ಜಿ ಪಿ ಬಸವರಾಜು ನೋಡಿದ ‘ಮುಟ್ಟಿಸಿಕೊಂಡವನು’

ಮುಟ್ಟಿ ಮಾತನಾಡಿಸಿದ ರಂಗಪ್ರಯೋಗ

ಜಿ.ಪಿ.ಬಸವರಾಜು

ಲಂಕೇಶರು ʼಮುಟ್ಟಿಸಿಕೊಂಡವನುʼ ಕತೆಯನ್ನು ಬರೆದು ೩೫ ವರ್ಷಗಳು ತುಂಬಿವೆ. ಲಂಕೇಶ್‌ ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದ ಕಾಲದಲ್ಲಿ, ಲಂಕೇಶ್‌ ಈ ಕತೆಯನ್ನು ತಮ್ಮ ಪತ್ರಿಕೆಯ ಒಂದೇ ಒಂದು ಪುಟದಲ್ಲಿ ಬರೆದಿದ್ದರು. ಅಂದಿನಿಂದ ಇಂದಿನವರೆಗೆ ಈ ಕತೆಯನ್ನು ಜನ ಓದುತ್ತಲೇ ಇದ್ದಾರೆ. ಪಠ್ಯ ಪುಸ್ತಕದಲ್ಲೂ ಈ ಕತೆ ಸೇರಿರುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿಯೂ ಈ ಕತೆ ಕುಳಿತುಬಿಟ್ಟಿದೆ.

ಲಂಕೇಶ್‌ ಬಹಳ ಸೂಕ್ಷ್ಮ ಕತೆಗಾರರು. ಸಮಾಜವಾದಿ ಚಿಂತನೆಯ ಬೆಳಕಿನಲ್ಲಿ ತಮ್ಮ ಆಲೋಚನಾ ಕ್ರಮವನ್ನು ರೂಪಿಸಿಕೊಂಡವರು; ಸದಾ ಸಮಾಜಕ್ಕೆ ಮುಖಮಾಡಿ ನಿಂತವರು. ನಮ್ಮಲ್ಲಿನ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ, ಸಾಮಾಜಿಕ, ಆರ್ಥಿಕ ಏರುಪೇರುಗಳು, ದೇವರು, ನಂಬಿಕೆ, ಮೌಢ್ಯ, ವೈಚಾರಿಕ ಎಚ್ಚರ, ಸಾಂಸ್ಕೃತಿಕ ಪಲ್ಲಟಗಳನ್ನು ಗಮನಿಸುತ್ತಲೇ ಅವರು ಮನುಷ್ಯನ ಒಳಗಿರುವ ಒಳ್ಳೆಯತನ, ಮುಗ್ಧತೆ ಮತ್ತು ಕೆಟ್ಟತನಗಳನ್ನೂ ಗುರುತಿಸಿದವರು.

ʼಮುಟ್ಟಿಸಿಕೊಂಡವನುʼ ಕತೆಯ ಕೇಂದ್ರವೂ ಇದೇ.  ಮನುಷ್ಯ, ಅದರಲ್ಲೂ ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾಗಿಯೇ ಇರುವ  ಒಳ್ಳೆಯತನ ಮತ್ತು ಮುಗ್ಧತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲುಗುತ್ತವೆ ಎಂಬುದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ.

ದಲಿತ ಸಮುದಾಯದಿಂದ ಬಂದ ವೈದ್ಯ ಡಾ. ತಿಮ್ಮಪ್ಪ ತನ್ನ ಕ್ಷೇತ್ರದಲ್ಲಿ ಪವಾಡವನ್ನು ಮಾಡಬಲ್ಲಂಥ ಸಮರ್ಥ ವೈದ್ಯ. ಆದರೂ ಆತನನ್ನು ಈ ಸಮಾಜ ಜಾತಿಯ ಚೌಕಟ್ಟಿನಲ್ಲಿಟ್ಟೇ ನೋಡುತ್ತದೆ. ಡಾ. ತಿಮ್ಮಪ್ಪನ ಒಳ್ಳೆಯತನ, ಪ್ರೀತಿಯನ್ನು ತುಳುಕಿಸುವ ವ್ಯಕ್ತಿತ್ವ, ನೇತ್ರ ಚಿಕಿತ್ಸೆಯಲ್ಲಿ ತೋರುವ ಅದ್ಭುತ ಕೌಶಲ ಇವು ಯಾವುವೂ ಗಣನೆಗೇ ಬಾರದೆ ಜಾತಿಯೇ ಪ್ರಧಾನವಾಗುವುದು ನಮ್ಮ ಸಮಾಜದ ಕಾಲಾಂತರದಿಂದ ಪಡೆದುಕೊಂಡು ಬಂದ ರೋಗದ ಉಲ್ಬಣ ಸ್ಥಿತಿಯನ್ನೇ ತೋರಿಸುತ್ತದೆ. ಇಷ್ಟಾದರೂ ಡಾ. ತಿಮ್ಮಪ್ಪ ತನ್ನ ಮನಸ್ಸಿನ ಸಮತೋಲವನ್ನು ಕಳೆದುಕೊಳ್ಳದೆ ತನ್ನೊಳಗಿನ ಪ್ರೀತಿ-ಕರುಣೆಗಳನ್ನು ಕಾಪಿಟ್ಟುಕೊಂಡವನು.

ಇನ್ನೊಂದು ತುದಿಯಲ್ಲಿ ಬಸ್ಲಿಂಗ ಇದ್ದಾನೆ. ಈತ ಒಂದಿಷ್ಟು ಮೇಲು ಜಾತಿಗೆ ಸೇರಿದವರು. ಮೈಬಗ್ಗಿಸಿ ದುಡಿಯ ರೈತ; ಮುಗ್ಧ. ಸುಳ್ಳುಹೇಳಲು ಬಾರದ ಅಮಾಯಕ. ತನ್ನ ನಾಲ್ಕಾರು ಎಕರೆ ಭೂಮಿಯಲ್ಲಿ, ದುಡಿಯಲು ಮೊಂಡು ಹೂಡುವ ಎರಡು ಎತ್ತುಗಳನ್ನು ಇಟ್ಟುಕೊಂಡು ಹೆಂಡತಿ ಮತ್ತು ಕೈಗೂಸಿನೊಂದಿಗೆ ಸಂಸಾರ ತೂಗಿಸುವ ಹೃದಯವಂತ. ಬಸ್ಲಿಂಗನ ಹೆಂಡತಿ ಸಿದ್ಲಿಂಗಿಯೂ ಮುಗ್ಧೆ. ತಾನು, ತನ್ನ ಗಂಡ, ತನ್ನ ಕೂಸು, ತನ್ನ ಹೊಲ ಮನೆ ದುಡಿಮೆ ಎತ್ತುಗಳು ಹೀಗೆ ಇದೇ ವರ್ತುಲದಲ್ಲಿ ಸುತ್ತುವ ಹೆಣ್ಣು.

ಲಂಕೇಶ್‌ ಈ ಮೂರು ಪಾತ್ರಗಳ ಸುತ್ತ ಕತೆ ಕಟ್ಟುತ್ತಾರೆ. ಬಸ್ಲಿಂಗನ ಕಣ್ಣುನೋವು ಡಾ.ತಿಮ್ಮಪ್ಪನ ಸಂಪರ್ಕಕ್ಕೆ ಕಾರಣವಾಗುತ್ತದೆ. ಇಬ್ಬರೂ ಒಳ್ಳೆಯವರೇ. ಬಸ್ಲಿಂಗನ ಬಗ್ಗೆ ಹುಟ್ಟುವ ಪ್ರೀತಿ ವಿಶ್ವಾಸಗಳಿಂದಲೇ ತಿಮ್ಮಪ್ಪ ಕಣ್ಣಿನ ಚಿಕಿತ್ಸೆ ಮಾಡುವುದು. ಆದರೆ ತಿಮ್ಮಪ್ಪನ ಜಾತಿಯೇ ದೊಡ್ಡ ಅಡ್ಡಗೋಡೆಯಾಗಿರುವ ಊರಲ್ಲಿ ತಿಮ್ಮಪ್ಪ ಬಸ್ಲಿಂಗನನ್ನು ಮುಟ್ಟಿದ್ದು ದೊಡ್ಡ ರಾದ್ಧಾಂತಕ್ಕೆ ಕಾರಣವಾಗುತ್ತದೆ. ಸಿದ್ಲಿಂಗಿ ಮುಗ್ಧೆಯಾದರೂ ತಿಮ್ಮಪ್ಪನ ಜಾತಿಯ ವಿಚಾರ ಬಂದು ಮುಟ್ಟಿದಾಗ ಗಂಡನನ್ನು ಹೀಯಾಳಿಸುತ್ತ ಅವನನ್ನ ಮೈಲಿಗೆಯಿಂದ ತಪ್ಪಿಸಲು, ಮಡಿ ಮಾಡಲು ಸ್ನಾನ ಮಾಡಿಸುತ್ತಾಳೆ. ಹೀಗೆ ಈ ʼಮುಟ್ಟುವʼ ಕ್ರಿಯೆ ಮಹಾ ಅಪರಾಧವಾಗಿ ಇಡೀ ಊರನ್ನು ಆವರಿಸಿಬಿಡುತ್ತದೆ.

ಈ ಮುಟ್ಟುವ ಕ್ರಿಯೆಯ ಕೇಂದ್ರದ ಮೇಲೆ ಲಂಕೇಶರು ಬಿಡುಬೆಳಕನ್ನು ಬಿಡುತ್ತಾರೆ. ಜೊತೆಗೆ ಹಳ್ಳಿಗಾಡಿನ ಅಸಂಬದ್ಧ ನಡವಳಿಕೆಗಳು, ಅರೆಬರೆ ತಿಳುವಳಿಕೆಗಳು, ಬೇಕಾಬಿಟ್ಟಿ ಕೊಡುವ ಬಿಟ್ಟಿ ಉಪದೇಶಗಳು, ವೈದ್ಯ ವಿಚಾರ ತಮಗೇನೂ ತಿಳಿಯದಿದ್ದರೂ, ಎಲ್ಲವನ್ನು ಬಲ್ಲವರಂತೆ ಏನೇನೋ ಮದ್ದು, ಚಿಕಿತ್ಸೆ ಹೇಳುವ ಉಡಾಫೆ ಮಾತುಗಳು, ಹೊಣೆಗೇಡಿತನ ಎಲ್ಲವನ್ನೂ ತೋರಿಸುತ್ತ ನಮ್ಮ ಸಮಾಜವನ್ನು ಸುತ್ತಿಕೊಂಡಿರುವ ಮೌಢ್ಯದ ಪೊರೆಯನ್ನೂ ತೋರಿಸುತ್ತಾರೆ.

ಗಂಭೀರ ಸಮಸ್ಯೆಯೊಂದನ್ನು ಬಿಚ್ಚಿಡುತ್ತಲೇ ತಿಳಿಹಾಸ್ಯ ಜಿನುಗಿಸುವ ಇಂಥ ಪ್ರಸಂಗಗಳು ಕತೆಯ ಓಟವನ್ನು, ಲವಲವಿಕೆಯನ್ನು ಹೆಚ್ಚಿಸುತ್ತವೆ.

ಮುಟ್ಟಿಸಿಕೊಳ್ಳುವ ಕ್ರಿಯೆಯಲ್ಲಿ ಬಲಿಪಶುಗಳಾಗುವವರು ಬಸ್ಲಿಂಗ, ಸಿದ್ಲಿಂಗಿ ಮತ್ತು ಡಾ. ತಿಮ್ಮಪ್ಪ. ಮೂವರಲ್ಲೂ ಒಳ್ಳೆಯನವಿದೆ; ಮುಗ್ಧತೆಯಿದೆ. ಸಮಾಜ ರೂಪಿಸಿದ ಜಾತಿಯ ಸುಳಿಯಿಂದ ಹೊರಬರಲಾಗದೆ ಈ ಮೂವರೂ ತತ್ತರಿಸುವುದನ್ನು ಈ ಕತೆ ಹೇಳುತ್ತದೆ. ಸಿದ್ಲಿಂಗಿಗೆ ಬಹಿಷ್ಕಾರದ ಭಯ. ಬಸ್ಲಿಂಗನಿಗೆ ಕಣ್ಣಿನ ನೋವು, ಜಾತಿಯ ರಾಜಕೀಯ ಒತ್ತಡ, ಇದೆಲ್ಲದರಿಂದ ಬಳಲುವ ಅವನು ಮಾನಸಿಕವಾಗಿ ಅಸ್ವಸ್ಥನಾಗಿ ತಾನು ಪ್ರೀತಿಸುವ ತಿಮ್ಮಪ್ಪನನ್ನು ಯದ್ವಾತದ್ವ ಬಯ್ಯುವ ಹಂತಕ್ಕೂ ಹೋಗಿ ಮನಸ್ಸಿನ ಸಮತೋಲವನ್ನು ಕಳೆದುಕೊಳ್ಳುತ್ತಾನೆ. ಡಾ. ತಿಮ್ಮಪ್ಪನ ನೋವು ಇನ್ನೊಂದು ತೆರೆನಾದದ್ದು. ಮುಗ್ಧ ಬಸ್ಲಿಂಗ ಸುಮ್ಮನೆ ಎಲ್ಲ ಆಘಾತಗಳಿಗೆ ಸಿಕ್ಕು ತನ್ನ ಮುಗ್ಧತೆಯನ್ನು ಮತ್ತು ಕಣ್ಣನ್ನು ಕಳೆದುಕೊಳ್ಳುತ್ತಿದ್ದಾನೆ ಮತ್ತು ಒಳ್ಳೆಯತನದಿಂದಲೂ ದೂರವಾಗುತ್ತಿದ್ದಾನೆ ಎಂಬ ಆಘಾತಕಾರೀ ಆತಂಕದಲ್ಲಿ ತಿಮ್ಮಪ್ಪ ನಲುಗುತ್ತಾರೆ.

ಕೊನೆಗೂ ಈ ಎಲ್ಲ ಕ್ಷುದ್ರತೆಯನ್ನು ಗೆಲ್ಲವುದು ಒಳ್ಳೆಯತನವೇ. ಕಣ್ಣಿನ ಕಾರಣವಾಗಿ ಎಲ್ಲೆಲ್ಲಿಯೋ ಸುತ್ತಿ ಕೊನೆಗೂ ಬಸ್ಲಿಂಗ ಬಂದು ಸೇರುವುದು ಡಾ. ತಿಮ್ಮಪ್ಪನನ್ನೇ. ಹೃದಯಗಳ ಕಣ್ಣು ತೆರೆದು ಎಲ್ಲವನ್ನೂ ಮೀರುವ ಒಂದು ಅಪರೂಪದ ಸನ್ನಿವೇಶವೂ ತೆರೆದುಕೊಳ್ಳುತ್ತದೆ. ಹೊಸ ನೋಟವೂ ಕಾಣಸಿಗುತ್ತದೆ. 

ಲಂಕೇಶರ ಈ ಪುಟ್ಟ ಕತೆಯನ್ನು, ಅದರ ಕೇಂದ್ರ ವಸ್ತುವನ್ನು ರಂಗದ ಮೇಲೆ ತರುವುದು ಸುಲಭವಲ್ಲ. ಪ್ರತಿಭೆಯ ಸಾಮರ್ಥ್ಯ ಇರಲೇ ಬೇಕಾಗುತ್ತದೆ. ರಂಗಾಯಣದ ಅನುಭವೀ ಕಲಾವಿದೆ ಕೆ.ಆರ್‌. ನಂದಿನಿ ಲಂಕೇಶರ ಆಶಯಕ್ಕೆ ಭಂಗ ತಾರದಂತೆ ಈ ಕತೆಯನ್ನು ರಂಗದ ಮೇಲೆ ಕಟ್ಟುತ್ತಾ ಹೋಗುತ್ತಾರೆ. ಮುಟ್ಟುವ ಕ್ರಿಯೆಯನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಸ್ತರಿಸುತ್ತಾರೆ. ನಾಟಕದಲ್ಲಿ ಬಸ್ಲಿಂಗನ ಎತ್ತುಗಳಿಗೆ ಇನ್ನಷ್ಟು ಜೀವತುಂಬಿ ರಂಗದ ಮೇಲಿನ ಪಾತ್ರ ಮಾಡುತ್ತಾರೆ. ತಾನು ನೊಂದ, ಕೈಚೆಲ್ಲಿದ ಹೊತ್ತಿನಲ್ಲಿ ಬಸ್ಲಿಂಗ ತನ್ನ ಎತ್ತುಗಳನ್ನು ಜೀವಂತ ವ್ಯಕ್ತಿಗಳಂತೆ ಮುಟ್ಟಿ ಮಾತನಾಡಿಸಿ ಹೊಸ ಚೈತನ್ಯ ಪಡೆದುಕೊಳ್ಳುತ್ತಾನೆ. ಪ್ರಾಣಿಗಳನ್ನು ಎಗ್ಗಿಲ್ಲದೆ ಮುಟ್ಟುವ, ಮಾತನಾಡಿಸುವ, ಪ್ರೀತಿಸುವ ಮನುಷ್ಯ, ತನ್ನಂತೆಯೇ ಉಸಿರಾಡುವ, ಘನತೆಗೆ ಎರವಾಗದೆ ಬದುಕುವ ಇನ್ನೊಬ್ಬ ಮನುಷ್ಯನನ್ನು ಮುಟ್ಟಲಾರ; ಜಾತಿ ಅವನಿಗೆ ಅಡ್ಡಬರುತ್ತದೆ. ನಾಟಕ ಈ ಎಳೆಯನ್ನೂ ಸ್ಪಷ್ಟವಾಗಿ ತೋರಿಸುತ್ತದೆ.

ಪರಿವರ್ತನೆಗೊಂಡ ಸನ್ನಿವೇಶದಲ್ಲಿ ಬಸ್ಲಿಂಗ ಮತ್ತು ತಿಮ್ಮಪ್ಪ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಪರಸ್ಪರ ಮುಟ್ಟುವ ಕ್ರಿಯೆಯನ್ನು ಹೃದಯ ಮುಟ್ಟುವಂತೆ ಹೇಳಿರುವ ಈ ನಾಟಕ ಉದ್ದಕ್ಕೂ ತನ್ನ ಲವಲವಿಕೆಯನ್ನು, ಜೀವಂತಿಯನ್ನು ತೋರಿಸುತ್ತಲೇ ಹೋಗುತ್ತದೆ. ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡು, ತಿಮ್ಮಪ್ಪನಿಂದ ಮುಟ್ಟಿಸಿಕೊಂಡು ಮನೆಗೆ ಬರುವ ಸನ್ನಿವೇಶದಲ್ಲಿ ಸಿದ್ಲಿಂಗಿ (ಶಶಿಕಲಾ ಬಿ.ಎನ್.) ಮಡಿ-ಮೈಲಿಗೆಯನ್ನು ಮಾತು, ಅಭಿನಯ , ಕ್ರಿಯೆ, ಹತಾಶೆ, ನೋವುಗಳ ನೆಲೆಯಲ್ಲಿ ರಂಗದಲ್ಲಿ ತರುವ ರೀತಿ ಅದ್ಭುತವಾಗಿದೆ.

ನಾಟಕದ ಉದ್ದಕ್ಕೂ ತಿಳಿಯಾಗಿ ಚಿಮ್ಮುವ ಹಾಸ್ಯ ನಿರ್ದೇಶಕಿಯ ಜಾಣ್ಮೆಯನ್ನು ತೋರುವಂತಿದೆ.

ಬಸ್ಲಿಂಗ (ಕೃಷ್ಣಕುಮಾರ್‌ ನಾರ್ಣಕಜೆ), ಸಿದ್ಲಿಂಗಿ (ಶಶಿಕಲಾ ಬಿ. ಎನ್‌.) ಮತ್ತು ಡಾ. ತಿಮ್ಮಪ್ಪ (ಮಹದೇವ್)‌ ಅವರ ಜೀವ ಚೈತನ್ಯ ಉಕ್ಕಿಸುವ ನಟನೆ ಬಹುಕಾಲ ಮನದಲ್ಲಿ ಪ್ರತಿಧ್ವನಿಸುವಂತಿದೆ. ಸಣ್ಣಪುಟ್ಟ ಪಾತ್ರಗಳಾದರೂ ಅವಕ್ಕೆ ನ್ಯಾಯ ಸಲ್ಲಿಸುವುದು ಮತ್ತು ಜೀವ ತುಂಬುವುದು ಎಷ್ಟು ಮುಖ್ಯ ಎನ್ನುವುದನ್ನು ಪರಿಣತ ಕಲಾವಿದೆ ಗೀತಾ ಮೋಂಟಡ್ಕ ತೋರಿಸಿಕೊಟ್ಟರು. ಅವು ಎತ್ತುಗಳಲ್ಲ, ಕೆಂಚ ಮತ್ತು ಮಲ್ಲ ಎಂಬುದನ್ನು ಸಾಬೀತು ಪಡಿಸುವಂತೆ ಇಬ್ಬರು ಹೊಸ ನಟರು – ಧನಂಜಯ ಆರ್.ಸಿ. ಮತ್ತು ಮಹೇಶ್‌ ಕಲ್ಲತ್ತಿ- ಅಭಿನಯಿಸಿದರು.

ಕಲಾವಿದ ಎಚ್‌.ಕೆ. ದ್ವಾರಕನಾಥರ ರಂಗ ವಿನ್ಯಾಸ ಎಂದರೆ ಸದಾ ಹೊಸತನದಿಂದ ಕೂಡಿರುತ್ತದೆ. ʼಮುಟ್ಟಿಸಿಕೊಂಡವರುʼ ಮತ್ತೆ ಈ ಅಂಶವನ್ನೇ ಸಾಬೀತು ಪಡಿಸಿತು. ಇಡೀ ನಾಟಕದ ಭಾವವನ್ನು ಏರಿಳಿವನ್ನು ಬಣ್ಣಗಳಲ್ಲಿ ಬಿಂಬಿಸುವಂತೆ, ರಂಗವಿನ್ಯಾಸದಲ್ಲಿ ರೂಪಿಸುವಂತೆ ದ್ವಾರಕಾನಾಥ್‌ ಶ್ರಮಿಸಿದ್ದು ಕಣ್ಣಿಗೆ ಕಟ್ಟುವಂತಿತ್ತು.‌ ಕಣ್ಣು ಮತ್ತು ನೋಟ ಈ ನಾಟಕದ ಮುಖ್ಯ ವಸ್ತು. ಇದನ್ನು ಭಿತ್ತಿಯಲ್ಲಿ ಕಾಣಿಸುವ ಪ್ರಯತ್ನವನ್ನು ದ್ವಾರಕಾನಾಥ್‌ ಮಾಡಿದ್ದರೆ…..

ಪ್ರಶಾಂತ ಹಿರೇಮಠ ರಂಗಾಯಣದ ಅನುಭವೀ ಕಲಾವಿದ. ರಂಗಭೂಮಿಯ ಅನೇಕ ಮುಖ್ಯ ಸಂಗತಿಗಳಲ್ಲಿ ಸುದೀರ್ಘ ಕಾಲ ತರಬೇತಿ ಪಡೆದವರು. ಸಂಗೀತವೂ ಅವರ ಪ್ರಿಯ ಮಾಧ್ಯಮವೇ. ಈ ನಾಟಕ್ಕೆ ಪ್ರಶಾಂತ್‌ ಅಳವಡಿಸಿದ ಸಂಗೀತ ಪರಿಣಾಮಕಾರಿಯಾಗಿಯೇ ಇತ್ತು. ಮಡಿ-ಮೈಲಿಗೆಯನ್ನು ತೊಡೆದುಹಾಕುವಂತೆ ಅವರು ಪಾಶ್ಚಾತ್ಯ ಸಂಗೀತವನ್ನು ಅಳವಡಿಸಿದ್ದು ಗಮನ ಸೆಳೆಯುವ ಹಾಗಿತ್ತು. ಲಂಕೇಶರ ನಾಟಕ ಗ್ರಾಮ ಪರಿಸರವನ್ನು ಹೊದ್ದುಕೊಂಡದ್ದು. ನಮ್ಮ ಸ್ಥಳೀಯ ಸಂಗೀತ, ಸಂಗೀತ ಪರಿಕರಗಳು ಸಮೃದ್ಧಿಯನ್ನು ತುಳುಕಿಸುವಂತಿದ್ದರೂ ಪ್ರಶಾಂತ ಈ ಕಡೆ ನೋಡದೆ ಹೋದದ್ದು ಯಾಕೆ ಎನ್ನುವ ಪ್ರಶ್ನೆಯಂತೂ ಕಾಡುತ್ತದೆ.

ಬಸ್ಲಿಂಗನ ಕಣ್ಣು ಮಂಜಾಗುವುದು ಸೇರಿದಂತೆ ಅನೇಕ ಸನ್ನಿವೇಶಗಳನ್ನು ಅರ್ಥಪೂರ್ಣವಾಗಿ ಹಿಡಿಯುವಲ್ಲಿ ಮಹೇಶ್‌ ಕಲ್ಲತ್ತಿ ಅವರ ಬೆಳಕು ಸಂಯೋಜನೆ ಪರಿಣಾಮಕಾರಿಯಾಗಿತ್ತು. ಮೈಮ್‌ ರಮೇಶ್‌ ಅವರ ನೃತ್ಯ ಸಂಯೋಜನೆಯೂ ಆಕರ್ಷಕವಾಗಿತ್ತು. ಅವರಿಗೆ ಹೆಚ್ಚಿನ ಅವಕಾಶಗಳು ಈ ಕತೆಯಲ್ಲಿ ಇರಲಿಲ್ಲ. ಪರಿಕರ (ಕೃಷ್ಣಕುಮಾರ್‌), ರಂಗಸಜ್ಜಿಕೆ (ಮಹದೇವ ಮತ್ತು ಜನಾರ್ದನ್)‌, ಪ್ರಸಾದನ (ಗೀತಾ ಮೋಂಟಡ್ಕ) ಮತ್ತು ಧ್ವನಿ (ಪಿ.ಶಿವಕುಮಾರ್)-‌ ಎಲ್ಲ ಅಂಶಗಳಲ್ಲೂ ರಂಗಾಯಣದ ಮುದ್ರೆ ಎದ್ದು ಕಾಣುತ್ತಿತ್ತು.

######

‍ಲೇಖಕರು avadhi

August 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: