ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಹೊಸ ಕವಿತೆ – ಕುಡಿಯಲಾದೀತೆ ನೆತ್ತರನು?

ಜಿ ಪಿ ಬಸವರಾಜು

ಅನ್ನದಿಂದ ಸುರುವಾದ ನಮ್ಮ
ಮಾತು ಮೀನು ಮಾಂಸ ಪ್ರಾಣಿ
ಕೊಲೆ ಎಲ್ಲವನ್ನೂ ದಾಟಿಬಂತು

ಹಿಂಸೆ ಅಹಿಂಸೆಯನ್ನೂ ನಾವು
ಚರ್ಚಿಸಿದೆವು ಕೊನೆಗಾಣದಂತೆ

ಕೊಲ್ಲುವ ಕಾಯಕವನ್ನು ಎಂಥ
ಅದ್ಭುತ ಕಲೆ ಎಂದು ಹೊಗಳಿ
ಕೊಲೆಯ ಹಿಂದಿನ ನೋವನ್ನು
ನೆನೆದು ಗಂಟಲನ್ನು ಸರಿಪಡಿಸಿ-
ಕೊಂಡು, ಮಾಂಸ ಕೊಳ್ಳುವುದ
ನಿಲ್ಲಿಸಬಹುದೇ ಎಂದು ಚಿಂತಿಸಿ,
ಸಂಜೆಯ ತಂಗಾಳಿ ಹಾಯಾಗಿ
ಸುಳಿದು, ಮನೆದಾರಿ ಹಿಡಿದೆವು

ಉಣ್ಣುವಾಗ ಮಾಂಸದ ರುಚಿ
ಅಡುಗೆಯ ರುಚಿ ಅದರ ಘಮ
ಚರ್ಚೆ ಚಿಂತನೆ ಬೆಳೆ ಬೆಳೆದು
ತಿಂದದ್ದು ಹೆಚ್ಚಾಗಿ ಉದರ
ಭಾರ, ಮಲಗಿದರೆ ಕನಸಿನಲ್ಲಿ
ಕತ್ತಿಯ ಹೊಳಪು ಕುಕ್ಕಿತು ಕಣ್ಣು

ಗುಡಿ ಗೋಪುರ ಚರ್ಚು ಮಸೀದಿ
ದೇಶದೇಶಗಳಲ್ಲಿ ಕತ್ತಿಯೇ
ಹೊಳೆದು, ಕತ್ತುಗಳ ತರಿದು
ನೆತ್ತರ ನದಿ ಹರಿದು ಕೆಂಪಾಯಿತು
ಕಡಲು, ನೀರಾಯಿತು ಉಪ್ಪುಪ್ಪು
ಯಾವುದು ಹಗಲು ಯಾವುದು ರಾತ್ರಿ
ಬೆವರಿ ಬೆದರಿ ಧಾತ್ರಿ ಕಣ್ಣುಮುಚ್ಚದೆ
ಕನಸು ಕಾಣದೆ ಕಂಬನಿಯೂ ಬತ್ತಿ
ಎಲ್ಲೆಲ್ಲು ಧಗೆ ಹಾಹಾಕಾರ, ನೆತ್ತರನು
ಕುಡಿಯಲಾದೀತೇ ಗಂಟಲೊಣಗಿದರೂ

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading