ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಮೋಹನ್ ಕಾಲಂ : ಒಂದು ಮಿಣಿ ಮಿಣಿ ಬೆಳಕು

 

ಜಿ ಎನ್ ಮೋಹನ್

ರಾಮೋಜಿ ಫಿಲಂ ಸಿಟಿಯಲ್ಲಿದ್ದೆವು. ಕನ್ನಡ ಮಾಧ್ಯಮ ಲೋಕ ಒಂದು ಬಾರಿ ಮಗ್ಗುಲು ಬದಲಿಸಿತ್ತು. ಕನ್ನಡ ಮಾಧ್ಯಮ ಎಂದರೆ ಪತ್ರಿಕೆ ಮಾತ್ರ ಎಂಬಂತಿದ್ದ ದಿನಗಳು ಅರ್ಥ ಬದಲಿಸಿಕೊಳ್ಳುವ ಕಾಲ ಬಂದಿತ್ತು. ಕನ್ನಡ ಮಾಧ್ಯಮ ಲೋಕ ಚಾನಲ್ ಬೂಮ್ ಕಾಣಲು ಸಜ್ಜಾಗಿತ್ತು. ಈ ಭಾಗವಾಗಿಯೇ ನಾನೂ ಸಹಾ ರಾಮೋಜಿ ಫಿಲಂ ಸಿಟಿಯಲ್ಲಿ ಕಾಲೂರಿದ್ದೆ. ಅದುವರೆಗೂ ಸತತ 12 ಹಾಗೂ ಒಂದಿಷ್ಟು ವರ್ಷಗಳ ಕಾಲ ಮುದ್ರಣ ಮಾಧ್ಯಮದಲ್ಲಿಯೇ ಇದ್ದ ನಾನು ಬಿಡುಗಣ್ಣಿನಿಂದ, ಆತಂಕದಿಂದಲೇ ಚಾನಲ್ ಅಂಗಳ ಪ್ರವೇಶಿಸಿದ್ದೆ.
‘ಹೋಗಿ ಒಂದು ಬೈಟ್ ತನ್ನಿ’ಎಂದರು ಪೂನಾ ಫಿಲಂ ಇನ್ ಸ್ಟಿಟ್ಯೂಟ್ ನಿಂದ ಬಂದು ಚಾನಲ್ ಲೋಕಕ್ಕೆ ತೆರೆದುಕೊಳ್ಳುತ್ತಿದ್ದ ನಮಗೆ ತರಬೇತಿ ನೀಡಲು ನಿಂತಿದ್ದ ಪ್ರೊ ಮೆಹೆಂದಳೆ. ’ಬೈಟ್?’ ಎಂದು ಅಲ್ಲಿದ್ದ ಸರಿಸುಮಾರು ನೂರರಷ್ಟು ಜನ ಮುಖ ಮುಖ ನೋಡಿಕೊಂಡೆವು. ‘ಬೈಟ್ ಅಂದರೆ ಏನಪ್ಪಾ?’ ಎಂದು ತಲೆಕೆರೆದುಕೊಳ್ಳುವಂತಾಗಿತ್ತು. ಅಕ್ಕಪಕ್ಕದವರಿಗೆ ಕೇಳೋಣ ಎಂದರೆ ಅವರಿಗೂ ಅದು ಮೊದಲು ಕೇಳಿದ ಶಬ್ದವೇ. ಹಾಗಾಗಿ ನಾವು ಬೈಟ್ ಬೆನ್ನ ಹಿಂದೆ ಬಿದ್ದೆವು. ಆಗ ಗೂಗಲ್ ಸರ್ಚ್ ಇದ್ದಿದ್ದರೆ ನಾವು ಸುಲಭವಾಗಿ ಅದೇನೆಂದು ಪತ್ತೆ ಹಚ್ಚಿಬಿಡುತ್ತಿದ್ದೆವೇನೋ? ಆದರೆ ಇರಲಿಲ್ಲವಲ್ಲ. ಆಗ ಗೂಗಲ್ ಸರ್ಚ್ ಇರಲಿಲ್ಲ, ತಿರುವಿ ಹಾಕೋಣ ಎಂದರೆ ಇದನ್ನು ಕಲಿಸಿಕೊಡುವ ಪುಸ್ತಕಗಳೂ ಇರಲಿಲ್ಲ. ಹಾಗಾಗಿ ನಾವು ಮತ್ತೆ ಮಾಸ್ತರರಿಗೆ ಶರಣಾಗುವಂತಾಯಿತು. ಮಾಸ್ತರರು ಬಂದು ಕಿರುನಗೆ ಬೀರುತ್ತಾ, ಎ ಫಾರ್ ಆಪಲ್, ಬಿ ಫಾರ್ ಬ್ಯಾಟ್ ಎನ್ನುವಂತೆ ‘ಬಿ ಫಾರ್ ಬೈಟ್’ ಎನ್ನುವುದನ್ನೂ ಕಲಿಸಿಕೊಟ್ಟರು.
ಅಂತೂ ಶಿವಧನುಸ್ಸನ್ನು ನಮ್ಮ ಹೆದೆಗೇರಿಸಿಯೇಬಿಟ್ಟೆವು ಎಂದು ನಿಟ್ಟುಸಿರಾಗುವ ವೇಳೆಗೆ ಅದೇ ಮಾಸ್ತರರು ‘ಬನ್ನಿ ಪಿಸಿಆರ್ ನೋಡಿ ಬರೋಣ’ ಎಂದರು. ಮತ್ತೆ ತಲೆ ನೋವು ಆರಂಭ. ಅದೇನಪ್ಪಾ ‘ಪಿಸಿಆರ್’ ಅಂದರೆ…? ಅದರ ಒಗಟು ಬಿಡಿಸಿಕೊಳ್ಳುವ ವೇಳೆಗೆ ಎಂಸಿಆರ್, ಎವಿಬಿ, ಎಬಿ, ಎಜಿ,.. ಹೀಗೆ ಸಾಲು ಸಾಲು ಪದಪುಂಜಗಳು ಎದ್ದುಬರುತ್ತಾ ಹೋದವು. ನಾವೂ ಸಹಾ ಅದೇ ಗುರುವಿನ ಗುಲಾಮರಾಗಿ ಎಲ್ಲವನ್ನೂ ಕಲಿಯುತ್ತಾ ಹೋದೆವು.
ಆ ಕಾಲ ಹಾಗಿತ್ತು. ಆ ನಂತರದ್ದು ಮತ್ತೊಂದು ಕಥೆ. ನಾವು ವರದಿಗಾರರಾಗಿ ಕಣಕ್ಕಿಳಿದು ಬಿರುಸಿನ ವೇಗಕ್ಕೆ ಹೊಂದಿಕೊಂಡು ಅವರಿವರಿಂದ ಬೈಟ್ ತೆಗೆದುಕೊಳ್ಳಲು ಅವರ ಬಾಯಿಗೆ ಮೈಕ್ ಹಿಡಿಯತೊಡಗಿದೆವು. ‘ಒಂದು ಬೈಟ್ ಕೊಡಿ ಸಾರ್, ತುಂಬಾ ಅರ್ಜೆಂಟ್’ ಎನ್ನುತ್ತಿದ್ದೆವು. ಚಾನಲ್ ಎಂದರೆ ಹಾಗೇ ಅಲ್ಲವೇ, ಕಾಲನೆಂಬ ಗಡಿಯಾರ ಸದಾ ಕಿವಿಯಲ್ಲಿ ಟಿಕ್, ಟಿಕ್ ಸದ್ದು ಮಾಡುತ್ತಲೇ ಇರುತ್ತಾನೆ. ಬೈಟ್ ಎಂದ ತಕ್ಷಣ ನಮ್ಮೆದುರು ಇದ್ದವರು ಹೌಹಾರುತ್ತಿದ್ದರು. ‘ಅದೇನ್ರೀ ಅದು?’ ಅಂತ ಅವರ ಮುಖ ಕಕ್ಕಾಬಿಕ್ಕಿಯನ್ನು ಬಹಿರಂಗ ಮಾಡುತ್ತಿತ್ತು. ‘ಸಾರ್ ಬೈಟ್ ಅಂದ್ರೆ ನೀವು ಒಂದಿಷ್ಟು ಮಾತಾಡಿ ಸಾರ್’ ಅಂತ ಆದಷ್ಟೂ ಆ ವಿಷಯವನ್ನ ತೀರಾ ತೀರಾ ಸರಳೀಕರಿಸಿ ಹೇಳುತ್ತಿದ್ದೆವು. ನಮಗೆ ಪಾಠ ಕಲಿಸಿದ ಆ ಗುರುಗಳು ಪುಣೆಯಲ್ಲಿದ್ದೇ ನರಳುತ್ತಿದ್ದೆರೇನೋ. ಆದರೆ ಕಾಲ ಬದಲಾಯಿತು. ಈಗ ಯಾರ ಮುಂದೆಯಾದರೂ ಮೈಕ್ ಹಿಡಿದು ನೋಡಿ ಇವರೇ ‘ ಬೈಟ್ ಬೇಕೇನಪ್ಪಾ?’ ಎಂದು ಕೇಳುವಷ್ಟು ಚಾನಲ್ ಸಾಕ್ಷರತೆ ಹೆಚ್ಚಾಗಿದೆ.
ಚಾನಲ್ ಸಾಕ್ಷರತೆಯ ಮಾತು ಹಾಗಿರಲಿ ಮಾಧ್ಯಮ ಕುರಿತ ಒಂದಿಷ್ಟು ತಿಳುವಳಿಕೆ ಪಡೆಯಲು ಬೇಕಾದ ಪುಸ್ತಕಗಳೇ ಇಲ್ಲದ ಕಾಲ ಇದು. ಮುದ್ರಣ ಮಾಧ್ಯಮವಿತ್ತು, ರೇಡಿಯೋ ಚಾನಲ್ ಗಳು ಬಂತು, ಟೆಲಿವಿಷನ್ ಚಾನಲ್ ಗಳು ಲಗ್ಗೆ ಇಟ್ಟವು, ಈಗ ಅದನ್ನೆಲ್ಲಾ ಮೀರಿ ಆನ್ ಲೈನ್ ಮಾಧ್ಯಮ ನಮ್ಮೆಲ್ಲರನ್ನೂ ಸುತ್ತಿಕೊಂಡಿದೆ. ಆದರೆ ಈ ಮಾಧ್ಯಮಗಳ ಬಗ್ಗೆ ಒಂದಿಷ್ಟು ಪರಿಚಯ ನೀಡುವ ಅಥವಾ ನಮಗಿರುವ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂದರೂ ಆ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಇಲ್ಲ.
ಹಾಗೇನಿಲ್ಲ ಎಂದು ನೀವು ವಾದಿಸುವುದಕ್ಕೂ ಅವಕಾಶವಿದೆ. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗದಿದ್ದರೂ ಲೈಬ್ರರಿಯ ಸಗಟು ಖರೀದಿ ಪಟ್ಟಿಯಲ್ಲಿ ನೋಡಿದರೆ ಎಷ್ಟೊಂದು ಮಾಧ್ಯಮ ಕುರಿತ ಕೃತಿಗಳು! ಅದರೆ ಅವು ಲೈಬ್ರರಿಗಳ ಗೋಡೌನ್ ಗಳಲ್ಲಿಯೇ ಇರಲಿ ಎಂದು ನಾವು ನೀವೆಲ್ಲರೂ ಹಾರೈಸುವಂತೆಯೇ ಇರುತ್ತದೆ. ಈಗ ಎಲ್ಲಾ ವಿಶ್ವವಿದ್ಯಾಲಯಗಳೂ ಮಾಧ್ಯಮ ಶಿಕ್ಷಣದತ್ತ ಮುಖ ಮಾಡಿರುವಾಗ, ಹಲವಾರು ಕಾಲೇಜುಗಳು ಮಾಧ್ಯಮ ಶಿಕ್ಷಣವನ್ನು ಒಂದು ಸೇಲಬಲ್ ಕೋರ್ಸ್ ಎಂದು ಕಂಡುಕೊಂಡಿರುವಾಗ ಆಯಾ ವಿಶ್ವವಿದ್ಯಾಲಯಗಳ, ಕಾಲೇಜುಗಳ ಸಿಲಬಸ್ ಗಳನ್ನ ಆಧರಿಸಿ ಇದೇನು ಪಠ್ಯಪುಸ್ತಕವೋ ಇಲ್ಲ ಗೈಡ್ ಗಳೋ ಎಂದು ಭಾವ ಮೂಡಿಸುವ ನೂರಾರು ಪುಸ್ತಕಗಳಿವೆ. ಈ ಪುಸ್ತಕಗಳನ್ನು ಬರೆದವರಲ್ಲಿ ಅನೇಕರು ಮಾದ್ಯಮ ಬೋಧಿಸಿದವರೂ ಅಲ್ಲ ಅಥವಾ ಮಾಧ್ಯಮ ರಂಗದಲ್ಲಿ ಕೆಲಸ ಮಾಡಿದವರೂ ಅಲ್ಲ.

ನಾಗೇಂದ್ರ ಅವರ ಈ ಹಿಂದಿನ  ಕೃತಿ ರೇಡಿಯೋ ಧ್ವನಿ )

ಪರಿಸ್ಥಿತಿ ಹೀಗಿರುವಾಗ ನಾಗೇಂದ್ರ ಎನ್ನುವ ಮೆಲುಮಾತಿನ, ಕನಸುಗಳ ಹುಡುಗ ಮಾಧ್ಯಮಗಳನ್ನು ಅರ್ಥ ಮಾಡಿಸಲು ಹೊರಟಿದ್ದಾರೆ. ಇದು ಅಂಧಕಾರದಲ್ಲೂ ಕಾಣುವ ಒಂದು ಮಿಣಿ ಮಿಣಿ ಬೆಳಕು. ನಾಗೇಂದ್ರ ಅವರು ಸ್ವತಃ ಪತ್ರಿಕೋಧ್ಯಮಿ. ಈಗ ಪತ್ರಿಕಾ ಉಪನ್ಯಾಸಕ, ಹಾಗಾಗಿಯೇ ನನಗೆ ಇವರು ಬರೆದ ಈ ಪುಸ್ತಕ ಮುಖ್ಯ. ಒಂದೆಡೆ ಮಾಧ್ಯಮ ಗೊತ್ತಿರುವವರು, ಅದರ ಆಳ ಅಗಲವನ್ನು ಒಂದಿಷ್ಟಾದರೂ ಬಲ್ಲವರು ಕೃತಿ ರಚಿಸಿದ್ದಾರೆ ಎನ್ನುವುದು, ಇನ್ನೊಂದೆಡೆ ಇಂದು ತರಗತಿಗಳಲ್ಲಿ ಬೋಧಿಸುವ ಮಾಧ್ಯಮಕ್ಕೂ, ಮಾಧ್ಯಮ ರಂಗದೊಳಗೆ ಇರುವ ರೀತಿಗೂ ದೊಡ್ಡ ಕಂದಕವಿದೆ. ನ್ಯೂಸ್ ರೂಂ ಹಾಗೂ ಕ್ಲಾಸ್ ರೂಂ ನಡುವೆ ಇರುವ ಭಾರೀ ಕಂದಕ ವಿದ್ಯಾರ್ಥಿಗಳನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ತರಗತಿಗಳ ಒಳಗೆ ಕಲಿಯುತ್ತಿರುವ ವಿಷಯಕ್ಕೂ ನ್ಯೂಸ್ ರೂಂಗೆ ಅಗತ್ಯವಿರುವುದಕ್ಕೂ ಎಲ್ಲೋ ಮಿಸ್ಸಿಂಗ್ ಲಿಂಕ್ ಇದೆ ಎನಿಸುತ್ತಿರುವ ಕಾಲ ಇದು. ಒಬ್ಬ ವಿದ್ಯಾರ್ಥಿ ತಾನು ಕಲಿತದ್ದನ್ನು ಇಟ್ಟುಕೊಂಡೇ ನ್ಯೂಸ್ ರೂಂನಲ್ಲಿಯೂ ಯಶಸ್ವಿ ಎನಿಸಿಕೊಳ್ಳಬೇಕಾದರೆ ಆತ ‘ಪೋಲ್ ವಾಲ್ಟ್’ ಮಾಡಿಯೇ ಗೆಲ್ಲವಬೇಕು ಎನ್ನುವ ಪರಿಸ್ಥಿತಿ ಇದೆ.
ಇವತ್ತಿಗೂ ಮಾಧ್ಯಮ ತರಗತಿಗಳ ಪಠ್ಯಗಳು ಪಾಶ್ಚಿಮಾತ್ಯ ದೇಶಗಳತ್ತಲೇ ಮುಖಮಾಡಿ ಕುಳಿತಿವೆ. ಭಾರತದ, ಕನ್ನಡ ಮಾಧ್ಯಮದ ವಾಸ್ತವಕ್ಕೆ ಬೇಕಾಗಿರುವ ಸಿಲಬಸ್ ಗಳನ್ನು ಪಳಗಿಸುವ ಕೆಲಸ ಇನ್ನಷ್ಟು, ಮತ್ತಷ್ಟು ಆಗಬೇಕು.
ಹಾಗಿರುವಾಗಲೇ ಪತ್ರಿಕೋದ್ಯಮಿಯಾಗಿದ್ದು, ಅದರ ಹಲವಾರು ವಿಭಾಗದಲ್ಲಿ ಅನುಭವ ಪಡೆದ ನಾಗೇಂದ್ರ ಅವರು ಈ ಪುಸ್ತಕ ಬರೆದಿದ್ದಾರೆ ಎನ್ನುವುದು ಮೆಚ್ಚುವ ವಿಷಯ. ಇದು ಕ್ಲಾಸ್ ರೂಂ ಮತ್ತು ನ್ಯೂಸ್ ರೂಂ ನಡುವಣ ಬೆಸುಗೆಯತ್ತ ಮುಖ್ಯ ಹೆಜ್ಜೆ. ಅನುಭವಿಸಿ ನಂತರ ಬೋಧಿಸುವ ಬುಡಕಟ್ಟು ತೀರಾ ಕಡಿಮೆ ಹಾಗಾಗಿ ನಾಗೇಂದ್ರ ಅವರ ಈ ಶ್ರಮವನ್ನು ಖಂಡಿತಾ ನಾವು ಅಭಿನಂದಿಸಬೇಕು.
ನಾಗೇಂದ್ರ ಅವರ ‘ಟಿವಿ ಮಾಧ್ಯಮ’ ಕೃತಿಯ ಬಗ್ಗೆ ನನಗೆ ಆಸಕ್ತಿ ಬರಲು ಕಾರಣವಾದದ್ದು ಅವರು ಈಗಾಗಲೇ ತಂದಿರುವ ‘ರೇಡಿಯೋ ಧ್ವನಿ’ ಎಂಬ ಪುಸ್ತಕ. ರೇಡಿಯೋಗಳ ಬಗ್ಗೆ ಅವರು ಎಷ್ಟು ಮಾಹಿತಿಯುಳ್ಳ, ಅಚ್ಚುಕಟ್ಟಾದ ಕೃತಿ ಹೊರತಂದಿದ್ದಾರೆ ಎಂದರೆ ಸದಾ ಪುಸ್ತಕದ ಅಂಗಡಿಗಳಿಗೆ ಲಗ್ಗೆ ಇಡುವ, ಮಾಧ್ಯಮ ಕೃತಿಗಳತ್ತ ಒಂದು ಕಣ್ಣು ಇಟ್ಟೇ ಇರುವ ನಾನು ಈ ಕೃತಿಯನ್ನು ಕೊಂಡುಕೊಂಡೆ. ನಾಗೇಂದ್ರ ಅವರು ವಿಶಿಷ್ಟವಾಗುವುದು ಅವರು ನಡೆಸುವ ಅವಿರತ ಹುಡುಕಾಟದಿಂದ. ರೇಡಿಯೋ ಚಾನಲ್ ಗಳು ಕಿವಿ ತುಂಬುತ್ತಿರುವ ಈ ದಿನಗಳಲ್ಲಿ ಸಹಜವಾಗಿಯೇ ಆ ಬಗ್ಗೆ ಆಸಕ್ತಿ ಹೆಚ್ಚಿದೆ. ಆದರೆ ರೇಡಿಯೋ ಜಾಕಿ (ಆರ್ ಜೆ) ಎನ್ನುವ ಪದದಾಚೆ ನಮ್ಮ ಅರಿವು ವಿಸ್ತರಿಸಿಲ್ಲ. ಈ ಸಂದರ್ಭದಲ್ಲಿ ನಾಗೇಂದ್ರ ಸಾಕಷ್ಟು ಶ್ರಮವಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅದರಲ್ಲಿ ಬೇಕಾದದ್ದನ್ನು ಆಯ್ದು ಅಚ್ಚುಕಟ್ಟಾಗಿ ಒಂದು ಚಿಟಿಕೆಯಲ್ಲಿ ರೇಡಿಯೋ ಬಗ್ಗೆ ಸಾಕಷ್ಟು ಮಾಹಿತಿ ದಕ್ಕುವಂತೆ ಮಾಡಿದ್ದಾರೆ.
ಆ ನಾಗೇಂದ್ರ ಅವರೇ ಟಿವಿ ಬಗ್ಗೆ ಬರೆಯಲು ಮುಂದಾದಾಗಲೂ ನನಗೆ ಸಹಜ ಕುತೂಹಲವಿತ್ತು. ನಾಗೇಂದ್ರ ಅವರು ಅಷ್ಟೇ ಅಚ್ಚುಕಟ್ಟಾಗಿ ‘ಟಿವಿ ಮಾಧ್ಯಮ’ ಕೃತಿಯನ್ನೂ ರೂಪಿಸಿದ್ದಾರೆ. ಭಾರತದಲ್ಲಿ ದೂರದರ್ಶನ ಆರಂಭ ಆದದ್ದರಿಂದ ಹಿಡಿದು ಪ್ರಸಾರ ಭಾರತಿಗೆ ಸರ್ಕಾರ ಈಗ ನೀಡಲು ಹೊರಟಿರುವ ಕಾಯಕಲ್ಪದವರೆಗೆ ಅವರ ಬರಹ ಚಾಚಿಕೊಂಡಿದೆ. ಈ ನಡುವಲ್ಲಿ ಅವರು ಟೆಲಿವಿಷನ್ ನ ವಿವಿಧ ವೇಷಗಳು, ಟೆಲಿವಿಷನ್ ನ ತಂತ್ರಜ್ಞಾನ, ಟೆಲಿವಿಷನ್ ಕಾರ್ಯಕ್ರಮದ ಮಾದರಿಗಳು, ಸುದ್ದಿ ತಯಾರಿಕೆ ಹೀಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ. ಅಚ್ಚುಕಟ್ಟಾಗಿ ಕೊಟ್ಟಿದ್ದಾರೆ.
ಈ ಕೃತಿ ಓದಿದರೆ ಟೆಲಿವಿಷನ್ ಮಾಧ್ಯಮದ ಬಗ್ಗೆ ನಾವು ಈ ಮೊದಲಿಗಿಂತಲೂ ಒಂದಿಷ್ಟು ಹೆಚ್ಚು ಸಾಕ್ಷರರಾಗುತ್ತೇವೆ ಎನ್ನುವುದು ಈ ಕೃತಿಯ ಹೆಗ್ಗಳಿಕೆ. ಆದರೆ ನಾಗೇಂದ್ರ ಅವರ ಈ ಹಿಂದಿನ ‘ರೇಡಿಯೋ ಧ್ವನಿ’ ಹಾಗೂ ಈ ‘ಟಿವಿ ಮಾಧ್ಯಮ’ ಕೃತಿಯೆರಡನ್ನೂ ಓದುವಾಗ ಇದು ಮಾಹಿತಿಗಳ ಅಪಾರ ಸಂಕಲನ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಮಾಹಿತಿಯೇ ಎಲ್ಲವೂ ಅಲ್ಲ ಎನ್ನುವುದನ್ನೂ ಅರಿತುಕೊಳ್ಳಬೇಕು. ನಾಗೇಂದ್ರ ಅವರ ಈ ಕೃತಿಯ ಗುರಿಯೇ ಟಿವಿ ಮಾಧ್ಯಮದ ವಸ್ತು ವಿಶ್ಲೇಷಣೆ ಅಲ್ಲ. ಅವರು ಟಿವಿ ಮಾಧ್ಯಮದ ವಿವಿಧ ಆಯಾಮಗಳನ್ನು ಪರಿಚಯಿಸುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ವಿಶ್ವ ವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಇದು ಖಂಡಿತಾ ಒಂದು ಒಳ್ಳೆಯ ಓದು.
ಆದರೆ ಸದಾ ಮಾಧ್ಯಮದ ಪರಿಣಾಮಗಳ ಬಗ್ಗೆಯೇ ಕುತೂಹಲ ಹೊಂದಿರುವ ನನಗೆ ನಾಗೇಂದ್ರ ಆ ಕಡೆಯೂ ತಮ್ಮ ಗಮನ ಹರಿಸಿಲಿ ಎನ್ನುವ ಆಸೆಯಾಗುತ್ತದೆ. ನಾಗೇಂದ್ರ ಅವರು ಪಠ್ಯಕ್ರಮಕ್ಕೆ ಬೇಕಾದ ಓದನ್ನಷ್ಟೇ ನೀಡದೆ ಮಾಧ್ಯಮವನ್ನು ಅರ್ಥೈಸುವ ಕೆಲಸಕ್ಕೂ ಕೈ ಹಾಕಲಿ, ಅವರಿಗೆ ಅದು ಸಾಧ್ಯವಿದೆ.
ಇಷ್ಟೆಲ್ಲಾ ಆದ ಮೇಲೂ ಇಂದಿನ ಮಾಧ್ಯಮ ವಿದ್ಯಾರ್ಥಿಗಳ ಬಗ್ಗೆ ಹೊಟ್ಟೆಕಿಚ್ಚಾಗುತ್ತದೆ. ಏಕೆಂದರೆ ‘ಬೈಟ್’ ಎಂದ ತಕ್ಷಣ ಅವರು ಆಗಿನ ನನ್ನಂತೆ ತಲೆಕೆರೆದುಕೊಳ್ಳಬೇಕಿಲ್ಲವಲ್ಲ. ನಾಗೇಂದ್ರ ಅವರ ಕೃತಿ ಕೈಗೆತ್ತಿಕೊಂಡರೆ ಸಾಕು…

(ತುಮಕೂರಿನ ಸಿದ್ಧಾರ್ಥ ಕಾಲೇಜಿನ ಮಾಧ್ಯಮ ಉಪನ್ಯಾಸಕ ನಾಗೇಂದ್ರ ಅವರ ಬರಲಿರುವ ಕೃತಿ ‘ಟಿ ವಿ ಮಾಧ್ಯಮ’ಕ್ಕೆ ಬರೆದ ಮುನ್ನುಡಿ)

‍ಲೇಖಕರು avadhi

30 April, 2013

3 Comments

  1. ಸುಧಾ ಚಿದಾನಂದಗೌಡ

    ಮಾಧ್ಯಮ ಕುರಿತು ಏನೂ ಗೊತ್ತಿಲ್ಲದ ಆದರೆ ಕುತೂಹಲ ಮಾತ್ರ ಸಾಕಷ್ಟಿರುವ
    ನನ್ನಂಥವರಿಗೂ ಈ ಪುಸ್ತಕ ಕೊಳ್ಳುವ ಮನಸಾಗುತ್ತಿದೆ.
    ಬದುಕಿನ ಬಹುಭಾಗವನ್ನು ಮಾಧ್ಯಮಗಳೊಂದಿಗೇ ಕಳೀತೇವೆ.
    ಪೇಪರ್ ಇಲ್ಲದೆ ದಿನ ಶುರುವಾಗೋದಿಲ್ಲ.
    ಟಿವಿ ಇಲ್ಲದೆ ದಿನ ಕಳೆಯೋದಿಲ್ಲ.
    ಆನ್ ಲೈನ್ ಇಲ್ಲದೆ ರಾತ್ರಿ ಮುಗಿಯುವುದಿಲ್ಲ.
    ಆದರೆ ಅವುಗಳ ಬಗ್ಗೆ ತಿಳುವಳಿಕೆಯಿರೋದಿಲ್ಲ..!
    ಆ ಕುರಿತ ಕೃತಿಗಳೂ ಕಡಿಮೆಯೇ.
    ಓದಿದರೂ ಅರ್ಥವಾಗೋದಿಲ್ಲ ಕೆಲಬಾರಿ..
    ಸುದ್ದಿಮನೆ ಸುದ್ದಿಗಳನ್ನು ಸುದ್ದಿಮಾಡುವವರೇ ಹಂಚಿಕೊಳ್ಳಬೇಕಷ್ಟೇ.

  2. ನಾಗೇಂದ್ರ

    ಪ್ರೀತಿಯ ಜಿ.ಎನ್.ಮೋಹನ್ ಸರ್ ಅವರಿಗೆ,
    ನನ್ನ ಬಗ್ಗೆ ವಿಶ್ವಾಸವಿಟ್ಟು ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದಲ್ಲದೆ ಅಂಕಣದಲ್ಲೂ ಪ್ರಸ್ತಾಪಿಸಿರುವುದಕ್ಕೆ ವಂದನೆಗಳು.
    ನಾಗೇಂದ್ರ

  3. ವಿ.ಎಲ್.ಪ್ರಕಾಶ

    ಪ್ರಿಯರೇ,
    ಮಾಧ್ಯಮದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಅಸಂಖ್ಯ ಕೃತಿಗಳಿವೆ. ಪ್ರತಿದಿನ ನೂರಾರು ಪ್ರಕಟವಾಗುತ್ತಲೂ ಇವೆ. ಕನ್ನಡದಲ್ಲಿ ಕಡಿಮೆ ಎಂದರೆ ಅತಿ ಕಡಿಮೆ. ಇನ್ನಾದರೂ ಮಾಧ್ಯಮದಲ್ಲಿ ನಿತ್ಯ ಅಕ್ಷರಗಳ ಸಂವಾದಿಸುವವರು ವ್ಯವಸ್ಥಿತವಾಗಿ ಉತ್ತಮ ಕೃತಿಗಳನ್ನು ಹೊರತರಲಿ ಎನ್ನುವುದು ಹಾರೈಕೆ. ನಾಗೇಂದ್ರ ಅವರಿಂದ ಮತ್ತಷ್ಟು ಕೃತಿಗಳ ನಿರೀಕ್ಷೆಯೊಂದಿಗೆ,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading