ಬೇಕಿದೆ ಇನ್ನೊಂದು ‘ಅಕ್ಷರ ಹೊಸ ಕಾವ್ಯ’ ಎನ್ನುವ ಜಿ ಪಿ ಬಸವರಾಜು ಅವರ ಬರಹಕ್ಕೆ (ಬರಹಕ್ಕೆ ಇಲ್ಲಿ ಕ್ಲಿಕ್ಕಿಸಿ) ಹೇಮಾ ಹೆಬ್ಬಗೋಡಿ ಅವರು ಬರೆದಿರುವ ಪ್ರತಿಕ್ರಿಯೆ ಇಲ್ಲಿದೆ.
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

ಹೇಮಾ ಹೆಬ್ಬಗೋಡಿ
ಜಿ.ಪಿ.ಬಸವರಾಜುರವರು ಹೇಳಿದಂತೆ ಪಿ.ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ’ ಮತ್ತು ಅದಕ್ಕೆ ಲಂಕೇಶರು ಬರೆದಿದ್ದ ಮುನ್ನುಡಿ ಎರಡೂ ಕೂಡ ನಿಸ್ಸಂಶಯವಾಗಿ ಅತ್ಯಂತ ಮೌಲ್ಯಯುತವಾದದ್ದು. ಇಂದಿಗೂ ಕಾವ್ಯಾಭ್ಯಾಸಿಗಳಿಗೆ ಬಹಳ ಮುಖ್ಯವಾದ ಆಕರಗ್ರಂಥವಾಗಿದೆ. ಹಾಗೇಯೇ ‘ಹೊಸಗನ್ನಡ ಕವಿತೆ’ ಕೂಡ ಜಿ.ಎಚ್.ನಾಯಕರ ಸಂಪಾದಕತ್ವದ ಒಳ್ಳೆಯ ಕೃತಿ.
ಇವುಗಳನ್ನು ಗಮನಿಸುವುದರೊಂದಿಗೆ ಕನ್ನಡ ಸಾಹಿತ್ಯ ಲೋಕವು ಕಾಲ ಕಾಲಕ್ಕೆ ಇಂತಹ ಸಂಕಲನಗಳನ್ನು ಸಂಗ್ರಹಿಸುವ ಮೂಲಕವೇ ಇತಿಹಾಸದ ದಾಖಲಾತಿ ಹಾಗೂ ವಿವಿಧ ಕಾಲಘಟ್ಟಗಳಲ್ಲಿನ ಕಾವ್ಯವನ್ನು ವಿಮರ್ಶೆಗೆ ಒಳಪಡಿಸಿರುವುದನ್ನು ಗಮನಿಸಬೇಕು. ಮೊದಲಿಗೆ ನೋಡುವುದಾದರೆ ಮೈಸೂರು ವಿವಿಯವರು 1980ರಲ್ಲಿ ಪ್ರಕಟಿಸಿದ ‘ಸುವರ್ಣ ಸಂಪುಟ’ (ಆಧುನಿಕ ಕನ್ನಡ ಭಾವಗೀತೆಗಳ ಸಂಕಲನ) 1900-1966ರವರೆಗಿನ ಆಯ್ದ ಕವಿಗಳ ಕವನಗಳನ್ನು ಒಳಗೊಂಡಿದೆ. ಪು.ತಿ.ನ, ದೇಜಗೌ, ಚೆನ್ನವೀರ ಕಣವಿ, ಹಾಮಾ ನಾಯಕ ಮತ್ತು ಪ್ರಭುಶಂಕರರು ಇದರ ಸಂಪಾದಕರು. ಈ ಪುಸ್ತಕದ ಅರಿಕೆಯಲ್ಲಿ ಪುಸ್ತಕದ ಸ್ವರೂಪದ ಬಗ್ಗೆ ಚರ್ಚಿಸುತ್ತಾ ಪ್ರಭುಶಂಕರರು ಈ ಪುಸ್ತಕಕ್ಕೆ ಸ್ಪೂರ್ತಿ ಫ್ರಾನ್ಸಿಸ್ ಟರ್ನರ್ ಪಾಲ್ಗ್ರೇವ್ ಸಂಪಾದಿಸಿರುವ “ದಿ ಗೋಲ್ಡನ್ ಟ್ರೆಜರಿ” ಎಂದು ಹೇಳುತ್ತಾರೆ. ಇದು ಕನ್ನಡ ಕಾವ್ಯಾಭ್ಯಾಸಿಗಳು ಗಮನಿಸಬೇಕಾದ ಒಂದು ಮುಖ್ಯ ಸಂಕಲನ. ಇದರಲ್ಲಿ 119 ಕವಿಗಳ 361 ಕವನಗಳನ್ನು ಸಂಕಲಿಸಲಾಗಿದೆ. ಗೋವಿಂದ ಪೈಗಳಿಂದ ಪ್ರಭುಶಂಕರರವರೆಗೆ ಹಲವು ಮಂದಿ ಹಳೆಯ ಕವಿಗಳ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ.
1970ರಲ್ಲಿ ‘ಅಕ್ಷರ ಹೊಸ ಕಾವ್ಯ’ದ ಮೊದಲ ಆವೃತ್ತಿ ಬಿಡುಗಡೆಯಾಯಿತು. 1985ರಲ್ಲಿ ‘ಹೊಸಗನ್ನಡ ಕವಿತೆ’ ಬಿಡುಗಡೆಯಾಯಿತು. 1980ರ ನಂತರದ ಕವನಗಳನ್ನು ಪ್ರತಿನಿಧಿಸುವ ಸಂಕಲನವೊಂದರ ಅವಶ್ಯಕತೆಯ ಬಗ್ಗೆ ಬಸವರಾಜುರವರು ಪ್ರಸ್ತಾಪಿಸಿದ್ದಾರೆ. 1993ರ ಅಕ್ಷರ ಹೊಸ ಕಾವ್ಯದ ಎರಡನೇ ಆವೃತ್ತಿಯಲ್ಲಿ 1950 ರಿಂದ 1993 ರವರೆಗಿನ ಕವನಗಳನ್ನು ಕಾಣಬಹುದಾಗಿದೆ. 1980ರ ನಂತರದ ಕವನಗಳಿಗೆ ಪ್ರಾತಿನಿಧಿಕವೆನಿಸಬಹುದಾದ ಸಂಕಲನಗಳು ಬಂದೇ ಇಲ್ಲವೇ ಎಂದರೆ ಬಂದಿದೆ ಆದರೆ ಅದನ್ನು ಹೆಚ್ಚಾಗಿ ಗಮನಿಸುವ ಗೋಜಿಗೆ ಹೋದಂತಿಲ್ಲ.
ಈ ನಿಟ್ಟಿನಲ್ಲಿ ಗಮನಿಸಬೇಕಾದ ಕೆಲವು ಸಂಕಲನಗಳಿವೆ. 2001ರಲ್ಲಿ ಎಚ್.ಎಸ್.ವೆಂಕಟೇಶ ಮೂರ್ತಿಯವರ ಸಂಪಾದಿಸಿದ ‘ಶತಮಾನದ ಕಾವ್ಯ’ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. 2006ರಲ್ಲಿ ಸುವರ್ಣ ಸಾಹಿತ್ಯ ಗ್ರಂಥಮಾಲೆ ಯೋಜನೆಯಡಿಯಲ್ಲಿ ಬಿ.ಎ. ಸನದಿ ಮತ್ತು ಸವಿತಾ ನಾಗಭೂಷಣ ಅವರು ಸಂಪಾದಿಸಿರುವ “ಸುವರ್ಣ ಕಾವ್ಯ” ಗಮನಿಸಲೇಬೇಕಾದ ಒಂದು ಸಂಕಲನ. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಗೊಂಡಿದೆ. ಇದರಲ್ಲಿ ಶಾಂತಕವಿಗಳಿಂದ ಹಿಡಿದು ಅಂಕುರ್ ಬೆಟಗೇರಿ ವರೆಗೆ ಒಂದು ಶತಮಾನದ ಕನ್ನಡ ಕಾವ್ಯವನ್ನು ಕಾಣಬಹುದಾಗಿದೆ. 2007ರಲ್ಲಿ ಸಂಚಯ ಸಾಹಿತ್ಯ ಪತ್ರಿಕೆಯು ತನ್ನ 75ನೆಯ ಸಂಚಿಕೆಯನ್ನು “ಕಾವ್ಯಸಂಭ್ರಮ” ಎಂದು ಪ್ರಕಟಿಸಿದ್ದು ಇದರಲ್ಲಿ 90ರ ದಶಕದಿಂದ ಈಚೆಗೆ ಬರೆಯುತ್ತಿರುವ ಹೊಸ ತಲೆಮಾರಿನ 75 ಕವಿಗಳ ಪ್ರಾತಿನಿಧಿಕ ಕವನಗಳನ್ನು ಕಾಣಬಹುದಾಗಿದೆ. ಈ ಸಂಕಲನ ಕೂಡ ಕನ್ನಡ ಕಾವ್ಯದ ಹೊಸ ಧ್ವನಿಗಳನ್ನು ದಾಖಲಿಸಿದೆ. ಇದೇ ರೀತಿ 2010ರಲ್ಲಿನ ಸಂಚಯದ 84ನೆಯ ಸಂಚಿಕೆ ಕೂಡ ಆ ವರ್ಷ ಪ್ರಕಟಗೊಂಡ ಕವನಗಳಲ್ಲಿ ಮೌಲಿಕವಾದುದನ್ನು ಸಂಗ್ರಹಿಸಿರುವಂತದ್ದು. ಅದೇ ರೀತಿ 2012ರಲ್ಲಿ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿರುವ “ಬಿಡುಗಡೆಯ ಬೆಳಕು” (1980-2000 ಅವಧಿಯ ಆಯ್ದ ಕವನಗಳು) ಎಂಬ ಸಂಕಲನವನ್ನು ಚಿ.ಶ್ರೀನಿವಾಸರಾಜು ಮತ್ತು ಚ.ಸರ್ವಮಂಗಳ ಅವರು ಸಂಪಾದಿಸಿದ್ದಾರೆ. ಇದೊಂದು ಸಂಗ್ರಹ ಯೋಗ್ಯ ಸಂಕಲನವಾಗಿದೆ.
1980 ರಿಂದ ಈಚೆಗಿನ ಕವನಗಳು ಮತ್ತು ಅದರ ವಸ್ತು ವೈವಿಧ್ಯವನ್ನು ಅಭ್ಯಸಿಸುವವರಿಗೆ ಸಂಚಯ 75 ಕಾವ್ಯ ಸಂಭ್ರಮ ಮತ್ತು ಬಿಡುಗಡೆಯ ಬೆಳಕು ಒಳ್ಳೆಯ ಆಕರ ಗ್ರಂಥಗಳು. ಇವು ‘ಅಕ್ಷರ ಹೊಸ ಕಾವ್ಯ’ದಷ್ಟು ಚರ್ಚಿತವಾಗಿಲ್ಲವಾದ್ದರಿಂದ ಹೆಚ್ಚು ಜನರ ಗಮನ ಸೆಳೆದಿಲ್ಲ. ಚರ್ಚೆಗೆ ಯಾಕೆ ಒಳಪಡಲಿಲ್ಲ ಎಂಬುದರ ಹಿಂದೆ ಹಲವು ಕಾರಣಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ಮನಗಾಣಬೇಕಿದೆ. ಕವನಗಳು ಮತ್ತು ಕವನಸಂಕಲನಗಳ ಬಗ್ಗೆ ಇಂದಿನ ಧೋರಣೆಗಳೇನು ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ.






0 Comments