ಜಯಲಕ್ಷ್ಮಿ ಪಾಟೀಲ್ ಅಂಕಣ – ನೀರ್ ಬಂದೂವು ನೀರ!..

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

33

“ಯವ್ವ್ ಬೇ ನಳ ಬಿಟ್ಟಾರ, ನೀರ್ ಬಂದೂವು ನೀರ!”
“ಏ ಕೇಳಿಲ್ಲಿ ನೀರ್ ಬಂದೂವು ನೋಡು!”
“ರೀ ನೀರ್ ಬಂದೂವು!”

ಹೀಗೆ ಯಾವುದೇ ಮನೆಯಿಂದ, ಅದರ ಹಿಂದಿನ ಇಲ್ಲಾ ಮುಂದಿನ ಸಾಲುಗಳಲ್ಲಿನ ಯಾವುದೇ ಮನೆಯ ಕೂಗು ಎಲ್ಲರ ಮನೆಯ ಅಲಾರ್ಮ್ ನಂತೆ ಮೊಳಗಿ, ಉಳಿದ ಕೆಲಸ ಎಷ್ಟೇ ಮಹತ್ವದಾಗಿದ್ದರೂ ಅದನ್ನು ಬಿಟ್ಟು ಹಬ್ಬದ ತಯಾರಿಯಲ್ಲಿದ್ದವರಂತೆ, ಧಡಬಡಿಸಿ ನೀರು ಸೋಸುವ ಬಟ್ಟೆ, ಕೊಡ, ಹಂಡೆ, ಬಕೀಟು, ನೀರಿನ ಪೈಪಿನ ಸುರಳಿ ಎಲ್ಲವನ್ನೂ ಆಚೆ ತರುತ್ತಾ ನೀರು ತುಂಬಿಕೊಳ್ಳುವ ಕೆಲಸಕ್ಕೆ ಮನೆಯ ಜನರೆಲ್ಲರೂ ಟೊಂಕಕಟ್ಟಿ ನಿಲ್ಲುತ್ತಿದ್ದೆವು.

ಒಂದಿಬ್ಬರು ನಳದ (ನಲ್ಲಿ) ಬಾಯಿಗೆ ಪೈಪ್ ತುರುಕಿ, ಪೈಪಿನ ಬಾಯಿಗೆ ಬಟ್ಟೆ ಕಟ್ಟಿ ಸಂಪೂರ್ಣ ಖಾಲಿ ಆಗಿ ಒಣಗಿದಂತೆ ಕಾಣುವ ಹೌದಿಗೆ (ಸಂಪು) ಆ ಪೈಪನ್ನು ಬಿಡುವ ಕೈಂಕರ್ಯದಲ್ಲಿ ತೊಡಗಿಕೊಂಡರೆ, ಇನ್ನೊಂದಿಬ್ಬರು ಕೊಡ, ಹಂಡೆಗಳ ತಳಕ್ಕಿರುವ ನಾಲ್ಕಾರು ಚೊಂಬು ನೀರನ್ನು ಯಾವುದಾದರೂ ಸ್ಟೀಲ್ ಪಾತ್ರೆಗೆ ಬಗ್ಗಿಸಿಟ್ಟುಕೊಂಡು, ಅವುಗಳನ್ನು ಹುಣಸೆಹಣ್ಣು ಉಪ್ಪು ಹಚ್ಚಿ ಬೆಳಗಲು ಹಿತ್ತಲಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ಒಳಗೂ ಹೊರಗೂ ಹಸನಾಗಿ ಬೆಳಗಿ ಅವುಗಳ ಸ್ಥಾನಕ್ಕೆ ತಂದಿಟ್ಟು ಮತ್ತೆ ಹಂಡೆ, ನಳಗಳ ಬಾಯಿಗೂ ನೀರು ಸೋಸುವ ಬಟ್ಟೆ ಕಟ್ಟಬೇಕು.

ಈ ನೀರು ಸೋಸುವ ಬಟ್ಟೆ ಹತ್ತಿಯ ಬಟ್ಟೆಯಾಗಿದ್ದು ಅದಕ್ಕಾಗಿ ಅವ್ವನ ಹಳೆಯ ಸೀರೆ ಇಲ್ಲವೆ ಅಪ್ಪಾರ ಲುಂಗಿ ನಾಲ್ಕಾರು ತುಕುಡಿಗಳಾಗಿ ಬಳಕೆಯಾಗುತ್ತಿದ್ದವು. ಕೆಲವರು ಅದಕ್ಕೆಂದೇ ವಿಶೇಷವಾಗಿ ಅಂಗಡಿಯಿಂದ ಬಿಳಿಯ ಹತ್ತಿ ಬಟ್ಟೆಯನ್ನು ತಂದಿಟ್ಟುಕೊಳ್ಳುವವರೂ ಇದ್ದರು. ನೀರು ಸೋಸುವ ಬಟ್ಟೆ ಯಾಕೆಂದರೆ ವಿಶೇಷವಾಗಿ ಬೇಸಿಗೆಯಲ್ಲಿ ನಲ್ಲಿ ನೀರಿನ ಜೊತೆಗೆ ಯಥೇಚ್ಛವಾಗಿ ಹುಳುಗಳು, ಕಸಕಡ್ಡಿ ಹರಿದು ಬರುತ್ತಿದ್ದವು! ಹೀಗಾಗಿ ನೀರನ್ನು ಎರಡೆರೆಡು ಬಾರಿ ಸೋಸಿದ ಮೇಲೂ, ಕುಡಿಯಲೆಂದು ತುಂಬಿಟ್ಟ ನೀರಿನಲ್ಲಿ, ನೋಡಲು ಕಲ್ಲುಸಕ್ಕರೆಯಂತೆ ಕಾಣುವ ಪಟಗ (ಸ್ಪಟಿಕ)ದ ತುಂಡೊಂದನ್ನು ಐದಾರು ಬಾರಿ ಕಲಕಿ ತೆಗೆದರೆ ಸ್ವಲ್ಪ ಹೊತ್ತಿಗೆ ಅದರಲ್ಲಿನ ಕಲುಷಿತವೆಲ್ಲ ಮೇಲೆ ತೇಲಿ, ಅದನ್ನೆಲ್ಲ ತೆಗೆದುಹಾಕಿ ಕಾಯಿಸಿ ಆರಿಸಿ ಕುಡಿಯಬೇಕಿತ್ತು. ನೀರು ವಾಸನೆ ಇಲ್ಲದಿದ್ದಲ್ಲಿ ಪಟಗಾ ಆಡಿಸಿ ಸ್ವಚ್ಛ ಮಾಡಿಟ್ಟ ನೀರನ್ನೇ ನೇರ ಕುಡಿಯಲು ಬಳಸುವುದೂ ಇತ್ತು. ಆಗೆಲ್ಲಾ ಒಂದು ಗಂಟೆ ಮಾತ್ರ ನೀರು ಬಿಡುತ್ತಿದ್ದರು.

ಅಪರೂಪಕ್ಕೆ ನಮ್ಮ ನಸೀಬು ಚೆನ್ನಾಗಿದ್ದ ದಿನ, ಹೌದು, ಹಂಡೆ, ಕೊಡ, ಬಕೀಟು, ಮನೆಯಲ್ಲಿನ ದೊಡ್ಡ ಪಾತ್ರೆಗಳು, ಚೊಂಬು ಎಲ್ಲವೂ ತುಂಬಿ, ಭಾಂಡೆ ತಿಕ್ಕಿ, ಒಗ್ಯಾಣ ಒಗದು, ಅಂಗಳ ತೊಳೆದು, ಗಿಡಗಳಿಗೂ ನೀರು ಹನಿಸಿ, ಮನೆಯ ಎಲ್ಲರ ಸ್ನಾನವೂ ಆಗುವಷ್ಟು ಕಾಲ, ಅಂದರೆ ಹೆಚ್ಚುಕಮ್ಮಿ ಎರಡು ಗಂಟೆಗಳಷ್ಟು ಹೊತ್ತು ನೀರು ಬಿಡುತ್ತಿದ್ದರು! ಅಂದು ನೋಡಬೇಕು ನಮ್ಮ ಸಂಭ್ರಮವನ್ನು, ಎಲ್ಲರ ಮನೆಯಲ್ಲಿಯೂ ಪ್ರಸನ್ನತೆಯ ಮುಖಗಳು ಲಕಲಕಿಸುತ್ತಿದ್ದವು.

ಮಾಮೂಲಿ ದಿನಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ ಒಂದು ತಾಸಿನ ಹೊತ್ತಿಗೆ ನೀರು ಬಿಟ್ಟರೆ ಬೇಸಿಗೆಯಲ್ಲಂತೂ ಹತ್ತು ಹನ್ನೆರಡು ದಿನಕ್ಕೊಮ್ಮೆ! ಕೆಲವೊಮ್ಮೆ ಮಕ್ಕಳು ಉಚ್ಚೆ ಹೊಯ್ದಂತೆ ನಳದಿಂದ ಸಣ್ಣಗೆ ಬರುತ್ತಿದ್ದ ನೀರನ್ನು ನೋಡಿ ಮುಂದಿನ ದಿನಗಳಲ್ಲಿ ಇಡೀ ಓಣಿಗೆ ಇದ್ದ ಒಂದೇ ಒಂದು ಬೋರಿನೆದಿರು (ಬೋರ್ವೆಲ್), ಹಿಟ್ ಸಿನಿಮಾ ಟಿಕೇಟಿಗಾಗಿ ಇಷ್ಟುದ್ದದ ಕ್ಯೂನಲ್ಲಿ ನಮಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಆಸೆಯಿಂದ ಕಾಯುತ್ತಿದ್ದೆವಲ್ಲ ಹಾಗೆ ನಿಲ್ಲಬೇಕಾಗಿ ಬಂದು, ನಮ್ಮ ಅದೃಷ್ಠ ನೆಟ್ಟಗಿದ್ದರೆ ಒಂದೆರಡು ಕೊಡ ನೀರು ತುಂಬಿಕೊಳ್ಳುವ ಅವಕಾಶ ಸಿಗುತ್ತಿತ್ತು. ಇಲ್ಲವಾದರೆ ಬೋರಿನ ನೀರು ಖಾಲಿಯಾಗಿ, ಖಾಲಿ ಕೊಡದೊಂದಿಗೆ ಮನೆಗೆ ಬರಬೇಕಾದ ದೃಶ್ಯ ನೆನೆಪಿಸಿಕೊಂಡು ಅದೆಷ್ಟು ಕಂಗಾಲಾಗಿ ಹೋಗುತ್ತಿದ್ದೆವೆಂದರೆ ಎಲ್ಲದಕ್ಕೂ “ನೋಡಿ ನೀರ್ ಬಳಸ್ರಿ, ಇವತ್ತ ಅರ್ಧ ಹೌದೂ ತುಂಬಿಲ್ಲ. ಮತ್ತಿನ್ನ ಯಾವಾಗ ನೀರ್ ಬಿಡ್ತಾನೋ ಯಾರಿಗೊತ್ತು?” ಎಂದು ಹಿರಿಯರು ಮನೆಯವರಿಗೆಲ್ಲ ಸತತ ಎಚ್ಚರಿಸುತ್ತಲೇ ಇರುವಂತಾಗುತ್ತಿತ್ತು.

ಬೋರ್ ನೀರು ಖಾಲಿ ಆಗಿ ಸಿಗದ ದಿನಗಳ ಮಧ್ಯ ರಾತ್ರಿಯಲ್ಲಿ ಏನಾದರೂ ನೀರು ಸಿಗಬಹುದೇನೋ ಎಂಬ ದೊಡ್ಡವರ ಮುಂದಾಲೋಚೆಯಿಂದಾಗಿ, ಅವರ ಒತ್ತಾಯಕ್ಕೆ ನಡುರಾತ್ರಿ ಒಂದೂವರೆ ಎರಡಕ್ಕೆಲ್ಲ ಎದ್ದು, ನಿಶಾಚಾರರಂತೆ ಬೋರಿಗೆ ಹೋಗಿ ಅದೃಷ್ಟ ಪರೀಕ್ಷಿಸಿಕೊಂಡಿದ್ದು ಅದೆಷ್ಟು ಸಲವೋ ಲೆಕ್ಕವಿಲ್ಲ! ಆಗೆಲ್ಲ ಅದೃಷ್ಟ ಕೈಕೊಟ್ಟಿದ್ದೇ ಹೆಚ್ಚು!
ನಂತರದ ಟಾಸ್ಕ್ ಎಂದರೆ ಯಾರ ಮನೆಯಲ್ಲಿ ಜನ ಕಮ್ಮಿ ಅಥವಾ ನಲ್ಲಿಯ ಎರಡೆರೆಡು ಕನೆಕ್ಷನ್ ಇರುತ್ತಿತ್ತೋ ಅವರಲ್ಲಿ ಹೋಗಿ ಕೇಳಿ ಒಂದೆರೆಡು ಕೊಡ ನೀರನ್ನು ಹೊತ್ತುತಂದು, ಮತ್ತೆ ನೀರು ಬರುವ ತನಕ ಅದನ್ನು ತುಪ್ಪದಂತೆ ಇಷ್ಟಿಷ್ಟೇ ಬಳಸುವುದು ನಡೆಯುತ್ತಿತ್ತು.

ನಳದ ನೀರು ಬಂದ ಹೊತ್ತಲ್ಲಿ ಮನೆಗೆ ನೆಂಟರು ಬೀಗರು ಬಿಜ್ಜರೇನಾದರೂ ಬಂದರೆ ಜೀವ ಬಾಯಿಗೆ ಬಂತಾಗುತ್ತಿತ್ತು. ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಅನ್ನುವ ಗಾದೆಮಾತಿದೆಯಲ್ಲ, ಅದನ್ನು ‘ನೀರ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂದು ಬದಲಿಸಿದರೆ ಸಾಕು ಸರಿಯಾಗಿ ಹೊಂದಿಕೊಳ್ಳುತ್ತಿತ್ತು ಆಗಿನ ಬಿಜಾಪುರದ ನಿವಾಸಿಗಳ ಅವಸ್ಥೆಗೆ. ಬಂದವರು ನಾಲ್ಕು ದಿನ ಹೆಚ್ಚಿಗೆ ಇದ್ದು ಹೋಗಲಿ ಎಂದು ಬಯಸಲು ನೀರು ಅಡ್ಡಿಯಾಗುತ್ತಿತ್ತು.

ಇಂತಿಪ್ಪ ನಾಡಿನವಳಾದ ನಾನು ಮದುವೆಯಾಗಿ ಪುಣೆಗೆ ಬಂದ ಮೇಲೆ ಅಲ್ಲಿ ನಿತ್ಯವೂ ಸ್ವಚ್ಛ ನೀರು ಬರುವುದನ್ನು ಕಂಡು ಪುಳಕಿತಳಾಗಿದ್ದೆ, ಮೊಗೆ ಮೊಗೆದು ಧನ್ಯೆ ಧನ್ಯೆ ಎಂದು ಹರ್ಷಿಸಿದ್ದೆ.

ಬಿಜಾಪುರದಲ್ಲಿ ಹಾಗೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆಗೆ ಎಲ್ಲರೂ ದೊಡ್ಡ ದೊಡ್ಡ ಹೌದುಗಳನ್ನು ಕಟ್ಟಿಕೊಂಡಿದ್ದರು. ಅದರ ಅಡ್ಡ ಪರಿಣಾಮವೆಂದರೆ ಕೆಲವರ ಮನೆಯ ಎಳೆಯ ಮಕ್ಕಳು ಆಟವಾಡುತ್ತಾ ಆಡುತ್ತಾ ಹೌದಿಗೆ ಬಿದ್ದು ಸತ್ತೇಹೋಗಿದ್ದು! ಈಗಲೂ ಹಾಗೆ ಪ್ರಾಣಬಿಟ್ಟ ಮಕ್ಕಳ ಮನೆಗಳಲ್ಲಿನ ಆಕ್ರಂದನ ನೆನಪಾದರೆ ಎದೆ ನಡುಗುತ್ತದೆ. ಒಂದೆರಡಲ್ಲ ಐದಾರು ಪ್ರಕರಣಗಳು ಕೇವಲ ನಮ್ಮ ಓಣಿಯೊಂದರಲ್ಲೇ ಘಟಿಸಿದ್ದವು!

ಮುಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾರ್ಯಗತವಾಗಿ ಎರಡು ದಿನಕ್ಕೊಮ್ಮೆ ಹುಳುವಿಲ್ಲದ ನಲ್ಲಿ ನೀರು ಬರತೊಡಗಿದಾಗ, ‘ಇಷ್ಟಾಕೊಂಡು ನೀರು ತೊಗೊಂಡು ಏನು ಮಾಡೂನು!?’ ಎಂದು ತೋಚದೆ ಜನ ಮುದಗೊಂಡು ನಕ್ಕಿದ್ದೂ ಇದೆ.
ಈಗ ಬಿಜಾಪುರದ ಮನೆಮನೆಯಲ್ಲೂ ದಿನದ ಇಪ್ಪತ್ತುನಾಲ್ಕು ಗಂಟೆಯೂ ನಲ್ಲಿ ನೀರು ಲಭ್ಯ. ಅಲ್ಲೂ ಮಹಾನಗರಗಳಲ್ಲಿರುವಂತೆ ನೀರಿನ ಮಿಟರ್ ಗಳನ್ನು ಅಳವಡಿಸಲಾಗುತ್ತಿದೆ.

ಇಂಥಾ ನೀರ ಬವಣೆಯ ಊರಲ್ಲಿ ತಾಸ್ (ತಾಜ್) ಬಾವಡಿ (ಬಾವಿ), ಚಾಂದ್ ಬಾವಡಿ ಎಂಬೆರೆಡು ಎಂದೂ ಸೆಲೆ ಬತ್ತದ ಕಲಾತ್ಮಕವಾಗಿ ಕಟ್ಟಿಸಿದ ಬಾವಿಗಳಿವೆ! ಅವು ಕೇವಲ ಅಲ್ಲೇ ಅಕ್ಕಪಕ್ಕದಲ್ಲಿರುವ ಜನ, ತಮ್ಮ ಬಟ್ಟೆ, ಪಾತ್ರೆ ತೊಳೆಯಲು, ದನಕರುಗಳ ಮೈ ತೊಳೆಯಲು ಬಳಸುವುದನ್ನು ಕಂಡು, ನಮ್ಮಲ್ಲಿನ ಸದ್ಬಳಕೆಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿ ಅಣಕಿಸುವಂತೆ ಕಾಣುತ್ತವೆ ನನಗೆ. ಈಗ ಕೆಲವು ವರ್ಷಗಳ ಹಿಂದೆ ತಾಸ್ ಬಾವಡಿಯ ಹೂಳೆತ್ತುವ ಕೆಲಸ ಆರಂಭಗೊಂಡು ಅರ್ಧಕ್ಕೆ ನಿಂತಿತಂತೆ. ಕಾರಣ ಗೊತ್ತಿಲ್ಲ.

ಈಗ ಮೊದಲಿದ್ದ ನೀರಿನ ಬವಣೆ ಬಿಜಾಪುರ ನಗರಕ್ಕಿಲ್ಲವಾದರೇನಂತೆ, ಅಂಥಾ ಐತಿಹಾಸಿಕ, ಅಪರೂಪದ ಕಲಾತ್ಮಕ ಬಾವಡಿಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಆಕರ್ಷಣೀಯ ಪ್ರೇಕ್ಷಣಿಯ ಸ್ಥಳಗಳನ್ನಾಗಿಸಬಹುದು. ಧೂಳುಗುಳುವ ನಗರವನ್ನು ಅಲ್ಲಿನ ನೀರು ಬಳಸಿ ಎಲ್ಲೆಡೆ ಹಸಿರು ಕಂಗಳಿಸುವಂತೆ ಮಾಡಬಹುದು. ನಿಜ ಹೇಳಬೇಕೆಂದರೆ ಮೊದಲಿನಿಂದಲೂ ಅವು ಬಿಜಾಪುರದ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯಲ್ಲಿವೆಯಾದರೂ ಪ್ರವಾಸಿಗರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಅಲ್ಲಿನ ಜನ ಹಿಂಜರಿಯುತ್ತಾರೆ. ಕಾರಣ ಅವುಗಳ ಸುತ್ತಲೂ ಜಮೆಯಾಗಿರುವ ಕೊಳಕು, ಮಲಿನಗೊಂಡ ನೀರು. ಹಿಂದೊಮ್ಮೆ ಅಂದರೆ ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಬಿಜಾಪುರದ ಅಂದಿನ ಎಮ್ಮೆಲ್ಲೆ ಅವರ ನಂಬರ್ ಸಂಪಾದಿಸಿ, ನಗರವನ್ನು ಅಂದಗೊಳಿಸುವ ಬಗ್ಗೆ, ಈ ಬಾವಡಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ವಿನಂತಿಸಿ, ಅವರಿಂದ ಉಡಾಫೆಯ ಉತ್ತರ ಪಡೆದು ಕನಲಿ ಸುಮ್ಮನಾಗಿದ್ದೆ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಜಯಾ,
    ನೀರಿನ ಬವಣೆ ಓದಿ ನೆನಪಾಗಿದ್ದು ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ಈಗಲೂ ಇದೇ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿ ಎರಡು ವಾರಕ್ಕೊಮ್ ನೀರ್ ಬರತ್ತೆ. ಬಾಕಿ ಸಮಯದಲ್ಲಿ 4-5 ದಿನಕ್ಕೊಮ್ಮೆ. ಯಾವಾಗ ಈ ಸಮಸ್ಯೆ ಬಗೆಹರಿಯುತ್ತೋ ಆ ದೇವರೇ ಬಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: