ಮೂಲ – ಅಕ್ಷಸೂಕ್ತ, ಋಗ್ವೇದ, ೧೦ನೆಯ ಮಂಡಲ, ೩ನೆಯ ಅನುವಾದಕ,
೭ನೆಯ ಅಷ್ಟಕ, ೮ನೆಯ ಅಧ್ಯಾಯ, ೩೪ನೆಯ ಸೂಕ್ತ,-೧೪ ಋಕ್ಕುಗಳು.
ಋಷಿ – ಕವಷ ಐಲೂಷ
ಡಾ ಹೆಚ್ ವಿ ವೇಣುಗೋಪಾಲ್
(ವಿವರಣಾತ್ಮಕ ಸರಳಗನ್ನಡ ಅನುವಾದ)
ನನಗೆ ಪಗಡೆ ಆಡುವುದು ಅಂದರೆ ತುಂಬಾ ಇಷ್ಟ. ಪಗಡೆ ಹಾಸು, ಪಗಡೆ ದಾಳ, ದಾಳವನ್ನು ಎರಡೂ ಕೈಗಳಲ್ಲಿ ಉಜ್ಜಿ ಕೆಳಗುರುಳಿಸುವಾಗ, ಬಿಟ್ಟ ದಾಳವು ಪಗಡೆ ಹಾಸಿನ ಮೇಲೆ ವಯ್ಯಾರದಿಂದ ಹೊರಳಾಡುವಾಗ ಹೊರಡುವ ಶಬ್ದ, ನೋಡಲು, ಕೇಳಲು ನನಗೆ ಆನಂದ. ಅದು, ಆ ದಾಳಗಳ ಕುಲುಕುವ ಮೈ ಇಂದ ಹೊರಟ ಕಿಣಿ ಕಿಣಿ ಶಬ್ದ ದೊಡ್ಡ ದೊಡ್ಡ ಗುಡ್ಡಗಳ ಕೊರಕಲುಗಳಲ್ಲಿ ನುಸುಳಿ ಬರುವಾಗ ಕೇಳುವ ಜುಳು ಜುಳು ಝರಿಯ ಸದ್ದಿನ ನಾದದಂತೆ ಕೇಳಿಸುತ್ತದೆ.
ಆ ಶಬ್ದ ನನ್ನ ಕಿವಿಯಲ್ಲಿ ಗುಂಯ್ ಗುಡುವಾಗ ನನಗೆ ಸರೆ ಕುಡಿದಷ್ಟೇ ಮಹದಾನಂದ. ಆ ಶಬ್ದಗಳು ಜೂಜುಕೋರರನ್ನು ಪ್ರೀತಿಯಿಂದ ಎಚ್ಚರಿಸುತ್ತದೆ. ಜೂಜಿಗೆ ಬಂದು ಹಾಸಿನ ಮುಂದೆ ಕುಳಿತು ನಯವಾದ ಮರದ ತುಂಡಿನಲ್ಲಿ ಕೊರೆದು ಗುರುತು ಮಾಡಿದ ನಯಗಾರ ದಾಳಗಳನ್ನು ಎರಡೂ ಕೈಗಳಲ್ಲಿ ಹಿಡಿದು ಹೀಗೆ, ಹೀಗೆ ಮೇಲೆತ್ತಿ ತಿಕ್ಕಿ ತಿಕ್ಕಿ ಬಲಗೈಯಲ್ಲಿ ಗಟ್ಟಿಯಾಗಿ ಹಿಡಿದು ಕೆಳಗುರುಳಿಸುವಾಗ ಸಿಗುವ ಆನಂದ, ಆಹಾ ಹೇಗಿರುತ್ತದೆ ಎಂದಿರಾ, ಆ ಮೂಜವಾನ ಪರ್ವತದಲ್ಲಿಂದ ತಂದ ಸೋಮದ ಬಳ್ಳಿಯನ್ನು ಹಿಂಡಿ ತೆಗೆದ ರಸವನ್ನು ಕುಡಿದ ದೇವತೆಗಳ ಆನಂದದಂತೆಯೇ ಸರಿ. ಹೌದು ನಿಮ್ಮ ಊಹೆ ಸರಿ. ಇದು ಆಟದ ಮತ್ತೇರುವಿಕೆಯೇ ನಿಜ.
ಇದು ಮೋಜಿನ ಆಟ. ಈ ಆಟದ ಚಹರೆಯನ್ನು ವಿವರವಾಗಿ ತಿಳಿಸಿಕೊಡುತ್ತೇನೆ. ನಿಮಗೆಲ್ಲ ಗೊತ್ತಿರುತ್ತದೆ ಬಿಡಿ. ಆದರೂ ತಿಳುವಳಿಕೆ ಇಲ್ಲದ ಕೆಲವು ಅರಸಿಕ ಮಂದಿಯ ಜ್ಞಾನದಾನಾರ್ಥವಾಗಿ ತಿಳಿಸಿಬಿಡುತ್ತೇನೆ. ನನ್ನಂತೇ ತಿಳಿದವರುಗಳು ದಯಮಾಡಿ ಕೆಲ ಹೊತ್ತು ಸುಮ್ಮನಿದ್ದುಬಿಡಿ. ಈ ಪಗಡೆ ಆಟ, ನೀಳವಾದ ನಾಲ್ಕು ದಿಕ್ಕಿನ ಹಾಸುಗಳ ಮುಂದೆ ನಾಲ್ಕು ಜನ ಕುಳಿತು ಆಡಲು ಅವಕಾಶವಿದೆ. ಬಣ್ಣಬಣ್ಣದ ಪಗಡೆ ಹಾಸಿನ ಮೇಲೆ, ನಾಲ್ಕು ಬಣ್ಣಗಳ ಪಗಡೆ ಕಾಯಿಯನ್ನು ನಡೆಸುತ್ತಾ ಆಡುತ್ತಾರೆ.

ಉರುಳಿದ ದಾಳಗಳು ತೋರುವ ಗುರುತುಗಳ ಸಂಖ್ಯೆಯನ್ನು ಆಧರಿಸಿಯೇ ಕಾಯಿಗಳನ್ನು ನಡೆಸುವುದು. ಪಗಡೆಯನ್ನು ಐದರ ಆಟ, ಎಂಟರ ಆಟ, ಹತ್ತರ ಆಟ ಹನ್ನೆರಡರ ಆಟ ಎಂದು ನಾಲ್ಕು ಬಗೆಯಲ್ಲಿ ಆಡುತ್ತಾರೆ. ಅದಕ್ಕೆ ಬಳಸುವ ದಾಳಗಳನ್ನು ಮರ, ಮೂಳೆ, ದಂತಗಳಿಂದಲೂ ಮಾಡಿರುತ್ತಾರೆ. ಕೆಲವೊಮ್ಮೆ ಕವಡೆಗಳನ್ನೂ ಆಡಲು ಉಪಯೋಗಿಸುತ್ತಾರೆ. ಆದರೆ ಪಗಡೆದಾಳಗಳು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತವೆ. ಅವುಗಳು ಎರಡು ರೀತಿ ಇರುತ್ತವೆ.
ಚೌಕಾಕೃತಿಯ ೬ ಮುಖದ ದಾಳದಲ್ಲಿ ೪ ಮುಖಗಳಲ್ಲಿ ೧ ರಿಂದ ೬ ರವರೆಗಿನ ಸಂಖ್ಯೆಗಳನ್ನು ಯಾವುದೇ ವಿರುದ್ಧ ಮುಖದ ಅಂಕೆಗಳನ್ನು ಕೂಡಿದಾಗ ೭ ಬರುವಂತೆ ಕೆತ್ತಿರುತ್ತಾರೆ. ಆಯುತಾಕಾರದ ದಾಳಗಳು ೪ ಮುಖವುಳ್ಳದಾಗಿದ್ದು ೧ ಮತ್ತು ೬ ಸಂಖ್ಯೆಗಳ ಗುರುತುಗಳನ್ನು ಒಂದು ಜೋಡಿ ವಿರುದ್ಧ ಮುಖದಲ್ಲೂ, ೩ ಮತ್ತು ೪ ಸಂಖ್ಯೆಗಳ ಗುರುತುಗಳನ್ನು ಇನ್ನೊಂದು ಜೋಡಿ ಮುಖದಲ್ಲೂ ಕೆತ್ತಿರುತ್ತಾರೆ.
ಒಂದು ಆಟದಲ್ಲಿ ಎರೆಡು ದಾಳಗಳನ್ನು ಆಡಲು ಬಳಸುತ್ತಾರೆ. ಪಗಡೆ ಆಟದಲ್ಲಿ ಹೀಗಿರುವ ಎರಡೂ ದಾಳಗಳನ್ನು ಒಟ್ಟಿಗೆ ಉರುಳಿಸಿದಾಗ ಬಳುಕುತ್ತಾ ಹಾಯ್ದು ಒಂದೆಡೆ ನಿಂತಮೇಲೆ ಗುರುತಿನ ಸಂಖ್ಯೆಗಳ ಮೊತ್ತ ೧-೧ ಬಿದ್ದರೆ ದುಗ ಎಂದು, ೩-೩ ಬಿದ್ದರೆ ಇತ್ತಿಗ ಎಂದು, ೪-೪ ಎಂಟು ಎಂದು ಮತ್ತು ೬-೬ ಬಿದ್ದರೆ ಹನ್ನೆರಡು ಎಂದು ಕರೆಯುತ್ತಾರೆ. ಯಾರು ತಮ್ಮ ನಾಲ್ಕೂ ಪಗಡೆ ಕಾಯಿಗಳನ್ನು ನಾಲ್ಕೂ ದಿಕ್ಕಿನಲ್ಲಿ ನಡೆಸಿ ಹಾಸಿನ ಮಧ್ಯದಲ್ಲಿರುವ ದೊಡ್ಡಚೌಕವನ್ನು ಮೊದಲು ಸೇರಿಸುತ್ತಾರೆಯೋ ಅವರು ಗೆದ್ದಂತೆ.
