ಈ ಬಾರಿ ನಾನು ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರಕ್ಕೆ ಮಾರ್ಚ್ ಮೂರನೆಯ ವಾರದಲ್ಲಿ ಬಂದ ದಿನವೇ ಇಲ್ಲಿ ವಸಂತಕಾಲದ ಆಗಮನವಾಗಿತ್ತು. ಹಿಮದ ಮತ್ತು ಚಳಿಯ ಹೊಡೆತ ತಿಂದು ಮುದುರಿಕೊಂಡು ಮಲಗಿದ್ದ ಮರಗಿಡಗಳು ಚಿಗುರಲು ತೊಡಗಿದವು, ಮೊಗ್ಗುಗಳು ಅರಳಿ ಹೂಗಳು ಕಣ್ಣು ಬಿಡುವ ಸಂಭ್ರಮದಲ್ಲಿ ಇದ್ದುವು. ‘ಸ್ಪ್ರಿಂಗ್’ ಎಂದರೆ ಚಿಮ್ಮುವ ಚಿಗುರುವ ಅರಳುವ ಕಿಲಕಿಲ ನಗುವ ಉಲ್ಲಾಸದ ಸಲ್ಲೀಲೆಯನ್ನು ಹರಡುವ ಕಾಲ.
ಆಕಸ್ಮಿಕವಾಗಿ ಕರ್ನಾಟಕದ ವಸಂತಕಾಲದ ವರ್ಣನೆಯನ್ನು ವ್ಯೂರ್ತ್ಸ್ ಬುರ್ಗ್ ನಲ್ಲಿ ವಿವರಿಸುವ ಸಂದರ್ಭ ಒದಗಿಬಂತು.
ಈ ಬಾರಿಯ ಕನ್ನಡ ಬೇಸಗೆ ಶಿಬಿರದ ವಿಷಯ ‘ಹಳಗನ್ನಡ ಸಾಹಿತ್ಯ’ ಇದರಲ್ಲಿ ಪಂಪಭಾರತ, ಗದಾಯುದ್ಧ , ಕರ್ನಾಟಕ ಕಾದಂಬರಿಗಳ ಜೊತೆಗೆ ಜನ್ನನ ‘ಯಶೋಧರ ಚರಿತ’ವನ್ನು ಪಾಠಕ್ಕೆ ಬಳಸಿಕೊಂಡೆ.
ಅದರಲ್ಲಿ ನಾನು ಆಯ್ದುಕೊಂಡದ್ದು ವಸಂತಕಾಲದ ಆಗಮನದ ವರ್ಣನೆ ಮತ್ತು ಚಂಡಮಾರಿ ಗುಡಿಯ ಚಿತ್ರಣ. ಅಲ್ಲಿ ಸಿರದ ಗಾಳ, ಉರಿಯ ಉಯ್ಯಲೆ, ಮೂದಲೆಯ ಉಲಿಗಳ ಬಗ್ಗೆ ಹೇಳಿ, ‘ಬಸಂತನು ಸಿಸಿರಮನೆ ಪಿಡಿದು ಪರಕೆಗೆ ಅಲರ್ವೋದ ಮಾವಿನ ಅಡಿಮಂಚಿಕೆಯೊಳ್ ಕುಸುರಿದರಿದ ಅಡಗಿನಂತೆ… ‘ಎಂಬ ಚಿತ್ರಣ ಕೊಟ್ಟಾಗ ಯುರೋಪಿಯನ್ ಶಿಬಿರಾರ್ಥಿಗಳು ಬೆಕ್ಕಸಬೆರಗಾದರು.
ಫ್ರಾನ್ಸ್ ನ್ ಲಿಯೋನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಕ್ರಿಸ್ಟಿನ್ ಚೊಯ್ ನಕಿ ಅವರಂತೂ ವಿಹ್ವಲರಾಗಿ, ವಸಂತ ಇಷ್ಟೂ ಕ್ರೂರಿಯೇ ಎಂದು ಉದ್ಗಾರ ತೆಗೆದರು. ನಾನು ಅವರಿಗೆ ಜನ್ನನ ಪರಿಭಾಷೆಯಲ್ಲಿ ಸಾಂತ್ವನ ಹೇಳಿದೆ : “ಅಭೀತೆಯಾಗಿರಿ ತಾಯೆ. ಜನ್ನ ಚಂಡಮಾರಿಯನ್ನೇ ಅಹಿಂಸಾ ದೇವತೆಯನ್ನಾಗಿ ರೂಪಾಂತರಿಸುತ್ತಾನೆ; ಹಿಂಸೆಯ ಬರ್ಬರತೆಯ ದರ್ಶನಕ್ಕಾಗಿ ಮತ್ತು ಅದರಿಂದ ನಿರಸನಕ್ಕಾಗಿ ವಸಂತನನ್ನು ಹಾಗೆ ಆತ ರೂಪಕವಾಗಿ ಬಳಸಿದ”.
ವ್ಯೂರ್ತ್ಸ್ ಬುರ್ಗ್ ನಲ್ಲಿ ಏಪ್ರಿಲ್ ಆರಂಭದಿಂದಲೇ ಮೋಡ ಕವಿದ ವಾತಾವರಣ. ಸೂರ್ಯನ ಸುಳಿವಿಲ್ಲ ; ಚಂದ್ರನ ಪತ್ತೆ ಇಲ್ಲ. ಶಿಶಿರ ಬಿಟ್ಟುಹೋದ ಅವಶೇಷಗಳ ಹಂಗು ಮತ್ತು ಗುಂಗಿನಲ್ಲಿ ಸೂರ್ಯ ಚಂದ್ರರಿಗೆ ಒಡ್ಡೋಲಗ ಇಲ್ಲ.
ಹೀಗೆ ಹೊತ್ತು ಕಳೆಯುತ್ತಾ ಇರುವಾಗ ಏಪ್ರಿಲ್ ೧೧ ರಂದು ಬಂತು ವ್ಯೂರ್ತ್ಸ್ ಬುರ್ಗ್ ನಲ್ಲಿ ಹುಣ್ಣಿಮೆಯ ದಿನ. ಅದೃಷ್ಟವೆಂದರೆ ಈ ದಿನ ಸೂರ್ಯ ರಂಗಸ್ಥಳಕ್ಕೆ ಬಂದಿದ್ದಾನೆ . ಜನರು ಮನೆಮಾರು ಸಹಿತ ತೇರಿಗೆ ನೆರೆವಂತೆ ಬೀದಿಗೆ ಬಂದಿದ್ದಾರೆ. ಇಲ್ಲಿನ ಮುಸ್ಸಂಜೆಯ ಹೊತ್ತು ಸೂರ್ಯ ತನ್ನ ಕೆಲಸ ಮುಗಿಸಿ, ಮನೆಗೆ ಹೋದೊಡನೆಯೇ ಆಶ್ಚರ್ಯವೆಂಬಂತೆ ಹುಣ್ಣಿಮೆಯ ಪೂರ್ಣಚಂದ್ರ ವಿರಾಜಮಾನವಾಗಿ ಮೆರವಣಿಗೆ ಹೊರಟಿದ್ದಾನೆ.
ರಾತ್ರಿಯ ಹುಣ್ಣಿಮೆಯ ಪೂರ್ಣಚಂದ್ರನ ದರ್ಶನ ಭಾಗ್ಯ ದೊರೆತ ಸಂಭ್ರಮದಲ್ಲಿ ನಾನು ಮತ್ತು ನನ್ನ ಜೊತೆಗಿನ ಶಿಬಿರದ ಸಂಚಾಲಕಿ ಸಾರಾ ಮೆರ್ಕ್ಲೆ ತೆಗೆದ ಚಿತ್ರಗಳು ಇಲ್ಲಿವೆ. ಇಲ್ಲಿನ ಹಳೆಯ ಸೇತುವೆ ‘ಅಲ್ತೆ ಮಾಯಿನ್ ಬ್ರೂಕ್ ‘ ನಿಂದ ತೆಗೆದವು ಕೆಲವು. ಚರ್ಚ್ ನ ಎರಡು ಜೋಡು ಗೋಪುರಗಳ ನಡುವಿನ ನಂದಾದೀಪದಂತೆ ಕಾಣುವ ಚಂದ್ರನ ಸೊಗಸು ಚಿತ್ರದಲ್ಲಿದೆ. ಇಲ್ಲಿನ ಮಾಯಿನ್ ನದಿಯ ನೀರಿನಲ್ಲಿ ಚಂದ್ರನ ಮತ್ತು ದೀಪಗಳ ಬೆಳಕಿನ ಪ್ರತಿಫಲನದ ಚಿತ್ರಗಳು ಸುಂದರವಾಗಿವೆ .
ಜರ್ಮನಿಯ ಈ ಚಂದ್ರಮಂಡಲದ ಸೊಬಗನ್ನು ನೋಡುತ್ತಾ ನೋಡುತ್ತಾ ಜನ್ನನ ‘ಯಶೋಧರ ಚರಿತ ‘ ದ ಸಾಲುಗಳು ಅನುರಣಿಸಿದವು :
‘ಅಗೆವೊಯ್ದ ಚಂದ್ರಮಂಡಲದ ಅಗೆಗಳವೊಲ್ ಕಾರ ಮುಗಿಲ ಕಿಲ್ಸರಿಗಳವೊಲ್ ಸೊಗಯಿಸಿದುವು ಬೆಳ್ ಕೊಡೆ ಕಂಬಕಂಬದೊಳ್’






Sundara….!