ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೊತೆ ಜೊತೆಯಲಿ ಇದೊಂದು ಜೊತೆ…

ರಾಜಕುಮಾರ ಮಡಿವಾಳರ

ಮೆಜೆಸ್ಟಿಕ್:
ನಸುನಸುಕು ೫-೩೦ರ ಸಮಯ, ಪ್ಲ್ಯಾಟ್ ಫಾರ್ಮ್ ನಂಬರ್ ೧೩ರ ಕಪ್ಪು ನುಣ್ಣನೆ ಕಲ್ಲು ಬೆಂಚು, ಮನ ಮೆಚ್ಚಿದ ಹುಡುಗಿ ಸಿನಿಮಾದ ಸುಧಾರಾಣಿಯಷ್ಟೇ ಬೆಳ್ಳಗಿನ ತೆಳ್ಳಗಿನ ಹುಡುಗಿ. ಮತ್ತದೇ ಸಿನಿಮಾದ ನಾಯಕನಷ್ಟೇ ಒರಟು ಕಪ್ಪು ಹುಡುಗ. ಊರು, ತವರು ತನ್ನವರನೆಲ್ಲ ತೊರೆದು ಬೆಂಗಳೂರ ಮಡಿಲಲ್ಲಿ ಬದುಕು ಹುಡುಕುವರಲ್ಲಿ ಇವರೇನು ಮೊದಲಿಗರಲ್ಲ! ಅದೇನೋ ಆಚೀಚೆ ಓಡಾಡಿದಂತೆ ಮಾಡಿ, ಜೀನ್ಸ್ ಪ್ಯಾಂಟಿನ ಟೈಟು ಜೋಬಿಗೆ ಕೈ ತುರುಕಿದವನೇ ತಗೋ ಎಂದು ಆ ಸುಧಾರಾಣಿಯಂತ ಚೆಲುವೆಯ ಕೈಯಲ್ಲಿ ತಾಳಿ ಇತ್ತು ಕಟ್ಟಿಕೋ ಅಂದ ಭೂಪ!

ಹುಡುಗಿ ಹೆದರಿದಳಾದರೂ,  ವಿಧಿಯಿಲ್ಲದೇ ಅನ್ನುವ ಹಾಗೆ ಕಟ್ಟಿಕೊಂಡಳು. ಆ ದುಗುಡದ ಮುಖ ನೋಡಿ ಹುಡುಗ ನೋಡು ತಾಳಿ ತಂತಿ ಇವೆಲ್ಲ ನಂಬಿಕೊಂಡು ಬಂದ ಪದ್ಧತಿ, ಹುಡುಗ ಕಟ್ಟಬೇಕು, ಹುಡುಗಿ ಕುತಗಿ ಒಡ್ಡ ಬೇಕು ಇವು ನಿಯಮ, ಆದರ ನಿನ ಕಟಗೊಂದರ ಆಗು ಹಾನಿ ಏನಿಲ್ಲ, ಇಲ್ಲಿ ತನ ನಂಬಿ ಬಂದಿ ಆ ನಂಬಿಕಿ ಇಟ್ಟಿರು ಸಾಕು, ಬದುಕು ಪೂರ್ತಿ ಆ ನಂಬಿಕಿ ಉಳಿಸಿಕೊಳ್ಳಾಕ ಅಂತನ ಬದುಕಿ ಬಿಡ್ತೆನಿ. ಬ್ಯಾರೆ ಗುರಿ ಯಾಕ? ಈ ವಿಚಿತ್ರ ಮಾತು ಮುಗಿವ ಹೊತ್ತಿಗೆ ಅವರಿಬ್ಬರೂ ಹೋಗಬೇಕಾದಲ್ಲಿಗೆ ಒಯ್ಯುವ ಬಸ್ಸು ಬಂತು. ಒಂದು ಸಣ್ಣ ಪ್ರಯಾಣ.

ಬಸ್ಸು ಇಳಿದು ಅದು ಗಂಗಾನಗರದಿಂದ ಆರ್ ಟಿ ನಗರ ಕಡೆಗೆ ಹೊರಡುವ ದಾರಿ, ಹತ್ತರಿಂದ ಹದಿನೈದು ಹೆಜ್ಜೆ ಇಟ್ಟಿರಬೇಕು ಸುಧಾರಣಿಯಂತ ಹುಡುಗಿ ಇದ್ದಕ್ಕಿದ್ದಂತೆ ನೆಲಕ್ಕೆ ಬಗ್ಗಿದಳು, ಹುಡುಗು ಹೆದರಿದವನೇ ಏನಾಯ್ತು ಅನ್ನುವ ಹಾಗೆ ಅವಳ ರಟ್ಟೆ ಹಿಡಿದು ತಾನು ಬಗ್ಗಿದ. ಅಂತದ್ದೇನೂ ಆಗಿರಲಿಲ್ಲ ಹುಡುಗಿಯ ಚಪ್ಪಲಿಯ ಉಂಗುಷ್ಟ ನಡೆಯಲು ಬಾರದಂತೆ ಅಕರಾಳವಾಗಿ ಕಿತ್ತಿತ್ತು. ಹುಡುಗನ ಜೋಬಲ್ಲಿ ಬಸ್ಸಿನ ಟಿಕೇಟು ಬಿಟ್ಟರೆ ಇದ್ದದ್ದು ೩೪ ರೂಪಾಯಿ!

ಹಾದಿ ಬದಲಾಯಿತು ಆರ್ ಟಿ ನಗರ ದಾರಿ ಬಿಟ್ಟು ಆ ಕಡೆ ಸಂಜಯನಗರಕ್ಕೆ ಲಿಂಕ್ ಕೊಡಬಲ್ಲ ಕಾಲುದಾರಿಯ ಕಡೆಗೆ ಹೊರಳಿ ತುಸು ಮುಂದೆ ಸಾಗುತಿದ್ದರೆ ಬಲಗಡೆಗೆ ಬಂಗಾರದಂಗಡಿ! ಹುಡುಗಿ ಹಿಡಿದುಕೊಂಡ ಹುಡುಗನ ಕಿರುಬೆರಳ ನಂತರದ ಬೆರಳಲ್ಲಿ SSLC ಪಾಸಾದಾಗ ಅಪ್ಪ ಕೊಡಿಸಿದ ಉಂಗುರ. ೨೮೦೦ ರೂಪಾಯಿ ಬೆಲೆ ಬಾಳುವ ಉಂಗುರ… ಕೈ ಬೆರಳ ಅಂದ ಹೆಚ್ಚಿಸುವ ಉಂಗುರಕ್ಕಿಂತ ಅವಳ ಪಾದದ ಚೆಂದ ಸಂರಕ್ಷಿಸುವ ಚಪ್ಪಲಿ ಆಗಿನ ತುರ್ತು ಅನಿಸಿ ಬಂಗಾರ ಅನ್ನುವದನ್ನೂ ಮರ್ತು!

೯೦೦ ರೂಪಾಯಿಗೆ ಮಾರಿ ಕೊಂಡುಕೊಂಡಿದ್ದು ಚಿತ್ರ-ಚಿತ್ತಾರದ ಕೆಂಪು ಬಣ್ಣದ ಒಂದು ಜೊತೆ ಚಪ್ಪಲಿ! ಸುಧಾರಾಣಿಯಂತವಳಿಗೆ ಒಂದು ಜೊತೆ ಚಪ್ಪಲಿ. ಆ ಸುಧಾರಾಣಿಯಂತವಳ ಜೊತೆ ಈಗ ಬರೋಬ್ಬರಿ ೧೬ ವರ್ಷ ಕಳೆದಾಗಿದೆ ಆ ಶಿವರಾಜಕುಮಾರನಲ್ಲದ ಈ ರಾಜಕುಮಾರ.

‍ಲೇಖಕರು nalike

14 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading