ಹೇಮಲತಾ
ಪಿಕ್ಚರ್ ಗಳಲ್ಲಿ ತೋರಿಸುವ ರಾಯಲ್ ಸೀಮಾ ಮನೆತನಗಳಂತ ಎರಡು ದೊಡ್ಡದೊಡ್ಡ ಕುಟುಂಬ. ಮಧ್ಯಾವರ್ತಿಯ ಸಹಾಯದಿಂದ ವಧು-ವರರ ಪರಿಚಯ,ಸಂಬಂಧದ ಕುದುರಿಸುವಿಕೆ . ಒಳ್ಳೆ ಮನೆತನಗಳ ಹಿನ್ನಲೆ,ಆರ್ಥಿಕವಾಗಿ ಸಾಕಷ್ಟು ಬಲಿಷ್ಠತೆ,ಹುಡುಗ ಹುಡುಗಿಯ ವಿದ್ಯಾರ್ಹತೆ ,ಚೆಲುವು ಸೆಳವು ಎಲ್ಲಾ ತಾಳೆಯಾಗುವಂತೆ ಇದ್ದುದ್ದರಿಂದಲೇ ಎರಡು ಮನೆಯ ಜನರು ಒಮ್ಮತದಲ್ಲಿ ಒಪ್ಪುವುದು ಕಷ್ಟವಾಗಲಿಲ್ಲ .ಮುದ್ದಾದ ಹುಡುಗಿಯನ್ನು ಹುಡುಗ ಮನಸಾರೆ ಮೆಚ್ಚಿದ್ದ . ಮುಂದಿನ ಶಾಸ್ತ್ರದ ಭಾಗವಾಗಿ ಒಂದೆರಡು ಬಾರಿ ಇತ್ತಲಿನ ಜನರು ಅಲ್ಲಿಗೆ ಹೋಗುವುದು ,ಅತ್ತಲಿನ ಜನ ಈ ಮನೆಗೆ ಬರುವುದು , ಬಾಯಿತುಂಬಾ ಮಾತಾಡುವುದು , ಉಣ್ಣುವುದು,ಉಪಚರಿಸುವುದು,ಮದುವೆಯ ತಯಾರಿಮಾಡಿಕೊಳ್ಳುವುದು ಇತ್ಯಾದಿ ನಡೆದೇ ಇತ್ತು . ಹಾಗೆ ನೋಡಿದರೆ ಎರಡು ಮನೆಗಳ ನಡುವಿನ ದೂರ ಎರಡು ರಾಜ್ಯಗಳ ಗಡಿರೇಖೆಗಳನ್ನು ದಾಟಿ ಹೋಗಬೇಕಾದಷ್ಟು . ಸಾಕಷ್ಟು ಜನರ ಸಮಯ , ಪರಿಶ್ರಮವನ್ನು ಅದಾಗಲೇ ಆ ಸಂಬಂಧ ಬೇಡಿಪಡೆದ್ದಿದ್ದಾಗಿತ್ತು .
ಮೊದಮೊದಲು ಎಲ್ಲವೂ ಸರಿಯಾಗಿಯೇ ಇದೆ ಅಂತಲೇ ಅನಿಸುತ್ತಿತ್ತು .ಆದರೆ ಈಚೀಚೆಗೆ ಹುಡುಗಿ ಯಾಕೋ ಮೊದಲ ಮೂಡ್ನಲ್ಲಿ ಇರುತ್ತಿರಲಿಲ್ಲ.ಒಂದುದಿನ ಇದ್ದಕ್ಕಿದ್ದ ಹಾಗೆ ಅವನ ಹತ್ತಿರ ಏನೋ ಖಾಸಗಿ ಮಾತಾಡಬೇಕೆಂದಳು.ಯಾವುದೇ ಮಾನಸಿಕ ಸಿದ್ದತೆ ಇಲ್ಲದೆ ಕೇಳಲು ಹೋದವನಿಗೆ ಎದುರಾಗಿದ್ದು ಅನೀರೀಕ್ಷಿತ ತಿರುವು.ಪಾಪ ಹುಡುಗಿ ಹೆಚ್ಚೆಚ್ಚು ಬಾಲಿವುಡ್ ಫಿಲಂ ನೋಡುತ್ತಿದ್ದಳೋ ಏನೋ , ಎಲ್ಲಾ ಹುಡುಗುರಲ್ಲೂ ಹೀರೋ ಮೆಟೀರಿಯಲ್ ಇರುತ್ತಾನೆಂದು ಭಾವಿಸಿ ನಿಮ್ಮಿಂದ ಒಂದು ಸಹಾಯ ಆಗಬೇಕು ಎಂದಳು.
ಸಾರಾಂಶ ಇಷ್ಟೇ .ಕಾಲೇಜಿನ ದಿನಗಳಿಂದ ಪ್ರೀತಿಸಿಕೊಂಡು ಬಂದ ಪ್ರೇಮಿಯಿದ್ದಾನೆ.ಈಗ ಮದುವೆಯ ಏರ್ಪಾಟು ನಡೆಯುತ್ತಿರುವುದು ತನ್ನ ಕೈಮೀರಿದ ದೊಡ್ಡವರ ಮೆಲೋಡ್ರಾಮ. ಪ್ರೀತಿಯ ವಿಷಯ ಹೇಳಲು ಇನ್ನು ಘಳಿಗೆ ಮತ್ತು ಅವಶ್ಯಕ ಧೈರ್ಯ ತನಗೆ ಒದಗಿಬಂದಿಲ್ಲ .ಆದ್ದರಿಂದ ಹೇಗಾದರೂ ಮಾಡಿ ತನ್ನ ಪ್ರೀತಿ ಉಳಿಯಲು ಮತ್ತು ಗೆಲ್ಲಲು ಅವನು ಸಹಾಯಮಾಡಬೇಕು . ಹುಡುಗಿ ಇಷ್ಟವಿಲ್ಲ ಅಂತ ಹುಡುಗನ ಕಡೆಯಿಂದಲೇ ಬಂದರೆ ಅವಳ ಘನತೆ ಅಭಿಮಾನ ಹಾಳಾಗದಂತೆ ಮದುವೆಯ ಮಾತುಕತೆಗಳು ಅಲ್ಲಿಗೆ ನಿಲ್ಲಲು ಸುಲಭ ಸುಸೂತ್ರ . ಕತೆಗೊಂದು ಟ್ವಿಸ್ಟ್ ಬಯಸಿದ ಅವಳು ಅವಶ್ಯಕ ಕಣ್ಣೀರು ಆಣೇ ಪ್ರಮಾಣ ಸಿಂಪತಿ ಅಸಹಾಯಕತೆಯನ್ನೆಲ್ಲ ಬೆರೆಸಿಯೇ ಮಾತಾಡಿ ಹುಡುಗನನ್ನು ಒಪ್ಪಿಸುವ ಪ್ರಯತ್ನ ಮಾಡಿದಳು .

ಸುದ್ದಿಯನ್ನ ಅರಗಿಸಿಕೊಳ್ಳಲು ಅವನಿಗೆ ಒಂದಷ್ಟು ಸಮಯವೇ ಬೇಕಾಯಿತು .ಆದರೆ ಬದುಕು ಸಿನಿಮಾ ಅಲ್ಲ , ಎಲ್ಲರು ನಾಯಕನ ಉದಾತ ತತ್ವಗಳ ಹೊತ್ತವರು ಅಲ್ಲ.ಹಿರಿಯರು ದೊಡ್ಡವರು ಸೇರಿ ಶುರುಮಾಡಿ ಮುಂದುವರಿಸುತ್ತಿದ್ದ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಹುಡುಗಿ ಇಷ್ಟವಿಲ್ಲ ಎಂದು ಹೇಳಿ ಕೆಟ್ಟವನಾಗುವ, ಎಲ್ಲರ ಕಣ್ಣಲ್ಲೂ ನಿಷ್ಟುರನಾಗುವ ಹೊಣೆಯನ್ನು ಅವನು ತಾನೇ ಹೇಗೆ ಒಬ್ಬನೇ ಹೊರಬಲ್ಲ .
ತನ್ನ ಜಿಜ್ಞಾಸೆಯನ್ನು ಅಕ್ಕನಲ್ಲಿ ಹೇಳಿಕೊಂಡ . ಮನೆಯವರು ಮೂರನೆಯವರು ಎಲ್ಲರನ್ನು ಒಳಗೊಂಡಿರುವ ಸನ್ನಿವೇಶದಲ್ಲಿ ನೀವು ನೀವೇ ಡ್ರಾಮ ಹೆಣೆದುಕೊಂಡು ನಿಭಾಯಿಸುವುದು ಸರಿಯಲ್ಲ, ನಮ್ಮ ಮನೆತನಕ್ಕೆ ಅಡ್ಡ ಹೆಸರು ಬರುತ್ತದೆ ಎಂದವಳು ನಡೆದ ವಿಚಾರವನ್ನು ಮನೆಯಲ್ಲಿ ಹೇಳಿದಳು .
ಅಲ್ಲಿಂದ ವಧು ವರರನ್ನು ತೋರಿಸಿದ ಮಧ್ಯಾವರ್ತಿ ಬ್ರೋಕರ್ ಗೆ ಬುಲಾವು ಹೋಯಿತು. ಮುಖ ಕಳೆದುಕೊಂಡ ಅವರು ಹುಡುಗಿಯ ತಂದೆ ತಾಯಿಗೆ ವಿಷಯ ತಲುಪಿಸಿದರು .
ಅಲ್ಲಿ ಸಂದರ್ಭ ಹೇಗೇಗೆ ತಿರುವು ಪಡೆದುಕೊಂಡಿತೋ,ಹುಡುಗಿಯ ಮೇಲೆ ಹೇಗೇಗೆ ಒತ್ತಡ ಬಂದಿತೋ ,ಭಯದಲ್ಲಿ ನಾನು ಹಾಗೆಲ್ಲ ಹೇಳೇ ಇಲ್ಲ ಎಂದು ಬಿಟ್ಟಳು.ಅವಳ ಪೋಷಕರು ನಮ್ಮ ಹುಡುಗಿ ಒಳ್ಳೆಯವಳು ನಿಮ್ಮ ಹುಡುಗನೇ ಇಲ್ಲಸಲ್ಲದ ಕತೆಕಟ್ಟಿ ಅವಳ ಹೆಸರು ಹಾಳುಮಾಡುತ್ತಿದ್ದಾನೆ ಎಂದು ತಿರುಗಿಬಿದ್ದರು . ಇತ್ತ ಹುಡುಗಿ ಕರೆಮಾಡಿ ನಾನು ಆಣೆಪ್ರಮಾಣ ಮಾಡಿದ್ದರು ಹೀಗೆಲ್ಲ ತಂದಿಟ್ಟು ತಮಾಷೆ ನೋಡಲು ಹೇಗೆ ಮನಸುಬಂತು ಹುಡುಗನಿಗೆ ಕೇಳಿದಳು .
ಅನಗತ್ಯ ತಮ್ಮ ಮೇಲೆ ಆರೋಪ ಬಂದಿದ್ದಕ್ಕೆ ಹುಡುಗನ ಕಡೆಯವರು ಕ್ರುದ್ಧರಾದರು,ನಿಮ್ಮ ಹುಡುಗಿ ಸರಿ ಇಲ್ಲ ಎಂದು ಒಗೆದರು .
ಇವರು ಅವರನ್ನು ಜರಿಯುವುದು ಅವರು ಇವರನ್ನು ಜರಿಯುವುದು ನೆಮ್ಮದಿ ಹಾಳು ಮಾಡಿಕೊಂಡು ಪರಿತಪಿಸುವುದು ನಡೆಯಿತು.ಎರಡು ಮನೆಗಳ ಮಧ್ಯದ ಜನಕ್ಕೆ ಒಹಾಪೋಹದ ಮಾತಾಡಲು, ಚರ್ಚಿಸಲು ಒಂದಷ್ಟು ವಿಷಯ ಸಿಕ್ಕಿತು.
ಬಹುಷ್ಯ ಹುಡುಗಿಗೆ ನಿಶ್ಚಿತವಾದ ತೀರ್ಮಾನ ಇದ್ದಿದ್ದರೆ ಮನೆಯವರು ಅಷ್ಟೆಲ್ಲ ಮುಂದುವರಿಯುವ ಮೊದಲು ತನ್ನ ಪ್ರೀತಿಯ ವಿಷಯ ಹೇಳಿರುತಿದ್ದಳೇನೋ . ಎಂದಾದರು ಎದುರಿಸಬೇಕಾದ
ಪರಿಸ್ಥಿತಿಯನ್ನು ಕೊಂಚ ಮುಂಚೆಯೇ ಎದುರಿಸಿವ ಧೈರ್ಯ , ಮುಂಜಾಗ್ರತೆ ತೆಗೆದುಕೊಂಡಿದ್ದರೆ ಬಹುಷ್ಯ ಇಷ್ಟೆಲ್ಲಾ ಗೊಂದಲಗಳು ನಡೆಯುವ ಅವಶ್ಯಕತೆ ಇರಲಿಲ್ಲ .ಹಾಗೆ ಮನೆಯವರು ಅನ್ವೇಷಣೆ ಶುರು ಮಾಡುವ ಮೊದಲು ತಮ್ಮ ತಮ್ಮ ಮಕ್ಕಳ ಕೂಡಿಸಿಕೊಂಡು ಅವರ ಮನಸಿನಲ್ಲಿರುವುದ ಕೇಳಿ ತಿಳಿದುಕೊಂಡಿದ್ದರು ಸರಿಯಿರುತ್ತಿತ್ತು . ಹೇಳಿಕೊಳ್ಳಲು ಸಲಿಗೆ ನೀಡದೆ ಇದ್ದಿದ್ದು, ಪ್ರೀತಿಪ್ರೇಮಗಳ ವಿಷಯದಲ್ಲಿ ಕಟುಧೋರಣೆ ಹೊಂದಿರುವುದು ,ಮಕ್ಕಳನ್ನು ಭಯದಲ್ಲಿ ಬೆಳೆಸುವುದು ನಮ್ಮ ಕೌಟಂಬಿಕ ವ್ಯವಸ್ಥೆಗಳ ಮಿತಿಯೇ ಇರಬೇಕು .ಕಡೆ ಕ್ಷಣದಲ್ಲಿನ ಗೊಂದಲ ,ಗಲಾಟೆ ಮುಖಭಂಗಗಳ ಬದಲು ಬಾಳಬೇಕಾದವರ ಅಭಿಪ್ರಾಯಗಳಿಗೂ ಒತ್ತು ನೀಡುವುದು ಎಂದೆಂದಿಗೂ ಒಳ್ಳೆಯದು .ಅಂತು ನಿಜವಾಗಲು ಪೇಚಿಗೆ ಸಿಲುಕಿಕೊಂಡವರು ವರನ ಕಡೆಯವರು .ಎಷ್ಟೆಲ್ಲಾ ಆಶೋತ್ತರಗಳ ನಂತರ ತಮ್ಮ ಕಡೆಯಿಂದಾಗದ ತಪ್ಪಿಗೆ ಮಾತು ಕೇಳಬೇಕಾಗಿ ಬಂತು .ಎಷ್ಟೆಲ್ಲಾ ತಾಪತ್ರಯಗಳು.
ಪ್ರೀತಿ ನಿವೇದಿಸಿದಾಗ ಒಲ್ಲೆ ಎನ್ನುತ್ತಾಳೆ , ನಂತರ ನಿನ್ನನ್ನು ಬಿಟ್ಟಿರಲಾರೆ ಎನ್ನುತಾಳೆ,ಅವಳ ಮನೆಯಲ್ಲಿ ವರಾನ್ವೇಷಣೆ ಶುರುವಾಗಿದೆ ಪರಿಸ್ಥಿತಿ ಕೈಮೀರುತ್ತಿದೆ,ಯಾವುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ಪೆಚ್ಚುಮೊರೆ ಹಾಕಿಕೊಂಡು ಅವನು ಹೇಳುತ್ತಿದ್ದ. ನಿಶ್ಚಯವಾಗದ ಪ್ರೀತಿ ಕಣ್ಣುತೆರೆವ ಮೊದಲೇ ಅಸುನೀಗಿದ ಕತೆಯಿದು .
ಅವನು ಅಪ್ಪನಿಲ್ಲದ ಮನೆಯ, ದುಡಿಯುವ ಏಕೈಕ ಆಧಾರ ಸ್ಥಂಭ . ಇಬ್ಬರು ತಂಗಿಯರ ಜವಾಬ್ದಾರಿ ಹೊತ್ತು , ನಿಭಾಯಿಸುತ್ತಿರುವ ಕರ್ತವ್ಯನಿಷ್ಠ.
ಅವನು ಮತ್ತು ಅವಳ ನಡುವೆ ಸ್ನೇಹವನ್ನು ಮೀರಿದ ಸೆಳೆತವಿದೆ.ಒಬ್ಬರನ್ನೊಬ್ಬರು ಹಚ್ಚಿಕೊಂಡ್ಡಿದ್ದಾರೆ. ಅದು ಪ್ರೀತಿ ಎಂದು ಅವನಿಗೆ ಗೊತ್ತು .ಆದರೆ ಅವಳಿಗೆ?
ಇದು ಕೇವಲ ನಿನ್ನ ಹುಡುಗಿಯ ಸಮಸ್ಯೆ ಅಲ್ಲ ಬಹುತೇಕ ಕತೆಗಳಲ್ಲಿನ ಹುಡುಗ/ಹುಡುಗಿಯರ ಸಾಮಾನ್ಯ ದ್ವಂದ್ವ ಎಂದು ಹೇಳಬೇಕಿತ್ತು ಅವನಿಗೆ.
ಅವನ ಕುರಿತಾದ ಭಾವನೆ ಅವಳಿಗೆ ಅಸ್ಪಷ್ಟ. ಅವನಿಗಾಗಿ ಮನ ಮಿಡಿಯುತ್ತದೆ , ನಿರಾತಂಕವಾಗಿ ಪ್ರಪಂಚದ ಅಂಚಿನವರೆಗೂ ಜೊತೆನಡೆಯಬಲ್ಲೆ ಎನಿಸುತ್ತದೆ. ಆದರೆ ಮದುವೆ ಬಗ್ಗೆ ಅವನು ಪ್ರಸ್ತಾಪಿಸಿದಾಗ ಮಾತ್ರ ಉತ್ತರ ನಕಾರ . ಸ್ನೇಹ ಪ್ರೇಮವಾಗಿ ಪರಿವರ್ತನೆ ಆಗಿದ್ದು ಅರಿವಿಗೆ ಬಾರದ ಪ್ರಕ್ರಿಯೆ . ಹಚ್ಚಿಕೊಂಡಿಲ್ಲ ಎಂದುಕೊಂಡರು ಆತ್ಮವಂಚನೆ.
ಮನೆಯಲ್ಲಿ ದೊಡ್ಡವರಿಗೆ ಇವೆಲ್ಲ ಹಿಡಿಸೋಲ್ಲ ,ಸ್ಪಷ್ಟವಾಗಿ ಗೊತ್ತು . ಮನೆಯವರ ಬೆಂಬಲವಿಲ್ಲದೆ ಬದುಕಲು ಹೊರಡುವುದು ಊಹಿಸಲಾಗದಷ್ಟು ಕಷ್ಟ.
ದಿಕ್ಕು ಎರಡಾಗಿ ಕವಲೊಡೆದು ಸವಾಲಾಗುತ್ತದೆ. ಒಂದು ಕಡೆ ಅಪ್ಪಅಮ್ಮ ನೆಂಟರು-ಬಂಧುಗಳು ಮಾನಮರ್ಯಾದೆ ಜಾತಿ,ಪ್ರತಿಷ್ಠೆ ಇತ್ಯಾದಿ ಹೆದರಿಸಲು ಶುರುವಿಟ್ಟಿರುತ್ತಾರೆ . ಜೊತೆಗೆ ಭದ್ರ ಬದುಕಿನ ಮತ್ತೊಂದು ಆಯ್ಕೆತೋರಿಸಿ ಅಮೀಶ ಒಡ್ಡುತ್ತಾರೆ . ನಿನ್ನದೇ ದಾರಿಯಲ್ಲಿ ಹೋದರೆ ದುರಂತ ತಪ್ಪಿದ್ದಲ್ಲ ಎಂದು ಭವಿಷ್ಯವನ್ನು ನುಡಿದು ಹಾಗಾದಾಗ ನಾವು ಜೊತೆಗಿರುವುದಿಲ್ಲ ಎನ್ನುವ ಧಮಕಿಯನ್ನು ಹಾಕಿಬಿಡುತ್ತಾರೆ . ಅವರ ಪ್ರಕಾರ ಬದುಕಿನ ವಾಸ್ತವಗಳನ್ನು ಹೆಚ್ಚುಕಂಡ ಅವರಿಗೆ ಯಾವುದುಸರಿ ಯಾವುದು ತಪ್ಪು ಕಾಣುತ್ತದೆ,ಮತ್ತು ತಮ್ಮಮಕ್ಕಳು ಒಳ್ಳೆಯ ಆಯ್ಕೆ ಮಾಡಲಾಗದ ಅಮಾಯಕರು.
ಇನ್ನೊಂದು ದಿಕ್ಕಲ್ಲಿ ಜೀವಮಿಡಿದ ಬಹುಷ್ಯ ಖಾಲಿಜೇಬಿನ ರೋಮಿಯೋ.
ಭಾವುಕತೆಗೆ ಸರಿ ಆದರೆ ಬದುಕಿಗೆ? ಪ್ರಶ್ನೆ ಏಳುತ್ತದೆ.ಆರಿಸಿಕೊಟ್ಟ ದಾರಿ ಸುಲಭ, ಸ್ವತಹ ಆಯ್ದುಕೊಂಡ ದಾರಿಯಲ್ಲಿ ಎಡವು ಕಲ್ಲುಗಳ್ಳಿದ್ದರೆ ರಣರಂಗದಲ್ಲಿ ಒಂಟಿಯಾಗಿಬಿಡುವ ಭಯ !ಅಷ್ಟುದ್ದ ಬದುಕಿನ ನಿರ್ಧಾರ ಮಾಡಲಾಗದ ದ್ವಂದ್ವ .ಕಡೆಗೆ ಮನುಷ್ಯ ಆಯ್ದುಕೊಳ್ಳುವುದು ಕಡಿಮೆ ರಿಸ್ಕ್ ಇರುವ ಮಾರ್ಗವನ್ನೇ.
ಯವ್ವನದಲ್ಲಿ ಎಲ್ಲರು ಪ್ರೇಮಿಗಳೇ ,ಎಲ್ಲೆಲ್ಲು ಆಸಕ್ತಿ ಕೆರಳಿಸುವಂತಹ ಆಕರ್ಷಣೆಗಳೇ. ಪ್ರೀತಿಯಲ್ಲಿ ಆಕರ್ಷಣೆಯಿರುತ್ತದೆಯಾದರು ಆಕರ್ಷಣೆಯಷ್ಟೇ ಪ್ರೀತಿಯಲ್ಲ .ತೀರ ಹದಿಹರೆಯದಲ್ಲಿ ಉಂಟಾಗುವ ಆಕರ್ಷಣೆ , ತುಡಿತಗಳ ಹೊರತುಪಡಿಸಿ ನೆಲೆಯೂರಿ ನಿಂತಮೇಲೆ ಮಿಡಿವ ಸಂಗಾತಿ ಸಿಕ್ಕರೆ ಆಯ್ಕೆಮಾಡಿಕೊಳ್ಳುವುದು ಅಚಾತುರ್ಯವೇನಲ್ಲ.
ಅಂತರಂಗದಲ್ಲಿ ಎಲ್ಲರು ಒಂದಲ್ಲ ಒಂದು ರೀತಿ ಅನಾಥರೆ. ಖಾಲಿ ಶೂನ್ಯತನವೊಂದು ಜೀವತುಂಬಿಕೊಡುವ ಆತ್ಮಸಂಗಾತಿಗಾಗಿ ಸದಾ ಪರಿತಪಿಸುತ್ತಿರುತ್ತದೆ.ಕೆಲವೊಮ್ಮೆ ನಮ್ಮದೇ ತದ್ರೂಪಿ ಚಿಂತನೆಯ ವ್ಯಕ್ತಿಯೊಂದಿಗೆ relate ಆದರೆ,ಕೆಲವೊಮ್ಮೆ ನಾವು ಬಯಸುವ,ಆದರೆ ನಾವೇರಲಾರದ ವಿಶಿಷ್ಟ ವೈರುಧ್ಯದೆಡೆಗೆ ಚಿತ್ತಾಕರ್ಷಣೆ. ಒಟ್ಟಿನಲ್ಲಿ ಸಮಾನಂತರ ಮತ್ತು ಸಮ್ಮಿಳಿತವಾಗುವ ಭಾವಕೋಶಮಿಡಿತ ಅಪರೂಪ.
ಪ್ರತಿವ್ಯಕ್ತಿಯಲ್ಲೂ ಒಂದು ಜೀವವೀಣೆಯಿರುತ್ತದೆ. ತಂತಿ ಸಡಿಲವಾಗಿ ಜೋತುಬಿದ್ದರು,ತೀರ ಬಿಗಿಯಾಗಿ ಕಡಿದುಹೋದರು ರಾಗಹೊಮ್ಮದೇ ಮುರಿದ ತಂಬೂರಿಯಾಗಿ ನಿಷ್ಪ್ರಯೋಜಕವಾಗಿಬಿಡುತ್ತದೆ. ಹದವಾದ ಬಿಗಿತದಲ್ಲಿ ಹಿಡಿದುಕಟ್ಟಿ, ಸುರರಾಗ ಹೊರಡಿಸುವ ಕಂಪನದಲ್ಲಿ ಮೀಟಿದರೆ ಮಾತ್ರ ಸುಮಧುರ ಹಾಡುಕೇಳಬಲ್ಲದು. ಆ ಮೀಟುವ ಬೆರಳುಗಳು ಮತ್ತು ಮಿಡಿದಶ್ರುತಿ ಇದೆಯಲ್ಲ ಅದೇ ದೈವಿಕವಾದದ್ದು. resonance ಎನ್ನುವ ಫಿಸಿಕ್ಸ್ ವಿಷಯವಿದೆ . ಅನುರಣನ ಎನ್ನುತ್ತಾರೆ . frequency match ಅಥವಾ ಆವರ್ತನಮಿಳಿತ ಎನ್ನುವ ದಿವ್ಯ ಅನುಭೂತಿ ಎಲ್ಲರೊಂದಿಗೆ ಘಟಿಸುವಂತದಲ್ಲ. ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದ ತಂಪು ಎನ್ನುವಂತ ನೆನಪು, ಕ್ಷಣಕ್ಷಣವೂ ಆಕರ್ಷಿಸಿ ಜೀವಮಿಡಿಯುವುದೇಕೆ ಎನಿಸುವ ಆತ್ಮಸಾಂಗತ್ಯದ ಭಾವಬಿಂದು.
ಆದರೆ ಅದೊಂದು ಘಟ್ಟ, ಇಷ್ಟೆಲ್ಲಾ ಅದ್ಬುತಗಳನ್ನು ಗ್ರಹಿಸಲಾರದ , ಮೌಲ್ಯ ತಿಳಿಯದ ಘಟ್ಟ. ಆ ಕ್ಷಣಕ್ಕೆ ಇದೆಲ್ಲದರ ಮಹತ್ವ ಅರಿವಾಗುವುದೂ ಇಲ್ಲ.
ಸಮತಟ್ಟಾಗಿ ಒದಗಿ ಬರುವಂತೆ ಕಾಣುವ ದಾರಿಯಲ್ಲಿ ಎಲ್ಲರ ಭಾಷೆಯು ಒಂದೇ ಎನ್ನುವ ಅಮಾಯಕತೆ. ಎಲ್ಲವನ್ನು ಗೆಲ್ಲುವ ಚೈತನ್ಯ ನನಗಿದೆ ಎನ್ನುವ ಆತ್ಮವಿಶ್ವಾಸ.ಹೋಗುತ್ತಾ ಹೋಗುತ್ತಾ ಎಷ್ಟೇ ಕೂಗಿದರು ಕೇಳಿಸದ ಕಿವುಡರು, ಕನವರಿಸಿದರು ಕಾಣಿಸದ ಕುರುಡರ ಮಧ್ಯೆ ಜಗ್ಗಾಡುತ್ತ ,ಆಡುವಭಾಷೆ ಒಂದೇ ಆದರು ಮನಸಿನ ಭಾಷೆ ಬೇರೆಬೇರೆಯೆ ಎಂದರಿವಾಗುವ ಅನುಭವಕ್ಕೆ ಬದುಕನ್ನೇ ಅಡ ಇಡಬೇಕು.
ಮತ್ತೊಂದು ವಿಷಯವೆಂದರೆ ಒಂದು ಹಂತದಲ್ಲಿ ಪ್ರಪಂಚವೇ ಆದ ಮನೆ ಮತ್ತು ಜನ ಹೋಗುತ್ತಾ ಹೋಗುತ್ತಾ ದೂರದೂರ ಸರಿದು ಖಾಲಿಯಾಗಿಬಿಡುತ್ತಾರೆ, ಕಡೆವರೆಗೂ ನಮ್ಮ ಹಿಡಿತದಲ್ಲಿಯೇ ಎಲ್ಲವು ಇರುತ್ತದೇ ಎಂದು ಅವರುಕೊಟ್ಟ ಧೈರ್ಯ ಬದುಕಿನ ಏರುತಗ್ಗುಗಳಲ್ಲಿ ಕುಲುಕಿಕುಲುಕಿ ಚೆಲ್ಲಿಹೋಗಿರುತ್ತದೆ.ಅದು ಪ್ರಾಕೃತಿಕವಾಗಿಯೂ ಹೌದು ಪ್ರಾಪಂಚಿಕವಾಗಿಯೂ ಹೌದು.
ಅಲುಗಾಡಿಸದೆ ಯಾರನ್ನು ಬಿಡುವುದಿಲ್ಲ ಬದುಕು.ಜೀವನವನ್ನು ಎದುರಿಸುವಲ್ಲಿ ಹೋರಾಡಬೇಕಾದ ಕ್ಷಣಗಳು,ಊರಬೇಕಾದ ಹೆಜ್ಜೆಗಳು, ಸವೆಸಬೇಕಾದ ದಾರಿಗಳು ಕೇವಲ ನಮ್ಮನಮ್ಮವೇ.ಮತ್ತು ಅಷ್ಟು ದೀರ್ಘ ನಡೆದುಬಂದಮೇಲೆ ಮತ್ತೆ ಒಬ್ಬೊಂಟಿ !ಆಗ ಮನವರಿಕೆಯಾಗುತ್ತದೆ.ಬದುಕೆಂದರೆ ಏನಿಲ್ಲ ಹಿಡಿಹಿಡಿ ನೆನಪುಗಳು ಮತ್ತು ಜೀವಂತಿಕೆಯ ಕ್ಷಣಗಳು ಮಾತ್ರ, ಕ್ಷಣಗಳಿಗೆ ಜೀವಬರಿಸುವ ಮಾಂತ್ರಿಕ ಕೈಗಳು ಅಮೂಲ್ಯವೆಂದು.
ಹೋರಾಟವೇ ಬದುಕಿನ ನಿಶ್ಚಿತ ಅರ್ಥವಾದ ಮೇಲೆ ಜೊತೆ ಹೋರಾಡಲು ಮಿಡಿತವರಿತ ಸಾರಥಿಯಷ್ಟೇ ಬೇಕು .
ಒಟ್ಟಿನಲ್ಲಿ ಸಮಯ ಮತ್ತು ಸಂದರ್ಭ ಎಲ್ಲರನ್ನು ವಂಚಿಸಿಬಿಡುವ ಅಗೋಚರ ವಿಧಿ . ಸೂಕ್ತವಾದ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ಮಾಡಲು ಬದುಕಿನ ಒಳನೋಟ ಕಾಣುವ ದೃಷ್ಟಿ ಮತ್ತು ಎಲ್ಲವನ್ನು ಗೆಲ್ಲುವ,ಜಯಿಸುವ,ಹುಮ್ಮಸು-ಧೈರ್ಯಬೇಕು. ಅದರಲ್ಲೂ ಹೆಣ್ಣುಮಕ್ಕಳನ್ನು ಹೆಚ್ಚು ಕಾಡುವ ಅಭದ್ರತೆಯ ನೆರಳು, ದ್ವಂದ್ವಗಳು ಈ ರೀತಿಯ ಹೌದು ಮತ್ತು ಇಲ್ಲದರ ನಡುವೆ ತಂದು ನಿಲ್ಲಿಸಿಬಿಡುತ್ತದೆ . ಮತ್ತೊಂದು ಮಗ್ಗಲಿನ ಆಯಾಮಕ್ಕೆ ಕರೆದೊಯ್ಯಬಹುದಾಗಿದ್ದ ಪ್ರೀತಿಯಯನ್ನು ಇದ್ದು ಇಲ್ಲದರ ನಡುವೆ ತೂಗಿ ಮುಗಿಸುತ್ತದೆ.
ಜೀವವೀಣೆ ಮಿಡಿದಾಗ ಕೂಗಿ ಹೇಳುವ ಧೈರ್ಯ, ಸಮಯ ಮೀರುವುದರೊಳಗೆ ಎಲ್ಲರಿಗು ಬರುವಂತಾಗಲಿ.






smilpy super hagi ede akka
Good write up Hema!
ಬದುಕೆಂದರೆ ಏನಿಲ್ಲ ಹಿಡಿಹಿಡಿ ನೆನಪುಗಳು ಮತ್ತು ಜೀವಂತಿಕೆಯ ಕ್ಷಣಗಳು ಮಾತ್ರ,….!!ಅರ್ಥಪೂರ್ಣ ಮಾತು.
ಇಷ್ಟವಾದ ಲೇಖನ.
Dr.Shivanand Kabsad sir: nimma mecchuge nanna apaara santhosha..
Vidhyanna: prothsaahada maadtugalige dhanyavaada
i Can say its just awesome write up.
Thanks Vageesh avare , Kushi aayitu