ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬರೆದಿರುವ ನ್ಯಾನೋ ಕತೆಗಳು

ಜಯಶ್ರೀ ಬಿ

ಕವಿತೆ
ಈ ಕವಿತೆ ಯಾರ ಬಗ್ಗೆ? ಆ ಹಿರಿಯರು ಕೇಳಿದರು. ಕವಯಿತ್ರಿಗೆ ಗಲಿಬಿಲಿ. ಆಕೆ ಮುಜುಗರದಿಂದ, ಕಳವಳದಿಂದ ಹೇಳಿದಳು, ಯಾರ ಬಗ್ಗೆಯೂ ಇರಬಹುದು ಅಥವಾ ಎಲ್ಲರ ಬಗ್ಗೆಯೂ ಇರಬಹುದು. ಅವರು ಆಕೆಯನ್ನೇ ಚೂಪಾಗಿ ನೋಡುತ್ತ ಹೇಳಿದರು, ಹಾಗಲ್ಲ, ನಿಖರವಾಗಿ ಯಾರ ಬಗ್ಗೆ? ಕವಯಿತ್ರಿ ಯೋಚಿಸಿದಳು. ಹೌದಲ್ಲ ಇದು ಯಾರ ಬಗ್ಗೆ? ಪ್ರೀತಿಯ ಬಗ್ಗೆಯೋ, ಸ್ನೇಹದ ಬಗ್ಗೆಯೋ, ಬಾಳಿನ ಬಗ್ಗೆಯೋ ಅಥವಾ ತನ್ನೊಳಗಿನ ಗಟ್ಟಿತನದ ಬಗ್ಗೆಯೋ ?
ಕೊನೆಗೆ ಯಾವುದೊ ಬೇಡವೆಂದು ಆ ಕವನವನ್ನು ಹರಿದು ಬಿಸಾಡಿದಳು. ಮುಂದೆಂದೊ ಕವನ ಬರೆಯದೆ ಅದರ್ಶ ಸಭ್ಯ ಯುವತಿ ಎಂದೆನಿಸಿಕೊಂಡಳು.

ಮೌನಿ
ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ ಅವಳಿದ್ದಲ್ಲಿ ಮಾತುಕತೆ, ಜೋಕುಗಳು. ನಿನ್ನೆ ನೋಡಿದ ಸಿನಿಮಾ, ಯಾವುದೋ ಫ್ರೆಂಡ್ ಕಳಿಸಿದ ಮೆಸೇಜು, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ. ಹೀಗೆ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ ಕತೆಯಿಲ್ಲ. ಯಾರಾದರೂ ಮಾತಾಡಿಸಿದರೆ ಸಿಡಾರನೆ ರೇಗಿ ಬಿಡುವಳು. ಸಾಲದ್ದಕ್ಕೆ ಉಳಿದವರೆಲ್ಲ ತನ್ನ ಬಗ್ಗೆಯೇ ಏನೋ ಮಾತನಾಡುತ್ತಿದ್ದಾರೆ, ಅಪಹಾಸ್ಯ ಮಾಡಿ ನಗುತ್ತಿದ್ದಾರೆ ಎನ್ನುವ ಭಾವನೆ, ಸಂಶಯ. ಮಂದಿ ನಾಲ್ಕು ದಿನ ನೋಡಿದರು. ಸಮಾಧಾನಿಸಲು ಪ್ರಯತ್ನಿಸಿದರು. ಈಕೆ ಮತ್ತಷ್ಟು ವ್ಯಗ್ರಳಾದಂತೆಲ್ಲ ಅವರೆಲ್ಲ ದೂರ ಸರಿದರು. ಈಗ ಆಕೆ ಒಂಟಿ. ಅವಳೊಂದಿಗೆ ಹರಟೆ ಹೊಡೆಯುತ್ತಿದ್ದವರು, ಅವಳು ಬಲವಾಗಿ ನಂಬಿಕೊಂಡವರೇ ಅವಳ ಬಗ್ಗೆ ಅಪಪ್ರಚಾರ ಮಾಡಿದ್ದರಂತೆ. ಮುಕ್ತವಾಗಿ ಮಾತನಾಡಿದ್ದಕ್ಕೆ ತನ್ನ ಗುಣ ನಡತೆಯನ್ನೇ ಸಂಶಯಿಸಿದ್ದಕ್ಕೆ ಆ ತರುಣಿ ಬಳಲಿ ಬೆಂಡಾದಳು. ಒಮ್ಮೆ ಮಾತಾಡಮ್ಮಾ ಎಂದು ಗೋಗರೆಯುವ ಅಪ್ಪ ಅಮ್ಮನ ಎದುರು ಆಕೆ ಮೌನಿ.
 

‍ಲೇಖಕರು avadhi

21 April, 2014

2 Comments

  1. smitha Amrithraj

    nice-smitha

  2. ಮುಗಿಯದ ಮೌನ- GKN

    ಕವಿತೆ ಕೊಂದಿದ್ದು, ಹಾಗು ಮೌನವನ್ನು ಕೊಲ್ಲಲಾಗದ್ದು ಬಹಳ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading