಸುಮ್ಮನಿರಲಾಗದು,,,,,, ಬಹಳಷ್ಟು ಯೋಚಿಸುವುದಿದೆ,,,,

  3. Jayashree B kadri

    Excellent article madam. brought tears to my eyes

  4. vasanthn

    Good one.

  5. Roopa Shree. K

    Amazing article. A mirror to the society & somewhere the gap, challenges faced by two generations. Very neatly articulated hema, I liked it, keep up da good work. Looking forward for more articles…

  6. vidyashankar

    Good writing Hema! ‘Not just live but also let live’ should be the policy

  7. hema

    Well said vidyashankar.
    Thanks Roopa and vasanth.
    Jayashree i emphasize your tears. Naveen, i am glad if it has provoked the thought.Snadhya…houdu saavira jignaasegalu namma kautambika vyavasteyalli.
    thanks jayashree, naveen and sandhya for liking and appreciating the article.I am greatfull to u all for the encouragement

  8. Ranganath K H

    ಲೇಖನ ತುಂಬಾ ಇಷ್ಟವಾಯಿತು.

  9. hema

    Thanks ranganath

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading