ಸದಾಶಿವ ಸೊರಟೂರು ಕವನ ಸಂಕಲನ ‘ದೇವರನ್ನು ಹೊರಹಾಕುತ್ತೇನೆ’
ಈ ಕೃತಿಯನ್ನು ‘ಬಹುರೂಪಿ’ ಪ್ರಕಾಶನ ಪ್ರಕಟಿಸಿದೆ.
ಈ ಕೃತಿಯ ಕುರಿತು ಭವ್ಯ ಟಿ ಎಸ್ ಅವರ ಒಂದು ನೋಟ ಇಲ್ಲಿದೆ.
-ಭವ್ಯ ಟಿ ಎಸ್
ದೇವರನ್ನು ಕವಿ ಏಕೆ ಹೊರಹಾಕುತ್ತಾರೆ ಎಂಬ ಕುತೂಹಲದಿಂದ ಈ ಪುಸ್ತಕವನ್ನು ಕೈಗೆತ್ತಿಕೊಂಡೆ. ಪ್ರತಿ ತಿಂಗಳು ಮುಟ್ಟಿನ ನೆಪದಲ್ಲಿ ಹೆಣ್ಣನ್ನು ಹೊರಹಾಕುವ ಸಂಪ್ರದಾಯ ಇನ್ನೂ ಜೀವಂತವಿರುವಾಗ ಇಲ್ಲಿ ಕವಿ ಇದೇ ಕಾರಣದಿಂದ ಆಕೆಯನ್ನು ಒಳ ಬರಮಾಡಿಕೊಂಡು, ದೇವರನ್ನು ಹೊರಹಾಕುತ್ತೇನೆ ಎನ್ನುತ್ತಾರೆ. ಪ್ರತಿ ಮುಟ್ಟು ಕಳೆದಾಗಲೂ ಹೊಸತಾಗುವ ನೀನು ಮಳೆ ಸುರಿದ ಮಾರನೆ ದಿನ ನಗುವ ಬಾನು. ಆಹಾ! ಹೆಣ್ತನದ ಹೆಗ್ಗುರುತಾದ ಮುಟ್ಟನ್ನು ಹೀನವಾಗಿ ನೋಡುವವರು ಓದಬೇಕಾದ ಸಾಲುಗಳಿವು. ಜೊತೆಗೆ ಹೆಣ್ಣು ಪ್ರತಿ ಮಾಸ
ಋತುಚಕ್ರದ ನಂತರ ಎಲ್ಲಾ ನೋವುಗಳನ್ನು ಮರೆತು ಲವಲವಿಕೆಯಿಂದ ಮರಳಿ ತನ್ನ ಚಟುವಟಿಕೆಗಳಲ್ಲಿ ತೊಡಗುವಾಗ ಅವಳಲ್ಲಿ ಅದಮ್ಯ ಚೈತನ್ಯವೊಂದು ಹರಿಯುತ್ತಿರುತ್ತದೆ. ಈ ಸಾಲುಗಳು ಆಕೆಯ ಭಾವಪ್ರಪಂಚವನ್ನು ಪ್ರತಿಬಿಂಬಿಸಿವೆ.
ಇತ್ತೀಚೆಗೆ ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗಸ್ಥ ಮಹಿಳೆಯರ ಹಿತದೃಷ್ಟಿಯಿಂದ ಒಂದು ದಿನದ ಮುಟ್ಟಿನ ರಜೆಯನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಈ ದಿನಗಳಲ್ಲಿ ಹೆಣ್ಣು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಹಲವಾರು ಏರಿಳಿತಗಳಿಗೆ ಒಳಗಾಗುತ್ತಾಳೆ. ಈ ದಿನಗಳಲ್ಲಿ ಆಕೆಗೆ ಹಿತವಾದ ಮಾತು, ಸಾಂತ್ವನ, ಸಹಕಾರಗಳ ಅಗತ್ಯವಿರುತ್ತದೆ. ಸದಾಕಾಲವೂ ಸಂಸಾರದ ನಾನಾ ಜಂಜಾಟಗಳಲ್ಲಿ ಬಸವಳಿಯುವ ಅವಳಿಗೆ ಈ ದಿನಗಳಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು ಮುಟ್ಟನ್ನು ನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಹಿಂದಿನಿಂದಲೂ ಮುಟ್ಟು ಎಂಬ ಪದವೇ ಮೈಲಿಗೆಗೆ ತುತ್ತಾದ ಸಮಾಜ ನಮ್ಮದು. ಮುಟ್ಟಿನ ದಿನಗಳಲ್ಲಿ ಆಕೆ ಮನೆಯೊಳಗೆ ಪ್ರವೇಶಿಸಬಾರದು, ದೇವರ ಮನೆ ಹತ್ತಿರವೂ ಸುಳಿಯ ಕೂಡದು ಎಂಬ ಮೂಢ ನಂಬಿಕೆಗಳಿವೆ. ಆದರೆ ಹೆಣ್ಮನದ ಭಾವಗಳನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಬಲ್ಲ ಕವಿ ಸದಾಶಿವ ಸೊರಟೂರರು ದೇವರನ್ನು ಹೊರಹಾಕುತ್ತೇನೆ ಎಂಬ ಕವಿತೆಯಲ್ಲಿ
ನಿನಗೆ ಗೊತ್ತಾ ನೀ ಮುಟ್ಟಾದ ದಿನ
ನಿನ್ನ ಒಳ ಕರೆದು
ನಾನು ದೇವರನ್ನು ಹೊರ ಹಾಕುತ್ತಿದ್ದೆ
ಮತ್ತು ಎಂದೂ ಹೊರಹಾಕುತ್ತೇನೆ
ಅದೆಷ್ಟು ಪ್ರೇಮಭರಿತ ಮತ್ತು ದೇವರ ಬಗ್ಗೆ ನಿರ್ಭಿಡೆಯಿಂದ ಹೇಳುವ ಮಾತುಗಳಿವು. ಆಕೆಯನ್ನು ಕಾಳಜಿ ಮಾಡ ಬಯಸುವ ಕವಿಯ ಮನ ಮುಟ್ಟಿನ ದಿನಗಳಲ್ಲಿ ಆಕೆಯನ್ನು ದೂರವಿಡುವ ಪದ್ಧತಿಯನ್ನು ವಿರೋಧಿಸುತ್ತದೆ.

ಈ ಸಂಕಲನದಲ್ಲಿ ಇಂತಹ ನಿಷ್ಕಲ್ಮಶ ಪ್ರೇಮವನ್ನು ಅಭಿವ್ಯಕ್ತಿಸುವ ಸುಂದರ ಸಾಲುಗಳು ಬಹಳಷ್ಟು ಇದ್ದು ಮನಸ್ಸಿಗೆ ಬೆಚ್ಚನೆಯ ಭಾವ ನೀಡುತ್ತವೆ.
ಅವ ನನ್ನ ಕಾಲ,
ಕಾಲ ನಿಂತ ದಿನ ನಾನೂ ಇರುವುದಿಲ್ಲ
ಕಾಲವಾಗುವುದೆಂದರೇನು
ಗೊತ್ತಲ್ಲ ನಿಮಗೇ?
ಆಕೆಯ ಬಗ್ಗೆ ಅವನಿಗಿರುವ ಪ್ರೀತಿಯ ಶಕ್ತಿ ಎಂತಹುದೆಂಬುದನ್ನು ಸಾರುವ ಸುಂದರ ಸಾಲುಗಳಿವು.
ಈ ಸಂಕಲನದಲ್ಲಿ ಬಡತನ, ಹಸಿವು ಮತ್ತು ಅದರೊಂದಿಗೆ ಕವಿತ್ವಕ್ಕಿರುವ ಸಂಬಂಧವನ್ನು ಹೇಳುವ ಮನಕಲಕುವಂತಹ ಸಾಲುಗಳಿವೆ.
ಏನೂ ಆಗದ ಬಡವ
ಕವಿಯೂ ಆಗಬಾರದೆನ್ನುವ
ಹುನ್ನಾರವಿದೆ…
ಹಸಿವು ಒಂದು ಕವಿತೆಯಾಗಿಬಿಟ್ಟರೆ
ಎಂಬ ಭಯವೂ ಇದೆ ಇಲ್ಲಿ
ಬಡವನ ಭಾವನೆಗಳು ಹೊರಬಂದರೆ ಅದೊಂದು ಪ್ರಖರವಾದ ಕವಿತೆಯಾಗಬಲ್ಲದು. ಹಸಿವಿನ ಚಿತ್ರಣ ಅದರಲ್ಲಿದ್ದರೆ ಈ ಲೋಕದ ನೈಜಸ್ಥಿತಿಯ ಅನಾವರಣವಾಗಬಹುದು. ಇದು ಸಮಾಜದಲ್ಲಿ ಅನೇಕರ ಮುಖವಾಡವನ್ನು ಕಳಚಬಹುದೆಂಬ ಎಚ್ಚರಿಕೆಯೂ ಇಲ್ಲಿದೆ.
ಪತ್ರಿಕೆ ಹಾಕುವ ಹುಡುಗ… ಎಂಬ ಕವಿತೆಯ ಸಾಲೊಂದು ಮನದೊಳಗೆ ಅಚ್ಚೊತ್ತುತ್ತದೆ.
ನಿತ್ಯ ಬದುಕು ಮುಂಜಾನೆ
ನಮ್ಮನ್ನು ಹೀಗೆಯೇ ಬೀದಿಗೆ ಎಸೆಯುತ್ತದೆ
ನಮ್ಮ ದಿನಗಳು ಎಂದೂ ಒಡೆದಿಲ್ಲ
ಬಡತನಕ್ಕೂ ಒಂದು ಲಯ ಇದೆ
ಬಡವನು ತನ್ನ ಕಾಯಕದಲ್ಲಿ ನಿತ್ಯ ಬದುಕಿನ ಆನಂದ ಸವಿಯುತ್ತಾ ಸಾಗುತ್ತಾನೆ. ಸಣ್ಣ ಸಣ್ಣ ಸಂಗತಿಗಳಲ್ಲಿ ಸಂತಸ ಕಾಣುತ್ತಾನೆ ಎಂಬ ಭಾವವಿಲ್ಲಿದೆ.
ಕಲಿತ ಅಕ್ಷರಗಳಿಗೆ ಬದುಕನ್ನೇ ಬದಲಿಸುವ ಶಕ್ತಿಯಿದೆ ಎಂಬುದನ್ನು ಹೇಳುವ ಕವಿತೆ ಕಪ್ಪು ಹಲಗೆಯ ಮೇಲಿನ ಅಕ್ಷರಗಳು. ಇದರಲ್ಲಿ ಬರುವ ಸಾಲೊಂದು ಹೀಗಿದೆ
ಬದುಕಿನ ಯಾವುದೊ ತಿರುವಿನಲ್ಲಿ
ಧುತ್ತನೆ ಎದುರಾಗಿ
ಹೆಗಲ ಮೇಲೆ ಕೈ ಹಾಕುವ
ನಿಬಿಡ ರಸ್ತೆ ದಾಟಲು ಯೋಚಿಸುತ್ತಾ
ನಿಂತವನ
ಏಕಾಏಕಿ ಕೈ ಹಿಡಿದು ಆಚೆ ರಸ್ತೆಗೂ
ತಲುಪಿಸಿ ಹೋಗುವ
ಆ ಅಭಯ
ಕಪ್ಪು ಹಲಗೆಯಿಂದ ಎಂದೊ
ತಪ್ಪಿಸಿಕೊಂಡಿದ್ದೆ ಇರಬೇಕು
ಶಿಕ್ಷಣ ಈ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ, ಸವಾಲುಗಳನ್ನು ದಾಟುವ ಧೈರ್ಯವನ್ನು ಎದೆಯಲ್ಲಿ ಬಿತ್ತುತ್ತದೆ ಎಂಬುದನ್ನು ಹೇಳುವ ಪದ್ಯವಿದು.
ಕವಿ ತನ್ನ ಸುತ್ತ ನಡೆಯುತ್ತಿರುವ ಘಟನೆಗಳಿಗೆ ಧ್ವನಿಯಾಗುತ್ತಾನೆ. ಮನುಷ್ಯರ ಅನೇಕ ವಿಕೃತಿಗಳೂ ಕವಿತೆಗೆ ವಸ್ತುವಾಗುತ್ತವೆ ಎಂಬುದು ಮೂಲೆಯಲ್ಲಿ ಅಡಗಿ ಕುಳಿತ ಕವಿತೆಯ ಭಾವವಾಗಿದೆ. ಒಬ್ಬ ವ್ಯಾಪಾರಿ ತನ್ನ ಬೇಡಿಕೆ ನೋಡಿಕೊಂಡು ಸರಕು ಜೋಡಿಸುವಂತೆ ಕವಿಯೂ ಮಾರುಕಟ್ಟೆ ನೋಡಿಕೊಂಡೇ ಬರೆದು ಹಾಡುತ್ತಾನೆ. ಪ್ರಶಸ್ತಿಗಾಗಿಯೇ ಬರೆಯುತ್ತಾನೆ. ಆದರೆ ರಸ್ತೆಯಲ್ಲಿ ನೊಂದ ದನಿಗಳು ಸಾಂತ್ವನ ನೀಡುವ ಒಂದೇ ಒಂದು ತುಣುಕು ಕವಿತೆಯ ಸಾಲನ್ನು ಹುಡುಕುತ್ತಿವೆ. ಇಲ್ಲಿ ಮನಮುಟ್ಟುವ ಕವಿತೆಗಳು ಸೃಷ್ಟಿಯಾಗುವ ಅಗತ್ಯವಿದೆ. ಆದರೆ ಎಲ್ಲೋ ಒಂದು ಕಡೆ ಕವಿಯೂ ಸ್ವಾರ್ಥದ ಬೆನ್ನು ಹತ್ತಿದ್ದಾನೆ ಎಂಬ ದನಿ ಇದೆ.
ಸದಾಶಿವ ಸೊರಟೂರರ ಕವಿತೆಗಳ ಶಕ್ತಿಯಿರುವುದು ನಿರ್ಜೀವವೆನಿಸುವ ವಸ್ತುಗಳೊಳಗೂ ಭಾವಗಳನ್ನು ಹುಡುಕುವುದರಲ್ಲಿ. ಪ್ಲಿಪ್ ಕಾರ್ಟಿನಲ್ಲಿ ನಾಳೆಗಳನ್ನು ಬುಕ್ ಮಾಡುವ ಕವಿ ಹಸಿವು, ನೋವು, ಕಣ್ಣೀರು ಈ ಮೂರು ಕಂತಿಗೆ ನಗುವಿನ ಒಂದು ಕಂತು ಉಚಿತವಿತ್ತು ಎಂಬ ಸಾಲುಗಳ ಮೂಲಕ ದಂಗುಬಡಿಸುತ್ತಾರೆ.
ಕವಿ ಕಾಣುವ ಕನಸಿನಲ್ಲಿ ಯಾರದೋ ಗಾಯಗಳು ಕಾಲಿಗೆ ಮೆತ್ತಿಕೊಳ್ಳುತ್ತವೆ. ಯಾರದೋ ಕಣ್ಣೀರನ್ನು ಎಡವಿ ಮುಗ್ಗರಿಸುತ್ತಾರೆ. ಇನ್ನಾರದೋ ಹಸಿವು ಪಾದಕೆ ಚುಚ್ಚುತ್ತದೆ. ಇಲ್ಲಿ ಕವಿ ಯಾವುದೋ ಭ್ರಮಾಲೋಕದಲ್ಲಿ ತೇಲದೆ ವಾಸ್ತವ ಜಗತ್ತಿನ ನೋವಿಗೆ ಕಣ್ಣಾಗಿ, ಕಿವಿಯಾಗಿ ಸದಾ ಹೃದಯಪೂರ್ವಕವಾಗಿ ಮಿಡಿಯಬೇಕಾದ ತುರ್ತನ್ನು ಕುರಿತು ಹೇಳುತ್ತಾರೆ.
ಬದುಕಿನಲ್ಲಿ ಅಸಲಿ ಕವಿತೆ ಬಯಸುವ ನಾವು ಕವಿತೆಯಲ್ಲಿ ನಕಲಿ ಬದುಕನ್ನು ಚಿತ್ರಿಸಿದರೆ ಅದು ನೈಜ ಕವಿತೆಯಾಗಲು ಸಾಧ್ಯವಿಲ್ಲ. ಪದಕ್ಕೆ ಪದ ಉಸಿರು ಸವರಬೇಕು. ಕವಿಯ ಪದಗಳು ಉಸಿರಾಡಬೇಕು. ಬಡತನ, ಶೋಷಣೆ, ಹಸಿವು ಮೊದಲಾದ ಸಮಸ್ಯೆಗಳನ್ನು ನೋಡಿಯೂ ನೋಡದಂತೆ ಇರುವ ಕವಿ ಕವಿಯಾಗಲಾರ.
ಸದಾಶಿವ ಸೊರಟೂರರ ಪ್ರತಿ ಕವಿತೆಗಳಲ್ಲಿ ಜೀವನದ ಹಲವು ಪುಟಗಳಿವೆ. ಸಮಾಜದ ಪ್ರತಿ ವ್ಯಕ್ತಿ ಕಲಿಯಬೇಕಾದ ಪಾಠಗಳಿವೆ. ಶಬ್ದಗಳನ್ನು ಅತಿ ಕಾಳಜಿಯಿಂದ ದುಡಿಸಿಕೊಳ್ಳುವ ಈ ಸಂಕಲನದ ಕವಿತೆಗಳು ಎದೆಎದೆಗಳೊಳಗೆ ಸಂಚಲನ ಮೂಡಿಸುತ್ತವೆ.
ಸಾಲುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತವೆ. ಈ ಕವನ ಸಂಕಲನ ಅಮ್ಮ ಪ್ರಶಸ್ತಿ ಪಡೆದಿರುವುದು ಸಂತಸದ ಸಂಗತಿ. ಕವಿಗಳಿಗೆ ಅಭಿನಂದನೆಗಳು. ಇನ್ನಷ್ಟು ಜೀವನ್ಮುಖಿ ಕೃತಿಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.
ದೇವರನ್ನು ಹೊರಹಾಕುತ್ತೇನೆ
ಲೇಖಕರು: ಸದಾಶಿವ ಸೊರಟೂರು
ಪ್ರಕಾಶಕರು: ಬಹುರೂಪಿ
ಸಂಪರ್ಕ: 70191 82729
ಆನ್ ಲೈನ್ ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ






0 Comments