ಹಿರಿಯ ಪತ್ರಕರ್ತ ಚ ಹ ರಘುನಾಥ್ ಅವರು ಮಕ್ಕಳಿಗಾಗಿ ಕವಿತೆಗಳನ್ನು ಬರೆದಿದ್ದಾರೆ.
‘ಅಂಕಿತ ಪ್ರಕಾಶನ’ ಜಾಮೂನು ಪದ್ಯಗಳು ಹೆಸರಿನಲ್ಲಿ ಈ ಕವಿತೆಗಳನ್ನು ಹೊರತರುತ್ತಿದೆ.
ಈ ೨೨ ರಂದು ಶನಿವಾರ ಈ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
ಈ ಕೃತಿಗೆ ಎಚ್ ಎಸ್ ವೆಂಕಟೇಶಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ-
ಎಚ್.ಎಸ್. ವೆಂಕಟೇಶಮೂರ್ತಿ
ಮಕ್ಕಳಿಗಾಗಿ ಚ ಹ ರಘುನಾಥ ಬರೆದಿರುವ ಪದ್ಯಗಳು, ಪುಟಾಣಿಗಳ ಶುದ್ಧಾಂಗ ಅಸಂಗತ ಕಲ್ಪನೆಗಳಿಗೆ ಮಾತಿನ ಭರವಸೆ ಕೊಡುತ್ತಿವೆ. ಒಳಗೊಳಗೆ ಮಕ್ಕಳ ತರ್ಕಮುಕ್ತ ಎನಿಸುವ ಅನಿಸಿಕೆಗಳು ಕವಿಗಿರುವ ಗಾಢವಾದ ಪರಿಸರದ ಬಗೆಗಿನ ಕಾಳಜಿಯಿಂದ ಭಾವದ ಒಡಲಿಗೆ ಭಾಷೆಯ ರೆಕ್ಕೆ ಹಚ್ಚುತ್ತಾ ಇವೆ. ಮನಸ್ಸು ಮಗುವಿನದು; ಮಾತು ಸೂಕ್ಷ÷್ಮ ಸಂವೇದನಾಶೀಲನಾದ ಕವಿಯದು. ನೀನು ಕಲ್ಪನೆಯನ್ನು ನನಗೆ ಕೊಡು; ನಾನು ಆ ಕಲ್ಪನೆಗೆ ಮಾತಿನ ಬಲೂನು ಕಟ್ಟುತ್ತೇನೆ ಎನ್ನುತ್ತಾರೆ ಮಕ್ಕಳ ಕವಿಗಳು. ಹಾಗಾಗಿ ಮಕ್ಕಳ ಕವಿತೆ ಎನ್ನುವುದು ಒಂದು ದ್ವಿದಳ ಉತ್ಪನ್ನ.
ರಘುನಾಥರ ಕವಿತೆಗಳ ನವುರುತನ ಮತ್ತು ಸೂಕ್ಷ್ಮತೆ ಸೂಚಿಸುವ ಒಂದು ಆರ್ದ್ರವಾದ ಕಲ್ಪನೆಯನ್ನು ಗಮನಿಸಿ. ಒಂದು ಮಳೆಯ ಹನಿ ಎಲೆಯ ಕಂಬನಿಯ ಹಾಗೆ ಅದರ ಅಂಚಿನಲ್ಲಿ ಕುಳಿತಿದೆ. ಹಳ್ಳ ಹೊಳೆ ಯಾವುದೂ ಇಲ್ಲ, ಮುಂದೆ ಎಲ್ಲಿಗೆ ಹೋಗಲಿ ಎಂದು ಆ ಹನಿ ಚಿಂತಿಸುತ್ತಾ ಇದೆ!
ಎಲೆಯಿಂದ ಉರುಳಿದರೆ
ಹೋಗುವುದಾದರೂ ಎಲ್ಲಿಗೆ?
ಎಲ್ಲಿದೆ ಹಳ್ಳ ಎಲ್ಲಿದೆ ಕೊಳ್ಳ
ಮುಗಿಯಿತೆ ಬದುಕು ಇಂದಿಗೆ?
(ಮಳೆ ಹನಿಯ ಅಳು)
ಹರಿಯುವ ನೀರು ಒಂದು ಹನಿಯಾಗಿ ಸ್ಥಗಿತಗೊಳ್ಳುವುದು, ತನ್ನ ಮುಂದಿನ ಗತಿಯನ್ನು ನೆನೆದು ಮಳೆಯಹನಿ ಕಂಬನಿ ಕರೆಯುವುದು ರಘುನಾಥರ ಸೂಕ್ಷ್ಮವಾದ ಮತ್ತು ಧ್ವನಿಪೂರ್ಣವಾದ ಕಾವ್ಯ ಸಂವೇದನೆಯ ಮತ್ತು ಪರಿಸರ ಕಾಳಜಿಯ ಮನೋಹರವಾದ ಅಭಿವ್ಯಕ್ತಿಯಾಗಿದೆ.
ಇನ್ನೊಂದು ಪದ್ಯ ಮಕ್ಕಳಿಗೆ ಪ್ರಿಯವಾದ ಕಾಮನಬಿಲ್ಲನ್ನು ಕಲಕಿ ಛಿದ್ರಗೊಳಿಸಬೇಡಿ ಎಂದು ಹಂಬಲಿಸುತ್ತಾ ಇದೆ:
ಕಾಮನ ಬಿಲ್ಲು ಕಾಮನಬಿಲ್ಲು
ಏಳು ಬಣ್ಣಗಳ ಸಮರಸ ಸೊಲ್ಲು
ಮುಗಿಲಿನ ಮಣ್ಣಲಿ ನೆಟ್ಟಿಹ ಗೆಲ್ಲು
ಎಸೆಯಬೇಡಿರಿ ಯಾರೂ ಕಲ್ಲು.
(ಮುಗಿಲಿನ ಬಾಯಿ)
ಕಾಮನಬಿಲ್ಲು ಮತ್ತೇನಕ್ಕೋ ಪ್ರತೀಕ ಎನ್ನುವುದನ್ನು ನಮ್ಮ ಅರಿವಿಗೆ ತರುವ ಒಂದೇ ಸನ್ನೆ ಮಾತು ‘ಸಮರಸ’. ಈ ಒಂದು ಪದ ಇಡೀ ಪದ್ಯವನ್ನ ಹೇಗೆ ಓದಬೇಕೆಂಬುದನ್ನು ಸೂಚಿಸುವ ಮೀಟುಗೋಲಿನಂತಿದೆ. ಬೇರೆ ಬೇರೆ ವೈಚಾರಿಕತೆಗಳ ಸಹಜೀವನದಿಂದಲೇ, ಆದಾನ ಪ್ರದಾನದಿಂದಲೇ ಕಾಮನಬಿಲ್ಲಿಗೆ ಆ ಚೆಲುವು; ಸಂಪನ್ನತೆ. ಕಲ್ಲು ಹೊಡೆದು ಅದನ್ನು ಕಲಕಬೇಡಿ ಎಂದು ಕವಿತೆ ನೋವಿನಿಂದ ಉದ್ಗರಿಸುತ್ತಾ ಇದೆ.
ಕಾಮನಬಿಲ್ಲಿನ ಇನ್ನೊಂದು ಪದ್ಯವಿದೆ. ಆ ಪದ್ಯದಲ್ಲಿಯಾದರೋ ಕಾಮನಬಿಲ್ಲಿಗೆ ಧೂಳು ಕವಿದು ನೆಗಡಿಯಾಗಿದೆ! ಪುಟಾಣಿ ಏಜೆಂಟ್ ಹರ್ಷ ಮರಿ ಕಾಮನಬಿಲ್ಲಿನ ಸಂಕಟಕ್ಕೆ ಮರುಗಿ, ಆಕಾಶಕ್ಕೆ ಹೋಗಿ ಅದರ ಆರೋಗ್ಯವನ್ನು ಸರಿಪಡಿಸುತ್ತಾನೆ:
ಮಂಜಿನ ಮಡಿಲಲಿ ಕೂರಿಸಿ ಕೂಸನು
ಎಳೆ ಮೋಡವ ಹಿಂಡಿ ಮೂಗನು ತೊಳೆದನು
ಮಿಂಚಿನ ಹೊಳಪಲಿ ಧೂಳನು ಕಳೆದನು
ಹರಯದ ಸಿಡಿಲಿನ ಹುಡಿ ಕುಡಿಸಿದನು
(ಕಾಮನಬಿಲ್ಲು ಮತ್ತು ಪುಟಾಣಿ ಏಜೆಂಟ್)
ಮಕ್ಕಳಿಗೆ ಪ್ರಿಯವಾದ ಮಾವಿನ ಹಣ್ಣನ್ನು ವಾಸ್ತವದ ನೆಲೆಯಲ್ಲಿ ಮಕ್ಕಳಿಗೆ ಕೊಡಬಹುದಾದ ರೀತಿಗೂ, ಕಲ್ಪನಾ ಜಗತ್ತಲ್ಲಿ ಅವರ ಅರಿವನ್ನು ಹಿಗ್ಗಿಸಲು ಕೊಡಬೇಕಾಗುವ ಬಹುಮುಖೀ ನೆಲೆಗೂ ವ್ಯತ್ಯಾಸವಿದೆ! ಎಷ್ಟು ಬಗೆಯ ಮಾವಿನ ಹಣ್ಣುಗಳು ಕವಿತೆಯಲ್ಲಿ ನಾಮಜಪದಂತೆ ಪ್ರಸ್ತುತಗೊಳ್ಳುತ್ತವೆ ಎಂಬುದನ್ನು ಗಮನಿಸಿ! ಅನುಭವ ಮತ್ತು ಅರಿವುಗಳಿಗೆ ಇರುವ ಸೂಕ್ಷ್ಮ ಭೇದವನ್ನು ಈ ಕವಿತೆ ಪರ್ಯಾಲೋಚಿಸಿದ್ದರ ಫಲವಾಗಿಯೇ ರಚಿತವಾಗಿದೆ ಎನ್ನಬಹುದು! ಹಣ್ಣನ್ನು ಕೊಡುವುದು ಮಾತ್ರವಲ್ಲ ಅದನ್ನು ಹೇಗೆ ತಿನ್ನಬೇಕೆಂಬುದನ್ನೂ ಪದ್ಯ ಪರ್ಯಾಯ ನೆಲೆಯಲ್ಲಿ ಬೋಧಿಸುತ್ತಾ ಇದೆ.
ಚಿನ್ನದ ಬಣ್ಣ ವಾಸನೆ ಬಲುಹಿತವಣ್ಣ
ನಾಲಿಗೆ ಬೆರಳಿಗೆ ಬಾಯಿಗೆ ಬಿಡುವಿಲ್ಲಣ್ಣ
ಹಣ್ಣಿನ ತೊಟ್ಟನು ಜಿಗುಟಿ ತುಟಿಗಳ ಹಚ್ಚಿ
ಸೊರ ಸೊರ ರಸವನು ಹೀರೋ ಜಾಣ.
ಮಾವಿನ ಹಣ್ಣು ಬರೀ ನಾಲಗೆಯ ವಿಷಯವಲ್ಲ! ಚಿನ್ನದ ಬಣ್ಣ ನೋಡಬೇಕಾದದ್ದು. ವಾಸನೆ ಆಘ್ರಾಣಿಸಬೇಕಾದದ್ದು. ಬೆರಳು ಸ್ಪರ್ಶಿಸಬೇಕಾದದ್ದು. ರಸ ಸವಿಯ ಬೇಕಾದದ್ದು. ಸರ್ವೇಂದ್ರಿಯಗಳ ಮೂಲಕ ಅನುಭವವೊಂದು ರಸಾರ್ದ್ರವಾಗುವುದು ಎಂಬ ಮೀಮಾಂಸೆಯ ತತ್ವವನ್ನು ಸುಲಭವಾಗಿ ಮಕ್ಕಳ ಸಂವೇದನೆ ತಲಪಿಸುವಂತಿದೆ ಈ ಪದ್ಯ!
ಮಾಯದ ತೊಟ್ಟಿಲು ರಂಕಲುರಾಟೆ ಜಿಗಿಯುವ ವಸ್ತುವನ್ನೇ ಮಕ್ಕಳು ತಮ್ಮ ಕಲ್ಪನೆಯಿಂದ ಹೇಗೆ ಮತ್ತಷ್ಟು ಎತ್ತರಕ್ಕೆ ಜಿಗಿಸಬಲ್ಲರು ಎಂಬುದನ್ನು ಸೂಚಿಸುವ ಕವಿತೆಯಾಗಿದೆ.
ಮೋಡದ ಮರಿಗಳ ಕುಸ್ತಿ, ಭೂಮಿಗಿಳಿದ ನಕ್ಷತ್ರ ಮರಿಗಳು, ಸೈಬರ್ ಕೆಫೆಯಲ್ಲಿ…, ಕತ್ತೆ ಕೊಡಿಸಿದ ಸ್ವಾತಂತ್ರ÷್ಯ, ನಾನು ಇಷ್ಟಪಟ್ಟಿರುವ ಉಳಿದ ಕವಿತೆಗಳು. ವಸ್ತುಸ್ಥಿತಿಯ ಅರಿವನ್ನು ಕೊಡುವುದರೊಂದಿಗೇ ಕಲ್ಪನೆಯ ಬಿಡುಗಡೆಯನ್ನೂ ಈ ಕವಿತೆಗಳು ಕರುಣಿಸುತ್ತಾ ಇವೆ!
ರಘುನಾಥರ ಲಯಗಾರಿಕೆ, ಕಲ್ಪನೆ ಮತ್ತಷ್ಟು ವಿಸ್ತಾರಕ್ಕೆ ರೆಕ್ಕೆ ಬಿಚ್ಚಿ ಹಾರಬೇಕಾಗಿದೆ. ಮುಂದೆ ಅದು ಆದೇ ಆಗುವುದೆಂದು ದೃಢವಾಗಿ ನಂಬಿದ್ದೇನೆ. ನಮ್ಮ ನಡುವಿನ ಈ ಸೂಕ್ಷ್ಮ ಕಾವ್ಯ ಸಂವೇದಿ ಮತ್ತು ಸಮಾಜಮುಖೀ ಕವಿಗೆ ಅವರ ಚೆಲುವಾದ ಕವಿತೆಗಳಿಗಾಗಿ ಹೃತ್ಪೂರ್ವಕ ಅಭಿನಂದನೆಗಳು.
0 Comments