ನಾನು ಪ್ರತಿ ದಿನ ಜೂಜಾಡುತ್ತೇನೆ. ಸಾಧ್ಯವಾದಗಲೆಲ್ಲ ಬೆಳಗಿನಿಂದ ಸಂಜೆಯವರೆಗೂ ಆದರೂ ಸರಿ. ನನಗೆ ಸಾಕೆನ್ನಿಸುವುದೇ ಇಲ್ಲ. ಹಾಗೆ ಆಡಿ ಆಡಿ ಬರಿದೇ ಕೈಯಲ್ಲಿ ನಾನು ಮನೆಗೆ ಹಿಂತಿರುಗುವ ಈ ಚಾಳಿಯನ್ನು ಕಂಡು ನನ್ನ ಹೆಂಡತಿ ನನ್ನ ಮೇಲೆ ಎಂದೂ ಕೋಪಿಸಿಕೊಂಡದ್ದೇ ನಾನು ಕಂಡಿಲ್ಲ. ‘ಜೂಜಾಡಲು ಹೋಗಬೇಡ’ ಎಂದು ನನ್ನೆದುರು ಒಂದು ಮಾತನ್ನೂ ಆಡುತ್ತಿರಲಿಲ್ಲ.
ನಮ್ಮ ಜೂಜಿನಕಟ್ಟೆಯ ಗೆಳೆಯರು ಅಂದರೆ ನನಗೆ ಅಚ್ಚುಮೆಚ್ಚು. ಅವರಿಗೂ ನನ್ನನ್ನು ಕಂಡರೆ ಎಣೆ ಇಲ್ಲದ ಪ್ರೀತಿ. ನಾನು ಆಟದಲ್ಲಿ ಗೆದ್ದಾಗಲೆಲ್ಲ ಗೆಳೆಯರನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದೆ. ಬಂದ ಅತಿಥಿಗಳನ್ನು ನನ್ನ ಹೆಂಡತಿ ಆದರಿಸಿ, ಸತ್ಕರಿಸಿ ತುಂಬಾ ಚೆನ್ನಾಗಿ ಉಪಚರಿಸುತ್ತಿದ್ದಳು. ನನಗೋ ಗೆಳೆಯರೆದುರು ಜಂಭ ಹೆಚ್ಚುತ್ತಿತ್ತು. ಜೂಜು ಒಂದು ಆಟವಷ್ಟೇ. ಈ ಆಟ ಒಬ್ಬರನ್ನು ಮಾತ್ರ ಗೆಲ್ಲಿಸುತ್ತದೆ. ಒಮ್ಮೆ ನಾನು ಒಮ್ಮೆ ಇನ್ನೊಬ್ಬ. ಇದು ತಿಳಿದರೂ ಸಹ ನಾನು ಈ ನನ್ನ ಪ್ರೀತಿಯ ಜೂಜಿನ ಆಟದ ಕಾರಣಕ್ಕಾಗಿ ನನ್ನ ಹೆಂಡತಿಯನ್ನೇ ಬಿಟ್ಟುಬಿಟ್ಟೆ.

ನನ್ನ ಅತ್ತೆ, ನನ್ನ ಹೆಂಡತಿಯ ಅಮ್ಮ, ಮನೆಗೆ ಹಿಂತಿರುಗಿದೊಡನೆಯೇ ನನ್ನನ್ನು ಮೂದಲಿಸುತ್ತಾಳೆ, ಗಂಡಸರಿಗೆ ಶೋಭೆ ತರದ ಶಬ್ದಗಳನ್ನೆಲ್ಲ ಬಳಸಿ ಬೈಯುತ್ತಾಳೆ. ಜೂಜಿಗಾಗಿ ಹಣವನ್ನು ಕೊಡೆಂದರೂ ನನ್ನ ಹೆಂಡತಿ ಕೊಡುವುದಿಲ್ಲ. ಜೂಜುಗಾರರುಗಳಿಗೆ ಎಲ್ಲರೂ ಹಾಗೇ ಮಾಡುತ್ತಾರೆ. ಒಬ್ಬರಿಗೂ ಜೂಜುಕೋರನ ಕೈಚಳಕದ ಮೇಲೆ ಅಭಿಮಾನವಿರಲಿ, ಅವನಮೇಲೆ ಕರುಣೆ, ಅನುಕಂಪ ಒಂದು ಚೂರೂ ಇರಲ್ಲ. ಇದ್ದ ದುಡ್ಡೆಲ್ಲ ಕಳೆದಮೇಲೆ ಮತ್ತೂ ಜೂಜಾಡಲು, ನನ್ನ ಕೈಚಳಕದ ಕಲಾವಂತಿಕೆಯನ್ನು ಪರೀಕ್ಷಿಸಲು ಎರವಲು ದುಡ್ಡುಕೊಡಲು ಯಾರೂ ಉದಾರಿಗಳಲ್ಲವಲ್ಲ. ಬಹು ಬೆಲೆಬಾಳುವ ಜಾತಿಯ ಕುದುರೆ ಬಗೆಗೂ ಹೀಗೇ ಸರಿ, ಅದು ಮುದಿಗೊಡ್ಡಾದರೆ ಅದಕ್ಕೆ ಬೆಲೆಬರುತ್ತದೆಯೇ, ನನ್ನ ಕೈಗಳು ಚುರುಕಾದವೇನೋ ಸರಿ ಆದರೆ ಅದೃಷ್ಟಕ್ಕೆ ಮುಪ್ಪು ಬಂದರೇನು ಮಾಡಲಾದೀತು. ಸುಖವು ಮರೀಚಿಕೆಯೇ ಅಲ್ಲವೇ?
ನಿಮಗೆ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಜೂಜಿನ ಆಟವು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಗೆಲ್ಲಿಸುತ್ತದೆ ಎಂದು ಆಗಲೇ ಹೇಳಿದೆನಲ್ಲ. ಹಾಗೆ ಆಟದಲ್ಲಿ ಕೆಳಗಾದವನ ಪಾಡು ಹೇಳತೀರದು. ಅವನನ್ನು ಹಂಗಿಸುತ್ತಾರೆ, ಅವಮಾನಿಸುತ್ತಾರೆ, ತಿರಸ್ಕಾರದಿಂದ ನೋಡುತ್ತಾರೆ, ಅವನ ಕುಟುಂಬವನ್ನೇ ಕೆಡೆಗಾಣಿಸುತ್ತಾರೆ, ಅಷ್ಟೇ ಅಲ್ಲ ಮೇಲುಗೈ ಆದವರು ಸೋತವನ ಹೆಂಡತಿಯನ್ನೂ ಹಿಡಿದೆಳೆದು ಹಿಂಸಿಸುತ್ತಾರೆ. ಅದು ಹಾಗಿರಲಿ, ಇನ್ನು ಸೋತವನ ತಂದೆ ತಾಯಿ ಅಣ್ಣ ತಮ್ಮ ತಂಗಿಯರು ಅವನ ಚಟವನ್ನು ನೋಡಿ, ಅವನ ದೈನ್ಯತೆಯನ್ನು ನೋಡಿ ತಾಳಲಾರದೇ ಅವನನ್ನು ತಮ್ಮವನಲ್ಲವೆಂದು ಹೇಳಿಬಿಡುತ್ತಾರೆ.
ಗೆದ್ದವರ ಆಟಾಟೋಪಕ್ಕೆ ಸಹಕರಿಸುತ್ತಾ ‘ಇವನು ನಮಗೆ ಸಂಬಂಧಿಸಿಯೇ ಇಲ್ಲ. ಇವನನ್ನು ಕಟ್ಟಿಹಾಕಿ, ಎಲ್ಲಿಗೆ ಬೇಕಾದರೂ ಒಯ್ಯಿರಿ, ಏನುಬೇಕಾದರೂ ಮಾಡಿಬಿಡಿ’ ಎಂದು ಹೇಳಿ ಅವನನ್ನು ಓಡಿಸಿಬಿಡಲೂ ಹಿಂಜರಿಯುವುದಿಲ್ಲ. ಈ ಚಟ ನನ್ನನ್ನು ಬಿಡಲೇ ಒಲ್ಲದು. ನನ್ನ ಬಗ್ಗೆಯೇ ನಾನು ತಿರಸ್ಕಾರದಿಂದ ನೋಡುವಂತೆ ಮಾಡುತ್ತದೆ. ಅದೇಷ್ಟೋ ಬಾರಿ ನಾನು ನನ್ನ ಮಿತ್ರರುಗಳ ಮುಂದೆಯೇ ಪ್ರತಿಜ್ಞೆಯನ್ನು ಮಾಡಿದ್ದೇನೆ- ‘ಇನ್ನು ನಾನು ದಾಳಗಳನ್ನು ಮುಟ್ಟುವುದಿಲ್ಲ, ಪಗಡೆ ಹಾಸಿನ ಎದುರು ಕೂರುವುದಿಲ್ಲ’ ಎಂದು ಹೇಳಿ ಬೀಸುಗಾಳಿಯಂತೆ ಎದ್ದುಹೊರನಡೆದಿದ್ದೇನೆ.
ಹೀಗೆ ಜೂಜನ್ನು ಬಿಟ್ಟುಬಿಡುವುದು ಬಹಳ ಸುಲಭ, ಇದುವರೆವಿಗೂ ಅದೆಷ್ಟೋಸಲ ಜೂಜನ್ನು ಖಂಡಿತ ಆಡುವುದಿಲ್ಲವೆಂದು, ಈ ನನ್ನ ಎರಡು ಕೈಗಳಲ್ಲಿ ದಾಳಗಳನ್ನು ಹಿಡಿಯುವುದಿಲ್ಲವೆಂದು ನಿರ್ಧರಿಸಿ ಬಿಟ್ಟುಬಿಟ್ಟಿದ್ದೇನೆ. ಇಷ್ಟು ಹೇಳಿದಮೇಲೆ ಇದನ್ನೂ ನಿಮಗೆ ಹೇಳಲೇಬೇಕು, ಅದೆಷ್ಟು ಮನೋಹರವಾದ ಶಬ್ದ ಅದು, ಕಿಣಿ ಕಿಣಿ ಶಬ್ದ.
ಹೀಗೇ ದಾರಿಯಲ್ಲಿ ಹೋಗುವಾಗ ಎಲ್ಲಿಯಾದರೂ ಯಾರಾದರೂ ಆ ಚಿನ್ನದ ಬಣ್ಣದ ದಾಳಗಳನ್ನು ಅಂಗೈಗಳ ನಡುವಿನಲ್ಲಿರಿಸಿ ಚಟಚಟ ಉಜ್ಜಿ ಕೆಳಗುರುಳಿಸುವ ಶಬ್ದ ತುಸುವೇ ಕೇಳಿಸಿದರೂ ಸಾಕು. ಸಾಕು ಸಾಕು. ಏನು ಹೇಳಲಿ, ಅದೇ, ನಿಮಗೆ ಗೊತ್ತಿಲ್ಲದೇ ಏನು, ಉತ್ಕಟ ಪ್ರೀತಿಯನ್ನು ಬಯಸಿ ಮಿಲನದಸುಖಕ್ಕಾಗಿ ಪರಸ್ಪರ ಹುಡುಕಿಕೊಂಡು ಹೋಗುವ ಕಾಮುಕ ಗಂಡು-ಹೆಣ್ಣಿನ ಮನಸ್ಸಿನಂತೆ ನನ್ನ ಮನಸ್ಸೂ ಅದೇ ಶಬ್ದದ ವಾಸನೆಯನ್ನು ಹಿಡಿದು ಅದು ಬಂದ ದಿಕ್ಕನ್ನು ಕಣ್ಣಿನಲ್ಲೇ ತಡಕುತ್ತಾ, ಕಾಲುಗಳು ಸಹಜಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಿ ಮೈಎಲ್ಲಾ ಕಣ್ಣಾಗಿ ನಿರುಕಿಸುತ್ತಾ ದಾಳಗಳ ಕುಣಿತದ ಆಟದ ಕಟ್ಟೆಯಲ್ಲಿ ಹೋಗಿ ಆತುರಾರುತವಾಗಿ ತಳವೂರಿಬಿಡುತ್ತೇನೆ. ಆಡುತ್ತಿರುವವರು ಯಾರಾದರೂ ಆಗಲಿ, ನನಗೊಂದು ಆಟ ಸಿಕ್ಕರೆ ಸಾಕಲ್ಲವೇ.

ಜೂಜುಕಟ್ಟೆಯಲ್ಲಿ ಕುಳಿತವನು ಧಡೂತಿ ಆಸಾಮಿ. ಅಗಲವಾದ ಭುಜದ, ಹೊಳೆವ ಕಣ್ಣುಗಳಿರುವ, ಮಾಂಸಲ ಶರೀರದ ಎತ್ತರದ ಆ ವ್ಯಕ್ತಿಯನ್ನು ನೋಡಿದೊಡನೆ ಅನುಮಾನದಿಂದಲೇ ಆಟದಲ್ಲಿ ಇವನಿಗೆ ಮಣ್ಣುಮುಕ್ಕಿಸಲು ಸಾಧ್ಯವೇ? ಎಂಬುದಾಗಿ ಎಣಿಸುತ್ತಾ ಗುಣಿಸುತ್ತಾ ಹಾಸಿನ ಎದುರು ನನ್ನಂತಹ ಜೂಜಿನ ಚಟದವನು ಕುಳಿತುಕೊಳ್ಳುತ್ತಾನೆ. ಆಟವು ಸಾಗಿದಂತೆ ತನ್ನ ಕೈಚಳಕದ ಸಾಮರ್ಥ್ಯವನ್ನು, ಸವಾಲಿಗೆ ಎದುರಾಗುವ ಧೈರ್ಯವನ್ನು ತೋರಿಸುವಾಗ, ಬೆರಳುಗಳ ಸಂದಿಯಿಂದ ನುಲಿಯುವ ದಾಳಗಳ ಮೋಹಕತೆಯು ಆಟದ ಚಟದ ಕಾಮನೆಯನ್ನು ಇಮ್ಮಡಿ, ಮುಮ್ಮಡಿಗೊಳಿಸುತ್ತವೆ.
ಆಡುತ್ತಾ ಆಡುತ್ತಾ ಕೈಚಳಕವು ನಂದುತ್ತಿರುವಂತೇ ಪಗಡೆ ದಾಳಗಳು ಲಂಗರುವಿನಂತೆ ಕೊಕ್ಕೆ ಸಿಕ್ಕಿಸುತ್ತಾ, ಇಕ್ಕಳಗಳಂತೆ ನಡುವೆ ಸಿಕ್ಕಿಸಿ ಹಿಂಡಿಬಿಡುತ್ತವೆ. ಮೈಬೆವರಿ, ನಾಲಗೆಯು ಒಣಗಿ ಕಣ್ಣುಗಳು ನೀರಾಡಿ ದೇಹ ತನ್ನಿಂತಾನೇ ಕುಗ್ಗಿ ಶರಣಾಗಿಬಿಡುತ್ತಾನೆ. ತನಗೂ, ಬದುಕಿಗಾಗಿ ತನ್ನನ್ನೇ ನಂಬಿಕೂತವರಿಗೂ ಏಕಕಾಲಕ್ಕೆ ದುಃಖದ ಬಿರುಗಾಳಿ ಬೀಸತೊಡಗುತ್ತದೆ. ಸೋಮ ಸವರಿದಂತೆ ಇರುವ ಈ ದುಷ್ಟ ದಾಳಗಳ ಪಕ್ಷಪಾತದಿಂದಾಗಿ ಗೆದ್ದವನಿಗೆ ಸಕಲೈಶ್ವರ್ಯಸಂತಾನಾಭಿವೃದ್ಧಿಯು ತಂತಾನೇ ಕೂಡಿಬರುತ್ತದೆ. ಸೋತು ಅಂಗಾತ ಬಿದ್ದವನ ಸಕಲವನ್ನೂ ಬಾಚಿಕೊಳ್ಳುವುದು ಮಾತ್ರವಲ್ಲ ಅವನ ಜೀವ ಘಾತಕವೂ ಆಗಿಬಿಡುತ್ತದೆ.
ದಾಳಗಳು ಮತ್ತು ಹಾಸುಮಣೆಗಳಿಗೆ ಸತ್ಯ ಧರ್ಮ ನಿಷ್ಟೆ ಇದೆ. ಎಂದೂ ಸುಳ್ಳನ್ನು ಹೇಳುವುದಿಲ್ಲ, ಎಲ್ಲರನ್ನೂ ಜಾಗೃತಿಗೊಳಿಸುವ ಆ ಸೂರ್ಯನಂತೆ ಐವತ್ತಮೂರು ಸಂಖ್ಯೆಯುಳ್ಳ ಈ ದಾಳಗಳ ಸಂಘವು ಹಾಸಿನ ಮೇಲೆ ಆಟವಾಡುತ್ತದೆ. ಇದರ ಮುಂದೆ ಕುಳಿತು ಕೈ ಬೆಚ್ಚಗೆ ಮಾಡಿಕೊಳ್ಳುವವನು ಅದೆಂಥಾ ಕ್ರೂರಿಯಾದರೂ ಕೋಪಿಸಿಕೊಂಡರೂ ಇವು ಹೆದರುವುದಿಲ್ಲ. ಆತ್ಮಶೀಲಸತ್ಯವಾಸಿಗಳಾದ ಇವುಗಳಿಗೆ ನಮಸ್ಕರಿಸದವನಾರು ಹೇಳಿ. ರಾಜನೋ ಮಹಾರಾಜನೋ ಯಾರಾದರಾಗಲೀ ದಾಳಗಳನ್ನು ಕೈಗೆತ್ತಿದೊಡನೆ ಅಂಗೈಯಲ್ಲಿ ಉಜ್ಜೆ ಮೇಲೆತ್ತಿ ಕಣ್ಣುಮುಚ್ಚಿ ಮನದಿಂಗಿತವನ್ನು ನೆನೆದು ಜಯವನ್ನು ಕೊಡು ಎಂದು ನಮಸ್ಕರಿಸದೇ ಇರಲಾರನು.
ಒಮ್ಮೆ ಕೈಎತ್ತಿ ಮುಗಿದು ಕಣ್ಮುಚ್ಚಿ ಹಿಡಿದು ಉರುಳಿಸಿದನೆಂದರೆ ಅವುಗಳು ಕಾಣಲು ಕೆಳಗಿರುತ್ತವೆ ನಿಜ, ಆದರೆ ಈ ಮಾಂತ್ರಿಕ ದಾಳಗಳು ಉರುಳುತ್ತಾ ಒಮ್ಮೆಲೆ ನಿಂತು ಕಾಣಿಸುವ ಸಂಖ್ಯೆಯು ಉರುಳಿಸಿದವನ ತಲೆಯ ಮೇಲೆಯೇ ಕೂತಂತೆ ಅವನ ಅದೃಷ್ಟವನ್ನು ನಿರ್ಧರಿಸುತ್ತವೆ. ಅವುಗಳಿಗೆ ಕೈಗಳಿಲ್ಲ, ನಿಜ, ಎರಡು ಚುರುಕು ಕೈಗಳನ್ನು ಹೊಂದಿರುವ ಜೂಜುಕೋರನನ್ನು ಇನ್ನಿಲ್ಲದಂತೆ ಅಣಕಿಸುತ್ತದೆ, ಪಮಾನಗೊಳಿಸುತ್ತದೆ.
ಮುಟ್ಟಿದರೆ ತಣ್ಣಗಿರುವ ಈ ದಾಳಗಳು ಅಂಗೈಯ್ಯಲ್ಲಿ ತೀಡಿ ಬಿಸಿಯಾಗಿ ಮೇಲಿನಿಂದ ಕೆಳಗುರುಳಿದರೆ ಆಕಾಶದಿಂದ ಬೀಳುವ ಕೆಂಡದುಂಡೆಗಳಂತೆ ಕಟ್ಟಿಗೆಗಳೇ ಇಲ್ಲದ ಪಗಡೆ ಹಾಸಿನಮೇಲೆ ಬಿದ್ದು ಹೊತ್ತಿ ಉರಿದು ಜೂಜುಕೋರನ ಹೃದಯವನ್ನು ಸುಡುತ್ತದೆ.
ಆಡುತ್ತಾ ಆಡುತ್ತಾ ಅದೃಷ್ಟ ಕೆಟ್ಟು ಸೋತು ಸುಣ್ಣವಾಗಿ, ಖಿನ್ನನಾಗಿ ದಿಕ್ಕು ದೆಸೆ ಇಲ್ಲದಂತೆ ತಿರುಗುತ್ತಾ ದಾರುಣವಾಗಿ ಜೀವಿಸುತ್ತಾನೆ. ಜೂಜಿನ ಮೋಹಕ್ಕೆ ಹೆಂಡತಿಯನ್ನು ಬಿಟ್ಟ ಕಾರಣ ದೂರಾದ ಹೆಂಡತಿಯೂ ಇವನ ದುರ್ಗತಿಯನ್ನು ಕಂಡು ಪರಿತಪಿಸುತ್ತಾಳೆ.
ಮನೆಗೆ ಬಾರದೇ ಗೊತ್ತು ಗುರಿ ಇಲ್ಲದೇ ಬೀದಿ ಬೀದಿ ಸುತ್ತುತ್ತಿರುವ ಮಗನನ್ನು ಕಂಡು ಅವನ ತಾಯಿಯೂ ದುಃಖಿಸುತ್ತಾಳೆ. ಆಡುತ್ತಾ ಆಡುತ್ತಾ ಸೋಲುತ್ತಾ ಸೋಲುತ್ತಾ ತನ್ನ ಹಣವನ್ನೆಲ್ಲ ಕಳೆದುಕೊಂಡಮೇಲೆ ಸಾಲಮಾಡಿ ಮತ್ತೆ ಆಡಿ ಸೋತು ವ್ಯಗ್ರನಾಗಿ ತಿರುಗಾಡುತ್ತಾನೆ. ಆಟಕ್ಕೆ, ಸಾಲಕ್ಕೆ ಹಣ ಹೊಂದಿಸಲು ಕಳ್ಳತನದಿಂದಾದರೂ ಪ್ರೀತಿಯ ಜೂಜಿನ ತೆಕ್ಕೆಯೊಳಗೆ ಬೀಳುವೆನೇನೋ ಎಂದು ರಾತ್ರಿಯಲ್ಲಿ ಅವರಿವರ ಮನೆಹೊಕ್ಕು ಸಿಕ್ಕಿಬಿದ್ದು ಅಪಮಾನಿತನಾಗುತ್ತಾನೆ.
ಈ ಪರಿ ಬದುಕು ಯಾರಿಗಾದರೂ ಸುಖ ನೆಮ್ಮದಿ ತಂದಿದೆಯೇ? ನೀವೇ ಹೇಳಿ. ಎಂದೂ ಜೂಜಾಡದವನು ತನ್ನ ಹೆಂಡತಿಯನ್ನು ಚೆನ್ನಾಗಿಟ್ಟಿರುತ್ತಾನೆ. ತನ್ನ ಮನೆಯನ್ನು ಸುಂದರವಾಗಿ ಅಲಂಕೃತವಾಗಿಟ್ಟಿರುತ್ತಾನೆ. ಜೂಜಾಡುವವನು ಇವೆಲ್ಲಾ ತನಗೆ ಮಾಡಲಾಗುವುದಿಲ್ಲವೇ ಎಂದು ಗೋಳಾಡುತ್ತಾನೆ. ಹಗಲೆಲ್ಲಾ ಆಡುತ್ತಾನೆ, ಅನಿವಾರ್ಯವಾಗಿ ಚಳಿಯನ್ನು ಕಳೆಯಲು ರಾತ್ರಿಯೆಲ್ಲಾ ಬೆಂಕಿಯ ಬಳಿ ಮಲಗುತ್ತಾನೆ. ಅವನಿಗೆ ಸುಖ ಅನುಭವಿಸಲು ಮನೆ ಎಲ್ಲಿ, ಮಡದಿ ಎಲ್ಲಿ, ಮಕ್ಕಳು ಬಂಧು ಬಾಂಧವರು ಎಲ್ಲಿ. ದಯನೀಯವಾಗಿ ಬದುಕುತ್ತಾನೆ.
ದಾಳರಾಜನಿಗೆ ನಮಸ್ಕಾರ. ಓ ಪಗಡೆ ದಾಳಗಳೇ ನಿಮ್ಮ ಸಂಘಕ್ಕೆ ಮಾಲೀಕನಾದವನಿಗೆ, ಜೂಜುಕಟ್ಟೆಯ ಒಡೆಯನಿಗೆ, ಅಲ್ಲಿನ ಸೇನಾಪತಿಗೆ, ಪ್ರಭುವಿಗೆ ಎಲ್ಲರಿಗೂ ಇಗೋ ಒಂದು ದೊಡ್ಡ ನಮಸ್ಕಾರ. ಇಗೋ ನಾನು ನಿಮ್ಮನ್ನು ಅಂತಿಮವಾಗಿ ತೊರೆಯುತ್ತಿದ್ದೇನೆ. ಮತ್ತೆ ಹಿಂದಿರುಗುವುದಿಲ್ಲ. ನಾನು ಈಗ ಹೇಳುತ್ತಿರುವುದನ್ನು ಗಮನವಿಟ್ಟು ಕೇಳಿ. ಇದು ಸತ್ಯ. ಸತ್ಯವಾಗಿಯೂ ಸಟೆಯಲ್ಲ. ಇನ್ನು ಮುಂದೆ ನಾನು ಮಾಯಕಾರ ಜೂಜಿನ ಆಟಕ್ಕಾಗಿ ಹಣಗಳಿಸುವುದಿಲ್ಲ. ಈ ಬೆಳ್ಳಂಬೆಳಿಗ್ಗೆ ಸೂರ್ಯನು ಹುಟ್ಟುವ ದಿಕ್ಕಿಗೆ ತಿರುಗಿ ನಿಂತು ಈ ನನ್ನ ಎರಡೂ ಕೈಗಳನ್ನು ಜೋಡಿಸಿ ಮೇಲೆತ್ತಿ ನಿಮ್ಮೆಲ್ಲರಿಗೂ ಕೊನೆಯದಾಗಿ ನಮಸ್ಕರಿಸುತ್ತೇನೆ.

ನನ್ನಂತೆ ಜೂಜಾಡುವ ಎಲ್ಲರಿಗೂ ನಾನು ಹೇಳುವುದಿಷ್ಟೇ. ಬಹಳ ಅನುಭವದಿಂದ ಈ ನನ್ನ ಮಾತನ್ನು ಆಡುತ್ತಿದ್ದೇನೆ. ನನ್ನನ್ನು ನಂಬಿ, ಗೌರವಿಸಿ, ಅದರಂತೆ ನಡೆದುಕೊಳ್ಳಿ. ದಾಳಗಳ ಮೋಸಕ್ಕೆ ಬೀಳಬೇಡಿ. ಜೂಜು ಕಟ್ಟೆಯವರ ಮೋಜಿನ ಮಾತುಗಳಿಗೆ ಬಲಿಯಾಗಬೇಡಿ. ಅದೃಷ್ಟ ಎಂಬುದು ಇರುವುದೇ ಇಲ್ಲ. ಯಶಸ್ಸಿಗೆ ಎಂದೂ ಕಿರುದಾರಿಗಳಿರುವುದಿಲ್ಲ. ಸಂಪತ್ತು ಸುಲಭದಿಂದ ದೊರೆಯಲಾರದು. ಜೂಜು ಹಾಳುಮಾಡುತ್ತದೆ. ವ್ಯವಸಾಯ ಕೈ ಹಿಡಿಯುತ್ತದೆ.
ಭೂಮಿಯನ್ನೇ ನಂಬಿ. ಉತ್ತು ಬಿತ್ತು ಬೆಳೆತೆಗೆಯಿರಿ. ಅದು ನಿಮ್ಮನ್ನು ಕೆಳಕ್ಕೆ ಬೀಳಿಸುವುದಿಲ್ಲ. ಅದು ನಿಮ್ಮನ್ನು ಮೇಲೆತ್ತಿ ಕೈ ಹಿಡಿದು ನಡೆಸುತ್ತದೆ. ಅಲ್ಲಿ ನಿರಾಳ ಬದುಕಿನ ಸೌಖ್ಯವನ್ನು ನೀವೇ ಕಾಣಿರಿ. ಅಲ್ಲಿ ಪಶುಗಳು ಇರುತ್ತವೆ. ಮಡದಿಯು ಇರುತ್ತಾಳೆ. ಮಕ್ಕಳು ಬಂಧುಬಾಂಧವರು ಇರುತ್ತಾರೆ. ಗೌರವ, ಆದರ, ಸತ್ಕಾರ, ಮರ್ಯಾದೆಗಳು ಉತ್ತರೀಯದಂತೆ ಹೆಗಲಮೇಲೇ ಕುಳಿತಿರುತ್ತವೆ. ಇದು ನನ್ನ ಮಾತಲ್ಲ, ಈ ಉಪದೇಶವನ್ನು ಆ ಸೂರ್ಯನು, ಜಗತ್ತನ್ನೆ ಜಾಗೃತಗೊಳಿಸುವವನು, ವಿಶ್ವದ ನೆತ್ತಿಯಲ್ಲಿ ನಿಂತು ಎಲ್ಲವನ್ನೂ ಆವರಿಸಿ ನಿರಂತರವಾಗಿ ನೋಡುವವನು ನನಗೆ ಹೇಳಿದನು. ಅದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ದಾಳಗಳನ್ನು ಹೊರಳಿಸಬೇಡಿ.
ನಿಮ್ಮ ಬದುಕನ್ನು ಹೊರಳಿಸಿ. ಹಸನು ಗೊಳಿಸಿ ಓ ನನ್ನ ಪ್ರೀತಿಯ ದಾಳಗಳೇ, ನಿಮ್ಮ ಸಾಮೀಪ್ಯ ನನಗೆ ಎಂದೆಂದಿಗೂ ಸಿಗದಿರಲಿ. ಹೀಗೆ ನಾನು ದೂರ ಹೋಗುತ್ತಿರುವೆನೆಂದು ನನ್ನ ಮೇಲೆ ಕೋಪಿಸಿಕೊಳ್ಳಬೇಡಿ. ನನ್ನನ್ನು ಗೆಳೆಯನನ್ನಾಗಿ ಮಾಡಿಕೊಳ್ಳಿ. ನನ್ನ ಶತ್ರುಗಳಿಗೆ ಮುಳುವಾಗಿ. ನಿಮ್ಮ ಕೋಪವನ್ನೆಲ್ಲ ಅವರ ಮೇಲೆ ಹಾಯಿಸಿಬಿಡಿ. ನಮ್ಮ ಶತ್ರುವು ನಿಮ್ಮ ಸುಂದರ ಬಣ್ಣಗಳಿಗೆ, ಸುಮಧುರ ಶಬ್ದಗಳಿಗೆ, ಮೋಹಕ ಬಂಧನಕ್ಕೆ ಬೇಗ ಸಿಲುಕುವಂತೆ ಮಾಡಿರಿ. ನಮ್ಮ ಬದುಕಿನಲ್ಲಿ ನಿಮ್ಮ ನೆರಳು ಇನ್ನೆಂದೂ ಬೀಳದಿರಲಿ. ನಮ್ಮನ್ನು ಸುಖವಾಗಿರಲು ಬಿಡಿ. ನಿಮಗೆ ನಮಸ್ಕಾರ.






0 Comments