ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವ ಸಂಕುಲ ಮತ್ತು ಪಶ್ಚಿಮ ಘಟ್ಟಗಳು

-ಪ್ರಸಾದ್ ರಕ್ಷಿದಿ

ಇತ್ತೀಚೆಗೆ ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ತಲೆದೋರಿದಾಗೆಲ್ಲ ಪಶ್ಚಿಮಕ್ಕೆ ಹರಿಯುವ ನದಿಗಳನ್ನೆಲ್ಲ ಪೂರ್ವಕ್ಕೆ ತಿರುಗಿಸುವ ಮಾತು ಕೇಳಿಬರುತ್ತದೆ. ಕರ್ನಾಟಕದ ಖಾಯಂ ಬರಪೀಡಿತ ಪ್ರದೇಶಗಳಾದ ಕೋಲಾರ ತುಮಕೂರು ಜಿಲ್ಲೆಗಳಲ್ಲಿ ನೀರಿನ ಕೊರತೆಯಾದಾಗ ಮತ್ತು ಕಾವೇರಿ ನೀರಿನ ಹಂಚಿಕೆಯಲ್ಲಿ ತಕರಾರು ಬಂದಾಗಲೆಲ್ಲ, ಪಶ್ಚಿಮಕ್ಕೆ ಹರಿದು ಸುಮ್ಮನೆ ಸಮುದ್ರ ಸೇರುತ್ತಿರುವ ನೇತ್ರಾವತಿಯಂತಹ ಪಶ್ಚಿಮಕ್ಕೆ ಹರಿಯುವ ನದಿಗಳು ಮತ್ತು ಅದರ ಉಪನದಿಗಳನ್ನು ಪೂರ್ವಕ್ಕೆ ತಿರುಗಿಸಿ ದಕ್ಷಿಣ ಭಾರತದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ಮಾತನ್ನು ಎಲ್ಲಾ ಪಕ್ಷಗಳ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲೂ ಅದೊಂದು ನೇಮವೆಂಬಂತೆ ಆಡುತ್ತಲೇ ಇರುತ್ತಾರೆ. ಅವರ ಜೊತೆಯಲ್ಲೇ ಅನೇಕ ಜನ ಪ್ರಗತಿಪರರು, ಹಲವರು ನೀರಾವರಿ ತಜ್ಞರು, ಜೊತೆಗೊಂದಷ್ಟು ಜನ ಬುದ್ಧಿಜೀವಿಗಳೆನ್ನಿಸಿಕೊಂಡವರೂ ಸೇರುತ್ತಾರೆ. ಇವರೆಲ್ಲರ ವಾದವೆಂದರೆ ಈ ನದಿಗಳಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಸದ್ಬಳಕೆ ಮಾಡಲು ಸಾಧ್ಯವಾಗದಿರುವುದಕ್ಕೆ ಪರಿಸರವಾದಿಗಳೇ ಕಾರಣ. ಈ ಪರಿಸರವಾದಿಗಳು ಯಾವುದೇ ಮುಂದಾಲೋಚನೆಯಿಲ್ಲದೆ ಇದನ್ನೆಲ್ಲ ವಿರೋಧಿಸುತ್ತಿದ್ದಾರೆ. ಇವರಿಗೆ ಮನುಷ್ಯ ಜೀವಕ್ಕಿಂತ ಕಾಡು, ಮರ, ಗಿಡ, ಕಲ್ಲು ಮಣ್ಣು, ಪ್ರಾಣಿ, ಪಕ್ಷಿಗಳೇ ಅಮೂಲ್ಯ. ಇವರ ಈ ಜನ ವಿರೋಧಿ ನಿಲುವಿನಿಂದಾಗಿ ಕೋಟ್ಯಂತರ ಜನ ಬಾಯಾರಿ ಬಳಲುತ್ತಿದ್ದಾರೆ, ಕೃಷಿ ನಾಶವಾಗುತ್ತಿದೆ ಎಂದು. ಇದನ್ನವರು ಮತ್ತೆ ಮತ್ತೆ ಹಲವು ವೇದಿಕೆಗಳಿಂದ ಕೆಲವೊಮ್ಮೆ ಘೋಷಣೆಯಂತೆ, ಇನ್ನು ಕೆಲವು ಸಾರಿ ಅಲಂಕಾರಿಕವಾಗಿ ಹೇಳುತ್ತಲೇ ಬಂದಿದ್ದಾರೆ.

ಇನ್ನೊಂದೆಡೆಯಿಂದ ಈ ಪರಿಸರವಾದಿಗಳಿಂದಾಗಿ ಅನೇಕ ಜಲವಿದ್ಯುತ್ ಯೋಜನೆಗಳು, ರೈಲು, ರಸ್ತೆ, ನಿರ್ಮಾಣಗಳಿಗೆ ಅಡ್ಡಿಯಾಗಿದೆ, ಇವರ ವಿರೋಧದಿಂದಾಗಿ ಗಣಿ ಉಧ್ಯಮಕ್ಕೆ ಹಿನ್ನಡೆಯಾಗಿದೆ, ಇವರ ವಿವೇಚನಾರಹಿತ ಪ್ರತಿಭಟನೆಗಳಿಂದಾಗಿ ಲಕ್ಷಾಂತರ ಜನ ಉದ್ಯೋಗವಂಚಿತರಾಗಿ ನಾವು ಹಿಂದುಳಿದಿದ್ದೇವೆ. ಹಳ್ಳಿಯ ಜನ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಎಂದೆಲ್ಲ ಹೇಳುತ್ತ ಎಲ್ಲ ಅನಿಷ್ಟಕ್ಕೂ ಈ ಪರಿಸರವಾದಿಗಳೇ ಕಾರಣರೆಂಬಂತೆ ಚಿತ್ರಿಸುತ್ತಿರುವ, ಅಬಿವೃದ್ಧಿಯ ಮಂತ್ರ ಜಪಿಸುತ್ತಿರುವವರ ಗುಂಪು ಕೂಡಾ ದೊಡ್ಡದಾಗಿಯೇ ಇದೆ. ಈ ಎರಡೂ ಕಡೆಯವರಲ್ಲದೆ. ಈ ಪರಿಸರವಾದಿಗಳೆಲ್ಲ ವಾಹನಗಳಲ್ಲಿ ಓಡಾಡುವವರು, ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿ ನಗರಗಳಲ್ಲಿ ನೆಲೆಸಿದವರು. ಇವರೆಲ್ಲ ಮೇಲ್ವರ್ಗದ ಜನರೆಂಬ ಇನ್ನೊಂದು ಭಯಂಕರ ವಾದವೂ ಇದೆ. (ಮೇಲ್‌ನೋಟಕ್ಕೆ ಈ ವಾದವೂ ನಿಜವಿರಬಹುದೆಂದು ಕಾಣಲು ಕಾರಣಗಳಿವೆ, ಈ ಬಗ್ಗೆ ಮುಂದೆ ವಿವರಿಸಿದ್ದೇನೆ)

ಇಷ್ಟೆಲ್ಲ ವಾದಗಳ ನಡುವೆ ಮೊದಲನೆಯದಾಗಿ ಪರಿಸರ ವಾದಿಗಳೆಂದರೆ ಯಾರೆಂಬುದರ ಬಗ್ಗೆಯೇ ಗೊಂದಲವಿದೆ. ಬೇರೆಲ್ಲ ವಿಚಾರಗಳಲ್ಲಿ, ಸಂಘಟನೆಗಳಲ್ಲಿ ಇರುವಂತೆ ಇಲ್ಲೂ ಜೋರಾಗಿ ದನಿಯೆತ್ತಿ ಮಾತಾಡುತ್ತಾ ವೇದಿಕೆಗಳಲ್ಲಿ ಭಾಷಣ ಮಾಡುವಮಟ್ಟಿಗೆ ಸೀಮಿತರಾಗಿರುವವರು ಇದ್ದಾರೆ. ಪರಿಸರಕಾಳಜಿ ಯನ್ನೇ ಸರಕಾಗಿಸಿಕೊಂಡು ಎಲ್ಲಕಡೆಗಳಲ್ಲೂ ಪಾಲುಗಿಟ್ಟಿಸಿಕೊಳ್ಳುವವರೂ ಇದ್ದಾರೆ. ಪರಿಸರ ನಾಶಕ್ಕೆ ಕಾರಣವಾಗುವ ಯಾವುದೇ ಯೋಜನೆ ಪ್ರಾರಂಭವಾಗುವ ಸೂಚನೆ ಸಿಕ್ಕಿದ ಕೂಡಲೇ ಎಲ್ಲರಿಗಿಂತ ಮೊದಲು ಪ್ರತಿಭಟನೆಗಿಳಿದು ಅಷ್ಟೇಬೇಗ ಒಳ ಒಪ್ಪಂದಗಳ ಮೂಲಕ ನಿಜವಾದ ಪ್ರತಿಭಟನೆಯೇ ಹುಟ್ಟದಂತೆ ಮಾಡುವವರಿದ್ದಾರೆ. ಆದರೆ ಪರಿಸರವಾದಿಗಳನ್ನು ಟೀಕಿಸುವ ಈ ಪ್ರಗತಿಪರರಾಗಲೀ ಬುದ್ಧಿಜೀವಿಗಳಾಗಲೀ ಈ ರೀತಿ ಭ್ರಷ್ಟರನ್ನು ಖಂಡಿತವಾಗಿಯೂ ಸಮರ್ಥಿಸುವವರಲ್ಲ. ಇವರೆಲ್ಲರ ವಿರೋಧ ನಿಜವಾದ ಪರಿಸರಾಸಕ್ತರ ಬಗೆಗೂ ಇದೆ ಮತ್ತು ಅದು ತಪ್ಪು ಕಲ್ಪನೆ ಮತ್ತು ತಪ್ಪು ತಿಳುವಳಿಕೆಗಳಿಂದಾಗಿದೆ ಎನ್ನುವುದಷ್ಟೇ ನನ್ನ ವಾದ.

ಇಷ್ಟೆಲ್ಲ ಗೊಂದಲಗಳಿದ್ದರೂ ನಿಜವಾದ ಪರಿಸರಾಸಕ್ತರ ಕಾಳಜಿಗಳೇನು, ಅವರು ಯಾಕಾಗಿ ಪರಿಸರ ನಾಶದಬಗ್ಗೆ ಆತಂಕಿತರಾಗಿದ್ದಾರೆ, ಇವರೆಲ್ಲ ಮನುಕುಲದ ವಿರೋಧಿಗಳೇ ಎಂದು ಯೋಚಿಸಿದರೆ ಕಾರಣಗಳು ಹೊಳೆದೀತು. ಯಾವನೇ ಒಬ್ಬ ವ್ಯಕ್ತಿ ಪರಿಸರ ನಾಶದ ವಿರೋಧಿಯಾಗಿರುವುದು ಮನುಕುಲದ ಉಳಿವಿಗಾಗಿಯೇ ಹೊರತು ಬೇರೆ ಇರಲು ಸಾಧ್ಯವಿಲ್ಲ. ಪ್ರಕೃತಿಗೆ ತನಗೆ ಬೇಡವಾದ್ದನ್ನು ನಿವಾರಿಸಿಕೊಳ್ಳುವ ಬಗ್ಗೆ ಇರುವ ಅಗಾಧವಾದ ಶಕ್ತಿ ಮತ್ತು ಆ ಕಾರಣಕ್ಕಾಗಿ ಪ್ರಕೃತಿನಾಶದ ಪರಿಣಾಮದಿಂದ ಈ ಭೂಮಂಡಲದಿಂದ ಮೊದಲು ನಿರ್ಗಮಿಸುವವನು ಮನುಷ್ಯನೇ ಆಗಿಬಿಡಬಹುದೆಂಬ ಭಯ ಮತ್ತು ಎಚ್ಚರಗಳಿಂದ ಪರಸರದ ಬಗ್ಗೆ ಕಾಳಜಿ ವಹಿಸುವದು ಅಗತ್ಯವಾಗಿದೆ.

ಈ ನೆಲೆಯಿಂದ ಈಗ ಹೆಚ್ಚು ಪ್ರಚಾರದಲ್ಲಿರುವ ನದಿ ತಿರುವು ಯೋಜನೆಗಳನ್ನು ನೋಡಿದರೆ ಹಲವು ಸಂಗತಿಗಳು ಗೋಚರವಾಗುತ್ತವೆ. ಉದಾಹರಣೆಯಾಗಿ ನೇತ್ರಾವತಿ ನದಿ ಮತ್ತು ಅದರ ಉಪನದಿಗಳಾದ ಕುಮಾರಧಾರಾ, ಕೆಂಪುಹೊಳೆ, ಕನ್ನಡಿಹೊಳೆ, ಎತ್ತಿನಹಳ್ಳ, ಮುಂತಾದವುಗಳು. ಇವುಗಳೆಲ್ಲ ಸೇರಿದರೆ ಇವುಗಳೆಲ್ಲದರ ಒಟ್ಟು ಹರಿವಿನ ಉದ್ದ ಸುಮಾರು ಮುನ್ನೂರು ಕಿ.ಮೀ ಗಳಾಗಬಹುದು, ಹಾಗೇ ಈ ಎಲ್ಲ ನದಿಗಳ ಒಟ್ಟು ಜಲಾನಯನ ಪ್ರದೇಶವೂ ಕೂಡಾ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚದರ ಕಿ.ಮೀ ಗಳಾಗುತ್ತದೆ. ಅಂದರೆ ಈ ಜಲಾಯನ ಪ್ರದೇಶದಲ್ಲಿ ಸರಿಯಾಗಿ ಮಳೆಯಾದರಷ್ಟೇ ನೇತ್ರಾವತಿ ತುಂಬಿ ಹರಿಯಬಲ್ಲಳು ಮತ್ತು ಮಳೆಗಾಲ ತನ್ನ ಹರಿವಿನುದ್ದಕ್ಕೂ ಇಂಗಿ ಒರತೆಯಾದರೆ ಮಾತ್ರ ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗೆ ನೀರನ್ನು ಹರಿಸಬಲ್ಲಳು.

ನಮ್ಮ ನದಿ ತಿರುವು ಯೋಜನೆಯ ಪ್ರತಿಪಾದಕರಲ್ಲಿ ಎರಡು ಯೋಜನೆಗಳಿವೆ. ಮೊದಲನೆಯದು ಪಶ್ಚಿಮಘಟ್ಟಗಳ ಇಳಿಜಾರಿನಲ್ಲಿ ಅಂದರೆ ಸುಮಾರಾಗಿ ಗುಡ್ಡಗಳ ಮಧ್ಯಭಾಗದಲ್ಲಿ ಒಂದು ಕಾಲುವೆಗಳ ಜಾಲವನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿ ಹೇಮಾವತಿ ನದಿಯತ್ತ ತಿರುಗಿಸುವುದು. ಇದು ದೊಡ್ಡ ಯೋಜನೆಯಾಗಿದ್ದು ಇದರ ಪರಿಣಾಮಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ ಆಗುತ್ತಲೇ ಇದೆ. ಎರಡನೆಯದು ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಘಟ್ಟಪ್ರದೇಶದ ಮೇಲ್ಭಾಗದಲ್ಲೇ ತಿರುಗಿಸಿಬಿಡುವುದು. ಇದು ಮೇಲ್ನೋಟಕ್ಕೆ ಬಹಳ ಸೂಕ್ತವಾದ ಯಾವುದೇ ಸಮಸ್ಯೆಯಾಗಲೀ ಹೆಚ್ಚಿನ ಪರಿಸರ ನಾಶವಾಗಲೀ ಇಲ್ಲದ ಯೋಜನೆಯಂತೆ ಕಂಡುಬರುತ್ತದೆ. ಆದರೆ ನಾವು ಈ ರೀತಿ ಹೊಳೆಗಳ ತಿರುವು ಯೋಜನೆಯ ವಿವರಗಳನ್ನು ನೋಡಿದರೆ ಇವುಗಳು ಹರಿಯುತ್ತಿರುವ ಪ್ರದೇಶ ವ್ಯಾಪಕವಾಗಿ ಕೃಷಿಗೊಳಪಟ್ಟಿರುವುದು ಮತ್ತು ಮಲೆನಾಡಿನ ಹೆಚ್ಚಿನ ಹಳ್ಳಿಗಳು ಇಂದು ಈ ರೀತಿಯ ಹೊಳೆಗಳಿಂದಲೇ ಕುಡಿಯವ ನೀರನ್ನು ಬಳಸಿಕೊಳ್ಳುತ್ತಿದ್ದು ಬೇಸಿಗೆಯಲ್ಲಿ ಈ ಹೊಳೆಗಳ ಹರಿವಿನ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ. (ಮಲೆನಾಡಿನಲ್ಲಿ ಕೊರೆದ ಕೊಳವೆ ಬಾವಿಗಳೆಲ್ಲ ಈಗಾಗಲೇ ಬರಿದಾಗಿವೆ. ಪ್ರತಿ ಹಳ್ಳಿಯಲ್ಲೂ ಕೊರೆದಿರುವ ಹತ್ತಾರು ಕೊಳವೆ ಬಾವಿಗಳಲ್ಲಿ ಒಂದೋ ಎರಡೋ ಕೆಲಸ ಮಾಡುತ್ತಿದ್ದರೆ ಹೆಚ್ಚು). ಹಾಗಾಗಿ ಬೇಸಿಗೆಯಲ್ಲಿ ಈ ಹೊಳೆಗಳಿಂದ ನೀರು ಸಿಗುವ ಸಾಧ್ಯತೆಯೇ ಇಲ್ಲ. ಇನ್ನು ಮಳೆಗಾಲದ ನೀರನ್ನು ಬಳಸಿಕೊಳ್ಳಬಹುದಲ್ಲ ಎಂದರೆ ಇಂತಹ ನದಿಗಳ ಮಳೆಗಾಲದ ಹರಿವನ್ನು ಬಳಸಿಕೊಂಡು (ಮತ್ತದೇ ಪರಿಸರವಾದಿಗಳ ವಿರೋಧವನ್ನು ಲೆಕ್ಕಿಸದೆ) ಪ್ರಾರಂಭಿಸಿರುವ ಕಿರುಜಲವಿದ್ಯುತ್ ಯೋಜನೆಗಳಿವೆ. ಇವುಗಳಲ್ಲಿ ಕೆಲವು ಈಗಾಗಲೇ ವಿಧ್ಯುತ್ ಉತ್ಪಾದನೆಯನ್ನೂ ಆರಂಭಿಸಿದ್ದು ಇವುಗಳು ನೀರಿನಬಳಕೆ ಬಗ್ಗೆ ಸರ್ಕಾರದೊಂದಿಗೆ ಧೀರ್ಘಾವದಿ ಒಪ್ಪಂದಗಳನ್ನು ಮಾಡಿಕೊಂಡಿವೆ. ಹಾಗಾಗಿ ಮಳೆಗಾಲದ ನೀರನ್ನೂ ತಿರುಗಿಸುವ ಸಾಧ್ಯತೆಯೂ ಇಲ್ಲವಾಗಿದೆ.

ಈಗ ಈ ನದಿಗಳ ಹರಿವಿನುದ್ದಕ್ಕೂ ಇರುವ ಜೀವ ವೈವಿದ್ಯವೇನು, ನದೀ ನೀರಿನ ತಿರುವಿನಿಂದ ಇದರ ಮೇಲಾಗುವ ಪರಿಣಾಮಗಳೇನು ಎಂಬ ವಿಚಾರವನೆಲ್ಲ ಬದಿಗಿಟ್ಟು ನೋಡಿದರೂ ಈ ನದಿಯನ್ನೇ ನಂಬಿರುವ ಕೃಷಿಕರ ಗತಿಯೇನು ಈ ಬಗ್ಗೆ ಯಾರೂ ಮಾತಾಡುವುದಿಲ್ಲ. ನದಿಗಳ ಹರಿವಿನ ಮೂಲಕ ಸಮುದ್ರದ ನೀರಿಗೆ ಪೂರೈಕೆಯಾಗುತ್ತಿರುವ ಆಮ್ಲಜನಕದಿಂದ ಬದುಕುತ್ತಿರುವ ಜಲಚರಗಳ ಗತಿಯೇನು. ಈಗಾಗಲೇ ಯಾಂತ್ರೀಕೃತ ದೋಣಿಗಳ ವ್ಯಾಪಕ ಬಳಕೆಯಿಂದ ಉಂಟಾಗುತ್ತಿರುವ ಮತ್ಸಕ್ಷಾಮ, ಈ ನದೀತಿರುವು ಯೋಜನೆಗಳಿಂದಾಗಿ ಇನ್ನಷ್ಟು ಹೆಚ್ಚಾದರೆ ಲಕ್ಷಾಂತರ ಮೀನುಗಾರರೇನು ಮಾಡಬೇಕು. ಇವರಿಗೆ ಯಾವ ಪರ್ಯಾಯವಿದೆ. ಯಾರೂ ಹೇಳುತ್ತಿಲ್ಲ. (ಈ ಕಾರಣಕ್ಕಾಗಿಯೇ ನದೀ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬರುವುದಿಲ್ಲ, ಅಣೆಕಟ್ಟುಗಳನ್ನು ಸಾಲುಸಾಲಾಗಿ ಕಟ್ಟಿ ಎಲ್ಲಾ ನೀರನ್ನೂ -ಸಮುದ್ರ ಸೇರದಂತೆ ತಡೆದರೆ ಪರಿಸರದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಈಗಾಗಲೇ ವಿಜ್ಞಾನಿಗಳು ಹಲವುಬಾರಿ ಎಚ್ಚರಿಸಿದ್ದಾರೆ. ಕಾವೇರಿ ನದಿ ನೀರು ಕೂಡಾ ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲ ಅಣೆಕಟ್ಟುಗಳು ತುಂಬಿದ ನಂತರ ಸಮುದ್ರ ಸೇರಿ ಹಾಳಾಗುತ್ತಿದೆ ಎನ್ನುವವರು ಗಮನಿಸಬೇಕು. ಸಾಧ್ಯವಿದ್ದರೆ ಆ ನೀರನ್ನು ವಿದ್ಯ್ಯುದುತ್ಪಾದನೆಗೆ ಬಳಸಿಕೊಂಡು ಸಮುದ್ರಕ್ಕೆ ಬಿಡಬಹುದೇ ಹೊರತು ಸಂಪೂರ್ಣವಾಗಿ ಕೃಷಿಗೋ- ಕುಡಿಯುವ ನೀರಿಗೋ ಬಳಸಿಕೊಳ್ಳುವುದು ಸರಿಯಲ್ಲ)

ನದಿ ತಿರುವು ಯೋಜನೆಯ ಸಮರ್ಥಕರು ಹೇಳುವಂತೆ ಕುಡಿಯುವ ನೀರಿಗಾಗಿ ಈ ಯೋಜನೆಗಳನ್ನು ಒಪ್ಪಿಕೊಂಡರೂ ಕೂಡಾ ಈಗಾಗಲೇ ಪರಿಸರ ವಾದಿಗಳ ವಿರೋಧವನ್ನು ಲೆಕ್ಕಿಸದೆ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ) ಅನೇಕ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಿವೆ. ಕೆಲವು ಯೋಜನೆಗಳು ಪೂರ್ಣಗೊಂಡು ವಿಧ್ಯುದುತ್ಪಾದನೆ ಪ್ರಾರಂಬಿಸಿವೆ. ಇವಲ್ಲವೂ ಮಳೆಗಾಲದಲ್ಲಿ ಹರಿಯು ನೀರನ್ನೇ ಬಳಸಿಕೊಳ್ಳುವ ಯೋಜನೆಗಳಾಗಿವೆ. ಸಾವಿರಾರು ಎಕರೆ ದಟ್ಟ ಅರಣ್ಯ ನಾಶವಾಗಿ ಹನ್ನೆರಡು ಗ್ರಾಮಗಳು ಜಲಾವೃತವಾಗುವ, ಸರಣಿ ಅಣೆಕಟ್ಟುಗಳಿಂದ ಒಟ್ಟು ಐವತ್ತಕ್ಕೂ ಹೆಚ್ಚು ಕಿ.ಮೀ ವ್ಯಾಪ್ತಿಯಲ್ಲಿ ನೀರು ನಿಲ್ಲುವ ಗುಂಡ್ಯ ಜಲವಿದ್ಯುತ್ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ವಿರೋಧ ಬಂದ ನಂತರ ಇದೀಗ ಕೇಂದ್ರ ಸರ್ಕಾರ, ಅಲ್ಲಿ ಯಾವದೇ ಅಣೆಕಟ್ಟು ಕಟ್ಟಲು ಅನುಮತಿ ನೀಡುತ್ತಿಲ್ಲವೆಂದೂ, ಅಣೆಕಟ್ಟು ಕಟ್ಟದೆ ಮಳೆಗಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಮಾಡಲು ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದೆ. ( ಈ ಲೇಖನ ಸಿದ್ಧವಾಗುವ ಹೊತ್ತಿಗೆ ಕೇಂದ್ರ ಸರ್ಕಾರ ಗುಂಡ್ಯ ಜಲವಿಧ್ಯುತ್ ಯೋಜನೆಯ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ಒಂದು ತಂಡವನ್ನು ಕಳುಹಿಸಿದೆ. ಅದರ ಫಲಶ್ರುತಿಯ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲವಾದರೂ ಹಿಂದಿನ ಎಲ್ಲ ಅನುಭವಗಳ ಆಧಾರದಿಂದ ನೋಡಿದರೆ ಕೇಂದ್ರ ಸರ್ಕಾರ ಅಣೆಕಟ್ಟು ಕಟ್ಟಲು ಅನುಮತಿ ನೀಡುವ ಸಾದ್ಯತೆಯೇ ಹೆಚ್ಚಾಗಿದೆ).

ಏನೇ ಆದರೂ ಈ ಎಲ್ಲ ಕಾರಣಗಳಿಂದ ಈ ನದಿಗಳನ್ನು ಪೂರ್ವಕ್ಕೆ ತಿರುಗಿಸುವ ಯೋಜನೆಗಳಿಗೆ ಈ ಜಲ ವಿದ್ಯುತ್‌ಯೋಜನೆಗಳೇ ಅಡ್ಡಿಯಾಗುತ್ತವೆ.

ಆದರೆ ಪರಿಸರವಾದಿಗಳ ಬಗ್ಗೆ ಕೋಪ-ತಾಪಗಳನ್ನು ಪ್ರದರ್ಶಿಸುತ್ತಿರುವವರು ತಿಳಿದಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರ ವಾದಿಯೋ-ಪ್ರೇಮಿಯೋ ಅಂತೂ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ವಿಚಾರಗಳನ್ನಿಟ್ಟು ಕೊಂಡಿರುವವರಿದ್ದಾರೆ. ಇವರೆಲ್ಲರೂ ನಿಜವಾದ ಕಾಳಜಿಯನ್ನಿಟ್ಟುಕೊಂಡಿರುವವರು ಎಂದುಕೊಂಡರೂ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪ ಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವದೇ ರಾಜಿಗೂ ಸಿದ್ಧವಿಲ್ಲದವರೂ ಇದ್ದಾರೆ.

ಈ, ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದೀತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿದ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ. ಇನ್ನಿತರೆ ಕಾರಣಗಳು ಹಲವಿವೆ. ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ಪ್ಯಾಕೇಜ್ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು,(ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ.ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. (ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು).

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ. ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ಅಪಾಯಕಾರಿಯಾದ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ ಪ್ರಗತಿಪರರ ಹಾಗೂ ಬುದ್ಧೀಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಟಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.

ಯಾಕೆಂದರೆ ಈ ಎರಡು ಗುಂಪಿನ ಜನರೇ ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇವರಲ್ಲಿ ಗುತ್ತಿಗೆದಾರರದು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, ಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವರು ಪರ್ತಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದೀ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವೆತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರುಗಳು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾತಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.

ಈಗಾಗಲೇ ಪೂರ್ಣಗೊಂಡಿರುವ ಕೆಂಪುಹೊಳೆ ಯೋಜನಾ ಪ್ರದೇಶದಲ್ಲೊಮ್ಮೆ ಸುತ್ತಾಡಿ ಬಂದರೆ ಆಗಿರುವ ಭೂಸವಕಳಿ, ಅರಣ್ಯ ನಾಶ ಕಾಣುತ್ತದೆ.(ಇದು ಸುಮಾರು ೨೦ ಮೆ.ವಾ ವಿದ್ಯುತ್ ಉತ್ಪಾದನೆಯಾಗುವ,ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರಣ್ಯನಾಶ ಮತ್ತು ಭೂ ಪ್ರದೇಶದ ಬಳಕೆಯಾಗಿರುವ ಕಿರು ವಿದ್ಯುತ್ ಯೋಜನೆ) ಮಳೆಗಾಲದಲ್ಲಿ ತುಂಬಿ ಹರಿಯುವಾಗ ಮಾತ್ರ ಕೆಂಪಾಗಿರುತ್ತಿದ್ದ ಕೆಂಪುಹೊಳೆ ವರ್ಷವಿಡೀ ಮಣ್ಣು ತುಂಬಿ ಕೆಸರು ಕೆಸರಾಗಿ ಕೆಂಪಾಗಿ ಹರಿಯುತ್ತಿದೆ. ಹೀಗಿದ್ದರೆ ಗಾತ್ರದಲ್ಲಿ ಇದರ ನೂರುಪಾಲಿಗೂ ಹೆಚ್ಚು ಜಲ ಸಂಗ್ರಹವಾಗುವ (೫೨ ಚ.ಕೀ) ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಮಾತ್ರ ಕೆಂಪುಹೊಳೆ ಯೋಜನೆಯ ಹತ್ತರಷ್ಟಿರುವ(೨೦೦ಮೆ.ವಾ) ಗುಂಡ್ಯ ಯೋಜನೆಯಲ್ಲಿ ಆಗಬಹುದಾದ ವಿನಾಶವನ್ನು ಊಹಿಸಿ (ಗಾತ್ರ ಹೆಚ್ಚಾದ ಪ್ರಮಾಣಕ್ಕೆ ವಿಧ್ಯುತ್ ಉತ್ಪಾದನೆ ಹೆಚ್ಚುವುದಿಲ್ಲವೆಂಬುದನ್ನೂ ಗಮನಿಸಿ)

ಮಹಾ ಜೀವ ವೈವಿದ್ಯದ ತಾಣವಾಗಿರುವ ಪಶ್ಚಿಮ ಘಟ್ಟಗಳೇ ದಕ್ಷಿಣಭಾರತ ಎಲ್ಲ ನದಿಗಳ ಪ್ರಾಣ ಎಂಬುದನ್ನು ಮರೆತು ಇವನ್ನೆಲ್ಲ ನಾಶ ಮಾಡಿದರೆ ಪಶ್ಚಿಮಕ್ಕೋ ಪೂರ್ವಕ್ಕೋ ಹರಿಯಲು ನದಿಗಳೇ ಇರುವುದಿಲ್ಲವೆಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ.

ಇದೀಗ ವೈಜ್ಞಾನಿಕವಾಗಿ ನದೀ ನೀರಿನ ಬಳಕೆಯ ಮಾತು ಕೇಳಿಬರುತ್ತಿದೆ. ಇದೀಗ ತಾನೇ ಗುಂಡ್ಯ ಯೋಜನೆಯ ಪ್ರದೇಶಕ್ಕೆ ಬಂದುಹೋದ ತಜ್ಞರ ಸಮಿತಿಯ ಸದಸ್ಯರೂ ಇದೇ ಮಾತನ್ನು ಹೇಳಿದರು. ಇವರೆಲ್ಲ ಹೇಳುವ ವೈಜ್ಞಾನಿಕ ವಿಧಾನಗಳೆಂದರೆ ಎಲ್ಲ ಯೋಜನೆಗಳಿಂದಾಗುವ ಹಾನಿಯನ್ನು ಕಡಿಮೆ ಮಾಡುವುದು, ಮರಗಿಡಗಳನ್ನು ಬೆಳೆಸುವುದು. ಜೊತೆಗೆ ಈ ಯೋಜನೆಗಳ ಅನಿವಾರ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ರೀತಿಯ ಕೆಲಸಗಳಿಗೆ ಸೀಮಿತವಾಗುತ್ತಿದೆ. ಆದರೆ ಈ ರೀತಿಯ ಯಾವುದೇ ಸಮಸ್ಯೆಗೆ ಸಮಗ್ರವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆದ್ಯತೆಗಳು, ನಿಲುವುಗಳು, ಮತ್ತು ನಮ್ಮ ಕೃಷಿ ವ್ಯವಸ್ಥೆಯಲ್ಲಾಗಬೇಕಾದ ಅಮೂಲಾಗ್ರ ಬದಲಾವಣೆಗಳು, ಇವುಗಳನ್ನೆಲ್ಲವನ್ನು ಒಳಗೊಂಡಂತೆ ವೈಜ್ಞಾನಿಕವಾದ ಪರಿಹಾರವನ್ನು ಕಂಡುಕೊಳ್ಳದಿದ್ದಲ್ಲಿ ನಾವು ಸಮಸ್ಯೆಯಿಂದ ಸಮಸ್ಯೆಗೆ ಸಾಗುತ್ತಲೇ ಇರುತ್ತೇವೆ ಹೊರತು ಪರಿಹಾರವೆನ್ನುವುದು ಮರೀಚಿಕೆಯಾದೀತು.

ಈಗ ವೈಜ್ಞಾನಿಕವೆನ್ನಬಹುದಾದ ಹಲವು ಪರಿಹಾರಗಳನ್ನು ಗಮನಿಸೋಣ ಮೊದಲನೆಯದಾಗಿ ನಮ್ಮ ಕೃಷಿ ಪದ್ಧತಿ. ಅಗತ್ಯವಿಲ್ಲದೆ ಅಗಾಧ ಪ್ರಮಾಣದಲ್ಲಿ ನೀರನ್ನು ಬಳಸುತ್ತಿರುವ ಭತ್ತ, ಕಬ್ಬಿನಂತಹ ಕೆಲವು ಬೆಳೆಗಳ ಬೇಸಾಯ ವಿಧಾನವನ್ನು ಬದಲಿಸಿಕೊಂಡರೆ ಈಗ ಉಪಯೋಗಿಸುತ್ತಿರುವ ನೀರಿನಲ್ಲೇ ಎರಡರಷ್ಟು ಪ್ರದೇಶದಲ್ಲಿ ಬೆಳೆ ತೆಗೆಯಬಹುದು. ಹಾಗೇ ಉಧ್ಯಮಗಳಲ್ಲೂ ಅಷ್ಟೆ ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ಪೋಲಾಗುವ ನೀರಿನ ಪ್ರಮಾಣ ಶೇಕಡ ನಲುವತ್ತರಷ್ಟಿದೆ. ನಗರಗಳ ಬಂಗಲೆಗಳಲ್ಲಿ ದುಂದುವೆಚ್ಚ ಮಾಡುತ್ತಿರುವ ನೀರನ್ನು ನೋಡಿ, ಸಾಮಾನ್ಯವಾಗಿ ನಾವು ಕಂಡಂತೆ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆಯಾದರೂ ನದಿಗಳಲ್ಲಿ ಪ್ರವಾಹ ಬಂದು ಅಪಾರ ಹಾನಿಯಾಗತ್ತದೆ. ಪ್ರವಾಹ ಕಾಲದ ನೀರನ್ನು ಸಂಗ್ರಹಿಸಿಡಲು ಸಾಧ್ಯವಾದರೆ (ಕೆರೆಗಳಲ್ಲಿ ಅಥವಾ ನದಿಯೇ ಇಲ್ಲದ ಸ್ಥಳದಲ್ಲಿ ಸಣ್ಣ ಸಣ್ಣ ಅಣೆಕಟ್ಟುಗಳನ್ನು ಕಟ್ಟಿ ಅಲ್ಲಿಗೆ ನೀರನ್ನು ಹಾಯಿಸಿಡುವ ಮೂಲಕ) ಅದೇ ಸುಮಾರು ಒಂದು ವರ್ಷದ ಬಳಕೆಗೆ ಸಾಕಾಗುತ್ತದೆ. ಹಾಗೇ ಮಳೆನೀರಿನ ಸಂಗ್ರಹವಂತೂ ಮಾಡಲೇಬೇಕಾದ ಕೆಲಸ. ಈ ರೀತಿಯ ಯೋಜನೆಗಳಿಂದಲೇ ನಮ್ಮ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ.

