ಜಾತಿ ಎಂಬ ಅಮೂರ್ತ ಅನಿಷ್ಟ
-ಡಾ.ಎಸ್.ಬಿ.ಜೋಗುರ
ಜಾತಿ ಒಂದು ಅಮೂರ್ತವಾದ ಸಾಮಾಜಿಕ ಸಂಸ್ಥೆ. ಎಲ್ಲ ಬಗೆಯ ಅನಿಷ್ಟಗಳು ಅದರಲ್ಲಿ ಮೈ ತುಂಬಿಕೊಂಡರೂ ಅದೊಂದು ಅನಿವಾರ್ಯವಾದ ಆಚರಣೆಯಾಗಿದೆ.ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವ ಹಾಗೆ ಅದೊಂದು ಮೋಹವಾಗಿ,ವಾಸನೆಯಾಗಿ, ಸೆಳೆತವಾಗಿ ನಮ್ಮ ಬದುಕಿನ ಭಾಗವಾಗಿದೆ. ಯಾವದೇ ಬಗೆಯ ರೂಪ ಆಕಾರವಿಲ್ಲದ ಈ ಜಾತಿ ಅತಿರಥ ಮಹಾರಥರನ್ನೂ ತಲ್ಲಣಗೊಳಿಸುವದಿದೆ. ನಮ್ಮ ಬದುಕಿನ ದಿನಚರಿಗೆ ಮುನ್ನುಡಿಯಂತಿರುವ ಜಾತಿ ಎಲ್ಲ ಬಗೆಯ ಮಾನವೀಯ ಗುಣಗಳ ನೆತ್ತಿಗೆ ಕುಕ್ಕಿಯೂ ನಮ್ಮನ್ನು ನಿಯಂತ್ರಿಸಿ, ನಿರ್ದೇಶಿಸುತ್ತದೆ. ಹಾಗಾಗಿಯೇ ಮದನ್ ಮತ್ತು ಮಜುಮದಾರ್ ಎನ್ನುವ ಚಿಂತಕರು ಇದೊಂದು ನಿರ್ಬಂಧಿತ ಸಮೂಹ ಎನ್ನುತ್ತಾರೆ. ಕಣ್ಣಿಗೆ ಕಾಣದ, ಸ್ಪಷ್ಟವಾದ ರೂಪ ಆಕಾರವಿರದ ಈ ಜಾತಿ ಭಯಂಕರ ಓದಿರುವ, ಗೋಷ್ಟಿಗಳಲ್ಲಿ ಅದನ್ನು ವಿರೋಧಿಸಿ ಪುಂಖಾನುಪುಂಖವಾಗಿ ಮಾತನಾಡುವವರ, ಅಪಾರ ಪಾಂಡಿತ್ಯ ಗಳಿಸಿರುವ, ವಿದೇಶದಲ್ಲಿ ಡಿಗ್ರಿ ಮುಗಿಸಿ ಬಂದಿರುವಾತನ ಒಂಬತ್ತು ತೂತಿನ ಕೊಡಗಳಲ್ಲಿಯೂ ಜಾತಿಯ ಸೊಂಕು ವಸರುತ್ತಿರುತ್ತದೆ. ಅಂಥವರ ಬೌದ್ಧಿಕತೆಯ ಮೇಲೂ ಇದು ಸವಾರಿ ಮಾಡುವದನ್ನು ನೋಡಿದರೆ, ಖಂಡಿತಾ ಈ ಜಾತಿ ಈಗೀಗ ಇನ್ನಷ್ಟು ಅನಿವಾರ್ಯವಾಗುತ್ತಿದೆಯೇನೋ ಎನಿಸುತ್ತದೆ. ಸಾವಿರಾರು ವರ್ಷಗಳ ಕಾಲ ತನ್ನ ವಿಶಿಷ್ಟ ಆಚರಣೆ, ನಿರ್ಬಂಧಗಳಿಂದಲೇ ಭಾರತೀಯ ಸಮಾಜವನ್ನು ಆಳುತ್ತಾ ಬಂದಿರುವ ಈ ಜಾತಿ ನಮ್ಮ ಆಹಾರ, ಸಾಮಾಜಿಕ ಸಂಪರ್ಕ, ಊಟೋಪಚಾರ,ಮದುವೆ,ಉದ್ಯೋಗ ಮುಂತಾದವುಗಳ ಮೇಲೆ ಹಿಡಿತವನ್ನು ಸಾಧಿಸಿ, ತನ್ನ ಅಣತಿಗನುಗುಣವಾಗಿಯೇ ಎಲ್ಲವೂ ನಡೆಯಬೇಕು ಎನ್ನುವ ಅಘೋಷಿತ ಫéಮರ್ಾನನ್ನು ಹೊರಡಿಸುವ ಮೂಲಕ ಇಡೀ ಸಮಾಜವನ್ನು ಮೂರು ಸಾವಿರಕ್ಕಿಂತಲೂ ಹೆಚ್ಚು ಭಾಗಗಳಲ್ಲಿ ವಿಂಗಡಿಸಿರುವದಿದೆ. ಈ ಮೂರು ಸಾವಿರಕ್ಕಿಂತಲೂ ಹೆಚ್ಚಿಗಿರುವ ಜಾತಿ- ಉಪಜಾತಿಗಳು ತಮ್ಮದೇಯಾದ ಸಾಂಸ್ಕೃತಿಕ ಅನನ್ಯತೆಯನ್ನು ಹೊಂದುವ ಮೂಲಕ ಒಂದು ಪುಟ್ಟ ಪ್ರಪಂಚದ ಹಾಗೆ ಗೋಚರವಾಗುತ್ತವೆ.ಇದು ದೇಶದ ಸಮಗ್ರತೆಯ ಹಿನ್ನೆಲೆಯಲ್ಲಿ ಅಪಾಯಕಾರಿ ಎನ್ನುವದು ಎಲ್ಲರಿಗೂ ತಿಳಿದಿದೆಯಾದರೂ ಜಾತಿಯ ಆಚರಣೆ, ಅನುಸರಣೆಯನ್ನು ಮಾತ್ರ ಬಿಡಲೊಲ್ಲರು.
ಜಾತಿಯನ್ನು ಬಿಡಲು, ಇಲ್ಲವೇ ದೂರ ಸರಿಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫéಲವಾಗಿವೆ. ಮರ ಮರ ಎನ್ನುತ್ತ ಹೋಗಿ ರಾಮ ರಾಮ ಎನ್ನುತ್ತ ಅದರ ಬುಡದಲ್ಲಿಯೇ ಬಂದು ನಿಂತಂತಾಗಿದೆ. ಬದಲಾಗಿ ಅಲ್ಲಿಯೂ ಹೊಸ ಬಗೆಯ ಜಾತಿಗಳ ಮುಖದರ್ಶನ ಆರಂಭವಾದದ್ದು ಈಗ ಚರಿತ್ರೆ. ಇಲ್ಲಿಯ ಕಿರಿಕಿರಿಯೇ ಬೇಡವೆಂದು ಬೌದ್ಧ ಧರ್ಮಕ್ಕೆ, ಕ್ರಿಶ್ಚಿಯನ್ ಧರ್ಮಕ್ಕೆ ಜಿಗಿದು ಹೋದರೂ ಈ ಜಾತಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಪರಿಣಾಮವಾಗಿ ಅಲ್ಲಿ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವ ಸೂಕ್ಷ್ಮಾತಿ ಸೂಕ್ಷ್ಮ ಪ್ರಬೇಧಗಳೇ ಸೃಷ್ಟಿಯಾದವು. ಮೂರ್ತಿ ಪೂಜೆಯನ್ನು ಸಾರಾಸಗಟಾಗಿ ನಿರಾಕರಿಸುವ ಮುಸ್ಲಿಂರಲ್ಲೂ ಇವತ್ತು ಅನೇಕ ಜಾತಿಗಳಿವೆ. ಹೀಗೆ ಈ ಜಾತಿ ಎನ್ನುವದು ತನ್ನ ತೆಕ್ಕೆಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಮುಂದೆ ಹೋಗುವ ಪ್ರವಾಹವಿದ್ದಂತೆ. ಭಾರತೀಯ ಸಮಾಜಶಾಸé್ರಜ್ಞರಾದ ಎಮ್.ಎನ್.ಶ್ರೀನಿವಾಸರು ಜಾತಿಯಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುವ ಹಂಬಲ ಕೆಳಜಾತಿಗಳಲ್ಲಿ ಇರುತ್ತದೆ ಎನ್ನುವದನ್ನು ತೋರುವ ಸಲುವಾಗಿ ತಮ್ಮ ಸಂಸ್ಕೃತಾನುಕರಣ ಸಿದ್ಧಾಂತವನ್ನೇ ಬೆಳೆಸಿದರು. ಇರಬಹುದು. ತಕ್ಕ ಮಟ್ಟಿಗೆ ಭೌತಿಕ ಬದಲಾವಣೆಗಳು ಮೇಲಿನ ಜಾತಿಯ ಅನುಕರಣೆಯ ಮೂಲಕ ಕೆಳಜಾತಿಗಳಲ್ಲಿ ಸಾಧ್ಯವಾಗಬಹುದಾದರೂ ಜಾತಿಯ ಸ್ಥಾನಮಾನಗಳಲ್ಲಿ ಮಾತ್ರ ಮತ್ತದೇ ಸಮಾನಾಂತರ ಸಾಮಾಜಿಕ ಸಂಚಲನೆ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ಜಾತಿಯಲ್ಲಿ ಬದಲಾವಣೆ ಬಯಸುವವರಿರಬಹುದು ಆದರೆ ಜಾತಿ ಮಾತ್ರ ಹಾಗೆ ಬದಲಾಗುವದನ್ನು ಸಹಿಸುವದಿಲ್ಲ. ಕೆಳಸ್ತರದ ಜನತೆ ಮೇಲಿನವರನ್ನು ಅನುಕರಣೆ ಮಾಡಿ, ಮನೆಯಲ್ಲಿ ಏರ್ಪಡಿಸುವ ಸತ್ಯನಾರಾಯಣನ ಪೂಜೆ, ಹೋಮ ಹವನ ಸಮಗ್ರವಾಗಿ ಅವರನ್ನು ಜಾತಿಯ ಏಣಿಶ್ರೇಣಿಯಲ್ಲಿ ಮೇಲಕ್ಕೆ ಎತ್ತುವ ಮಟ್ಟಿಗೆ ಕೆಲಸ ಮಾಡಲಾರದು. ಅದೂ ಅಲ್ಲದೇ ಈ ಬಗೆಯ ಆಚರಣೆ, ಅನುಕರಣೆಯಿಂದ ಜಾತಿ ಇನ್ನಷ್ಟು ಗಡುಸಾಗುತ್ತದೆಯೇ ಹೊರತು ಅದು ಸಡಿಲುಗೊಳ್ಳುವದಿಲ್ಲ. ಪೆರಿಯಾರ ರಾಮಸ್ವಾಮಿ ನಾಯ್ಕರರ ಮಾತು ಈ ಸಂದರ್ಭದಲ್ಲಿ ಉಲ್ಲೇಖಾರ್ಹ. ‘ಒಬ್ಬ ಬ್ರಾಹ್ಮಣ ಕೇವಲ ನೂರು ಪ್ರತಿಶತ ಬ್ರಾಹ್ಮಣ ಅದೇ ಒಬ್ಬ ಶೂದ್ರ ಸಂಸ್ಕೃತಾನುಕರಣ ಹೊಂದಿದರೆ ನೂರಾ ಹತ್ತು ಪ್ರತಿಶತ ಬ್ರಾಹ್ಮಣ’ ಎಂದಿರುವದನ್ನು ನೋಡಿದರೆ ಜಾತಿಯಲ್ಲಿ ಅತಿ ಹೆಚ್ಚೆಂದರೆ ಸಮಾನಾಂತರ ಸಂಚಲನೆಗಳಾಗಬಹುದು.
ಹಿಂದೆ ವೀರಶೈವ ಧರ್ಮದ ತತ್ವಗಳಿಗೆ ಬದ್ದವಾಗಿ ಸ್ಥಾಪಿತವಾಗುತ್ತಿದ್ದ ಮಠಗಳು ಬಹುತೇಕವಾಗಿ ಜನಕೇಂದ್ರಿತವಾಗಿರುತ್ತಿದ್ದವು. ಈಗ ಹಾಗಲ್ಲ, ಅವು ಜಾತಿ ಕೇಂದ್ರಿತವಾಗಿ ಕೆಲಸ ಮಾಡುತ್ತಿವೆ. ಈಗಿರುವ ಜಾತಿಗೊಂದು ಮಠ, ಮತ್ತು ಮಠಾದೀಶರನ್ನು ನೋಡಿದಾಗ ಜಾತಿಯ ಅನಿವಾರ್ಯತೆ ಎದ್ದು ತೋರುವದಿಲ್ಲವೇ..? ಕಂಡರಿಯದ, ಕೇಳಿರದ ತೀರಾ ಸಣ್ಣ ಪುಟ್ಟ ಜಾತಿಗಳು ಕೂಡ ಇಂದು ಮಠಗಳನ್ನು ರೂಪಿಸಿಕೊಂಡು ಜಾತಿಯ ಸಂಘಟನೆಯ ರೇಸಿನಲ್ಲಿವೆ. ಜಾತಿಯ ಅನುಯಾಯಿಗಳ ಸಂಖ್ಯೆ ಚಿಕ್ಕದಾದಷ್ಟು ಐಕ್ಯತೆ ಮತ್ತು ಜಾತಿಪ್ರಜ್ಞೆ ಜಾಸ್ತಿ. ಹೆಚ್ಚೆಚ್ಚು ಶಿಕ್ಷಣ ಪಡೆದವರಿಗೆ ಜಾತಿ ಬೇರೆ ಬೇರೆ ಕಾರಣಗಳಿಗಾಗಿ ಹೆಚ್ಚೆಚ್ಚು ಅನಿವಾರ್ಯವಾಗುತ್ತಿರುವದು ಈ ದೇಶದ ಇನ್ನೊಂದು ದುರಂತ. ಸಮಾಜದ ವಿವಿಧ ಕಾರ್ಯಚಟುವಟಿಕೆಗಳು ಜಾತಿಯಿಂದಲೇ ನಿರ್ಧರಿತವಾಗುತ್ತಿವೆ. ಪ್ರಶಸ್ತಿಗಳು, ಉದ್ಯೋಗಗಳು, ಮದುವೆಗಳು, ಶಿಕ್ಷಣ, ಸಾಹಿತ್ಯ ಚಟುವಟಿಕೆಗಳು [ವಿಮರ್ಶೆ, ಲೇಖನ ಪ್ರಕಟಣೆ, ಗೋಷ್ಟಿಗಳಲ್ಲಿ ಅವಕಾಶ] ಹೀಗೆ ಪ್ರತಿಯೊಂದು ಜಾತಿಯ ಮೂಲಕವೇ ನಿರ್ಧರಿತವಾಗುವ ಸಂದರ್ಭಗಳಲ್ಲಿ ಮನುಷ್ಯನ ಅಸ್ಥಿತ್ವದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಯಾರೋ ಒಬ್ಬರು ಮಾತನಾಡುತ್ತಾ ‘ಅವರೆಲ್ಲಾ ಬಹುತೇಕವಾಗಿ ತಮ್ಮ ಜಾತಿಯವರಿಗೇ ಪ್ರಾಧಾನ್ಯತೆ ಕೊಡೋದು’ ಅನ್ನೋ ಮಾತು ಬಂದಾಗ ಜೊತೆಗಿರುವ ಇನ್ನೊಬ್ಬರು ‘ಹೌದು ಮತ್ತೆ, ಪ್ರತಿಯೊಬ್ಬರು ಅವರವರ ಜಾತಿಯ ಜನರ ಕಾಳಜಿ ನೋಡುವಾಗ ಅವರೇಕೆ ನೋಡಬಾರದು..?’ ಎನ್ನುವ ಸಮರ್ಥನೆ ಬಂತು. ಈ ಬಗೆಯ ಸಮರ್ಥನೆಗಳು ಜಾತಿಯ ಅಸ್ಥಿತ್ವಕ್ಕೆ ಇನ್ನಷ್ಟು ಭದ್ರವಾದ ನೆಲೆಯನ್ನು ಒದಗಿಸಬಲ್ಲದು.
ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಎನ್ನುವದು ಪೂರ್ವನಿರ್ಧರಿತ. ಯಾರೂ ಅರ್ಜಿ ಸಲ್ಲಿಸಿ ಹುಟ್ಟಲಾಗುವದಿಲ್ಲ. ಹೀಗೆ ಒಂದು ಬಾರಿ ಯಾವದೋ ಒಂದು ಜಾತಿಯಲ್ಲಿ ಹುಟ್ಟಿದರೆ ತೀರಿತು. ಅದರಲ್ಲಿ ಬದಲಾವಣೆಯನ್ನು ಬಯಸಿದರೂ ಅದು ಸಾಧ್ಯವಾಗುವದಿಲ್ಲ. ಎಲ್ಲ ಬಗೆಯ ಮತಾಂತರಗಳನ್ನು ಮೀರಿಯೂ ಅದು ತನ್ನ ಪ್ರಭಾವವನ್ನು ಬೀರುತ್ತದೆ. ಗುಣದ ಪ್ರಶ್ನೆ ಬಂದಾಗ ಜಾತಿಯೇ ಗೆಲ್ಲುತ್ತದೆ. ಆಗ ಪ್ರತಿನಿತ್ಯ ಈ ಜಾತಿಪದ್ಧತಿಯಿಂದ ಅನೇಕ ಪ್ರತಿಭಾವಂತರಿಗೆ, ಸಮರ್ಥರಿಗೆ ಅನ್ಯಾಯವಾಗುವದಿದೆ. ಈ ಬಗೆಯ ಅನ್ಯಾಯ ಮಾತ್ರ ಜಾತ್ಯಾತೀತವಾದುದು. ಪ್ರತಿಯೊಬ್ಬರೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಯೋಚಿಸುವ ಬದಲಾಗಿ ಆತ ಯಾವದೇ ಜಾತಿಯವನಾದರೂ ಆತ ಸಮರ್ಥನಿದ್ದಾನೆ ಅವನಿಗೆ ಅನ್ಯಾಯವಾಗಬಾರದು ಎಂದು ಯೋಚಿಸುವಂತಾಗಬೇಕು. ಖ್ಯಾತ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಈ ಜಾತಿಯ ಕುರುಡು ಮೋಹದ ಅಪಾಯವನ್ನು ಹೀಗೆ ಹೇಳಿದ್ದಾರೆ. ‘ಪ್ರಸ್ತುತ ಸಂದರ್ಭದಲ್ಲಿ ಒಟ್ಟು ಜನಸಂಖ್ಯೆಯ ತೀರಾ ಕಡಿಮೆ ಪ್ರಮಾಣದ ಬುದ್ಧಿಮತ್ತೆ ಮತ್ತು ಸಾಮರ್ಥ್ಯವನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೆವೆ, ಇದರಿಂದ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ವ್ಯಯವಾಗುತ್ತದೆ, ಅಲಕ್ಷಿತವಾಗುತ್ತಿದೆ ಇದು ಪರೋಕ್ಷವಾಗಿ ಅಪರಾಧವೂ ಹೌದು’ ಎಂದಿರುವದನ್ನು ನೋಡಿದರೆ ಜಾತಿಯಾಧಾರಿತ ಮಾನವ ಸಂಪನ್ಮೂಲದ ಬಳಕೆಯ ಬದಲಾಗಿ ಸಮರ್ಥತೆಯು ತಳಹದಿ0ು ಮೇಲೆ ಅದು ಸಾಧ್ಯವಾಗಬೇಕು. ಆದರೆ ಎಲ್ಲಿಯವರೆಗೆ ಜಾತಿ ಒಂದು ಪ್ರಬಲವಾದ ಸಾಮಾಜಿಕ ಸಂಸ್ಥೆಯಾಗಿರುತ್ತದೆಯೋ ಅಲ್ಲಿಯವರೆಗೂ ಈ ಬಗೆಯ ಅನ್ಯಾಯಗಳು ಸಾಮಾನ್ಯ.
ನನ್ನ ಮಟ್ಟಿಗಂತೂ ಜಾತಿ ಒಂದು ಅನಿವಾರ್ಯವಾದ ಸಂಸ್ಥೆ ಅಲ್ಲ. ಅದು ಅಪ್ಪ ನೆಟ್ಟ ಆಲದಮರದಂತೆ. ಅನೌಪಚಾರಿಕವಾದ ನಿರ್ಬಂಧಗಳ ಮೂಲಕ ವ್ಯಷ್ಟಿ-ಸಮಷ್ಟಿಯ ವರ್ತನೆಯನ್ನು ಹಿಡಿತದಲ್ಲಿಡಲು ಯತ್ನಿಸುವ ಜಾತಿ, ನನ್ನ ವೈಯಕ್ತಿಕ ಬದುಕಿನಲ್ಲಿ ನನಗೆ ಅನಿವಾರ್ಯವಾದ ತೊಡಕಾಗಿಲ್ಲ. ಸಾಮಾಜಿಕ ಕಟ್ಟಳೆಗಳ ಮೂಲಕ ಅದು ನಮ್ಮ ಆಹಾರ, ಸಂಪರ್ಕ, ಉದ್ಯೋಗ, ವಿವಾಹ ಮುಂತಾದವುಗಳನ್ನು ನಿಯಂತ್ರಿಸುತ್ತದೆಯಾದರೂ ಸದ್ಯದ ಸಂದರ್ಭದಲ್ಲಿ ಆ ನಿರ್ಬಂಧಗಳನ್ನು ಮೀರಿಯೂ ನಮ್ಮ ಆಯ್ಕೆ ಮತ್ತು ಅವಕಾಶಗಳಿರುವಾಗ ಜಾತಿ ಒಂದು ಅನಿವಾರ್ಯದ ಘಟಕವಾಗಿ ಉಳಿದಿಲ್ಲ. ನನ್ನ ಖಾಸಗಿ ಬದುಕನ್ನೇ ಒರೆಗೆ ಹಚ್ಚಿ ಮಾತನಾಡುವದಾದರೆ, ನಾನು ಅಂತರಜಾತಿಯ ಮದುವೆಯಾದವನು. ನನ್ನ ತಂದೆ-ತಾಯಿ ಇಬ್ಬರೂ ಓದು ಬರಹ ಅರಿಯದವರು. ಸ್ವತ: ಅವರಿಗೂ ಈ ಜಾತಿ ನನ್ನ ವಿವಾಹದ ಸಂದರ್ಭದಲ್ಲಿ ಅನಿವಾರ್ಯವಾಗಿ ಉಳಿಯಲಿಲ್ಲ. ಇನ್ನು ಉದ್ಯೋಗದ ಬಗ್ಗೆ ಮಾತನಾಡುವಾಗಲೂ ಜಾತಿ ಪ್ರತಿಯೊಬ್ಬನೂ ತನ್ನ ಕುಲ ಕಸುಬನ್ನೇ ಮಾಡಬೇಕೆಂಬ ಯಾವದೋ ಕಾಲದ ನಿರ್ಧಾರಗಳನ್ನು ವ್ಯಕ್ತಿಯ ಮೇಲೆ ಈಗ ಹೇರುವಂತಿಲ್ಲ. ಹಾಗೆ ಹೊರಟರೆ ನಾನು ಕೃಷಿಕನಾಗಿ ಕೆಲಸ ಮಾಡಬೇಕಿತ್ತು. ಹಾಗಾಗದೇ ನಾನು ಸಮಾಜಶಾಸ್ತ್ರದ ಅಧ್ಯಾಪಕನಾದೆ. ಅಲ್ಲಿ ಜಾತಿ ನನಗೆ ಅನಿವಾರ್ಯವಾಗಲಿಲ್ಲ. ಇನ್ನು ಆಹಾರದ ವಿಷಯದಲ್ಲಂತೂ ನನ್ನ ಹಾಗೆ ಬಹುತೇಕರಿಗೆ ಜಾತಿ ಒಂದು ಅನಿವಾರ್ಯದ ಸಂಸ್ಥೆಯಾಗಿ ಉಳಿದಿಲ್ಲ. ನಾನು ಮೂಲತ: ಜಾತಿಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವವನಾಗಿದ್ದರೆ ಸಸ್ಯಾಹಾರಿಯಾಗಿರಬೇಕಿತ್ತು. ಆದರೆ ನನ್ನ ಮನೆಯಲ್ಲಿ ಎರಡೂ ಬಗೆಯ ಆಹಾರಕ್ಕೂ ಅವಕಾಶವಿದೆ. ಇಷ್ಟೊಂದು ಸಡಿಲತೆಗಳನ್ನು ಪ್ರಾಯೋಗಿಕವಾಗಿ ನಾನು ಜಾತಿಯಲ್ಲಿ ಕಂಡುಕೊಂಡಿರುವದಿದೆ. ಅಷ್ಟಕ್ಕೂ ಅಮೂರ್ತವಾದ ಜಾತಿ ಪದ್ಧತಿ ವ್ಯಷ್ಟಿ-ಸಮಷ್ಟಿಯ ಬೇಕು-ಬೇಡಗಳನ್ನು ತೀಮರ್ಾನಿಸುವಷ್ಟರ ಮಟ್ಟಿಗೆ ಅದನ್ನು ಬೆಳೆಯಗೊಟ್ಟದ್ದೇ ತಪ್ಪು. ನನ್ನಂತವನಿಗೆ ಜಾತಿ ಕೇವಲ ಕೆಲವು ದಾಖಲೆಗಳನ್ನು ತುಂಬುವಾಗ ಮಾತ್ರ ಅನಿವಾರ್ಯವಾಗುತ್ತದೆ. ಆಗ ನನಗೆ ಇಷ್ಟವಿಲ್ಲದಿದ್ದರೂ ಜಾತಿಯ ಕಾಲಂ ನ್ನು ಭರ್ತಿ ಮಾಡುವ ಪ್ರಮೇಯ ಬರುತ್ತದೆ. ಅದನ್ನು ಹೊರತು ಪಡಿಸಿದರೆ ಜಾತಿ ನನ್ನ ಖಾಸಗಿ ಬದುಕಿನಲ್ಲಿ ನಗಣ್ಯ.
ಇನ್ನು ಜಾತಿಯಲಿ ಉಳಿಯುವಿಕೆಯ ಪ್ರಶ್ನೆ ಬಂದಾಗ ನಾನು ಯಾವ ಜಾತಿಯಲ್ಲಿ ಹುಟ್ಟಿರುವೆನೋ ಅದೇ ಜಾತಿಯಲ್ಲಿಯೇ ಮುಂದುವರೆಯುತ್ತೇನೆ. ಅದು ಪೂರ್ವನಿರ್ಧರಿತವೂ ಹೌದು. ಜಾತಿಯಲ್ಲಿ ಸ್ಥಿತ್ಯಂತರಗಳು ಇಲ್ಲವೆಂದಲ್ಲ, ಅದು ಗಮನಕ್ಕೆ ಬಾರದ ಕೂದಲೆಳೆಯ ಬದಲಾವಣೆ. ಜಾತಿಯನ್ನು ಬಿಡಬೇಕೆಂದು ನಾನು ಯೋಚನೆ ಮಾಡಿದ್ದೇ ಇಲ್ಲ. ಜಾತಿವ್ಯವಸ್ಥೆಯ ನಡುವೆ, ಕಮಲದ ಎಲೆಯ ಮೇಲೆ ಬಿದ್ದ ನೀರ ಹನಿಯಂತೆ ಯತಾರ್ಥವಾಗಿ ಇರುವದೇ ಒಳಿತು. ಜಾತಿಯನ್ನು ಬಿಡುವ ಮೂಲಕ ಸಾಧ್ಯವಾಗಬಹುದಾದ ಪರ್ಯಾಯ ಮಾರ್ಗಗಳೆಲ್ಲವೂ ಮತ್ತೆ ಕೇಂದ್ರ ವೃತ್ತಾಂತಕ್ಕೆ ಬಂದು ನಿಲ್ಲುವ ಅಪಾಯವಿರುವದರಿಂದ ನನ್ನ ಜಾತಿ ಯಾವುದಿದೆಯೋ ಅದರಲ್ಲಿಯೇ ಇರಲು ನಾನು ಇಷ್ಟಪಡುತ್ತೇನೆ. ಹಾಗೆ ಇರುವಾಗಲೂ ನನಗೂ ಒಂದು ಜಾತಿ ಇದೆ ಎನ್ನುವದರ ಅರಿವು ಸಾಧ್ಯವಾದಷ್ಟು ಬರಗೊಡದ ಹಾಗೆ ಬದುಕುವ ಯತ್ನ ನನ್ನದು. ಆ ದಿಶೆಯಲ್ಲಿ ನಾನು ನಿರಂತರವಾಗಿ ತಾಲೀಮು ಮಾಡುತ್ತಿದ್ದೇನೆ.
ಹೌದು. ನಂಬುಗೆಗೆ ಅನೇಕ ಸಂದರ್ಭಗಳಲ್ಲಿ ತಾಕರ್ಿಕತೆ ಇರುವದಿಲ್ಲ. ಜಾತಿ ಒಂದು ಸಾಮಾಜಿಕ ಸಂಸ್ಥೆ. ಅದು ಸಾವಿರಾರು ವರ್ಷಗಳಿಂದಲೂ ಒಂದು ಬಗೆಯ ಏಣಿ ಶ್ರೇಣಿ ವ್ಯವಸ್ಥೆಯನ್ನು ಅನುಸರಿಸಿಯೇ ಸಾಗಿ ಬಂದಿದೆ. ಇಲ್ಲಿ ಪ್ರಜ್ಞಾತೀತವಾಗಿ ನಮ್ಮ ನಮ್ಮ ಜಾತಿಯ ಬಗೆಗಿನ ಪ್ರಜ್ಞೆಗಳು, ಅಂದರೆ ಮೇಲರಿಮೆ ಮತ್ತು ಕೀಳರಿಮೆಯ ಭಾವನೆಗಳು ನಮಗೆ ಅಂತರ್ಗತವಾಗಿವೆ. ವಾಸ್ತವದಲ್ಲಿ ಜಾತಿ ನನ್ನಂಥವನಿಗೆ ಒಂದು ನಿಸ್ಪ್ರಯೋಜಕ ಆಚರಣೆ, ಅನುಸರಣೆಯಾಗಿ ಕಂಡುಬಂದರೂ ಮನದಾಳದಲ್ಲಿ ಜಾತಿಯ ಏಣಿಶ್ರೇಣಿಯ ಬಗೆಗೆ ಸ್ಪಷ್ಟವಾದ ತಿಳುವಳಿಕೆಯಿದೆ. ಅತ್ಯಂತ ಸೂಕ್ಷ್ಮವಾಗಿ ಕೆಲ ಸಂದರ್ಭಗಳಲ್ಲಿ ಅದು ನನ್ನನ್ನು ಹಿಡಿದು ಅಲ್ಲಾಡಿಸುವದಿದೆ. ಜಾತಿಯ ಸ್ಥಾನಮಾನಗಳ ಬಗೆಗಿನ ತಿಳುವಳಿಕೆ ತಲೆಮಾರುಗಳ ಮೂಲಕ ಸಾಗಿ ಬರುವ ಪರಂಪರೆಯ ಭಾಗವೇ ಆಗಿರುತ್ತದೆ. ಮೇಲು-ಕೀಳು ಎನ್ನುವ ವಿಚಾರ ನನಗಿಲ್ಲ ಎನ್ನುವದು ಜಾತಿವ್ಯವಸ್ಥೆಯ ಹೊರಗೆ ನಿಂತು ಮಾತನಾಡುವ ಒಂದು ಆದರ್ಶ ಹೇಳಿಕೆಯಾಗುವ ಅರಿವಿನ ಒಳಗೆ ನಿಂತು, ಯೋಚಿಸುತ್ತೇನೆ. ಆದರೆ ಅದನ್ನು ಪ್ರಮಾಣೀಕರಿಸಲಾರೆ. ಮೇಲು-ಕೀಳು ಎನ್ನುವ ಸಂಗತಿಗಳು ಜಾತಿಯಲ್ಲಿಯ ವಿಷಯನಿಷ್ಟ ಸಂಗತಿಗಳು. ಇವು ಇದ್ದೇ ಇವೆ.ಇವು ಆಯಾ ಜಾತಿಯ ವ್ಯಕ್ತಿಯ ಮನೋಭೂಮಿಕೆಗೆ ಸಂಬಂಧಿಸಿದೆ.







0 Comments