ಊರುಗೋಲಿಲ್ಲದವರು
ಗೊರೂರು ಶಿವೇಶ್
ಊರಜಾತ್ರೆಗೆಂದು ಬಂದು
ಬಸ್ಸಿಳಿದೊಡನೆ ಎದುರಿಗೆರಾಚುವ
‘ಭಾವಪೂರ್ಣಶ್ರದ್ದಾಂಜಲಿ
ಮತ್ತು ಹುಟ್ಟಿ ಬಾ ಗೆಳೆಯ’
ಪ್ಲೆಕ್ಸಿನಲ್ಲಿ ಮುಖಗಳನ್ನು ಕಂಡೊಡನೆ
ಮನಮಿಡುಕಿ ನೆನಪುಗಳ ತಡಕುತ್ತದೆ.
ಜೊತೆಗೆ ಕ್ರಿಕೆಟ್ ಆಡಿದವನ
ವಿಕೆಟ್ ಈಗ ಬಿದ್ದಿದೆ.
ನಿಟ್ಟುಸಿರಿಟ್ಟು ಮುಂದೆ ಸಾಗಿದರೆ
ಹೆಗಲ ಮೇಲೆ ಕೈ ಹಾಕಿ ನಡೆದ
ಮತ್ತೊಬ್ಬ ಗಳೆಯ
ಬಾಗಿಲ ಓರೆ ಮಾಡುತ್ತಾನೆ.
ಹಿಂದೊಮ್ಮೆ ಅವನ ತಡೆದು ನಿಲ್ಲಿಸಿ
ಹಳೆಯ ನೆನಪುಗಳ ಕೆದಕಿದಾಗ ಹೇಳಿದ್ದ,
‘ನಿಂಗೆನಪ್ಪಊರುಬಿಟ್ಟೆ
ನಮ್ಮಜೀವನವಿಲ್ಲಿ ಮೂರಾಬಟ್ಟೆ’.
ನಿಜ, ಲಕ್ಷಎಕರೆಗೆ ನೀರುಣಿಸಿದ ಅಣೆಕಟ್ಟು
ದೀಪದ ಕೆಳಗೆ ಕತ್ತಲುಳಿಸಿದೆ.

ಇಲ್ಲಿರಲಾರದೆ,
ಅಲ್ಲಿಗೆ ಹೋಗಲಾರದೆ
ಮುಳುಗಡೆಯ ಹಣ, ನೆಲದ ನಿರೀಕ್ಷೆಯಲಿ
ಸೋನೆಮಳೆ, ಶೀತಗಾಳಿ, ಜಿನುಗುವನೆಲ
ಹಳೆಯ ಮನೆಯಲ್ಲಿಯೇ
ಕೊಳೆಯುತ್ತಿರುವವರಿಗೆ
ಭರವಸೆಯೆಂಬುದು ಬಾಗಿಲಾಚೆಯ ಬೆಳಕು.
ಊರು ಬಿಟ್ಟ ನನಗೆ ಅಕ್ಕಪಕ್ಕದವರೆಅಪರಿಚಿತರಾಗಿ
ಊರುಗೋಲುಗಳಿಲ್ಲದೆ ಬದುಕುತಿರುವುದ
ಹೇಳುವುದಾದರೂ ಹೇಗೆ ?
ಕಾಲದಕುಡುಗೋಲು
ಊರೊಳಗಿರುವವರ ಬೇರನ್ನು
ನಮ್ಮಂಥವರ ಕೊಂಬೆಗಳನ್ನು
ಸವರಿ ಮೋಟಾಗಿಸಿರುವುದನ್ನು
ತಿಳಿಸುವುದಾದರೂ ಹೇಗೆ ?
ಮಾದರಿಗ್ರಾಮವಾಗಿ
ಸುತ್ತಳ್ಳಿಗೆ ದೀಪವಾಗಿದ್ದಊರು,
ಇಂದು ದ್ವೀಪವಾಗಿ
ಪಳೆಯುಳಿಕೆಯಾಗಿರುವುದನ್ನು
ಪಡಿ ಮೂಡಿಸುವುದಾದರೂ ಹೇಗೆ ?
ಬಾಗಿಲೊಳಗಿನ ಅವನು
ಬಾಗಿಲಾಚೆಯ ನಾನು
ಹೊರಬರಲಾರದೆ
ಒಳಹೋಗಲಾರದೆ
ನಿಂತಲ್ಲಿಯೆ ನಿಂತಿದ್ದೇವೆ.






Good narration of feelings