ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಲ್ ಬಂದಿಗೆ ಸಾಥ್ ನೀಡಿದ ರಾಘವೇಂದ್ರ ಜೋಶಿ

ಈ ವಾರದ ಭಾರತಿ – ಸುನಿಲ್ ಜುಗಲ್ ಬಂದಿಯ ವಿಷಯ ’ನಾನು ಸಾಹಿತ್ಯದಲ್ಲಿ ಹುಡುಕುವುದು…’.  ಈ ಹಾದಿಯಲ್ಲಿನ ತಮ್ಮ ಪಯಣದ ಬಗ್ಗೆ ಲೇಖಕ ರಾಘವೇಂದ್ರ ಜೋಶಿ ಒಂದು ಚಂದದ ಲೇಖನ ಬರೆದು ಕಳಿಸಿದ್ದಾರೆ.  ಜುಗಲ್ ಬಂದಿಗೆ ಸಾಥಿಯಾಗಿ ಈ ಲೇಖನ :

ಯಾರೂ ಮುಟ್ಟದ ಕಾಡಿನ ದಾರಿ ಹುಡುಕುತ್ತಾ..

– ರಾಘವೇಂದ್ರ ಜೋಶಿ

Every man’s memory is his private literature.

-Aldous Huxley

ಸಾಹಿತ್ಯದಲ್ಲಿ ನಾನೇನು ಹುಡುಕುತ್ತೇನೆ?

ಇದೊಂದು ಗೋಸುಂಬೆಯಂತಹ ಪ್ರಶ್ನೆ. ನನ್ನ ಪ್ರೈಮರಿ,ಹೈಸ್ಕೂಲು ಮತ್ತು ಕಾಲೇಜಿನ ದಿನಗಳಿಂದ ಹಿಡಿದು ಇತ್ತೀಚಿನವರೆಗೂ ಆಯಾ ಕಾಲಘಟ್ಟಗಳಲ್ಲಿ ತನ್ನ ಬಣ್ಣವನ್ನು ಬದಲಿಸುತ್ತಲೇ ಬಂದಿರುವಂಥ ಪ್ರಶ್ನೆ. ಓದಿಸಿಕೊಳ್ಳಬಹುದಾದ ಎಲ್ಲ ಅಕ್ಷರಗಳನ್ನು ಸಾಹಿತ್ಯವೆಂದೇ ನಾನು ಭಾವಿಸುವದರಿಂದ ನನ್ನ ಸಾಹಿತ್ಯಿಕ ಅಗತ್ಯಗಳು ಕಾಲಕಾಲಕ್ಕೆ ಬದಲಾಗುತ್ತಲೇ ಬಂದಿವೆ. ಪ್ರೈಮರಿಯಲ್ಲಿ  ಕಾಮಿಕ್ಸ್ ಗಳನ್ನು ವಿಪರೀತ ಇಷ್ಟಪಡುತ್ತಿದ್ದ ನನಗೆ ಫ್ಯಾಂಟಮ್ ಸರ್ವಜ್ಞನಂತೆ ಕಂಡಿದ್ದ; ಮಾಂಡ್ರೇಕ್ ಮಹಾನ್ ಸಾಹಿತಿಯಂತೆ ಗೋಚರಿಸಿದ್ದ!

ಇವತ್ತಿನ ಮಟ್ಟಿಗೆ ಹೇಳುವದಾದರೆ, “ಅನುಭವಿಸದೇ ಬರೆಯಬೇಕೇ ಬೇಡವೇ?” ಎನ್ನುವಂಥ colliding ವಿವರಗಳನ್ನು ನಾನು ಅಷ್ಟಾಗಿ ತಲೆಗೆ ಹಚ್ಚಿಕೊಂಡಿಲ್ಲ. ಆದರೂ ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ಅನುಭವದ ಎರಕವೊಂದು ತನ್ನದೇ ಆದ ಕೊಡುಗೆ ನೀಡಬಲ್ಲದು ಎಂಬುದನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಹೀಗೆ ಯಾವುದೋ ಒಂದು ಸೂತ್ರ ಒಪ್ಪಿತವಾಗುವ ಘಳಿಗೆಯಲ್ಲೇ ಯಾರೋ ಬಂದು ನನ್ನ ಸೂತ್ರವನ್ನು ಧೂಳಿಪಟ ಮಾಡಿಬಿಡುತ್ತಾರೆ. ಈ ಮಲ್ಲಿನಾಘನೆಂಬ ಆಸಾಮಿಯನ್ನೇ ನೋಡಿ: ಈತ ತನ್ನ ಜೀವಮಾನದಲ್ಲೇ ಹೆಂಗಸರ ಸಂಗ ಮಾಡಲಿಲ್ಲ. ನಪುಂಸಕನೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡೇ ಜೀವಿಸಿದ.ಆದರೇನು? ಜಗತ್ತು ನಿಬ್ಬೆರಗಾಗುವಂಥ ‘ಕಾಮಸೂತ್ರ’ವನ್ನು ರಚಿಸಿಬಿಟ್ಟ! ಹಾಗೆ ‘..ಸೂತ್ರ’ವನ್ನು ರಚಿಸಿ ವಾತ್ಸಾಯನನೆಂದು ಖ್ಯಾತನಾದ ಈತ,ಅನುಭವ ಮತ್ತು ಅನುಭಾವಗಳೆಂಬ ಸಿಧ್ಧ ಸೂತ್ರಗಳನ್ನು ಗಾಳಿಗೆ ತೂರಿದವರಲ್ಲಿ ಮೊದಲಿಗನೇನೋ.

ಇಂಥ ತಲೆಕೆಳಗು ಮಾಡುವ ಅವಘಡ(?)ಗಳ ನಡುವೆಯೇ ನಾನು ಆತ್ಮಕತೆಗಳ ಬಗ್ಗೆ ಗಮನ ಹರಿಸುತ್ತಿದ್ದೇನೆ.ಹಾಗೆ ನೋಡಿದರೆ, ಸಾಹಿತ್ಯದ ಪ್ರಕಾರಗಳಲ್ಲಿ ನನಗೆ ತುಂಬ ಇಷ್ಟವಾಗುವ ಸಾಹಿತ್ಯವೆಂದರೆ ಆತ್ಮಕತೆಗಳು.ಇಲ್ಲೊಂದು ಸೂಕ್ಷ್ಮ ಗಮನಿಸಿ: ಒಂದು ಸಾಹಿತ್ಯ ನನ್ನ ಬದುಕನ್ನೇ ಬದಲಿಸಿತು ಅನ್ನುವ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆಯೇ ಹೊರತು,ಎಲ್ಲೋ ನೋಡಿದ ಒಂದು ಸಿನೆಮಾ,ಒಂದು ಡ್ಯಾನ್ಸು ಅಥವಾ ಒಂದು ಸರ್ಕಸ್ಸು ನನ್ನ ಬದುಕಿನ ಗತಿಯನ್ನೇ ಬದಲಿಸಿತು ಅಂತ ಹೇಳಿರುವ ದೃಷ್ಟಾಂತಗಳು ತುಂಬ ಕಡಿಮೆ.ಹೀಗಾಗಿ ಒಂದು ನಿಜವಾದ ಆತ್ಮಕತೆ ಓದುಗರಿಗೆ ಎರಡು ರೀತಿಯ ಸಾಕ್ಷಾತ್ಕಾರಗಳನ್ನು ಮಾಡಿಸಬಲ್ಲದು.ಅದು ಸಾಹಿತ್ಯದ ಸಿಹಿಯನ್ನು ಉಣಬಡಿಸುವದರೊಂದಿಗೆ ಬದುಕಿನ ರುಚಿಯನ್ನೂ ತೋರಿಸುತ್ತದೆ.

ಅನೇಕ ಮಹಾನ್ ಜೀವಗಳು ತಮ್ಮ ಬದುಕಿನ ಮಜಲುಗಳನ್ನು ತೀರ ಸರಳಾತಿಸರಳ ವಾಕ್ಯಗಳಲ್ಲಿ ವಿವರಿಸಿದರೂ ಕೂಡ ಎಲ್ಲೋ ಒಂದು ಕಡೆ ಅವೆಲ್ಲ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತವೆ.

ದೊಡ್ಡ ಸಾಹೇಬರು ಇನ್ಸಪೆಕ್ಷನ್ ಗೆಂದು ಸ್ಕೂಲಿಗೆ ಬಂದಾಗ ಬಡಮಾಸ್ತರ್ ನೊಬ್ಬ ಬೋರ್ಡು ಒರೆಸಲು ಡಸ್ಟರ್ ಇಲ್ಲದಿದ್ದರೂ ಭಯಭಕ್ತಿಯಿಂದಲೋ,ಗಲಿಬಿಲಿಯಿಂದಲೋ ತನ್ನದೇ ಅಂಗವಸ್ತ್ರದಿಂದ ಬೋರ್ಡು ಒರೆಸಿ ಹಾಕಿದ್ದಾಗಲೀ (ರಂಗಣ್ಣನ ಕನಸಿನ ದಿನಗಳು), ದಲಿತ ಬಾಲಕನೊಬ್ಬ ಹಸಿವೆಯನ್ನು ಓಡಿಸುವದಕ್ಕಾಗಿ ಮಲವಿಸರ್ಜನೆಯ ಸ್ಥಳದಲ್ಲೇ ಹಂದಿಯನ್ನು ಸುಟ್ಟು ತಿಂದಿದ್ದಾಗಲೀ (ಉಚಲ್ಯಾ), ಬೀಚಿಯೆಂಬ ಪೋಲಿಸ್ ಅಧಿಕಾರಿ ತನ್ನ ದರ್ಪದ ದಿನಗಳಲ್ಲಿ ಹೂಂಕರಿಸಿದ ಬಗ್ಗೆ ಪಡುವ ಪಶ್ಚಾತ್ತಾಪವಾಗಲೀ(ಭಯಾಗ್ರಫಿ) – ಇವೆಲ್ಲ ತಮ್ಮ ಪ್ರಾಮಾಣಿಕ ಸತ್ಯದ ಪ್ರಭಾವಳಿಯಿಂದ ನನ್ನನ್ನು ಕೊಂಚ ಮನುಷ್ಯನನ್ನಾಗಿ ಮಾರ್ಪಡಿಸಿವೆ.

ಹಾಗಾದರೆ, ಸತ್ಯದ ಪ್ರಾಮಾಣಿಕ ನಿವೇದನೆಯೊಂದೇ ಆತ್ಮಕಥಾ ಸಾಹಿತ್ಯಕ್ಕೆ ಮಾನದಂಡವೇ?

ನನ್ನ ಅನಿಸಿಕೆಯಂತೆ,ಜಗತ್ತಿನ ಬಹುತೇಕ ಆತ್ಮಕತೆಗಳಿಗೆ ಒಂದು code of conduct ಅನ್ನುವದು ಇದ್ದೇ ಇರುತ್ತದೆ.ಆತ್ಮಕತೆ ಹೇಳಲು ಹೊರಟಿರುವ ವ್ಯಕ್ತಿ ಓದುಗರ ಚಪ್ಪಾಳೆಗಳಾಚೆಯೂ ಯೋಚಿಸಬೇಕಾಗುತ್ತದೆ.ಆತ ತಾನು ಬೆತ್ತಲೆಯಾಗಬೇಕೇ ಹೊರತು ತನ್ನ ಬದುಕಿನ ಇತರೇ ಪಾತ್ರಧಾರಿಗಳ ಬಗ್ಗೆ ತನ್ನ ನಿಷ್ಠೆಯನ್ನು ತೋರಿಸಲೇಬೇಕಾಗುತ್ತದೆ.

ಕೊನೆಯದಾಗಿ,ನಾನು ಆಗಲೇ ಹೇಳಿದಂತೆ ನನ್ನ ಸಾಹಿತ್ಯಿಕ ಜರೂರತ್ತು ಆಗೀಗ ಬಣ್ಣ ಬದಲಿಸುತ್ತಲೇ ಬಂದಿದೆ.ಚಂದಮಾಮ-ಬಾಲಮಿತ್ರದ ಹೀರೋಗಳು ಪುರುಷೋತ್ತಮನೆಂಬ ಪತ್ತೆದಾರನೊಂದಿಗೆ ಬೆಳೆದು ಬಂದಿದ್ದಾರೆ.ಯಂಡಮೂರಿಯ ರುದ್ರಭಯಾನಕ ಥೀಮುಗಳೂ, ಸತ್ಯಕಾಮರ ತಾಂತ್ರಿಕ ಮನುಷ್ಯರೂ,ಬೇಂದ್ರೆಯ ಪಾತರಗಿತ್ತಿ ಪುಕ್ಕದಲ್ಲಿ ಮರೆಯಾಗಿ ಹೋಗಿದ್ದಾರೆ.ಸದ್ಯಕ್ಕೆ ಯಾವುದೇ ಸಾಹಿತ್ಯದಲ್ಲಿ ನಾನು ಶಬ್ದಗಳಿಗಾಗಿ ಹುಡುಕಾಡುತ್ತಿಲ್ಲ.ಅವುಗಳ ವಿಜೃಂಭಣೆಯಲ್ಲಿ ನನಗೆ ಆಸಕ್ತಿಯಿಲ್ಲ.ಮನರಂಜನೆ,ಜ್ಞಾನಾರ್ಜನೆ,ಮಾನವೀಯತೆ,ಮುಗ್ಧತೆಯ ಅಚ್ಚರಿ ಮತ್ತು ಕುತೂಹಲಗಳ ಹುಡುಕಾಟಗಳ ನಡುವೆಯೂ “ಒಂದೂರಿನಲ್ಲಿ ಒಬ್ಬನಿದ್ದ..” ಅಂತ ಸರಳ ರೀತಿಯಲ್ಲಿ ಯಾರಾದರೂ ಒಂದು ಗಟ್ಟಿಭಾವವನ್ನು ಕಟ್ಟಿಕೊಟ್ಟರೆ ನಾನು ಸಂತೃಪ್ತ. ತನ್ನ ನೋಟ್ ಬುಕ್ಕಿನ ಅಸಂಖ್ಯ ಚಿತ್ತುಕಾಟುಗಳ ನಡುವೆ,ಅಲ್ಲಲ್ಲಿ ಎಳೆದು ಹಾಕಿದ ಬಾಣದ ಗುರುತುಗಳ ನಡುವೆ ಎಂಥದೋ ಒಂದು untouched ಕಾಡನ್ನು ತೋರಿಸುವ ಸಾಹಿತ್ಯ ಇಷ್ಟವಾಗುತ್ತಿದೆ..

‍ಲೇಖಕರು G

30 November, 2012

12 Comments

  1. bharathi bv

    Rj … chenda bardidira. Onde vishayada bagge eshtondu abhiprayagaliruthve alva?! Ishtavaythu

  2. samyuktha

    Tumba chennagide. Ishtavaytu.

  3. ಈಶ್ವರ ಕಿರಣ

    ಕೊನೆಯ ಸಾಲಂತೂ ಅತ್ಯಂತ ಒಳ್ಳೆಯ conclusion. ಓದುಗ ಹುಡುಕುವುದು ಆತನ ವಯಸ್ಸಿನೊಂದಿಗೇ ಬೆಳೆಯುತ್ತದೆ.

  4. Gopaal Wajapeyi

    ಜೋಶಿ… ನೀವಂದಂತೆ ಅವು ಅಸಂಖ್ಯ ‘ಚಿತ್ತಕಾಟುಗಳು’ ಅಲ್ಲ… ‘ಚಿತ್ತ ನಾಟು’ಗಳು. ಆಯಾ ವಯಸ್ಸಿನ ಒಂದೊಂದು ಓದೂ ನಮ್ಮನ್ನು ಬೆಳೆಸಿದೆ, ಮುನ್ನಡೆಸಿದೆ, ಬದುಕುವ ರೀತಿಯನ್ನು ಕಲಿಸಿದೆ… ಈ ‘ಜುಗಲಬಂದಿ’ಯ ಬಂಡಿಯನ್ನು ನಾನು ದೂರದಿಂದಲೇ ನೋಡಿ ‘ಕೂs’ಗುಡುತ್ತೇನೆ… ‘ಅವಧಿ’ಯನ್ನು ಅಭಿನಂದಿಸುತ್ತೇನೆ…

  5. ಉಷಾಕಟ್ಟೆಮನೆ

    ”ಸಧ್ಯಕ್ಕೆ ಯಾವುದೇ ಸಾಹಿತ್ಯದಲ್ಲಿ ನಾನು ಶಬ್ದಗಳಿಗಾಗಿ ಹುಡುಕಾಡುತ್ತಿಲ್ಲ.ಅವುಗಳ ವಿಜೃಂಭಣೆಯಲ್ಲಿ ನನಗೆ ಆಸಕ್ತಿಯಿಲ್ಲ.ಮನರಂಜನೆ,ಜ್ಞಾನಾರ್ಜನೆ,ಮಾನವೀಯತೆ,ಮುಗ್ಧತೆಯ ಅಚ್ಚರಿ ಮತ್ತು ಕುತೂಹಲಗಳ ಹುಡುಕಾಟಗಳ ನಡುವೆಯೂ “ಒಂದೂರಿನಲ್ಲಿ ಒಬ್ಬನಿದ್ದ..” ಅಂತ ಸರಳ ರೀತಿಯಲ್ಲಿ ಯಾರಾದರೂ ಒಂದು ಗಟ್ಟಿಭಾವವನ್ನು ಕಟ್ಟಿಕೊಟ್ಟರೆ ನಾನು ಸಂತೃಪ್ತ.”
    ನಿಜ ಜೋಷಿಯವರೇ…ಸೂಕ್ಷ್ಮಗಳನ್ನು ಗ್ರಹಿಸುವ ಮನಸ್ಸಿಗೆ ಎಲ್ಲವೂ ನಿಚ್ಚಳ ಮತ್ತು ಮರುಸೃಷ್ಟಿಗೆ ಪೂರಕ.

  6. ಸಂಜೀವ ಓಡೇಯರ್

    ರಘು ಸರ್ ಮನಸ್ಸಿಗೆ ಮುಟ್ಟುವಂಘ ಬರದೀರಿ …Untouched ಸಾಹಿತ್ಯದ ಪರಿವನ್ನಾ ಹಿಂಗೂ ಅರ್ಥಮಾಡಿಕೊಳ್ಳಬಹುದು ಅನ್ನೋದನ್ನಾ ಅತೀ ಸೂಕ್ಷ್ಮವಾಗಿ ಹೇಳಿರಿ ..!! Like ಆಯ್ತು.

  7. sunil Rao

    waah kyaa bath hein 🙂

  8. Pramod

    ತು೦ಬಾ ಚೆನ್ನಾಗಿದೆ

  9. Shrivatsa Kanchimane

    ತುಂಬಾ ಇಷ್ಟವಾಯಿತು…

  10. Swarna

    ಚೆನ್ನಾಗಿದೆ

  11. ಕಿಶೋರ್

    ತುಂಬಾ ಇಷ್ಟವಾಯ್ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading