ಜಿ ಪಿ ಬಸವರಾಜು ನೆನಪಿನ ಸಿದ್ಧಲಿಂಗಯ್ಯ

ಜಿ ಪಿ ಬಸವರಾಜು

ನಮ್ಮೆಲ್ಲರ ಕವಿ ಸಿದ್ಧಲಿಂಗಯ್ಯ ನಿಧನರಾಗಿದ್ದಾರೆ. ಸಾವು-ಬದುಕಿನ ಜೊತೆಗೆ ಅವರು ತೂಗುಯ್ಯಾಲೆಯಾಡಿದ ದಿನಗಳಲ್ಲಿ  ಕರ್ನಾಟಕದ ಸಾವಿರಾರು ಮನಸ್ಸುಗಳು ಆತಂಕದಲ್ಲಿ ತುಯ್ದಾಡಿದವು. ‘ನಮ್ಮ ಸಿದ್ಧಲಿಂಗಯ್ಯ  ಬೇಗ ಗುಣಮುಖರಾಗಿ ಮನೆಗೆ ಮರಳಲಿ’ ಎಂದು ಮೊರೆ ಇಟ್ಟವು. ಆದರೆ ಅದು ಯಾವುದೂ ಫಲಿಸದೆ ಸಿದ್ಧಲಿಂಗಯ್ಯನವರು ಈ ಬದುಕಿಗೆ ವಿದಾಯ ಹೇಳಿದರು.  

ಸಾವಿನ ಜೊತೆಯಲ್ಲಿ ನಗುನಗುತ್ತಲೇ ಅವರು ಪಗಡೆಯಾಡಿದರು. ಒಂದು ಹಂತದಲ್ಲಿ ಗೆದ್ದು ಮನೆಗೆ ಮರಳಿದರು. ಆತಂಕದಲ್ಲಿದ್ದ ಮನಸ್ಸುಗಳು ನೆಮ್ಮದಿಯಲ್ಲಿ ಖುಷಿಗೊಂಡವು. ಆದರೆ ಅದು ಬಹಳ ಕಾಲ ಉಳಿಯಲಿಲ್ಲ. ಸಾವು ಕೊನೆಗೂ ನಮ್ಮ ಕವಿಯನ್ನು ಈ ಆಟದಲ್ಲಿ ಸೋಲಿಸಿ ಕೊಂಡೊಯ್ದಿತು. ಇದು ನಮ್ಮೆಲ್ಲರ ಕಣ್ಣೀರನ್ನು ನದಿಯಾಗಿ ಹರಿಸಿತು.

ಸಿದ್ಧಲಿಂಗಯ್ಯನವರಿಗಾಗಿ ವ್ಯಥೆಪಟ್ಟವರು ಕೇವಲ ಸಾಹಿತ್ಯ ರಂಗದವರಲ್ಲ; ಅಕ್ಷರ ಲೋಕದವರಷ್ಟೆ ಅಲ್ಲ. ರಾಜಕಾರಣಿಗಳು, ಹೋರಾಟಗಾರರು, ರಂಗಭೂಮಿಯವರು, ಅಕ್ಷರ ಲೋಕದಿಂದ ದೂರವೇ ಉಳಿದು ಇವತ್ತಿಗೂ ಶೋಷಣೆಯಿಂದ ಹೊರಬರಲಾರದೆ ಇರುವವರು, ಸುಮ್ಮನೆ ಸಿದ್ದಲಿಂಗಯ್ಯನವರ ಹಾಡುಗಳನ್ನು ಹಾಡಿದವರು, ಹಳ್ಳಿಗಾಡಿನ ಜನ, ಕೊಳೆಗೇರಿಯವರು, ತರಕಾರಿ ಮಾರುವವರು, ಮೂಟೆ ಹೊರುವವರು, ಸಿದ್ಧಲಿಂಗಯ್ಯನವರ ಮಾತುಗಳನ್ನು ಕೇಳಿ ನಕ್ಕ ಜನ- ಹೀಗೆ ಎಲ್ಲ ವರ್ಗಗಳ, ಸಮುದಾಯಗಳ ಹೃದಯವಂತರು, ‘ಈತ ನಮ್ಮವನು, ನಮ್ಮ ಒಡನಾಡಿ, ನಮ್ಮ ಕಷ್ಟ ಸುಖಗಳಿಗೆ ಆದವನು, ಈತ ನಮ್ಮೊಂದಿಗೆ ಇರಬೇಕು’ ಎಂದು ಬಯಸಿದ್ದ ಸಾವಿರಾರು ಜನ ಕಂಬನಿ ಒರೆಸಿಕೊಂಡರು. ದುಗುಡದಿಂದ ಮುದುಡಿ ಹೋದರು. ರಾಜಕಾರಣಗಳ ಕಣ್ಣೀರಿಗೂ ಈ ಸಾವು ಅರ್ಥ ಬರೆದಿತ್ತು.

ನಮ್ಮ ಕವಿಯನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ.

2. ಸಿದ್ಧಲಿಂಗಯ್ಯ ಕನ್ನಡದ ಕವಿ; ಕನ್ನಡ ಸಾಹಿತ್ಯ ಪರಂಪರೆಗೆ ಎದುರಾಗಿ ನಿಂತ ಕವಿ; ಈ ಪರಂಪರೆಗೆ ಸವಾಲು ಹಾಕಿ ಸಂವಾದ ನಡೆಸಿದ ಕವಿ. ಪರಂಪರೆಯನ್ನು ಬೆಳೆಸಿದ ಕವಿ. 1975ರಲ್ಲಿ ತಮ್ಮ ಕವಿತಾ ಸಂಕಲನಕ್ಕೆ ‘ಹೊಲೆ ಮಾದಿಗರ ಹಾಡು’ ಎಂದು ಹೆಸರಿಟ್ಟಾಗಲೇ ಸಿದ್ಧಲಿಂಗಯ್ಯ ಕನ್ನಡ ಸಾಹಿತ್ಯ ಪರಂಪರೆಗೆ ಎದುರಾಗಿ ನಿಂತಿದ್ದರು; ಬಹು ದೊಡ್ಡ ಸವಾಲನ್ನೂ ಎಸೆದಿದ್ದರು. ಇಡೀ ಸಾಹಿತ್ಯ ಲೋಕವೇ ಹುಬ್ಬೇರಿಸಿ ನೋಡುವಂತೆಯೂ ಮಾಡಿದ್ದರು.

ಹೀಗೆ ನೋಡಿದವರ ಕಣ್ಣಿಗೆ ಕಂಡದ್ದು ಪುಟ್ಟ ಆಕೃತಿ; ತೀರ ಎಳೆಯ ಜೀವ; ಅದು ಮುಂದೆ ಬೆಳೆದು ನಿಂತದ್ದು ಮಾತ್ರ ಒಂದು ಅದ್ಭುತ ಬೆಳವಣಿಗೆ. ಅದು ವ್ಯಕ್ತಿಯ ಬೆಳವಣಿಗೆ ಮಾತ್ರವಲ್ಲ, ಸಾಹಿತ್ಯ ಪರಂಪರೆಯ ಬೆಳವಣಿಗೆ. ಸಾಹಿತ್ಯ ಪರಂಪರೆಗೆ ಸವಾಲೆಸೆದಿದ್ದ ಸಿದ್ಧಲಿಂಗಯ್ಯ ತಾವು ಗೆದ್ದರು; ಪರಂಪರೆಯನ್ನೂ ಗೆಲ್ಲಿಸಿದರು. ಅದರ ಆಳ-ವಿಸ್ತಾರಗಳನ್ನು ಹೆಚ್ಚಿಸಿದರು. ಅದು ಅವರ ಸಾಮರ್ಥ್ಯ; ಅಕ್ಷರಲೋಕದಿಂದ ದೂರವೇ ಇದ್ದು, ಆ ಲೋಕವನ್ನು ಪ್ರವೇಶಿಸಿದವರ ಸಾಧನೆ-ಸಾಮರ್ಥ್ಯ.

ಪರಂಪರೆ ಬೆಳೆಯುವುದು, ಸಾಹಿತ್ಯ ಹಿಗ್ಗುವುದು ಇಂಥ ಹೊಸ ನೀರಿನಿಂದಲೇ. ಸಿದ್ಧಲಿಂಗಯ್ಯ ಅವರು ಹರಿಸಿದ ಈ ಹೊಸ ನೀರಿನಲ್ಲಿ ಎಲ್ಲವೂ ಇತ್ತು; ಹೊಸ ಹೊಸ ನುಡಿಗಟ್ಟು; ತಾಜಾ ತಾಜಾ ಅನುಭವ. ಹಾಗೆಯೇ ಆವರೆಗೆ ಕಂಡರಿಯದ ಮನುಕುಲದ ನೋವು. ಸಿದ್ಧಲಿಂಗಯ್ಯ ಹೊರಟು ನಿಂತಾಗ ಅವರೊಂದು ಬೃಹತ್‍ ವೃಕ್ಷವಾಗಿದ್ದರು; ರೆಂಬೆಕೊಂಬೆಗಳನ್ನು ದಿಕ್ಕುದಿಕ್ಕಿಗೆ ಚಾಚಿ, ಚಿಗುರು, ಹೂವು ಹಣ್ಣುಗಳನ್ನು ತುಂಬಿಕೊಂಡು ಸಮೃದ್ಧ ಮರವಾಗಿದ್ದರು.

ಇಕ್ರಲಾ ವದೀರ್ಲಾ

ನನ್ ಮಕ್ಕಳ ಚರ್ಮ ಎಬ್ರಲಾ

ಮೊದಲ ಬಾರಿಗೆ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ ಈ ಭಾಷೆ ತೀವ್ರ ಟೀಕೆಯನ್ನು ಎದುರಿಸಿತು. ಮಡಿ ಮೈಲಿಗೆಯ ಪ್ರಶ್ನೆಯ ಆಚೆಗೆ ನಿಂತವರೂ ಈ ಭಾಷಾ ಬಳಕೆಯನ್ನು ಒಪ್ಪದೆ ತಕರಾರು ತೆಗೆದರು. ಇವತ್ತಿಗೂ ಈ ಭಾಷಾ ಪ್ರಯೋಗದ ಬಗ್ಗೆ ಅನೇಕರ ಪ್ರಶ್ನೆಗಳು ಹಾಗೆಯೆ ಉಳಿದುಕೊಂಡಿವೆ. ಈ ಬೆಳವಣಿಗೆಯನ್ನು ಒಂದು ಗಂಭೀರ ಬೆಳವಣಿಗೆಯಾಗಿ, ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಗುರುತಿಸಿ, ಹೊಸ ಧ್ವನಿಯೊಂದು ಸಾವಿರಾರು ವರ್ಷಗಳ ತುಳಿತದ ಆಳದಿಂದ ಮೊದಲ ಬಾರಿಗೆ ಮೇಲೆದ್ದು ಬಂದಿದೆ ಎಂದು ಸ್ವಾಗತಿಸಿದ ಧೀಮಂತರೂ ಸಾಹಿತ್ಯ ರಂಗದಲ್ಲಿ ತಮ್ಮ ಮಾತುಗಳಿಂದ ನ್ಯಾಯ ಸಲ್ಲಿಸಿದರು. ಇದು ಯಾವುದನ್ನೂ ಗಮನಿಸದಂತೆ, ಗಮನಿಸಿದರೂ ಸೊಪ್ಪು ಹಾಕದಂತೆ ಸಿದ್ಧಲಿಂಗಯ್ಯ ತಮ್ಮ ಧ್ವನಿಯನ್ನು ಮೊಳಗಿಸಿದರು. ಅದು ಕೇವಲ ಧ್ವನಿಯಲ್ಲ, ನೊಂದವರ ಒಡಲ ಹಾಡು; ತಳ ಸಮುದಾಯಗಳ ಆತ್ಮರಾಗ.

ಸಿದ್ಧಲಿಂಗಯ್ಯನವರ ಕಾವ್ಯ ಇನ್ನೊಂದು ಮಹತ್ವದ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಯವರೆಗೆ ಬಾಯಿಕಟ್ಟಿ ದೂರವಿರಿಸಲಾಗಿದ್ದ ಸಾವಿರಾರು ಬಾಯಿಗಳು ಮೆಲ್ಲಗೆ ಹಾಡಲು ಸುರುಮಾಡಿದವು. ಭಾಷೆಯ ಹಂಗನ್ನು ತೊರೆದು, ಛಂದಸ್ಸು ವ್ಯಾಕರಣಗಳ ಹಂಗನ್ನು ತೊರೆದು, ಮೆಟ್ಟುವುದಕ್ಕೆಂದೇ ಹಾಕಿದ್ದ ಅನೇಕ ಕಟ್ಟುಪಾಡುಗಳನ್ನು ತೊರೆದು, ‘ಒಲಿದಂತೆ ಹಾಡುವ’ ದಿಟ್ಟತನವನ್ನು ತೋರಿದವು. ತಮಗೆ ಗೊತ್ತಿರುವ ಭಾಷೆಯಲ್ಲಿ ತಮ್ಮ ಅನುಭವವನ್ನೇ ಬೊಗಸೆಯಲ್ಲಿ ತುಂಬಿಕೊಡಬಹುದು ಎಂಬ ಆತ್ಮವಿಶ್ವಾಸವನ್ನು ಸಿದ್ಧಲಿಂಗಯ್ಯ ಅವರ ಕಾವ್ಯ ತುಂಬಿಕೊಟ್ಟಿತು.

ಕಾವ್ಯದಲ್ಲಿ ಈ ಬೆಳವಣಿಗೆಯಾದರೆ, ಗದ್ಯದಲ್ಲೂ ಇಂಥದೇ ಬೆಳವಣಿಗೆಯಾಯಿತು. ದೇವನೂರ ಮಹಾದೇವ ಅವರು, ‘ಕುಸಮ ಬಾಲೆ’ಯಂಥ ತಮ್ಮ ಕೃತಿಗಳ ಮೂಲಕ, ತಮ್ಮ ಭಾಷೆಯನ್ನು, ಅನುಭವವನ್ನು ಕಟ್ಟಿಕೊಡಲು ತಮ್ಮದೇ ಆದ ದಾರಿಯನ್ನು ತುಳಿದರು. ತಳ ಸಮುದಾಯಗಳ ಅನೇಕ ಅನುಮಾನಗಳಿಗೆ ಈ ಇಬ್ಬರ ದಾರಿಗಳಿಂದ ಪರಿಹಾರ ಸಿಕ್ಕಿತು.

ಈ ಮಹತ್ವದ ಲೇಖಕರಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಾನ್‍ ಪಲ್ಲಟವಾಗಿ, ಸಾಹಿತ್ಯದ ಅನೇಕ ತಪ್ಪು ಗ್ರಹಿಕೆಗಳು ದೂರವಾದವು; ಹಾಗೆಯೇ ಇಡೀ ಸಮುದಾಯ ತನ್ನ ಭಾಷೆ, ಅನುಭವ, ನಿಲುವು, ನೋಟಗಳನ್ನು ಕಂಡುಕೊಳ್ಳಲು ಅಖಂಡ ವಿಶ್ವಾಸವನ್ನು ಮೂಡಿಸಿದವು. ಇವತ್ತು ತಳ ಸಮುದಾಯದ ನೂರಾರು ಧ್ವನಿಗಳು ಅಲ್ಲಾಡದ ನಂಬಿಕೆಯಿಂದ ಬರೆಯುತ್ತಿದ್ದರೆ, ತಮ್ಮ ಅನುಭವಗಳನ್ನು ತಮ್ಮದೇ ನುಡಿಗಟ್ಟಿನಲ್ಲಿ ಮಂಡಿಸುತ್ತಿದ್ದರೆ, ಸೃಜನಶೀಲ ಕ್ರಿಯೆಯಲ್ಲಿ ನಿರ್ಭಯವಾಗಿ ತೊಡಗಿದ್ದರೆ ಅದರ ಹಿಂದೆ ಸಿದ್ಧಲಿಂಗಯ್ಯ ಮತ್ತು ದೇವನೂರರು ಇದ್ದಾರೆ; ಕನ್ನಡ ಸಾಹಿತ್ಯ ಇರುವವರೆಗೂ ಈ ಇಬ್ಬರು ಇದ್ದೇ ಇರುತ್ತಾರೆ, ಅಖಂಡ ಶಕ್ತಿಯ ಸಂಕೇತಗಳಾಗಿ.

ಮೇಲಿನ ಎರಡು ಸಾಲುಗಳಿರುವ ಪದ್ಯ ಮುಂದುವರಿಯುತ್ತದೆ:

ದೇವ್ರು ಒಬ್ನೇ ಅಂತಾರೆ
ಓಣಿಗೊಂದೊಂದ್‍ ತರಾ ಗುಡಿ ಕಟ್ಸವ್ರೆ
ಎಲ್ಲಾರೂ ದೇವ್ರ ಮಕ್ಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್‍ ಕಂಡಂಗಾಡ್ತಾರೆ
ಹೋಟ್ಲು, ಬಾವಿ, ಮನೆ ಯಾವುದಕ್ಕೂ ಸೇರ್ಸಲ್ವಲ್ಲೊ
ನಮ್‍ ಹೇಲ್‍ ತಿನ್ನೊ ನಾಯ್ನ ಕ್ವಾಣೆವಳೀಕ್‍ ಬುಟ್‍ಕತ್ತಾರೆ
…..

ಇದು ಬಹು ದೊಡ್ಡ ಪ್ರತಿಭಟನೆ. ಬರಿಯ ಭಾಷಾ ಪ್ರಯೋಗದಲ್ಲಿ ಅಲ್ಲ, ಜಾತಿ ವ್ಯವಸ್ಥೆಗೆ ಒಡ್ಡಿದ ಪ್ರಚಂಡ ಸವಾಲು. ಜಾತಿ ವ್ಯವಸ್ಥೆ ರೂಪಿಸಿದ ಮೌಲ್ಯಗಳು, ಗ್ರಹಿಕೆಗಳು, ಅಮಾನವೀಯ ನಡವಳಿಕೆಗಳು ಹೀಗೆ ಎಲ್ಲ ಅಂಶಗಳಿಗೂ ಎದುರಾಗಿ ನಿಂತು ತೋರಿದ ದಿಟ್ಟ ನಿಲುವು. ಪುಟ್ಟ ಹುಡುಗನಂತೆ ಕಾಣುತ್ತಿದ್ದ ಸಿದ್ಧಲಿಂಗಯ್ಯ ಹೂಡಿದ ಬಹು ದೊಡ್ಡ ಬಂಡಾಯ. ಬಂಡಾಯ ಚಳವಳಿಯ ಹುಟ್ಟಿನ ಹಿಂದೆ ಈ ಬಗೆಯ ಪ್ರತಿರೋಧದ ಶಕ್ತಿಗಳು ಗಟ್ಟಿಯಾಗಿ ನಿಂತಿರುವುದನ್ನು ಗುರುತಿಸಬಹುದಾಗಿದೆ. ಈ ನಿಲುವು ನಮ್ಮ ಸಾಹಿತ್ಯ ಹೊಸ ನೀರನ್ನು ಪಡೆದುಕೊಳ್ಳಲು ಕಾರಣವಾಯಿತು ಎಂಬುದು ಈಗ ಚರಿತ್ರೆ.

3. ಸಿದ್ಧಲಿಂಗಯ್ಯನವರಲ್ಲಿ ಇದ್ದ ಇನ್ನೊಂದು ಅಪರೂಪದ ಗುಣವೆಂದರೆ ಅವರ ಹಾಸ್ಯಪ್ರಜ್ಞೆ. ಈ ಹಾಸ್ಯಕ್ಕಾಗಿಯೇ ಸಿದ್ಧಲಿಂಗಯ್ಯನವರ ಮಾತುಗಳನ್ನು ಕೇಳಿದ ಸಾವಿರಾರು ಜನರಿದ್ದಾರೆ. ಈಗಲೂ ಅವರ ಮಾತುಗಳನ್ನು ನೆನೆದು ನಗುವವರೂ ಇದ್ದಾರೆ. ಆದರೆ ಸಿದ್ಧಲಿಂಗಯ್ಯನವರ ಹಾಸ್ಯಕ್ಕೊಂದು ಸ್ಪಷ್ಟ ಉದ್ದೇಶವಿತ್ತು. ಈ ಉದ್ದೇಶವೇ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡುತ್ತಿತ್ತು.

ದೇವರು, ದೇವರ ಸುತ್ತ ಕಟ್ಟಿಕೊಂಡ ಮೌಢ್ಯಗಳು ಇವನ್ನು ಗೇಲಿ ಮಾಡಿ ಬಿಸಾಡುವುದು ಮತ್ತು ಆ ಪೊಳ್ಳುಗಳನ್ನು ಒಡೆದು ಬದುಕನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಕಟ್ಟುವುದು ಇವರ ಮುಖ್ಯ ಕಾಳಜಿಯಾಗಿತ್ತು. ದೇವರನ್ನು ನಂಬಿಕೊಂಡು, ಮೌಢ್ಯಗಳ ಹುತ್ತದಲ್ಲಿಯೇ ಬದುಕುತ್ತಿದ್ದ ತಳ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದೂ ಸಿದ್ಧಲಿಂಗಯ್ಯನವರ ಗುರಿಯಾಗಿತ್ತೆಂಬುದೂ ನಿಚ್ಚಳವಾಗಿ ಕಾಣಿಸುತ್ತದೆ.

ದೇವರು ಮೈಮೇಲೆ ಬರುವುದು, ಓದು ಬರಹ ಗೊತ್ತಿಲ್ಲದ ವ್ಯಕ್ತಿಯೊಬ್ಬ ಇಂಗ್ಲಿಷ್‍ನಲ್ಲಿ ಮಾತನಾಡುವುದು ಮತ್ತು ಮೈಮೇಲೆ ಬಂದ ದೇವರು ನಮ್ಮ ನಿಮ್ಮಂತೆಯೇ ಮಾತನಾಡುತ್ತ, ಲೋಕ ವ್ಯವಹಾರವನ್ನು ನಮ್ಮೆಲ್ಲರಂತೆಯೇ ನಡೆಸುವುದು ಇವೆಲ್ಲ ಹಾಸ್ಯಕ್ಕೆ ಅವಕಾಶ ಮಾಡಿಕೊಟ್ಟರೂ, ಜನತೆಯ ಕಣ್ಣು ತೆರೆಸುವುದು ಈ ಹಾಸ್ಯದ ಹಿಂದಿನ ಪ್ರಮುಖ ಗುರಿಯಾಗಿತ್ತು.

ಪವಾಡಗಳನ್ನು ಬಯಲು ಮಾಡುವ, ದೇವ ಮಾನವರ ವಂಚನೆಗಳನ್ನು ಬಯಲಿಗೆಳೆಯುವ ಡಾ. ಎಚ್. ನರಸಿಂಹಯ್ಯ ಅವರ ಉದ್ದೇಶದಷ್ಟೇ ನಮ್ಮ ಸಿದ್ಧಲಿಂಗಯ್ಯನವರ ಉದ್ದೇಶವೂ ಘನವಾದುದೂ  ಮತ್ತು ತೀವ್ರ ಸಾಮಾಜಿಕ ಕಳಕಳಿಯನ್ನು ಹೊಂದಿದ್ದೂ ಆಗಿತ್ತು. ನಗೆಯ ಲೇಪನವನ್ನು ಸವರಿದಾಗ ಜನ ನಗುತ್ತಾರೆ ಮತ್ತು ಇಂಥ ಮಾತುಗಳನ್ನು, ವಿಚಾರಗಳನ್ನು ಹಗುರಾಗಿ ತಮ್ಮೊಳಕ್ಕೆ ತೆಗೆದುಕೊಳ್ಳುತ್ತಾರೆ. ವಂಚನೆಯ ಮುಖಗಳನ್ನು ಸುಲಭವಾಗಿ ಅರಿಯುತ್ತಾರೆ.

ಜೊತೆಗೆ ದೇವರನ್ನು ಈ ನೆಲಕ್ಕೆ ತರುವುದು, ಮನುಷ್ಯರೊಂದಿಗೆ ಸಂಬಂಧ ಬೆಳಸಿ, ದೇವರನ್ನು ಹತ್ತಿರ ಮಾಡಿಕೊಳ್ಳುವುದು. ಇವೆಲ್ಲ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಈಗಾಗಲೇ ಇದ್ದ, ಇರುವ ವಿಚಾರಗಳು. 11-12ನೇ ಶತಮಾನದ ವಚನಕಾರರು ಇದನ್ನು ಮಾಡಿದರು. ದೇವರನ್ನು ಈ ಭೂಮಿಗೆ ತಂದಕೂಡಲೇ ಅವನು ನಮ್ಮವನಾಗುತ್ತಾನೆ. ಅವನೊಂದಿಗೆ ನಮ್ಮೆಲ್ಲ ಗೋಳುಗಳನ್ನು ಹೇಳಿಕೊಳ್ಳಬಹುದು. ದೇವಾಲಯಗಳಿಗೆ ಹೋಗಬೇಕಾಗಿಲ್ಲ; ತೀರ್ಥ ಪ್ರಸಾದಗಳಿಗೆ ಪೂಜಾರಿಗಳ ಮುಂದೆ ಕೈಯೊಡ್ಡಬೇಕಾಗಿಲ್ಲ; ಹುಂಡಿಗಳಿಗೆ ಕಾಣಿಕೆ ಹಾಕಬೇಕಾಗಿಲ್ಲ. ವಂಚನೆಗಳಿಗೆ ಬಲಿಯಾಗಬೇಕಾಗಿಲ್ಲ.

ಸಿದ್ಧಲಿಂಗಯ್ಯ ಅವರು ದೇವರನ್ನು ಗೇಲಿ ಮಾಡುವಾಗ ದೇವರಿಗೆ ಮನುಷ್ಯ ರೂಪಕೊಟ್ಟು ಅವನನ್ನು ಅಥವಾ ಅವಳನ್ನು ನಮ್ಮೊಳಗಿನ ಒಬ್ಬ ವ್ಯಕ್ತಿಯಾಗಿ ಮಾಡುವ ಗುರಿ ಇಟ್ಟುಕೊಂಡೇ ಬಾಣ ಬಿಡುತ್ತಿದ್ದರು. ತನ್ನ ಸಮುದಾಯದ ನಂಬಿಕೆಗಳನ್ನು, ಆಶೋತ್ತರಗಳನ್ನು ಬಲ್ಲ ಸಿದ್ಧಲಿಂಗಯ್ಯ ಅವರು ಇದನ್ನು ಎಷ್ಟು ಸರಳವಾಗಿ, ಸುಲಭವಾಗಿ ಮತ್ತು ನಕ್ಕು ನಗಿಸುವ ಹಾಸ್ಯವನ್ನು ಬಳಸಿ ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ಅದು ಅವರ ಮಾತಿನ ಶಕ್ತಿ, ಅವರ ಮಾತುಗಾರಿಕೆಯ ಸಾಮರ್ಥ್ಯ. ಮಾತಿನ ಹಿಂದಿದ್ದ ವೈಚಾರಿಕ ನಿಲುವಿನ ದಿಟ್ಟತನವೂ ಅದಾಗಿತ್ತು.

ಇನ್ನೂ ಈ ಕವಿಯ ಕೆಲಸ ಸಾಕಷ್ಟು ಉಳಿದಿತ್ತು. ಮಾಡುವ ಹುರುಪು, ಹಂಬಲಗಳೂ ಅವರಲ್ಲಿ ಇದ್ದವು. ಬಾಕಿ ಕೆಲಸಗಳನ್ನು ಉಳಿಸಿಕೊಂಡಿದ್ದ ಈ ಕವಿಯನ್ನು ಕೊಂಡೊಯ್ಯುವ ಕೆಲಸವನ್ನು ಮೃತ್ಯುದೇವತೆ ಮಾಡಬಾರದಿತ್ತು. ಮೃತ್ಯುದೇವತೆಯನ್ನೂ ನಗಿಸುವ ಶಕ್ತಿ ಸಿದ್ಧಲಿಂಗಯ್ಯ ಅವರಿಗಿತ್ತು.

ಇದೆಲ್ಲವನ್ನು ಮನಸ್ಸಿಗೆ ತಂದುಕೊಂಡಾಗ, ಸಿದ್ಧಲಿಂಗಯ್ಯನವರ ಜಾಗ ಎಷ್ಟು ಮುಖ್ಯವಾದದ್ದಾಗಿತ್ತು ಎಂಬುದು ಅರ್ಥವಾಗುತ್ತದೆ.

4. ಮೂರ್ನಾಲ್ಕು ವರ್ಷಗಳ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಪಂ. ರಾಜೀವ ತಾರಾನಾಥ ಅವರಿಗೆ ಗೌರವ ಡಾಕ್ಟರೇಟ್‍ ಪದವಿಯನ್ನು ನೀಡಿತು. ಆ ಸಮಾರಂಭಕ್ಕೆ ಸಿದ್ಧಲಿಂಗಯ್ಯ ಅವರು ಬಂದಿದ್ದರು. ಆಗ ಅವರು ನನ್ನನ್ನು ಮಾತನಾಡಿಸಿದರು. ಆ ಮಾತುಗಳಲ್ಲಿ ಎಂಥ ಬೆಚ್ಚನೆಯ ಪ್ರೀತಿ ಇತ್ತು ಎಂದರೆ ಈಗಲೂ ನನ್ನಲ್ಲಿ ಆ ಬಿಸಿ ಉಳಿದುಕೊಂಡಿದೆ. ಆಗ ತಾನೇ ಪ್ರಕಟವಾಗಿದ್ದ ಅವರ ಕವಿತಾ ಸಂಕಲನದ ಒಂದು ಪ್ರತಿಯನ್ನು ಬಹಳ ಪ್ರೀತಿಯಿಂದ ಕೊಟ್ಟರು. ಇದೆಂಥ ಅಪರೂಪದ ಕೊಡುಗೆ!

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: