ಜಿ ಎನ್ ನಾಗರಾಜ್ ಅಂಕಣ- ಕನಸೇ ದೈವಗಳ ಹುಟ್ಟಿನ ಮೂಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

31

ಎಲ್ಲ ಮನುಷ್ಯರೂ ಕನಸು ಕಾಣುತ್ತೇವೆ. ಕನಸು ಕಾಣದಿರುವವರು ಇಲ್ಲ. ಎಲ್ಲರೂ ನಿದ್ರೆ ಮಾಡಿದಾಗೆಲ್ಲ ಕನಸು ಕಾಣುತ್ತಾರೆ. ಒಂದಲ್ಲ ಹಲವು. ಕನಸು ನೆನಪಿಲ್ಲದಿರುವವರು ಮಾತ್ರ ಇರಬಹುದು.‌ ಅವರು ನಮಗೆ ಕನಸು ಬೀಳುವುದಿಲ್ಲ ಎಂದು ಹೇಳಬಹುದು.

ಕನಸುಗಳು ಮಾನವರನ್ನು ಬಹಳ ಕಾಡಿದೆ, ಪ್ರಭಾವಿಸಿದೆ. ವೈಜ್ಞಾನಿಕ ಯುಗದಲ್ಲಿ ಕನಸುಗಳ ಬಗೆಗೆ ಹಲವು ಅಧ್ಯಯನಗಳಾದವು. ಇನ್ನೂ ಆಗುತ್ತಿವೆ. ಫ್ರಾಯ್ಡ್ ಎಂಬ ಮನಶ್ಶಾಸ್ತ್ರಜ್ಞರ ಅಧ್ಯಯನ ಮತ್ತು ಅವರು ರೂಪಿಸಿದ ಸಿದ್ಧಾಂತಗಳು ಮನಶ್ಶಾಸ್ತ್ರದ ಮೇಲೆ ಮಾತ್ರ ಅಲ್ಲ ವಿಶ್ವದ ಚಿಂತನೆಯ ಮೇಲೆ ಬಹಳ ಪ್ರಭಾವ ಬೀರಿದೆ. ಸಾಹಿತ್ಯ, ಕಲೆಗಳಲ್ಲಿ ಅವರ ಸಿದ್ಧಾಂತಗಳು ಹೊಸ ರೂಪ, ಹೊಸ ಅಲೆಗಳಿಗೆ ಕಾರಣವಾಗಿದೆ.

ಯುಂಗ್ ಮೊದಲಾದ ಹಲವು ಮನಶ್ಶಾಸ್ತ್ರಜ್ಞರು ಕೂಡಾ ತಮ್ಮ ಸಿದ್ಧಾಂತಗಳನ್ನು ರೂಪಿಸಿದ್ದಾರೆ. ಇತ್ತೀಚೆಗೆ ಮನಶ್ಶಾಸ್ತ್ರ, ನರವ್ಯೂಹ ಶಾಸ್ತ್ರ, ಮೆದುಳಿನ ಸಂಶೋಧನೆ, ಮಾನವ ಶಾಸ್ತ್ರ ಮೊದಲಾದವು ಹಲವು‌ ಆಯಾಮಗಳಿಂದ ಕನಸುಗಳನ್ನು ಅಧ್ಯಯನ ಮಾಡುತ್ತಿವೆ.‌

ಕನಸು ಕಾಣುವುದು ಮನುಷ್ಯರ ವಿಕಾಸದಲ್ಲಿ ಪಡೆದುಕೊಂಡ ಒಂದು ವಿಶಿಷ್ಟ ಗುಣ. ಸಸ್ತನಿಗಳೆಲ್ಲವೂ ಕನಸು ಕಾಣುತ್ತವೆ ಎಂಬುದನ್ನು ಸಾಕು ಬೆಕ್ಕು, ನಾಯಿಗಳ ನೇರ ಪರಿವೀಕ್ಷಣೆ ಮತ್ತು ಉಪಕರಣಗಳ ಮೂಲಕ ಸಸ್ತನಿಗಳ ಮೆದುಳಿನ ಕ್ರಿಯೆಗಳನ್ನು ವೀಕ್ಷಿಸುವ ಮೂಲಕ ಕಂಡುಕೊಂಡಿದ್ದಾರೆ.

ನಮ್ಮ ನಿದ್ದೆಯಲ್ಲಿ ಎರಡು ಭಾಗಗಳಿವೆ. ಒಂದು ರೆಪ್ಪೆ ಮುಚ್ಚಿದಂತೆಯೇ ಕಣ್ಣಿನ ಗುಡ್ಡೆ ವೇಗವಾಗಿ ಚಲಿಸುವ ಭಾಗ (REM). ಮತ್ತೊಂದು ಈ ರೀತಿಯ ಚಲನೆ ಇಲ್ಲದ ಭಾಗ (NREM). ಈ ರೀತಿಯ ಎರಡೂ ಭಾಗಗಳು ಇರುವ ನಿದ್ರೆಗೆ ಒಂದು ನಿದ್ರಾ ಚಕ್ರ ಎಂದು ಕರೆಯುತ್ತಾರೆ. ಇಂತಹ ನಿದ್ದೆಯ ಚಕ್ರಗಳು 90-110 ನಿಮಿಷಗಳು ಇರುತ್ತವಂತೆ. ಒಂದು ರಾತ್ರಿಯ ನಿದ್ದೆಯಲ್ಲಿ ಇಂತಹ ಮೂರು ಅಥವಾ ನಾಲ್ಕು ನಿದ್ರಾ ಚಕ್ರವನ್ನು ಮನುಷ್ಯರು ಅನುಭವಿಸುತ್ತಾರೆ. ಒಂದು ನಿದ್ರಾ ಚಕ್ರದಲ್ಲಿ ಕಣ್ಣ ಚಲನೆಯಿಲ್ಲದ ಭಾಗ 80 ನಿಮಿಷಗಳವರೆಗೆ ಇರಬಹುದು. ಕಣ್ಣ ಚಲನೆಯ ಭಾಗ ನಿದ್ದೆಯ ಆರಂಭದಲ್ಲಿ ಬಹಳ ಕಡಿಮೆ ಇದ್ದು ನಿದ್ದೆಯ ಕೊನೆಯ ಮೂರನೇ ಒಂದು ಭಾಗ ಬೆಳಗು ಹತ್ತಿರ ಇರುವಾಗ ಈ ಅವಧಿ ದೀರ್ಘವಾಗಿರುತ್ತದೆ.

ಸಾಮಾನ್ಯವಾಗಿ ಒಂದು ರಾತ್ರಿಯ ನಿದ್ದೆಯಲ್ಲಿ ಕಣ್ಣ ಚಲನೆಯ ಭಾಗ ಶೇ. 22 ರಷ್ಟು ಇರುತ್ತದಂತೆ. ಕಣ್ಣ ಚಲನೆಯ REM ಭಾಗದಲ್ಲಿ ದೇಹ ಚಲನೆಯಿಲ್ಲದೆ ನಿಶ್ಚೇಷ್ಟಿತವಾದಂತೆ ಇರುತ್ತದೆ. ವೇಗವಾದ ಹೃದಯದ ಬಡಿತ, ವೇಗವಾದ ಉಸಿರಾಟ, ಏರಿದ ರಕ್ತದೊತ್ತಡ ಇರುತ್ತದೆ. ಮೆದುಳಿನ ಕೆಲವು ಭಾಗಗಳಲ್ಲಿ ವೇಗದ ವಿದ್ಯುತ್ ಚಲನೆಯನ್ನು ಇಇಜಿ ಮೊದಲಾದ ಉಪಕರಣಗಳ ಮೂಲಕ ಕಾಣಬರುತ್ತದೆ.

ಇದೇನಿದು ದೈವಗಳ ಹುಟ್ಟಿನ ಬಗ್ಗೆ ವಿವರಿಸ ಹೊರಟು ನಿದ್ರೆಯ ವಿಜ್ಞಾನದ ವಿವರಣೆ ಮಾಡುತ್ತಿದ್ದಾರೆ ಎನ್ನಿಸಿರಬಹುದು. ಆದರೆ ನಮ್ಮ ನಿದ್ರೆಯ ಸ್ವರೂಪ ತಿಳಿದರೆ ಮಾತ್ರ ಕನಸುಗಳ ಸ್ವರೂಪ ತಿಳಿಯುವುದು ಮತ್ತು ಕನಸುಗಳಿಗೂ ದೈವಗಳ ಹುಟ್ಟಿಗೂ ಇರುವ ಸಂಬಂಧ ಸ್ಪಷ್ಟವಾಗುವುದು.
ನಿದ್ರೆಯ ಈ ಎರಡು ಭಾಗಗಳಲ್ಲಿಯೂ ಕನಸು ಬೀಳುತ್ತವೆ. ಆದರೆ ಅವುಗಳ ಹೂರಣ ಬೇರೆ. ಕಣ್ಣ ಚಲನೆಯಿಲ್ಲದ NREM ಭಾಗದಲ್ಲಿ ಸರಳವಾದ ಕನಸುಗಳು, ಅಂದಿನ, ಇತ್ತೀಚಿನ ಕೆಲ ದಿನಗಳ ಅನುಭವವ ಮರುಕಳಿಸಿದಂತೆ ಕಾಣುತ್ತದೆ. ನಮ್ಮ ಪ್ರಜ್ಞೆಯ ಪಾತ್ರ ಹೆಚ್ಚು ಕಾಣುತ್ತದೆ. ಅರ್ಥ ಮಾಡಿಕೊಳ್ಳಲಾಗದ ವಿಚಿತ್ರವಾದ ದೃಶ್ಯಗಳು ಇರುವುದಿಲ್ಲ. ತೀವ್ರ ಭಾವನೆಗಳೂ ಅಭಿವ್ಯಕ್ತಗೊಳ್ಳುವುದಿಲ್ಲ. ಆದರೆ ಕಣ್ಣ ಚಲನೆಯ REM ಭಾಗದಲ್ಲಿ ಬಹಳ ಕಾಂಪ್ಲೆಕ್ಸ್ ಆದ, ಒಂದರ ಮೇಲೊಂದು ಕಲಸು ಮೇಲೋಗರದಂತೆ ಕಾಣುವ ಗೊಂದಲಕಾರಿಯಾದ, ಚಿತ್ರ ವಿಚಿತ್ರವಾದ, ಭಾವನೆಗಳ ತೀವ್ರತೆಯಿಂದ ಕೂಡಿದ ಕನಸುಗಳಿರುತ್ತವೆ.

ಜೀವ ವಿಕಾಸದ ಹಾದಿಯಲ್ಲಿ ಈ ಕನಸುಗಳ ಪಾತ್ರವೇನು. ಸಸ್ತನಿ ಪ್ರಾಣಿಗಳು ಹಾಗೂ ಪಕ್ಷಿಗಳ ಬದುಕಿಗೆ ಇವುಗಳ ಅಗತ್ಯವೇನು ಎಂಬ ಬಗ್ಗೆ ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ಮಾನವರಿಗೆ ಬೀಳುವ ಕನಸುಗಳು ಎರಡು ರೀತಿಯವು ಎಂದು ಮನಶ್ಶಾಸ್ತ್ರಜ್ಞರು, ನರ ಶಾಸ್ತ್ರಜ್ಞರು ಸಂಶೋಧಿಸಿದ್ದಾರೆ. ಒಂದು, ಹಿಂದಾದುದನ್ನು ನೆನಪಿಗೆ ತಂದುಕೊಳ್ಳುತ್ತಾ ಅವುಗಳನ್ನು ಬೇರೆ ರೀತಿಯಲ್ಲೂ ಮಾಡಬಹುದಿತ್ತಲ್ಲಾ ಎಂಬ ಪರ್ಯಾಯಗಳನ್ನು ಚಿಂತಿಸುವಂತಹವು.

ಮತ್ತೊಂದು, ಈಗ‌ ಸಂಭವಿಸುತ್ತಿರುವ ಘಟನೆಗಳಲ್ಲಿ ಮುಂದೆ ಸಾಗಬಹುದಾದ ಬೆಳವಣಿಗೆಗಳು. ಎರಡನೆಯದು ಎಷ್ಟೋ ಬಾರಿ ಹೊಸ ಹೊಳಹುಗಳನ್ನು, ಒಳನೋಟಗಳನ್ನು ನೀಡುತ್ತವೆ. ಸಾಹಿತಿಗಳ ವಿಜ್ಞಾನಿಗಳ ವಿಷಯದಲ್ಲಿ ಸಾಕಷ್ಟು ದಾಖಲಾಗಿವೆ. ಮನಸ್ಸಿನಲ್ಲಿ ಕಾಡುತ್ತಿದ್ದ ವಿಷಯದ ಬಗ್ಗೆ ಕನಸಿನಲ್ಲಿ ಕವನದ ಸಾಲುಗಳು ಮೂಡುವುದು, ಅವರು ತಕ್ಷಣವೇ ಎದ್ದು ಅವುಗಳನ್ನು ಬರೆದಿಡುವುದು, ಕತೆ, ಕಾದಂಬರಿ, ನಾಟಕಗಳ ಮುಂದಿನ ಭಾಗ ಹೊಳೆಯುವುದು ಇತ್ಯಾದಿ. ವಿಜ್ಞಾನಿಗಳಿಗೂ ಹಲವು‌ ಕಾಲ ಪರಿಹಾರ ಸಿಗದೆ ಕಾಡಿದ ಸಮಸ್ಯೆಗಳಿಗೆ ಕನಸಿನಲ್ಲಿ ಪರಿಹಾರ ಹೊಳೆದಿದೆ. ಶೇಕ್ಸ್‌ಪಿಯರ್ ಕವಿಯ ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಅವನ ತಂದೆ ತನ್ನ ಕೊಲೆಗಾರನ‌ ಬಗ್ಗೆ ನೀಡುವ ಸೂಚನೆ ಅಂತಹುದು. ಸಾಹಿತಿಗಳಂತೂ ಕನಸುಗಳನ್ನು ತಮ್ಮ ಸಾಹಿತ್ಯದ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಹಲವು ರೀತಿಯಲ್ಲಿ ದುಡಿಸಿಕೊಂಡಿದ್ದಾರೆ.

ಕನಸುಗಳಲ್ಲಿ ಕಂಡ ಸತ್ತವರು:

ನಮಗೆಲ್ಲರಿಗೂ ಗೊತ್ತಿರುವಂತೆ ನಮಗೆ ಹತ್ತಿರದವರು ಮಿತ್ರರು, ಬಂಧುಗಳು, ಹಿರಿಯರು ಅಗಾಗ್ಗೆ ಕನಸುಗಳಲ್ಲಿ ಕಾಣುತ್ತಿರುತ್ತಾರೆ. ನಮ್ಮೊಡನೆ ಮಾತನಾಡುತ್ತಿರುತ್ತಾರೆ, ವ್ಯವಹರಿಸುತ್ತಿರುತ್ತಾರೆ. ನಮ್ಮ ನಿತ್ಯ ಜೀವನದ ಹಲವು ದೃಶ್ಯಗಳು ಕಾಣುತ್ತಿರುತ್ತವೆ. ನಾವೂ ಅವುಗಳಲ್ಲಿ ಪಾತ್ರಧಾರಿಗಳಾಗಿರುತ್ತೇವೆ.

ಆದರೆ ಮಾನವರ ವಿಕಾಸ ,ಉಗಮ ಕಾಲದಿಂದಲೂ ಬಹಳ ಕುತೂಹಲ, ಸಂತೋಷ, ಭಯಗಳಿಗೆ ಕಾರಣವಾಗಿರುವುದು ಅವುಗಳಲ್ಲಿ ಸತ್ತವರು ಕಾಣಿಸಿಕೊಳ್ಳುವುದು.‌ ಅವರ ಸಾವು ಯಾರನ್ನೆಲ್ಲ ತೀವ್ರವಾಗಿ ಕಾಡಿದೆಯೋ ಅವರ ಕನಸುಗಳಲ್ಲಿ ಮಾತ್ರವಲ್ಲ ಅವರೊಡನಾಡಿದ ಹಲವರ ಕನಸುಗಳಲ್ಲಿ ಕಾಣುವುದು. ಕಾಣುವುದು ಮಾತ್ರವಲ್ಲ ಮಾತನಾಡುವುದು, ಸಲಹೆಗಳನ್ನು ಕೊಡುವುದು, ಸಂತೈಸುವುದು, ಟೀಕಿಸುವುದು, ತಮಗೆ‌ ಒಲ್ಲದವರ ಬಗ್ಗೆ ಅಸಂತೋಷ ವ್ಯಕ್ತಪಡಿಸುವುದು, ಸತ್ತವರಿಗೆ ಯಾವುದೆಲ್ಲ ಪ್ರಿಯವಾಗಿತ್ತೋ ಅವುಗಳ ಜೊತೆಗೆ ವ್ಯವಹರಿಸುವುದು ಇತ್ಯಾದಿಗಳು ಕಾಣುತ್ತವೆ.

ಇಂತಹ ಸರಳ ಕನಸುಗಳು ಮಾತ್ರ ಅಲ್ಲದೆ REM ನಿದ್ದೆಯ ಹಂತದಲ್ಲಿ ಮೇಲೆ ಹೇಳಿದಂತೆ ಹೀಗೆ ಸತ್ತವರ ನೆನಪುಗಳು ಹಿಂದಿನ ಹಲವು ಸಂಗತಿಗಳ ನೆನಪುಗಳೊಂದಿಗೆ ಜೋಡಿಸಿಕೊಳ್ಳುತ್ತವೆ. ಮುಂದಿನ ಘಟನೆಗಳ ಹೊಳಹುಗಳನ್ನು ನೀಡುತ್ತವೆ.

ನಮಗೇ ಗೊತ್ತಿಲ್ಲದಂತೆ ಆ ಘಟನೆಗಳಿಗೆ ಮನಸ್ಸು, ದೇಹ ಸಿದ್ಧವಾಗುವಂತೆ ಅನುವುಗೊಳಿಸಿ ಸಹಾಯ ಮಾಡುತ್ತವೆ. ಹಲವು ಭಾರಿ ಭಯ ಹುಟ್ಟಿಸುತ್ತವೆ.

ಅಂತಹ ಕನಸು ಕಂಡವರಿಗೆ ಈಗಲೂ ಗಾಬರಿಯಾಗುತ್ತದೆ ಎನ್ನುವಾಗ ಮನುಷ್ಯರ ಆದಿಮ ಸ್ಥಿತಿಯಲ್ಲಿ ಅವರಿಗೆ ಉಂಟಾದ ಅಚ್ಚರಿ, ಗಾಬರಿ, ಸಂತೋಷ, ದುಃಖಗಳನ್ನು ಊಹಿಸಿಕೊಳ್ಳಬಹುದು. ಸಹಜವಾಗಿಯೇ ಈ ಅಂಶವನ್ನು ಅರ್ಥ‌ಮಾಡಿಕೊಳ್ಳವುದು ಬಹಳ ಕಷ್ಟವಾಗಿರುತ್ತದೆ.
ಈ ಕನಸುಗಳಿಂದ ಅವರು ತಮ್ಮ ಮುಗ್ಧತೆಯಲ್ಲಿ ಅರ್ಥ ಮಾಡಿಕೊಂಡ ರೀತಿ ಎಂದರೆ ಇಲ್ಲವಾದವರು ಇನ್ನೂ ಬದುಕಿದ್ದಾರೆ. ಅವರ ದೇಹ ಇಲ್ಲ. ನಿಜ‌ ಜೀವನದಲ್ಲಿ ಅವರು ಕಾಣುವುದಿಲ್ಲ.‌ ಆದರೆ ಇದ್ದಾರೆ. ಬೇರೆ ಯಾವುದೋ ರೂಪದಲ್ಲಿ ಎಲ್ಲೋ ಇದ್ದಾರೆ. ಅವರು ಈಗ ದೇಹ ರೂಪದಲ್ಲಿ ಇಲ್ಲದೆ ಇರುವುದರಿಂದ ನಮ್ಮ ದೈಹಿಕ ಮಿತಿಗಳನ್ನು ಮೀರಿ ಎಲ್ಲೆಲ್ಲಿಯೋ ಚಲಿಸಿ ನಮ್ಮ ಕನಸುಗಳಲ್ಲಿ ಕಾಣುತ್ತಾರೆ. ಕನಸಿನಲ್ಲಿ ಸಿಗುವ ಎಲ್ಲ ಸೂಚನೆಗಳೂ ನೇರವಾಗಿ ಇವರಿಂದ ಬಾರದಿದ್ದರೂ ಇವರೇ ನೀಡಿರಬಹುದು. ಅವುಗಳು ತಮ್ಮ ಬದುಕಿಗೆ ಸಹಾಯವಾಗಿವೆ. ಈಗ ಅವರಿಗೆ ನಿಜ ಜೀವನದಲ್ಲಿ ಇದ್ದುದಕ್ಕಿಂತ ಹೆಚ್ಚು ಸಾಮರ್ಥ್ಯಗಳಿವೆ. ಅವರು ನಮ್ಮನ್ನು ಕಾಪಾಡುತ್ತಾರೆ. ತೊಂದರೆ ಕೊಡಲೂ ಬಹುದು ಎಂಬ ಭಾವನೆಗಳು ಮೊಳೆತವು.

ಈ ಭಾವನೆ ಅಂದಿನ ಜನರಲ್ಲಿ ಸತ್ತವರನ್ನು ನೆನಪಿಸಿಕೊಳ್ಳುವ ಅದಕ್ಕಾಗಿ ಅಂದಿನ ಅಲೆಮಾರಿ ಬದುಕಿನಲ್ಲಿ ಎಲ್ಲೋ ಒಂದು ಕಡೆ ಹೆಣವನ್ನು ಬಿಟ್ಟು ಬರುವ ರೂಢಿಗೆ ಬದಲಾಗಿ ಅದನ್ನು ಒಂದೆಡೆ ಹೂಳುವ ಪದ್ಧತಿ ಜಾರಿಗೆ ಬಂದಿತು. ಹಾಗೆ ಹೂತ ಸ್ಥಳವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಒಂದು ಗುರುತು ಮಾಡಿದರು. ಅದು ಇಂದೂ ರೂಢಿಯಲ್ಲಿರುವಂತೆ ಆ ಸ್ಥಳದಲ್ಲೊಂದು ಕಲ್ಲು ಅಥವಾ ತಮ್ಮ ಕುಲ ಗುರುತಿನ ಮರದ ಟೊಂಗೆ ನೆಡುವುದೂ ಇರಬಹುದು.

ನಂತರ ಸತ್ತ ತಮ್ಮ ಪ್ರೀತಿ ಪಾತ್ರರು ಇನ್ನೂ ಬೇರೆ ರೂಪದಲ್ಲಿ ಜೀವಂತವಿದ್ದಾರಲ್ಲಾ ಅವರು ಬಾಯಾರಿ ಬಳಲಿ ಹಸಿದು ಸಂಕಟಪಡುತ್ತಾರಲ್ಲಾ ಅವರಿಗೆ ಊಟ ಹೇಗೆ, ನೀರೆಲ್ಲಿ ಎಂದೆಲ್ಲ ಯೋಚನೆ ಹುಟ್ಟಿತು ಆ ಸಮುದಾಯಗಳಿಗೆ. ಅಷ್ಟೇ ಅಲ್ಲ ಅವರು ನಮ್ಮನ್ನು ಜೀವಂತ ಇರುವಾಗಲೇ ಬಯ್ಯುತ್ತಿದ್ದಂತೆ ಬೈದರೆ, ಶಿಕ್ಷಿಸಿದರೆ ಎಂಬ ಭಯವೂ ಕೂಡಾ. ಆದ್ದರಿಂದ ಮಣ್ಣಿಗೆ ಸೇರಿಸುವಾಗಲೇ ಸಮಾಧಿಯ ಸುತ್ತ ಮಡಕೆಯಲ್ಲಿ ನೀರು ಹೊತ್ತು ಅದಕ್ಕೆ ತೂತುಗಳನ್ನು ಮಾಡುತ್ತಾ ಸಮಾಧಿ‌ ಸ್ಥಳದ ಸುತ್ತ ಮೂರು ಸುತ್ತುವುದು, ಅನ್ನದ ಕೂಳು ಇಡುವುದು ,‌ಸತ್ತ ಜಾಗದಲ್ಲಿ ಒಂದು ದೀಪ ಹಚ್ಚಿಟ್ಟು ಅದನ್ನು ನೋಡಿಯೇ ಹೋಗಬೇಕು ಎನ್ನುವುದು, ಮೂರನೇ ದಿನ ಸಮಾಧಿಯ ಮೇಲೆ ಹಾಲು ತುಪ್ಪ ಎರೆಯುವುದು, ಹನ್ನೊಂದನೇ ದಿನ ತಿಥಿ ಮಾಡುವುದು, ಸೂತಕ ಕಳೆದುಕೊಳ್ಳುವುದು ಇತ್ಯಾದಿ ಪದ್ಧತಿಗಳು ಚಾಲ್ತಿಗೆ ಬಂದವು.‌ ಸತ್ತ ಮೇಲೂ ಇಲ್ಲಿಯೇ ಸುತ್ತ ಮುತ್ತ ಇರುತ್ತಾರೆ ಎಂಬ ಭಾವನೆ ಇದರಲ್ಲಿ ಅಡಗಿದೆ. ಏಕೆಂದರೆ ಸತ್ತ ನಂತರದ ಕೆಲ ದಿನಗಳಲ್ಲಿ ಅವರ ನೆನಪು ಬಹಳ ಕಾಡುತ್ತದೆ. ಅವರು ಮನೆಯಲ್ಲಿ ಕೂಡುತ್ತಿದ್ದ ಕಡೆ ಇನ್ನೂ ಕುಳಿತಿದ್ದಾರೆ, ನಮ್ಮನ್ನು ಕರೆಯುತ್ತಿದ್ದಾರೆ ಎಂಬ ಭಾವನೆ ಬರುತ್ತದಲ್ಲ ಅದರಿಂದ ಹುಟ್ಟಿದ ಆಚರಣೆಗಳು. ಆದರೆ ಆ ದುಃಖದಲ್ಲಿಯೇ, ಆ ನೆನಪುಗಳಲ್ಲಿಯೇ ಮುಳುಗುವುದಕ್ಕೆ ಆಗುವುದಿಲ್ಲ. ಆದ್ದರಿಂದ ಇನ್ನು ನಿಮ್ಮ ಗಾಢ ನೆನಪುಗಳು‌ ಕಾಡಿದ್ದು ಸಾಕು. ನಮ್ಮನ್ನು ನಮ್ಮ ಮುಂದಿನ ಬದುಕನ್ನು ಸಾಗಿಸಲು ಬಿಡಿ ಎಂಬಂತಹ ಆಚರಣೆಗಳು ಈ ತಿಥಿಗಳು. ಸತ್ತವರ ಜೊತೆ ಸಂಬಂಧ, ಸಂಪರ್ಕವಿದ್ದವರೆಲ್ಲ ಸತ್ತ ದಿನ ಹಚ್ಚಿಟ್ಟ ದೀಪ ನೋಡಿದರೆ, ಅವರ ತಿಥಿಯಲ್ಲಿ ಭಾಗವಹಿಸಿ ಸಮಾಧಿ ದರ್ಶನ ಮಾಡಿ, ಎಡೆ ಇಟ್ಟು ಧೂಪ ಹಾಕಿದರೆ ಅವರು ಇನ್ನು ಇಲ್ಲ ಸತ್ತಿದ್ದಾರೆ ಎಂಬುದನ್ನು ಮನಸ್ಸಿನಾಳಕ್ಕೆ ಇಳಿಸಿಕೊಳ್ಳುವ ಕ್ರಮ. ವರ್ಷಕ್ಕೊಮ್ಮೆ ಹಿರೇರ ಹಬ್ಬ ಎಂದು ಅವರಿಗೆ ಹೊಸಬಟ್ಟೆ ತಂದು, ಅವರ ಇಷ್ಟದ ಊಟ ಬಡಿಸುವುದು ಎಂಬ ಪಕ್ಷ, ಓಣಂ, ದೀಪಾವಳಿಗಳ ಆಚರಣೆಗಳು ಅವರು ಇನ್ನೂ ಎಲ್ಲೋ ಇದ್ದಾರೆ, ಈಗಲೂ ಯಾವಾಗಲಾದರೊಮ್ಮೆ ಕನಸಿನಲ್ಲಿ ಬರುತ್ತಾರೆ ಎಂಬ ನಂಬಿಕೆ ಈ ಆಚರಣೆಗಳಲ್ಲಿ ಅಡಗಿದೆ.

ಇವುಗಳು ಇಂದೂ ಬಹಳ ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿಗಳು. ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ಮೂಡಿರುವ ಅವರ ಬಿಂಬಗಳು ಸೃಷ್ಟಿಸುವ ಕನಸುಗಳ ಪರಿಣಾಮ. ಸಾಹಿತಿ ಚಂಪಾ ಬರೆದಂತೆ ಸತ್ತವರು ಇರುತ್ತಾರೆ ಇದ್ದವರ ನೆನಪಿನಲ್ಲಿ.

ಆದಿ ಮಾನವರ ಕಾಲದಲ್ಲಿ ಈ ನಂಬಿಕೆಗಳು ಮತ್ತಷ್ಟು ಬೆಳೆದು ಮತ್ತೆ ಹಲವು ಪದ್ಧತಿಗಳು ಕೂಡಿಕೊಂಡವು. ಸತ್ತವರ ಮುಂದಿನ ಜೀವನಕ್ಕೆ ಬೇಕಾಗುವ ಎಲ್ಲ ವಸ್ತುಗಳನ್ನು ಸಮಾಧಿಗಳಲ್ಲಿ ಹುದುಗಿಸಿ ಇಡುವುದು. ಹಲವು ಕಾಲಕ್ಕೆ ಸಾಕಾಗುವಷ್ಟು ಧಾನ್ಯ, ಅವರ ಬದುಕಿನಲ್ಲಿ ಬಳಸುತ್ತಿದ್ದ ಕುಡಗೋಲು, ಕತ್ತಿ ಮೊದಲಾದ ಉಪಕರಣ, ಸಲಕರಣೆಗಳನ್ನು ಸಮಾಧಿಗಳಲ್ಲಿ ಹೂತಿರುವುದು ವಿಶ್ವಾದ್ಯಂತ ಕಂಡು ಬಂದಿದೆ. ಅಂದಿನ ನಾಗರೀಕತೆಯ ಬೆಳವಣಿಗೆಯ ಇತಿಹಾಸ ಶೋಧಿಸಲು ನೆರವಾಗಿವೆ. ಕರ್ನಾಟಕದಲ್ಲೂ ಹಲವು ಕಡೆ ಕಲ್ಗೋರಿಗಳು, ಮಣ್ಣಿನ ಮಡಕೆಗಳ ಗೋರಿಗಳು ಬಳ್ಳಾರಿ, ಯಾದ್ಗಿರಿ, ಬಿಜಾಪುರ, ಬೆಂಗಳೂರು, ಕೋಲಾರ, ತುಮಕೂರು ಮೊದಲಾದ ಜಿಲ್ಲೆಗಳಲ್ಲಿ ಸಂಶೋಧನೆಗಳಿಗೆ ಒಳಗಾಗಿವೆ.

ಇದೇ ನಂಬಿಕೆಗಳು ಮುಂದೆ ಎಷ್ಟೊಂದು ಪರಿಯಲ್ಲಿ ಬೆಳೆಯಿತೆಂದರೆ, ಇಂತಹ ಸಮಾಧಿಗಳನ್ನು ನೋಡಲು ಇಂದು ಕೋಟಿಗಟ್ಟಲೆ ಜನರು ಸಾವಿರಾರು ಮೈಲಿ ಪ್ರಯಾಣ ಮಾಡಿ ಹೋಗುತ್ತಾರೆ. ಅವೇ ಈಜಿಪ್ಟಿನ ಸಾಮ್ರಾಟರುಗಳ ಶವವನ್ನು ಅಂದಿನ ರಾಸಾಯನಿಕಗಳಿಂದ ಹಾಗೆಯೇ ಸಂರಕ್ಷಿಸಿಟ್ಟು ಅದರ ಮೇಲೆ ಕಟ್ಟಿಸಿದ ಪಿರಮಿಡ್‌ಗಳೆಂಬ ಮಹಾ ಸಮಾಧಿಗಳು. ಅವುಗಳಲ್ಲಿನ ವೈಭವ, ಸಂಪತ್ತು, ಕಲೆ ಆ ಸಾಮ್ರಾಟರು ಸತ್ತ ಮೇಲಿನ ಜೀವನಕ್ಕೆ ಎಂದು ಮೀಸಲಿಟ್ಟವು.

ಈ ರೀತಿ ಇಲ್ಲವಾಗುವವರು ವಯಸ್ಸಿನಲ್ಲಿ ಹಿರಿಯರು ತಾನೇ. ಅವರು ತಮ್ಮ ಮುಂದಿನ ತಲೆಮಾರಿನ‌ ಹಿತವನ್ನು ಬಯಸುತ್ತಾರೆ. ಸಲಹೆ ನೀಡುತ್ತಾರೆ. ಅದರಲ್ಲಿ ಆ ಹಿರಿಯರು ತಮ್ಮ ಗುಂಪಿಗೇ, ಬುಡಕಟ್ಟಿಗೇ ಹಿರಿಯರಾಗಿದ್ದರೆ ಬುಡಕಟ್ಟಿನ ಹಲವರಿಗೆ ಅವರು ಕಾಣುತ್ತಾರೆ. ಮತ್ತೆ ಮತ್ತೆ ಕಾಣುತ್ತಾರೆ. ಅವರು ನೀಡುವ ಸಲಹೆ , ತುಂಬುವ ಧೈರ್ಯಗಳು ಈಗಲೂ ತಮ್ಮ ಬದುಕಿನ ಸವಾಲುಗಳನ್ನು ಎದುರಿಸಲು ಉಪಯುಕ್ತವಾಗಿವೆ. ಯಾವುದೋ ಕಾಯಿಲೆಯಿಂದ ನರಳುತ್ತಿದ್ದಾಗ ಕನಸಿನಲ್ಲಿ ಅವರೊಡನೆ ಕಂಡ ಗಿಡ ಮೂಲಿಕೆ ಕಾಯಿಲೆಯಿಂದ ಗುಣಮುಖವಾಗುವುದಕ್ಕೆ ಸಹಾಯಕವಾಯಿತು. ಇಂತಹ ವಿಚಾರಗಳು ಆ ಬುಡಕಟ್ಟಿನ ಜನರಲ್ಲಿ ಅಳಿದ ಬುಡಕಟ್ಟಿನ ನಾಯಕರ ಬಗ್ಗೆ ಗೌರವವನ್ನು ಮೂಡಿಸಿತು. ಅವರನ್ನು ಹೂತ ಸ್ಥಳಕ್ಕೆ ಮತ್ತೆ ಮತ್ತೆ ಭೇಟಿ ಮಾಡಿ ಈ ಗೌರವವನ್ನು ತೋರಿಸಿದರು.‌

ಈ ಸಂದರ್ಭದಲ್ಲಿ ಬುಡಕಟ್ಟಿನ ನಾಯಕರಾಗಿದ್ದವರು ಬುಡಕಟ್ಟಿನ ಹಿರಿಯ ಅಮ್ಮಗಳು. ಆದ್ದರಿಂದ ಅಮ್ಮ ದೈವಗಳ ಉಗಮವಾಯಿತು. ಈ ಬಗ್ಗೆ ಈ ಲೇಖನ ಮಾಲೆಯಲ್ಲಿ ಈಗಾಗಲೇ ಓದಿದ್ದೀರಿ. ಪುರುಷರು ಬುಡಕಟ್ಟಿನ ನಾಯಕರಾದಾಗ ಇದೇ ಕನಸುಗಳ ಪ್ರಕ್ರಿಯೆಯಲ್ಲಿ ಪುರುಷ ದೈವಗಳು ಉದಿಸಿದವು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: