ಜಟಿಲ ಕಾಡಿನ ಕುಟಿಲ ಹಾದಿ ಹಿಡಿದು
ಜೋಗಿ
ಪ್ರತಿ ಪುಸ್ತಕ ಬರೆದು ಮುಗಿಸಿದಾಗಲೂ ಇನ್ನು ಬರೆಯಲಾಗುವುದಿಲ್ಲ ಅಂತ ಅನ್ನಿಸುತ್ತಿರುತ್ತೆ. ಒಮ್ಮೊಮ್ಮೆ ಹಾಗನ್ನಿಸುವುದೂ ಒಳ್ಳೆಯದೇ. ಬೇಸಗೆಯಲ್ಲಿ ಸುಟ್ಟುಕೊಂಡು ಗಾರಾದ ಮಣ್ಣಿಗೂ, ತನ್ನಲ್ಲಿನ್ನು ಮೊಳಕೆ ಒಡೆಯಿಸುವ, ಚಿಗುರಿಸುವ, ಅರಳಿಸುವ ಶಕ್ತಿ ಇಲ್ಲ ಅಂತ ಅನ್ನಿಸುತ್ತದಾ? ಮತ್ತೊಂದು ಮಳೆ ಭೋರ್ಗರೆದು ಸುರಿದ ಕೂಡಲೇ ಮತ್ತೆ ಮಿದುವಾಗುತ್ತದಾ? ಮನಸ್ಸು ಮಿದುವಾಗಲು ನಾವಾಗಿಯೇ ಮಾಡಬಹುದಾದದ್ದು ಏನೂ ಇಲ್ಲ. ಪ್ರತಿದಿನ ಅದೇ ಸೂರ್ಯ ಮೂಡಿ, ಅದೇ ಬೆಳಗು, ಅದೇ ಹಗಲು, ಅದೇ ಸಂಜೆಯಾದರೂ ಮನಸ್ಸಿನ ವರಸೆಗಳು ಮಾತ್ರ ಬೇರೆ ಬೇರೆ. ಒಂದೊಂದು ದಿನಕ್ಕೂ ಒಂದೊಂದು ಲಹರಿ.
ಜೀಪು ಬಂಡೀಪುರದ ಕಾಡುರಸ್ತೆಯಲ್ಲಿ ಎದ್ದೂಬಿದ್ದೂ ಓಡುತ್ತಿದ್ದರೆ, ಜಿಂಕೆಗಳು ಕಣ್ಣರಳಿಸಿ ನೋಡುತ್ತಿದ್ದವು. ಕೆಂಬಣ್ಣದ ಮುಂಗುಸಿ ಜೋಡಿ ಮುದ್ದಾಡುತ್ತಾ ಹೊರಜಗತ್ತಿಗೂ ತಮಗೂ ಸಂಬಂಧವೇ ಇಲ್ಲದಂತಿತ್ತು. ಕರಡಿಯೊಂದು ಎರಡು ಪುಟ್ಟ ಮರಿಗಳನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು, ವಾಹನ ಜಂಗುಳಿಯ ರಸ್ತೆ ದಾಟುವುದಕ್ಕೆ ಆತಂಕದಿಂದ ಕಾಯುವ ತಾಯಿಯ ಹಾಗೆ ಕಾಣುತ್ತಿತ್ತು. ಒಣಗಿದ ಕೆರೆಯಿಂದಾಚೆ ಬಂದ ಆಮೆಯೊಂದು ಬೇಗೆ ತಾಳಲಾರದೆ, ತನ್ನ ಮೈಡೇರೆಯಿಂದ ತಲೆ ಹೊರಗೆ ಹಾಕಿ ಆಕಾಶ ನೋಡುತ್ತಿತ್ತು.
ಅದೇ ರಾತ್ರಿ ಕುಕ್ಕರುಗಾಲಲ್ಲಿ ಕೂತು ತೇಗದ ಮರದ ಬುಡ ಕೆದಕುತ್ತಾ ಕೂತಿದ್ದವನ ಹೆಸರು ಮಾದೇಶ. ಇಪ್ಪತ್ತೊಂದು ವರುಷದ ಹುಡುಗ. ಅಷ್ಟೂ ವರ್ಷ ಕಾಡಲ್ಲೇ ಕಳೆದಿದ್ದಾನೆ. ಯಾವ ಪ್ರದೇಶದಲ್ಲಿ ಯಾವ ಪ್ರಾಣಿಗಳಿವೆ, ಅವು ಎಲ್ಲಿಗೆ ನೀರು ಕುಡಿಯುವುದಕ್ಕೆ ಬರುತ್ತವೆ ಅನ್ನುವುದು ಗೊತ್ತು. ಅಕ್ಷರ ಕಲಿತಿದ್ದಾನೆ, ಯಾವತ್ತೂ ಪೇಪರ್ ಆಗಲೀ, ಕತೆಗಳನ್ನಾಗಲೀ ಓದಿಲ್ಲ. ಶಿವರಾಜ್ ಕುಮಾರ್ ಮೆಚ್ಚಿನ ನಟ. ಅವರ ಸಿನಿಮಾಗಳು ಬಂದರೆ ಗುಂಡ್ಲುಪೇಟೆಗೋ ಮೈಸೂರಿಗೋ ಹೋಗಿ ನೋಡಿಕೊಂಡು ಬರುತ್ತಾನೆ. ಅದೂ ವರ್ಷಕ್ಕೊಂದೋ ಎರಡೋ. ಅವನ ಪ್ರಕಾರ ಶಿವರಾಜ್ ಕುಮಾರ್ ಇನ್ನೂ ಮೂವತ್ತರ ಹರೆಯದಲ್ಲಿರುವ ನಟ. ಕಾಡಿನಲ್ಲಿ ಸ್ಟಾರುಗಳಿಗೆ ವಯಸ್ಸಾಗುವುದಿಲ್ಲ.
ಕಾಡಿನ ಬೇಟೆಯ ಕತೆಗಳನ್ನು ಬರೆದ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ಅವನಿಗೆ ಗೊತ್ತಿಲ್ಲ. ತೇಜಸ್ವಿಯೂ ಗೊತ್ತಿಲ್ಲ. ಅಂಥ ಯಾವುದೇ ಕತೆಗಳನ್ನು ಓದಿಲ್ಲ. ಆಗೀಗ ಬೆಂಗಳೂರು, ಮುಂಬಯಿ, ದೆಹಲಿಯಿಂದ, ಕಾಜೀರಂಗ ರಾಷ್ಟ್ರೀಯ ಉದ್ಯಾನದಿಂದ ಯಾರು ಯಾರೋ ಬರುತ್ತಾರೆ. ಇಷ್ಟಿಷ್ಟು ಉದ್ದದ ಕೆಮರಾ ತಂದು ಕಾಯುತ್ತಾ ಕೂರುತ್ತಾರೆ. ಜಿಂಕೆಗಳೆಂದರೆ ಅವರಿಗೆ ಆಸಕ್ತಿಯಿಲ್ಲ. ವಿ ವಾಂಟ್ ಕ್ಯಾಟ್ ಅನ್ನುತ್ತಾರೆ. ಹುಲಿ, ಚಿರತೆಗಳ ಫೋಟೋಗಳಿಗಾಗಿ ಕಾತರಿಸುತ್ತಾರೆ. ಹುಲಿ ಬೇಟೆಯಾಡುವ ಫೋಟೋ ಸಿಕ್ಕಿದರಂತೂ ಹಬ್ಬ. ಕೈ ತುಂಬ ಭಕ್ಷೀಸು ಕೊಡುತ್ತಾರೆ. ಒಮ್ಮೊಮ್ಮೆ ಮರಿ ಹಾಕಿದ ಚಿರತೆ, ಕರಡಿಗಳೂ ಸಿಗುವುದುಂಟು ಅಂತ ಮಳವಳ್ಳಿ ಭಾಷೆಯಲ್ಲಿ ಕತೆ ಹೇಳುತ್ತಾನೆ ಮಾದೇಶ.

ಬಂದೋರಿಗೆ ಹುಲಿ ಇರುವ ಜಾಗ ತೋರಿಸೋದು ಸುಲಭ. ಆದರೆ ತೋರಿಸಿದರೆ ಕಾಡಲ್ಲಿರೋ ಮಂದಿ ಬೈತಾರೆ ಅಂದ ಮಾದೇಶ.ಅವರನ್ನು ಕಾಡಿನೊಳಗೆ ಬಿಟ್ಟುಕೊಳ್ಳಲು ಆದಿವಾಸಿಗಳಿಗೆ ಭಯ. ಅವರು ಹುಲಿಗಳ ಫೋಟೋ ತೆಗೆಯುವ ಹೊತ್ತಿಗೇ, ಆದಿವಾಸಿಗಳ ಫೋಟೋ ಕೂಡ ತೆಗೀತಾರೆ. ನ್ಯಾಷನಲ್ ಪಾರ್ಕಿನೊಳಗೆ ಮನುಷ್ಯರಿಗೆ ಯಾಕೆ ಜಾಗ ಕೊಟ್ಟಿರಿ ಅಂತ ತರಲೆ ಮಾಡುತ್ತಾರೆ. ಪ್ರಾಣಿ ಪ್ರಿಯರು ಗಲಾಟೆ ಶುರು ಮಾಡುತ್ತಾರೆ. ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಶುರುವಾಗುತ್ತದೆ. ಇಲ್ಲಿ ಬರೀ ರಾಜಕೀಯ ಅಂತ ಮಾದೇಶ ಬೇಸರದಿಂದ ಮಾತಾಡಿದ. ಅವನಿಗೂ ರಾಜಕೀಯ ಏನೆಂದರೆ ಅರ್ಥವಾಗಿದೆ. ಈ ಸಮಾಜ ಸಾಕಾಗಿದೆ, ಕಾಡಿಗೆ ಹೋಗುತ್ತೇನೆ ಅಂತ ಹೇಳುವುದೂ ಕೂಡ ಕಷ್ಟವಾದ ಕಾಲ ಇದು. ಕಾಡು ಊರಿಗಿಂತ ಕಠಿಣ. ಅಲ್ಲಿರುವ ರಗಳೆಗಳೋ ಸಾವಿರಾರು.
ಬಂಡೀಪುರದ ಕಾಡನ್ನು ನಾವು ಸಾಕಷ್ಟು ಸುತ್ತಿದ್ದೆವು. ಅದೆಷ್ಟೇ ಸುತ್ತಿದರೂ ಕಾಡಿನ ಮೂಲ ಅರ್ಥವಾಗುವಂಥದ್ದಲ್ಲ. ಆ ಕಡೆ ತಮಿಳು ನಾಡು, ಈ ಕಡೆ ಕೇರಳ ಮತ್ತೊಂದು ಕಡೆ ಕರ್ನಾಟಕ-ಹೀಗೆ ಮೂರು ರಾಜ್ಯಗಳಲ್ಲಿ ಕೊನೆಗಾಣುವ ಕಾಡು. ಒಂದೊಂದು ರಾಜ್ಯದ ಅರಣ್ಯ ಇಲಾಖೆಗೂ ಅದರದ್ದೇ ಆದ ಗಡಿ. ಮೂರು ರಾಜ್ಯಗಳಲ್ಲಿ ಯಾವ ರಾಜ್ಯದ ಅಧಿಕಾರಿ ಭ್ರಷ್ಟನಾದರೂ ನಾಶವಾಗುವುದು ಕಾಡು. ತಮಿಳುನಾಡು ಕಡೆಯಿಂದ ಬಂದವನನ್ನು ಕರ್ನಾಟಕದ ಅಧಿಕಾರಿ ತಡೆಯುವಂತಿಲ್ಲ. ಅಲ್ಲಿಯ ಅಧಿಕಾರಿಗೆ ಈತ ಮಾಹಿತಿ ಕೂಡ ಕೊಡುವುದಿಲ್ಲ. ಆಳೋರು ತಣ್ಣಗೆ ಕುಂತಿರ್ತಾರೆ. ಇಲ್ಲಿ ಬಂದು ಯಾರ್ ಸಾಯ್ತಾರೆ ಹೇಳಿ. ಗಾರ್ಡುಗಳು ಒಂದು ಕೋಲು, ಒಂದು ಕೊಡಲಿ ಹಿಡ್ಕೊಂಡು ಕಾಡಿಗೆ ಹೋಗಬೇಕು. ಬೇಟೆಗೆ ಬರೋರ ಹತ್ರ ಡಬಲ್ ಬ್ಯಾರಲ್ ಗನ್ ಇರತ್ತೆ. ಗಾರ್ಡುಗಳನ್ನೂ ಉಡಾಯಿಸ್ತಾರೆ ಅಷ್ಟೇ ಅಂತ ಮಾದೇಶ ಮರುಗಿದ.
ಕಾಡೊಳಗೆ ಕಾಲಿಟ್ಟರೆ ಇದೂ ಕಾಡೇನಾ ಅನ್ನಿಸುವಂತಿತ್ತು. ಬಿಸಿಲಿಗೆ ಒಣಗಿ ನಿಂತ ಕಾಡು. ಒಂದು ಕಡ್ಡಿಗೀರಿ ಎಸೆದರೆ ಎಕರೆಗಟ್ಟಲೆ ಬೆಂಕಿ ಹಬ್ಬಲು ಐದು ನಿಮಿಷವೂ ಬೇಡ. ಆ ಸ್ಥಿತಿಯಲ್ಲೂ ಕಾಡಿರುತ್ತದಾ ಅಂತ ಆಶ್ಚರ್ಯವಾಗುವಂತೆ ಹಸಿರು ಮಾಯವಾಗಿತ್ತು. ಮಲೆನಾಡಿನ ಕಾಡುಗಳ ವರ್ಣನೆಯನ್ನು ಓದಿದವರು, ಲಂಟಾನ ಬೆಳೆದ, ಬೋಳುಮರಗಳ ಕಾಡನ್ನೊಮ್ಮೆ ನೋಡಬೇಕು. ಅದರೊಳಗೆ ದಿಕ್ಕು ತಪ್ಪಿದರೆ ವಾಪಸ್ಸು ಬರುವುದಕ್ಕಂತೂ ಸಾಧ್ಯವೇ ಇಲ್ಲ. ಕಾಡಿನಲ್ಲಿ ನೀರಿಲ್ಲ, ಮರಗಳಲ್ಲಿ ಹಣ್ಣುಗಳು ಬಿಡಿ, ಒಂದೆಲೆಯೂ ಇಲ್ಲ. ಹನಿ ನೆರಳೂ ಇಲ್ಲ. ಸುಡುತ್ತಿರುವ ಬಿಸಿಲು ಅರ್ಧಗಂಟೆಯಲ್ಲಿ ಮೈಯಲ್ಲಿರುವ ನೀರನ್ನೆಲ್ಲ ಹೀರಿಬಿಡುತ್ತದೆ.
ಇಲ್ಲಿಂದ ಮೂರು ಮೈಲಿ ದೂರದಲ್ಲಿ ಆಂಟಿ ಪೋಚಿಂಗ್ ಕ್ಯಾಂಪಿದೆ. ಆದರೂ ಹೇಗೋ ಕಾಡಿಗೆ ನುಗ್ಗುತ್ತಾರೆ. ನುಗ್ಗೋರೆಲ್ಲರೂ ಹೊರಗಿನವರೇ. ಆದರೆ ಕಾಡಿನೊಳಗಿರುವ ಮಂದೀನ ಅಪರಾಧಿಗಳ ಥರ ನೋಡ್ತಾರೆ. ಈ ಕಾಡನ್ನು ನಾಶ ಮಾಡಿದೋರು ಕಾಡಿನ ಒಳಗಿರೋ ಜನ ಅಲ್ಲ. ಎಕರೆಗಟ್ಟಲೆ ಕಾಫಿ ತೋಟ, ಬತ್ತದ ಗದ್ದೆ, ಅಡಕೆ ತೋಟ ಮಾಡಿಕೊಂಡಿರೋರು, ಕಾಡಿನ ಒಳಗಿರೋರು ಹೊಟ್ಟೆಪಾಡಿಗೆ ಒಂದು ಜಿಂಕೇನೋ ಕಾಡು ಹಂದೀನೋ ಹೊಡೀತಾರೆ. ಹಣ್ಣುಪಣ್ಣು ಕಿತ್ತು ತಿಂತಾರೆ. ಬೇಯಿಸಕ್ಕೆ ಕಟ್ಟಿಗೆ ಮುರ್ಕೋತಾರೆ. ಅವರೆಲ್ಲ ಸೇರಿದರೆ ಐದು ಸಾವಿರ ಜನ ಇಲ್ಲ. ಆದರೆ ಅವರನ್ನೇ ಸರ್ಕಾರ ಹೊರಗೆ ಹಾಕಬೇಕೂಂತಿದ್ದಾರೆ ಅಂತ ಮಾದೇಶ ಸಿಟ್ಟು ಮಾಡಿಕೊಂಡ.

ಕಾಡಿಗೆ ನಮ್ಮ ಜೊತೆ ಬಂದಿದ್ದ ಅಧಿಕಾರಿಯೊಬ್ಬರು ಎಲ್ಲ ವಿನಾಶಕ್ಕೂ ಕಾಡೊಳಗಿರುವ ಆದಿವಾಸಿಗಳೇ ಕಾರಣ ಅಂದರು. ಒಂದು ಮರದಲ್ಲಿ ಒಂದು ನೆಲ್ಲಿಕಾಯಿ ಬಿಡಲ್ಲಾರೀ. ಎಲ್ಲ ತಗೊಂಡು ಹೋಗಿ ಮಾರ್ತಾರೆ. ಕೋತಿಗಳಿಗೆ ತಿನ್ನೋದಕ್ಕೆ ಒಂದು ಹಣ್ಣು ಸಿಗಲ್ಲ. ಉರುಳು ಇಟ್ಟು ಹುಲಿ ಕೊಲ್ತಾರೆ. ಆನೆಗೆ ವಿಷ ಕೊಟ್ಟು ಸಾಯಿಸ್ತಾರೆ. ಇವರಿಗೆಲ್ಲ ಖದೀಮರ ಲಿಂಕ್ ಇದೆ. ನೋಡಕ್ಕೆ ಹೀಗಿದ್ದಾರೆ ಅಂದ್ಕೋಬೇಡಿ. ಒಬ್ಬೊಬ್ಬರ ಮನೇಲೂ ಟೀವಿ ಮೊಬೈಲು ಇದೆ. ಡಿಶ್ ಹಾಕಿಸ್ಕೊಂಡಿದ್ದಾರೆ. ಕಾಡನ್ನು ಮುಗಿಸ್ತಿರೋದೇ ಇವರು. ಇವರನ್ನೆಲ್ಲ ಹೊರಗೆ ಹಾಕಿದರೇನೇ ಕಾಡು ಉದ್ಧಾರ ಆಗೋದು ಅಂತ ಅಂಕಿಅಂಶಗಳ ಸಮೇತ ವಿವರಿಸಿದರು.
ಮಾದೇಶ ಹೇಳಿದ ಕಾಫಿ ತೋಟ, ಗದ್ದೆಯ ಕತೆಯ ಬಗ್ಗೆ ಕೇಳಿದರೆ, ಅದು ಹಳೇಕಾಲದಲ್ಲಿ ಆಗಿಹೋಗಿರೋದು. ನಾವು ಮುಂದಾಗೋ ಅನಾಹುತಗಳನ್ನು ತಡೀಬೇಕಲ್ವೇ. ಯಾವುದೋ ಕಾಲದಲ್ಲಿ ಕಾಡು ಹಾಳು ಮಾಡಿದ್ದಾರೆ, ಈಗಲೂ ಮಾಡ್ಲಿ ಅಂತ ಸುಮ್ನಿರಕ್ಕಾಗತ್ತಾ ಅಂತ ರೇಗಿದರು.
ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಆದಿವಾಸಿಗಳ ಪರವಾಗಿ ಕೆಲಸಮಾಡುತ್ತಿರುವ ಸಮಾಜ ಸೇವಕರೊಬ್ಬರು ಎದುರಾದರು. ಆದಿವಾಸಿಗಳೂ ಅಷ್ಟೇ, ಆಸುಪಾಸಿನ ಊರಿನ ಮಂದಿಯೂ ಅಷ್ಟೇ. ಸುಖವಾಗಿದ್ದಾರೆ. ನಿಮ್ಮ ಸಿಟಿಯೋರಿಗಿಂತ ಆರಾಮಾಗಿದ್ದಾರೆ. ಇಲ್ಲೇನಿದೆ ಖರ್ಚು ಹೇಳಿ. ಪ್ರತಿಯೊಬ್ಬನಿಗೂ ಕನಿಷ್ಟ ಎರಡೆಕರೆ ಹೊಲ ಇದೆ. ಮೆಣಸು, ಕ್ಯಾರೆಟ್ ಬೆಳೀತಾರೆ. ಅದಕ್ಕೂ ಸರ್ಕಾರ ಸಾಲ ಕೊಡುತ್ತೆ. ಅವರು ರೈತರಾಗಿರೋದರಿಂದ ಅವರ ಮನೆಗೆ ಕರೆಂಟು ಫ್ರೀ, ನೀರು ಫ್ರೀ, ಮಕ್ಕಳಿಗೆ ಶಿಕ್ಷಣ ಫ್ರೀ, ಊಟ ಫ್ರೀ, ಆಸ್ಪತ್ರೆ ಫ್ರೀ. ಖರ್ಚೇ ಇಲ್ಲ. ಒಬ್ಬೊಬ್ಬರು ಎರಡೆರಡು ಮನೆ ಮಾಡ್ಕೊಂಡು ಸುಖವಾಗಿದ್ದಾರೆ. ಎರಡೆರಡು ಮನೆ ಅಂದ್ರೆ ಅರ್ಥ ಆಯ್ತಲ್ಲ. ಇಬ್ಬಿಬ್ಬರು ಹೆಂಡ್ತೀರು ಎಂದು ಅರ್ಥಗರ್ಭಿತವಾಗಿ ನಕ್ಕರು. ಇವರು ದುಡ್ಡು ಕೊಡಬೇಕಾಗಿರೋದು ಒಂದಕ್ಕೇನೇ.. ಹೆಂಡಕ್ಕೆ. ಅದೂ ಇನ್ನೇನು ಚುನಾವಣೆ ಮುಗಿಯೋ ತನಕ ಅದೂ ಫ್ರೀ ಅಂದರು.
ಬಂಡೀಪುರದಲ್ಲೇ ಒಂದು ಪುಟ್ಟ ಕೊಟ್ಟಿಗೆ. ಅದರಲ್ಲೊಂದು ಆರೇಳು ತಿಂಗಳ ಆನೆ ಮಗು. ಅದಕ್ಕೆ ಬಾಟಲಿಯಲ್ಲಿ ಹಾಲು ಕುಡಿಸುತ್ತಾ ಕೂತಿದ್ದ ಗಾರ್ಡ್ ಹೇಳಿದ. ಇವೆರಡೂ ಕಾಡಲ್ಲಿ ಸಿಕ್ಕವು. ಇವುಗಳ ಅಮ್ಮ ಎಲ್ಲಿದ್ಯೋ ಗೊತ್ತಿಲ್ಲ. ಯಾರೋ ಹೊಡೆದು ಹಾಕಿರಬೇಕು. ಮರಿಗಳಿಗೆ ಹಾಲು ಕುಡಿಸೇ ಬೆಳೆಸಬೇಕು. ಹಾಲು ಕೊಡೋದಕ್ಕೆ ಅಂತ ಒಂದಷ್ಟು ಜನ ಇದ್ದಾರೆ. ಹಾಲಿನ ಪುಡಿ ಕಳಿಸ್ತಾರೆ. ಕುಡಿಸ್ತೀವಿ ಅಂತ ಮರಿಗಳನ್ನು ತೋರಿಸಿದ.
ಕಾಡು ಜಟಿಲ ಮತ್ತು ಕುಟಿಲ. ಹಾಗೆ ಮಾಡಿದ್ದು ಆದಿವಾಸಿಗಳೋ ಅಧಿಕಾರಿಗಳೋ ಅನ್ನೋದು ಮಾತ್ರ ಕೊನೆಗೂ ತಿಳಿಯಲಿಲ್ಲ.





ಇಲ್ಲಿ ನೀವು ಹೇಳಿರುವ ಮಾತುಗಳು ಬಹುಪಾಲು ಕರ್ನಾಟಕದ ಹಳ್ಳಿಗಳಿಗೆ ಅನ್ವಯವಾಗುತ್ತೆ. ಬೇರೆ ಹಳ್ಳಿಗಳ ಮಾತು ಇರಲಿ ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ಹಳ್ಳಿಯ ಮಾತೇ ತೆಗೆದುಕೊಂಡರೆ ಇವರು ಆರಾಮಾಗಿದ್ದಾರೆ ಅಂತ ನನಗೆ ಅದೆಷ್ಟೋ ಸಲ ಅನ್ನಿಸುತ್ತೆ. ದುಡಿಮೆ ಗಿಡಿಮೆ ಮಾತಿಲ್ಲ, ೩೦ ಕೇಜಿ ಅಕ್ಕಿ ಐತೆ ಬೇಕಾರೆ ತಕಳ್ಳಕ್ಕ , ಕೇಜಿಗೆ ಐದುರ್ಪಾಯಿ ಮೇಲಾಕಿ ಕೊಡು ಸಾಕು ಅಂತಾರೆ, ಗೋಧಿ ನಾವು ತಿಂಬಲ್ಲ ನೀನು ಅಂಗಡ್ಯಾಗೆ ೨೫ ೩೦ ಕೊಟ್ಟ್ ತಗಂತೀಯಾ ಇಲ್ಲಿ ಹದಿನೈದು ಕೊಡು ಸಾಕು , ಮಾಡಿದ ಗೋದುವೆ ೪೦ ಕೇಜಿ ಐತೆ ಬೇಕಾ ನಿಂಗ್ ಬೇಡದಿದ್ರೆ ಮೀನಾಫಿಸಿನೋರ್ಗೆ ಬೇಕಂತೆ ಕೊಡ್ತೀನೇಳು ಅಂತ ಬಸ್ಸಿನ ಹತ್ರಕ್ಕೆ ಮೂಟೆ ತಂದಿಟ್ಟು ದಬಾಯಿಸ್ತಾನೆ ನಮ್ಮ ಕೋಡಪ್ಪ. ಅದೇ ಮನೆತುಪ್ಪ ಇದ್ರೆ ಕೊಡು ಅಂದ್ರೆ ಅಯ್ಯೊ ಕರಾವೆಲ್ಲ ಡೈರಿಗೇ ಹೋಯ್ತದೆ ಡೈರೀ ತುಪ್ಪಾನೇ ನಾವೂ ಉಗಾದಿಗೆ ತಂದಿದ್ ಅಂತಾನೆ. ನನಗೆ ನಾನೆ ತಪ್ಪಾಗಿ ಯೋಚಿಸ್ತಿದ್ದೇನೋ ಅಥವಾ ನಿಜವಾಗಿ ಇವರೂ ಇನ್ನೊಂಥರ ಭ್ರಷ್ಟರಾಗಿಬಿಟ್ಟರ ಅಂಥ ಗೊಂದಲವಾಗ್ತದೆ. ಸತ್ಯ ಅನ್ನೋದು ಯಾವುದು ?
ಗುಂಡ್ಯ ಪ್ರಾಜೆಕ್ಟ್ ಎಂಬ ಗುಮ್ಮದಿಂದಾಗಿ ನಾವು ಸೇರಿದಂತೆ ಎಲ್ಲರೂ ತೋಟ ಮಾಡುವುದನ್ನು ಬಿಟ್ಟಿದ್ದೇವೆ.ಇನ್ನೇನು ತೋಟ ಇಲ್ಲಾ ಅಂತ ನಗರಕ್ಕೆ ಹೊಂದಿಕೊಳ್ಳಲು ಹೋದ ಹುಡುಗರು ಹೆತ್ತೂರು,ಕೂಡುರಸ್ತೆ,ಸಕಲೇಶಪುರ…ಹೀಗೆ ಒಡಾಡಿಕೊಂಡಿದ್ದಾರೆ.ತೋಟವಿಲ್ಲ,ಮಾಡಲು ಕೆಲಸವಿಲ್ಲ..ಒಳ್ಳೆ ಬಟ್ಟೆ…ಬಟ್ಟಿ ಬಿಟ್ಟು ಎಮ್.ಸಿ ರಂ ಕುಡಿಯುವ ಅವರನ್ನು ಹತ್ತಿರದಿಂದ ನೋಡಿದರೆ ಸೌದೆ ವ್ಯಾಪಾರ,ಟಿಂಬರ್ ಹೀಗೆ ಕಾಡಿನ ನಾಶಕ್ಕೆ ನಿಂತಿರುವುದು ಗೊತ್ತಾಗುತ್ತದೆ..ಮೊದಲು ನೀಟಾಗಿ ತೋಟ ಮಾಡಿಕೊಂಡಿದ್ದವರನ್ನು ಕಳ್ಳರನ್ನಾಗಿ ಮಾಡಿದವರು ಯಾರು…ಅಷ್ಟಕ್ಕೂ ಅಧಿಕಾರಿ ಹೇಳುವಂತೆ ಆದಿವಾಸಿಗಳು ಮುಗ್ದರಾಗಿಯೇ ಇರಬೇಕೆ..?
ಪ್ರಾಜೆಕ್ಟಗಳು ಸೃಷ್ಟಿಸುವುದು ಲಾಭ-ನಷ್ಟ ಬೆರೆತ ಹೊಸಲೋಕವನ್ನು.
ಸಮಸ್ಯೆಯಿರುವುದು ಸರಿಯಾದ ಪುನರ್ವಸತಿಯ ಇಚ್ಛಾಶಕ್ತಿಯಿಲ್ಲ ಎಂಬಲ್ಲಿ.
ಪ್ರಜೆಗಳೂ,ಪ್ರಭುಗಳೂ ಸ್ಫರ್ಧೆಗೆ ಬಿದ್ದವರಂತೆ ಭ್ರಷ್ಟರಾಗುತ್ತಿರುವಾಗ
ಯಾವ ಪ್ರಾಜೆಕ್ಟು ಯಾರನ್ನು ಉದ್ಧಾರ ಮಾಡಲಾರದು.
ಬರವಣಿಗೆ ಎಂದಿನಂತೆ ಚೆನ್ನಾಗಿದೆ.