ತುಪ್ಪಾ ಚೆಲ್ಲಿ ತುಪ್ಪ ಬಳಕಣಾಂತ ಡಂಬಾರಿನ ರೋಡುಗಳಾಗ್ಯಾವು
– ಶಿವು ಮೊರಿಗೇರಿ
ಹಿಂದೊಮ್ಮೆ ನಾನು ಲೇಖನ ಬರದ ಕೂಡ್ಲೆ ಅದನ್ನ ನಮ್ಮ ಮುತ್ತಿಗಿ ಮಲ್ಲಿ ಪೇಸ್ ಬುಕ್ಕಿನ ಟೈಂ ಲೈನಿಗ್ಯ ಶೇರ್ ಮಾಡಿದ್ಯ. ಅದನ್ನ ಅವನು ಒಂದೆಲ್ಡು ದಿನ ಬುಟ್ಟು ನೋಡಿಕಂಡು ನನಿಗ್ಯ ಪೋನ್ ಹಚ್ಚಿದ್ದ. ನಾನು ಪೋನ್ ಎತ್ತಿಗಂಡು ‘ಏನಲೇ ಲೋಪರಾ ?’ ಅಂತ ಕೇಳತಿದ್ದಂಗನಾ ಅಕ್ಕಡೆಗಿದ್ದ ಅವನು ‘ಲೇ ಅರಾಮದಿ ಇಲ್ಲಲೇ ಲೋಪರಾ ?’ ಅಂದ. ಅದಕ್ಕ ನಾನಿದ್ದು, ‘ಯಾಕಪಾ ಮಗನಾ ಅರಾಮಿಲ್ಲಂದ್ರ ತೋರಸಂಗದಿಯೇನು ?’ ಅಂತ ಕೇಳಿದೆ. ಮಲ್ಲಿ ಈ ಮಾತಿಗೆ ‘ಊರಾಕ ಬಾರಲೆ ನಿನಿಗೈತಿ’ ಅಂದ. ಅವನ ಮಾತಿಗೆ ನಾನು ‘ ಲೇ ತಮ್ಮ, ನಾನೆನರ ಊರಾಕ ಬಂದು ನಿನ್ನ ಕಡಿಗೆ ಹಿಂಗ ಬೊಟ್ಟು ಮಾಡಿಬುಟ್ರ, ಬರೆ ನಿಮ್ಮ ತಂಗೇರ ನಿನ್ನ ಒದ್ದುಬುಡ್ತಾರ’ ಅಂದೆ ಅದಕ್ಕವನು ನನಗಿನ್ನಾ ದೊಡ್ಡ ದನಿಲೆ ‘ ಲೇ ನಮ್ಮ ತಂಗೇರು ನನ್ನ ಒದಿಯಾಕ ಬಂದ್ರ, ನಿಮ್ಮ ತಂಗೇರು ನನ್ನ ಬಿಡಿಸಿಗಣಾಕ ಬರ್ತಾರೊಗಲೆ’ ಅಂತ ಜೋರಾಗಿ ನಕ್ಕ. ವರಸೇಲಿ ನಾವಿಬ್ರು ಅಳಿಯ ಮಾವ ಅಕ್ಕೀವಿ.ನಮ್ಮಿಬ್ಬರ ನಡುವಿ ಇಂಥಾ ಸಲುಗಿ ತೀರಾ ಕಾಮನ್ನು. ಚೂರು ನಗು ಕಮ್ಮಿ ಮಾಡಿದ ಮಲ್ಲಿ ‘ಲೇ ಯಪ್ಪಾ ಅವತ್ತು ನಾನೂ ಮೇಘ ಜಗಳ ಮಾಡಿಕಂತ, ಮಾಡಿಕಂತ ತೀರಾಬರಾ ನಮ್ಮಕಡೀ ಸಂಸ್ಕೃತಗಳನ್ನ ಜಗ್ಗು ಬಳಿಸಿದ್ವಿ. ಚೂರು ನೋಡಿ ಬರಿಯಪೋ, ಇಲ್ಲಾಂದ್ರ ನನ್ನ ಮಾನ ಮರ್ಯಾದಿನಾ ಮದ್ಯಾಹ್ನಕ್ಕಾ ಅಂಗಳದಾಗ ಹರಾಜಿಗಿಟ್ಟಿ ನೀನೇನು’ ಅಂದ ಅದಕ್ಕ ನಾನು ‘ ಇಷ್ಟು ಭಯ ಇಂಟ್ಕಂಡಿರು ಮಗನಾ’ ಅಂದಾಗ ಚೂರು ಸೀರಿಯಸ್ಸಾದ ಧ್ವನಿ ಎತ್ತಿದ ಮಲ್ಲಿ, ‘ ಶಿವ್ವಾ ಆದ್ರೂ ನೀನು ಅಂದ್ಕಂಡಿದ್ದು ಬುಡಲ್ಲ ಬಿಡಲೇ’ ಅಂದ. ಈ ಒಂದು ಮಾತಿನ ಹಿಂದೆ ಯಾವತ್ತಾದ್ರೂ ಎಲ್ಲರೆದಿರೂ ಹೇಳಿಕನಾಂತ ನೂರಾರು ಕತಿಗಳದಾವು. ಯಾರೆದಿರೂ ಹೇಳಿಕಣಲಾರದಂಥಾ ಸಾವಿರಾರು ನೋವುಗಳು ಅದಾವು. ಅದುಬುಡ್ರೀ ವಿಷಯ ಬ್ಯಾರೆನೆ.
ಅವತ್ತು ಯಾವಾಗ ಮೇಘ ಹಿಂದಕ್ಕ ಹೊಲದ ತುಂಬಾ ತಿಪ್ಪಿ ಗೊಬ್ಬರನಾ ಕಾಲಾಡಿ ಬೆಳಿತಿದ್ರಲ್ಲಾ ಅವಾಗ ಬೆಳಿ ಹೆಂಗ ಬರಾದು ? ನೀನು ಮುಂದುವರಿಯಾಕು ಅಂತ ಕಂಪನಿ ಇಸಗೊಬ್ಬರಾ ತಂದು ಹಾಕಿದ್ರ್ಯಲ್ಲ, ಅವಾಗ ಬೆಳಿ ಹೆಂಗ ಬರಾಕತ್ತೀದ್ವು ? ಬೇಕಾರ ಸಾಕ್ಷೀನ ಶಿವ್ವಾರ ಅಮ್ಮನ್ನಾ ಕರದುಬುಡಾನು ಅಂತೇಳಿ ಕೆಣಕಿದ್ದನೋ ನಾವು ಬಾಳ ಮುಂದುವರಿಯಾಕತ್ತೀವಿ ಅನ್ನಾ ನಂಬಿಕಿನಾ ವಾದ ಮಾಡಕತ್ತಿದ್ದ ಮುತ್ತಿಗಿ ಮಲ್ಲಿ. ಮೇಘನ ಕಡಿಗೆ ತಿರುಗಿ ‘ ಲೇ ಬೋಸುಡಿಕೆ ನಿಮ್ಮ ಬ್ಯಾಳಿ ಬೇಸಿಕಣಾಕ ಪಾಪ ಮೂಕ ಬಸವಣ್ಣಗಳ ಜೀವಾ ತಿಂತಿದ್ರಲ್ಲಲೇ ಕೆಟ್ಟ ಬಿಸಲಾಗ ಗಳೇವು ಹೂಡಿಕಂಡು ?’ ನೋಡೀಗ. ಐವತ್ತೆಕ್ರಿ ಹೊಲನೂ ಒಂದಾ ದಿನಕ್ಕಾ ವಾಣಾ ಮಾಡಾ ಮಿಷಿನ್ ಕಂಡು ಹಿಡದೀವಿ’ ಅಂತ ಅನ್ನತಿದ್ದಂಗನಾ ಮೇಘ’ ಲೇ ತಮ್ಮಾ ಎತ್ತು ಹೊಗಿ ಉಗಳಂಗಿಲ್ಲ, ಟ್ಯಾಕ್ರಿ ಸಗಣಿ ಹಾಕಂಗಿಲ್ಲ, ಅರುವಿಟ್ಟಗಳಾ ಒಂದೀಟು’ ಅಂತ ಮಲ್ಲಿನ ಕೊಡವ್ಯಾ ಬುಟ್ಟ.
ಆದ್ರ ಮಲ್ಲಿ ವಾದದಿಂದ ಹಿಂದಕ್ಕ ಸರಿಯಾಕ ಇಷ್ಟನಾಪಡಲಿಲ್ಲ. ಮತ್ಯ ಟಗರಿಗೆ ಟಗರು ಕೊಂಬು ಕೊಟ್ಟಂಗ,ಮಾತು ಚಾಲೂ ಮಾಡಿದ. ‘ ಥೂ ಗಬ್ಬು ಸುಳೆಮಕ್ಳಾ, ಏನು ವಲ್ಸ್ ಜೀವನ ಮಾಡತಿದ್ರಲೇ ಯಪ್ಪಾ ಕಗ್ಗಾನ ಕತ್ಲಾಗ, ಬುಡ್ಡಿ ದೀಪ ಹಚ್ಚಿಗಂಡು’ ಅಂದುಬುಟ್ಟ.ಇಷ್ಟು ಸಾಕಿತ್ತು ಮೇಘಗ ಮಲ್ಲಿನ ಹಿಡಕಂಡು ಗಾಬು ತೆಗಿಯಾಕ ಅಂದ್ರ ವಾದದೊಳಗ ಮಲ್ಲಿನ ಸೋಲಿಸಾಕ ಅಂತ ಅರ್ಥ. ಮೇಘ ಇಷ್ಟಗಲಾ ಕಣ್ಣು ಬುಟ್ಟಕಂಡು ತನ್ನ ಅಂಗಿ ತೋಳು ಏರಿಸಿ, ಚಿಟಿಕಿ ಹೊಡದು, ಮಲ್ಲಿನಾ ನೋಡಿಕಂತ, ‘ ಹ್ಞಾಂ… ಹಿಂಗ ಬಾ ಮಗನಾ ದಾರಿಗ್ಯ. ಏನು ಬೊಗಳಿದೆಪ್ಪಾ ? ಬುಡ್ಡಿ ದೀಪದಾಗ ನಾವು ಗಬ್ಬು ಜೀವನ ಸಾಗಿಸಿದ್ವಿ ಅಲ್ಲಾ ? ಹಂಗಾರಹಿಂದಕ್ಕ ಅಂದ್ರ ಬಾಳ ದೂರ ಏನಲ್ಲಾ ಬರೇ ಹದಿನೈದು ವರ್ಷದಿಂದೆ, ನಾವೆಲ್ಲಾ ಬೇನ ಕಡ್ಡೀಲೋ, ಆಲದ ಮುಗುಳೀಲೋ, ಇಲ್ಲಾಂದ್ರ ಬೇವಿನ ಕಟಿಗಿ ಸುಟ್ಟಿರಾ ಇದ್ಲೀನೂ, ಗಡಿಗಿ ಒಳಗಿನ ಉಪ್ಪನ್ನೂ ಮನಿ ಹೊರಗಿನ ದೊಡ್ಡ ಕಡಪಾದರಿ ಮ್ಯಾಗ ಬೇಸಿ, ಸಣ್ಣೆಗಿ ಅರದು, ಜಲ್ಡಿ ಹಿಡಿದು, ಸೇರುಗಟ್ಟಲಿ ಡಬ್ಬ್ಯಾಗ ಪುಡಿನ ತುಂಬಿಟ್ಕಂಡು, ದಿನಾ ಮುಂಜಲೆ ಹಲ್ಲು ತಿಕ್ಕಿದ್ರ ನಮ್ಮ ಹಲ್ಲುಗಳ ಮುಂದೆ , ಚಂದಪ್ಪನ ಬೆಳದಿಂಗಳ್ಯಾಕಾ ಒಂದೀಟು ಕರ್ರಗ ಕಾಣತಿತ್ತು.
ಅರವತ್ತೆಪ್ಪತ್ತು ವರ್ಸಾದ್ರೂ ನಮ್ಮ ಯಜಮಾನ್ರ ಹಲ್ಲುಗಳು ಕಲ್ಲು ಇದ್ದಂಗದಾವು. ಆದ್ರ ಈಗ ? ನಿನ್ನಂಥಾ ಮುಂದುವರಿಯಾಕು ಅನ್ನಾ ಧಕ್ಲಾರಗಳು ಇರ್ತಾರಲ್ಲ ‘ಹೊಟ್ಟಿಗ್ಯ ಹಿಟ್ಟು ಇಲ್ಲದಿದ್ರೂ ಜುಟ್ಟಿಗೆ ಮಲ್ಲಿಗಿ ಹೂ ಬೇಕನ್ನಾರು’ ಅದ್ಯಾವದ್ಯಾವದಾ ಕಂಪನಿಯಾರು, ನಿಮ್ಮ ಹಲ್ಲುಗಳಲ್ಲಿ ರಕ್ತ ಬರತೈತಾ ? ನಿಮ್ಮ ಗೆಣತಿ ಕುಂದ್ರದಾಕೈತಾ ? ಹಲ್ಲುಗಳ ಸಂದ್ಯಾಗ ಕಣ್ಣಿಗ್ಯ ಕಾಣಲಾರದಂತಾ ಹುಳಾ ಇರತಾವು ಅಂತ ಏನೇನೋ ಸುಳ್ಳಪಳ್ಳ ಹೇಳಿ ನಿಮ್ಮ ಹಲ್ಲಿನೊಳಗೆ ಕ್ಯಾಲಿಸಿಯಮ್ಮು, ವಿಟಮಿನ್ನು, ಇಂಗಾಲದ ಡೈ ಆಕ್ಸೈಡು, ಹೆಚ್ ಟು ಓ , ಎಲ್ಲ ಕಡಿಮಿ ಆಗಿದೆಯಾ ? ಹಂಗಾದ್ರೆ ನಮ್ಮತ್ರ ಅದಕ್ಕ ಔಷದಿ ರೆಡಿ ಐತಿ ಅಂತೇಳಿ ಸತ್ತ ಹೆಣದ ಎಲುಬಿನ ಪುಡಿನೂ, ಸೀ ಸೀ ಮುಲಾಮು ತೋರಿಸಿಬುಡ್ತಾರ, ಮಕ್ಳು ನೀವು ಅದನ್ನಾ ಕಾದಕಂತ ಕುಂತಿದ್ವೇನಾ ಅನ್ನಂಗ ಅಂಗಡಿಗೆ ಒಂದಾ ಹುಸಿರೀಗೆ ಓಡಿ ಹೋಗಿ ಅವನ್ನ ತಗಂಬಂದು ಅಂಗಳದಾಗ ನಿಂತಗಂಡು ಪುರುಕು ಪುರುಕು ಹಲ್ಲು ತಿಕ್ಕಕ ಚಾಲೂ ಮಾಡ್ತಿರಿ. ನೀವು ಯವಾಗ ಹಿಂಗ ಮಂಗಾಟ ಮಾಡಕತ್ತಿದ್ರೋ ಅರವತ್ತು ವರ್ಸ ತಾಳಿಕಿ ಬರೋ ಹಲ್ಲು ಆರು ತಿಂಗಳಿಗೇ ಮಠ ಸೇರಕತ್ತೀದ್ವು ಹೊಗಲೇ’ ಅಂತ ಅಂದಕೋತ ಮಲ್ಲಿ ಮಖಾ ನೋಡಿದ್ರ ಪಾಪ ಅವನ ಮಖಾ ಅನ್ನಾದು ಮೂರು ದಿನಾ ಕೂಳು ಸಿಗಲಾರದ ಬೆಕ್ಕಿನ ಮಖಾ ಆದಂಗ ಆಗಿತ್ತು.
ಅವನು ತಲಿ ತಗ್ಗಿಸಿಕಂಡು ಮೇಘ ಹೇಳದ್ಕ ಏನಪ್ಪಾ ಉತ್ರ ಕೊಡಾಕು ? ಅಂತ ಭಾಳ ಚಿಂತಿ ಮಾಡಕತ್ತಿದ್ದ ಅನ್ನಂಗ ನನಿಗ್ಯ ಕಾಣಕತ್ತಿತ್ತು. ಮಲ್ಲಿಯ ಸಪ್ಪಿ ಮಾರಿ ನೋಡಿದ ಕೂಡ್ಲೆ ಮೇಘ ಮತ್ತೋಟು ದೊಡ್ಡ ಉಸುರು ಒಳಾಕ ಎಳಕಂಡು ಮತ್ಯ ಮಾತು ಮುಂದುವರಿಸಿದ. ‘ ಈಗ ಇಟ್ಟೊತ್ತು ಹೇಳಿದ್ದೂ ಒಂದು ಕಡಿಗೆ ಬುಡು ಮಲ್ಲಿ, ಆಮ್ಯಾಲೆ ಅದೇನಾ ಅಂದೆಲ್ಲಲೇ ? ಹಿಂದಿನ ಜನ ಗಬ್ಬು ನಾತ ಹೊಡಿತಿದ್ರ ? ದಿಕಿ ದಿಕಿ ವದಿಯಲ್ಲೇನಪ್ಪಾ ನಿನ್ನ ಹಿಡಕಂಡು ? ಹಿಂದಿನ ಕಾಲದಾಗ ಹಗಲೆಲ್ಲಾ ತಲಿಕೆಟ್ಟ ಬಿಸಲಾಗ ಮೈಯೆಲ್ಲಾ ಜಲ ಜಲ ಬೆವಿಯಂಗ ಕೆಲ್ಸ ಮಾಡಿದ್ರೂ ಟೈಂ ಸಡುವು ಸಿಕ್ಕಾಗ ಕೆರಿ, ಕಟ್ಟಿ, ಬಾವಿ, ಹಳ್ಳ, ಗೋಕಟ್ಟಿ, ಹೊಳಿ ದಂಡಿ, ಹೊಂಡಗಳ ನೀರಿಗೆ ಹೋಗಿ ಬಿದ್ದು ಮೈಯಾಗಳ ನರಗಳೆಲ್ಲ ಸಡ್ಲ ಆಗಂಗ ಮನಾರ ಈಚು ಹೊಡದು ಸಾಕಾಗಿಂದೆ ದಂಡಿಗೆ ಬಂದು ಕುಂತು ಅಲ್ಲೆ ಎಲ್ಲೆರ ಬಿದ್ದಿರಾ ಚೊಲೋದೊಂದು ಗೊರಪಿಗಲ್ಲು ತಗಂಡು ಬೇಸಿ, ಮೈಗೆ ಹಾಕ್ಕಿ ತಿಕ್ಕಂಬಿಟ್ರ ಚರ್ಮ ಅನ್ನಾದು ಬಂಗಾರದಂಗ ಮಿರಿ ಮಿರಿ ಮಿಂಚತಿತ್ತಂತೆ. ಅಲ್ಲಿಂದ ತಿರುಗು ಹದಿನೈದು ದಿನ ಮಕ್ಳು ಮೈ ಅಂತಿದ್ದಿಲ್ಲಂತ್ಯ, ಆದ್ರ ಇವತ್ತು ಏನಾಗೈತಪ್ಪಾ ಬೋಸುಡಿಕ್ಯ ? ನಮ್ಮ ಮೈ ಮ್ಯಾಗೆಲ್ಲಾ ಹುಳಾ ಅದಾವಂತೆ ಅದಕ್ಕ ನಾವು ಅದೆಂತದಾ ನೊರಿಬಿಲ್ಲಿ ಹಾಕ್ಕೆಂಡು ಬುರು ಬುರು ಬುರುಗೆಬ್ಬಿಸಿಗಂಡು ಮ್ಯಾಗಾ ಮ್ಯಾಗ ಮೈ ತ್ವಕಣಾಕಂತ್ಯ. ಮತ್ಯ ಅದ್ರಾಗ ದಿನಾ ದಿನಾ ಮೈ ತ್ವಕಂಡ್ರ ಹುಳ ಬರಲಂತ್ಯ ಬೆವರೂ ಬರಲ್ಲಂತ್ಯ.. ಏನು ಕಣ್ಣೀಗೆ ಮಣ್ಣು ಹುಗ್ಗತೀರಲೇ ಯಪ್ಪಾ…
ಅಲ್ಲಲೇ ಮಲ್ಲಿ ಏನಾ ಗೊತ್ತಿಲ್ದ ಒಂದು ಮಾತು ಕೇಳತಿನಿ, ದಿನಾ ದಿನಾ ಮೈ ತ್ವಕಣಾಕ ನಾವೇನು ಮೈ ಮ್ಯಾಗೇನು ದನ ಕಟ್ಟಿಗಂಡಿವೇನಲೇ ? ಮದ್ಲು ನಿಮ್ಮ ತಲಿ ಕೂದ್ಲ ಉದರಾಕತ್ಯಾವು ನೋಡ್ರೀ, ನೋಡಿದ ಅಕ್ಕಪಕ್ಕದಾರು ಏನು ತಿಳಕಂತಾರ ? ನಿಮಿಗ್ಯ ಬೇಜಾರಾಗಲೇನ್ರೀ ? ಅಂತ ಮದ್ಲು ತಲ್ಯಾಗ ಇಲ್ಲದ್ದ ತುಂಬತಾರ, ಆಮ್ಯಾಲ, ಕೂದಲ ಉದುರಿದ್ರ ನೀವೇನೂ ಚಿಂತಿ ಮಾಡಬ್ಯಾಡ್ರಿ ಅದಕ್ಕ ನಮ್ಮತ್ರ ಔಷಧಿ ಐತಿ ಅಂತ ಅವರ ಚೀಲದಾಗಿನ್ನ ಸಣ್ಣ ಸಣ್ಣ ಪ್ಲಾಸ್ಟಿಕ್ ಪಕೇಟ್ ಗಳನ್ನ ತೆಗಿತಾರ.ನಮ್ಮ ರ್ವಕ್ಕನ ಅವರ ಚೀಲದಾಗ ತುಂಬಿಕಂಡು ಹೊಕ್ಕಾರ. ಹಿಂದಿನ ಕಾಲದಾಗ ಇದು ಯಾದರಾ ಸುದ್ದಿ ಇತ್ತೇನಲೇ ? ಶಿಸ್ತು ಹೊಟ್ಟಿತುಂಬ ಉಂಡು ಕಣ್ಣು ತುಂಬಾ ಉಂಡು, ಒಳ್ಳೇ ಗರಡಿ ಮನ್ಯಾಗ ಸಾಮು ಹಾಕಿದ ಪೈಲ್ವನರು ಇದ್ದಾಂಗ ಇರತಿದ್ರು…’ ಹಿಂಗ ಮೇಘ ತನಿಗಿದ್ದ ಅಷ್ಟು ಇಷ್ಟು ಮಾಹಿತಿನೆಲ್ಲಾ ಮಲ್ಲಿ ಎದಿರಿಗ್ಯ ಹೇಳಿ ನನ್ನ ಕಡಿ ಒಮ್ಮಿ ನೋಡಿ ನಕ್ಕುಬುಟ್ಟ.
ಅವಾಗ ನಾನು ಮೇಘನ ಕಡಿಗ್ಯ ತಿರುಗಿ ‘ ಸಾಕು ಹೋಗಲೇ ಮೇಘ ಗಂಟಲ ಒಣಗೈತೇನಾ ಈಸು ನೀರು ಕುಡಿ ಹೋಗು’ ಅನ್ನಾಕತ್ತಿದ್ಯ ಮಲ್ಲಿಗೆ ಸಿಟ್ಟು ಜಾಸ್ತಿ ಆಗಿ ‘ ಎಲ್ಲಿಗೆ ಹೊಕ್ಕಿ ಬಾರಾ ಮಗನಾ, ಅರ್ದಂಬರ್ಧ ಮಾತಾಡಿ ಎದ್ದೋದ್ರ ಸೋತೆ ಅಂತ ಒಪ್ಪಿಗ್ಯ.ನಾನು ಏನಾ ಹೋಗಲಿ ಪಾಪ ಹೊಟ್ಟಿಕಿಚ್ಚಿಗೆ ಏನಾ ಮಾತಾಡ್ತಾನ ಅಂತ ಸುಮ್ಮನಿದ್ರ ನೀನೂ ತೀರಾಬರಾ ಮಾತಾಡಿದಿ ಬಾರಲೇ, ಅಂತ ಹೇಳಿಕಂತ ‘ ಏನಾ ಬೊಗಳಿದಲ್ಲಾಲೇ ಈಗ ? ನಿಮ್ಮ ಕಾಲದಾಗ ಗರಡಿ ಮನ್ಯಾಗ ಸಾಮು ಮಾಡಿದ ಪೈಲ್ವಾನರು ಇದ್ದಂಗ ಇದ್ರಾ ? ಇವತ್ತಿನ ಕಾಲದಾಗ ಬರೀ ಒಂದು ಗುಳುಗಿ ತಗಂಡ್ರ ಸಾಕು, ನೀನು ಗರಡಿ ಮನಿಗೆ ಹೋಗಾದೂ ಬ್ಯಾಡ, ತಾಲೀಮನಿಗೂ ಹೋಗಾದು ಬ್ಯಾಡ. ಬೀಮಗಿಂತ್ಲೂ ದಪ್ಪ ಅಕ್ಕಾರ ಅದು ಗೊತ್ತಾ ನಿನಿಗ್ಯ ? ಹಿಂದಿನ ಕಾಲ ಬೇಸಿತ್ತು ಹಿಂದಿನ ಕಾಲ ಬೇಸಿತ್ತು ಅಂತಿಯಲ್ಲಪಾ, ನೆಟ್ಟಗ ನಿಮ್ಮ ಮಗ್ಗಲ ಊರಾಗ ಎಷ್ಟು ಮನಿಗುಳು ಅದಾವನ್ನದು ನಿಮಿಗ್ಯ ಗೊತ್ತಿತ್ತೇನಲೇ ಅಡ್ನಾಡಿ. ಇವತ್ತು ನೋಡು ಈ ಜಗತ್ತಿನಾಗ ನೀನು ಯಾವ ದೇಶದಾಗ ಯಾವ ಮೂಲಿ ಮನಿ ನೋಡಬೇಕು ಅಂತ ಹೇಳು ಕಣ್ಣು ಮುಚ್ಚಿ ಕಣ್ಣು ಬುಡಾದ್ರಾಗ ನಿನ್ನ ಕರಕಂಡು ಹೋಗಿ ಮನಿ ತೋರಿಸಿ ಮತ್ಯ ಹೊಳ್ಳಿ ಕರಕಂಡು ಬರತಾರ.
ನಿಮ್ಮ ಕಾಲದಾಗ ಹಿಂಗಿತ್ತೇನು ಹೇಳಿಗ ? ಬಂಡಿ ಹೂಡಿಕಂಡು ಆಳುಗಟ್ಟಲೆ ಗುಂಡಿ ತುಂಬಿದ ಹಾದ್ಯಾಗ ಹೊಲಕ್ಕ ಹೊಕ್ಕಿದ್ರಿ. ಈಗ ? ತುಪ್ಪಾ ಚೆಲ್ಲಿ ತುಪ್ಪ ಬಳಕಣಾಂತ ಡಂಬಾರಿನ ರೋಡುಗಳಾಗ್ಯಾವು. ನಿಮ್ಮಣೆಬರಕ್ಕ, ಸತ್ತದ್ದು ಕೆಟ್ಟದ್ದು ಸುದ್ದಿ ಮುಟ್ಟಿಸಾಕ ಒಂದಾಳಿನ ಜೀವ ತಿಂತಿದ್ರಿ. ಈಗ ಅಂಗೈಯಾಗ ಲೋಕ ಕುಂತೈತಿ. ಎಂಥೆಂತಾ ಸಿನಿಮಾ, ನೋಡತಿಯಲೇ ನೀನು ? ಇವತ್ತಿನ ಕಾಲದಾಗ ಮನಿಸ್ಯಾಗ ಬೇಕ್ಕಾದ್ ಕಾಯಿಲಿ ಬರ್ಲಿ ಹಾರ್ಟಿಗೆ ಹಾರ್ಟನ್ನ ಕಿತ್ತು ಚೋಲೋ ಹಾರ್ಟ್ ಜೋಡಿಸಿ ಬದಸಿಕೋತಾರ. ಬರೇ ಒಂದು ಇಲಿ ಸತ್ರ ಊರು ಬಿಟ್ಟು ಹೊಕ್ಕಿದ್ರಲ್ಲಲೇ ಲೋಪರಾ ಮಾತಾಡೀಗ ಅಂತ ಮತ್ತೊಂದು ಚಾಲೆಂಜನ್ನ ಮೇಘಗ ಹೊಗದು ನನ್ನ ಕಡಿ ನೋಡಿದ ಮಲ್ಲಿ ‘ ಶಿವಾ ಆ ಸ್ಟವ್ವು ಇಲ್ಲಿಗೆ ತಾ ಇಲ್ಲಿ ಇಲ್ಲೆ ಚಾ ಮಾಡಾನು, ಮಾತಾಡ್ಲಿ ಈ ಹಲ್ಕಟ್ಟ. ಅಂತ ಹೇಳಿಕಂತ ತಾನಾ ಎದ್ದು ನಮ್ಮ ಅಡಗಿ ಮನಿಗೋಗಿ ಸ್ಟೌ ತಗಂಡು ಬಂದು ಪಡಸಾಲ್ಯಾಗಿಟ್ಟು ಸ್ಟೌ ಹಚ್ಚತಿದ್ದಂಗನಾ ಮೇಘ ಎದ್ದೋಗಿ ಸಕ್ರಿ, ಪುಡಿ, ಹಾಲು, ನೀರು, ದಬರಿ ಎಲ್ಲ ತಂದು ಮಲ್ಲಿಗೆ ಕೊಟ್ಟು ಕುಂತ. ‘ಉಸುರು ಬುಡಲೇ ಲೋಪರಾ ಅಂತ’ ಮಲ್ಲಿ ಮತ್ಯ ಮೇಘನ್ನ ಕೆಣಕಿದ. ಮತ್ಯ ಮುಂದುವರಿದು ನನ್ನ ನೋಡಿಕಂತ ‘ ನೋಡಲೇ ಶಿವ್ವಾ ನಿಮ್ಮ ತಮ್ಮ ಹೆಂಗ ಸುಮ್ಮನ ಕುಂತಾನ ಗುಮ್ಮನ ಗುಸುಗನಂಗಾ . ಉಸುರು ಬಂದ್ರಲ್ಲಾ ? ಗಾಂಜಲಿ ಮಾಡ್ತಾನ ಹಂಗ ಅನ್ನತಿದ್ದಂಗನಾ ಮೇಘ ಕೆಕ್ಕರಿಸಿಗಂಡು ಮಲ್ಲಿಕಡಿಗೆ ತಿರುಗಿ ನೋಡಿ….
ಊಹ್ಞೂಂ… ಜಗಳ ಈ ವಾರಾನೂ ಬಗೆಹರಿಲಿಲ್ಲ. ಮುಂದಿನ ವಾರಕ್ಕ ಮುಗಿಸೇತಿರತೀನಿ ಬುಡ್ರಿ.






ha ha good one
ಪರ್ವಾಗಿಲ್ಲ ಅನ್ನಂಗಿದೆ ಸುನಿಲ್…