ವಿಧ್ಯುತ್ ಉತ್ಪಾದನೆಯ ವಿಚಾರಕ್ಕೆ ಬಂದರೆ ಯೋಜನೆ ಗಾತ್ರ ಹೆಚ್ಚಾದಷ್ಟೂ ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ ಕಡಿಮೆಯೆಂದು ಈಗಾಗಲೇ ನಮ್ಮ ಅನುಭವಕ್ಕೆ ಬಂದಿರುವ ವಿಚಾರವಾಗಿದೆ. ಅದಕ್ಕೆ ಬೇಕಾದ ಬಂಡವಾಳ ಮತ್ತು ಅದರಿಂದ ಆಗುವ ಪರಿಸರಹಾನಿಯನ್ನು ಗಣನೆಗೆ ತೆಗೆದುಕೊಂಡರೆ ಸಣ್ಣಯೋಜನೆಗಳೇ ಹೆಚ್ಚು ಉಪಯುಕ್ತವಾದವುಗಳು. ಈ ಬಗ್ಗೆ ಅನೇಕರು ಸಾಕಷ್ಟು ಪ್ರಯೋಗಗಳನ್ನು ಕೂಡಾ ನಡೆಸಿದ್ದಾರೆ. ಪಶ್ಚಿಮ ಘಟ್ಟಗಳ ಕಾಪಿಡಬೇಕಾದ ಅರಣ್ಯ-ಭರಿತ ಪ್ರದೇಶಗಳನ್ನು ಹಾಗೇ ಉಳಿಸಿಕೊಂಡರೂ ಸಹ ಉಳಿದ ಮಲೆನಾಡಿನ ಪ್ರದೇಶದಲ್ಲಿ ಆರ್ಧ ಕಿ.ವಾ. ದಿಂದ ಹಿಡಿದು ಹತ್ತು ಕಿ.ವಾ ತನಕ ಮಳೆಗಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿರುವ ಸಾವಿರಾರು ತಾಣಗಳಿವೆ. ಇವುಗಳನ್ನು ಉಪಯೋಗಿಸಿಕೊಂಡರೂ ನೂರಾರು ಮೆ.ವಾ.ವಿಧ್ಯುತ್ ಉಳಿತಾಯವಾಗುತ್ತದೆ. (ಮಲೆನಾಡಿನಲ್ಲೂ ಮಳೆಗಾಲದಲ್ಲಿ ಕೂಡಾ ಕುಡಿಯುವ ನೀರಿಗಾಗಿ ವಿದ್ಯುತ್ ಪಂಪಿನ ಬಳಕೆ ವ್ಯಾಪಕವಾಗಿದೆ). ಹಾಗೇ ಈಗ ಉತ್ಪಾದನೆಯಾಗುತ್ತಿರುವ ವಿದ್ಯುತ್ತಿನಲ್ಲಿ ಪೋಲಾಗುತ್ತಿರುವ ಪ್ರಮಾಣವನ್ನು ಕಡಿಮೆಮಾಡುವುದೂ ಸೇರಿದಂತೆ ಇತರೇ ಮಾರ್ಗಗಳನ್ನು ಹುಡುಕಬೇಕಾಗಿದೆ. ಸೌರಶಕ್ತಿಯ ಬಳಕೆಯೂ ಈಗೀಗ ಸ್ವಲ್ಪಮಟ್ಟಿಗೆ ಜನಪ್ರಿಯವಾಗುತ್ತಿದೆ.

ಆದರೆ ನಿಜವಾದ ತೊಂದರೆಯಿರುವುದು ಮಾರುಕಟ್ಟೆ ಸಂಸ್ಕೃತಿಯು ಹೇರುತ್ತಿರುವ ಕೊಳ್ಳುಬಾಕತನದ ಏಕರೂಪದ-ಉತ್ಪಾದನೆ ಆಧಾರಿತ ಬೃಹತ್ ಯೋಜನೆಗಳಿಂದ ಮತ್ತು ಆಧುನಿಕವೆಂದು ಕರೆಯಲಾಗುವ ಕೃಷಿ ಪದ್ಧತಿಗಳಿಂದ (ಆದುನಿಕ-ಮಿಶ್ರತಳಿಗಳ ಹೈನೋಧ್ಯಮಕ್ಕೂ ಹೆಚ್ಚು ನೀರು ಬೇಕು) ಇದಕ್ಕೆ ಬದಲಾಗಿ ಕೃಷಿಯಲ್ಲಿ ಹೇಗೋ ಹಾಗೆ ನಮ್ಮ ಬದುಕಿಗೆ ಸಂಬಂಧಪಟ್ಟಂತೆ ಸಹಜ ಸುಸ್ಥಿರ ಪಧ್ಧತಿಗಳ ಅಳವಡಿಕೆ ಮಾತ್ರ ನಮ್ಮನ್ನು ಕಾಪಾಡಬಲ್ಲದು. ನಮ್ಮೆಲ್ಲ ಸಾಂಸ್ಕೃತಿಕ-ಸಾಮಾಜಿಕ, ಭಿನ್ನತೆ-ಪ್ರಾದೇಶಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಪ್ರದೇಶಕ್ಕನುಗುಣವಾಗಿ, ಸ್ಥಳೀಯ ಅನುಭವ-ಪ್ರಯೋಗಗಳ ಮೂಲಕ ಆಧುನಿಕ ವಿಜ್ಞಾನದ ಕೊಡುಗೆಗಳನ್ನು ಪೂರ್ಣನಿರಾಕರಿಸದೆ (ಅದು ಅವಾಸ್ತವ ಕೂಡಾ) ನಮ್ಮ ಇಂದಿನ ಕನಿಷ್ಟ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಇದಕ್ಕೆ ಬೇಕಾಗಿರುವುದು ಪ್ರಬಲ ರಾಜಕೀಯ ಇಛ್ಛಾಶಕ್ತಿ ಮತ್ತು ದೂರದೃಷ್ಟಿಯಳ್ಳ ನಾಯಕತ್ವ. ಇದಕ್ಕೆ ನಮಗಿರುವುದು ಒಂದೇ ದಾರಿ- ನಮ್ಮ ಪ್ರಜಾಪ್ರಭುತ್ವ. ಅದನ್ನು ಉಳಿಸಿಕೊಂಡೂ ಸತತ ಎಚ್ಚರ ಮತ್ತು ನಿರಂತರ ಹೋರಾಟಗಳ ಮೂಲಕವೇ ನಾವು ನಮ್ಮ ನೆಲ ಜಲ ಮತ್ತು ಜೀವವನ್ನು ಉಳಿಸಿಕೊಳ್ಳಬೇಕಾಗಿದೆ.

 

 

‍ಲೇಖಕರು G

29 June, 2011

2 Comments

  1. ಸಿ ಪಿ ನಾಗರಾಜ

    ಪ್ರಸಾದ್ ರಕ್ಷಿದಿ ಅವರೇ ನಿಮ್ಮ ಬರಹಕ್ಕೆ ಏನೆಂದು ಪ್ರತಿಕ್ರಿಯಿಸುವುದು . ” ಬೆಂದ ಮನೆಯಲ್ಲಿ ಹಿರಿದಿದ್ದೇ ಲಾಭ ” ಎನ್ನುವಂತೆ ನಾವೆಲ್ಲರೂ ಪ್ರಕೃತಿ ಸಂಪತ್ತನ್ನು ಸಾವಿರಾರು ಬಗೆಗಳಲ್ಲಿ ದೋಚುತ್ತಿದ್ದೇವೆ . ಸಹಜವಾಗಿ ಹುಟ್ಟಿ ಹರಿಯುವ ನದಿಯ ದಿಕ್ಕನ್ನೇ ಬದಲಾಯಿಸಿದಾಗ , ಅದರ ಜಲದ ಕಣ್ಣುಗಳೇ ಇಲ್ಲವಾಗಬಹುದು ಎಂಬ ಭೀತಿಯಿಲ್ಲದ ಆಡಳಿತಗಾರರಿಂದ ನೀವು ಏನನ್ನೂ ತಾನೇ ನಿರೀಕ್ಷಿಸಲು ಸಾಧ್ಯ ? ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸುವ ನೆಪದಲ್ಲಿ ರೈತರ ಭೂಮಿಯನ್ನು ದುಡ್ಡಿನ ಆಸೆಯನ್ನು ತೋರಿಸುತ್ತಾ ಇಲ್ಲವೇ ಬಲಾತ್ಕಾರದಿಂದಲೇ ಕಸಿದುಕೊಂಡು ಬಂಡವಾಳಶಾಹಿಗಳ ಪಾದಕಮಲಗಳಿಗೆ ಒಪ್ಪಿಸುತ್ತಿರುವ ಇಂದಿನ ಅಭಿವೃದ್ಧಿ ಯೋಜನೆಗಳು ಮುಂದೊಂದು ದಿನ ” ನಾವು ತಿನ್ನುವ ಅನ್ನ ಚಿನ್ನವಾಗುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ “. ನಿಮ್ಮ ಬರಹದಲ್ಲಿನ ವಾಸ್ತವ ಸಂಗತಿಗಳನ್ನು ತಿಳಿದುಕೊಂಡು , ಹೊಟ್ಟೆಯುರಿಯಿಂದ ದೊಡ್ಡದಾದ ನಿಟ್ಟುಸಿರನ್ನು ಬಿಡಬಹುದೇ ಹೊರತು , ಮತ್ತೇನನ್ನು ಮಾಡಲು ಸಾಧ್ಯ ? ಏಕೆಂದರೆ ನೆಲವನ್ನು ಕೊಳ್ಳುವಂತೆ ಜನಗಳನ್ನು ಬೆಲೆಕಟ್ಟಿ ಕೊಂಡುಕೊಳ್ಳಬಲ್ಲ ಶ್ರೀಮಂತಿಕೆ ಕೆಲವರ ಬಳಿಯಿದೆ .

  2. Nagesh. KM

    ಕೋಲಾರದಲ್ಲಿ ಈಗ ಮಳೆ ಬರುವುದೇ ಮೂರು ನಾಲ್ಕು ವರ್ಷಕ್ಕೊಮ್ಮೆ ಬಂದರೂ ಕೆರೆ ತುಂಬುವುದು ಐದು-ಆರೋ ವರ್ಷಕ್ಕೊಮ್ಮೆ,ಕೆರೆಗಳೆಲ್ಲ ಊಳು ತುಂಬಿಕೊಂಡಿವೆ .ಬೋರೆವೆಲ್ ಕೊರೆಸಿದರೂ ನೀರು ಸಿಗುವ ಸಾದ್ಯತೆ ಕಡಿಮೆ ಸಿಕ್ಕರೂ ಸಾವಿರ ಅಡಿಗೂ ಮೇಲೇನೆ.ಅರ್ದಕ್ಕಿಂತ ಹೆಚ್ಚು ಜಮೀನಿನಲ್ಲಿ ವ್ಯವಸಾಯ ನಿಂತು ಹೋಗಿದೆ.ಚಿನ್ನದ ಗಣಿ ಮುಚ್ಚಿ ಹೋಗಿದೆ,ರೇಷ್ಮೆಗೆ ಬೆಲೆ ಬರುವುದೇ ಕಡಿಮೆ,ಹಾಲಿನ ಬೆಲೆಗಿಂತ ಹಸುವಿನ ಆಹಾರವೇ ಅಧಿಕ,ತರಕಾರಿ ಬೆಳೆದವರಿಗೆ ರೇಟು ಸಿಗುವುದಿಲ್ಲ.ರಾಜ್ಯದಲ್ಲಿ ಅಧಿಕ ಹಾಲು,ರೇಷ್ಮೆ,ತರಕಾರಿ,ಮಾವು ಬೆಳೆಯುವ ನಾಡು ಈದಿನ ಬರಪೀಡಿತ ಪ್ರದೇಶ. ಸರ್ಕಾರಗಳಿಗೆ ಕೋಲಾರ ನೆನಪಿಲ್ಲ,ರಾಜಕಾರಣಿಗಳಿಗೆ ಬೇಕಿಲ್ಲ,ಜನಕ್ಕೆ ಪರಿವಿಲ್ಲ,ರೈತರಿಗೆ ಉಳಿವಿಲ್ಲ ,ಕೊನೆಗೆ ನಿಸರ್ಗವೂ ಕೈ ಬಿಡುವಂತಿದೆ ಕೊಲಾರವನ್ನು ಆ ಕೋಲಾರಮ್ಮನೇ ಕಾಪಾಡಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading