ಜಿ ಎನ್ ಮೋಹನ್
‘ಧೋ’ ಎಂದು ಸುರಿವ ಮಳೆ. ಆ ಮಧ್ಯೆಯೇ ನಾನು ಪಶ್ಚಿಮ ಘಟ್ಟಗಳನ್ನು ಹೊಕ್ಕುಬಿಟ್ಟಿದ್ದೆ. ದಾರಿ ಕಾಣದೆ ನನ್ನ ಕಾರು ತಬ್ಬಿಬ್ಬಾಗಿತ್ತು. ಪಶ್ಚಿಮ ಘಟ್ಟದ ಎಲ್ಲಾ ನಿಗೂಢತೆಯನ್ನೂ ಬಚ್ಚಿಟ್ಟುಕೊಂಡ ಕಾಡು. ಒಂದೇ ಸಮನೆ ಜೀರ್ ಎನ್ನುತ್ತಾ ಮನದೊಳಗೆ ಒಂದು ರುದ್ರ ರಾಗವನ್ನು ಹುಟ್ಟುಹಾಕುತ್ತಿದ್ದ ನೂರೆಂಟು ಕೀಟಗಳು. ಕೃಷ್ಣ ಆಲನಹಳ್ಳಿಯ ‘ಕಾಡು’ ಕಾದಂಬರಿಯಲ್ಲಿ ಆಗಾಗ ಕಾಣಿಸಿಕೊಳ್ಳುವ ಆ ಅದೇ ‘ಆಳುಕೂಗಿನ ಹಕ್ಕಿ’ ಎಲ್ಲೋ ನನ್ನ ದನಿಯನ್ನೇ ಅನುಕರಿಸಿದಂತೆ. ಮುಂದೆ ಏನಿದೆ ಎನ್ನುವುದನ್ನೂ ಕಾಣಿಸಲು ಒಪ್ಪದ ಹೇರ್ ಪಿನ್ ನಂತಹ ತಿರುವುಗಳು. ನಾನು ಕಳೆದುಹೋಗಿದ್ದೆ. ಕುವೆಂಪು ಅವರು ಯಾಕೆ ‘ಹೋಗುವೆನು ನಾ…ಹೋಗುವೆನು ನಾ/ ನನ್ನ ಒಲುಮೆಯ ಗೂಡಿಗೆ/ ಮಲೆಯ ನಾಡಿಗೆ ಮಳೆಯ ಬೀಡಿಗೆ/ ಸಿರಿಯ ಚೆಲುವಿನ ರೂಢಿಗೆ.. ‘ಎಂದು ಕಾತರಿಸಿದ್ದರು ಎನ್ನುವುದು ಗೊತ್ತಾಗಿ ಹೋಗಿತ್ತು. ಚಾರ್ಮಾಡಿ ಘಾಟ್ ನ ಆ ರುದ್ರ ತಿರುವುಗಳಲ್ಲಿ ಕಾರನ್ನು ಘಟ್ಟ ಹತ್ತಿಸುತ್ತಾ ಇದ್ದವನಿಗೆ ಒಂದೊಂದು ನಿಮಿಷವೂ ಒಂದೊಂದು ಹೊಸ ಬಣ್ಣ ಕಾಣಿಸುತ್ತಿತ್ತು. ಹಾಗೆ ತಿರುವುಗಳನ್ನೊಂದೊಂದೇ ಹಿಂದೆ ಹಾಕುತ್ತಾ ‘ಹಾ! ಬೆಳಕು ಕಂಡಿತು’ ಎಂದು ಬಲಕ್ಕೆ ತಿರುಗಿದವನಿಗೆ ಕಂಡಿದ್ದು ತೇಜಸ್ವಿ. ಪೂರ್ಣಚಂದ್ರನಂತೆಯೇ ಕಾಣಿಸುತ್ತಿದ್ದ ತೇಜಸ್ವಿ. ಕಾರಿನಿಂದ ಚಂಗನೆ ಹಾರಿ ಅವರ ಕೈಕುಲುಕಿದಾಗ ‘ಮೋಡದ ಆಟ ನೋಡೋಣ ಎಂದು ಬಂದೆ’ ಎಂದರು. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನಿಂದ ಕಾರು ಏರಿ, ತಮ್ಮ ಮನೆಮಂದಿಯನ್ನೆಲ್ಲಾ ಹೊರಡಿಸಿಕೊಂಡು ಬಂದಿದ್ದ ತೇಜಸ್ವಿ ಮೋಡಗಳ ಆಟ ನೋಡುತ್ತಾ ಕಳೆದು ಹೋಗಿದ್ದರು. ಬಹುಷಃ ನಾನು ಕೈ ಕುಲುಕಿ ತಪ್ಪು ಮಾಡಿದ್ದೆ. ಅವರು ಒಂದು ಕ್ಷಣ ಮೋಡದ ನಡುವಿನಿಂದ ಧರೆಗೆ ಇಳಿಯಬೇಕಾಗಿ ಬಂದಿತ್ತು.

ಅವರನ್ನು ಭೇಟಿ ಮಾಡುವ ವೇಳೆಗಾಗಲೇ ನನಗೂ ಮೋಡಗಳ ಒಂದು ಪಾಠವಾಗಿ ಹೋಗಿತ್ತು. ಆ ರುದ್ರ ರಮಣೀಯ ಘಟ್ಟಗಳು ಒಂದೊಂದು ತಿರುವಿನಲ್ಲೂ ಒಂದೊಂದು ಮೋಡವನ್ನು ಬಿಚ್ಚಿಡುತ್ತಿತ್ತು. ನಾನಂತೂ ಕೆಲಿಡಿಯೋಸ್ಕೋಪ್ ನಲ್ಲಿ ಕಣ್ಣು ಇಟ್ಟ ಎಳೆಮಗುವಿನಂತಾಗಿ ಹೋಗಿದ್ದೆ. ‘ಬೇಸರಾಗಿದೆ ಬಯಲು/ ಹೋಗುವೆ ಮಲೆಯ, ಕಣಿವೆಯ ಕಾಡಿಗೆ/ ಹಸಿರು ಸೊಂಪಿನ ಬಿಸಿಲು ತಂಪಿನ/ ಗಾನದಿಂಪಿನ ಕೂಡಿಗೆ’ ಎನ್ನುವಂತೆ ಹೊರಟು ಬಂದಿದ್ದ ನನಗೆ ಒಂದೊಂದು ನಿಮಿಷಕ್ಕೆ ಒಂದೊಂದು ಬಣ್ಣ ತಾಳುತ್ತಿದ್ದ ಮೋಡಗಳು ಒಂದು ಮಹಾನ್ ವಿಸ್ಮಯಕ್ಕೆ ಕಾರಣವಾಗಿತ್ತು. ಕೆಲಿಡಿಯೋಸ್ಕೋಪ್ ನಲ್ಲಿ ಇದ್ದ ಬಣ್ಣದ ಚೂರುಗಳು ಒಮ್ಮೆ ತಿರುವಿದರೆ ಸಾಕು ಒಂದು ಹೊಸ ಬಣ್ಣದ ಲೋಕವನ್ನೇ ಹರಡುವಂತೆ ಪಶ್ಚಿಮ ಘಟ್ಟ ಆ ಅಗಸದ ಮಾಯಕಾರನ ಎದೆಯಲ್ಲಿ ಇರುವ ನೂರಾರು ಬಣ್ಣಗಳ ಮೋಡವನ್ನು ನನ್ನೆದುರು ಸುರಿಯುತ್ತಾ ಹೋಗಿದ್ದ.
ನಾನು ಮೋಡದ ಹುಚ್ಚಿಗೆ ಈಡಾಗಲು ಇದಕ್ಕಿಂತ ಇನ್ನೊಂದು ಅನುಭವ ಬೇಕಿರಲಿಲ್ಲ. ಅಂದಿನಿಂದ ನನಗೆ ನೆಲ ನೋಡಿ ನಡೆಯುವುದು ಮರತೇಹೋಯ್ತೇನೋ ಎನ್ನುವಷ್ಟು ಮೋಡದ ಗುಂಗು ಹತ್ತಿತ್ತು. ಅಕಾಶ ನೋಡಿ ನಡೆಯುವುದೇ ರೂಢಿಯಾಯ್ತು. ಪಶ್ಚಿಮ ಘಟ್ಟದ ಆಗಸವೇ ಒಂದು ರೀತಿಯ ಮೋಡಗಳ ಕಾರ್ಖಾನೆಯಾದರೆ, ಬರದ ಕಲ್ಬುರ್ಗಿ ಆಗಸಕ್ಕೂ ಒಂದು ರೀತಿಯ ಮೋಡವುಂಟು. ಬೀದರ್ ನ ಬುರುಜುಗಳ ನಡುವೆ ಓಡಾಡುತ್ತಿದ್ದಾಗಲೂ ನಾನು ಕಣ್ಣೆತ್ತಿ ಆ ಮಿನಾರುಗಳ ಆಚೆಗೂ ದೃಷ್ಟಿ ಹರಿಸುತ್ತಿದ್ದೆ. ಅಲ್ಲಿರುವ ಮೋಡ ಯಾವುದೆಂದು. ಬಿಜಾಪುರದಲ್ಲಿ ಮಳೆ ನೋಡಲು ಸಜ್ಜಾದವನನ್ನು ಕಾಡಿದ್ದು ಮೋಡದ ಆಟ. ಇನ್ನೇನು ಮಳೆ ಬೀಳಬೇಕು ಅದಕ್ಕೂ ಮುಂಚೆ ಮೋಡಗಳು ಆಕಾಶವನ್ನೇ ತನ್ನ ಅಂಗಳವನ್ನಾಗಿ ಮಾಡಿ, ಸರ್ಕಸ್ ನ ಡೇರೆಯೊಳಗೆ ಕಲಾವಿದರು ಹೆಜ್ಜೆ ಹಾಕುವ ಮುಂಚೆ ಡ್ರಮ್ ಗಳ ಅಬ್ಬರದ ಹಿನ್ನೆಲೆಯಲ್ಲಿ, ಬಣ್ಣ ಬೆಳಕುಗಳ ವಿಸ್ಮಯ ಲೋಕ ಹರಡಿಬಿಡುತ್ತಾರಲ್ಲಾ ಹಾಗೆ ಮೋಡಗಳು ಒಂದೊಂದು ಸೆಕೆಂಡಿಗೂ ಒಂದೊಂದು ಬಣ್ಣ ತೋರಿಸುತ್ತಾ ಇನ್ನೇನು ಹನಿಯೊಡೆದೇ ಬಿಡುತ್ತೇನೆ ಎನ್ನುವಂತೆ ನೆಲಕ್ಕೆ ಹತ್ತಿರ ಬರುತ್ತಾ, ಇನ್ನೊಂದು ಕ್ಷಣಕ್ಕೆ ಇಲ್ಲಾ ನಾನು ಬೆಳ್ಳಿ ರಥವೇರಿಯೇ ಸೈ ಎನ್ನುವಂತೆ ಮಿಂಚುತ್ತಾ, ಮುಖಕ್ಕೆ ಕಪ್ಪನೆಯ ಬಣ್ಣ ಲೇಪಿಸಿಕೊಂಡು ಮ್ಯಾಕ್ಬೆತ್ ನಾಟಕದ ಜಕ್ಕಿಣಿಯರಂತೆ ಹೆದರಿಸುತ್ತಾ ಅಗಸದ ನಾಟಕವನ್ನು ಬಿಚ್ಚಿಟ್ಟುಬಿಟ್ಟಿತು.

ಹುಲಿಕಲ್ಲು ನೆತ್ತಿ ಹತ್ತಲು ಹೋದಾಗಲೂ ಅದೇ ಅನುಭವ. ಮೋಡ ಸಿಕ್ಕಿತು ಸಿಕ್ಕೇಬಿಟ್ಟಿತು ಎನ್ನುವ ಸಂಭ್ರಮ. ಕುವೆಂಪು ಸಹಿ ಇದ್ದ ಕಲ್ಲುಬಂಡೆಗೆ ಒರಗಿ ದೂರಕ್ಕೆ ಕಣ್ಣು ಹಾಯಿಸಿದಷ್ಟೂ ಘಟ್ಟಗಳ ಸಾಲು. ಎಷ್ಟು ಬೇಕಾದರೂ ಆಗಸವನ್ನು ಹಿಡಿದಿಟ್ಟುಕೊಳ್ಳುವ ಅವಕಾಶ. ಆ ಬೃಹತ್ ಕ್ಯಾನ್ವಾಸ್ ನಲ್ಲಿ ಮತ್ತೆ ಮೋಡಗಳ ಆಟ. ಇನ್ನೊಂದೆಡೆ ಕಣ್ಣು ಹಾಯಿಸಿದರೆ ಕವಿ ಸಮಾಧಿಯ ಮೇಲೆ ಇನ್ನೇನು ಕಣ್ಣೀರಿಟ್ಟೆಬಿಡುತ್ತೇನೆ ಎಂದು ಆವರಿಸಿಕೊಂಡಿದ್ದ ಕಾರ್ಮೋಡಗಳು.ಮತ್ತೆ ನೋಡ ನೋಡುವಷ್ಟರಲ್ಲಿ ಅಲ್ಲಿ ನಿಲ್ಲಿಸಿದ್ದ ಬೃಹತ್ ಕಲ್ಲುಗಳ ಮೇಲೆ ಬೆಳ್ಳಿ ಮೋಡದ ಚಿನ್ನಾಟ. ಕವಿ ಸಮಾಧಿಯಿಂದ ಕಾಲ್ದಾರಿಯಲ್ಲಿ ಕುವೆಂಪು ಮನೆ ಕಡೆ ಹೆಜ್ಜೆ ಹಾಕುತ್ತಾ ಇದ್ದವನಿಗೆ ಆ ಇಳಿಜಾರಿನ ಹಾದಿಯಲ್ಲಿ ಬಿಸಿಲು ಮಳೆ ಎರಡರ ಮಧ್ಯೆ ಸಿಕ್ಕಿದ್ದು ಜೂಟಾಟವಾಡುತ್ತಿದ್ದ ಮೋಡ ರಾಶಿ.
ಮೋಡದ ಗುಂಗು ಹಿಡಿಯಲು ಇನ್ನು ಏನೇನು ಬೇಕು. ಸಾಗರ ದಾಟಿ, ತಾಳಗುಪ್ಪ ಹಾದು, ಜೋಗಕ್ಕೆ ಹೋಗುವ ಹಾದಿಯಲ್ಲಿ ಹೊರಳುತ್ತಾ ಹೊನ್ನೆಮರಡುವನ್ನು ತಲುಪಿಕೊಂಡೆ. ಜೊತೆಗೆ ಗಿರೀಶ್ ಕಾಸರವಳ್ಳಿ ಇದ್ದರು. ಇಬ್ಬರೂ ಕೊರಕಲು ಹಾದಿಯಲ್ಲಿ ಜೀಕುತ್ತಾ ಹೊನ್ನೆಮರಡುವನ್ನು ತಲುಪಿಕೊಂಡಿದ್ದೇ ತಡ ಆಹಾ, ಎದುರಲ್ಲಿ ಕಣ್ಣು ಹಾಯಿಸಿದಷ್ಟೂ ನೀರು..ನೀರು. ಒಂದಿನಿತೂ ತಡ ಮಾಡದೆ ಇಬ್ಬರೂ ನೀರಿಗಿಳಿಯಲು ಸಜ್ಜಾದೆವು. ಅಲ್ಲಿದ್ದ ತೆಪ್ಪ ಏರಿ ಹರಿದಾರಿ ದೂರ ಹೋಗಿದ್ದೇ ತಡ ಗಿರೀಶ್ ಕಾಸರವಳ್ಳಿ ಅವರಿಗೆ ಅದೇನು ಹುಮ್ಮಸ್ಸು ಬಂತೋ ಹರಿಗೋಲನ್ನು ತಾವೇ ಕೈಗೆತ್ತಿಕೊಂದರು. ಅಲ್ಲೇ ಪಕ್ಕದಲ್ಲೇ ‘ದ್ವೀಪ’ ಸಿನೆಮಾಕ್ಕೆ ಶೂಟ್ ಮಾಡಿದ್ದನ್ನು ಹೇಳುತ್ತಾ ಸೌಂದರ್ಯ ಹೇಗೆ ಹುಟ್ಟು ಹಿಡಿಯಲು ಕಲಿತಳು ಎಂದು ಹೇಳುತ್ತಾ ಹುಟ್ಟು ಹಾಕುತ್ತಿದ್ದರು. ನಾನು ಮಾತ್ರ ಗಿರೀಶ್ ಕಾಸರವಳ್ಳಿ ಅವರ ಮುಖವನ್ನೇ ಧಿಟ್ಟಿಸಿನೋಡುತ್ತಿದ್ದೆ. ಅಲ್ಲಿ ನೂರೆಂಟು ಮೋಡಗಳು ಸುಳಿಯುತ್ತಿದ್ದವು. ಆಗಸದಲ್ಲಿ ಕಾಣಿಸಿಕೊಳ್ಳುವ ಎಲ್ಲ ಮೋಡಗಳು ಕಾಸರವಳ್ಳಿಯವರ ಮುಖಕ್ಕೆ ಬೇರೆಯದೇ ಬಣ್ಣ ಕೊಡುತ್ತಿದ್ದವು. ಬಿರುಬಿಸಿಲಿನ, ಅರೆ ಕವಿದ, ಧಟ್ಟ ಹನಿ ಸುರಿವ ಎಲ್ಲಾ ಮೋಡಗಳು ಅವರ ಚಲನಚಿತ್ರಗಳ ಭಾವಗಳಂತೆಯೇ ಅವರ ಮುಖದ ಮೇಲೆ ಲೈಟಿಂಗ್ ನಡೆಸುತ್ತಿದ್ದವು. ನಾನು ಅವರ ಮಾತಿಗೆ ಕಿವಿ ಕೊಟ್ಟು ಅವರ ಮುಖದ ಮೇಲಿನ ಮೋಡಗಳಿಗೆ ಕಣ್ಣು ಕೊಟ್ಟು ಕೂತಿದ್ದೆ.
ಈಗಂತೂ ನನಗೆ ನನ್ನ ಕಣ್ಣುಗಳ ಜೊತೆಗೆ ಕ್ಯಾಮೆರಾ ಕಣ್ಣಿಗೂ ಮೋಡವನ್ನು ಉಣಿಸುವ ಹಂಬಲ. ಹಾಗಾಗಿ ಎಲ್ಲೇ ಹೋದರೂ ಮೋಡಗಳು ನನ್ನ ಮೂರನೆಯ ಕಣ್ಣಿಗೂ ಸೇರುತ್ತಾ ಹೊಗುತ್ತದೆ. ಹಾಗೆ ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಕುಪ್ಪಳಿಯ ಮೋಡಗಳನ್ನು ‘ನ್ಯಾಷನಲ್ ಜಿಯಾಗ್ರಫಿಕ್’ ನವರು ಬೆನ್ನು ಬಿದ್ದಿದ್ದೂ ಇನ್ನೊಂದು ಕಥೆ. ಆಗಲೇ ಮೋಡಗಳ ಕಡೆಗೂ ನಾನು ನೋಡುವಂತೆ ಆಗಿದ್ದು. ಆಗಸದ ನೀಲಿಯ ಹಿನ್ನೆಲೆಯಲ್ಲಿ ಫೋಟೋ ತೆಗೆಯುವುದು ಎಂದರೆ ನನಗೆ ತೀರಾ ತೀರಾ ಇಷ್ಟ. ಅದಕ್ಕೆ ನೂರೆಂಟು ಕಾರಣವಿದೆ. ಬಾಹುಬಲಿಯ ಆ ಎತ್ತರದ ಆಳ್ತನ, ಆ ಎತ್ತರದ ನಿಲುವು, ಎತ್ತರದ ವ್ಯಕ್ತಿತ್ವವನ್ನು ಆ ನೀಲಿ ಆಗಸದ ಹಿನ್ನೆಲೆಯಿಟ್ಟು ತೆಗೆದರೆ ಅಮೃತ ಸೋಮೇಶ್ವರರು ಬಣ್ಣಿಸಿದಂತೆ ‘ಏತೆತ್ತರ ತೂಯಿರಾ…’ ಎಂದು ಉದ್ಘಾರ ತೆಗೆಯುವಂತಾಗುತ್ತದೆ. ನಾನು ಕುಪ್ಪಳಿಯಲ್ಲಿ ತೆಗೆದ ಆ ಫೋಟೋಗೆ ಆಗಸವೂ ಇತ್ತು. ನನಗೆ ಗೊತ್ತಿಲ್ಲದಂತೆ ನುಸುಳಿದ್ದ ಮೋಡವೂ ಇತ್ತು. ಆ ಮೋಡದ ಹಿನ್ನೆಲೆಯೇ ನ್ಯಾಷನಲ್ ಜಿಯಾಗ್ರಾಫಿಕ್ ನವರು ನನ್ನನ್ನು ಬೆನ್ನು ಹತ್ತಲು ಕಾರಣವಾಯಿತು. ಸತತ ಒಂದು ತಿಂಗಳು. ಆಗಲೇ ಗೊತ್ತಾದದ್ದು ಮೋಡಕ್ಕೂ ‘ಢೀ’ ಕೊಡುವವರು ಇದ್ದಾರೆ ಎಂದು.
ಅಂದಿನಿಂದ ಇಂದಿನವರೆಗೆ ನಾನು ಮೋಡಗಳ ಜೊತೆ ಚಿನ್ನಾಟವಾಡುತ್ತಲೇ ಇದ್ದೇನೆ. ಆಗಸದಲ್ಲಿ ಮಾತ್ರ ಮೋಡ ಹುಡುಕುತ್ತಿದ್ದ ನನ್ನನ್ನು ಕೈ ಹಿಡಿದು ವಿಜ್ಞಾನ ರಂಗದಲ್ಲೂ, ಕವಿತೆಗಳಲ್ಲೂ, ಕಲಾಕೃತಿಗಳಲ್ಲೂ, ನಾನು ಹಾಕುವ ಉಡುಪಿನಲ್ಲಿಯೂ, ಗ್ರೀಟಿಂಗ್ ಕಾರ್ಡ್ಗಳಲ್ಲಿಯೂ, ಆಟಿಕೆಯಲ್ಲಿಯೂ ಮೋಡ ಹುಡುಕುವಂತೆ ಮಾಡಿದ್ದು ಮೋಡದ ಹುಚ್ಚು ಹತ್ತಿಸಲೇ ಇರುವ cloudappreciationsociety.org ಎನ್ನುವ ಅಂತರ್ಜಾಲ ತಾಣ. ನನ್ನ ಫೋಟೋಗಳು ಅಲ್ಲೂ ಸೇರಿ ನಾನು ತೆಗೆದ ಕುಪ್ಪಳಿಯ, ಬಿಜಾಪುರದ ಫೋಟೋಗಳಲ್ಲಿರುವ ಮೋಡಗಳನ್ನು ನೋಡಿ ಅದರ ಜಾತಕ ಬಿಡಿಸಿ, ಅದು ಇಂತಹದ್ದೇ ಮೋಡ ಎಂದು ಗುರುತಿಸಿ ಅದನ್ನು ಇನ್ನೂ ಹಲವಾರು ದೇಶಗಳವರು ನೋಡುವಂತೆ ಮಾಡಿದ್ದಾರೆ. ಮೋಡ ಎನ್ನುವುದು ನನ್ನೆದೆಯೊಳಗೆ ಹುಟ್ಟುವ ಒಂದು ಭಾವ. ಅದು ನನ್ನನ್ನು ಕಾಡುತ್ತದೆ. ಆಡಿಸುತ್ತದೆ. ಭಾವುಕನನ್ನಾಗಿಸುತ್ತದೆ. ಮನ ರೋಧಿಸುವಂತೆ ಮಾಡುತ್ತದೆ ಎಂದು ಮಾತ್ರ ಅಂದುಕೊಂಡಿದ್ದಾಗ ಅದರ ವಿಸ್ತಾರವಾದ ಲೋಕಕ್ಕೆ ನನ್ನನ್ನು ಕೈ ಹಿಡಿದು ನಡೆಸಿದ್ದು ಇಂತಹ ಅಂತರ್ಜಾಲ ತಾಣಗಳು.
ನಾನು ಈ ತಾಣದಲ್ಲಿ ತೆಗೆದ ಫೋಟೋ ನೋಡಿದ ತಕ್ಷಣವೇ ಈಶಾನ್ಯೆ ನನಗೆ ಮೇಲ್ ಮಾಡಿದರು. ‘ನನಗೂ ಮೋಡ ಕಂಡರೆ ತುಂಬಾ ಇಷ್ಟ. ನನಗೆ ಆ ಅಂತರ್ಜಾಲ ತಾಣದ ವಿಳಾಸ ಕೊಡಿ’ ಎಂದು. ಪಶ್ಚಿಮ ಘಟ್ಟದಲ್ಲಿ ಮೋಡ ನೋಡುತ್ತಾ ನಿಂತಿದ್ದ ಆ ತೇಜಸ್ವಿ, ಕ್ಯಾಮೆರಾ ಹೆಗಲೇರಿಸಿ ಮೋಡಗಳನ್ನು ಸೆರೆ ಹಿಡಿಯಲು ಸಜ್ಜಾದ ತೇಜಸ್ವಿಯವರ ಕೂಸು ಈಶಾನ್ಯೆ. ಮೋಡದ ಪ್ರೀತಿ ಒಂದು ಸುತ್ತು ಹೊಡೆದು ಬಂದಿತ್ತು.






ನಾವೇ ಅನುಭವಿಸಿದಷ್ಟು ಖುಷಿ ಕೊಟ್ಟಿತು ಬರಹ
ಮೋಹನ್, ಮೋಡಗಳ ಕುರಿತ ಲೇಖನ ಓದುವಾಗ, ನನ್ನ ಮನಸ್ಸು ನನ್ನೂರಿನ ನಿಶಾನೆ ಗುಡ್ಡೆಯ ತುದಿಯಲ್ಲಿ ನಿಂತು ಮೋಡಗಳ ಚಲನೆಯನ್ನು ನೋಡುತಿದ್ದ ದಿನಗಳಿಗೆ ಕೊಂಡು ಹೋದಂತೆ ಅನುಭವ ಮಾಡಿಸಿದಿರಿ. Thanks.
Sir, nimma samvedanaasheelategondu salaam! 🙂
ಮೋಹನ್ ಅವರ ಮೋಡದ ಅನುಭವ ನಿಜಕ್ಕೂ ಬೆರಗು ಹುಟ್ಟಿಸುವ ಮೋಡಿ ಮಾಡುತ್ತದೆ. ಪ್ರಕೃತಿಯ ನಿಜ ರೂಪ ನಮಗೆ ಗೊತ್ತಾಗುವುದೇ ಮಳೆಗಾಲದಲ್ಲಿ, ವಿಶೇಷವಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ. ಪಶ್ಚಿಮ ಘಟ್ಟವು ಮೋಡದ ಹೂಮಾಲೆಯನ್ನು ಹಾಕಿಕೊಂಡ ಹಸಿರು ಸೀರೆ ಉಟ್ಟ ಹೆಣ್ಣಿನಂತೆ ಕಂಗೊಳಿಸುತ್ತಾ ಜಲಪಾತಗಳ ಅಮೃತವನ್ನು ಹರಿಸುತ್ತಾ, ಮನಕ್ಕೆ ಮುದ ನೀಡಿದ ಮೋಹನ್ ಅವರ ಅನುಭವಕ್ಕೆ ಮಾರು ಹೋದೆ.
’ಮೋಡಗಳ ಜೊತೆ ಓಟ’ ಬಹಳ ಹಿಡಿಸಿತು ಸರ್. ನಾನು ನಿಮ್ಮ ಮೋಡಗಳ ಬಗ್ಗೆ ಓದುತ್ತಲೇ ಒಂದು ಪಶ್ಚಿಮ ಘಟ್ಟ, ಕುಪ್ಪಳ್ಳಿ ಎಲ್ಲಾ ಒಂದು ಸುತ್ತು ಹೊಡೆದು ಬಂದಂಗಾಯ್ತು. ಜೊತೆಗೆ ಬಯಲುಸೀಮೆಯ ರೈತರು ಮುಂಗಾರು ಹಿಂಗಾರುಗಳಲ್ಲಿ ಕೈ ಹಣೆಗೆ ಹಿಡಿದು ಮೋಡಗಳ ಕಡೆ ನೋಡುವ, ನಿರೀಕ್ಷಿಸುವ ದೃಶ್ಯಗಳು ಕೂಡ ನೆನಪಾದವು…